ಪಚ್ಚೆ ಕಣಜ (Emerald Jewel wasp)) – ಹೆಸರೇ ಹೇಳುವ ಹಾಗೆ, ಮೈಯೆಲ್ಲ ಪಚ್ಚೆಕಲ್ಲಿನಂತೆ ಹಸಿರಾಗಿ ಹೊಳೆಯುವ ಒಂದು ಪುಟ್ಟ ಕಣಜ. ಇದನ್ನು ನೀವೂ ಅಂಗಳದಲ್ಲೋ ಮನೆಯೊಳಗೋ ಖಂಡಿತಾ ನೋಡಿರುತ್ತೀರಿ. ಸಾಧಾರಣ ಪರಿಸರದಲ್ಲಿ ಸಾಮಾನ್ಯ ಜೀವಿಯಂತೆ ಕಾಣುವ ಈ ಕಣಜದ ಜೀವನಚಕ್ರವನ್ನೇನಾದರೂ ಸೂಕ್ಷ್ಮವಾಗಿ ಅವಲೋಕಿಸತೊಡಗಿದರೆ ಬಾಯಿ ಕಟ್ಟಿಸಿ ಬಿಡುವಂತಹ ಅನೇಕ ಅಚ್ಚರಿಗಳು ಅನಾವರಣಗೊಳ್ಳುತ್ತವೆ. ಹೆಣ್ಣು ಪಚ್ಚೆ ಕಣಜ ಬಸಿರಾಗಿ ಇನ್ನೇನು ಹಡೆದೇ ಬಿಡ ಬೇಕೆನ್ನುವಾಗ,ಏನು ಮಾಡುತ್ತದೆ? ಅದು ಆಸ್ಪತ್ರೆಗೆ ಹೋಗುವಂತಿಲ್ಲ; ಬದಲು ತನ್ನ ಹೆರಿಗೆ ಕೆಲಸ ಪೂರೈಸಿ ಮರಿಯನ್ನು ತೊಟ್ಟಿಲಲ್ಲಿ ಹಾಕಲು ಅದು ಹುಡುಕುವುದೊಂದು ಜಿರಳೆಯನ್ನು! ಬಾಣಂತಿ ಕಣಜ ಜಿರಳೆಗಳನ್ನು ಇನ್ನಿಲ್ಲದಂತೆ ಹುಡುಕುತ್ತದೆ. ಕೊನೆಗೂ ಜಿರಳೆಯೊಂದು ಸಿಕ್ಕಿದಾಗ, ಅದರ ಮೇಲೆ ಚಂಗನೆ ಜಿಗಿದು, ಜಿರಳೆಯ ಕತ್ತಿನ ಬಳಿ ತನ್ನ ಇಂಜೆಕ್ಷನ್ ಸೂಜಿಯನ್ನು ಇಳಿಸಿ ಮದ್ದು ಇಳಿಸುತ್ತದೆ. ಕಣಜ ತನ್ನ ಜೀವ ತೆಗೆಯುವ ವೈರಿ ಎನ್ನುವ ಸತ್ಯ ಜಿರಳೆಗೂ ಗೊತ್ತಿರುತ್ತದೋ ಏನೋ, ಅದು ಕಣಜವನ್ನು ನೋಡಿದೊಡನೆ ಚುರುಕಾಗಿ ಜೀವ ಉಳಿಸಿಕೊಳ್ಳಲು ಎದ್ದು ಬಿದ್ದು ಓಡುತ್ತದೆ. ಆದರೆ,ಕಣಜದ ಕ್ಷಿಪ್ರ ದಾಳಿಯೆದುರು ಜಿರಳೆಯ ಆಟ ನಡೆಯುವುದು ಬಹುತೇಕ ಅಸಂಭವ. ಕಣಜ ಜಿರಳೆಯ ಕತ್ತಿನ ಬಳಿ ಇಂಜಕ್ಷನ್ ಇಳಿಸುತ್ತದೆ ಎಂದೆನಲ್ಲಾ; ಅದೇನೂ ಜೀವ ತೆಗೆಯುವ ವಿಷವಲ್ಲ. ಬದಲು ಜಿರಳೆಯನ್ನು ಕೋಮಾ ಸ್ಥಿತಿಗೆ ಎಳೆದೊಯ್ಯುವ ರಾಸಾಯನಿಕ ಅಷ್ಟೆ. ಕಣಜದಿಂದ ಕಡಿಸಿಕೊಂಡ ಜಿರಳೆಯ ಮೈ ಮರಗಟ್ಟುತ್ತದೆ. ಅದರ ಮುಂಗಾಲುಗಳಿಗೆ ಓಡುವ ಬಲ ಇಲ್ಲವಾಗುತ್ತದೆ. ವಾರಗಟ್ಟಲೆ ನಿದ್ದೆ ಮಾಡದಿದ್ದರೆ ಹತ್ತುವ ಮಹಾ ಮಂಪರಿನಂತೆ ಜಿರಳೆ ಉಸ್ಸಪ್ಪಾ ಎಂದು ಬಿದ್ದುಕೊಳ್ಳುತ್ತದೆ. ಆಗ ಕಣಜ ಜಿರಳೆಯ ಮೇಲೆ ತನ್ನ ಚೂಪು ನಾಲಿಗೆ ಇಳಿಸಿ ಒಂದಷ್ಟು ರಕ್ತ ಹೀರಿ ಶಕ್ತಿ ಪಡೆದುಕೊಳ್ಳುತ್ತದೆ. ಆಮೇಲೆ ಅದೇ ಜಿರಳೆಯನ್ನು ಎಳೆದುಕೊಂಡು ಯಾವುದಾದರೂ ಸುರಕ್ಷಿತ ಮೂಲೆ ಇದೆಯೇ ಎಂದು ಹುಡುಕಿ ಅಂತಹ ಆಯಕಟ್ಟಿನ ಜಾಗದಲ್ಲಿ ಇಡುತ್ತದೆ. ಜಿರಳೆಯ ಸುತ್ತ ಒಂದಷ್ಟು ಕಲ್ಲು ಮಣ್ಣುಗಳನ್ನು ಎಳೆದು ತಂದು ಹಾಕಿ, ಯಾವ ಜೀವಿಯೂ ಈ ಬಡಪಾಯಿಯನ್ನು ಊಟಕ್ಕಾಗಿ ಎಳೆದುಕೊಂಡು ಹೋಗದಿರುವಂತೆ ವ್ಯವಸ್ಥೆ ಮಾಡುತ್ತದೆ. ಅಡಗಿಸಿಡಲು ಯಾವ ಮೂಲೆಯೂ ಸಿಗಲಿಲ್ಲ ಎಂದಾಗ, ಎಲ್ಲಾ ಬಿಟ್ಟು ನೆಲದಲ್ಲೇ ಒಂದು ಸಣ್ಣ ಗುಂಡಿ ತೆಗೆದು ಈ ಜಿರಳೆಯನ್ನು ಅದರಲ್ಲಿ ಹಾಕಿ ತೆಳುವಾಗಿ ಮಣ್ಣು ಮುಚ್ಚಿ ಜೀವಂತ ಸಮಾಧಿ ಮಾಡುತ್ತದೆ! ಇಷ್ಟೆಲ್ಲ ಆಗುತ್ತಿದ್ದರೂ ಜಿರಳೆಗೆ ಸ್ವಯವೇ ಇರುವುದಿಲ್ಲ. ಅದು ಗಾಢ ಮಂಪರಿನಲ್ಲಿ ಹಳ ಹಳಿಸುತ್ತ ಬಿದ್ದಿರುತ್ತದೆ ಅಷ್ಟೆ. ಅಷ್ಟು ಮಾಡಿದ ಮೇಲೆ ಜಿರಳೆಯ ಮೇಲೆ ಹತ್ತಿ ತನ್ನ ತತ್ತಿಯನ್ನು ಅದರ ಕೊರಳ ಬಳಿಯ ಗಾಯದ ಮೂಲಕ ಒಳ ಸೇರಿಸಿ, ಎಲ್ಲಾ ಅಚ್ಚುಕಟ್ಟಾಗಿದೆ-ಯಾವ ತೊಂದರೆಯೂ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ಕಣಜ ಹಾರಿ ಹೋಗುತ್ತದೆ. ಅದರ ಕೆಲಸ ಅಲ್ಲಿಗೆ ಮುಗಿಯಿತು!
