X

ಕ್ರಾಂತಿ ವೀರ ಖುದೀರಾಮ್ ಬೋಸ್

ತನ್ನ ಹದಿನೆಂಟನೇ ವಯಸ್ಸಿನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಾಣ ಅರ್ಪಿಸಿದ ಧೀರ ಹೋರಾಟಗಾರ ಖುದೀರಾಮ್ ಬೋಸ್. ಕಿಂಗ್ಸ್ ಫರ್ಢ್ ಎಂಬ ದರ್ಪ ಅಧಿಕಾರಿಯ ಸೊಕ್ಕನ್ನು ಅಡಗಿಸಲು ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಮೇಲೆ ಮೊಟ್ಟ ಮೊದಲ ಬಾರಿಗೆ ಬಾಂಬ್ ಪ್ರಯೋಗಿಸಿದ ವೀರ ಖುದೀರಾಮ್ ಬೋಸ್. ಖುದೀರಾಮ್ ಬೋಸ್‘ನ ಬಲಿದಾನದ ದಿನದ ಈ ಸಂದರ್ಭಗಳಲ್ಲಿ ಆತನ ಸ್ಮರಣೆಯೇ ಈ ಲೇಖನದ ಆಶಯ.

ಖುದೀರಾಮ್ ಬೋಸ್ 1889 ಡಿಸೆಂಬರ್ 3 ರಂದು ಬಂಗಾಳದ ಮೇದಿನಿಪುರ ಜಿಲ್ಲೆಯ ಬಹುವೈನೀ ಗ್ರಾಮದಲ್ಲಿ ತ್ರೈಲೋಕ್ಯನಾಥ ಬಸು ಮತ್ತು ಲಕ್ಷ್ಮೀಪ್ರಿಯಾ ಅವರ ಮಗನಾಗಿ ಖುದೀರಾಮ ಜನಿಸಿದನು. ತಂದೆ ತ್ರೈಲೋಕ್ಯನಾಥ ಬಸು ನಾಡಾಜೋಲ್ ರಾಜರ ಊರಿನ ತಹಶೀಲ್ದಾರರಾಗಿದ್ದರು. ತಾಯಿ ಲಕ್ಷ್ಮೀಪ್ರಿಯಾ ದೇವಿ ದೈವಭಕ್ತಿ, ಧರ್ಮನಿಷ್ಠೆ , ದಾನಗಳಿಗೆ ಹೆಸರಾಗಿದ್ದರು. ಖುದೀರಾಮನಿಗೆ  ಆರು ವರ್ಷ ವಯಸ್ಸಾಗುವ ಹೊತ್ತಿಗೆ ತಂದೆ ಮತ್ತು ತಾಯಿ ಇಬ್ಬರನ್ನು ಕಳೆದುಕೊಂಡ. ಖುದೀರಾಮನ ಪೋಷಣೆಯ ಜವಾಬ್ದಾರಿಯನ್ನು ಅಕ್ಕ ಅನುರುಪಾದೇವಿ ಮತ್ತು ಭಾವ ಅಮೃತಲಾಲ್ ವಹಿಸಿಕೊಂಡರು. ಅನುರುಪಾದೇವಿ ತಮ್ಮನನ್ನು ತನ್ನ ಸ್ವಂತ ಮಗನಂತೆ ಭಾವಿಸಿ ಅಕ್ಕರೆಯಿಂದ ಬೆಳೆಸಿದಳು. ಖುದೀರಾಮ ಸೂಕ್ಮ ಬುದ್ಧಿಯನ್ನು ಹೊಂದಿದ್ದ. ವಿಷಯವನ್ನು ಬೇಗ ಗ್ರಹಿಸುತ್ತಿದ್ದ. ಆದರೆ ಖುದೀರಾಮ ಓದಿನ ಮೇಲೆ ಹೆಚ್ಚು ಆಸಕ್ತಿಯಿರಲಿಲ್ಲ. “ ಭಾರತ ಶ್ರೇಷ್ಠ ದೇಶ, ಸಾವಿರಾರು ವರ್ಷಗಳ ಇತಿಹಾಸವಿರುವ ನಮ್ಮ ದೇಶವನ್ನು ಪರಕೀಯರು ಏಕೆ ಆಳುತ್ತಿದ್ದಾರೆ. ನಾನು ದೊಡ್ಡವನಾದ ಮೇಲೆ ಅವರನ್ನು ಓಡಿಸಬೇಕು.” ಎಂದು ಸದಾ ಯೋಚಿಸುತ್ತಿದ್ದ. ದೇಶದ ಸ್ವಾತಂತ್ರ್ಯದ ಬಗ್ಗೆ ಖುದೀರಾಮ ಎಳೆಯ ವಯಸ್ಸಿನಲ್ಲೆಯೇ ಇಷ್ಟೊಂದು ಚಿಂತಿಸಿದ್ದ. ಹೀಗಿರುವಾಗ ವಂದೇಮಾತರಂ ಪ್ರಸಿದ್ಧಿಯಾಯಿತು. ವಂದೇಮಾತರಂ ಕೇಳುತ್ತಲೇ ಖುದೀರಾಮನ ಮೈ ಪುಳಕಿತಗೊಂಡಿತು. ಬಂಕಿಮಚಂದ್ರರು ಬರೆದ ಆನಂದಮಠ ಕಾದಂಬರಿಯನ್ನು ಖುದೀರಾಮ ಓದಿ ಸ್ಪೂರ್ತಿಗೊಂಡು ತಾಯಿ ಭಾರತಿಯ ಮುಕ್ತಿಗಾಗಿ ನಾನು ನನ್ನ ಜೀವನವನ್ನು ಅರ್ಪಿಸುತ್ತೇನೆ ಎಂದು ನಿರ್ಧರಿಸಿದ. ವಂದೇಮಾತರಂ ಕ್ರಾಂತಿಯ ಕಹಳೆಯನ್ನು ಊದಿತು. ದೇಶಭಕ್ತರು ಒಂದೆಡೆ ಸೇರಿದಾಗ ವಂದೇ ಮಾತರಂ ಘೋಷಣೆ ಕೂಗುವುದು ಸಾಮಾನ್ಯವಾಯಿತು. ವಂದೇ ಮಾತರಂನಿಂದ ಸ್ಪೂರ್ತಿ ಪಡೆದ ಸಾವಿರಾರು ಜನ ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು. ಇದನ್ನು ತಡೆಯಲು ಬ್ರಿಟಿಷರು ಬಂಗಾಳವನ್ನು ವಿಭಜಿಸಲು ಮುಂದಾದರು. ಪಶ್ಚಿಮ ಬಂಗಾಳದಲ್ಲಿ ಹಿಂದುಗಳೂ ಮತ್ತು ಪೂರ್ವ ಬಂಗಾಳದಲ್ಲಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿದ್ದರು. ಇದನ್ನು ಗಮನಿಸಿ ಬ್ರಿಟಿಷರು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲು ಮುಂದಾದರು. ಇದನ್ನು ಭಾರತದ ಎಲ್ಲ ಭಾಗಗಳ ದೇಶಭಕ್ತ ಜನರು ವಿರೋಧಿಸಿ ವಂಗಭಂಗ ಎಂಬ ಚಳುವಳಿಯನ್ನು ಆರಂಭಿಸಿದರು.

ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಖುದೀರಾಮ ಕ್ರಾಂತಿ ಮಾರ್ಗ ಹಿಡಿದು ಚಳುವಳಿಗೆ ಧುಮುಕಿದ. ಬಂಗಾಳದ ಕ್ರಾಂತಿಕಾರಿಗಳ ಗುಂಪನ್ನು ಸೇರಿದ. ದೇಶಕಾರ್ಯದ ದೀಕ್ಷೆ ಪಡೆದ ಖುದೀರಾಮ ತನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿಬಿಟ್ಟ. ಖುದೀರಾಮ ಪಿಸ್ತೂಲು, ಚೂರಿ ಮುಂತಾದ ಶಸ್ತ್ರಗಳ ಉಪಯೋಗ ಕಲಿತು ಅದರಲ್ಲಿ ಪ್ರವೀಣನಾದ. ವಂದೇ ಮಾತರಂ ಪ್ರಚಾರವನ್ನು ಕೈಗೆತ್ತಿಕೊಂಡ ಖುದೀರಾಮ ಎಲ್ಲರಿಗೂ ವಂದೇ ಮಾತರಂ ಹಾಡನ್ನು ಕಲಿಸತೊಡಗಿದ. ಅದರ ಅರ್ಥವನ್ನು ವಿವರಿಸಿ ಆನಂದಮಠ ಕಾದಂಬರಿಯನ್ನು ಓದಲು ತನ್ನ ಗೆಳೆಯರನ್ನು ಪ್ರೇರೇಪಿಸಿದ. ವಂದೇ ಮಾತರಂ ಪ್ರಚಾರ ಹೆಚ್ಚಿದಂತೆಲ್ಲಾ ಬ್ರಿಟಿಷರ ಕೌರ್ಯವೂ ಸಹ ಹೆಚ್ಚಾಯಿತು. ವಂದೇ ಮಾತರಂ ಘೋಷಣೆ ಕೂಗುವುದು ರಾಜದ್ರೋಹ ಎಂದು ಸಾರಿದರು. ಕ್ರಾಂತಿಕಾರಿಗಳಿಗೆ ಚಿತ್ರ ಹಿಂಸೆ ಕೊಡಲು ಶುರು ಮಾಡಿದರು. ಕಿಂಗ್ಸ್ ಫರ್ಡ್ ಎಂಬ ನ್ಯಾಯವಾದಿ ಕ್ರಾಂತಿಕಾರಿಗಳಿಗೆ ಘೋರ ಶಿಕ್ಷೆಯನ್ನು ವಿಧಿಸುತ್ತಿದ್ದ. ಈ ಸಂದರ್ಭದಲ್ಲಿ ಸುಶೀಲ್ ಕುಮಾರ್ ಎಂಬ ತರುಣ ಪೋಲೀಸರ ಹಿಂಸೆಯನ್ನು ಸಹಿಸದೇ ಒಬ್ಬ ಅಧಿಕಾರಿಗೆ ರಕ್ತ ಬರುವ ಹಾಗೇ ಬಲವಾಗಿ ಹೊಡೆದ. ಸುಶೀಲನನ್ನು ಪೊಲೀಸರು ಬಂಧಿಸಿದರು. ಕ್ರೂರ ನ್ಯಾಯಾಧೀಶ ಕಿಂಗ್ಸ್ ಫರ್ಡ್ ಸುಶೀಲನಿಗೆ ಹದಿನೈದು ಛಡಿ ಏಟಿನ ಶಿಕ್ಷೆಯನ್ನು ವಿಧಿಸಿದ.

ಕ್ರೂರಿಯಾಗಿ ವರ್ತಿಸುತ್ತಿದ್ದ ಕಿಂಗ್ಸ್ ಫರ್ಡ್ ನನ್ನು ಕೊಂದು ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಕ್ರಾಂತಿಕಾರಿಗಳು ನಿರ್ಧರಿಸಿದರು. ಈ ಕುರಿತು ಯೋಜನೆ ಮಾಡಲು ಕ್ರಾಂತಿಕಾರಿಗಳು 1908 ಏಪ್ರಿಲ್ ತಿಂಗಳಲ್ಲಿ ಸಭೆ ಸೇರಿದರು. ಸಭೆಯಲ್ಲಿ ಅರವಿಂದ ಘೋಷ್, ಚಾರುದತ್ತ ಮುಂತಾದ ಕ್ರಾಂತಿಕಾರಿಗಳಿದ್ದರು. ಕಿಂಗ್ಸ್ ಫರ್ಡ್ ನನ್ನು ಗುಂಡಿಕ್ಕಿ ಕೊಲ್ಲಬೇಕೆಂದು ನಿರ್ಧರಿಸಲಾಯಿತು. ದೇಶಕ್ಕಾಗಿ ಪ್ರಾಣ ಅರ್ಪಿಸಲು ಸಿದ್ಧನಾಗಿದ್ದ ಖುದೀರಾಮ ಈ ಕೆಲಸವನ್ನು ಮಾಡಲು ಒಪ್ಪಿದ. ಕಿಂಗ್ಸ್ ಫರ್ಡ್ ವಧೆಗೆ ಖುದೀರಾಮ ಮತ್ತು ಪ್ರಫುಲ್ಲ ಕುಮಾರ ಸಿದ್ದರಾದರು. ಏಪ್ರಿಲ್ 30 1908 ರ ರಾತ್ರಿ ಖುದೀರಾಮ ಮತ್ತು ಪ್ರಫುಲ್ಲ ಬಾಂಬ್ ಮತ್ತು ಬಂದೂಕು ಸಿದ್ದ ಮಾಡಿಕೊಂಡು ಕಿಂಗ್ಸ್ ಫರ್ಡ್ ನ ಬಂಗಲೆಯ ಹೊರಗೆ ಕಾಯುತ್ತಿದ್ದರು. ಸ್ವಲ್ಪ ಹೊತ್ತಿನಲ್ಲಿ ಬಂಗಲೆಯಿಂದ ಒಂದು ಕುದರೆ ಗಾಡಿ ಬಂತು. ಕೈಯಲಿದ್ದ ಬಾಂಬನ್ನು ಖುದೀರಾಮ ಗುರಿಯಿಟ್ಟು ಎಸೆದ. ಬ್ರಿಟಿಷರ ವಿರುದ್ದ ಭಾರತ ಎಸೆದ ಮೊದಲ ಬಾಂಬ್ ಅದಾಗಿತ್ತು. ಬಾಂಬ್ ಗಾಡಿಗೆ ತಗುಲಿದ ಮೇಲೆ ಭೀಕರ ಶಬ್ದವಾಯಿತು. ಖುದೀರಾಮ ಮತ್ತು ಪ್ರಫುಲ್ಲ ಬೇರೆ ದಿಕ್ಕುಗಳಲ್ಲಿ ಓದಿದರು. ಕಿಂಗ್ಸ್ ಫರ್ಡ್ ಅದೃಷ್ಟ ಚೆನ್ನಾಗಿತ್ತು ಖುದೀರಾಮ ಬಾಂಬ್ ಎಸೆದ ಗಾಡಿಯಲ್ಲಿ  ಅವನು ಇರಲಿಲ್ಲ. ಆತನ ಮನೆಗೆ ಅತಿಥಿಗಳಾಗಿ ಬಂದ ಇಬ್ಬರು ಮಹಿಳೆಯರು ಗಾಡಿಯಲ್ಲಿದ್ದರು. ಗಾಡಿಯಲ್ಲಿದ್ದ ಮಹಿಳೆಯರು ಮೃತರಾದರು.

