X

ದುಡ್ಡಿಗೇ ಸೆಡ್ಡು ಹೊಡೆದಿದೆ ಈ ದೇಶ!

ಆನಂದ ಎಂದರೇನು? ದುಡ್ಡು ಎನ್ನಬಹುದು ನೀವು. ಜಗತ್ತಿನ ಅತ್ಯಂತ ಶ್ರೀಮಂತನನ್ನು ನೋಡಿದರೆ ಆತ ದಿನದ ಇಪ್ಪತ್ತ ನಾಲ್ಕೂ ಗಂಟೆ ದುಡಿಯುತ್ತ ನೂರೆಂಟು ಕೆಲಸಗಳನ್ನು ನಿರ್ವಹಿಸುತ್ತ ತನ್ನ ಸಂಪತ್ತನ್ನು ರಕ್ಷಿಸಿಕೊಳ್ಳಲು ನೂರೆಂಟು ಮಾರ್ಗಗಳನ್ನು ಹುಡುಕುತ್ತ ಹೈರಾಣಾಗಿರುತ್ತಾನೆ. ಆನಂದ ಎಂದರೆ ಅಧಿಕಾರ ಎನ್ನುತ್ತೀರಾ? ಸ್ವಲ್ಪ ನಮ್ಮ ಮೋದಿ ಸಾಹೇಬರನ್ನೋ ಅಮೆರಿಕಾ ಅಧ್ಯಕ್ಷ ಒಬಾಮಾರನ್ನೋ ನೋಡಿ. ಹಗಲಿರುಳು ದುಡಿದರೂ ಸಾವಿರದೆಂಟು ಆಪಾದನೆಗಳನ್ನೂ ದೂರುಗಳನ್ನೂ ಬೈಗುಳವನ್ನೂ ಕೇಳುತ್ತ, ಆದರೂ ಸಮಚಿತ್ತದಲ್ಲಿರಲು ಯತ್ನಿಸುತ್ತ ಮುದುಕರಾಗುತ್ತ ಹೋಗುತ್ತಿದ್ದಾರೆ. ಹಣ, ಅಧಿಕಾರ, ಹತ್ತಾರು ಹೆಣ್ಣುಗಳಿಂದ ಸೇವೆ ಪಡೆಯುವುದು, ಧರ್ಮ/ರಿಲಿಜನ್‍ಗಾಗಿ ಹತ್ಯಾಕಾಂಡ ಮಾಡುವುದು, ನಗರ ಜೀವನದಲ್ಲಿ ಕಳೆದು ಹೋಗುವುದು – ಇವ್ಯಾವುದೂ ಆನಂದವಲ್ಲ. ನಮ್ಮ ದೇಶಕ್ಕೆ ಒಮ್ಮೆ ಬಂದು ಹೋಗಿ. ಇಲ್ಲಿನ ರಸ್ತೆಗಳಲ್ಲಿ, ಕಾಡಿನ ದಾರಿಗಳಲ್ಲಿ ಅಡ್ಡಾಡಿ. ಆನಂದದ ವ್ಯಾಖ್ಯೆ ಏನು ಎನ್ನುವುದನ್ನು ಆಮೇಲೆ ಹೇಳಿ ಎನ್ನುತ್ತಾರೆ ಭೂತಾನ್‍ನ ಜನ!

