X

ಈ ಮಳೆಗಾಲದಲ್ಲಿ ಕಳೆದು ಹೋಗಿದ್ದು

ಕಳೆದ ಬಾರಿಯ ಮಳೆಗಾಲದಲ್ಲಿ ಅವನು ತೊರೆದು ಹೋದ ನೋವಿತ್ತು. ಈ ಮಳೆಗಾಲದಲ್ಲಾದರೂ ನೆನಪಿನ ಬುತ್ತಿಗೆ ಒಂದಷ್ಟು ಸಿಹಿ ನೆನಪುಗಳನ್ನು ತುಂಬಿಸುವ ಆಸೆಯಿತ್ತು. ಆದರೆ ಈ ಬಾರಿಯೂ ಅದು ಕನಸಾಗೇ ಉಳಿದಿದೆ. ಗೋಧಿ ಬಣ್ಣ, ಸಾಧಾರಣ ಮೈ ಕಟ್ಟು ಸಿನಿಮಾ ನೋಡೋಕೆ ನಾಳೆ ಹೋಗೋಣ ಅಂತ ಪ್ಲಾನ್‌ ಹಾಕಿದ್ದ ಸಂಡೇ ಮಾರ್ನಿಂಗ್‌ ಬಂದಿದ್ದು ಕಹಿ ಸುದ್ದಿ. ಅಜ್ಜಿಗೆ ಹುಷಾರಿಲ್ಲ..

ರಾತ್ರಿ ಮಲಗಿದ್ದು ಲೇಟು, ಮತ್ತೆ ಬೆಳಗ್ಗೆ ಕಾಲ್‌ ಬಂದು ನಿದ್ರಾಭಂಗವಾಗೋದು ಬೇಡ ಅಂತ ಸೈಲೆಂಟ್ ಮೋಡ್‌ಗೆ ಇಟ್ಟಿದ್ದ ಮೊಬೈಲ್‌ನಲ್ಲಿ ಅಪ್ಪ,ಅಮ್ಮನ 10-15 ಮಿಸ್‌ಕಾಲ್‌. ಜತೆಗೆ ಅಜ್ಜಿಗೆ ಹುಷಾರಿಲ್ಲ. ಕಮ್‌ ಸೂನ್‌ ಅನ್ನೋ ತಂಗಿಯ ಮೆಸೇಜ್‌. ಪ್ರತಿ ಸಾರಿ ಹುಷಾರು ತಪ್ಪುವಂತೆ ಆಗಿದೆಯೇನೋ. ಇಲ್ಲ ಸೀರಿಯಸ್‌ ಆಗಿದ್ದಾರಾ ಅನ್ನೋ ಗೊಂದಲದಲ್ಲೇ ಮನೆ ಬಿಟ್ಟಾಯಿತು.

ಡಬಲ್‌ಚಾರ್ಜ್‌ ಕೊಟ್ಟು ಐರಾವತ ಹತ್ತಿದ್ರೂ, ನಿಲ್ಲದ ಆತಂಕ. ಬಾಲ್ಯದಲ್ಲಿ ಅಜ್ಜಿ ಲೆಕ್ಕ ಹಾಕದೆ ನೀಡಿದ ಪ್ರೀತಿಯ ಬಗ್ಗೆ ನೆನಪಿಸಿಕೊಂಡಾಗ ಕಣ್ಣಂಚಲ್ಲಿ ನೀರು. ಅಜ್ಜಿ ತೀರಿಕೊಂಡ್ರು ಅನ್ನೋ ಸುದ್ದಿ ಬಂದಾಗಲಂತೂ ಮತ್ತೆ ನೀರವ ಮೌನ. ಕೊನೆಯ ಬಾರಿ ನೋಡೋಕೆ ಸಿಕ್ಕಿಲ್ಲವೆಂಬ ಕೊರಗು.

ಕಳೆದ ಸಾರಿ ಹೋದಾಗ ರಜೆಯಿರಲ್ಲಿಲ್ಲವೆಂಬ ಕಾರಣಕ್ಕೆ ಅಜ್ಜಿಯನ್ನು ನೋಡದೆ ಹೋದೆನಲ್ಲಾ ಅನ್ನೋ ನೋವು ಕಾಡ ತೊಡಗುತ್ತೆ. ಆಗಲೇ ಅಜ್ಜಿಯಿದ್ದ ತರವಾಡು ಮನೆಗೆ ಹೋಗಿ ಬಂದು ಬಿಡಬೇಕಿತ್ತು. ಅಜ್ಜಿಯ ಪಕ್ಕ ಕುಳಿತು ಸುಕ್ಕು ಗಟ್ಟಿದ ಕೈಯನ್ನು ಹಿಡಿದು ಒಂದಷ್ಟು ಮಾತನಾಡಬೇಕಿತ್ತು. ಬಾಡಿದ ಮುಖದಲ್ಲಿ ಒಂದಷ್ಟು ನಗು ತರಿಸಿ ಬದುಕುವ ಭರವಸೆ ತುಂಬಬೇಕಿತ್ತು. ಕ್ಷೀಣವಾದ ದನಿಯನ್ನು ಕಿವಿಗೊಟ್ಟು ಆಲಿಸಬೇಕಿತ್ತು. ಆದ್ರೆ ಈಗ ಅದ್ಯಾವುದೂ ಸಾಧ್ಯವಿಲ್ಲ.

