ಉತ್ತರ ಕನ್ನಡದ ಮಂದಿಗೆ ಈ ಹಕ್ಕಿಯ ರೂಪಲಾವಣ್ಯಗಳನ್ನು ವಿವರಿಸಬೇಕಿಲ್ಲ. ಅಂಕೋಲಾ, ಕುಮಟೆ, ಗೋಕರ್ಣ, ಶಿರಸಿ, ಸಿದ್ದಾಪುರ, ಯಲ್ಲಾಪುರದ ಕಾಡುಗಳಲ್ಲಿ; ದಾಂಡೇಲಿಯ ದಟ್ಟಾರಣ್ಯದಲ್ಲಿ; ಅಥವಾ ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿಯರ ಕಣಿವೆಗಳಲ್ಲಿ ಬೆಳೆದ ವೃಕ್ಷ ಸಮೂಹಗಳಲ್ಲಿ ಕಂಡುಬರುವ ವರ್ಣಮಯ ಖಗಸಿರಿ ಇದು. ಮೊದಲ ಸಲ ಕಾಣುವವರಿಗಂತೂ ಭಯ ಬೀಳಿಸುವಷ್ಟು ಉದ್ದದ ಕೊಕ್ಕು, ಕೊಕ್ಕಿನ ಮೇಲೆ ಚಪ್ಪಟೆ ಕೊಂಬು ಇರುವ ಈ ಬೃಹದ್ಪಕ್ಷಿ, ಗಾತ್ರದಲ್ಲಿ ರಣ ಹದ್ದಿನಷ್ಟಿದ್ದರೂ ಆಕ್ರಮಣಕಾರಿಯಲ್ಲ. ಹೆಚ್ಚಿನ ಸಮಯದಲ್ಲಿ ಇದರ ಆಹಾರ ಆಲ, ಬಸಿರಿ, ಗೋಣಿ, ಅತ್ತಿ ಮರಗಳ ಗೋಲಿಯಷ್ಟು ಗಾತ್ರದ ಫಲ ವಿಶೇಷಗಳೇ. ಎಲ್ಲೋ ಆಗೀಗ ಬಾಯಿ ರುಚಿ ಕೆಟ್ಟರೆ ಅಥವಾ ಮರಗಳಲ್ಲಿ ಹಣ್ಣು ಸಿಗದೆ ಪರದಾಡುವಂತಾದರೆ ಇಲಿ, ಹಲ್ಲಿ, ಹುಳು ಹುಪ್ಪಟೆಗಳನ್ನು ಗುಟುಕರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಸ್ಥಳೀಯರ ಭಾಷೆಯಲ್ಲಿ ಕನಾರಿ ಎಂದು ಕರೆಸಿಕೊಳ್ಳುವ ಈ ಹಕ್ಕಿಯ ಅಚ್ಚ ಕನ್ನಡದ ಹೆಸರು: ಮಂಗಟ್ಟೆ. ಇಂಗ್ಲೀಷಿನಲ್ಲಿ ಹಾರ್ನ್‍ಬಿಲ್.