ಜಗತ್ತಿನ ಎರಡು ಆರ್ಥಿಕ ದೈತ್ಯರೂ ಅತ್ಯಧಿಕ ಜನಸಂಖ್ಯೆಯಿಂದ ತುಂಬಿ ತುಳುಕಾಡುವ ರಾಷ್ಟ್ರಗಳೂ ಆದ ಚೀನಾ ಮತ್ತು ಭಾರತಗಳ ಬಿಗಿ ಅಪ್ಪುಗೆಯ ನಡುವಲ್ಲಿ ಪುಳಕ್ಕನೆ ತಲೆ ಹೊರ ಹಾಕಿದ ಮಗುವಿನಂತಿದೆ ಈ ಪುಟಾಣಿ ದೇಶ. ಸಮುದ್ರ ಮಟ್ಟದಿಂದ ಸರಾಸರಿ 5000 ಮೀಟರ್ ಎತ್ತರದಲ್ಲಿ ಹಿಮಾಲಯದ ಧವಳ ಶ್ರೇಣಿಗಳ ಮಡಿಲಲ್ಲಿ ಮೋಡಗಳ ನೇವರಿಕೆಯ ಸುಖದಲ್ಲಿ ಕಾಲರಾಯನ ಕೊರಳಿನಲ್ಲಿರುವ ಕೆಟ್ಟು ಹೋದ ಕ್ಯಾಮೆರದ ಕಪ್ಪುಬಿಳುಪು ಫೋಟೋದಂತೆ ಕಾಣುವ ಭೂತಾನ್ ತನ್ನ ಅಭಿವೃದ್ಧಿಯನ್ನು ಉತ್ಪನ್ನಗಳಿಂದಲ್ಲ ಸಂತೋಷದಿಂದ ಅಳೆಯುವ ಜಗತ್ತಿನ ಏಕಮಾತ್ರ ದೇಶ. ಎಲ್ಲ ದೇಶಗಳೂ ಜಿಡಿಪಿಯ ಬೆನ್ನು ಹತ್ತಿದ್ದರೆ ಭೂತಾನ್ ಮಾತ್ರ “ಗ್ರಾಸ್ ನ್ಯಾಷನಲ್ ಹ್ಯಾಪಿನೆಸ್” (ರಾಷ್ಟ್ರೀಯ ಆನಂದ ಸೂಚ್ಯಂಕ)ವೆಂಬ ಹೊಸ ಪರಿಕಲ್ಪನೆಯ ಬೆನ್ನೇರಿ ಭಿನ್ನ ದಾರಿಯಲ್ಲಿ ಹೊರಟಿದೆ! ರಸ್ತೆಗಳಲ್ಲಿ ಬಣ್ಣ ಬಣ್ಣದ ಸರಕು ಮಾರುವ ದೊಡ್ಡ ವರ್ಣಮಯ ಹೋರ್ಡಿಂಗ್‍ಗಳನ್ನು ನಿಲ್ಲಿಸಬೇಡಿ. ಇದರಿಂದ ಜನರಿಗೆ ಆ ಉತ್ಪನ್ನಗಳನ್ನು ಕೊಳ್ಳಲೇಬೇಕೆಂಬ ಹುಸಿ ಚಡಪಡಿಕೆ ಹುಟ್ಟಿಸಿದಂತಾಗುತ್ತದೆ. ಕಡಿಮೆ ಟಿವಿ ನೋಡಿ; ಕಡಿಮೆ ಇಂಟರ್ನೆಟ್ ಬಳಸಿ. ಹೆಚ್ಚು ಹೆಚ್ಚಾಗಿ ಸಮುದಾಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಕಾಡುಗಳಲ್ಲಿ ಅಡ್ಡಾಡಿ. ನೀರಿನ ತೊರೆಗಳಲ್ಲಿ ಕಾಲದ್ದಿ ಕೂರುವ,ಜಗದೆಲ್ಲ ಜಂಜಡ ಮರೆಯುವ ವಿರಾಮ ನಿಮಗಿರಲಿ. ಧರ್ಮವನ್ನು ಮತಾಂತರದ ಕಾರ್ಯಕ್ಕೆ ಬಳಸಬೇಡಿ. ಕೈಗೆ ಕಲ್ಲಲ್ಲ ಹೂವು ಎತ್ತಿಕೊಳ್ಳಿ. ಸಾಧ್ಯವಾದರೆ ಒಂದಷ್ಟು ಗಿಡ ನೆಡಿ. ಒಂದಿಬ್ಬರಿಗೆ ಅಕ್ಷರ ಕಲಿಸಿ. ವನ್ಯಮೃಗಗಳಿಗೆ ತೊಂದರೆಯಾಗದಂತೆ, ಅವು ತಮ್ಮ ಪಾಡಿಗೆ ಸಂಚರಿಸಲು ಅನುಕೂಲವಾಗುವಂತೆ ನೋಡಿಕೊಳ್ಳಿ. ಬದುಕು ಸಂಕೀರ್ಣವೇನೂ ಅಲ್ಲ. ಸಿಕ್ಕುಗಳನ್ನು ಬಿಡಿಸುವತ್ತ ನಿಮ್ಮ ಗಮನವಿರಬೇಕೇ ಹೊರತು ಮತ್ತಷ್ಟು ಕಗ್ಗಂಟುಗಳನ್ನು ಹೊಸೆಯುವುದರಲ್ಲಲ್ಲ – ಇದು ಭೂತಾನ್ ಕಲಿಸುವ ಪಾಠ.

