X

ಗುರುವೇ ನೀನು ಕಾರಣನಯ್ಯ…

ನಾವೇನಾದರೂ ಸಾಧಿಸಬೇಕು ಎಂದು ಹೊರಟರೆ ಅದಕ್ಕೆ ಬೇಕಿರುವುದು ಆ ಸಾಧನೆಯ ನಿಟ್ಟಿನಲ್ಲಿ ನಮ್ಮ ಪರಿಶ್ರಮ ಮತ್ತು ಆತ್ಮವಿಶ್ವಾಸ ಮಾತ್ರ. ಅರುಣಿಮಾ ಸಿನ್ಹಾ ಹಿಮಾಲಯ ಏರುವಾಗ ಅವಳಿಗೆ ಆ ಸಾಧನೆಯ ತುಡಿತ ಇತ್ತು. ಸಾಕ್ಷಿ ಮಲ್ಲಿಕ್’ಗೆ ಅಂಕಗಳ ಲೆಕ್ಕಾಚಾರ ಬೇಕಿರಲಿಲ್ಲ ಬದಲಾಗಿ ನಾನು ಗೆಲ್ಲಲೇಬೇಕೆಂಬ ಹಠ ಇತ್ತು. ಸಾನಿಯಾ ಮಿರ್ಜಾ ಟೆನ್ನಿಸ್ ಅಂಗಳದಲ್ಲಿ ಕಾದಾಡುವಾಗ ಧರ್ಮ, ಜಾತಿ ಎನ್ನುವುದರ ಬಗ್ಗೆ ಯೋಚಿಸಿದ್ದರೆ ಅವಳು ಭಾರತದ ಯಶಸ್ವೀ ಟೆನ್ನಿಸ್ ಆಟಗಾರ್ತಿಯಾಗಿರುತ್ತಿರಲಿಲ್ಲ. ಸಾಧಿಸುವ ಕನಸನ್ನು ಹೊತ್ತು ನಡೆಯುವ ಸಾಧನೆಯ ಹಾದಿಯಲ್ಲಿ ಅದೆಷ್ಟೋ ಏಳು ಬೀಳುಗಳನ್ನು ಎದುರಿಸಲೇ ಬೇಕು. ನಮ್ಮಲ್ಲಿನ ಛಲ ಮತ್ತು ಆತ್ಮವಿಶ್ವಾಸ ಇವೆರಡು ಚೂರು ಕಮ್ಮಿಯಾಗದಂತೆ ಹೋರಾಡಿದರೆ ಮಾತ್ರ ಜಯ ಸಾಧ್ಯ.  ನಮ್ಮ ಕನಸಿಗೆ ನೀರೆರೆದು ಅದನ್ನು ಹೆಮ್ಮರವಾಗುವಂತೆ ನೋಡಿಕೊಂಡು ಮುಂದೊಂದು ದಿನ ಆ ಹೆಮ್ಮರ ಫಲ ನೀಡುವುದನ್ನು ಖುಷಿಯಿಂದ ನೋಡುವ “ಗುರು” ನಮ್ಮ ಬಾಳಿನ ಸಾಧನೆಯ ಹಾಡಿಗೆ ಮುಖ್ಯ. “ಗುರು” ಆತನ ಕನಸನ್ನು ನಿಮ್ಮೊಳಗೆ ಕಾಣುತ್ತಾನೆ, ಯಾವುದನ್ನೂ ನಿರೀಕ್ಷಿಸದೇ ನಿಮ್ಮ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಾನೆ. ಆತ ಬಯಸುವುದು ನಿಮ್ಮ ಗೆಲುವನ್ನು ಮಾತ್ರ.

ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|

ಚಕ್ಷುರ್ ಉನ್ಮಿಲಿತಮ್ ಏನ ತಸ್ಮೈ ಶ್ರೀ ಗುರವೇ ನಮಃ ||

ನಮ್ಮೊಳಗಿನ ಅಜ್ಞಾನ ಎಂಬ ಕತ್ತಲೆಯ ಕಳೆದು ಜ್ಞಾನ ಎಂಬ ಅಮೂಲ್ಯ ಬೆಳಕನ್ನು ಹರಿಸಿ ನಮ್ಮನ್ನು ಒಂದು ಪರಿಪೂರ್ಣ ವ್ಯಕ್ತಿತ್ವವನ್ನಾಗಿ ರೂಪಿಸುವ ಗುರುವಿಗೆ ಅನಂತ ಪ್ರಣಾಮಗಳು ಎಂಬ ಈ ಸಂಸ್ಕೃತ ಶ್ಲೋಕದಲ್ಲಿ ಗುರುವಿನ ಶಕ್ತಿಯ ಅನಾವರಣವಾಗಿದೆ. ಇದು ಗುರುವೊಬ್ಬನ ಜೀವನ ಕಥೆ. ನಿನ್ನೆ ರಿಯೊ ಒಲಂಪಿಕ್ಸ್ ನಲ್ಲಿ ಮಹಿಳೆಯರ ಬ್ಯಾಡ್‌ಮಿಂಟನ್ ನಲ್ಲಿ ಫೈನಲ್ ಪ್ರವೇಶಿಸಿದ ಪಿ ವಿ ಸಿಂಧು ಎಂಬ ಸಾಧಕಿಯ ಗುರುವಿನ ಕಥೆ.

ಅದು 2012ರ ಲಂಡನ್ ಒಲಂಪಿಕ್ಸ್, ಇಡೀ ಜಗತ್ತನ್ನು ನಿಬ್ಬೆರೆಗಾಗಿಸಿ ಸೈನಾ ನೆಹ್ವಾಲ್ ಭಾರತಕ್ಕೊಂದು ಕಂಚಿನ ಪದಕವ ದೊರಕಿಸಿಕೊಟ್ಟಳು. 2016 ರ ರಿಯೊ ಒಲಂಪಿಕ್ಸ್ ನಲ್ಲಿ ಈಗ ಪುಸರ್ಲ ವೆಂಕಟ ಸಿಂಧು ಹೊಸ ದಾಖಲೆಯನ್ನೇ ಬರೆದಿದ್ದಾಳೆ. ಈ ಇಬ್ಬರು ಮಹಾನ್ ಆಟಗಾರ್ತಿಯರ ಸಾಧನೆಯ ಹಿಂದೆ ಒಬ್ಬರಿದ್ದಾರೆ. ಅವರೇ ತರಬೇತುದಾರ ಪುಲ್ಲೆಲ ಗೋಪಿಚಂದ್. ತನ್ನ ವಿಶ್ವ ದರ್ಜೆಯ ತರಬೇತು ಸಂಸ್ಥೆಯಲ್ಲಿ ಅಗಾಧ ಪ್ರತಿಭೆಗಳನ್ನು ರೂಪಿಸಿ ಭಾರತದ ಹೆಸರನ್ನು ವಿಶ್ವದೆಲ್ಲೆಡೆ ಬ್ಯಾಡ್‌ಮಿಂಟನ್ ವಿಭಾಗದಲ್ಲಿ ಪ್ರಕಾಶಿಸುವಂತೆ ಮಾಡುತ್ತಿರುವುದು ಇದೇ ಪುಲ್ಲೆಲ ಗೋಪಿಚಂದ್.

ಯಶಸ್ವೀ ಕ್ರೀಡಾ ಜೀವನ :