ದೇವರು ಪಾಪದ ಕಾಗೆಗೆ ಅಸಡ್ಡೆಯಿಂದ ಕಪ್ಪು ಬಣ್ಣ ಎರಚಿ ಕಳಿಸಿ ಬಿಟ್ಟರೆ ಮಂಗಟ್ಟೆಯನ್ನು ಸೃಷ್ಟಿಸುವ ಸಮಯದಲ್ಲಿ ಮಾತ್ರ ಭಾರೀ ಪುರುಸೊತ್ತಲ್ಲಿ ಕೂತಿದ್ದನೆಂದು ಕಾಣುತ್ತದೆ. ಅದರ ಒಂದೊಂದು ಭಾಗಗಳನ್ನೂ ಅಪರಿಮಿತ ತಾಳ್ಮೆಯಿಂದ ತಿದ್ದಿ ತೀಡಿದ್ದಾನೆ. ಬಣ್ಣದ ಕುಂಚದಲ್ಲಿ ಬ್ರಷ್ಷನ್ನು ಅದ್ದಿ ಈ ಹಕ್ಕಿಯ ಮೈಮಾಟದ ಮೇಲಾಡಿಸಿ ಬಗೆಬಗೆಯ ಪ್ರಯೋಗ ಮಾಡಿದ್ದಾನೆ. ಮಂಗಟ್ಟೆಗೆ ಅರಿಷಿಣ-ಕುಂಕುಮದ ಕೊಂಬು, ಗಾಢ ಹಳದಿಯ ಮೇಲ್‍ಕೊಕ್ಕು, ತೆಳು ಹಳದಿಯ ಕೆಳ ಕೊಕ್ಕು, ಕಣ್ಣಿನ ಮೇಲೆ ಕಪ್ಪು ಪಟ್ಟಿ, ಅದರಾಚೆ ಬೆಳ್ಳಗಿನ ಕೊರಳು, ಅತ್ತಿತ್ತ ಚಾಮರ ಬೀಸಿದಂತಿರುವ ಗರಿಗಳು, ಚೀನಾದ ಗೀಷಾ ಸುಂದರಿಯರು ಸೇಳೆಯಿಂದ ಹಿಡಿವ ಬೀಸಣಿಗೆಯಂತೆ ಅರೆ ತೆರೆದ ಬಾಲ. ಹಣ್ಣು ತಿನ್ನುವ ಹಕ್ಕಿಗೆ ಇಂಥಾ ಬಲವಾದ ಕೊಕ್ಕೇಕೆ ಎಂಬುದು ಪ್ರಕೃತಿ ರಹಸ್ಯ. ಮಂಗಟ್ಟೆಗಳು ಹಣ್ಣು ತಿನ್ನುವುದಷ್ಟೇ ಅಲ್ಲ, ಹೊಟ್ಟೆಗಿಳಿಯದ ಬೀಜಗಳನ್ನು ಎಲ್ಲೆಂದರಲ್ಲಿ ಚೆಲ್ಲುತ್ತವೆ. ಕಾಡಿನಲ್ಲಿ ಆಹಾರಕ್ಕಾಗಿ ಹತ್ತಿಪ್ಪತ್ತು ಮೈಲಿ ಹಾರಾಡಬಲ್ಲ ಈ ಹಕ್ಕಿಗಳಿಂದಾಗಿಯೇ ನೆಲದಲ್ಲಿ ಬೇರು ಬಿಟ್ಟ ಮಹಾವೃಕ್ಷಗಳ ಸಂತತಿ ಎಲ್ಲೆಲ್ಲೂ ಹಬ್ಬುವುದಕ್ಕೆ ಅವಕಾಶವಾಗಿದೆ. ಕಾಡಿನಲ್ಲಿ ಮಂಗಟ್ಟೆಗಳಿವೆಯೆಂದರೆ ಹಣ್ಣು ಕೊಡುವ ಮರಗಳ ಸಂತತಿ ನೂರಾರಿದೆ ಎಂದೇ ಲೆಕ್ಕ. ಹಾಗಾಗಿಯೇ ಇವು ಅರಣ್ಯದ ಆರೋಗ್ಯದ ಸೂಚ್ಯಂಕಗಳು.