ಈ ದೇಶದ ರಾಜಧಾನಿ ಥಿಂಪುವಿನ ಜನಸಂಖ್ಯೆ ಹೆಚ್ಚು ಕಡಿಮೆ ಏಳು ಲಕ್ಷ. ಇಡೀ ಜಗತ್ತಿನಲ್ಲಿ, ಟ್ರಾಫಿಕ್ ದೀಪಗಳಿಲ್ಲದ ಏಕೈಕ ರಾಷ್ಟ್ರ ರಾಜಧಾನಿ ಇದು! ಹೆಜ್ಜೆಹೆಜ್ಜೆಗೆ ಟ್ರಾಫಿಕ್ಕಿನ ಕೆಂಪು ದೀಪಕ್ಕೆ ಮಂಡಿಯೂರಿ ಶರಣಾಗಬೇಕಾದ ಬೆಂಗಳೂರಿಗರಿಗೆ ಥಿಂಪು ಜನ ಅದೆಷ್ಟು ಸುಖಿಗಳು ಎನ್ನುವುದರ ಅಂದಾಜು ಸಿಗಬಹುದು! ಒಂದಾನೊಂದು ಕಾಲದಲ್ಲಿ ರಾಜವಂಶದ ಆಳ್ವಿಕೆಗೊಳಪಟ್ಟಿದ್ದ ಭೂತಾನ್,ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷರ ಕೈಕೆಳಗೆ ಬಂತು. 1947ರಲ್ಲಿ ಭಾರತ ಸ್ವತಂತ್ರವಾದಾಗ ಅದು ಭಾರತದ ತೆಕ್ಕೆಗೆ ಬಂದುಬಿತ್ತು. 1971ರಲ್ಲಿ ವಿಶ್ವಸಂಸ್ಥೆ ಭೂತಾನ್‍ಗೆ ಪ್ರತ್ಯೇಕ ದೇಶವೆಂದು ಗುರುತಿಸಿ ಮಾನ್ಯತೆ ಕೊಟ್ಟಿತು. ಆಗಲೂ ರಾಜವಂಶದ ಕೈಯಲ್ಲೇ ಇದ್ದ ಈ ದೇಶಕ್ಕೆ ಆಗಿನ ರಾಜ ಸಂವಿಧಾನ ಬರೆದುಕೊಟ್ಟ. ಇನ್ನೂರು ಪುಟಗಳಿಗಿಂತಲೂ ಕಡಿಮೆ ಇರುವ, ಹೆಚ್ಚೆಂದರೆ ಒಂದು ಕಾದಂಬರಿ ಪುಸ್ತಕದಂತೆ ಕಾಣುವ ಈ ಸಂವಿಧಾನದಲ್ಲಿ ರಾಜ ಹೇಳಿದ್ದ ಪ್ರಮುಖ ಅಂಶಗಳು ದೇಶವಾಸಿಗಳ ಹುಬ್ಬೇರಿಸಿದವು. ಈ ದೇಶಕ್ಕೊಂದು ಪ್ರಜಾಪ್ರಭುತ್ವವಾದಿ ಸರಕಾರ ಬೇಕು; ಅದು ಚುನಾವಣೆಯ ಮೂಲಕ ಜನರಿಂದಲೇ ನೇರವಾಗಿ ಆಯ್ಕೆಯಾಗಿ ಬರಬೇಕು. ರಾಜ ನಿರಂಕುಶನಲ್ಲ. ಆತನನ್ನೂ ಪ್ರಶ್ನಿಸುವ, ನಿಯಂತ್ರಿಸುವ ಅಧಿಕಾರ ಜನರಿಂದ ಚುನಾಯಿತವಾಗಿ ಬಂದ ಸರಕಾರಕ್ಕಿರಬೇಕು. ದೇಶದ ರಾಜ ಅರುವತ್ತೈದನೆಯ ವಯಸ್ಸಿಗೆ ನಿವೃತ್ತನಾಗಿ ಮುಂದಿನ ತಲೆಮಾರಿಗೆ ದಾರಿ ಮಾಡಿಕೊಡಬೇಕು – ಎಂಬ ಆಘಾತಕಾರಿ ಸಾಲುಗಳಿದ್ದವು ಅಲ್ಲಿ. ಒಬ್ಬ ರಾಜನೇ ಸ್ವತಃ ತನ್ನ ಕೈಗಳನ್ನು ನಿಯಂತ್ರಿಸಿರೆಂದು ದೇಶದ ಜನರನ್ನು ಕೇಳಿಕೊಳ್ಳುವ ಪ್ರಸಂಗವನ್ನು ಜಗತ್ತಿನ ಯಾವ ಮನುಷ್ಯನೂ ಕಂಡು ಕೇಳಿದ ಉದಾಹರಣೆ ಇರಲಿಲ್ಲ! ರಾಜನ ಆಶಯದಂತೆ2008ರಲ್ಲಿ ಮೊತ್ತ ಮೊದಲ ಸಾರ್ವತ್ರಿಕ ಚುನಾವಣೆಗಳು ನಡೆದು ಸರಕಾರವೊಂದು ಅಧಿಕಾರಕ್ಕೆ ಬಂತು. ಅರುವತ್ತೈದಕ್ಕೆ ನಿವೃತ್ತನಾಗಬೇಕೆಂದು ಹೇಳಿದ್ದ ರಾಜ ಝಿಗ್ಮೆ ಸಿಂಗ್ಯೆ ವಾಂಗ್‍ಚುಕ್, ತನ್ನ ಐವತ್ತೊಂದನೇ ವಯಸ್ಸಿಗೇ ಸಿಂಹಾಸನದಿಂದ ಇಳಿದು ಮಗನಿಗೆ ಪಟ್ಟಾಭಿಷೇಕ ಮಾಡಿ ಮೇಲ್ಪಂಕ್ತಿ ಹಾಕಿ ಕೊಟ್ಟ. ಸದ್ಯ ಅಧಿಕಾರಾರೂಢ ಅರಸ ಝಿಗ್ಮೆ ಖೆಸರ್ ನಾಮ್‍ಗ್ಯೆಲ್ ವಾಂಗ್‍ಚುಕ್ ವಿದೇಶದಲ್ಲಿ ವ್ಯಾಸಂಗ ಪೂರೈಸಿ ಬಂದವನು. ಆದರೆ ಭೂತಾನಿನ ನೆಲದ ಮಣ್ಣಿನಲ್ಲಿ ಭದ್ರವಾಗಿ ಕಾಲೂರಿ ನಿಂತವನು. ದೇಶದ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುವ,ಚುನಾಯಿತ ಸರಕಾರಕ್ಕೆ ಅನಿವಾರ್ಯ ಸಂದರ್ಭಗಳಲ್ಲಿ ಸಲಹೆ-ಸೂಚನೆ ನೀಡುವ, ಅಗತ್ಯ ಬಿದ್ದರೆ ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸಲಿಕ್ಕೂ ನಿಲ್ಲಬಲ್ಲ ಸರಳ ಸಜ್ಜನ ರಾಜನನ್ನು ಕಾಣಬೇಕಾದರೆ ನಾವು ಭೂತಾನಿಗೇ ಹೋಗಬೇಕು!

 

ಇದು ಪುಟ್ಟ ದೇಶ. 38,000 ಚದರ ಕಿಲೋಮೀಟರ್’ಗಳಿರುವ ಈ ದೇಶ ವಿಸ್ತಾರದಲ್ಲಿ ನಮ್ಮ ಕೇರಳದಷ್ಟೇ ದೊಡ್ಡದು. ಕೇರಳದಲ್ಲಿ ಮೂರೂವರೆ ಕೋಟಿ ಜನಸಂಖ್ಯೆ ಇದ್ದರೆ ಭೂತಾನ್‍ನಲ್ಲಿರುವುದು ಅದರ ಐವತ್ತು ಪಟ್ಟು ಕಡಿಮೆ! ಅಂದರೆ ದೇಶಕ್ಕೆ ದೇಶವೇ ಬಟಾಬಯಲು. ಎಲ್ಲೋ ಅಲ್ಲಿಲ್ಲಿ ಪುಟ್ಟ ಊರುಕೇರಿಗಳಿರುವುದು ಬಿಟ್ಟರೆ ದೇಶದ 72% ಭೂಮಿಯಲ್ಲಿ ಹಚ್ಚ ಹಸುರಿನ ಅರಣ್ಯ ಅರಳಿ ನಿಂತಿದೆ. ಭೂತಾನ್‍ನ ಒಟ್ಟು ವಿಸ್ತೀರ್ಣದಲ್ಲಿ ಕನಿಷ್ಠ 60% ಎಂದೆಂದಿಗೂ ಅರಣ್ಯವೇ ಇರಬೇಕೆಂದು ರಾಜ ಸಂವಿಧಾನದಲ್ಲೇ ಬರೆದು ಬಿಟ್ಟಿದ್ದಾನೆ. ವಿಶೇಷವೆಂದರೆ ದೇಶದೊಳಗಿನ ಎಲ್ಲ ಅರಣ್ಯ ವಲಯಗಳನ್ನೂ ಪರಸ್ಪರ ಜೋಡಿಸಲಾಗಿದೆ. ಹಾಗಾಗಿ ಇಲ್ಲಿ ನಡೆದಾಡುವ ಹುಲಿ, ಕಾಡೆಮ್ಮೆಯಂಥ ವನ್ಯಮೃಗಗಳು ದೇಶದ ಯಾವುದೇ ಭಾಗಕ್ಕೂ ಸಂಚರಿಸುವ ಸ್ವಾತಂತ್ರ್ಯ ಪಡೆದಿವೆ. ಎರಡು ವರ್ಷಗಳ ಹಿಂದೆ ಉತ್ತರದ ತುತ್ತತುದಿಯಲ್ಲಿದ್ದ ಹುಲಿಯೊಂದು ಆರು ತಿಂಗಳ ಅಂತರದಲ್ಲಿ ದಕ್ಷಿಣದ ತುದಿಯಲ್ಲಿ ಕಾಣಿಸಿಕೊಂಡಿತ್ತು. ಅಂದರೆ ಸ್ವಚ್ಛಂದವಾಗಿ ವಿಹರಿಸುತ್ತ ಬೇಟೆ ಅರಸುತ್ತ ಆ ಹುಲಿ ಇಡೀ ದೇಶವನ್ನೇ ಅಳೆದು ಬಿಟ್ಟಿತ್ತು! ದೇಶವೆಂದರೆ ಬಿಜಿಬಿಜಿಯೆನ್ನುವ ಜನಸಂದಣಿಯಲ್ಲ; ಅದು ಸಂಸ್ಕøತಿ ಸಾಹಿತ್ಯ ವನ ವನ್ಯ ಮೃಗ ಹೂವು ಹಣ್ಣು ಆಕಾಶ ಭೂಮಿ ನೀರು ಬೆಟ್ಟ ಎಲ್ಲವೂ – ಎಂಬುದು ಭೂತಾನ್ ಸಂವಿಧಾನ ಕೊಡುವ ಸಂದೇಶ. ಎಲ್ಲವೂ ಎಲ್ಲರೂ ಸಂತೋಷವಾಗಿರಲಿ ಎಂಬುದೇ ಇಲ್ಲಿನ ಉದಾತ್ತ ಆಶಯ.

 

ಭೂತಾನ್ ದೇಶ ಪ್ರತಿವರ್ಷ 2.2 ಮಿಲಿಯನ್ ಟನ್‍ನಷ್ಟು ಕಾರ್ಬನ್ ಡೈ ಆಕ್ಸೈಡ್‍ಅನ್ನು ಹೊರಸೂಸುತ್ತದೆ. ಆದರೆ 7 ಮಿಲಿಯನ್ ಟನ್‍ನಷ್ಟು ಆಮ್ಲಜನಕವನ್ನೂ ಜಗತ್ತಿಗೆ ಕೊಡುತ್ತಿದೆ. ತನ್ನ ಆಮ್ಲಜನಕದ ಉತ್ಪಾದನೆಗಿಂತ ಹಲವು ಪಟ್ಟು ಹೆಚ್ಚಿನ ಕಾರ್ಬನ್ ವಿಷಾನಿಲವನ್ನು ಜಗತ್ತಿಗೆ ಹಂಚುತ್ತಿರುವ ಚೀನಾದ ಪ್ರಗತಿಯ ವ್ಯಾಖ್ಯೆಗೆ ತದ್ವಿರುದ್ಧವೆಂಬಂತೆ ವಿಷಾನಿಲದ ಮೂರು ಪಟ್ಟು ಜೀವವಾಯುವನ್ನು ಕೊಡುತ್ತಿರುವ ಭೂತಾನ್ “ಕಾರ್ಬನ್ ನ್ಯೂಟ್ರಲ್” ಅಲ್ಲ; “ಕಾರ್ಬನ್ ನೆಗೆಟಿವ್” ಆಗಿರುವ ದೇಶ. ತನ್ನ ದೇಶಕ್ಕೆ ಸಾಕು ಸಾಕೆನ್ನುವಷ್ಟು ಆಮ್ಲಜನಕವನ್ನು ಉತ್ಪಾದಿಸಿ ಆಸುಪಾಸಿನ ಗೆಳೆಯರಿಗೂ ಹಂಚುವ ದೇಶ ಇಡೀ ಜಗತ್ತಿನಲ್ಲಿ ಇದೊಂದೇ! ಇಲ್ಲಿ ಪ್ರತಿವರ್ಷ ರಾಜನ ಹಾಗೂ ಜ್ಯೇಷ್ಠ ಯುವರಾಜನ ಜನ್ಮದಿನಗಳ ನೆಪದಲ್ಲಿ ಜನರು1,08,000 ಗಿಡಗಳನ್ನು ನೆಡುತ್ತಾರೆ. ಆಗಾಗ, ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದಾಖಲೆಯನ್ನೂ ಬರೆಯುತ್ತಾರೆ. ಇತ್ತೀಚೆಗೆ ಇದೇ ವಿಷಯದಲ್ಲಿ ಮಾಡಿದ ಹೊಸ ವಿಶ್ವದಾಖಲೆಯನ್ನು ಮೆಚ್ಚಿಕೊಂಡು ಸ್ವತಃ ಪ್ರಧಾನಿಗಳೇ ತನ್ನ ಪ್ರಜೆಗಳನ್ನು ಹುರಿದುಂಬಿಸಿ ಶುಭಾಶಯ ಕೋರಿದ್ದರು. “ಪರಿಸರಕ್ಕೆ ಧಕ್ಕೆಯಾಗುವ ಯಾವೊಂದು ಕೆಲಸವನ್ನೂ ಮಾಡದೇ ಇದ್ದರೂ ಪ್ರಕೃತಿ ನಮ್ಮ ಮೇಲೆ ಮುನಿಸಿಕೊಂಡಿದೆ. ಭೂಮಿ ಬಿಸಿಯಾಗುತ್ತಿರುವ ಕಾರಣ ಹಿಮಾಲಯದ ಹಿಮಟೋಪಿಗಳು ವೇಗವಾಗಿ ಕರಗುತ್ತಿವೆ. ಕೇವಲ ಇಪ್ಪತ್ತು ವರ್ಷಗಳ ಹಿಂದೆ ಹಿಮದ ಆಳೆತ್ತರ ಬೆಟ್ಟವಿದ್ದ ಪರಿಸರಗಳಲ್ಲಿ ಮಂಜು ಕರಗಿ ಪುಟ್ಟ ಕೊಳಗಳು ಹುಟ್ಟಿಕೊಂಡಿವೆ. ಇಷ್ಟು ದಿನ ಅಪಾಯಕ್ಕೆರವಾಗದೆ ನಿಂತಿದ್ದ ಮನೆಮಾರುಗಳನ್ನು ಬೇಸಿಗೆಯಲ್ಲಿ ಧಾರಾಕಾರ ಹರಿದು ಬರುವ ನೀರಿನ ಪ್ರವಾಹ ಬೀಳಿಸುತ್ತಿದೆ. ಆಳವಾದ ಕೊರಕಲುಗಳನ್ನು ನಿರ್ಮಿಸುತ್ತಿದೆ. ಇಂಥ ಭೂಸವಕಳಿಯನ್ನು ನಿಲ್ಲಿಸಬೇಕಾದರೆ ಭೂತಾನ್ ಪ್ರಜೆಗಳಲ್ಲಿ ಸದ್ಯಕ್ಕಿರುವ ಪರಿಣಾಮಕಾರಿ ಪರಿಹಾರ ಒಂದೇ. ಸಾಧ್ಯವಾದಷ್ಟು ಗಿಡಗಳನ್ನು ನೆಡುವುದು ಮತ್ತು ನೆಡುತ್ತಲೇ ಹೋಗುವುದು!”, ಎನ್ನುತ್ತಾರೆ ಭೂತಾನ್‍ನ ಪ್ರಧಾನಿ ತ್ಸೆರಿಂಗ್ ಟಾಬ್‍ಗೇ.

