X

ರಿಲಿಜನ್‍ಗಳ ಗರ್ಭದಲ್ಲೇ ಇದೆ ಅಸಹಿಷ್ಣುತೆಯ ಬೀಜ

ಮೂಲ: ಮಾರಿಯಾ ವರ್ತ್

ಕನ್ನಡಕ್ಕೆ: ರೋಹಿತ್ ಚಕ್ರತೀರ್ಥ

ನಾವಿರುವ ಸದ್ಯದ ಜಗತ್ತಿನಲ್ಲಿ ದೊಡ್ಡದೊಂ ದು ಸಮಸ್ಯೆ ಇದೆ ಎಂಬುದರಲ್ಲಿ ಅನುಮಾನವಿಲ್ಲ. ವಿಪರ್ಯಾಸವೆಂದರೆ ನಾವದನ್ನು ಪರಿಹರಿಸುವತ್ತ ದಿಟ್ಟವಾದ ಹೆಜ್ಜೆ ಇಡಲಿಕ್ಕೂ ಹಿಂದೇಟು ಹಾಕುತ್ತಿದ್ದೇವೆ. ಸಮಸ್ಯೆ ಮತ್ತು ಅದರ ತಾಯಿ ಬೇರನ್ನು ಮುಟ್ಟಲು ಬೆದರಿ ಥರಗುಟ್ಟುತ್ತ ನಿಂತಿದ್ದೇವೆ. ಜಗತ್ತಿನ ಸರಕಾರಗಳೆಲ್ಲ ಅದರ ಬಗ್ಗೆ ದಿವ್ಯ ಮೌನ ವಹಿಸುವುದು ಶ್ರೇಯಸ್ಕರ ಎಂಬಂತೆ ನಡೆದುಕೊಳ್ಳುತ್ತಿವೆ. ಆ ಸಮಸ್ಯೆಯ ಕುರಿತು ಮಾತಾಡದಿರುವುದು ಪೊಲಿಟಿಕಲಿ ಕರೆಕ್ಟ್, ಮತ್ತು ಹಾಗಿರುವುದೇ ಜಾಣತನ ಎಂಬ ನಿರ್ಣಯಕ್ಕೆ ರಾಜಕೀಯ ನಾಯಕರು ಬಂದಂತಿದೆ. ಆದರೆ ಇಂಥ ಜಾಣಮೌನ, ದಿವ್ಯ ನಿರ್ಲಕ್ಷ್ಯ ಮತ್ತು ಅಸಹ್ಯ ಹುಟ್ಟಿಸುವ ರಾಜಕೀಯ ಲೆಕ್ಕಾಚಾರಗಳಿಂದ ಈ ಜಗತ್ತು ಮುಂದೆ ಹೋಗುವುದು ಸಾಧ್ಯವಿಲ್ಲ. ಸಾಧ್ಯವಾದರೆ ಶಿಲಾಯುಗಕ್ಕೆ ಸರಿಯಬಹುದೇನೋ!

ಸಮಸ್ಯೆ ಇರುವುದು, ಯಾವುದು ಅಂತಿಮ ಸತ್ಯ ಎಂದು ಒಪ್ಪಿಸಲಾಗಿದೆಯೋ ಅದನ್ನು ಮರು ಮಾತಿಲ್ಲದೆ ಒಪ್ಪಿಕೊಂಡು ಬಿಡುವ ಸೋಮಾರಿ ಜನರ ಬೌದ್ಧಿಕ ಷಂಡತ್ವದಲ್ಲಿ. ಹಾಗೆ ಜನರನ್ನು ಒಪ್ಪಿಸುವ ಗುತ್ತಿಗೆ ಹಿಡಿದ ಸಂಸ್ಥೆಗಳು ದೇವರು ಹೇಳಿದನೆಂಬ “ಅಂತಿಮ ಸತ್ಯ”ದ ಲೊಳಲೊಟ್ಟೆ ಸಿದ್ಧಾಂತಗಳನ್ನು ತಮ್ಮ ಅಸ್ತಿತ್ವ ಉಳಿಸಲಿಕ್ಕೂ ಜಾಣತನದಿಂದ ಬಳಸಿಕೊಂಡವು. ತಮ್ಮ ವಾದದ ಹುಳುಕುಗಳನ್ನು ಮುಚ್ಚಿ ಹಾಕಲು ಮತ್ತು ಎದುರಾಗಬಹುದಾದ ಪ್ರಶ್ನೆಯ ಭರ್ಜಿಗಳನ್ನು ಪರಿಹರಿಸಿಕೊಳ್ಳಲು ಅವರಿಗೆ ದೇವರ ಆಜ್ಞೆಯೆಂಬ ದಬಾದುಬಿಯ ಗುರಾಣಿಯನ್ನು ಗಾಳಿಯಲ್ಲಿ ಬೀಸುವುದು ಅನಿವಾರ್ಯವೂ ಆಗಿತ್ತೆನ್ನಿ.

ದೇವರು ತನ್ನ ಆಜ್ಞೆ/ಒಡಂಬಡಿಕೆಗಳನ್ನು ಚರ್ಚಿಗೆ ಬೋಧಿಸಿದನು ಮತ್ತು ಜಗತ್ತಿನ ಪ್ರತಿಯೊಬ್ಬರೂ ಆ ಸತ್ಯ ವಾಕ್ಯವನ್ನು ನಂಬಲೇಬೇಕು; ನಂಬದವರಿಗೆ ಮರಣವೇ ಉತ್ತರ – ಎಂದು ಕ್ರಿಶ್ಚಿಯಾನಿಟಿ ರಿಲಿಜನ್ ಮೊದಲು ಹೇಳಿತು. ಇದೇ ಬಗೆಯ ತಂತ್ರವನ್ನು ಇಸ್ಲಾಂ ಮುಂದುವರಿಸಿತು. ಯಾರು ತಪ್ಪು ಹಾದಿಯಲ್ಲಿದ್ದಾರೆಂದು ರಿಲಿಜನ್ ತಿಳಿಯುತ್ತದೋ ಅಂಥವರನ್ನು ಸರಿ ದಾರಿಗೆ – ಅಂದರೆ ರಿಲಿಜನ್ ಹೇಳುವ ಸತ್ಯ ಮಾರ್ಗಕ್ಕೆ ತರಲು ಪ್ರಯತ್ನಿಸುವುದು; ಅವರೇನಾದರೂ ಪ್ರತಿರೋಧ ಒಡ್ಡಿ ನಿರಾಕರಿಸಿದರೆ ಕೊಂದು ಪರಿಹರಿಸಿ ಬಿಡುವುದು – ಇಂಥ “ದೇವರ ಹೆಸರಿನ ಭಯೋತ್ಪಾದನೆ” ಶುರುವಾಗಿದ್ದು ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳಿಂದ. ಈ ಭಯೋತ್ಪಾದನೆಗೆ ಅಮೆರಿಕಾದಿಂದ ಭಾರತದವರೆಗೆ ಲಕ್ಷಾಂತರ ಜನ ಕೊರಳೊಡ್ಡಬೇಕಾಗಿ ಬಂತು. ಹಾಗಾಗಿಯೇ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಂದ ಸಂಗತಿಗಳು ಯಾವುವು ಎಂದಾಗ ಕಮ್ಯುನಿಸಂ,ಫ್ಯಾಸಿಸಂ, ನಾಝಿಸಂ ಇತ್ಯಾದಿಗಳ ಸಾಲಿನಲ್ಲೇ ಇಸ್ಲಾಂ ಮತ್ತು ಕ್ರಿಶ್ಚಿಯಾನಿಟಿಗಳೂ ಬರುತ್ತವೆ.

ಶಾಲೆಯಲ್ಲಿದ್ದಾಗ ನಾನು ಇಸ್ಲಾಂ ರಿಲಿಜನ್ ಹರಡಿದ್ದು ಕತ್ತಿ ಮತ್ತು ಬೆಂಕಿಯಿಂದ ಎಂಬುದನ್ನು ಓದಿದ ನೆನಪು. ಆ ವಾಸ್ತವದ ನಿಜವಾದ ಅರ್ಥ ಗೊತ್ತಾಗಿದ್ದು ಬಹಳ ವರ್ಷಗಳ ನಂತರ. ಹಿಂಸಾಚಾರದಲ್ಲಿ ಇಸ್ಲಾಂ ಒಂದೇ ಅಪರಾಧಿಯಲ್ಲ. ಕ್ರಿಶ್ಚಿಯಾನಿಟಿಯನ್ನು ಪಸರಿಸಲು ಬಯಸಿದ ದೇವರ ಆಜ್ಞಾನುವರ್ತಿಗಳು ಕೂಡ ಹಿಂಸಾರತಿಯಷ್ಟು ಅಸಹ್ಯವಾದ ಮೃಗೀಯ ವರ್ತನೆಯನ್ನು ತೋರಿಸಿದ್ದಾರೆ. ಹಾಗಾಗಿಯೇ1970ರ ದಶಕದಲ್ಲಿ ನಾವು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳಾಗಿದ್ದಾಗ, “ರಿಲಿಜನ್‍ಗಳೇ ಈ ಜಗತ್ತಿನಲ್ಲಿ ಅತಿಹೆಚ್ಚು ರಕ್ತ ಹರಿಸಲು ಕಾರಣವೇನಿರಬಹುದು?” ಎಂದು ಚರ್ಚಿಸುತ್ತಿದ್ದೆವು. ರಿಲಿಜನ್‍ಗಳ ಹೆಸರಲ್ಲಿ ಅಂಥ ಹಿಂಸೆ ನಡೆದಿದೆಯೇ ಎಂಬ ವಿಷಯದಲ್ಲಿ ನಮಗೆ ಎಳ್ಳಷ್ಟೂ ಅನುಮಾನವಿರಲಿಲ್ಲ.