ಸ್ವಾರಸ್ಯವೆಂದರೆ ಮಂಗಟ್ಟೆ ಭಾರತದ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬರುವ ಅತ್ಯಪರೂಪದ ಪಕ್ಷಿ ಪ್ರಭೇದ. ಕರ್ನಾಟಕ ಬಿಟ್ಟರೆ ಅದರ ಎರಡನೆ ಬಿಡಾರ ಇರುವುದು ಈಶಾನ್ಯ ಭಾರತದ ಅರುಣಾಚಲ ಪ್ರದೇಶದಲ್ಲಿ. ಅಲ್ಲಿನ ಪಾಕೆ ಎಂಬ ಅರಣ್ಯ ಪ್ರದೇಶದಲ್ಲಿ ಒಂದಾನೊಂದು ಕಾಲದಲ್ಲಿ ಮಂಗಟ್ಟೆಗಳು ಹೇರಳವಾಗಿದ್ದವು. ಅರುಣಾಚಲದ ನಿಷಿ ಬುಡಕಟ್ಟಿನ ಜನಕ್ಕೆ ಮಂಗಟ್ಟೆಯೇ ಅಸ್ಮಿತೆಯ ಗುರುತು. ಹಿಂದೆ, ಅದರ ಉದ್ದನೆ ಚುಂಚನ್ನು ಬಳಸಿ ಮಾಡಿದ ಟೋಪಿ ಹಾಕಿಕೊಳ್ಳುವುದು ಗರ್ವ, ಸಮ್ಮಾನಗಳ ಪ್ರತೀಕವಾಗಿತ್ತು. ರಕ್ಷಿಸಬೇಕಿದ್ದರೇ ಯಮ ಕಿಂಕರರಾದ ಮೇಲೆ ಅವುಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಯಿತು. 2006ರ ಹೊತ್ತಿಗೆ ಅರುಣಾಚಲದ ಕಾಡುಗಳಲ್ಲಿ ಮಂಗಟ್ಟೆಗಳ ಕೇಕೆ, ರೆಕ್ಕೆಗಳ ಬಡಿತ ಇಲ್ಲವೇ ಇಲ್ಲವೆಂಬಷ್ಟು ಕ್ಷೀಣವಾಯಿತು. ಈ ಪರಿಸ್ಥಿತಿ ಮುಂದುವರಿದರೆ ಕೆಲವು ವರ್ಷ ಅಥವಾ ತಿಂಗಳುಗಳಲ್ಲೇ ಮಂಗಟ್ಟೆಗಳು ಈಶಾನ್ಯ ಭಾರತದಿಂದ ಶಾಶ್ವತವಾಗಿ ಕಾಣೆಯಾಗಿ ಬಿಡುತ್ತವೆಂಬ ಸೂಚನೆ ಸಿಕ್ಕಿದಾಗ ಸರಕಾರ ಮತ್ತು ಒಂದಷ್ಟು ಪರಿಸರ ರಕ್ಷಣಾ ಸಂಸ್ಥೆಗಳು ಎಚ್ಚೆತ್ತುಕೊಂಡವು. ನಿಷಿ ಬುಡಕಟ್ಟಿನ ಜನರನ್ನೇ ಕಲೆ ಹಾಕಿ, ಅವರಿಗೆ ತಿಳಿವಳಿಕೆ ಕೊಟ್ಟು, ಮಂಗಟ್ಟೆಯ ಜೀವನಕ್ರಮದ ಬಗ್ಗೆ ವಿಸ್ತಾರವಾಗಿ ವಿವರಿಸಿ, ಅದರ ಉಳಿವು ಕಾಡಿನ ಬೆಳವಣಿಗೆಗೆ ಅದೆಷ್ಟು ಅಗತ್ಯವೆಂದು ಪರಿಸರ ಹೋರಾಟಗಾರರು ಪಾಠ ಮಾಡಿದರು. ಕೊಂಬಿಗಾಗಿ ಅವನ್ನು ಕೊಲ್ಲಬೇಡಿ, ಅಂಥಾದ್ದೇ ಬಣ್ಣ ಬಣ್ಣದ ಫೈಬರ್ ಕೊಂಬುಗಳನ್ನು ಕೊಡುತ್ತೇವೆಂದು ಪುಸಲಾಯಿಸಿ ಅಂತೂ ಕಳೆದ ಹತ್ತು ವರ್ಷಗಳಲ್ಲಿ ಮಂಗಟ್ಟೆಗಳ ಸಂತತಿಯನ್ನು ರಕ್ಷಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. 2011ರಲ್ಲಿ ಅರುಣಾಚಲದಲ್ಲಿ ಕೆಲಸ ಮಾಡತೊಡಗಿದ ನೇಚರ್ ಕನ್ವರ್ಸೇಶನ್ ಫೌಂಡೇಶನ್, ಇದುವರೆಗೆ 60 ಮರಿಗಳನ್ನು ಪೊರೆದಿದೆ. 33 ಗೂಡುಗಳನ್ನು ಉಳಿಸಿದೆ. 14 ಹಳ್ಳಿಗಳಲ್ಲಿ ಜನ ತಾವಾಗಿ ಮಂಗಟ್ಟೆಗಳ ಕಾಳಜಿ ಮಾಡುವಂತೆ ಪ್ರೇರೇಪಿಸಿದೆ.