ಇತ್ತ ತತ್ತಿ ಒಡೆದು ಹೊರ ಬಂದ ಮರಿಗೆ ಸುತ್ತಲೂ ಆಹಾರದ ಭಂಡಾರವೇ ತುಂಬಿ ತುಳುಕುತ್ತಿರುತ್ತದೆ. ಆ ಮರಿ ಕಣಜ ತನ್ನ ತಾಯಿಯ ಮುಖವನ್ನು ಎಂದೆಂದೂ ನೋಡುವುದಿಲ್ಲ. ನೋಡುವುದೇನಿದ್ದರೂ ಜಿರಳೆಯ ಅಂತರಂಗದ ಮಹಲನ್ನು ಮಾತ್ರ! ಅಲ್ಲೇ ಉಂಡು ತಿಂದು ಸಂತುಷ್ಟವಾಗಿರುವ ಹುಳು ಬೆಳೆದು ರೆಕ್ಕೆಗಳನ್ನು ಮೂಡಿಸಿಕೊಂಡು ಹೊರ ಬರುವ ಹೊತ್ತಿಗೆ ಎರಡು ವಾರ ಕಳೆದಿರುತ್ತದೆ. ಅಷ್ಟು ಕಾಲವೂ ಅದಕ್ಕೆ ಆಹಾರ ಸಪ್ಲೈ ಮಾಡುತ್ತ, ಜಿರಳೆ ನಿಶ್ಚೇಷ್ಟಿತವಾಗಿ ಬಿದ್ದಿರುತ್ತದೆ. ಈ ಕಣಜ ಪ್ರೌಢಾವಸ್ಥೆಗೆ ಬಂದು ಅದೇ ಕೊರಳ ಗುರುತಿನ ಮೂಲಕ ಹೊರ ಜಗತ್ತಿಗೆ ಪದಾರ್ಪಣೆ ಮಾಡುತ್ತದೆ. ಅದೇ ಹೊತ್ತಿಗೆ ಜಿರಳೆಯ ಕುಟುಕು ಜೀವವೂ ಹೋಗಿ, ಅದು ಪರಮಾತ್ಮನ ಪಾದವನ್ನು ಸೇರುತ್ತದೆ. ಕಣಜ ಎಷ್ಟೊಂದು ಕರಾರುವಾಕ್ಕಾದ ಪ್ರಮಾಣದ ವಿಷವನ್ನು ಜಿರಳೆಯ ದೇಹಕ್ಕೆ ವರ್ಗಾಯಿಸುತ್ತದೆಂದರೆ, ಆ ವಿಷದ ಪ್ರಮಾಣ ಒಂದು ವೇಳೆ ಕಮ್ಮಿಯಿದ್ದರೆ, ಜಿರಳೆ ಕಚ್ಚಿಸಿಕೊಂಡ ಸ್ವಲ್ಪ ಹೊತ್ತು – ಅಥವಾ ದಿನಗಳಲ್ಲಿ ಚೇತರಿಸಿಕೊಂಡು ಎದ್ದು ಓಡಿ ಹೋಗುವ ಸಾಧ್ಯತೆ ಇತ್ತು. ಅಥವಾ ಆ ಪ್ರಮಾಣ ಒಂದು ವೇಳೆ ಹೆಚ್ಚಾಗಿದ್ದರೆ, ಜಿರಳೆ ಸತ್ತೇ ಹೋಗುವ ಅಪಾಯವೂ ಇತ್ತು. ಜಿರಳೆ ಸತ್ತರೆ ಹುಟ್ಟಿ ಬರುವ ಮರಿಗೆ ಬೇಕಾದ ತಾಜಾ ಆಹಾರ ಸಿಗುವ ಸಾಧ್ಯತೆ ಇಲ್ಲ. ತನ್ನ ಮರಿ ಪೂರ್ಣರೂಪಕ್ಕೆ ಬೆಳೆದು ಬರುವವರೆಗೂ ಜಿರಳೆ ಜೀವ ಹಿಡಿದುಕೊಂಡಿರುವಂತೆ, ಆದರೆ ಏನನ್ನೂ ಮಾಡಲಾಗದೆ ಅಸಹಾಯಕವಾಗಿ ಬಿದ್ದಿರುವಂತೆ ಮಾಡಲು ಎಷ್ಟು ಬೇಕೋ ಅಷ್ಟೇ ನಿರ್ದಿಷ್ಟ ಪ್ರಮಾಣದ ವಿಷವನ್ನು ಕಣಜ ಅತ್ಯಂತ ನಿಖರವಾಗಿ ಒಂದು ನರಕ್ಕೇ ವರ್ಗಾಯಿಸುತ್ತದೆ ಎಂದರೆ ಅದೆಂತಹ ಅನಸ್ತೇಶಿಯ ತಜ್ಞನಾಗಿರಬೇಕು ಲೆಕ್ಕ ಹಾಕಿ!
ಜಗತ್ತಿನ ಹಲವು ವಿಶಿಷ್ಟ ಕಣಜಗಳ ಸಂತಾನೋತ್ಪತ್ತಿ ನಡೆಯುವುದು ಇದೇ ಬಗೆಯಲ್ಲಿ. ಅವು ತಮ್ಮ ಮೊಟ್ಟೆ ಇಡಲು ಜಿರಳೆ, ಕಂಬಳಿ ಹುಳು ಇತ್ಯಾದಿ ಜೀವಿಗಳನ್ನು ಆರಿಸಿಕೊಳ್ಳುತ್ತವೆ. ಕಂಬಳಿ ಹುಳುವಿನ ಮೇಲೆ ದಾಳಿ ಮಾಡಿ ತತ್ತಿ ಇಡುವ ಕಣಜ ಜಿರಳೆಯ ಮೇಲೆ ದಾಳಿ ಇಡುವುದಿಲ್ಲ. ಜಿರಳೆಯನ್ನು ತನ್ನ ಹೆರಿಗೆ ಮನೆ ಮಾಡಿಕೊಳ್ಳುವ ಕಣಜ ಬೇರೆ ಬಗೆಯ ಜೀವಿಗಳನ್ನು ಆರಿಸಿಕೊಳ್ಳುವುದಿಲ್ಲ. ದಾಳಿಯಲ್ಲೂ ನೀತಿ ನಿಯತ್ತು ಇರಬೇಕೆಂದು ಇವುಗಳು ಬಗೆದಂತಿದೆ! ಟೆಟ್ರಾಸ್ಟಿಕಸ್ ಜುಲಿಸ್ (Tetrastichus Julis) ಎಂಬ ಕಣಜ, ಧಾನ್ಯದ ಎಲೆ ಮಿಡತೆ ((Cereal leaf beetle) ಎಂಬ ಒಂದು ಜಾತಿಯ ಮಿಡತೆಗಳನ್ನಷ್ಟೇ ತನ್ನ ವಂಶಾಭಿವೃದ್ಧಿಯ ಕೆಲಸಕ್ಕೆ ಆಯ್ದು ಕೊಳ್ಳುತ್ತದೆ. ಆ ಮಿಡತೆಯ ಮೇಲೆ ಹಾರಿ,ಇಂಜೆಕ್ಷನ್ ಕೊಟ್ಟು ತನ್ನ ಒಂದಷ್ಟು ತತ್ತಿಗಳನ್ನು ಮಿಡತೆಯ ಹೊಟ್ಟೆಯೊಳಗಿಳಿಸುತ್ತದೆ. ಅಲ್ಲಿ ಅವು ಒಡೆದು ಲಾರ್ವಗಳು ಹೊರ ಬಂದು ಮಿಡತೆಯ ದೇಹವನ್ನು ಸಂಪೂರ್ಣವಾಗಿ ನುಂಗಿ ನೊಣೆದು,ಕಾಲ ಪಕ್ವವಾದಾಗ ಡಿಂಬದಿಂದ ಬಂದ ನರಸಿಂಹನಂತೆ ಮಿಡತೆಯನ್ನು ಒಡೆದು ಹೊರ ಬರುತ್ತವೆ. ಓದಲು, ಕೇಳಲು ಇವೆಲ್ಲ ಅಸಹ್ಯ ಕತೆ ಎನಿಸಿದರೂ, ಈ ಕಣಜವನ್ನು ರೈತನ ಮಿತ್ರ ಎಂದೇ ಹೇಳಬೇಕಾಗುತ್ತದೆ. ಯಾಕೆಂದರೆ ಇಂತಹ ಒಂದು ವಿಚಿತ್ರ ಜೀವನಚಕ್ರ ಇರುವುದರಿಂದಲೇ ರೈತನ ಬೆಳೆಯು ಮಿಡತೆಗಳ ಜನಸಂಖ್ಯಾ ಸ್ಫೋಟಕ್ಕೆ ಪಕ್ಕಾಗದೆ ಉಳಿಯಲು ಕಾರಣವಾಗಿದೆ. ಕಣಜದ ಹುಳು ಹೊಲದಲ್ಲಿ ಬೆಳೆದ ದವಸ ಧಾನ್ಯಗಳ ಮೇಲೆ ಕಣ್ಣು ಹಾಕುವುದಿಲ್ಲ. ಅದರ ಗಮನವೇನಿದ್ದರೂ ಧಾನ್ಯ ತಿನ್ನುವ ಮಿಡತೆಗಳ ಮೇಲೆ ಮಾತ್ರ!
ಪರಾವಲಂಬಿಗಾಗಿ ತೊಟ್ಟಿಲು ಹೆಣೆಯುವ ಜೇಡ!