ತಪ್ಪಿಸಿಕೊಂಡು ಓಡಿದ ಖುದೀರಾಮ ಬೆಳಿಗ್ಗೆ ಲಾಖ ಎಂಬ ಪ್ರದೇಶವನ್ನು ತಲುಪಿದ. ಇಷ್ಟು ಹೊತ್ತಿಗೆ ಘಟನೆಯ ಸುದ್ದಿ ಎಲ್ಲ ಕಡೆ ಹರಡಿತ್ತು. ಹಸಿದಿದ್ದ ಖುದೀರಾಮ ಒಂದು ಅಂಗಡಿಯ ಬಳಿ ಕಡಲೆ ತಿನ್ನುತಿದ್ದ ಸಂದರ್ಭದಲ್ಲಿ ಈ ಸುದ್ದಿ ಕೇಳಿ “ಕಿಂಗ್ಸ್ ಫರ್ಡ್ ಸಾಯಲಿಲ್ಲವೇ” ಎಂದು ಕೇಳಿದ. ಅನುಮಾನದಿಂದ ಅಂಗಡಿಯವ ಖುದೀರಾಮವನ್ನು ಪೊಲೀಸರಿಗೆ ಒಪ್ಪಿಸಿದ. ಅತ್ತ ಪ್ರಫುಲ್ಲ ಪೋಲೀಸರ ಕೈ ಸಿಗದೇ ತನ್ನ ಬಂದೂಕಿನಿಂದ ತಾನೇ ಗುಂಡು ಹಾರಿಸಿಕೊಂಡು ಬಲಿದಾನ ಮಾಡಿದ. ಪೊಲೀಸರು ಖುದೀರಾಮನ ಮೇಲೆ ಮೊಕದ್ದಮೆ ಹೂಡಿದರು. ವಿಚಾರಣೆಯ ನಾಟಕವಾಡಿ ಖುದೀರಾಮನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿದರು. ಖುದೀರಾಮನು ಸಹ ಅದನ್ನೇ ಬಯಸಿದ್ದ. ನೀನು ಏನಾದರೂ ಹೇಳಬಯಸುತ್ತಿಯಾ ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ಖುದೀರಾಮ “ ನಾನು ದೇಶದ ಸ್ವಾತಂತ್ರ್ಯಕ್ಕಾಗಿ ಸಾಯ ಬಯಸುತ್ತೇನೆ, ನನಗೆ ಎಳ್ಳಷ್ಟು ದುಃಖವಿಲ್ಲ. ಕಿಂಗ್ಸ್ ಫರ್ಡ್ ನಿಗೆ ಶಿಕ್ಷೆ ಕೊಡಲು ಸಾಧ್ಯವಾಗಲಿಲ್ಲ ಎಂಬ ಖೇದವಿದೆ” ಎಂದ.

1908 ಆಗಸ್ಟ್ 11 ರಂದು ಬೆಳಿಗ್ಗೆ ಆರು ಗಂಟೆಗೆ ಖುದೀರಾಮನನ್ನು ಗಲ್ಲು ಕಂಬದ ಬಳಿಗೆ ಕರೆತಂದರು. ಭಗವದ್ಗೀತೆ ಖುದೀರಾಮನ ಕೈಯಲ್ಲಿತ್ತು. ಕೊನೆಯ ಬಾರಿಗೆ ವಂದೇ ಮಾತರಂ ಕೂಗಿದ ಖುದೀರಾಮ ಕುಣಿಕೆಗೆ ತಲೆಯೊಡ್ಡಿ ತಾಯಿ ಭಾರತಿಗೆ ತನ್ನ ಪ್ರಾಣ ಅರ್ಪಿಸಿ ಭಾರತದ ಇತಿಹಾಸದಲ್ಲಿ ಅಮರನಾದ.

Facebook ಕಾಮೆಂಟ್ಸ್

Raviteja Shastri: ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.
Related Post