ಅದು ಭಾರತೀಯ ಕ್ರಿಕೆಟ್’ನ ಅತ್ಯಂತ ಕಷ್ಟಕರವಾದ ಕಾಲಘಟ್ಟ. ಭಾರತದ ಆ ಕಾಲದ ಯಶಸ್ವೀ ನಾಯಕ ಗಂಗೂಲಿ ಮತ್ತು ಕೋಚ್ ಚಾಪೆಲ್ ನಡುವಿನ ಡ್ರೆಸ್ಸಿಂಗ್ ರೂಮ್ ಭಿನ್ನಾಭಿಪ್ರಾಯ ಭಾರತ ತಂಡವನ್ನು ಇನ್ನಿಲ್ಲದಂತೆ ಕಾಡಿತ್ತು. ಗಾಯಕ್ಕೆ ಬರೆ ಎಳೆದದ್ದು ೨೦೦೭ ರ ವಿಶ್ವಕಪ್’ನ ಹೀನಾಯ ಸೋಲು. ಕೆಲವೇ ತಿಂಗಳುಗಳಲ್ಲಿ ಪ್ರಥಮ ಚುಟುಕು ವಿಶ್ವಕಪ್ ಪ್ರಾರಂಭ!!. ದಿಗ್ಗಜರಾದ ತೆಂಡುಲ್ಕರ್, ಗಂಗೂಲಿ, ದ್ರಾವಿಡ್ ತಾವಾಗಿಯೇ ಟಿ೨೦ ಮಾದರಿಯಿಂದ ದೂರವುಳಿದಿದ್ದರು. ಭಾರತ ಟಿ೨೦ ವಿಶ್ವಕಪ್’ನಲ್ಲಿ ಗೆಲ್ಲುತ್ತೋ ಬಿಡುತ್ತೋ, ಭಾರತ ತಂಡವನ್ನು ಮುನ್ನಡೆಸುವವರು ಯಾರು ಎಂಬುದೇ ಬಹಳ ದೊಡ್ಡ ಪ್ರಶ್ನೆಯಾಗಿತ್ತು. ಆಯ್ಕೆ ಸಮಿತಿ ಬಹಳ ಅಳೆದು ತೂಗಿ ಆಯ್ಕೆ ಮಾಡಿದ್ದು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮಹೇಂದ್ರ ಸಿಂಗ್ ಧೋನಿಯನ್ನು. ಈ ಆಯ್ಕೆ ಬಹಳ ಜನರನ್ನು ಹುಬ್ಬೇರಿಸುವಂತೆ ಮಾಡಿದ್ದು ಸುಳ್ಳಲ್ಲ. ಸೆಹ್ವಾಗ್,ಯುವರಾಜ್, ಗಂಭೀರ್, ಹರ್ಭಜನ್ ಮುಂತಾದವರೆಲ್ಲರಿದ್ದರೂ ಧೋನಿ ಆಯ್ಕೆ ಸಮಿತಿಯ ಭರವಸೆಯ ಆಶಾಕಿರಣವಾಗಿ ಕಂಡು ಬರುತ್ತಾರೆ. ಪಂದ್ಯಾವಳಿಗಿಂತ ಮುನ್ನ ಕೇವಲ ಒಂದೇ ಒಂದು ಟಿ೨೦ ಪಂದ್ಯ ಆಡಿದ್ದ ತಂಡ ಒಂದೆಡೆಯಾದರೆ, ಹೊಸ ಮುಖಗಳನ್ನು ಮುನ್ನಡೆಸುವ ಜವಾಬ್ದಾರಿ ಮತ್ತೊಂದೆಡೆ. ಧೋನಿ ಮುಂದೆ ಮಹತ್ತರ ಸವಾಲಿತ್ತು. ಅವೆಲ್ಲವನ್ನೂ ಮೀರಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡುತ್ತಾರೆ ಧೋನಿ. ಅಲ್ಲಿಂದ ಶುರುವಾಯಿತು ನೋಡಿ ಧೋನಿ ಯುಗ.