ಇವೆಲ್ಲ ಸಂತಾನಾಭಿವೃದ್ಧಿಗಾಗಿ ತಮ್ಮ ವಂಶದ ಕುಡಿಗಳನ್ನು ಇನ್ನೊಂದು ಜೀವಿಯ ದೇಹದೊಳಗೆ ಬಿಟ್ಟು ಹೋಗುವ ಪರಾವಲಂಬಿಗಳ ಮಾತಾಯಿತು. ಇಲ್ಲಿ ತಾಂತ್ರಿಕ ಕೌಶಲದ ಪೂರ್ಣ ಕ್ರೆಡಿಟ್ಟು ಸಲ್ಲಬೇಕಾದ್ದು ತಾಯಿಗೆ. ಆಕೆಯೇ ರಿಸ್ಕ್ ತೆಗೆದುಕೊಂಡು ತನಗೆ ಬೇಕಾದ ಜೀವಿಯನ್ನು, ಅದು ತನಗಿಂತ ಎಷ್ಟೇ ದೊಡ್ಡದಿರಲಿ ಅಥವಾ ಬಲಶಾಲಿಯಾಗಿರಲಿ, ತನ್ನ ಕೆಲಸಕ್ಕೆ ಬೇಕಾದಂತೆ ಬಗ್ಗಿಸಿಕೊಂಡು ಕೊನೆಗೆ ಅಲ್ಲಿ ತತ್ತಿ ಇಟ್ಟು ಹೋಗುತ್ತಾಳೆ. ತತ್ತಿ ಒಡೆದು ಮರಿ ಹೊರ ಬರುತ್ತದೆ. ತನ್ನ ಆಶ್ರಯದಾತ ಪ್ರಾಣಿಯನ್ನೇ ಹಂತ ಹಂತವಾಗಿ ಇಂಚಿಂಚಾಗಿ ತಿಂದು ಚಪ್ಪರಿಸಿ ಬೆಳೆದು ದೊಡ್ಡವನಾಗುತ್ತದೆ. ಪರಾವಲಂಬನೆಯ ಜೀವನ ಮುಗಿದು ತಾನು ಪ್ರೌಢನಾದೆ ಎನ್ನುವ ಹಂತಕ್ಕೆ ಬಂದಾಗ ಆ ಜೀವಿಯ ದೇಹವನ್ನು ಬಿಟ್ಟು ಈಚೆ ಹಾರುತ್ತದೆ. ಸರಿಯೇ. ಆದರೆ, ಒಂದು ದೊಡ್ಡ ಪ್ರಾಣಿಯ ದೇಹದೊಳಗಿದ್ದೂ ತನಗೆ ಉಪಕಾರವಾಗುವಂತೆ ಅದನ್ನು ಬಗ್ಗಿಸಿಕೊಳ್ಳುವ ಪರಾವಲಂಬಿ ಹುಳುಗಳೂ ಇವೆ. ಇವು ತಮ್ಮ ಆಶ್ರಯದಾತ ದೇಹವನ್ನು ತಿಂದು ಮುಗಿಸುವುದಷ್ಟೇ ಅಲ್ಲ; ಅವುಗಳ ಮಿದುಳಿನ ಮೇಲೆ ಕೂಡ ನಿಯಂತ್ರಣ ತೆಗೆದುಕೊಂಡು ತಾವು ಹೇಳುವ ನಿರ್ದೇಶನಗಳನ್ನು ಆಶ್ರಯದಾತನೇ ಪಾಲಿಸುವಂತೆಯೂ ಮಾಡಬಲ್ಲವು! ಬೇಕಾದರೆ ಈ ಜೇಡದ ಕತೆ ನೋಡಿ. ಕೋಸ್ಟರಿಕಾದಲ್ಲಿ ಮಾತ್ರ ಕಂಡು ಬರುವ, ಅನೆಲೋಸಿಮಸ್ ಒಕ್ಟಾವಿಯಸ್ ((Anelosimus octavius) ಎಂಬ ಹೆಸರಿನ ಈ ವಿಶಿಷ್ಟ ಜೇಡಕ್ಕೆ ಅಲ್ಲೇ ಹಾರಾಡುತ್ತಿರುವ ಒಂದು ಕಣಜದ ಜೊತೆ ಅಕ್ಷರಶಃ ಗಳಸ್ಯ ಕಂಠಸ್ಯ. ಅದು ಹೇಗೆ ಎನ್ನುತ್ತೀರೋ? ಈ ಹೆಣ್ಣು ಕಣಜ ಇನ್ನೇನು ತತ್ತಿ ಇಟ್ಟು ತನ್ನ ತಾಯಿತನದ ಭಾರ ಕಮ್ಮಿ ಮಾಡಿಕೊಳ್ಳಬೇಕು ಎನ್ನುವ ಸುಮುಹೂರ್ತ ಬಂದಾಗ, ಕಾಡಲ್ಲಿ ಆರಾಮಾಗಿ ಬಲೆ ಕಟ್ಟಿಕೊಂಡು ವಿಶಲ್ ಹೊಡೆಯುತ್ತ ಕಾಲ ಕಳೆಯುವ ಒಂದು ಜೇಡನನ್ನು ಆಯ್ದು ಕೊಳ್ಳುತ್ತದೆ. ಬಲೆಗೆ ಬೀಳದಂತೆ ಜಾಗ್ರತೆಯಾಗಿ ಹಾರಿ ಬಂದು ಜೇಡನ ಮೇಲೆ ದಾಳಿ ಮಾಡುತ್ತದೆ. ಆ ಜೇಡನ ಕೊರಳ ಪಟ್ಟಿ ಹಿಡಿದು ಅಲ್ಲೇ ಒಂದು ಸಣ್ಣ ಇಂಜೆಕ್ಷನ್ ಕೊಡುತ್ತದೆ. ಅಷ್ಟೆ,ಜೇಡ ಈಗ ನಿಶ್ಚೇಷ್ಟಿತ! ಕೂಡಲೇ ಕಣಜ ತನ್ನ ತತ್ತಿ ಇಡುವ ಕೆಲಸ ಮಾಡುತ್ತದೆ. ಜೇಡನನ್ನು ಅಂಗಾತ ಕೆಡವಿ ಅದರ ನಾಭಿಯ ಭಾಗದಲ್ಲಿ; ಅಂದರೆ ಹೇಗೆ ಹೇಗೆ ತನ್ನ ಎಂಟು ಕಾಲುಗಳನ್ನು ಕೊಡವಿಕೊಂಡರೂ ಸಿಗದಂತಹ ಪ್ರದೇಶದಲ್ಲಿ ಕಣಜ ತನ್ನ ತತ್ತಿ ಇಟ್ಟು ಕೆಲಸ ಮುಗಿಸಿ ಅಬ್ಬಾ ಎಂದು ನಿಟ್ಟುಸಿರು ಹಾಕಿ ಹಾರಿ ಹೋಗುತ್ತದೆ. ಅಲ್ಲಿಗೆ ಅದರ ಜವಾಬ್ದಾರಿ ಮುಗಿಯಿತು!
ಇತ್ತ ಜೇಡ ಕಣಜದ ಕಡಿತಕ್ಕೆ ಹಾ ಎಂದು ನರಳುತ್ತ ಮಲಗಿದೆ. ಇದನ್ನು ಜಿರಳೆಗೆ ಬಂದಂತಹ ಕೋಮಾ ಸ್ಥಿತಿ ಎನ್ನಬಹುದು. ಯಾಕೆಂದರೆ, ಕಡಿಸಿಕೊಂಡ ಮೇಲೆ ಅದಕ್ಕೆ ಕಣಜ ತನ್ನನ್ನು ಹೊಟ್ಟೆ ಮೇಲಾಗಿ ಉರುಳಿಸಿ ಮಲಗಿಸಿದ್ದಾಗಲೀ ಹೊಟ್ಟೆಯ ಮೇಲೆ ಮೊಟ್ಟೆ ಇಟ್ಟು ಪಲಾಯನ ಮಾಡಿದ್ದಾಗಲೀ ಗೊತ್ತೇ ಇಲ್ಲ. ಅರ್ಧ ಮುಕ್ಕಾಲು ತಾಸಾದ ಮೇಲೆ ಅದಕ್ಕೆ ಪ್ರಜ್ಞೆ ಮರಳುತ್ತದೆ. ಹೊಟ್ಟೆಯ ಮೇಲೆ ಏನೋ ಸಣ್ಣ ಮೇಣದ ಬಿಂದುವಿನಂತಿದೆ ಎನ್ನುವುದು ತಿಳಿದರೂ ಅದನ್ನು ಕೊಡವಿಕೊಳ್ಳುವುದಾಗಲೀ ಕೈಕಾಲುಗಳಿಂದ ಕಿತ್ತು ತೆಗೆಯುವುದಾಗಲೀ ಸಾಧ್ಯವಾಗುವುದಿಲ್ಲ. ಸಾಕಷ್ಟು ಕೊಸರಾಡಿದ ಮೇಲೆ ಇದ್ದರೆ ಇರಲಿ,ಮೈಮೇಲಿನ ಕುರು ಎಂದು ಬಿಟ್ಟರಾಯಿತು ಎನ್ನುವ ನಿರ್ಧಾರಕ್ಕೆ ಬರುವ ಜೇಡ ತನ್ನ ಪಾಡಿಗೆ ತಾನು ಬಲೆ ಹೆಣೆಯುತ್ತ ಹಾತೆ ಪಾತೆಗಳನ್ನು ಬೇಟೆಯಾಡುತ್ತ ಖುಷಿಯಾದಾಗೆಲ್ಲ ಸಿಳ್ಳೆ ಹೊಡೆಯುತ್ತ ಮಜವಾಗಿ ಜೀವನ ಕಳೆಯುತ್ತದೆ. ಆದರೆ, ಅದರ ಮೇಲಿನ ತತ್ತಿಗೆ ಒಳಗೊಳಗೇ ಜೀವ ಬಲಿಯುತ್ತಿರುತ್ತದೆ. ಅದು ಅಲ್ಲೇ ಒಂದು ಸಣ್ಣ ಸೂಜಿಯನ್ನು ಜೇಡನ ಹೊಟ್ಟೆಗಿಳಿಸಿ ಅಲ್ಲಿಂದ ಸಿಗುವ ದ್ರವಾಹಾರವನ್ನು ಕುಡಿಯಲು ಶುರುಮಾಡುತ್ತದೆ. ಬರಬರುತ್ತ ಅದರ, ತನ್ಮೂಲಕ ಜೇಡನ ಹಸಿವು ಹೆಚ್ಚುತ್ತದೆ. ಎಷ್ಟು ತಿಂದರೂ ಹಸಿವೆಯಾಗುತ್ತಲ್ಲ ಎಂದು ಕಣ್ಕಣ್ಣು ಬಿಡುತ್ತ ಜೇಡ ಹೆಚ್ಚು ಹೆಚ್ಚು ಬೇಟೆಯಾಡತೊಡಗುತ್ತದೆ!