ಗೋಪಿಚಂದ್ 2001 ರಲ್ಲಿ  ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್‌ಮಿಂಟನ್ ಟೂರ್ನಿಯ ವಿಜೇತ ಆಟಗಾರ. 1991 ರಲ್ಲಿ ತನ್ನ ಬ್ಯಾಡ್‌ಮಿಂಟನ್ ಪಯಣ ಆರಂಬಿಸಿದ ಗೋಪಿಚಂದ್ ಪ್ರಕಾಶ್ ಪಡುಕೋಣೆಯವರ ಗರಡಿಯಲ್ಲಿ ಪಳಗಿದ ಆಟಗಾರನಾಗಿದ್ದರು. ಆದರೆ ಮಗನಿಗೆ ಬ್ಯಾಡ್‌ಮಿಂಟನ್ ತರಬೇತಿ ನೀಡಲು ಗೋಪಿಚಂದ್ ಅಪ್ಪ ಸುಬಾಷ್ ಚಂದ್ರ ಮತ್ತು ತಾಯಿ ಸುಬ್ಬರಾವಮ್ಮ ತುಂಬಾ ಕಷ್ಟಪಡುತ್ತಿದ್ದರು. ತಮ್ಮ ಸ್ನೇಹಿತರು ಮತ್ತು ಸಂಬಂಧಿಕರ ಬಳಿ ಹಣವನ್ನು ಸಾಲ ಪಡೆದು ಗೋಪಿಚಂದ್ ಅವರಿಗೆ ಬ್ಯಾಡ್‌ಮಿಂಟನ್ ತರಬೇತಿ ನೀಡಿಸಿದ್ದರು ಅವರ ಅಪ್ಪ. ಗೋಪಿಚಂದ್’ಗೆ ಅದೇ ಸಮಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಎದುರಾದವು, ಅವರ ಕಾಲಿಗೆ ಅನೇಕ ಗಾಯಗಳಾದವು ಆದರೆ ಇದನ್ಯಾವುದನ್ನು ಲೆಕ್ಕಿಸದೆ ಆ ನೋವುಗಳಿಂದ ಹೊರ ಬಂದು 1996 ರಲ್ಲಿ ನಡೆದ ಸಾರ್ಕ್ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನಡಪದಕವನ್ನು ಗೆದ್ದು ಭಾರತ ಹೆಮ್ಮೆಪಡುವಂತೆ ಮಾಡಿದ್ದರು ಗೋಪಿಚಂದ್.ಅಲ್ಲಿಂದ ಅವರ ಗೆಲುವಿನ ಯಾತ್ರೆ ಆರಂಭವಾಗಿತ್ತು. 1998ರಲ್ಲಿ ನಡೆದ ಕಾಮನ್‌ವೆಲ್ತ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ನಲ್ಲಿ ಕಂಚು ಮತ್ತು ಪುರುಷರ ಡಬಲ್ಸ್ ನಲ್ಲಿ ಬೆಳ್ಳಿಯ ಪದಕ ಪಡೆದರು ಗೋಪಿಚಂದ್.1999ರಲ್ಲಿ  ಸ್ಕಾಟ್‌ಲ್ಯಾಂಡ್ ನಲ್ಲಿ ನಡೆದ ಸ್ಕೋಟಿಷ್ ಓಪನ್ ಚ್ಯಾಂಪಿಯನ್ಶಿಪ್ ಮತ್ತು  ತೊಲೌಜ್ ಮುಕ್ತ ಬ್ಯಾಡ್‌ಮಿಂಟನ್ ಪಂದ್ಯಾವಳಿಯಲ್ಲಿ ಟ್ರೋಫಿ ಗೆದ್ದು ಬೀಗಿದರು. ಬ್ಯಾಡ್‌ಮಿಂಟನ್’ನಲ್ಲಿ ಗೋಪಿಚಂದ್ ಅನೇಕ ಯುವಕರಿಗೆ ಪ್ರೇರಣೆರಾದರು. 2001 ರಲ್ಲಿ ಬ್ಯಾಡ್‌ಮಿಂಟನ್ ನಲ್ಲಿ ಐದನೇ ಸ್ಥಾನ ಪಡೆದ ಗೋಪಿಚಂದ್ ಕ್ರೀಡಾ ವೃತ್ತಿಯಿಂದ ವಿಮುಖರಾಗುವ ಮಹತ್ವದ ನಿರ್ಧಾರ ತೆಗೆದುಕೊಳ್ಳುತ್ತಾರೆ. ತನ್ನ ಮುಂದಿನ ಪೀಳಿಗೆಯ ಯುವಕ ಯುವತಿಯರನ್ನು ಬ್ಯಾಡ್‌ಮಿಂಟನ್ ಗೆ ಅನುವುಗೊಳಿಸಲು ಸಂಪೂರ್ಣ ಸಮಯ ಮೀಸಲಿಡುವುದಾಗಿ ಗೋಪಿಚಂದ್ ಹೇಳಿದರು.

ತರಬೇತಿ ಸಂಸ್ಥೆಯ ನಿರ್ಮಾಣ :