2000ನೇ ಇಸವಿಯಲ್ಲಿ ನಡೆದ ಘಟನೆಯೊಂದು ನನ್ನ ತಿಳಿವನ್ನು ಸ್ಪಷ್ಟಗೊಳಿಸಿತು. ಆಗ ಪೋಪ್ ಆಗಿದ್ದ ಜಾನ್ ಪಾಲ್ -||, ಕ್ರೈಸ್ತರು ನಡೆಸಿದ ಹತ್ಯಾಕಾಂಡವನ್ನು ಒಪ್ಪಿಕೊಂಡು, ಅಂದು ನಡೆದ ಘಟನಾವಳಿಗೆ ನಾವೆಲ್ಲ ಕ್ಷಮೆ ಯಾಚಿಸಬೇಕು; ತಲೆ ತಗ್ಗಿಸಬೇಕು; ಪಶ್ಚಾತ್ತಾಪ ಪಡಬೇಕು ಎಂದೆಲ್ಲ ಹೇಳಿದರು. “ಚರ್ಚ್‍ನ ಮಕ್ಕಳು ಇಂಥ ತಪ್ಪುಗಳನ್ನು ಮಾಡಿದರು” ಎಂಬ ಮಾತನ್ನು ಬಹಳ ಎಚ್ಚರಿಕೆಯಿಂದ ಆಡಿದರು. ಚರ್ಚ್‍ನ ಮಕ್ಕಳು ಎಂದರೇ ಹೊರತು, ಯಾವ ಕಾರಣಕ್ಕೂ ಅವರು ಚರ್ಚ್ ಅನ್ನು ಪಾಪಗಳಿಗೆ ಬಾಧ್ಯಸ್ಥನಾಗಿ ಮಾಡಲಿಲ್ಲ. ಚರ್ಚ್ ಎಂಬುದು ಕ್ರಿಶ್ಚಿಯಾನಿಟಿಯೆಂಬ ಬಹು ದೊಡ್ಡ ವ್ಯವಸ್ಥೆಯ ಸಾಂಸ್ಥಿಕ ರೂಪ. ಅದನ್ನು ಯಾವ ಕಾರಣಕ್ಕೂ ಗುರಿ ಮಾಡುವುದಾಗಲೀ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದಾಗಲೀ ಮಾಡಬಾರದು ಎಂಬ ಎಚ್ಚರ ಪೋಪ್‍ರಿಗಿತ್ತು. ಹತ್ಯಾಕಾಂಡ ನಡೆಸಿದವರನ್ನು ಪೋಪ್ “ದಾರಿ ತಪ್ಪಿದ ಅನುಯಾಯಿಗಳು”ಎಂದಷ್ಟೇ ಹೇಳಿ ಬೀಸುವ ದೊಣ್ಣೆಯಿಂದ ಉಪಾಯವಾಗಿ ತಪ್ಪಿಸಿಕೊಂಡರು. ಇಸ್ಲಾಂ ರಿಲಿಜನ್’ನಲ್ಲೂ ಇಂದು ಇದೇ ಉಪಾಯವನ್ನು ಅನುಸರಿಸಲಾಗುತ್ತಿದೆ. ಜಿಹಾದಿ ಉಗ್ರರು “ಅಲ್ಲಾಹು ಅಕ್ಬರ್” ಎಂದು ಕೂಗುತ್ತ ನರಮೇಧದಲ್ಲಿ ತೊಡಗಿ ಹೆಣಗಳ ಬೆಟ್ಟ ಕಟ್ಟಿದಾಗ ರಾಜಕಾರಣಿಗಳು ಮತ್ತು ಮಾಧ್ಯಮಗಳು ಶೀಘ್ರವಾಗಿ ಇಸ್ಲಾಂನ ರಕ್ಷಣೆಗೆ ಧಾವಿಸಿ ಬಿಡುತ್ತಾರೆ. “ಉಗ್ರರಿಗೂ ಇಸ್ಲಾಂಗೂ ಸಂಬಂಧವಿಲ್ಲ. ಇಸ್ಲಾಂ ಅನ್ನು ಸರಿಯಾಗಿ ಅರ್ಥೈಸಿಕೊಳ್ಳದ ಕಿಡಿಗೇಡಿಗಳ ಕೃತ್ಯ ಅದು” ಎಂದು ತ್ವರೆಯಿಂದ ತಿಪ್ಪೆ ಸಾರಿಸುತ್ತಾರೆ. ಉಗ್ರರ ಕೃತ್ಯ ನಡೆದ ಮರು ದಿನ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವ ಹೇಳಿಕೆಗಳೆಲ್ಲ ಬಹುತೇಕ ಒಂದೇ. “ಈ ಹತ್ಯಾಕಾಂಡದಿಂದ ಆಘಾತವಾಗಿದೆ. ಇದು ಹೇಡಿಗಳ ಕೃತ್ಯ. ನಾವೆಲ್ಲ ಒಗ್ಗಟ್ಟಾಗಿ ನಿಲ್ಲುತ್ತೇವೆ. ಇನ್ನೆಂದೂ ಇಂಥ ಹಿಂಸೆ ನಡೆಯಲು ಬಿಡುವುದಿಲ್ಲ. ಮಾನವತಾವಾದಕ್ಕೆ ಜಯವಾಗಲಿ. ಭಯೋತ್ಪಾದಕರ ಕೈ ಮೇಲಾಗಲು ಎಂದೆಂದೂ ಬಿಡೆವು”. ಮುಸ್ಲಿಂ ಧರ್ಮ ಗುರುಗಳೂ ಟಿವಿ ಚಾನೆಲ್ಲುಗಳಲ್ಲಿ, ರೇಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. “ನಾವೂ ಈ ಕೃತ್ಯವನ್ನು ಉಗ್ರವಾಗಿ ವಿರೋಧಿಸುತ್ತೇವೆ. ತಿಳಿವಳಿಕೆಯಿಲ್ಲದ ಅಸ್ವಸ್ಥರು ಮಾಡಿರುವ ಹೊಣೆಗೇಡಿ ಕೆಲಸ ಇದು. ಇದಕ್ಕೂ ಇಸ್ಲಾಂ ರಿಲಿಜನ್‍ಗೂ ಸಂಬಂಧ ಇಲ್ಲ. ಪ್ರಪಂಚದಲ್ಲಿ ನೂರೈವತ್ತು ಕೋಟಿ ಶಾಂತಿಪ್ರಿಯ ಮುಸ್ಲಿಮರಿದ್ದಾರೆ. ಇಸ್ಲಾಂ ಶಾಂತಿ ಬಯಸುತ್ತದೆ ಎಂಬುದಕ್ಕೆ ಇವರೇ ಸಾಕ್ಷಿ…” ಎಂದೆಲ್ಲ ಹೇಳಿಕೆ ಕೊಡುತ್ತಾರೆ. ಜಗಮಗಿಸುವ ನಗರಗಳಲ್ಲಿ ಬಹುಮಹಡಿ ಕಟ್ಟಡಗಳ ಮೇಲೆ ಈ ಕೃತ್ಯದ ಕುರಿತು ಲೇಸರ್ ಬೆಳಕಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ. ಸಾವಿರಾರು ಮಂದಿ ಮೊಂಬತ್ತಿ ಹಿಡಿದು ಮೆರವಣಿಗೆ ಮಾಡುತ್ತಾರೆ. ಇಂಥ ಪ್ರತಿಕ್ರಿಯೆಗಳಿಗೆ ನಾವೆಲ್ಲ ಅದೆಷ್ಟು ಒಗ್ಗಿ ಹೋಗಿದ್ದೇವೆಂದರೆ ಪ್ರತಿ ಸಲ ದಾಳಿಯಾದಾಗಲೂ ಇವೆಲ್ಲ ಚಕ್ರವನ್ನು ಸಹಜವಾಗಿ ಹಾದು ಬರುತ್ತೇವೆ.

