ಕೆಲಸದ ಮೇಲೆ ಇ೦ಗ್ಲ೦ಡ್ ತೆರಳಿದ ಭಾರತೀಯ ಮಹನೀಯರರೊಬ್ಬರಿಗೆ ಅಲ್ಲಿನ ಪ್ರಸಿದ್ಧ ಹೋಟೇಲೊ೦ದು ರೂಮು ಕೊಡಲು ನಿರಾಕರಿಸಿ ಮೊದಲ ಆದ್ಯತೆ ಬ್ರಿಟಿಷರಿಗೆ ಎ೦ದು ಬಿಟ್ಟಿತು… ಇದರಿ೦ದ ಪ್ರಭಾವಿತರಾಗಿ(ಅಪಮಾನಿತರಾಗಿ ಅಲ್ಲ, ಗಮನಿಸಿ) ಸ್ವದೇಶಕ್ಕೆ ಮರಳಿದ ತಕ್ಷಣ ಮು೦ಬೈಯಲ್ಲಿ ತಾಜ್ (Hotel TAJ) ಎ೦ಬ ಬೃಹತ್ ಹೋಟೇಲೊ೦ದನ್ನು ಆರ೦ಭಿಸಿ, ಅದರಲ್ಲಿ ಭಾರತೀಯರಿಗೆ ಆದ್ಯತೆ ನೀಡುವ೦ತೆ ಮಾಡಿದ ಮಹಾನ್ ದೇಶಭಕ್ತರು , “ಭಾರತದ ಕೈಗಾರಿಕಾ ಕ್ರಾಂತಿಯ ಜನಕ” ಜೆಮ್ ಸೆಟ್ ಜಿ. ಟಾಟಾ….. ಇವರ ಆಸೆಗಳಿಗೆ ಬೆನ್ನೆಲುಬಾಗಿ, ಅವರ ಅನೇಕ ಕನಸುಗಳ ಸಾಕಾರಗೊಳಿಸಿದ ಅವರ ಮಾನಸ ಪುತ್ರ(ಹತ್ತಿರ ಸ೦ಬ೦ಧಿ)ಜೆ.ಆರ್.ಡಿ.ಟಾಟಾ (J.R.D. Tata)ರ ಜನ್ಮದಿನವಿ೦ದು ಜುಲೈ 29.
ಬೃಹತ್ ಟಾಟಾ ಸಂಸ್ಥೆಯನ್ನು 53 ವರ್ಷಗಳ ಕಾಲ ಸಮರ್ಥವಾಗಿ ನಡೆಸಿ, 80ಕ್ಕೂ ಅಧಿಕ ಕ೦ಪೆನಿಗಳನ್ನು ಸ್ಥಾಪಿಸಿ, ಭಾರತದ ಕೈಗಾರಿಕಾ ನಕ್ಷೆಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಭಾರತೀಯರಲ್ಲೊಬ್ಬರು ಜೆ.ಆರ್.ಡಿ.ಟಾಟಾ.ದೇಶದ ಅತ್ಯುನ್ನತ ಗರಿಮೆ ಭಾರತರತ್ನ (1992ರಲ್ಲಿ ) ಪಡೆದ ಏಕೈಕ ಕೈಗಾರಿಕೋದ್ಯಮಿಯಾದ ಇವರ ಪೂರ್ತಿ ಹೆಸರು ಜಹಾಂಗೀರ್ ರತನ್ ಜಿ ದಾದಾಭಾಯಿ ಟಾಟಾ (Jehangir Ratanji Dadabhoy Tata).ಟಾಟಾರವರ ಉತ್ಪಾದನೆ ಉಕ್ಕಿನಿಂದ ಪ್ರಾರಂಭಿಸಿ ವಿದ್ಯುತ್ ಶಕ್ತಿ, ಮೊಟಾರ್ ಕಾರು ಮತ್ತು ಲಾರಿಗಳು, ಸಿಮೆಂಟ್, ರಸಾಯನಿಕ ವಸ್ತುಗಳು, ವಸ್ತ್ರೋದ್ಯಮ, ಪೇಪರ್, ಮಾಹಿತಿ ತಂ ತ್ರಜ್ಞಾನ, ದಿನನಿತ್ಯದ ಬಳಕೆಯ, ಉಪ್ಪು,ಸಾಬೂನ್, ಶ್ಯಾಂಪೂ, ಟೀ, ಕಾಫೀ, ಹೆಂಗೆಳೆಯರ ಸೌಂದರ್ಯವರ್ಧಕ ಪರಿಕರಗಳು, ಇತ್ಯಾದಿಗಳವರೆಗೆ ಇದೆ.
