X

ಕರಾಳಗರ್ಭ

 

ನನ್ನ ಆಫೀಸಿನ ಟೇಬಲ್ ಮೇಲೆ ಕಾಲು ಚಾಚಿ ಕಣ್ಮುಚ್ಚಿ ಮಲಗಿರುವಾಗ ’ಮಿಂಚಾಗಿ ನೀನು ಬರಲು’ ಎಂಬ ಹಾಡಿನ ರಿಂಗ್’ಟೋನಿನೊಂದಿಗೆ ಎಬ್ಬಿಸಿತು ನನ್ನ ಮೊಬೈಲ್ ಫೋನ್.

ಇದು ನನ್ನದೇ ಆಫೀಸ್, ನಾನೊಬ್ಬನೆ ಇದ್ದಿದ್ದು, ಹಾಗಾಗಿ ನನ್ನ ಪ್ರಪಂಚ ಶಾಂತವಾಗಿದೆ ಅಂದು ಕೊಳ್ಳುತ್ತಿರುವಾಗಲೇ…ಛೆ! ಯಾರಿದು?

” ಹಲೋ, ವಿಜಯ್ ದೇಶಪಾಂಡೆಯವರು ತಾನೆ?” ಎಂದು ನನ್ನ ಮೊಬೈಲ್’ನಲ್ಲಿ ಕಿವಿಗೆ ಬಡಿದಿತ್ತು ಆಕೆಯ ದನಿ.

ಮೊದಲೇ ನನಗೆ ಹಿಂದಿನ ರಾತ್ರಿಯ ಭಾರೀ ಪಾರ್ಟಿಯ ಹ್ಯಾಂಗೋವರ್’ನಿಂದ ತಲೆ ಸಿಡಿಯುತಿತ್ತು.

“ನಾನಲ್ಲದಿದ್ದರೆ, ನನ್ನ ದ್ವನಿಯ ಭೂತ ಇರಬೇಕು ಇಲ್ಲಿ…”ಎಂದೆ ಬೇಸರವಾದವನಂತೆ.

ಒಂದು ಕ್ಷಣ ಅಹಿತಕರ ಮೌನ.

” ನೀವು ಒರಟರೆಂದು ಕೇಳಿದ್ದೆ, ಆದರೂ ಮೊದಲ ಬಾರಿಯೇ ಹೀಗೆ?…” ಎಂದು ಅನುಮಾನಿಸಿತು ಮುನಿದ ಹೆಣ್ಣಿನ ದನಿ.

” ಇದು ನನ್ನ ಒಳ್ಳೆ ಮೂಡ್’ನಲ್ಲಿ ಆಡಿದ ಮಾತು ಅನ್ಕೊಳ್ಳಿ..ಸರಿ, ನಾನೇ ವಿಜಯ್, ಏನಾಗಬೇಕಿತ್ತು?”

” ಆ ಟಿ. ವಿ’ ಚಾನೆಲ್’ನ “ಸುಂದರ ಸಂಸಾರ” ಸೀರಿಯಲ್’ನಲ್ಲಿ ಮಾಡುವ ಮೃದುಲಾ ಹೊಸಮನಿ ಗೊತ್ತು ತಾನೆ ನಿಮ್ಗೆ?”..ಎಂದಳು ಆಕೆ, ಎಲ್ಲರಿಗೂ ಗೊತ್ತಿರಲೇಬೇಕು ಎಂಬ ವಿಶ್ವಾಸದಿಂದ.

ನಾನು ಟೇಬಲ್’ನಿಂದ ಕಾಲು ಕೆಳಗಿಡುತ್ತಾ ನಿಡುಸುಯ್ದೆ.

“ಇಲ್ಲಾ, ಆ ಗೋಳು ಸೀರಿಯಲ್ ಬಂದ ತಕ್ಷಣ ನಾನು ಮೈನ್ ಸ್ವಿಚ್ ಆರಿಸುತ್ತೇನೆ ..”ಎಂದೆ.