ಆ ದಾಳಿಗಳು ಭಯಾನಕ, ಆಘಾತಕಾರಿ ಎಲ್ಲವೂ ನಿಜ. ಆದರೆ ಅವು ಹೇಡಿಗಳ ಕೃತ್ಯ ಎಂದು ತಿಪ್ಪೆ ಸಾರಿಸುವಷ್ಟು ವಿಷಯ ಸರಳವಾಗಿಲ್ಲ ಎಂಬುದನ್ನು ಮರೆಯಬಾರದು. ಜಿಹಾದಿಯೊಬ್ಬ ಕತ್ತಿ ಹಿಡಿಯುವುದು ಕಾಫಿರರನ್ನು ಕೊಲ್ಲುವುದು ಮುಸ್ಲಿಮನಾಗಿ ತನ್ನ ಕರ್ತವ್ಯದ ಒಂದು ಭಾಗ ಎಂದು ಭಾವಿಸಿರುವುದರಿಂದ. ಈ ಕೃತ್ಯದಲ್ಲಿ ತಾನು ಸಾಯವುದಕ್ಕೂ ಆತ ತಯಾರಿದ್ದಾನೆ. ಹಾಗೆ ಸಾಯುವುದು ಸರಿ ಮತ್ತು ಪರಾತ್ಪರ ಎಂಬ ನಂಬಿಕೆ ಅವನಿಗಿದೆ. ಸಾವಿಗಂಜದೆ ಎದೆಯೊಡ್ಡುವ ಧೈರ್ಯವನ್ನು ಪವಿತ್ರ ಗ್ರಂಥದ ಪಠಣ ಅವನಿಗೆ ಕೊಟ್ಟಿದೆ. ಎಲ್ಲ ಭಯೋತ್ಪಾದಕರೂ ಎಳೆ ತರುಣರು ಎಂಬುದನ್ನು ಗಮನಿಸಿ. ಒಂದಷ್ಟು ಜನರನ್ನು ಕೊಂದು, ತನ್ನನ್ನೂ ಕೊಂದುಕೊಳ್ಳುವ ಈ ಪ್ರಕ್ರಿಯೆಯಿಂದ ಪರಲೋಕದಲ್ಲಿ ಸಿಗುವ ಲಾಭ ದೊಡ್ಡದು ಎಂಬುದರ ಬಗ್ಗೆ ಆತನಿಗೆ ಸಂಪೂರ್ಣ ಮನವರಿಕೆಯಾಗದೆ ಆತ ಇಂಥ ಕೆಲಸಕ್ಕೆ ಇಳಿಯುವುದು ಸಾಧ್ಯವಿಲ್ಲ. ಬಹುಶಃ ಅವನಿಗೆ ಬಾಲ್ಯದಲ್ಲೇ ಹಾಗೆ ಮನಸ್ಸು ತಿದ್ದುವ ಸಾಹಿತ್ಯ ಸಿಕ್ಕಿರಬಹುದು. ಅಥವಾ ಅಂತರ್ಜಾಲದಲ್ಲಿ ಆತ ಈ ಉಪದೇಶಗಳನ್ನು ಕೊಡುವ ಬರಹಗಳನ್ನು ಓದಿರಬಹುದು; ಮತಗುರುವಿನ ಮಾತುಗಳನ್ನು ಕೇಳಿರಬಹುದು. ಕಾಫಿರರನ್ನು ಕೊಲ್ಲುವುದರಿಂದ ಅಲ್ಲಾಹು ಸಂಪ್ರೀತನಾಗುತ್ತಾನೆಂಬ ಮಾತುಗಳನ್ನು ಮೇಲಿಂದ ಮೇಲೆ ಕೇಳಿದ ಆ ಹುಡುಗನಿಗೆ ಮನಸ್ಸು ಅತ್ತ ಎಳೆಯುವುದರಲ್ಲಿ ಆಶ್ಚರ್ಯವೇನಿಲ್ಲ. ಕಾಫಿರರನ್ನು ಕೊಲ್ಲದ ಮುಸ್ಲಿಮನಿಗಿಂತ ನಿನಗೆ ಸ್ವರ್ಗದಲ್ಲಿ ಸಿಗುವ ಸ್ಥಾನಮಾನಗಳು ವಿಶೇಷವಾಗಿರುತ್ತವೆ ಎಂಬ ಆಮಿಷ ಅವನ ತಲೆಯೊಳಗೆ ಅಫೀಮಿನಂತೆ ಆವರಿಸಿಕೊಂಡಿರಬಹುದು.