ಸಂಪ್ರದಾಯಶೀಲ ಪಾರ್ಸಿ ಝೊರಾಸ್ಟ್ರಿಯನ್ ಕುಟುಂಬದ ಆರ್.ಡಿ ಟಾಟಾ ಮತ್ತು ಸೂನಿ (ಮೂಲ ಫ್ರೆಂಚ್ ಹೆಸರು ಸುಝಾನ್ ಬ್ರೈರ್ ) ದಂಪತಿಗಳ 5 ಜನ ಮಕ್ಕಳಲ್ಲಿ ಎರಡನೆಯವರಾಗಿ ಜೆಹಾಂಗೀರ್ 29 ಜುಲೈ 1904 ರಲ್ಲಿ ಪ್ಯಾರಿಸ್’ನಲ್ಲಿ ಹುಟ್ಟಿದರು. ಜೆಹಾಂಗೀರ್ (ಎಲ್ಲರೂ ಅವರನ್ನು ’ಜೆ’ ಎಂದು ಸಂಬೋಧಿಸುತ್ತಿದ್ದರು) ಎನ್ನುವುದಕ್ಕೆ ಪರ್ಷಿಯನ್ ಭಾಷೆಯಲ್ಲಿ ವಿಶ್ವವಿಜೇತ ಎನ್ನುವ ಅರ್ಥವಿದೆ. ಜೆ.ಆರ್.ಡಿಯವರ ವಿದ್ಯಾಭ್ಯಾಸ ಮೊದಲು ಫ್ರಾನ್ಸ್,ಜಪಾನ್ ಮತ್ತು ಭಾರತದಲ್ಲಿ ನಡೆಯಿತು. ಅವರಿಗೆ ಮಾತೃ ಭಾಷೆ ಫ್ರೆಂಚ್ ಭಾಷೆ ಬಿಟ್ಟರೆ ಬೇರೆಯೇನೂ ಬರುತ್ತಿರಲಿಲ್ಲವಾದ್ದರಿಂದ ಅವರ ಇಂಗ್ಲೀಷ್ ಭಾಷೆಯನ್ನು ಉತ್ತಮ ಪಡಿಸಲು, ಒಂದು ವರ್ಷ ಇಂಗ್ಲೆಂಡಿನಲ್ಲಿ ‘ಕ್ರಾಮರ್‘ ಶಾಲೆಗೆ ಸೇರಿಸಿದರು.1909ರಲ್ಲಿ ಫ್ರಾನ್ಸಿನಲ್ಲಿ ವಾಸಿಸುತ್ತಿದ್ದಾಗ ನೆರೆಯ ವೈಮಾನಿಕ Louis Bleriotರವರಿಂದ ವಿಮಾನದ ಬಗ್ಗೆ ಆಸಕ್ತಿ ಹುಟ್ಟಿತು. 1925ರಲ್ಲಿ ವಿದ್ಯಾಭ್ಯಾಸ ಮುಗಿಸಿ ತಂದೆಯವರ ಆದೇಶದಂತೆ ಭಾರತಕ್ಕೆ ಬಂದು ‘ಟಾಟಾ ಸನ್ಸ್ ಕಂಪೆನಿ’ ಯ ಅಪ್ರೆಂಟಿಸ್ ಆಗಿ, ಈಗಿನ ಮುಂಬೈಗೆ ಪಾದಾರ್ಪಣೆ ಮಾಡಿದರು. ಅನೇಕ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿ ಉತ್ಪಾದನೆಯಲ್ಲಿ ಮತ್ತು ಗುಣಮಟ್ಟದಲ್ಲಿ ಅಧಿಕ ಪ್ರಗತಿಯನ್ನು ತರಲು ಸದಾ ಪ್ರಯತ್ನಿಸಿದರು.ಭಾರತದ ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಅಂತ್ಯಗೊಳಿಸಲು ತಾವು ಸ್ವತಃ ಕಂಕಣಬದ್ಧರಾಗಿ ಕೆಲಸ ಮಾಡಿದ್ದಲ್ಲದೆ ಭಾರತದ ಸ್ತ್ರೀಯರ ವಿದ್ಯಾಭ್ಯಾಸ ಹಾಗೂ ಅವರನ್ನು ಪೋಷಿಸುವ ಸೇವಾ ಸಂಸ್ಥೆಗಳ ಸುವ್ಯಸ್ಥಿತ ಕೆಲಸ ಕಾರ್ಯಗಳ ಮಹತ್ವದ ಬಗ್ಗೆ ಒತ್ತು ಕೊಟ್ಟರು.