ನನಗಿವತ್ತು ಯಾವ ಕ್ಲಯಂಟ್ ಕಾಟವೂ ಬೇಕಿರಲಿಲ್ಲ..

“ಹುಂ..!!”ಎಂದು ಗುಟುರು ಹಾಕಿ ಆಕೆ “ನೋಡಿ, ನಾನವರ ಸೆಕ್ರೆಟರಿ ವಿನುತಾ… ನಿಮ್ಮನ್ನು ಭೇಟಿ ಮಾಡಲು ಇವತ್ತು ಸಂಜೆ ಅವರು ನಿಮ್ಮ ಆಫೀಸಿಗೆ ಬರುತ್ತಾರಂತೆ..” ಎಂದಳು, ನಿಮಗೆ ಆಫೀಸ್ ಕೂಡಾ ಇದೆಯೆ ಎನ್ನುವ ಅನುಮಾನದ ದನಿಯಲ್ಲಿ.

“ಆದರೆ ನನ್ನ ಆಫೀಸಿನಲ್ಲಿ ಅವರಿಗೆ ಶೂಟಿಂಗ್ ಮಾಡಲು ನಾನು ಬಿಡುವುದಿಲ್ಲವಲ್ಲಾ.!. ಯಾಕೆ ಬರುತ್ತಾರೆ?”ಎಂದೆ ತಪ್ಪಿಸಿಕೊಳ್ಳಲು ನನ್ನ ಕೊನೆ ಅಸ್ತ್ರವೆಂಬಂತೆ.

ಆಕೆ ರಂಪ ಮಾಡುವ ಮಕ್ಕಳಿಗೆ ಸಮಜಾಯಿಶಿ ಮಾಡುವ ದನಿಯಲ್ಲಿ,”ನೋಡಿ ಮಿ. ವಿಜಯ್, ನಿಮ್ಮ ಹೆಸರನ್ನು ಹೇಳಿ ’ಇವರು ಈ ಊರಿನ ಬೆಸ್ಟ್ ಪತ್ತೇದಾರ, ಜಾಣ ಡಿಟೆಕ್ಟಿವ್ ’ ಎಂದಿದ್ದರು ಮಿ.ವಿಶಾಲ್ ಕಪೂರ್..ಹಾಗಾಗಿ ನಾವು..” ಎಂದಳು,ಇದಕ್ಕಿಂತ ತಾನು ಹೆಚ್ಚಾಗಿ ಹೇಳಲಾರೆ ಎಂಬಂತೆ

ನಾನು ಸೀಟ್’ನಲ್ಲಿ ಅರ್ಧ ಎಗರಿಬಿದ್ದೆ..

ವಿಶಾಲ್ ಕಪೂರ್ ನನ್ನ ಹಳೆಯ ಕಕ್ಷಿದಾರ. ಅದಕ್ಕಿಂತ ಮುಖ್ಯವಾಗಿ ಟಿ.ವಿ. ಜಗತ್ತಿನ ಅನಭಿಶಿಕ್ತ ದೊರೆ..ನನ್ನ ದಿನಗಳು ಚೆನ್ನಾಗಿದ್ದಾಗ ನಾನು ಅವರ ಒಂದು ಬ್ಲಾಕ್’ಮೈಲ್ ಕೇಸ್’ನಲ್ಲಿ ಜಯಿಸಿಕೊಟ್ಟಿದ್ದೆ.ಅವರು ನೀಡಿದ್ದ ಸಂಭಾವನೆ ನನಗೆ ಆರು ತಿಂಗಳ ಖರ್ಚು ತೂಗಿತ್ತು….ಅವರೇ ಹೇಳಿರಬೇಕಾದರೆ?..ತಲೆ ನೋವು ದೂರವಾದಂತೆ ಭಾಸವಾಯಿತು.