ಇಲ್ಲಿಂದ ಮುಂದಿನ ಹಂತ ನಿಜಕ್ಕೂ ಮೈ ನವಿರೇಳಿಸುವಂತಿದೆ. ವಾಸ್ತವದಲ್ಲಿ ಜೇಡ ಬಲೆ ಹೆಣೆಯುವಾಗ ಮುಖ್ಯವಾಗಿ ಐದು ಹಂತಗಳಿರುತ್ತವೆ. ಇದೊಂದು ರೀತಿಯಲ್ಲಿ ಬುಟ್ಟಿಯನ್ನು ಹೆಣೆಯುವಷ್ಟೇ ಕಲಾತ್ಮಕವಾದ, ಬುದ್ಧಿ – ಕರಕೌಶಲಗಳನ್ನು ಬೇಡುವ ಕ್ರಿಯೆ. ಐದು ಹಂತಗಳು ಪೂರ್ಣವಾದಾಗಷ್ಟೇ ಅದರ ಬಲೆ ಸರ್ವಾಂಗ ಸುಂದರವಾಗಿ ಬಿಡಿಸಿಕೊಳ್ಳುತ್ತದೆ. ಆದರೆ,ಈಗ ಅದು ಬರಿಯ ಜೇಡವಲ್ಲ; ಬದಲು ಹೊಟ್ಟೆಯಲ್ಲಿ ಕಣಜದ ಮರಿಯನ್ನು ಸಾಕುತ್ತಿರುವ,ಮತ್ತು ಆ ಕಾರಣಕ್ಕೇ ತಲೆ ಕೆಟ್ಟಿರುವ ಮರಿ ದೆವ್ವ! ಈ ಕಣಜದ ಲಾರ್ವಾ, ಜೇಡನಿಂದ ಎಷ್ಟು ಆಹಾರವನ್ನು ಕಬಳಿಸುತ್ತದೋ, ಅದೇ ದಾರಿಯಲ್ಲಿ ತನ್ನ ಬಾಯಿಂದ ಒಂದು ವಿಶಿಷ್ಟ ರಾಸಾಯನಿಕವನ್ನು ಜೇಡನ ದೇಹದೊಳಗೂ ಊಡುತ್ತಿರುತ್ತದೆ. ಈ ರಾಸಾಯನಿಕ ನೇರವಾಗಿ ಜೇಡನ ಮಿದುಳನ್ನೇ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತದೆ. ಐದು ಹಂತಗಳ ಸುಂದರ ಬಲೆ ಹೆಣೆಯಬೇಕಿದ್ದ ಜೇಡ, ಮೊದಲ ಎರಡು ಹಂತಗಳನ್ನೇ ಮತ್ತೆ ಮತ್ತೆ ಮಾಡತೊಡಗುತ್ತದೆ! ಇದರಿಂದಾಗಿ, ಚಾಪೆಯಂತೆ ಹರಡಿಕೊಳ್ಳಬೇಕಿದ್ದ ಬಲೆ ತೊಟ್ಟಿಲಿನಂತೆ ಬದಲಾಗುತ್ತದೆ! ಬಲೆ ಪೂರ್ತಿಯಾಗುವ ಹೊತ್ತಿಗೆ ಚೆನ್ನಾಗಿ ಬಲಿತು ಬೆಳೆದು ಪರಿಪುಷ್ಟವಾದ ಕಣಜದ ಮರಿ, ಜೇಡನನ್ನು ಸಂಪೂರ್ಣವಾಗಿ ಆಪೋಶನ ತೆಗೆದುಕೊಂಡುಬಿಡುತ್ತದೆ. ಈಗ ಜೇಡನೊಳಗೆ ನರನಾಡಿಗಳು, ಮಾಂಸಖಂಡಗಳು ಏನೊಂದೂ ಇರುವುದಿಲ್ಲ. ಇಡೀ ದೇಹವೇ ಒಂದು ಶವಪೆಟ್ಟಿಗೆಯಾಗುತ್ತದೆ. ಕೊನೆಗೊಂದು ದಿನ ತನ್ನ ತೊಟ್ಟಿಲು ತಯಾರಾಯಿತು ಎಂದು ಹುಳಕ್ಕೆ ಅನ್ನಿಸಿದ ಮೇಲೆ, ಅದು ಜೀವಚ್ಛವವಾದ ಜೇಡನ ಕುಟುಕು ಜೀವಕ್ಕೆ ಮುಕ್ತಿ ಕೊಟ್ಟು ಕಾಲಕಸದಂತೆ (ಫುಟ್‍ಬಾಲಿನಂತೆ!) ಎಸೆದು ಕೆಲಸ ಮುಗಿಸುತ್ತದೆ! ಅಲ್ಲೇ ಒಂದೆರಡು ವಾರ ಚೆನ್ನಾಗಿ ಮಲಗಿ ಮೈ ಕೈ ತುಂಬಿಕೊಂಡು, ರೆಕ್ಕೆಗಳನ್ನು ಮೂಡಿಸಿಕೊಂಡು ಕೊನೆಗೊಂದು ದಿನ ಜೇಡ ಹೆಣೆದ ತೊಟ್ಟಿಲಿನಿಂದ ಪೂರ್ಣಾವತಾರಿಯಾಗಿ ಹೊರ ಬಂದು ಹೊಸಜಗತ್ತಿಗೆ ಕಾಲಿರಿಸುತ್ತದೆ.
ಬೆಕ್ಕಿನ ಮೇಲೆ ಇಲಿಯ ಆಸೆಗಣ್ಣು
ಹೀಗೆ ಬಹುತೇಕ ಪರಾವಲಂಬಿಗಳ ಒಂದು ಮುಖ್ಯ ಲಕ್ಷಣವೇನೆಂದರೆ, ಅವು ತಮ್ಮ ಆಶ್ರಯದಾತರ ಸ್ವಭಾವವನ್ನೇ ಬದಲಿಸಿ ಬಿಡುತ್ತವೆ. ಇದಕ್ಕೆ ಇನ್ನೊಂದು ಒಳ್ಳೆಯ ಉದಾಹರಣೆ ಎಂದರೆ ಇಲಿಗಳು. ಮಿಕ್ಕಿ ಮೌಸ್ ಕಾರ್ಟೂನಿನಲ್ಲಿ ಬೆಕ್ಕನ್ನು ಸದಾ ಗೋಳು ಹೊಯ್ದುಕೊಳ್ಳುವ ಇಲಿಯನ್ನು ನೋಡಿದ್ದೀರಿ ತಾನೆ? ಆ ಇಲಿಗೆ ಬೆಕ್ಕಿಲ್ಲವಾದರೆ ಬದುಕೇ ರಸಹೀನ; ಇದ್ದೂ ಸತ್ತಂತೆ. ಆದರೆ, ನಿಜ ಜೀವನದಲ್ಲಿ ಹೀಗಾಗಲಿಕ್ಕುಂಟಾ?ಇಲಿಗಳೆಂದಾದರೂ ಅಷ್ಟೊಂದು ಧೈರ್ಯ ವಹಿಸಿ ಬೆಕ್ಕನ್ನು ಆಟವಾಡಿಸಬಲ್ಲವೆ? ಮಕ್ಕಳಿಗೆ ರುಚಿಸಲಿ ಎಂದು ಇಂತಹ ಕಾರ್ಟೂನ್ ಹೆಣೆದಿದ್ದಾರಷ್ಟೆ ಎನ್ನುವುದು ನಿಮ್ಮ ಭಾವನೆಯಾಗಿದ್ದಿರಬಹುದು. ಆದರೆ ನಿಜ ಜೀವನದಲ್ಲೂ ಇದೇ ಬಗೆಯ ಇಲಿ-ಬೆಕ್ಕಿನಾಟ ನಡೆಯಲು ಸಾಧ್ಯವಿದೆ ಎಂದರೆ ನಂಬುತ್ತೀರಾ? ಇದಕ್ಕೆಲ್ಲ ಕಾರಣವಾಗಬಹುದಾದದ್ದು ಟಾಕ್ಸೋಪ್ಲಾಸ್ಮ ಗೋಂಡಿ (Toxoplasma gondii)ಎಂಬ ಒಂದು ಪರಾವಲಂಬಿ ಸೂಕ್ಷ್ಮಾಣು ಜೀವಿ!
ಈ ಜೀವಿ ಯಾವ ಇಲಿಯೊಳಗೆ ಸೇರಿಕೊಳ್ಳುತ್ತದೋ ಆ ಇಲಿಯ ವರ್ತನೆ ನಿಧಾನಕ್ಕೆ ಬದಲಾಗಿ ಬಿಡುತ್ತದೆ. ಅದಕ್ಕೆ ಬೆಕ್ಕಿನ ಹೆದರಿಕೆ ಹೊರಟು ಹೋಗುತ್ತದೆ. ಎಲ್ಲಾದರೂ ಬೆಕ್ಕು ಸುಳಿದಾಡುತ್ತಿದ್ದರೆ ಅದರೆದುರೇ ಈ ಇಲಿ ರಾಜಾರೋಷವಾಗಿ ನಡೆದಾಡತೊಡಗುತ್ತದೆ! ಅಷ್ಟು ಮಾತ್ರವೇ? ಮನೆ ಬೆಕ್ಕಿನ ಮೇಲೆ ಇದಕ್ಕೆ ಲೈಂಗಿಕವಾಗಿಯೂ ಆಕರ್ಷಣೆ ಹುಟ್ಟುತ್ತದೆ! ಪರಾವಲಂಬಿ ಸೂಕ್ಷ್ಮಜೀವಿಯಿಂದ ಬಾಧೆಗೊಳಗಾದ ಇಲಿ ತನ್ನ ಸಂಗಾತಿಯ ಮೇಲೂ ವಿಶೇಷ ಲೈಂಗಿಕಾಸಕ್ತಿ ತೋರಿಸಿ ಎಷ್ಟು ಸಾಧ್ಯವೋ ಅಷ್ಟು ವೇಗದಲ್ಲಿ ಸಂತಾನಾಭಿವೃದ್ಧಿ ಮಾಡಲು ಹವಣಿಸುತ್ತದೆ. ಇದೆಲ್ಲ ಯಾಕೆ ಎಂದರೆ ಪರಾವಲಂಬಿಯ ವಂಶ ಉದ್ಧಾರವಾಗಲಿ ಎಂಬ ಏಕೈಕ ಉದ್ದೇಶದಿಂದ. ಇಲಿಯನ್ನು ಹೇಗೆ ಹೇಗೋ ಕುಣಿಸುತ್ತಿರುವ ಸೂತ್ರಧಾರ ಈ ಜೀವಿಯೇ. ಈ ಜೀವಿಯ ಬದುಕಿನ ಒಂದು ಹಂತ ಇಲಿಯ ದೇಹದೊಳಗೆ ಕಳೆದರೆ ಮುಂದಿನ ಹಂತ ಸಾಗಬೇಕಾಗಿರುವುದು ಬೆಕ್ಕಿನ ಹೊಟ್ಟೆಯಲ್ಲಿ. ಹಾಗಾಗಿ, ಇಲ್ಲಿಂದ ಅಲ್ಲಿಗೆ ಹಾರಲಿಕ್ಕೆ ಇವೆಲ್ಲ ಹವಣಿಕೆಗಳು!
ಹಾಗೆಯೇ ಜಿಪ್ಸಿ ಪತಂಗದ ಕಂಬಳಿ ಹುಳು (Gypsy moth caterpillar) ಎಂಬ ಒಂದು ಕೀಟವುಂಟು. ಇದರೊಳಗೆ ಸೇರಿಕೊಳ್ಳುವ ಒಂದು ಬಗೆಯ ಪರಾವಲಂಬಿ ವೈರಸ್ಸಿಗೆ ತನ್ನ ಜೀವನಚಕ್ರದ ಮುಂದಿನ ಹಂತ ನಡೆಯಬೇಕಾಗಿರುವುದು ಹಕ್ಕಿಗಳ ದೇಹದಲ್ಲಿ. ಹಾಗಾಗಿ ಅದು ಕಂಬಳಿ ಹುಳುವಿನ ಮಿದುಳನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಹಕ್ಕಿಯ ಕಣ್ಣಿಗೆ ಹೆಚ್ಚು ಹೆಚ್ಚಾಗಿ ಬೀಳುವಂತೆ ಕಂಬಳಿ ಹುಳುವನ್ನು ಪ್ರೇರೇಪಿಸುತ್ತದೆ. ಹಗಲು ಗಿಡ ಮರಗಳ ಅಡಿಯಲ್ಲಿ ಯಾರಿಗೂ ಕಾಣದಂತೆ ಅವಿತು ಕುಳಿತು ನಿದ್ದೆ ಹೊಡೆದು ರಾತ್ರಿ ಹೊತ್ತಲ್ಲಿ ಕ್ಯಾಬೇಜ್ ಮುಂತಾದ ಎಲೆಗಳ ಮೇಲೆ ಸವಾರಿ ಮಾಡಿ ಆಹಾರ ಭಕ್ಷಿಸುವ ಕಂಬಳಿ ಹುಳು, ವೈರಸ್ ದಾಳಿಗೆ ತುತ್ತಾದ ಮೇಲೆ ಹಾಡುಹಗಲೇ ಎಲೆಗಳ ಮೇಲೆ ಕಾಣಿಸಿಕೊಳ್ಳತೊಡಗುತ್ತದೆ. ಎಲ್ಲಿ ನಡೆದರೆ ಹಕ್ಕಿಪಿಕ್ಕಿಗಳ ಕಣ್ಣಿಗೆ ಸುಲಭದ ತುತ್ತಾಗಬಹುದೋ ಅಂತಹ ಜಾಗಕ್ಕೇ ಮತ್ತೆ ಮತ್ತೆ ಪಾದ ಬೆಳೆಸುತ್ತದೆ. ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ; ಎರಡು ತಿಂಗಳಲ್ಲಿ ಸಹಜ ಸಾವಿಗೆ ಎರವಾಗುವ ಜೀವ ಸ್ವಲ್ಪ ಬೇಗನೇ ಹೋಯಿತು ಎಂದು ಸಮಾಧಾನ ಬಿಡಬಹುದೋ ಏನೋ. ಆದರೆ ವೈರಸ್ಸುಗಳ ವಿಕೃತ ಆಟ ಅದಕ್ಕಿಂತಲೂ ಭೀಕರವಾಗಿದೆ. ಕಂಬಳಿ ಹುಳು ಇನ್ನೂ ಹಕ್ಕಿ ಮತ್ತಿತರ ಕೀಟಗಳ ಹೊಟ್ಟೆ ಸೇರದಿದ್ದರೇನಂತೆ, ಇನ್ನಷ್ಟು ಕಂಬಳಿ ಹುಳುಗಳನ್ನು ಸೇರಿಕೊಂಡು ತಮ್ಮ ವಂಶ ಬೆಳೆಸಿಕೊಳ್ಳಬೇಕೆನ್ನುವುದು ಈ ವೈರಸ್ ರಾಕ್ಷಸರ ಹವಣಿಕೆ. ಹಾಗಾಗಿ, ಅವು ಮಿಲಿಯಗಟ್ಟಲೆ ಸಂಖ್ಯೆಯಲ್ಲಿ ಹುಳುವಿನ ದೇಹದಲ್ಲಿ ವಂಶಾಭಿವೃದ್ಧಿ ಮಾಡಿಕೊಳ್ಳುತ್ತವೆ. ಇವು ಒಸರುವ ಒಂದು ಬಗೆಯ ಕಿಣ್ವದಿಂದಾಗಿ ಹುಳುವಿನೊಳಗಿನ ಮೂಳೆಗಳೆಲ್ಲ ನೀರಾಗಿ ಹರಿಯಲು ಶುರುಮಾಡುತ್ತವೆ! ನೋಡ ನೋಡುತ್ತಿದ್ದಂತೆ ಇಡೀ ಕಂಬಳಿ ಹುಳವೇ ಬೆಂಕಿಗೆ ಇಳಿಯುವ ಮೇಣದಂತೆ ನೀರಾಗಿ ಹರಿಯಲು ಶುರುವಾಗುತ್ತದೆ! ಈ ನೀರು ರಕ್ತಬೀಜಾಸುರನ ದೇಹದ ರಕ್ತದ ತೊಟ್ಟಿನಂತೆ; ಎಲ್ಲೆಲ್ಲಿ ಹರಿಯುತ್ತದೋ ಅಲ್ಲೆಲ್ಲ ಲಕ್ಷಗಟ್ಟಲೆ ವೈರಸ್ಸುಗಳನ್ನು ಸಾಗಿಸುತ್ತದೆ. ಅದರ ಮೇಲೆ ನಡೆದಾಡಿದ ಕಂಬಳಿ ಹುಳುಗಳೆಲ್ಲ ಮತ್ತೆ ಈ ವಿಷಚಕ್ರಕ್ಕೆ ಎರವಾಗುತ್ತವೆ!