“ಭಾರತದ ಕೈಗಾರಿಕಾ ಕ್ರಾಂತಿಯ ಜನಕ” ಜೆಮ್ ಸೆಟ್ ಜಿ. ಟಾಟಾ(Jamshetji Tata ) ರ ಹತ್ತಿರ ಸಂಬಂಧಿಯಾದ ಜೆ.ಆರ್.ಡಿ. ಟಾಟಾ, ಅವರ ಗರಡಿಲ್ಲಿ ಪಳಗಿ ಮೂಲ ಟಾಟಾ ಅವರ ಹೆಸರನ್ನು ಅಮರಗೊಳಿಸಿದ ಟಾಟಾ ಸಂಸ್ಥೆಯ ಹಲವು ನಿಷ್ಠ ಕಾರ್ಯಶೀಲರಲ್ಲಿ ಅಗ್ರಗಣ್ಯರು. ‘ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ‘ ಅವರು ತಮ್ಮ ಮಕ್ಕಳಾದ ‘ಸರ್ ದೊರಾಬ್ ಟಾಟ ‘ಹಾಗೂ ‘ಸರ್ ರತನ್ ಟಾಟಾ‘ ಅವರಷ್ಟೇ ಪ್ರಾಮುಖ್ಯತೆಯನ್ನು’ಆರ್.ಡಿ.ಟಾಟಾ’ ರವರಿಗೂ, ಕೊಡುತ್ತಿದ್ದರು. ಆರ್.ಡಿ.ಯವರ ವ್ಯವಹಾರ ಜ್ಞಾನ, ಮೇಧಾವಿತನ, ಮತ್ತು ಉದ್ಯಮವನ್ನು ಪ್ರಗತಿಯತ್ತ ಒಯ್ಯುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡು ಪ್ರಗತಿ ಸಾಧಿಸುತ್ತಿದ್ದ ಪರಿ, ಜಮ್‍ಸೆಟ್‍ಜಿ ಟಾಟರಿಗೆ ಪ್ರಿಯವಾಗಿತ್ತು. ತಮ್ಮ ತರುವಾಯ, ಟಾಟಾ ಉದ್ಯಮದ ಜವಾಬ್ದಾರಿಯನ್ನು ಹೊರಬಲ್ಲ ಒಬ್ಬ ಸಮರ್ಥ ಪ್ರವರ್ತಕನಂತೆ ಅವರಿಗೆ ಗೋಚರಿಸಿದರು. ಟಾಟಾ ಸಂಸ್ಥೆ, ನಮ್ಮ ದೇಶದ ಅತ್ಯಂತ ಭಾರಿ ಉದ್ಯಮಗಳನ್ನು ಪ್ರಪ್ರಥಮವಾಗಿ ಸ್ಥಾಪಿಸುವದರ ಜೊತೆಗೆ, ಅನೇಕ ಹೊಸ ಹೊಸ ಉದ್ಯಮ ಕ್ಷೇತ್ರಗಳನ್ನು ಜನತೆಗೆ ಕೊಟ್ಟು, ಭಾರತವು ಅಂತಾರಾಷ್ಟ್ರೀಯ ಉದ್ಯಮ ವಲಯದಲ್ಲಿ ಮಂಚೂಣಿಯಲ್ಲಿ ಮುಂದುವರೆಯುವಂತೆ ಹೊಸ ದಾರಿಗಳನ್ನು ಸೃಷ್ಟಿಸಿತ್ತು.1930 ರಲ್ಲಿ ಇವರು ಥೇಲ್ಮ ವಿಕಾಜಿಯವರನ್ನು ವಿವಾಹವಾದರು. 