2003 ರಲ್ಲಿ ಚಂದ್ರ ಬಾಬು ನಾಯ್ಡು ಅವರ ಆಂದ್ರ ಪ್ರದೇಶ ಸರ್ಕಾರ ಪುಲ್ಲೆಲ ಗೋಪಿಚಂದ್ ಅವರಿಗೆ ಐದು ಎಕರೆಯಷ್ಟು ಭೂಮಿಯನ್ನು ಬಹುಮಾನವಾಗಿ ನೀಡಿತು. ಬ್ಯಾಡ್‌ಮಿಂಟನ್ ತರಬೇತಿ ಸಂಸ್ಥೆಯ ಸ್ಥಾಪನೆಯ ಕನಸು ನನಸು ಮಾಡಿಕೊಳ್ಳಲು ಹಗಲಿರುಳು ಶ್ರಮಿಸಿದರು ಗೋಪಿಚಂದ್. ಒಂದು ವ್ಯವಸ್ಥಿತ ತರಬೇತಿ ಸಂಸ್ಥೆಯ ರೂಪಿಸಲು ಬೇಕಿರುವ ಹಣವನ್ನು ಕ್ರೋಢೀಕರಿಸಲು ಅನೇಕ ಕಂಪನಿಗಳ  ಬಳಿ ಹೋಗಿ ಸ್ಪಾನ್ಸರ್ ಮಾಡುವಂತೆ ಬೇಡಿಕೊಂಡರು ಗೋಪಿಚಂದ್. ಆದರೆ ವ್ಯವಹಾವನ್ನೇ ಸರ್ವಸ್ವ ಎಂದುಕೊಂಡಿರುವ ಕಂಪನಿಗಳಿಗೆ ಇದ್ಯಾವುದೂ ಬೇಕಿರಲಿಲ್ಲ. ಗೋಪಿಚಂದ್ ಕಂಪನಿಗಳನ್ನು ಕನ್ವಿನ್ಸ್ ಮಾಡಲು ಹೆಣಗಾಡಿಹೋದರು. ಕ್ರಿಕೆಟ್’ನಷ್ಟು ಪ್ರಸಿದ್ಧಿಯಲ್ಲದ ಬ್ಯಾಡ್‌ಮಿಂಟನ್’ಅನ್ನು ಪ್ರೋತ್ಸಾಹಿಸುವುದು ಯಾವ ಕಂಪನಿಗಳಿಗೂ ಬೇಕಿರಲಿಲ್ಲ. ಕೊನೆಗೆ ತನ್ನ ಮನೆಯನ್ನೇ ಅಡವಿಟ್ಟು ಒಂದಿಷ್ಟು ಹಣವನ್ನು ಸಾಲವಾಗಿ ಪಡೆದರು ಹಾಗೂ ಇನ್ನುಳಿದ ಹಣವನ್ನು ಎನ್ ಪ್ರಸಾದ್ ಎಂಬ ಉದ್ಯಮಿಯ ಬಳಿ ಪಡೆದು 2008 ರಲ್ಲಿ “ಗೋಪಿಚಂದ್ ಬ್ಯಾಡ್‌ಮಿಂಟನ್ ಅಕಾಡಮಿ” ಯನ್ನು ಪ್ರಾರಂಭಿಸಿದರು.

ಸುಮಾರು 2.5 ಮಿಲಿಯನ್ ಡಾಲರ್ ಹಣದ ವೆಚ್ಚದಲ್ಲಿ ನಿರ್ಮಿಸಿರುವ ತರಬೇತಿ ಸಂಸ್ಥೆಯಲ್ಲಿ ಎಂಟು ಬ್ಯಾಡ್‌ಮಿಂಟನ್ ಅಂಕಣ ಇದೆ, ಈಜುಕೊಳವಿದೆ ಹೀಗೆ ಕ್ರೀಡಾ ಪಟುಗಳಿಗೆ ಅವಶ್ಯವಿರುವ ಎಲ್ಲ ವ್ಯವಸ್ಥೆಯನ್ನು ಹೊಂದಿರುವ ಸುಸಜ್ಜಿತ ತರಬೇತಿ ಸಂಸ್ಥೆ ಇದಾಗಿದೆ. ಇಲ್ಲಿ ಆಟಗಾರರಿಗೆ ಫಿಸಿಯೊಥೆರಫಿ, ಪೌಷ್ಟಿಕ ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ಇದೊಂದು ಅಂತಾರಾಷ್ಟ್ರೀಯ ತರಬೇತಿ ಸಂಸ್ಥೆ ಎಂದು ಎಲ್ಲಾ ಆಟಗಾರರು ಹೇಳಿದ್ದಾರೆ. ಗೋಪಿಚಂದ್ ಅವರ ಈ ತರಬೇತಿ ಸಂಸ್ಥೆಯನ್ನು ಭಾರತ ಸರ್ಕಾರ 2010 ರಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತೀಯ ಬ್ಯಾಡ್‌ಮಿಂಟನ್ ಆಟಗಾರರಿಗೆ ತರಬೇತಿ ನೀಡಲು ಬಳಸಿಕೊಂಡಿತ್ತು. ಇದಲ್ಲದೆ 2009 ಇಂಡಿಯನ್ ಓಪನ್ ಬ್ಯಾಡ್‌ಮಿಂಟನ್ ಪಂದ್ಯಾವಳಿ ಇದೆ ಅಕಾಡಮಿಯಲ್ಲಿ ಯಶಸ್ವಿಯಾಗಿ ನಡೆದಿತ್ತು. ತನ್ನ ಅಕಾಡಮಿಯನ್ನು ಹಣಗಳಿಸುವ ಕೇಂದ್ರವನ್ನಾಗಿಸದೆ ಭಾರತಕ್ಕೆ ಅತ್ಯಮೂಲ್ಯ ಬ್ಯಾಡ್‌ಮಿಂಟನ್ ಆಟಗಾರರನ್ನು ನೀಡುವುದರ ಮೂಲಕ ದೇಶ ಸೇವೆಯನ್ನು ಮಾಡಿದರು ಗೋಪಿಚಂದ್. ಸೈನಾ ನೆಹ್ವಾಲ್ (ವಿಶ್ವದ ಐದನೇ ಶ್ರೇಯಾಂಕಿತೆ), ಪಿ ವಿ ಸಿಂಧು ( ವಿಶ್ವದ ಏಳನೇ ಶ್ರೇಯಾಂಕಿತೆ ), ಹಾಗೂ ಕೀದಾಂಬಿ ಶ್ರೀಕಾಂತ್ (ವಿಶ್ವದ ಹನ್ನೊಂದನೇ ಶ್ರೇಯಾಂಕಿತ) ರಂತಹ ಪ್ರತಿಭಾವಂತರು ಗೋಪಿಚಂದ್ ಗರಡಿಯಿಂದ ಬಂದವರು ಎಂದರೆ ನೀವೇ ಯೋಚಿಸಿ ಅವರ ತರಬೇತಿಯ ಪರಿಯನ್ನು.