ಮೋಕ್ಷಕ್ಕಾಗಿ ಹುಲ್ಲು ಹತ್ತುವ ಇರುವೆ
ಕೆಲವು ಪರಾಲಂಬಿಗಳು ಕೇವಲ ಒಂದೇ ಜೀವಿಯ ದೇಹದೊಳಗೆ ಹೋಗಿ ಬರುತ್ತವೆ; ಇನ್ನು ಕೆಲವು ಎರಡು ಮೂರು ಜೀವಿಗಳನ್ನು ತಮ್ಮ ಜೀವನಚಕ್ರದ ಪೂರ್ಣತೆಗೆ ಬಳಸಿಕೊಳ್ಳುತ್ತವೆ. ಲ್ಯಾನ್ಸೆಟ್ ಫ್ಲೂಕ್ (Lancet fluke) ಎಂಬ ಸೂಕ್ಷ್ಮಾಣು ಹುಳುವಿನ ಜೀವನದ ಕತೆ ಆ ಬಗೆಯದು. ಇದು ಟ್ರಿಮಟೋಡ ಎಂಬ ಗುಂಪಿಗೆ ಸೇರಿದ ಒಂದು ಬಗೆಯ ಹುಳು. ಸೂಕ್ಷ್ಮದರ್ಶಕದಲ್ಲಷ್ಟೇ ಇದರ ದರ್ಶನಭಾಗ್ಯ ಸಾಧ್ಯ. ಹಸುಗಳು ಹಾಕುವ ಸೆಗಣಿಯಲ್ಲಿ ಇವುಗಳ ತತ್ತಿಗಳು ಲಕ್ಷಾಂತರ ಸಂಖ್ಯೆಯಲ್ಲಿರುತ್ತವೆ. ಸೆಗಣಿಯನ್ನೇ ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬಸವನಹುಳುವಿನ ಮೂಲಕ ಈ ಪರಾವಲಂಬಿ ಅದರ ಹೊಟ್ಟೆ ಸೇರುತ್ತದೆ. ಬಸವನಹುಳುವಿನ ಹೊಟ್ಟೆಯಲ್ಲಿ ತತ್ತಿ ಒಡೆದು ಲಾರ್ವ ಹೊರ ಬರುತ್ತದೆ. ಈ ಲಾರ್ವಗಳನ್ನು ಬಸವನ ಹುಳು ತನ್ನ ಉಗುಳಿನ ಮೂಲಕ ಹೊರ ಹಾಕುತ್ತಾ ಹೋಗುತ್ತದೆ. ಹೀಗೆ ಲಾರ್ವಗಳು ಮತ್ತೆ ಹೊರ ಜಗತ್ತಿಗೆ ಬಂದು ಬೀಳುತ್ತವೆ. ಬಸವನ ಹುಳು ಉಗುಳಿದ ಎಂಜಲು ಎಷ್ಟು ರುಚಿಕಟ್ಟಾಗಿರುತ್ತದೆಂದರೆ, ಕಾಡಿನ ಕೆಂಪಿರುವೆ (ಸಬುಳು ಅಥವಾ ತಬುರು ಎನ್ನುವ ಜಾತಿಗೆ ತುಂಬ ಹತ್ತಿರದ್ದು) ಇದನ್ನೇ ಪಟ್ಟಾಗಿ ಭೂರಿ ಭೋಜನ ಎಂದು ಚಪ್ಪರಿಸಿ ತಿನ್ನುತ್ತದೆ! ಫ್ಲೂಕ್‍ನ ಲಾರ್ವಗಳು ಹೀಗೆ ಇರುವೆಯ ಹೊಟ್ಟೆ ಸೇರುತ್ತವೆ. ಅಲ್ಲಿಂದ ಮುಂದಿನ ವಿಚಿತ್ರ ಕತೆ ಶುರು!
ಈ ಲಾರ್ವದ ಮುಂದಿನ ಜೀವನ ನಡೆಯ ಬೇಕಾಗಿರುವುದು ಹಸುವಿನ ಹೊಟ್ಟೆಯಲ್ಲಿ. ಹಾಗಾಗಿ ಅದು ಹೇಗಾದರೂ ಮಾಡಿ ಹಸುವಿನ ಬಾಯಿಗೆ ಬೀಳಬೇಕು. ಕಾಡಲ್ಲೋ ಬಯಲಲ್ಲೋ ಇರುವ ಇರುವೆಗೆ, ಬಸವನ ಹುಳುವಿನ ಎಂಜಲೂಟ ತಿಂದ ಮೇಲೆ ನಿಧಾನವಾಗಿ ತಲೆ ಕೆಡಲು ಶುರುವಾಗುತ್ತದೆ. ಅದರ ಹೊಟ್ಟೆಯಲ್ಲಿರುವ ಫ್ಲೂಕ್ ಲಾರ್ವ,ರಾತ್ರಿಯಾಗುತ್ತಿದ್ದಂತೆಯೇ, ಇರುವೆಯ ಮಿದುಳಿನ ಮೇಲೆ ಸಂಪೂರ್ಣ ಹತೋಟಿ ಸಾಧಿಸುತ್ತದೆ. ಎಲ್ಲೋ ಇರುವ ಇರುವೆ ಕೂಡಲೇ ಹತ್ತಿರದಲ್ಲಿ ಎಲ್ಲಾದರೂ ಹುಲ್ಲುಗಾವಲು ಇದೆಯೇ ಎಂದು ಹುಡುಕ ತೊಡಗುತ್ತದೆ. ಅದಕ್ಕಾಗಿ, ಅದರ ಲೆಕ್ಕದಲ್ಲಿ ನೂರಾರು ಮೈಲಿಗಳಾಗುವಷ್ಟು, ದೂರವನ್ನು ಬಿಡದೆ ಕ್ರಮಿಸುತ್ತದೆ. ಹುಲ್ಲಿನ ಜೊಂಡು ಸಿಕ್ಕಿತೆಂದರೆ ಅದಕ್ಕೆ ಸ್ವರ್ಗ ಸಿಕ್ಕಷ್ಟೇ ಖುಷಿ. ಕೂಡಲೇ ಹುಲ್ಲಿನ ದಳವನ್ನು ಹತ್ತಿ ಅದರ ತುತ್ತ ತುದಿಗೆ ಏರಿನಿಲ್ಲಲು ಪ್ರಯತ್ನಿಸುತ್ತದೆ. ಹುಲ್ಲಿನ ತುದಿಗೆ ಇನ್ನೇನು ಏರಿ ನಿಂತೆ ಎನ್ನುವಾಗ ಇರುವೆ ಆಯ ತಪ್ಪಿ ಕೆಳಕ್ಕೆ ಬೀಳಬಹುದು. ಆದರೇನಂತೆ, ಮತ್ತೆ ಹುಲ್ಲನ್ನು ಹತ್ತುತ್ತದೆ; ಬೀಳುತ್ತದೆ, ಹತ್ತುತ್ತದೆ! ಇಡೀ ರಾತ್ರಿ ಒಂದರೆ ಕ್ಷಣವೂ ವಿರಮಿಸದೆ ಈ ಜಾರುವ-ಹತ್ತುವ ಜಾರು ಬಂಡಿಯಾಟ ನಡೆಯುತ್ತದೆ. ಬೆಳಕು ಹರಿಯುತ್ತಿದ್ದಂತೆ ಲಾರ್ವಕ್ಕೆ ಇರುವೆಯ ಮಿದುಳಿನ ನಿಯಂತ್ರಣ ತಪ್ಪುತ್ತದೆ. ಇರುವೆ ತನ್ನ ನಿತ್ಯದ”ಇರುವೆಯ” ಜೀವನಕ್ಕೆ ಮರಳುತ್ತದೆ! ಆದರೆ, ಪ್ರತಿ ರಾತ್ರಿಯೂ ಇರುವೆ ತಾನು ತಾನಾಗಿರದೆ ಲಾರ್ವಕ್ಕೆ ಬೇಕಾದಂತೆ ಹುಲ್ಲು ಹತ್ತುವ ಸಾಹಸ ಮಾಡುತ್ತಲೇ ಇರುತ್ತದೆ. ಕೆಲವೊಮ್ಮೆ ವರ್ಷಾನುಗಟ್ಟಲೆ! ಆಹಾರವಾಗಿ ಹಸುವಿನ ಹೊಟ್ಟೆ ಸೇರುವವರೆಗೂ ಈ ಫ್ಲೂಕ್ ಇರುವೆಗೆ ನಿದ್ದೆ ಇಲ್ಲ!