ಕೆಲವೊಮ್ಮೆ ಪ್ರಕೃತಿಯ ಸಂಬಂಧಗಳು ಅದೆಷ್ಟು ಸೂಕ್ಷ್ಮವಾಗಿರುತ್ತವೆಂದು ನಮಗೆ ಗೊತ್ತೇ ಆಗುವುದಿಲ್ಲ ನೋಡಿ! ಮಡಗಾಸ್ಕರ್ ದ್ವೀಪದಲ್ಲಿ ಹೇರಳವಾಗಿದ್ದ ಡೋಡೋ ಹಕ್ಕಿಗಳನ್ನು ಪೋರ್ಚುಗೀಸರು ಕೊಂದು ನಿರ್ವಂಶ ಮಾಡಿದ ಮೇಲೆ ಅಲ್ಲಿ ಅದುವರೆಗೆ ನಿಬಿಡವಾಗಿ ಬೆಳೆಯುತ್ತಿದ್ದ ಕ್ಯಾಲ್ವರಿಯಾ ಜಾತಿಯ ಮರಗಳು ಕಡಿಮೆಯಾಗಿ ಕೊನೆಗೆ ಅವುಗಳ ಉತ್ಪತ್ತಿ, ಪ್ರಸರಣ ನಿಂತೇ ಹೋಯಿತು. ಕಾರಣ ಏನು ಎಂದು ಪರೀಕ್ಷೆ ಮಾಡಿದಾಗ, ಅದಕ್ಕೆ ಡೋಡೋಗಳ ಅಳಿವೇ ಕಾರಣವೆಂದು ತಿಳಿಯಿತು. ಕ್ಯಾಲ್ವರಿಯಾದ ಹಣ್ಣುಗಳ ಬೀಜಭಿತ್ತಿ ಗಟ್ಟಿ. ಡೋಡೋ ಹಕ್ಕಿಗಳು ಇಷ್ಟ ಪಟ್ಟು ತಿನ್ನುತ್ತಿದ್ದ ಈ ಹಣ್ಣಿನ ಬೀಜ ಹೊಟ್ಟೆಯೊಳಗೊಂದು ಪ್ರಯಾಣ ಮಾಡಿ ಹೊರ ಬರುವ ಹೊತ್ತಿಗೆ ಮೊಳಕೆಯೊಡೆಯಲು ಬೇಕಾದಷ್ಟು ಮೆತ್ತಗಾಗುತ್ತಿತ್ತು. ಡೋಡೋ ನಿರ್ವಂಶವಾದ ಮೇಲೆ ಕ್ಯಾಲ್ವರಿಯಾದ ಬೀಜಗಳನ್ನು ಮೆತ್ತಗಾಗಿಸುವವರಿಲ್ಲದೆ ಅವೂ ಅಳಿವಿನ ದಾರಿ ಹಿಡಿದವು. ಹೆಚ್ಚು ಕಡಿಮೆ ಮಂಗಟ್ಟೆ ಮತ್ತು ಮಹಾವೃಕ್ಷಗಳ ಸಂಬಂಧವೂ ಇದೇ ರೀತಿಯದ್ದು. ಬೀಜ ಪ್ರಸಾರದ ಹೊರತಾಗಿ ಮಂಗಟ್ಟೆಗಳಿಗೆ ಇನ್ನೊಂದು ವಿಧದಲ್ಲೂ ವೃಕ್ಷಗಳ ಜೊತೆ ಸಂಬಂಧವಿದೆ. ಅದೇನೆಂದರೆ ಅವು ಗೂಡು ಕಟ್ಟವು. ಆದರೆ ಮರದ ಪೊಟರೆಗಳನ್ನು ಹುಡುಕಿಟ್ಟು, ಸಂತಾನಾಭಿವೃದ್ಧಿಯ ಕಾಲಕ್ಕೆ ಅವನ್ನು ನಾಲ್ಕೈದು