ಸಮಾಜ ಸೇವೆ & ದೇಶಪ್ರೇಮ :

ಆಟಗಾರ ಎಂದರೆ ಕೇವಲ ತನ್ನ ಸ್ವಹಿತಾಸಕ್ತಿಗಾಗಿ ಆಡುವವನಲ್ಲ. ಬದಲಾಗಿ ತನ್ನ ಏಳ್ಗೆಯ ಜೊತೆ ದೇಶದ ಹಿತವನ್ನೂ ಬಯಸುವವನು ನಿಜವಾದ ಆಟಗಾರನಾಗುತ್ತಾನೆ. ಈಗಿನ ಅನೇಕ ಆಟಗಾರರು ಕೇವಲ ಹಣಗಳಿಸುವುದನ್ನೇ ಪ್ರಮುಖ ಎಂದುಕೊಂಡು ತಮ್ಮನ್ನು ತಾವು ಜಾಹೀರಾತು ಕಂಪನಿಗಳಿಗೆ ಮಾರಿಕೊಳ್ಳುವುದನ್ನು ನೋಡಿದ್ದೇವೆ, ಆದರೆ ಗೋಪಿಚಂದ್ ಹಾಗಿರಲಿಲ್ಲ. ಅವರು ಕ್ರೀಡವೃತ್ತಿಯ ಉತ್ತುಂಗದಲ್ಲಿದ್ದಾಗಲೂ ದೇಶವನ್ನು ಮರೆಯಲಿಲ್ಲ. 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ತಾವು ಗೆದ್ದ ಬಹುಮಾನದ ಬಹುಪಾಲು ಹಣವನ್ನು ಕಾರ್ಗಿಲ್ ಯೋಧರಿಗೆ ನೀಡಿದರು. ಗುಜರಾತ್’ನಲ್ಲಿ ನಡೆದ ಭೂಕಂಪದ ಸಂತ್ರಸ್ತರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರು ಗೋಪಿಚಂದ್. 2001 ರಲ್ಲಿ ಇಂಗ್ಲೆಂಡ್ ಚ್ಯಾಂಪಿಯನ್’ಶಿಪ್ ಗೆದ್ದ ನಂತರ ಅವರಿಗೆ ಕೋಕ್ ಕಂಪನಿಯ ರಾಯಭಾರಿಯಾಗಲು ಆಹ್ವಾನ ಬರುತ್ತದೆ, ಹಣ ಮಾಡುವುದೇ ಉದ್ದೇಶ ಎಂಬುದಾದರೆ ಗೋಪಿಚಂದ್ ಆ ಆಹ್ವಾನವ ಸ್ವೀಕರಿಸಿ ಒಂದು ಮುಚ್ಚಳಿಕೆಗೆ ಸಹಿ ಹಾಕಿದರೆ ಸಾಕಿತ್ತು ಆದರೆ ಈ ಮನುಷ್ಯ ಹಾಗೆ ಮಾಡಲಿಲ್ಲ ಕೋಕ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಆ ಆಹ್ವಾನವನ್ನು ನೇರವಾಗಿ ತಿರಸ್ಕರಿಸಿದ ಸ್ವದೇಶೀ ಈ ಗೋಪಿಚಂದ್.