1946 ರಲ್ಲಿ, ಜೆ. ಆರ್. ಡಿ. ಟಾಟಾರವರ, ಪ್ರೀತಿಯ ಕಂಪೆನಿ ,ಟಾಟಾ ಏರ್ಲೈನ್ಸ್ (Tata Airlines) ಸ್ವತಂತ್ರ ಕಂಪೆನಿಯಾಯಿತು. 2 ವರ್ಷಗಳ ನಂತರ,ಜೆ ‘ಟಾಟಾ ಏರ್ ಲೈನ್ಸ್ (ಇಂಟರ್ನ್ಯಾಷನಲ್)’, ಸ್ಥಾಪಿಸಿದರು. ಇವರು ಅ೦ತಾರಾಷ್ಟ್ರೀಯ ವಾಯುಯಾನ ಸ೦ಘ(International Air Transport Association- IATA) ದ ಅಧ್ಯಕ್ಷರಾಗಿಯೂ ದುಡಿದಿದ್ದರು.ಅಂದಿನ ದಿನಗಳಲ್ಲಿ ಜೆ ಭಾರತದಲ್ಲಿ, ಪೈಲೆಟ್ ಲೈಸೆನ್ಸ್ ಪಡೆದ ಪ್ರಥಮ ಭಾರತೀಯರಾಗಿದ್ದರು.
ಜೆ ಆರ್ ಡಿ ಅವರು ಭಾರತಕ್ಕೆ ನೀಡಿರುವ ಮಹತ್ವದ ಕಾಣಿಕೆಗಳಲ್ಲಿ ವಿಜ್ಞಾನ, ತಂತ್ರಜ್ಞಾನ ಕುರಿತಾದ ಶೈಕ್ಷಣಿಕ ಪದ್ಧತಿಗಳ ಅಭಿವೃದ್ಧಿ ಕ್ಷೇತ್ರದಲ್ಲಿ ಮಾಡಿದ ಕೆಲಸ ಮತ್ತು ನೀಡಿದ ಪ್ರೋತ್ಸಾಹಗಳು ಪ್ರಧಾನವಾದದ್ದು. ಅಂದಿನ ದಿನಗಳಲ್ಲಿ ಬೆಂಗಳೂರಿನ ಈಗಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್(IISc), “ಟಾಟಾ ಇನ್ಸ್ಟಿಟ್ಯೂಟ್” ಎ೦ದು ಕರೆಯಲ್ಪಡುತ್ತಿತ್ತು. ಜೆ ಆರ್ ಡಿ ಅವರು 1932ರಲ್ಲಿ ಸರ್ ದೊರಾಬ್ಜಿ ಟಾಟಾ ಟ್ರಸ್ಟ್ ಪ್ರಾರಂಭಿಸಿ ಐವತ್ತು ವರ್ಷಗಳ ಕಾಲ ಅದರ ಸೂತ್ರಧಾರಿಯಾಗಿದ್ದರು. 1941 ರ ವರ್ಷದಲ್ಲಿ ಈ ಟ್ರಸ್ಟ್ ಏಷ್ಯಾ ಖಂಡದಲ್ಲೇ ಪ್ರಪ್ರಥಮವಾದ ‘ಟಾಟಾ ಮೆಮೋರಿಯಲ್ ಸೆಂಟರ್ ಫಾರ್ ಕ್ಯಾನ್ಸರ್, ರಿಸರ್ಚ್ ಅಂಡ್ ಟ್ರೀಟ್ ಮೆಂಟ್(Tata Memorial Hospital for Cancer Research & Treatment)’ ಸಂಸ್ಥೆಯನ್ನು ಸ್ಥಾಪಿಸಿತು. 