ನಾಯಕತ್ವ ಎನ್ನುವುದು ಒಂದು ಹುದ್ದೆಯಲ್ಲ. ಅದೊಂದು ಮಹತ್ತರ ಜವಾಬ್ದಾರಿಯುತ ಸ್ಥಾನ. ವೈಯಕ್ತಿಕವಾಗಿ ತನ್ನ ಕೆಲಸವನ್ನು ನಿರ್ವಹಿಸುವುದರ ಜೊತೆಗೆ ತನ್ನ ತಂಡವನ್ನು ಸಮರ್ಪಕವಾಗಿ ಮುನ್ನಡೆಸುವುದೂ ನಾಯಕನ ಕೆಲಸ. ಪಂದ್ಯವೊಂದರಲ್ಲಿ ನಂಬಿಕಸ್ತ ಬೌಲರ್ ಕೈ ಕೊಟ್ಟಾಗ ಅರೆಕಾಲಿಕ ಬೌಲರ್’ಗಳ ಮೂಲಕ ತನ್ನ ರಣತಂತ್ರ ಹೆಣೆಯಬೇಕಾಗುತ್ತದೆ. ಮೂರೂ ಮಾದರಿಗಳಲ್ಲಿ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಆಗಿ ಈ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ಗೊತ್ತಿರುವ ಸತ್ಯ. ಒಬ್ಬ ಸಾಮಾನ್ಯ ರೈಲ್ವೇ ಟಿಕೆಟ್ ಕಲೆಕ್ಟರ್ ಭಾರತೀಯ ತಂಡದ ನಾಯಕನಾಗಿ ಆಯ್ಕೆಯಾದ ಪರಿಯಂತೂ ಅದ್ಭುತ. ಸಮರ್ಥ ದೀರ್ಘಕಾಲದ ನಾಯಕನೊಬ್ಬ ಭಾರತ ತಂಡಕ್ಕೂ ಬೇಕಿತ್ತು. ಭಾರತ ತಂಡಕ್ಕೆ ಹೊಸ ಆಯಾಮ ನೀಡಿದ್ದು ಗಂಗೂಲಿಯಾದರೂ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದು ಧೋನಿ ಎಂಬುದರಲ್ಲಿ ಎರಡು ಮಾತಿಲ್ಲ. ತಂಡವನ್ನು ಕಠಿಣ ಪರಿಸ್ಥಿತಿಯಲ್ಲಿ ಮುನ್ನಡೆಸಿದ್ದು, ತಂತ್ರಗಾರಿಕೆ, ವಿಕೆಟ್ ಕೀಪರ್ ಆಗಿ ಬಹಳ ಯಶಸ್ಸು ಕಂಡಿದ್ದು, ಚಿರತೆಯ ವೇಗದಲ್ಲಿ ವಿಕೆಟ್ ಮಧ್ಯದಲ್ಲಿ ಓಡುವ ಕಲೆ, ಹೆಲಿಕಾಪ್ಟರ್ ಶಾಟ್ ಕ್ರಿಕೆಟ್ ರಂಗಕ್ಕೆ ಪರಿಚಯಿಸಿದ್ದು, ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೇ ಎದುರಾಳಿಯನ್ನು ಖೆಡ್ಡಾದಲ್ಲಿ ಬೀಳಿಸೋ ಚತುರತೆ ಮೂಲಕ ಎಮ್.ಎಸ್ ಧೋನಿ ಯಶಸ್ಸಿನ ಮೇಲೆ ಯಶಸ್ಸು ಗಳಿಸುತ್ತಾ ಸಾಗಿದರು.