” ಅವರ ಕೇಸ್ ಆಗಿ ಬಹಳ ಸಮಯವಾಯ್ತು..ಈಗ ಏನಾಗಬೇಕು ನಿಮ್ಮ ಮೇಡಮ್’ಗೆ?” ಎಂದೆ ಸ್ವಲ್ಪ ಎಚ್ಚರಿಕೆಯಿಂದ, ದೊಡ್ಡವರ ಸೆಕ್ರೆಟರಿಗಳಿಗೆ ಪ್ರತಿಷ್ಟೆ ಜಾಸ್ತಿ ಎಂದು ಅರಿತು!

” ಸಂಜೆ ಆರು ಗಂಟೆಗೆ ಬರುತ್ತಾರೆ ಅವರ ಲಾಯರ್ ಜತೆ, ಅವರನ್ನೇ ಕೇಳಿ…ನಿಮ್ಮ ವೈಯಾಲಿ ಕಾವಲ್ ಆಫೀಸ್ ಅಡ್ರೆಸನ್ನು “ಯೆಲ್ಲೋ ಪೇಜಸ್”ನಲ್ಲಿ ನೋಡಿದ್ದೇನೆ… ಮೊಬೈಲ್ ನಂಬರ್ ಕೂಡಾ ಅಲ್ಲೆ ಸಿಕ್ತು!..ಥ್ಯಾಂಕ್ ಯೂ!” ಎಂದು ಮರು ಮಾತಾಡಲು ಬಿಡದೇ ಫೋನ್ ಕಟ್ ಮಾಡಿದ್ದಳು.

ನಾನು ಮುಖ ಸೊಟ್ಟಗೆ ಮಾಡಿದೆ..ಎಲ್ಲರಿಗೂ ನನ್ನಂತೆ ಹಾಸ್ಯ ಪ್ರವೃತ್ತಿ ಇರಲ್ಲ ನೋಡಿ!

ನನ್ನ ಆಫೀಸಿನ ಹಳೇ ಮಾಸಿದ ಗೋಡೆಗಳು, ಹೋದ ವರ್ಷದ ಕ್ಯಾಲೆಂಡರ್ ನೋಡುತ್ತಾ ’ಆದರೂ ನನ್ನ ಹತ್ತಿರ ಜನ ಬರುತ್ತಾರಲ್ಲಾ?’ ಎಂದೆಂದುಕೊಂಡೆ ಹೆಮ್ಮೆಪಡುತ್ತಾ.

ಸ್ವಲ್ಪ ಕಕ್ಷಿದಾರರಿಗಾಗಿಯಾದರೂ ಫ್ರೆಶ್ ಆಗೋಣವೆಂದು ಎದ್ದೆ…

ಬಾತ್ ರೂಮಿನ ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಕೊಂಡೆ..ಹೊಸದೇನಿದೆ?..ಅದೇ ಮೂವತ್ತು ವರ್ಷ ವಯಸ್ಸಿನ ನೀಳ ಕೂದಲಿನ ಬಿಸಿಲಿನಲ್ಲಿ ಹದವಾದ ಗೋಧಿವರ್ಣದ ಮುಖ… ಮುಖದಲ್ಲಿ ಬಲ ಹುಬ್ಬಿನ ಕೆಳಕ್ಕೆ ಚಾಕು ಹಾಕಿದ ಹಳೇ ಗಾಯದ ಗುರುತು.. ಐದಡಿ ಎಂಟಿಂಚು ಎತ್ತರದ ಯೋಗಾಭ್ಯಾಸ ಮಾಡುವ ತೆಳ್ಳಗಿನ ಮೈ,,ಸ್ವಲ್ಪ ಮಾತ್ರ ಶರ್ಟಿನಲ್ಲಿ ಎದ್ದು ಕಾಣುವ ಭುಜದ ಮಾಂಸಲ ಸ್ನಾಯುಗಳು…ಒಟ್ಟಿನಲ್ಲಿ ಹೆದರಿಕೆ ಬರುವಂತಾ ವ್ಯಕ್ತಿಯೇನಲ್ಲ. ಅದೃಷ್ಟವಿದ್ದರೆ ಯಾವುದಾದರೂ ಹೆಣ್ಣು ಅವಸರದಲ್ಲಿ ನನ್ನನು ಹ್ಯಾಂಡ್’ಸಮ್ ಎಂದು ತಪ್ಪು ತಿಳಿದುಕೊಳ್ಳಲೂ ಸಾಧ್ಯ..ನನ್ನ ಅದೃಷ್ಟವಿದ್ದರೆ, ಅವಳದಲ್ಲ!.