1936ರಲ್ಲಿ ‘ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್’ ಸ್ಥಾಪಿತವಾಯಿತು. 1945 ರ ವರ್ಷದಲ್ಲಿ ‘ದಿ ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್’ ಮತ್ತು ‘ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್’ ಸಂಸ್ಥೆಗಳನ್ನು ಹುಟ್ಟು ಹಾಕಿತು.ಭಾರತ ದೇಶದಲ್ಲಿ ಯಂತ್ರೀಕರಣದಿಂದ ಉತ್ಪಾದನೆ ಹೆಚ್ಚಿಸಲು, ‘ಜೆ ‘ ರವರ ಮನಸ್ಸು ಹಾತೊರೆಯುತ್ತಿತ್ತು. ತಮ್ಮ ಜೊತೆಗೆ,ಆಗಿನ ಭಾರತದ ಸುಪ್ರಸಿದ್ಧ ಉದ್ಯಮಿಗಳಾದ, ‘ಜಿ.ಡಿ.ಬಿರ್ಲ, ‘ಕಸ್ತುರ್ ಭಾಯ್ ಲಾಲ್ ಭಾಯ್‘ ಮುಂತಾದವರನ್ನು ಸೇರಿಸಿ ಕೊಂಡರು. ಟೆಕ್ನೋಕ್ರಾಟ್, ‘ಜಾನ್ ಮಥಾಯ್‘, ಅರ್ದೇಶಿರ್ ದಲಾಲ್, ಎ.ಡಿ.ಶ್ರಾಫ್, ೧೯೪೪ ರ ಜನವರಿಯಲ್ಲಿ ಬಾಂಬೆ ಪ್ಲಾನ್, ತಯಾರಿಸಿದರು. ಇದು “Plan of Economic Development for India “, ಎಂದು ಪ್ರಸಿದ್ಧಿಯಾಗಿದೆ. ಅಣುಶಕ್ತಿ ಜನಕ ಹೋಮಿ ಜಹಾ೦ಗೀರ್ ಬಾಬಾರಿಗೆ ಅಣುಶಕ್ತಿ ಸ್ಥಾವರ ಸ್ಥಾಪನೆಗೂ ಸಹಕಾರವಿತ್ತ ಇವರು ಕೈಯಾಡಿಸದ ಕ್ಷೇತ್ರವೆ೦ದರೆ ತ೦ಬಾಕು ಉದ್ಯಮ (liquor or tobacco.)ಮಾತ್ರವೇನೊ….. ಬದುಕಿನಲ್ಲಿ ಅನಂತತೆಯ ಕೈಗಾರಿಕಾ ಸಾಗರವನ್ನು ಸೃಷ್ಟಿಸಿದ ಮಹಾ ಮೇಧಾವಿ ಟಾಟಾ ರವರು ತಮ್ಮ79ನೇ ವಯಸ್ಸಿನಲ್ಲಿ 1993ರಲ್ಲಿ ನಮ್ಮನ್ನಗಲಿದರು. ‘ಭಾರತೀಯ ಸಂಸತ್ತು‘, ಶೋಕಾಚರಣೆಯ ಪ್ರಯುಕ್ತ, ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿತ್ತ೦ತೆ !!!