ಆನೆ ನಡೆದಿದ್ದೇ ಹಾದಿ ಎಂಬಂತೆ ಧೋನಿ ಮಾಡಿದ್ದೇ ಮ್ಯಾಜಿಕ್ ಆಗತೊಡಗಿತು. ಅದೃಷ್ಟವೂ ಕೈ ಹಿಡಿಯಿತು. ೨೦೧೧ ರ ವಿಶ್ವಕಪ್ ಜಯಿಸಿದ ಮೇಲಂತೂ ಟೀಮ್ ಇಂಡಿಯಾದಲ್ಲಿ ಧೋನಿ ಹೇಳಿದ್ದೇ ವೇದ ವಾಕ್ಯವಾಯಿತು. ಹಿರಿಯರಾದ ಸೆಹ್ವಾಗ್, ಗಂಭೀರ್ ಧೋನಿ ಅವಕೃಪೆಗೆ ಒಳಗಾದರು. ಪರ್ಫಾರ್ಮೆನ್ಸ್ ಇಲ್ಲ ಎಂಬ ನೆಪ ನೀಡಿ ಇವರನ್ನು ತಂಡದಿಂದ ಹೊರದಬ್ಬಿದರು ಧೋನಿ. ಸತತ ವೈಫಲ್ಯಕ್ಕೊಳಗಾದರೂ ರೈನಾ, ವಿಜಯ್ ಮುಂತಾದವರಿಗೆ ಒಂದಾದ ಮೇಲೊಂದರಂತೆ ಅವಕಾಶಗಳನ್ನು ನೀಡಿದರೂ ಹಿರಿಯರಿಗೆಲ್ಲಾ ಮಾತ್ರ ಗೇಟ್ ಪಾಸ್ ನೀಡುತ್ತಾ ಬಂದರು. ಗೆದ್ದೆತ್ತಿನ ಬಾಲ ಹಿಡಿಯುವವರೇ ಎಲ್ಲರೂ ಆಗಿದ್ದರಿಂದ ಧೋನಿಗೆ ಯಾವುದೇ ಅಡೆತಡೆಗಳಾಗಲಿಲ್ಲ. ಧೋನಿ ದೃಷ್ಟಿ ಹರ್ಭಜನ್ ಮತ್ತು ಯುವರಾಜ್ ಮೇಲೂ ಬೀಳುತ್ತೆ. ಹಿರಿಯರು ಕಿರಿಯರಿಗೆ ದಾರಿ ತೋರಿಸಬೇಕಾದ್ದು ನಿಜವೇ. ಆದರೆ ಧೋನಿಗೊಂದು ನ್ಯಾಯ ಉಳಿದವರಿಗೊಂದು ನ್ಯಾಯವೇ ಎಂಬುದೇ ಸಧ್ಯದ ಮಿಲಿಯನ್ ಡಾಲರ್ ಪ್ರಶ್ನೆ.
ಐಪಿಲ್ ಸ್ಪಾಟ್ ಫಿಕ್ಸಿಂಗ್’ನಲ್ಲಿ ಚೆನ್ನೈ ತಂಡದ ಮಾಲೀಕ ಗುರುನಾಥನ್ ಮೇಯಪ್ಪನ್ ಆರೋಪಿ ಎಂದು ಸಾಬೀತಾಗಿ ತಂಡ ನಿಷೇಧವಾದ ಮೇಲಂತೂ ಧೋನಿ ಮೇಲೆ ಅನುಮಾನದ ತೂಗುಕತ್ತಿ ಮತ್ತಷ್ಟು ನೇತಾಡ ತೊಡಗಿತು. ಒಂದು ತಂಡದ ಮಾಲೀಕ ತನ್ನ ತಂಡದ ನಾಯಕ ಸಹಾಯವಿಲ್ಲದೇ ಪಂದ್ಯಗಳನ್ನು ಫಿಕ್ಸ್ ಮಾಡಲು ಸಾಧ್ಯವಿಲ್ಲ ಎಂಬುದು ಗಲ್ಲಿ ಕ್ರಿಕೆಟ್ ಆಡೋ ಪುಟ್ಟ ಮಕ್ಕಳಿಗೂ ಗೊತ್ತಿರುವ ವಿಷಯವೇ. ಆದರೂ ಧೋನಿಯ ಅದೃಷ್ಟವೋ ಏನೋ ಧೋನಿ ಬಚಾವಾಗುತ್ತಾರೆ. ರಿತಿ ಸ್ಪೋರ್ಟ್ಸ್’ನಲ್ಲಿ ಶೇರು ಹೊಂದಿದ್ದೂ ಬಹಳ ವಿವಾದಕ್ಕೀಡಾಯಿತು. ಮಾಜಿ ಕ್ರಿಕೆಟಿಗರು ಧೋನಿ ಮೇಲೆ ಈ ಎಲ್ಲಾ ವಿಷಯಗಳಲ್ಲೂ ಮಾತಿನ ಪ್ರಹಾರ ಮಾಡುತ್ತಿದ್ದರೂ ಧೋನಿ ಮಾತ್ರ ಬಹಳ ಕೂಲ್ ಆಗಿಯೇ ಎಲ್ಲವನ್ನೂ ನಿಭಾಯಿಸಿದರು.