ಹೊರಗೆ ಬಂದು ಕೆಟಲ್’ನಲ್ಲಿ ಯಾವಾಗಲೂ ಸಿದ್ಧವಿರುವ ಕಾಫಿ ಬಗ್ಗಿಸಿಕೊಂಡು ಕುಡಿದುಕುಳಿತೆ.

ಸಮಯ ಆರಾಗುತ್ತಿತ್ತು ಆಗಲೇ.. ‘ಇವರಿಗೇನು ಗೊತ್ತಿತ್ತು ನಾನು ಆಫೀಸಿನಲ್ಲಿ ಸಿಕ್ಕೇ ಸಿಕ್ಕುತ್ತೇನೆಂದು? ..ನಾನೊಬ್ಬನೆ ಪತ್ತೇದಾರನಲ್ಲ ಈ ಊರಿನಲ್ಲಿ..ಇವರಿಗೆಲ್ಲ ನನ್ನ ಸ್ಥಿತಿ ಗೊತ್ತೋ ಏನೋ?’.. ಎಂದೆಲ್ಲಾ ಯೋಚನೆಗಳು ಬಂದು ಹೋದವು.

ಈ ನಾಲ್ಕು ತಿಂಗಳಿಂದ ಎರಡು ಅನುಮಾನಕ್ಕೆ ಗಂಡ ಹೆಂಡರ ಮೇಲೆ ನಿಗಾ ಇಡುವ ಕೇಸ್, ಎರಡು ಮುದುಕಿಯರ ಕಳೆದು ಹೋದ ಬೆಕ್ಕು ಹುಡುಕುವ ಕೇಸ್’ಗಳು ಸಿಕ್ಕಿದ್ದವು ಅಷ್ಟೆ…ಆದರೂ ಹೊಸ ಕೆಲಸ ಹುಡುಕಿಕೊಂಡು ಹೋಗುವಂತಾ ಚುರುಕ ನಾನಲ್ಲ. ಅಲ್ಪತೃಪ್ತ ನಾನು.

“ವಿಜಯ್ ವಿಕ್ರಮ್ ಇನ್ವೇಸ್ಟಿಗೇಶನ್ಸ್” ಎಂಬುದು ನಾನು ಮತ್ತು ವಿಕ್ರಮ್ ಇಬ್ಬರೂ ಇಂಡಿಯನ್ ಮಿಲಿಟರಿ ಪೋಲಿಸ್ ಪಡೆಯಲ್ಲಿ ಈ ಹಿಂದೆ ಮೂರು ವರ್ಷ ಡಿಟೆಕ್ಟಿವ್ಸ್ ಸೇವೆ ಮಾಡಿ ಹೊರಕ್ಕೆ ಬಂದು ನಾವಿಬ್ಬರೂ ನಮ್ಮ ಉಳಿತಾಯವನ್ನೆಲ್ಲಾ ಇಟ್ಟು ಕಟ್ಟಿದ ಪತ್ತೇದಾರಿ ಸಂಸ್ಥೆ.. ಏರುಪೇರುಗಳು ಹೆಚ್ಚಾಗಿ ಆರುತಿಂಗಳಿನಿಂದ ಕುಂಟುತಿತ್ತು ಬಿಝಿನೆಸ್ಸ್. ಬ್ರಹ್ಮಚಾರಿಗಳಾದರಿಂದ ಬಚಾವ್ ಆಗಿದ್ದೆವು ಅನ್ನಿ…ಹೇಗೋ ನಮ್ಮ ಪಾಲಿಗೆ ನಿಭಾಯಿಸಿಕೊಂಡು ಹೋಗಿದ್ದೆವು.