ಅಜ್ಜಿ ತೀರಿಕೊಂಡ್ರು ಅಂದಾಗ ಯಾರಿಂದಲೂ ಅಂತಹಾ ಪ್ರತಿಕ್ರಿಯೆಯಿಲ್ಲ. ನಗರದಲ್ಲಿ ಬೆಳೆದ ಮಂದಿಗೆ ಅಜ್ಜಿ ಅನ್ನೋದು ಒಂದು ಸಂಬಂಧದ ಹೆಸರಷ್ಟೇ. ಯಾವತ್ತೋ ಒಂದು ದಿನ ನೋಡಿ, ಸುಮ್ಮನೆ ಕಾಲು ಮುಟ್ಟಿ ನಮಸ್ಕರಿಸಿದ ಶಾಸ್ತ್ರ ಮಾಡಿದರೆ ಸಂಬಂಧ ಮುಗಿಯಿತು. ಆದ್ರೆ ನನ್ನ ಬಾಳಲ್ಲಿ ಅಜ್ಜಿಯ ಪಾತ್ರ ಅದೆಷ್ಟು ಮಹತ್ವದ್ದು ಅನ್ನೋದು ನನಗೆ ಮಾತ್ರ ತಿಳಿದಿರುವ ವಿಷ್ಯ. ಯಾರಿಗೂ ಹೇಳಿಕೊಳ್ಳಲಾಗದ, ಯಾರಿಗೂ ಅರ್ಥವಾಗದ ಅನೂಹ್ಯ ಸಂಬಂಧ.

ಅಮ್ಮನಿಗಿಲ್ಲದ ಅಪೂರ್ವ ಆಪ್ತತೆ ಅಜ್ಜಿಯಲ್ಲಿ. ಎಲ್ಲೆಂಲ್ಲಿದಲೂ ಚಿಲ್ಲರೆ ಹುಡುಕಿ ಪ್ರೀತಿಯಿಂದ ಕೈಗಿಡುವ ಅಜ್ಜಿಯ ಪರಿಪಾಠ ಕಾಲೇಜು ಮೆಟ್ಟಿಲು ಹತ್ತಿದ್ದರೂ ತಪ್ಪಿರಲ್ಲಿಲ್ಲ. ಚಾಕ್ಲೇಟ್‌ನಿಂದ ಹಿಡಿದು ಹೈಹೀಲ್ಡ್‌ ಚಪ್ಪಲಿ ತೆಗೆಯೋಕು ಅಜ್ಜಿಯ ಗಂಟಿನಲ್ಲಿದ್ದ ದುಡ್ಡು ನೆರವಾಗಿದೆ. ಅಮ್ಮನ ಬೈಗುಳ ಮರೆಸಿದ್ದು, ಅಜ್ಜಿಯ ಪ್ರೀತಿ. ದೊಡ್ಡವಳಾದ ಮೇಲಂತೂ ಅಜ್ಜಿ ಮಲಗುವ ದೇವರ ಕೋಣೆಯ ಮಗ್ಗುಲು ನನಗೆ ಖಾಯಂ. ಅಜ್ಜಿಯ ಗೊರಕೆ ಸದ್ದಿಗೆ ಮನೆಯವರೆಲ್ಲರೂ ಬೈದ್ರೂ, ಅದು ನನ್ನ ಪಾಲಿಗೆ ಇಂಪಾದ ಗಾನ. ನೀಟಾಗಿಟ್ಟ ಮಡಿಚಿಟ್ಟ ಅಜ್ಜಿಯ ಸೀರೆ, ವರಾಂಡದ ಹೊರಗೆ ಒರಗಿಸಿಟ್ಟಿರುವ ಅಜ್ಜಿಯ ಗೊರಬೆ ಎಲ್ಲವೂ ನನಗೆ ಪ್ರಿಯ.