ಸತತವಾಗಿ ಪಂದ್ಯಗಳನ್ನು ಸೋಲುತ್ತಿರುವಾಗ, ಬ್ಯಾಟಿಂಗ್ ನಲ್ಲಿ ಫಾರ್ಮ್ ಕಳೆದುಕೊಳ್ಳುತ್ತಿರುವಾಗ, ಪರ್ಯಾಯ ನಾಯಕನಾಗಿ ವಿರಾಟ್ ಕೊಹ್ಲಿ ದಿನೇ ದಿನೇ ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುತ್ತಿರುವಾಗ ಧೋನಿ ಕ್ಯಾಪ್ಟನ್ ಪಟ್ಟ ಬಿಡಲಿ, ನಿವೃತ್ತಿ ಘೋಷಿಸಲಿ ಅನ್ನೋ ಕೂಗು ಬಹಳ ಹೆಚ್ಚಾಗಿದೆ. ಧೋನಿಯ ವಯಸ್ಸು ಹೆಚ್ಚಿರುವುದು, ತಂಡದಲ್ಲಿನ ಹಿಡಿತವೂ ದಿನೇ ದಿನೇ ತಪ್ಪುತ್ತಿರುವುದು ಮತ್ತು ಆಟದಲ್ಲಿ ಮೊದಲಿನ ಬಿರುಸು ಇಲ್ಲದಿರುವುದೂ ಈ ಕೂಗಿಗೆ ಮತ್ತಷ್ಟು ಬಲ ಬರುವಂತಾಗಿದೆ. ಹಲವಾರು ಪಂದ್ಯಗಳು ಇನ್ನೇನು ಕೈ ತಪ್ಪಿಯೇ ಹೋಯಿತು ಅನ್ನೋ ಸಮಯದಲ್ಲಿ ಪಂದ್ಯ ಜಯಿಸಿಕೊಟ್ಟು ಗ್ರೇಟ್ ಫಿನಿಶರ್ ಅನ್ನೋ ಪಟ್ಟಕ್ಕೇರಿದರೂ ಇತ್ತಿತ್ತ್ಲಾಗೇ ಕೈಯಲ್ಲಿದ್ದ ಪಂದ್ಯಗಳು ಧೋನಿಯ ನಿಲುವುಗಳಿಂದ ಭಾರತ ತಂಡ ಸೋಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಲ ಚಕ್ರ ಉರುಳಿದೆ. ಧೋನಿಯೂ ಹಿರಿಯ ಆಟಗಾರರ ಸಾಲಿನಲ್ಲಿ ಸೇರಿದ್ದಾರೆ. ಕ್ರಿಕೆಟ್’ನಲ್ಲಿ ಕ್ಯಾಪ್ಟನ್ಸಿ ಎನ್ನುವುದು ವರವೂ ಹೌದು, ಶಾಪವೂ ಹೌದು. ತನ್ನ ನಾಯಕತ್ವದ ಅವಧಿಯಲ್ಲಿ ಬೇರೆಯವರ ಕಾಲೆಳೆದಂತೆ ತನ್ನ ಕಾಲೂ ಬೇರೊಬ್ಬ ಎಳೆಯುವ ದಿನ ಬರುತ್ತದೆ ಅನ್ನೋ ಸತ್ಯವನ್ನು ಯಾವತ್ತೂ ನೆನಪಿನಲ್ಲಿಟ್ಟುಕೊಂಡೇ ನಾಯಕನೊಬ್ಬ ಆಡಬೇಕಾಗುತ್ತದೆ.ನಾಯಕನಾಗಿ ಮುಂದುವರಿಯಬೇಕಾದರೆ ಆಯ್ಕೆ ಸಮಿತಿಯ ಕೃಪಾಕಟಾಕ್ಷದ ಜೊತೆಗೆ ಸಹ ಆಟಗಾರರ ಬೆಂಬಲವೂ ಬಹುಮುಖ್ಯ. ವಿಶ್ವಾಸವಿಲ್ಲದಿದ್ದಲ್ಲಿ ನಾಯಕನಾಗಿ ಮುಂದುವರಿಯುವುದು ಅಸಾಧ್ಯ ಎನ್ನುವುದನ್ನು ಅರಿಯದವರಲ್ಲ ಧೋನಿ. ಧೋನಿಯ ಕ್ರಿಕೆಟ್ ಬದುಕಿನ ದೋಣಿ ಇನ್ನೆಷ್ಟು ದೂರ ಸಾಗುತ್ತದೆ ಅನ್ನುವುದೇ ಸಧ್ಯದ ಕುತೂಹಲ.!!
Facebook ಕಾಮೆಂಟ್ಸ್