ಇಂಥದ್ದೇ, ಆದರೆ ತುಸು ಭಿನ್ನವಾದ ಕತೆ ಕಪ್ಪೆಗಳದ್ದು. ನೀರು ಹಕ್ಕಿಗಳ ದೇಹದಿಂದ ಪಿಷ್ಟದ ಮೂಲಕ ಹೊರ ಬಂದ ರಿಬೈರೋಯ (Ribeiroia tapeworm)ಎಂಬ ಹುಳುವಿನ ತತ್ತಿಗಳು ಒಡೆದು ಲಾರ್ವಗಳು ಹೊರಬರುತ್ತವೆ. ಇವು ನೀರಲ್ಲಿ ಈಜುತ್ತಿರುವ ಕಪ್ಪೆಯ ಗೊದ ಮೊಟ್ಟೆಗಳನ್ನು ಬಹುಪಾಲು ಹೋಲುತ್ತವೆ. ಲಾರ್ವಾಗಳು ನೀರಲ್ಲಿ ಈಜಿಕೊಂಡು ಹೋಗಿ ಈ ಚೋಂದಕಪ್ಪೆ (ಅಂದರೆ ಕಪ್ಪೆಯ ಮರಿ)ಗಳನ್ನು ತುಂಬ ಪ್ರೀತಿಯಿಂದೆಂಬಂತೆ ಅಪ್ಪಿ ಹಿಡಿಯುತ್ತವೆ. ಅಲ್ಲಿಂದ ಜೀವನ ನಾಟಕದ ಎರಡನೆ ಅಂಕ ಶುರು! ರಿಬೈರೋಯ ಹುಳುವಿನ ಲಾರ್ವ ಕಪ್ಪೆಯ ಮರಿಯ ದೇಹದೊಳಗೆ ಹೋಗಿ ತನ್ನ ಪರಾಕ್ರಮ ತೋರಿಸಲು ಶುರು ಮಾಡುತ್ತದೆ. ಅದೇನೂ ಕಪ್ಪೆಯ ಮಿದುಳಿನ ನಿಯಂತ್ರಣ ತೆಗೆದುಕೊಳ್ಳುವುದಿಲ್ಲ; ಆದರೆ ದೇಹ ವ್ಯವಸ್ಥೆಯನ್ನೇ ತನಗೆ ಬೇಕಾದಂತೆ ಬಗ್ಗಿಸುತ್ತದೆ. ಗೊದ ಮೊಟ್ಟೆಗೆ ಹುಟ್ಟುವ ಕೈಕಾಲುಗಳು ಈ ಮ್ಯಾಜಿಕ್ಕಿನಿಂದಾಗಿ ಚೊಟ್ಟಾಗುತ್ತವೆ. ನಾಲ್ಕರ ಬದಲು ಐದಾರು ಕಾಲು ಹುಟ್ಟಬಹುದು. ಆದರೆ, ಅವೆಲ್ಲ ಬಲಹೀನವಾಗಿ ಕಪ್ಪೆಗೆ ಯಾವ ಅನುಕೂಲವನ್ನೂ ಮಾಡಲಾರದಂತಿರುತ್ತವೆ. ಹೀಗಾಗಿ ಕಪ್ಪೆ ಅಷ್ಟಾವಕ್ರನಿಗಿಂತಲೂ ಕುರೂಪವಾಗಿ ಒಂದು ವಿಲಕ್ಷಣ ಅಂಗವಿಕಲ ತಳಿಯಾಗಿ ಬೆಳೆಯುತ್ತದೆ. ಅದಕ್ಕೆ ನೀರಿಗೆ ಜಿಗಿಯುವುದಕ್ಕಾಗಲೀ ವೇಗವಾಗಿ ನಡೆಯುವುದಕ್ಕಾಗಲೀ ಆಗದು. ಹಾಗಾಗಿ, ಕಪ್ಪೆ ಅನಿವಾರ್ಯವಾಗಿ ಕೆರೆಯ ಬದುವಿನಲ್ಲಿ ಕೆಸರಿನ ಮೇಲೆಯೇ ಅಸಹಾಯವಾಗಿ ಬಿದ್ದು ಕೊಳ್ಳಬೇಕಾಗುತ್ತದೆ. ಇಷ್ಟೆಲ್ಲ ಆಟ ಏಕೆಂದರೆ, ಆ ಕಪ್ಪೆ ಸುಲಭದಲ್ಲಿ ಹಕ್ಕಿಗಳ ಕಣ್ಣಿಗೆ ಬೀಳಬೇಕು. ಹಕ್ಕಿಗಳು ಅದನ್ನು ಕೊಂದು ತಿನ್ನಬೇಕು. ರಿಬೈರೋಯದ ಜೀವನ ಹಕ್ಕಿಯ ಹೊಟ್ಟೆಯಲ್ಲಿ ಮುಂದುವರಿಯಬೇಕು!
ಗಂಡಿನ ಹೊಟ್ಟೆಯಲ್ಲಿ ಗರ್ಭಾಶಯ ಬೆಳೆಸುವ ಡಾಕ್ಟರ್!
ಅಟ್ಲಾಂಟಿಕ್ ಸಾಗರದ ಕೆಲವು ಪ್ರದೇಶಗಳಲ್ಲಿ ಕಂಡು ಬರುವ ಒಂದು ವಿದ್ಯಮಾನದ ಬಗ್ಗೆ ತಿಳಿದರಂತೂ ನೀವು ನಿಜಕ್ಕೂ ಬೆಚ್ಚಿ ಬೀಳುತ್ತೀರಿ, ಬೆಚ್ಚಿ ಬೀಳಿಸುವುದೇ ನನ್ನ ಉದ್ದೇಶವಲ್ಲವಾದರೂ! ಇದೊಂದು ಏಡಿಯ ಕತೆ. ಮತ್ತು ಅದರ ಹೊಟ್ಟೆ ಸೇರಿಕೊಳ್ಳುವ ಒಂದು ವಿಚಿತ್ರ ಪರಾವಲಂಬಿಯ ರೋಮಾಂಚಕ ಜೀವನ ಚರಿತ್ರೆ. ಈ ಪರಾವಲಂಬಿಯ ಹೆಸರು ಸ್ಯಾಕುಲಿನಾ ಕಾರ್ಸೀನಿ (Sacculina Carcini) ಎಂದು. ಸೂಕ್ಷ್ಮದರ್ಶಕದ ತಟ್ಟೆಯಲ್ಲಿಟ್ಟರಷ್ಟೇ ಕಾಣ ಸಿಗುವ ಒಂದು ಪುಟ್ಟ ಪರಪುಟ್ಟ ಇದು. ಕಾರ್ಸೀನಿಗೆ ನೀರಲ್ಲಿ ಆಟವಾಡುವ ಒಂದು ಜಾತಿಯ ಏಡಿಗಳ ದೇಹವೇ ಆಡುಂಬೊಲ. ಹೆಣ್ಣು ಕಾರ್ಸೀನಿಗಳು ಪ್ರಾಯ ಪ್ರಬುದ್ಧವಾದಾಗ,ನೀರಲ್ಲಿ ಓಡಾಡುವ ಏಡಿಗಳ ಹತ್ತಿರ ಸುತ್ತಿ ಸುಳಿದು ಕೊನೆಗೊಂದು ದಿನ ಅವುಗಳ ಹೊಟ್ಟೆಯನ್ನು ಗಬಕ್ಕನೆ ಹಿಡಿದುಕೊಳ್ಳುತ್ತವೆ. ಅವೆಷ್ಟು ಚಿಕ್ಕವಾಗಿರುತ್ತವೆಂದರೆ ಏಡಿಗೆ ಈ ಜೀವಿ ತನ್ನ ಹೊಟ್ಟೆಯನ್ನು ಅವುಚಿಕೊಂಡಿದೆ ಎಂಬ ಕಲ್ಪನೆಯೂ ಬರುವುದಿಲ್ಲ. ಹೆಚ್ಚೆಂದರೆ ಅದು ಮನುಷ್ಯ ಮತ್ತು ಒಂದು ಇರುವೆಗೆ ಇರಬಹುದಾದಷ್ಟೇ ಗಾತ್ರ ವ್ಯತ್ಯಾಸ. ಹೀಗೆ ಹೇಗೋ ಕಷ್ಟ ಪಟ್ಟು ಏಡಿಯ ಹೊಟ್ಟೆಯಲ್ಲಿ ಆಶ್ರಯ ಪಡೆದು ಜೀಕತೊಡಗಿದ ಕಾರ್ಸೀನಿ ನಿಧಾನವಾಗಿ ಏಡಿಯ ದೇಹದೊಳಗೆ ತೂರಿಕೊಂಡು ಅಲ್ಲಿ ಗಾತ್ರವನ್ನು ಇನ್ನಷ್ಟು ಬೆಳೆಸಿಕೊಳ್ಳುತ್ತದೆ. ದೊಡ್ಡದಾಗುತ್ತದೆ. ಏಡಿಯ ದೇಹಕ್ಕೆ ಹೋಲಿಸಿದರೆ ಸಾಕಷ್ಟು ದೊಡ್ಡದೆಂದೇ ಹೇಳಬಹುದಾದಷ್ಟು ಪ್ರಮಾಣಕ್ಕೆ ತನ್ನ ದೇಹವನ್ನು ಹಿಗ್ಗಿಸಿಕೊಳ್ಳುತ್ತದೆ. ಆದರೆ, ಈಗಾಗಲೇ ಏಡಿ ಈ ಪರಾವಲಂಬಿಯ ಹಿಡಿತಕ್ಕೆ ಸಿಕ್ಕಿ ಬಿಟ್ಟಿರುವುದರಿಂದ, ಅದು ಏನನ್ನೂ ಮಾಡಲಾರದ ಸ್ಥಿತಿಯಲ್ಲಿರುತ್ತದೆ. ಯಾಕೆಂದರೆ ಅದರ ಮಿದುಳಿನ ಸಂಪೂರ್ಣ ನಿಯಂತ್ರಣವಿರುವುದು ಈ ಹೊಸ ಡ್ರೈವರ್ ಕೈಯಲ್ಲಿ!