ಅವರ ದೃಷ್ಟಿಯಲ್ಲಿ ಕಾಫಿರರಾಗಿರುವ ನಾವು ಹೇಡಿಗಳಾಗುವುದು ಇಲ್ಲೇ ನೋಡಿ! ಖುರಾನ್‍ನಲ್ಲಿರುವ ಕೆಲವು ಮಾತುಗಳನ್ನು,ಉದಾಹರಣೆಗೆ 4.95, ಇಸ್ಲಾಂನ ಶಾಂತಿಪ್ರಿಯತೆಯ ಬಗ್ಗೆ ಮಾತಾಡುವವರ ಮುಖಕ್ಕೆ ಹಿಡಿದು ಇದರ ಅರ್ಥ ಏನು ಎಂದು ಕೇಳುವ ಕೆಲಸವನ್ನು ನಾವು ಮಾಡುವುದಿಲ್ಲ. “ದೈಹಿಕವಾಗಿ ಸದೃಢವಾಗಿದ್ದರೂ ಜೆಹಾದ್‍ನಲ್ಲಿ ಪಾಲ್ಗೊಳ್ಳದವರ ಮೇಲೆ ಅಲ್ಲಾಹುವಿನ ಕರುಣೆ ಕಡಿಮೆ. ಅಲ್ಲಾಹು ಎಲ್ಲರನ್ನೂ ಪ್ರೀತಿಸುತ್ತಾನೆ;ಆದರೆ ತಮ್ಮ ದುಡ್ಡು ಮತ್ತು ಜನ ಶಕ್ತಿಯಿಂದ ಜೆಹಾದ್‍ನಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವವರ ಮೇಲೆ ಅವನ ಕರುಣೆ,ಪ್ರೀತಿಗಳು ವಿಶೇಷವಾಗಿರುತ್ತವೆ” (4.96-96) – ಎಂಬ ಸಾಲುಗಳನ್ನು ಓದುವ ಹದಿಹರೆಯದ ನಿಷ್ಕಲ್ಮಶ ಮತ್ತು ಪರಿಶುದ್ಧ ಮನಸ್ಸಿನ ಮೇಲೆ ಆಗುವ ಪರಿಣಾಮಗಳ ಕುರಿತು ಯೋಚಿಸಿ. ಅಮಾಯಕ ಚಿತ್ತದಲ್ಲಿ ಸ್ವರ್ಗ ಸುಖದ ಪ್ರಲೋಭನೆ ಒಡ್ಡಿ ದಾರಿ ತಪ್ಪಿಸಲು ಇದಕ್ಕಿಂತ ಚೆಂದದ ಸಾಲು ಬೇಕೆ?ಸ್ವಾರಸ್ಯವೆಂದರೆ ಪವಿತ್ರ ಗ್ರಂಥದ ಇಂಥ ಉತ್ತೇಜನಕಾರಿ ಸಾಲುಗಳಿಗೆ ಬಲಿ ಬೀಳುತ್ತಿರುವವರೆಲ್ಲ ಯುವಕರೇ. ನಡು ವಯಸ್ಸು ದಾಟಿದ, ಬದುಕನ್ನು ಸಾಕಷ್ಟು ನೋಡಿದ ವ್ಯಕ್ತಿಗಳಿಗೆ ಪವಿತ್ರ ಗ್ರಂಥದ ಸಾಲುಗಳು ಅಷ್ಟೇನೂ ತಲೆ ಕೆಡಿಸುತ್ತಿಲ್ಲ. ಇದನ್ನು ಅವರ ಹೇಡಿತನ ಎನ್ನಬೇಕೋ ಬದುಕು ಕಲಿಸಿದ ಪಾಠ ಎನ್ನಬೇಕೋ? ಅಥವಾ ಪವಿತ್ರಗ್ರಂಥದ ಸಾಲುಗಳನ್ನೆಲ್ಲ ವಾಸ್ತವ ನೋಡದೆ ಹಾಗೆ ಹಾಗೇ ಒಪ್ಪಿಕೊಂಡು ಬಿಡಬಾರದೆಂಬ ವಿವೇಚನೆ ಅವರಲ್ಲಿ ಬಂದಿದೆ ಎನ್ನಬೇಕೋ?