ತಿಂಗಳ ಮಟ್ಟಿಗೆ ಮನೆ ಮಾಡಿಕೊಳ್ಳುತ್ತವೆ. ಮಂಗಟ್ಟೆಗಳ ಸಮಾಜದಲ್ಲಿ ಹೆರಿಗೆ, ಬಾಣಂತನಗಳ ಕತೆ ಬಹಳ ವಿಚಿತ್ರ. ಗಂಡೂ ಹೆಣ್ಣೂ ಮೊದಲು ಪೊಟರೆಯೊಂದನ್ನು ಗೊತ್ತು ಪಡಿಸಿಕೊಳ್ಳುತ್ತವೆ. ಹೆಣ್ಣು ಪೊಟರೆಯೊಳ ಹೋಗಿ, ತನ್ನ ಬಾಯಿಯ ಎಂಜಲು ಉಪಯೋಗಿಸಿ ಮರದ ಗೋಂದನ್ನು ಶೇಖರಿಸಿ ಪೊಟರೆಯ ಬಾಯಿ ಮುಚ್ಚಿ ಬಿಡುತ್ತದೆ. ಅಲ್ಲಿಂದ ಮುಂದೆ ಮೂರು ತಿಂಗಳು ಹೊರ ಜಗತ್ತಿನೊಂದಿಗೆ ಅದರ ಸಂಪರ್ಕ ಪೊಟರೆಯ ಬಾಯಿಯಲ್ಲಿ ಕೊಕ್ಕಷ್ಟೇ ಹೊರ ಹಾಕಲಿಕ್ಕಾಗುವ ಕಿಂಡಿಯ ಮೂಲಕ ಮಾತ್ರ. ಮೊಟ್ಟೆ ಇಟ್ಟು ಮರಿ ಮಾಡಿ ಅವುಗಳಿಗೆ ರೆಕ್ಕೆಪುಕ್ಕಗಳು ಬೆಳೆದು ಪೂರ್ಣಾವತಾರಿಗಳಾಗುವವರೆಗೂ ಈ ಹೆಂಡತಿ-ಮಕ್ಕಳ ಹೊಟ್ಟೆ ತುಂಬಿಸುವ ಜವಾಬ್ದಾರಿ ಗಂಡಿನ ತಲೆ ಮೇಲೆ. ಅದನ್ನಂತೂ ಅದು ಗಾಢನಿಷ್ಠೆಯಿಂದ ಮಾಡುತ್ತದೆ. ದೂರದ ಮರಗಳಿಂದ ಹಣ್ಣುಗಳನ್ನು ಕಿತ್ತುಕಿತ್ತು ಗಂಟಲಲ್ಲಿ ತುಂಬಿಸಿಕೊಂಡುಬಂದು ಗೂಡಿನ ಬಳಿ ಕೂತು ಒಂದೊಂದಾಗಿ ಹಸಿದ ಕೊಕ್ಕುಗಳಿಗೆ ತಿನ್ನಿಸುತ್ತದೆ. ಈ ಬಾಣಂತನ ಕಾಲದಲ್ಲಿ, ಬಲೆಗೆ ಬಿದ್ದು ಅಥವಾ ವೈರಿಗಳ ಬಾಯಿಗೆ ಆಹಾರವಾಗಿ ಗಂಡ ಮೃತನಾದರೆ ಮಕ್ಕಳೊಂದಿಗೆ ತನ್ನನ್ನು ಬಂಧಿಸಿಯಾಗಿಸಿಕೊಂಡ ಅಮ್ಮನದ್ದೂ ಆತ್ಮಹತ್ಯೆಯ ದಾರಿಯೇ. ಹಾಗಾಗಿ ಆ ಸಮಯದಲ್ಲಿ ಇಡೀ ಸಂಸಾರದ ಅಳಿವು-ಉಳಿವಿನ ಪ್ರಶ್ನೆ ಆ ಗಂಡಿನ ಮೇಲೆ!