ಇಳಿವಯಸ್ಸಿನಲ್ಲೂ ತೋಟದಲ್ಲೆಲ್ಲಾ ತಿರುಗಾಡಿ,ಅಡಿಕೆ ಹೆಕ್ಕಿ ತರುವ ಅಜ್ಜಿ ನನ್ನ ಪಾಲಿಗೆ ಉತ್ಸಾಹದ ಚಿಲುಮೆ. ಅಡಿಗೆಯಲ್ಲೂ ಆಕೆಯದು ಎತ್ತಿದ ಕೈ. ಬಸಳೆ ಸಾರು, ಹರಿವೆ ಪಲ್ಯ ಅವಳ ಕೈಯಡಿಗೆಯಲ್ಲಿ ತಿಂದರೇನೆ ಸೊಗಸು. ಮಳೆಗಾಲಕ್ಕೂ ಮೊದಲು ತಯಾರಾಗುತ್ತಿದ್ದ ಹಪ್ಪಳಕ್ಕೆ ಅಜ್ಜಿ ಒಂದು ಸಾರಿ ಹಾಸಿಗೆ ಹಿಡಿದಾಗಲೇ ಬ್ರೇಕ್ ಬಿದ್ದಿತ್ತು. ಅಜ್ಜಿಯ ಸಾವಿನ ನಂತರ  ಹಪ್ಪಳ, ಸಾಂತಾಣಿ, ಪುಳಿಕಂಟೆಯ ನೆನಪೂ ಸಹ ಹಾಗೆಯೇ ತೀರಿ ಹೋಯಿತು. ಆದ್ರೆ ಅಜ್ಜಿಯ ಕಾರ್ಯವೆಲ್ಲಾ ಮುಗಿದರೂ, ನನ್ನಲ್ಲಿದ್ದ ಒಂದೇ ಕೊರಗು. ನಾನು ಕೊನೆಯ ಬಾರಿ ಕೂಡಾ ಅಜ್ಜಿಯನ್ನು ನೋಡಲಾಗಲ್ಲಿಲ್ಲ. ಸಾಯುವ ಕೊನೆ ಕ್ಷಣದಲ್ಲಿ ನೆನಪಿರದಿದ್ದರೂ, ಸತ್ತ ಮೇಲೆ ನಾನು ನನ್ನ ಪ್ರೀತಿಯ ಮೊಮ್ಮಗಳನ್ನು ನೋಡಿಲ್ಲ ಅನ್ನೋದು ಅಜ್ಜಿಗೆ ತಿಳಿದಿರುತ್ತಲ್ಲ ಅನ್ನೋ ಪ್ರಶ್ನೆಯನ್ನೇ ಅಮ್ಮನಲ್ಲಿ ಸಾರಿ ಸಾರಿ ಕೇಳಿ ಬೈಸಿಕೊಂಡಿದ್ದಾಯಿತು. ಆ ರೀತಿ ನೆನಪಾಗಬಹುದೇನೋ ಅನ್ನೋದು ನನ್ನದೇ ಊಹನೆ.

ಹಾಗೆಯೇ ಏನೋ, ಸತ್ತವರಿಗೆ ಬಡಿಸುವ ಕಾರ್ಯ ಇರೋ ದಿನ ಯಾರದೋ ಮೈಯಲ್ಲಿ ಅಜ್ಜಿ ಬಂದು ಮಾತನಾಡುತ್ತಾರೆ ಅನ್ನೋ ನಿರೀಕ್ಷೆಯಲ್ಲಿ ನಾನು ಹೋಗಿದ್ದು ಸುಳ್ಳಾಯಿತು. ಅಜ್ಜಿ ಬರಲೇ ಇಲ್ಲ. ಅಜ್ಜಿ ಎಷ್ಟು ಒಳ್ಳೆಯವರು ನೋಡು, ಯಾರಿಗೂ ತೊಂದ್ರೆ ಕೊಡೋಕೆ ಇಷ್ಟಪಡಲ್ಲ ಅಂತ ಅಮ್ಮ ಹೇಳಿದ ಮಾತು ಇಷ್ಟವಾಗಲ್ಲಿಲ್ಲ. ನನ್ನ ಜತೆ ಮಾತನಾಡಲಾದರೂ ಅಜ್ಜಿ ಬರಲ್ಲಿಲ್ಲ ಅನ್ನೋ ಕೊರಗು ಈಗಲೂ ಇದೆ. ಪ್ರಾಯ ಹೋದಾಗಲ್ಲೆಲ್ಲಾ ಜೀವ ಇರುವುದನ್ನೇ ಮರೆತು ಬಿಡುವ ಈ ಜನ್ರ ನಡುವೆ ಇರುವುದಕ್ಕಿಂತ, ಅಲ್ಲೆಲ್ಲೂ ಕಾಣದ ಲೋಕದಲ್ಲಿ ಖುಷಿಯಿದ್ದೀತು ಅಂತ ಅಜ್ಜಿಗೂ ಅನಿಸಿರಬೇಕು.

ಅಜ್ಜಿಯ ಫೋಟೋ ನೋಡಿದಾಗಲ್ಲೆಲ್ಲಾ, ಆ ಮುಗ್ಧ ಮಾತುಗಳು, ಅಕ್ಕರೆಯ ನುಡಿ ಕಣ್ಮುಂದೆ ಬರುತ್ತದೆ. ಮೊಬೈಲ್ ಅದೆಷ್ಟು ಸಲ, ನೋ ಸ್ಪೇಸ್‌, ಡಿಲೀಟ್ ಸಂ ಫೈಲ್ಸ್‌ ಅಂತ ತೋರಿಸಿದ್ರೂ ಅಜ್ಜಿಯ ಫೋಟೋವಿನ್ನೂ ಮೊಬೈಲ್‌ನಲ್ಲಿ ಭದ್ರವಾಗಿಯೇ ಇದೆ. ಮನದಲ್ಲಿ ಅಚ್ಚಳಿಯದೆ ಛಾಪು ಮೂಡಿಸಿರುವ ಅಜ್ಜಿಯ ನೆನಪುಗಳು ಕೂಡಾ.

-ವಿನುತಾ ಪೆರ್ಲ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post