ನಾವೀಗ ಜಗತ್ತನ್ನು ಜೆಹಾದಿಗಳಿಂದ ರಕ್ಷಿಸುವುದು ಮಾತ್ರವಲ್ಲ; ಹದಿಹರೆಯದ ಮುಗ್ಧ ಹುಡುಗರು ಪವಿತ್ರ ಗ್ರಂಥದ ಅಮಲಿನಲ್ಲಿ ಬಂದೂಕೆತ್ತಿಕೊಳ್ಳುವುದನ್ನು ಕೂಡ ತಡೆಯಬೇಕಾಗಿದೆ. ಇಹದ ಜವಾಬ್ದಾರಿಗಳಿಗೆ ವಿಮುಖರಾದರೆ ಸ್ವರ್ಗದಲ್ಲಿ ಸುಖ ಕೊಡುವೆನೆಂದು ನಂಬಿಸುವ ಯಾವ ರಿಲಿಜನ್‍ಅನ್ನು ಕೂಡ ಒಪ್ಪದಿರುವುದರಲ್ಲಿ ಜಾಣತನವಿದೆ. ಭೂಮಿಯಲ್ಲಿದ್ದಾಗ ಕ್ರೈಸ್ತನಾಗಿ ಬದಲಾಗದಿದ್ದರೆ ಸ್ವರ್ಗದಲ್ಲಿ ಸ್ಥಾನಮಾನ ಕೊಡುವುದಿಲ್ಲ ಎಂದು ಬೈಬಲ್ ಸಹ ಹೇಳುತ್ತದೆ. ಭೂಮಿಯಲ್ಲಿ ಸಿಗದ ಅಥವಾ ಕೊಡಲಾಗದ ಸುಖವನ್ನು ಸತ್ತ ಬಳಿಕ ಸ್ವರ್ಗದಲ್ಲಿ ಕೊಡುತ್ತೇನೆಂದು ನಂಬಿಸಿ ವಂಚಿಸುವ ರಿಲಿಜನ್ನುಗಳ ಆಷಾಢಭೂತಿತನವನ್ನು ಎಷ್ಟು ಬೇಗ ನಾವು ಅರಿಯುತ್ತೇವೋ ಅಷ್ಟರ ಮಟ್ಟಿಗೆ ನಮ್ಮನ್ನು ರಕ್ಷಿಸಿಕೊಳ್ಳಬಹುದು. ರಿಲಿಜನ್‍ಗಳು ಕಳೆಗಿಡಗಳಿದ್ದಂತೆ. ಎಲ್ಲೆಲ್ಲಿ ಹೋಗುತ್ತವೋ ಅಲ್ಲಿ ಉಳಿದ ಮನುಷ್ಯರನ್ನು ಭೂಮಿಯಿಂದ ಒರೆಸಿ ಹಾಕುತ್ತವೆ. ಕಾಶ್ಮೀರದಲ್ಲಿ ಕಳೆದ ನಾಲ್ಕೈದು ದಶಕಗಳಲ್ಲಿ ಮುಸ್ಲಿಮರಲ್ಲದವರು ನಾಮಾವಶೇಷವಾಗಿರುವುದನ್ನು ನೋಡಬಹುದು. ಹೀಗೆ ತನಗೆ ತಲೆ ಬಾಗದವರನ್ನು ಪರಿಹರಿಸುತ್ತ ಸಾಗುವ ರಿಲಿಜನ್‍ನಿಂದ ಅಪಾಯವಿದೆ ಎಂದು ಮೊದಲು ಅರಿಯಬೇಕಾದವನು ಅದರ ಭಾಗವಾಗಿರುವವನೇ.

ಭಯೋತ್ಪಾದನೆಗೆ ಧರ್ಮವಿಲ್ಲ ಎಂಬುದೀಗ ಸವಕಲು ನಾಣ್ಯ. ಜಗತ್ತಿನ ಯಾವ ರಿಲಿಜನ್ ಕೂಡ ಇಂದು ತಾನೇನು ಉಪದೇಶಿಸುತ್ತೇನೋ ಅದಾಗಿ ಉಳಿದಿಲ್ಲ. ಇಲ್ಲವಾದರೆ ಪ್ರೀತಿ, ಕರುಣೆ,ಸಹೋದರತ್ವಗಳನ್ನು ಸಾರುತ್ತದೆ ಎನ್ನುವ ರಿಲಿಜನ್‍ಗಳಿಂದ ಭಯೋತ್ಪಾದಕರು ಉತ್ಪತ್ತಿಯಾಗುವುದನ್ನು ಯಾಕೆ ತಡೆಯಲು ಆಗಿಲ್ಲ? “ಅಂಥ ಒಂದಷ್ಟು ಸಾಲುಗಳಿರುವುದೇನೋ ನಿಜ,ಅವನ್ನು ಓದಿಕೊಂಡೇ ಕೆಲವು ದುರ್ಬಲ ಮನಸ್ಸಿನ ಯುವಕರು ಭಯೋತ್ಪಾದಕರಾಗುತ್ತಾರೆ”ಎನ್ನುವುದಾದರೆ ಆ ಸಾಲುಗಳನ್ನು ಕಿತ್ತು ಹಾಕುವ ಕೆಲಸವನ್ನೇಕೆ ರಿಲಿಜನ್ನುಗಳು ಮಾಡುತ್ತಿಲ್ಲ?