ಅಪ್ಪಣೆ ಇಲ್ಲದೆ ಇಲ್ಲಿ ಮರಗಳನ್ನು ಕಡಿಯುವುದು ಬಿಡಿ; ಅವುಗಳ ಹೂವು ಹಣ್ಣುಗಳನ್ನೂ ಕೀಳುವಂತಿಲ್ಲ! ವನ್ಯ ಮೃಗಗಳನ್ನು ಬೇಟೆಯಾಡಿ ಸಿಕ್ಕಿಬಿದ್ದಿರೋ ಜೀವಮಾನವೆಲ್ಲ ಜೈಲಲ್ಲಿ ಕೊಳೆಯಬೇಕಾದೀತು. ಸರಕಾರವೇ ಮುಂದೆ ನಿಂತು ಕಾಡಿನ ಸಮೀಪದಲ್ಲಿರುವ ಜನರಿಗೆ ವಿದ್ಯುತ್ತಿನ ಸೌಲಭ್ಯ ಒದಗಿಸಿದೆ. ನಿಮಗೆ ಬೇಕಿರುವ ಸವಲತ್ತುಗಳನ್ನೆಲ್ಲ ನಾವೇ ಒದಗಿಸುತ್ತೇವೆ;ಮರಗಳನ್ನು ಮಾತ್ರ ಕಡಿಯಬೇಡಿ ಎಂದು ಸರಕಾರೀ ಅಧಿಕಾರಿಗಳು ಪುಸಲಾಯಿಸುತ್ತಾರೆ. ಸ್ವಚ್ಛ ಭೂತಾನ್, ಹಸಿರು ಭೂತಾನ್ ಎಂಬ ಎರಡು ಸರಕಾರೀ ಕಾರ್ಯಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡುತ್ತಿವೆ. ಈಗಾಗಲೇ ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಇನ್ನು ಕೆಲ ಕಾಲ ಸರಿದರೆ ಭೂತಾನ್ ಪೇಪರ್ ಬಳಕೆಯನ್ನೂ ಸಂಪೂರ್ಣವಾಗಿ ನಿಲ್ಲಿಸಲಿದೆಯಂತೆ. ಕಠಿಣ ಕಾನೂನುಗಳ ಮೂಲಕ ಜನರನ್ನು ಬಗ್ಗು ಬಡಿದು ನಿಯಂತ್ರಣ ಕಾಯ್ದುಕೊಳ್ಳುವುದಕ್ಕಿಂತ ಅವರನ್ನು ಶಿಕ್ಷಣದ ಮೂಲಕ ತಿದ್ದಬಹುದು ಎಂದು ಸರಕಾರದ ವಾದ. ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಉಚಿತ ಪ್ರಾಥಮಿಕ ಶಿಕ್ಷಣವನ್ನು ಸರಕಾರ ನೀಡುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕಾಲೇಜು ವಿದ್ಯಾಭ್ಯಾಸವೂ ಉಚಿತವೇ! ಇಷ್ಟೆಲ್ಲ ವಿಶೇಷತೆಗಳಿರುವ ಈ ದೇಶದ ವಾರ್ಷಿಕ ಬಜೆಟ್ 2ಬಿಲಿಯನ್ ಡಾಲರುಗಳನ್ನೂ ಮೀರುವುದಿಲ್ಲ. ಅಂದರೆ ಎಷ್ಟು ಎನ್ನುತ್ತೀರಾ? ಸಂಪತ್ತಿನ ತುತ್ತತುದಿಯಲ್ಲಿ ಕೂತಿರುವ ಬಿಲ್‍ಗೇಟ್ಸ್ ಎಂಬ ಮಹಾಶ್ರೀಮಂತ, ತನ್ನ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿ ಇಪ್ಪತ್ತೈದು ಭೂತಾನ್‍ಗಳನ್ನು ಕೊಂಡುಕೊಳ್ಳಬಹುದು!

ದುಡ್ಡಿಂದ ದೇಶದ ನೆಲವನ್ನೇನೋ ಕೊಳ್ಳಬಹುದೆನ್ನಿ. ಆದರೆ ಭೂತಾನ್‍ನ ಜನರ ಆನಂದಕ್ಕೆ ಬೆಲೆ ಕಟ್ಟಲಾದೀತೇ ಬಿಲ್‍ಗೇಟ್ಸ್’ನಿಂ?

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post