ಧನ್ಯವಾದಗಳು ಗೋಪಿಚಂದ್ :

ಗೋಪಿಚಂದ್ ಅವರ ಪತ್ನಿ ಹೆಸರು ಪಿ ವಿ ವಿ ಲಕ್ಷ್ಮಿ. ಗೋಪಿಚಂದ್ ಅವರಿಗೆ ಇಬ್ಬರು ಮುದ್ದಾದ ಮಕ್ಕಳು ಅದರಲ್ಲಿ ಒಬ್ಬಳು ಗಾಯತ್ರಿ ಅವಳು ಈಗಾಗಲೇ ಅಪ್ಪನ ಹಾದಿಯಯಲ್ಲಿ ಹೊರಟಿದ್ದಾಳೆ. ಹದಿಮೂರು ವರ್ಷದೊಳಗಿನ ಬ್ಯಾಡ್‌ಮಿಂಟನ್ ಚ್ಯಾಂಪಿಯನ್ ಆಗಿರುವ ಗಾಯತ್ರಿ ಮುಂದೊಂದಿನ ಭಾರತಕ್ಕೆ ಚಿನ್ನದ ಪದಕವನ್ನು ದೊರಕಿಸಿಕೊಡಲಿ ಎಂದು ಆಶಿಸೋಣ. ಅವರ ಮುದ್ದಿನ ಮಗ ಕೂಡ ಅಪ್ಪನ ಅಕಾಡಮಿಯಲ್ಲಿ ಅದಾಗಲೇ ತರಬೇತಿ ಪಡೆಯುತ್ತಿದ್ದಾನೆ. ಹೆಮ್ಮೆಯ ಗೋಪಿಚಂದ್ ಅವರ ಕನಸು ನನಸಾಗಲಿ. ಗೋಪಿಚಂದ್ ಎಂದರೆ ಒಬ್ಬ ಅಪ್ರತಿಮ ದೇಶಭಕ್ತ. ಯಾವಾಗ ಒಬ್ಬ ವ್ಯಕ್ತಿ ತನ್ನ ವಯಕ್ತಿಕ ಬೆಳವಣಿಗೆಯ ಜೊತೆಗೆ ದೇಶದ ಬೆಳವಣಿಗೆಯನ್ನೂ ಆಶಿಸಿ ಆ ನಿಟ್ಟಿನಲ್ಲಿ ತನ್ನ ಕೈಲಾದ ಕೆಲಸವನ್ನು ಮಾಡುತ್ತಾನೋ ಆತ ಸರ್ವರಿಂದಲೂ ಗೌರವಿಸಲ್ಪಡುತ್ತಾನೆ. ನೀವು ಸರ್ವರಿಂದಲೂ ಗೌರವಕ್ಕೆ ಅದಾಗಲೇ ಭಾಜನರಾಗಿದ್ದೀರಿ. 2012 ರ ಲಂಡನ್ ಒಲಂಪಿಕ್ಸ್’ನಲ್ಲಿ ತ್ರಿವರ್ಣ ಧ್ವಜ ಹಾರಾಡಲು ನೀವು ಕಾರಣ . ಈಗ 2016ರ ರಿಯೊ ಒಲಂಪಿಕ್ಸ್’ನಲ್ಲಿ ಮತ್ತೆ ನಮ್ಮ ಧ್ವಜ ಹಾರಾಡಿದೆಯಲ್ಲ, ಅದಕ್ಕೆ ಕೂಡ ನೀವೇ ಕಾರಣ. ಭಾರತೀಯರನ್ನೆಲ್ಲ ಒಗ್ಗೂಡಿಸಿದ ನಿಮಗೆ ಕೋಟಿ ಕೋಟಿ ಧನ್ಯವಾದಗಳು.. ನಿಮ್ಮ ಗರಡಿಯಲ್ಲಿ ಇನ್ನೂ ಒಳ್ಳೊಳ್ಳೆ ಪ್ರತಿಭೆಗಳು ಬೆಳಕಿಗೆ ಬರಲಿ ಎಂದು ಆಶಿಸುತ್ತೇವೆ.

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post