ರಿಲಿಜನ್ನುಗಳು ಯಾವತ್ತೂ “ತಾವು ಮತ್ತು ಜಗತ್ತಿನ ಉಳಿದೆಲ್ಲ ಸಂಗತಿಗಳು” ಎಂಬ ವರ್ಗೀಕರಣ ಮಾಡುತ್ತವೆ. ಅಲ್ಲಿ ನೀವು ರಿಲಿಜನ್‍ನ ಬಣದಲ್ಲಿದ್ದರೆ ನೀವು ಮಾಡಿದ್ದಕ್ಕೆಲ್ಲ ರಿಲಿಜನ್ ಕಡೆಯಿಂದ ಸಮರ್ಥನೆ ಒದಗಿಸಿಕೊಳ್ಳಬಹುದು. ಅದೇ ನೀವು ಇನ್ನೊಂದು ಬಣದಲ್ಲಿದ್ದರೆ ನೀವು ರಿಲಿಜನ್‍ನ ಶತ್ರುವೆಂದು ಪರಿಗಣಿಸಲ್ಪಡುತ್ತೀರಿ. ನಿಮ್ಮ ದಾರಿ ಸರಿಯಾಗಿಯೇ ಇದ್ದರೂ ರಿಲಿಜನ್ ದೃಷ್ಟಿಯಲ್ಲಿ ಕಾಫಿರರಾಗುತ್ತೀರಿ. ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಈ ವರ್ಗೀಕರಣವೇ ಮುಖ್ಯ ಕಾರಣ. ಪರಿಹಾರ ಏನು? ಪ್ರಧಾನಿ ನರೇಂದ್ರ ಮೋದಿ ಒಂದು ಭಾಷಣದಲ್ಲಿ ಹೇಳಿದ್ದರು: “ವರ್ಗೀಕರಣ ಆಗಬೇಕಾದದ್ದು ಮಾನವೀಯತೆ,ಅಮಾನವೀಯತೆಗಳ ನಡುವೆ”. ಇಂಥ ಗೆರೆಯನ್ನು ಮೊದಲು ಎಳೆದುಕೊಂಡು ನಂತರ ರಿಲಿಜನ್‍ಗಳು ತಾವು ಯಾವ ಬಣದಲ್ಲಿ ಇರಬಯಸುತ್ತವೆ ಎನ್ನುವುದನ್ನು ನಿರ್ಧರಿಸಬೇಕು. ಅವುಗಳು ಮಾನವೀಯತೆಯ ಕಡೆ ಇರ ಬಯಸುತ್ತವಾದರೆ ತಮ್ಮೊಳಗಿನ ಅಮಾನವೀಯ ಸಾಲುಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಹಾಕಬೇಕು. ಅಮಾನವೀಯತೆಯ ದಾರಿಯಲ್ಲಿ ಹೆಜ್ಜೆ ಹಾಕುವವನನ್ನು ತಮ್ಮ ರಿಲಿಜನ್‍ನಿಂದ ಮುಲಾಜಿಲ್ಲದೆ ಹೊರಗಿಡಬೇಕು. ಮನುಷ್ಯತ್ವ ಇಲ್ಲದ ಯಾವುದನ್ನೂ ಪುರಸ್ಕರಿಸುವುದಿಲ್ಲ ಎಂಬ ಮಾತುಗಳನ್ನು ರಿಲೀಜಿಯಸ್ ಮುಖಂಡರು,ನಾಯರಕು ಘಂಟಾಘೋಷವಾಗಿ ಸಾರಿ ಬಿಡಬೇಕು.

ಅಂಥದೊಂದು ಪ್ರಗತಿಯ ದಾರಿಯಲ್ಲಿ ನಡೆಯಲು ಇಸ್ಲಾಂ ಬಯಸುವವರೆಗೆ ಅದನ್ನು ನಾವು ಸಂಶಯದ ದೃಷ್ಟಿಯಲ್ಲೇ ನೋಡಬೇಕಾಗುತ್ತದೆ. ಆತ್ಮಾಹುತಿ ದಾಳಿಕೋರರಿಗೆ ಧರ್ಮವಿಲ್ಲ, ಸರಿ. ಆದರೆ ಅಂಥವರನ್ನು ಹುಟ್ಟು ಹಾಕುವ ಅಂಶಗಳನ್ನು ಇನ್ನೂ ತನ್ನ ಗರ್ಭದಲ್ಲಿ ಇಟ್ಟುಕೊಳ್ಳುವ ದರ್ದು ರಿಲಿಜನ್‍ಗಳಿಗೆ ಏಕೆ?

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post