ಪಡೆದ ಪ್ರಮುಖ ಪ್ರಶಸ್ತಿಗಳು
-
1955ರಲ್ಲಿ ಪದ್ಮವಿಭೂಷಣ
-
1985ರಲ್ಲಿ ಗೋಲ್ಡ್ ಏರ್ ಮೆಡಲ್
-
1988ರಲ್ಲಿ ದಾದಾಬಾಯಿ ನವರೋಜಿ ಸ್ಮಾರಕ ಪ್ರಶಸ್ತಿ
-
1992ರಲ್ಲಿ ಭಾರತರತ್ನ
-
ದೇಶ ವಿದೇಶಗಳ ಹಲವಾರು ವಿಶ್ವವಿದ್ಯಾಲಯಗಳ ಗೌರವ ಡಾಕ್ಟರೇಟುಗಳು
ಸ್ಥಾಪಿತ ಮುಖ್ಯ ಸ೦ಸ್ಥೆಗಳು
-
ಟಿಸಿಎಸ್(Tata Consultancy Services )
-
ಟಾಟ ಮೋಟಾರ್ಸ್(Tata Motors)
-
ಟೈಟನ್ ಇಂಡಸ್ಟ್ರೀಸ್( Titan Industries)
-
ಟಾಟ ಟೀ (TATA Tea)
-
ವೋಲ್ಟಾಸ್ (Voltas)
-
ಏರ್ ಇಂಡಿಯಾ (Air India)
-
T.I.F.R, Mumbai
-
N.C.P.A, Mumbai
ಪತ್ರೋತ್ತರ ಘಟನೆ 1 :
ಜೆಆರ್‌ಡಿಯವರ ವ್ಯಕ್ತಿತ್ವ ಬಯಲಿಗೆಳೆಯುವ ಪತ್ರ ಪರಿಚಯವನ್ನು ವಿಶ್ವೇಶ್ವರ ಭಟ್ಟರು ತಮ್ಮ ನೂರೆ೦ಟು ಮಾತೊ೦ದರಲ್ಲಿ ಹೀಗೆ ವಿವರಿಸಿದ್ದಾರೆ… ಜೆಆರ್‌ಡಿಯವರನ್ನು ಮಾದರಿಯಾಗಿಟ್ಟುಕೊಳ್ಳುವ ಯುವಕರು ಅವರೆದುರು ತಮ್ಮ ಆಸೆಯನ್ನು ಹರವಿಡಬೇಕು ಎಂದೂ ಬಯಸುತ್ತಿದ್ದರು. ಕಾಲೇಜು ಹುಡುಗನೊಬ್ಬ ಇಂತದೇ ಬಯಕೆಯಲ್ಲಿ ಟಾಟಾ ಅವರಿಗೆ ಪತ್ರ ಬರೆಯು ತ್ತಾನೆ. ಹೇಗೆಂದರೂ ಅದು ಕಸದ ಬುಟ್ಟಿಗೆ ಸೇರುವ ಸಾಧ್ಯತೆಯೇ ಹೆಚ್ಚು ಎಂದುಕೊಂಡಿದ್ದವನಿಗೆ ಜೆಆರ್‌ಡಿ ಅವರಿಂದ ಸಿಕ್ಕ ಮಾರುತ್ತರ ಹೀಗಿದೆ….
ಪ್ರಿಯ xxxxx,
ಏಪ್ರಿಲ್ 28ರ ನಿಮ್ಮ ಪತ್ರಕ್ಕೆ ಧನ್ಯವಾದ.
ನಾನೀಗ ನೀಡುತ್ತಿರುವ ಪ್ರತಿಕ್ರಿಯೆಯಿಂದ- ನಿಮ್ಮ ಪತ್ರ ಕಸದ ಬುಟ್ಟಿ ಸೇರಬಹುದು, ನೋವುಣ್ಣಬೇಕಾದ ಪ್ರಮೇಯ ಬರಬಹುದು ಹಾಗೂ ನನ್ನಂಥ ಕೈಗಾರಿಕೋದ್ಯಮಿಗೆ ನಿಮಗೆ ಪ್ರತಿಕ್ರಿಯಿಸಲು ಸಮಯವಿರುವುದಿಲ್ಲ ಎಂಬ ನಿಮ್ಮ ಕಲ್ಪನೆಗಳೆಲ್ಲ ಸುಳ್ಳಾಗಿವೆ!