ಅಥರ್ವ ವೇದದಲ್ಲಿ ಒಂದು ಮಾತು ಬರುತ್ತದೆ: ಇಹಮಾವಿಂದ್ರ ಸಂ ನುದ ಚಕ್ರವಾಕೇನ ದಂಪತಿ. ಇಹಲೋಕದ ಗೃಹಸ್ಥರು ಚಕ್ರವಾಕ ಹಕ್ಕಿಗಳಂತೆ ದಾಂಪತ್ಯವನ್ನು ಆಚರಿಸಲಿ ಎಂಬ ಆಶಯ ವೇದಕಾಲೀನ ಋಷಿಗಳದ್ದು. ಚಕ್ರವಾಕಗಳದ್ದು ಅನುರೂಪ ದಾಂಪತ್ಯ; ಒಂದನ್ನು ಬಿಟ್ಟಿನ್ನೊಂದು ಬದುಕುವುದನ್ನು ಕನಸಲ್ಲೂ ಯೋಚಿಸಲಾರವಂತೆ ಅವು. ಅಂಥಾದ್ದೇ ಉನ್ನತ ದಾಂಪತ್ಯ ಮೌಲ್ಯವನ್ನು ಪ್ರದರ್ಶಿಸುವ ಪಕ್ಷಿ ಜಾತಿ ಮಂಗಟ್ಟೆಗಳು. ತನ್ನ ಯೌವನ ಕಾಲದಲ್ಲಿ ಗಂಡು ಮಂಗಟ್ಟೆಯೊಂದು ತನಗೆ ಅನುರೂಪಳಾದ ಹೆಣ್ಣೊಂದನ್ನು ನೋಡಿದರೆ ಪ್ರೇಮ ಭಿಕ್ಷೆ ಬೇಡುತ್ತದೆ. ಕಾಡಿನ ಬಗೆಬಗೆಯ ರುಚಿಕಟ್ಟಾದ ಹಣ್ಣುಗಳನ್ನು ಹುಡುಕಿ ತಂದು ಹೆಣ್ಣಿಗೆ ತಿನ್ನಿಸಿ “ಪಾಸ್ ಮಾಡಮ್ಮಾ” ಎಂದು ಗೋಗರೆಯುತ್ತದೆ. ಹೆಣ್ಣು ಸಂಪ್ರೀತಳಾಗಿ ಕೈ ಹಿಡಿದರೆ ಅದು ಜನುಮದ ಮದುವೆ! ತಮ್ಮ ಜೀವನಯಾತ್ರೆಯಲ್ಲಿ ಸಂಗಾತಿ ವಿಧಿವಶವಾದರೆ ಉಳಿದ ಹಕ್ಕಿ ಮರುಮದುವೆಯೇನೂ ಆಗದೆ ಒಂಟಿಯಾಗಿಯೇ ಉಳಿದುಬಿಡುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಮಂಗಟ್ಟೆಗಳನ್ನು ತೋರಿಸಿ ಈ ಪಾಠ ಹೇಳಲಿಕ್ಕಾದರೂ ನಾವು ಅವನ್ನು ರಕ್ಷಿಸುವುದು ಬೇಡವೇ?
ಚಿತ್ರ: ಅಭಿಜಿತ್ ಎ.ಪಿ.ಸಿ
Facebook ಕಾಮೆಂಟ್ಸ್