ಕಾರ್ಸೀನಿ, ತನ್ನ ಪೂರ್ತಿ ದೇಹವನ್ನು ಏಡಿಯ ದೇಹದೊಳಗೆ ತೂರಿಸಿಕೊಂಡು ಕಾಲಕಾಲಕ್ಕೆ ಹಾಲು ಹಣ್ಣು ಪಡೆಯುತ್ತಿದ್ದರೂ ತನ್ನ ಲೈಂಗಿಕಾಂಗವನ್ನು ಮಾತ್ರ ಏಡಿಯ ದೇಹದ ಹೊರಗೆ ಬಿಟ್ಟಿರುತ್ತದೆ. ಇದನ್ನು ಕಂಡ ಗಂಡು ಕಾರ್ಸೀನಿಗಳು ಅತ್ತ ಆಕರ್ಷಿತವಾಗಿ ಹತ್ತಿರ ಸುಳಿದು ತಮ್ಮ ಪಾಲಿನ ಕೆಲಸ ಮುಗಿಸಿ ಹೊರಟು ಹೋಗುತ್ತವೆ. ಹೆಣ್ಣು ಹೀಗೆ ಫಲವಂತೆಯಾದ ಬಳಿಕ, ಪೂರ್ತಿಯಾಗಿ ಏಡಿಯ ದೇಹವನ್ನು ಹೊಕ್ಕು ಅದರ ಗರ್ಭಾಶಯವನ್ನು ಸೇರಿಕೊಳ್ಳುತ್ತದೆ. ಇನ್ನುಮುಂದಿನ ಕತೆ ಕೇಳಿ. ಏಡಿ ಹೆಣ್ಣೇ ಆಗಿದ್ದರೆ, ಈ ಆಟ ನಡೆಯಬಹುದು;ಗಂಡಾದರೆ ಏನು ಮಾಡುವುದು? ಅದಕ್ಕೂ ಪರಾವಲಂಬಿಯ ಬಳಿ ಉತ್ತರ ಇದೆ. ಅದು ಒಂದು ವಿಶಿಷ್ಟ ಬಗೆಯ ರಾಸಾಯನಿಕವನ್ನು ಏಡಿಯ ದೇಹಕ್ಕೆ ಹರಿಸಿ, ಅದರ ಲಿಂಗವನ್ನೇ ಬದಲಾಯಿಸಿ ಬಿಡುತ್ತದೆ! ಗಂಡು ಏಡಿಯ ದೇಹದೊಳಗೂ ನಿಧಾನಕ್ಕೆ ಹಾರ್ಮೋನು ಬದಲಾವಣೆಗಳಾಗಿ, ಅದು ಹೆಣ್ಣಾಗಿ ರೂಪಾಂತರವಾಗುವ ಕೆಲಸ ನಡೆಯುತ್ತದೆ! ಹೊಟ್ಟೆಯ ಜಾಗದಲ್ಲಿ ಗರ್ಭಾಶಯ ಬೆಳೆಯುತ್ತದೆ! ಈ ಮ್ಯಾಜಿಕ್ ನಡೆದ ಮೇಲೆ ಕಾರ್ಸೀನಿ ತನ್ನ ತತ್ತಿಗಳನ್ನು ಏಡಿಯ ಗರ್ಭಾಶಯದೊಳಗೆ ಇಟ್ಟು ತನ್ನ ಕೆಲಸ ಪೂರ್ತಿ ಮಾಡುತ್ತದೆ. ಅಲ್ಲಿಂದ ಮುಂದೆ ಈ ಏಡಿಯದ್ದು ನಾಯಿ ಪಾಡು. ಅದು ಈ ತತ್ತಿಗಳನ್ನು ತನ್ನದೇ ವಂಶದ ಕುಡಿ ಎಂಬಂತೆ ಜಾಗ್ರತೆ ಮಾಡುತ್ತದೆ. ಅವಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಲು ತನ್ನ ಹೊಟ್ಟೆ ತುಂಬಿರುವಂತೆ ಪೌಷ್ಟಿಕವಾದ ಆಹಾರ ತೆಗೆದುಕೊಳ್ಳುತ್ತದೆ. ಸ್ವಾಭಾವಿಕವಾಗಿ ಗರ್ಭಿಣಿಯಾದ ಏಡಿ ಏನೆಲ್ಲ ಉಪಚಾರಗಳನ್ನು ಮಾಡಿಸಿಕೊಳ್ಳಬೇಕೋ ಅವೆಲ್ಲವನ್ನೂ ನಿಷ್ಠೆಯಿಂದ ಮಾಡಿಸಿಕೊಂಡು ಕೊನೆಗೊಂದು ದಿನ ಹಡೆಯುತ್ತದೆ. ತತ್ತಿಯಿಂದ ಹೊರ ಬಂದ ಪರಾವಲಂಬಿಗಳು ಮತ್ತೆ ನೀರಿನ ಲೋಕ ಸೇರಿಕೊಳ್ಳುತ್ತವೆ. ಈ ಜೀವ ಜಗತ್ತಿನ ವಿಚಿತ್ರ ಆಟವನ್ನು ಮೊದಲ ಬಾರಿ ಕಂಡು ಹಿಡಿದಾಗ ಜೀವ ವಿಜ್ಞಾನಿಗಳಿಗೆ ಆಶ್ಚರ್ಯದಿಂದ ಬಾಯೇ ಹೊರಡಲಿಲ್ಲವಂತೆ. ಇರುವೆಯಂತಹ ಪರಾವಲಂಬಿ,ತನ್ನ ಗಾತ್ರಕ್ಕೆ ಹೋಲಿಸಿದರೆ ಆನೆಯಷ್ಟಾಗುವ ಏಡಿಯ ಮೇಲೆ ಸಂಪೂರ್ಣ ನಿಯಂತ್ರಣ ತೆಗೆದುಕೊಳ್ಳುವುದು ಹೇಗೆ? ಅದು ಒಸರುವ ರಸ ವಿಶೇಷ ಏನು? ಗಂಡು ದೇಹವನ್ನೂ ಆಪರೇಶನ್ ಮಾಡಿ ಹೆಣ್ಣಾಗಿಸುವ ಈ ವಿಚಿತ್ರಾನುವಿಚಿತ್ರ ಘಟನೆ ನಡೆಯುವುದು ಹೇಗೆ – ರಹಸ್ಯವನ್ನು ಇಂದಿಗೂ ಭೇದಿಸಲಾಗಿಲ್ಲ.
ಇದರ ಅರ್ಥ ಏನು?
ಪರಾವಲಂಬನೆ ಮಹಾಪಾಪ ಎಂದು ಶಾಸ್ತ್ರದಲ್ಲಿ,ಧರ್ಮಗ್ರಂಥಗಳಲ್ಲಿ ಓದಿಕೊಂಡ ನಮಗೆ ಕೀಟ ಜಗತ್ತಿನ ಈ ಎಲ್ಲ ವ್ಯವಹಾರಗಳು ವಿಚಿತ್ರ ಅನ್ನಿಸಬಹುದು. ವಾಕರಿಕೆ ಬರಬಹುದು. ಆದರೆ,ಅವಕ್ಕೆ ಅದೇ ಸಹಜ ಜೀವನ. ಉದಾಹರಣೆಗೆ ಸೈಮೊತೋಅ ಎಕ್ಸಿಗುವಾ (Cymothoa exigua)ಎಂಬ ಪರಾವಲಂಬಿಯನ್ನೇ ತೆಗೆದುಕೊಳ್ಳಿ. ಇದು ನೀರಲ್ಲಿ ಈಜಾಡುವ ಮೀನುಗಳ ದೇಹವನ್ನು ಕಿವಿರುಗಳ ಮೂಲಕ ಪ್ರವೇಶಿಸಿ ಬಾಯಿಯಲ್ಲಿ ನಾಲಗೆಯ ಜಾಗದಲ್ಲಿ ತಲೆ ಹೊರ ಹಾಕುತ್ತದೆ. ಅಷ್ಟೆಯೇ? ಅಲ್ಲ, ಮೀನಿನ ಆ ನಾಲಗೆಯನ್ನು ಸಂಪೂರ್ಣವಾಗಿ ತಿಂದು ಹಾಕಿ, ತಾನೇ ನಾಲಗೆಯಾಗುತ್ತದೆ! ಮೀನು ಎಷ್ಟು ದಿನ ಬದುಕಿರುತ್ತದೋ ಅಷ್ಟು ದಿನವೂ ಈ ಪರಾವಲಂಬಿಯೂ ಖುಷಿ ಖುಷಿಯಾಗಿ ಸಹ ಜೀವನ ನಡೆಸುತ್ತದೆ! ಇಂಥಾದ್ದೆಲ್ಲ ನಡೆಯುವುದು ನಿಜಕ್ಕೂ ಸಾಧ್ಯವೇ ಎಂದು ನಾವು ಎದೆ ಮುಟ್ಟಿ ಕೇಳಿಕೊಳ್ಳುವಷ್ಟು ಆಶ್ಚರ್ಯಕರವಾದ ಘಟನೆಗಳು ಪ್ರಕೃತಿಯಲ್ಲಿ ನಡೆಯುತ್ತಲೇ ಇರುತ್ತವೆ ಎನ್ನುವುದಕ್ಕೆ ಪರಾವಲಂಬಿಗಳ ಬದುಕಿಗಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಈ ಪ್ರಕೃತಿಯಲ್ಲಿ ಇಷ್ಟೊಂದು ಬುದ್ಧಿವಂತಿಕೆ ಮೂಡಿರುವುದಾದರೂ ಹೇಗೆ? ಇದೆಲ್ಲದರ ಅರ್ಥವೇನು? ಯಾಕೆ ಬದುಕುವುದು, ವಂಶಾಭಿವೃದ್ಧಿ ಮಾಡಿ ಪೀಳಿಗೆಯನ್ನು ಬೆಳೆಸುವುದು ಪ್ರಕೃತಿಯಲ್ಲಿ ಇಷ್ಟೊಂದು ಬಲಯುತವಾದ ಅಂತಃಪ್ರೇರಣೆಯಾಗಿ ಉಳಿದಿದೆ? ಈ ಗೂಢಗಳ ಬಗ್ಗೆ ನಮಗೆ ಗೊತ್ತಿರುವುದು ಗುಲಗಂಜಿಯ ಮೊನೆಯಷ್ಟೂ ಇಲ್ಲ!
Facebook ಕಾಮೆಂಟ್ಸ್