ಕೈಗಾರಿಕೋದ್ಯಮಿ ಆಗುವುದು ಖಚಿತ ಎಂದು ನಿರ್ಧರಿಸಿರುವ ನೀವು ನನ್ನ ಸಲಹೆ ಅಪೇಕ್ಷಿಸಿರುವುದು ತಿಳಿಯಿತು. ಬದುಕಿನ ಪ್ರಾರಂಭಿಕ ಹಂತದ ವಯೋಮಾನದಲ್ಲಿರುವ ನಿಮಗೆ ಈಗ ತಕ್ಷಣಕ್ಕೆ ನಾನು ನೀಡಬಹುದಾದ ಸಲಹೆ ಎಂದರೆ, ಮುಂದಿನ ನಿಮ್ಮ ಕೈಗಾರಿಕಾ ವೃತ್ತಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಲೇಜು ವಿದ್ಯಾಭ್ಯಾಸವನ್ನು ಸಮರ್ಪಕವಾಗಿ ಮಾಡಿ. ಗಣಿತ ಹಾಗೂ ತಾಂತ್ರಿಕ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದೆ ಎಂದಾದರೆ ನೀವು ಎಂಜಿನಿಯರ್ ಆಗಿ ಎಂದು ನಾನು ಸಲಹೆ ನೀಡುತ್ತೇನೆ. ಅದಿಲ್ಲದಿದ್ದರೆ ಬಿ.ಕಾಂ. ಇಲ್ಲವೇ ಕಾನೂನು ಪದವಿ ಪಡೆದುಕೊಳ್ಳಿ. ಇದರಲ್ಲಿ ಯಾವುದನ್ನೇ ಆಯ್ದುಕೊಂಡರೂ ಭವಿಷ್ಯದಲ್ಲಿ ಸಹಕಾರಿಯಾಗುತ್ತದೆ. ನಿಮ್ಮ ತಂದೆ ಕಂಪನಿ ಕಾರ್ಯಾಧಿಕಾರಿ ಎಂದು ತಿಳಿಸಿರುವಿರಿ. ಹಾಗಿರುವಾಗ ಸಲಹೆ ನೀಡುವುದಕ್ಕೆ ಯಾರೂ ಇಲ್ಲ ಎಂದು ನೀವೇಕೆ ಬೇಜಾರು ಮಾಡಿಕೊಳ್ಳುತ್ತಿದ್ದೀರಿ ಎಂಬುದೇ ಅರ್ಥವಾಗುತ್ತಿಲ್ಲ. ಈ ವಿಷಯದಲ್ಲಿ ನಿಮ್ಮ ತಂದೆಯ ಸಲಹೆಯನ್ನೂ ಪಡೆಯಿರಿ.
ಕೊನೆಯದಾಗಿ, ನಿಮ್ಮ ಭವಿಷ್ಯಕ್ಕೆ ತುಂಬಾ ನಿರ್ಣಾಯಕವಾಗಿರುವ ಇಂಗ್ಲಿಷ್ ಭಾಷೆ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ. ನೀವು ಏನನ್ನೇ ಮಾಡುವುದಿದ್ದರೂ ಅದರಲ್ಲಿ ಸಂಕ್ಷಿಪ್ತತೆ ಹಾಗೂ ನಿಯಮ ಬದ್ಧತೆ ರೂಢಿಸಿಕೊಳ್ಳಲು ಪ್ರಯತ್ನಿಸಿ. ಈ ವಿಷಯದಲ್ಲಿ ನೀವು ಪಳಗಬೇಕಿದೆ ಎಂಬುದನ್ನು ನಿಮ್ಮ ಪತ್ರವೇ ತಿಳಿಸುತ್ತದೆ. ಉದಾಹರಣೆಗೆ, ನಾನು ನಿಮ್ಮ ಪತ್ರವನ್ನು ಏಪ್ರಿಲ್ 22ರಂದೇ ಪಡೆದೆನಾದರೂ ಅದರ ಮೇಲೆ ಏಪ್ರಿಲ್ 28ರ ದಿನಾಂಕವಿತ್ತು!
ನಿಮ್ಮ ಯಶಸ್ವಿ ವೃತ್ತಿಗೆ ಶುಭ ಹಾರೈಸುತ್ತ,
ನಿಮ್ಮ ವಿಶ್ವಾಸಿ,
ಜೆ. ಆರ್. ಡಿ. ಟಾಟಾ
-
ಪತ್ರೋತ್ತರ ಘಟನೆ 2:
ಸುಧಾ ಮೂರ್ತಿಯವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಓದುತ್ತಿದ್ದ ದಿನಗಳಲ್ಲಿ ಟಾಟಾ ಸಂಸ್ಥೆಯಿಂದ ಪುರುಷ ಅಭ್ಯರ್ಥಿಗಳಿಗಾಗಿ ಇಂಜಿನಿಯರಿಂಗ್ ಹುದ್ದೆಗೆ ಆಹ್ವಾನ ನೀಡಲಾಗಿತ್ತು. ಇದನ್ನು ಕಂಡ ಸುಧಾ ಮೂರ್ತಿ ಮಹಿಳೆಯರಿಗೆ ಈ ಹುದ್ದೆಗೆ ಆಹ್ವಾನವೇಕಿಲ್ಲ ಎಂದು ಒಂದು ಪೋಸ್ಟ್ ಕಾರ್ಡಿನಲ್ಲಿ ಜೆ ಆರ್ ಡಿ ಅವರಿಗೆ ಪತ್ರ ಬರೆದರು. ಜೆ ಆರ್ ಡಿ ಅವರು ಅಂದು ಆ ಪತ್ರ ಓದಿ ತಕ್ಷಣವೇ ಕಾರ್ಯ ಪ್ರವೃತ್ತರಾದರು ಎಂದರೆ ಅವರು ಎಷ್ಟರ ಮಟ್ಟಿಗೆ ಸಮಗ್ರವಾಗಿ ಪ್ರತಿಯೊಂದನ್ನೂ ಶ್ರದ್ಧೆಯಿಂದ ಗಮನಿಸುತ್ತಿದ್ದರು ಎಂಬ ಅರಿವಾಗುತ್ತದೆ. ಸುಧಾ ಮೂರ್ತಿಯವರು ಆ ಲೇಖನದಲ್ಲಿ ತಾವು ತಮ್ಮ ಪತಿ ನಾರಾಯಣ ಮೂರ್ತಿ ಅವರೊಂದಿಗೆ ಟಾಟಾ ಸಂಸ್ಥೆಯಿಂದ ಹೊರ ಬಂದು ಸ್ವಂತ ಉದ್ಯಮ ಸ್ಥಾಪಿಸಲಿದ್ದೇವೆ ಎಂದಾಗ ಜೆ ಆರ್ ಡಿ ಹೇಳಿದರಂತೆ “ನೀವು ಖಂಡಿತ ಯಶಸ್ವಿಯಾಗುತ್ತೀರಿ. ಹಾಗೆ ಯಶಸ್ವಿಯಾದಾಗ ದೇಶಕ್ಕಾಗಿ ಒಳ್ಳೆಯ ಕೆಲಸವನ್ನು ಮಾಡಿ” ಎಂದು. ಈ ಮಾತು ವಿದೇಶದ ವಾತಾವರಣದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದರೂ ಜೆ ಆರ್ ಡಿ ಅವರಿಗಿದ್ದ ಈ ಭಾರತ ಭೂಮಿಯ ಬಗೆಗಿನ ಪ್ರೇಮವನ್ನು ಮತ್ತು ಸಾಮಾಜಿಕ ಜವಾಬ್ಧಾರಿಗಳ ಕುರಿತ ಕಾಳಜಿಗಳನ್ನು ತೋರುತ್ತದೆ.
Facebook ಕಾಮೆಂಟ್ಸ್