ನಿನ್ನೆ ತಾನೇ, ಸ್ವಲ್ಪ ಹಣ ಕೂಡಿಟ್ಟಿದ್ದ ವಿಕ್ರಮ್ ತಾನು ಗೋವಾಗೆ ಹೋಗಿಬರುತ್ತೇನೆಂದು ಹೇಳಿದ್ದ..

“ಎಂತಾ ಕೆಲಸ ಬಂದರೂ ನೀನಿದ್ದಿಯಲ್ಲಾ..ಒಬ್ನೇ ಮಾಡ್ಕೊ..ನನಗೇನೂ ಕೊಡಬೇಡಾ” ಎಂದು ನನ್ನ ಆಫೀಸಿನಿಂದ ಎಳೆದುಕೊಂಡು ಹೋಗಿ ರಾತ್ರಿ ಪಾರ್ಟಿ ಕೊಡಿಸಿದ್ದ, ಹೊರಟೂ ಹೋಗಿದ್ದ..

ನನ್ನ ಸಿಗರೇಟ್ ಚಟ ಬಿಡಿಸಲು ಅದೇನೋ ಚೂಯಿಂಗ್’ಗಮ್ ಕೊಟ್ಟಿದ್ದ ವಿಕ್ರಮ್, ’ಇದನ್ನು ತಿಂದು ನೋಡು ’ ಎಂದಿದ್ದ ಆ ಸಿಗರೇಟ್ ಮುಟ್ಟದ ಭೂಪ..ಅದನ್ನು ಬಾಯಿಗೆ ಹಾಕಿಕೊಂಡೆ, ನೋಡುವಾ ಎಂದು.

ಹಾಗಾಗಿ ನನಗೆ ಈಗ ಕೆಲಸ ದುಡ್ಡು ಎರಡೂ ಬೇಕಿತ್ತು..ಹೌದು ಹೌದು ಎಂದು ತಲೆಯಾಡಿಸುತ್ತಿದ್ದವು, ನನ್ನ ಟೇಬಲ್ ಮೇಲೆ ಚೆನ್ನಪಟ್ಟಣದ ಮೂರು ಕೋತಿ ಬೊಂಬೆಗಳು.

ಮೃದುಲಾ ಹೊಸಮನಿ ಎಂಬ ಈ ನಟಿ ಚಿಕ್ಕ ತೆರೆ ಜಗತ್ತಿನ ದೊಡ್ಡ ತಾರೆ.

ಆಕೆಯ ’ಸುಂದರ ಸಂಸಾರ’ ಎಂಬ ಧಾರವಾಹಿ ಈ ಮೂರು ವರ್ಷಗಳಲ್ಲೇ ಬಂದ ಅತ್ಯಂತ ಯಶಸ್ವೀ ಕಣ್ಣೀರಿನ ಕತೆಗಳಲ್ಲಿ ಒಂದು. ಹೆಂಗಸರನ್ನು ಅಳಿಸಿ ದುಡ್ಡು ಮಾಡುವುದು ಒಂದು ಕಲೆಯೆಂದಾದರೆ ಈ ಧಾರಾವಾಹಿ ನಿರ್ಮಾಪಕರು ಅದರಲ್ಲಿ ಚಾಣಾಕ್ಷ ಡಕಾಯಿತರು ಎನ್ನಬಹುದು…ಅವರ ಯಶಸ್ಸಿನ ಕುರುಹಾದ ಟಿ.ಆರ್ ಪಿ ಕ್ರಮಾಂಕಗಳು ಸದಾ ನಂ. ೧ ಎಂದೇ ಕೊಚ್ಚಿಕೊಳ್ಳುತ್ತಿದ್ದವು. ನನ್ನ ಪ್ರಕಾರ ಮಾತ್ರ, ಇಷ್ಟು ಗಂಡನೇನಾದರೂ ಒಂದು ಹೆಂಡತಿಯನ್ನು ಅಳಿಸಿದ್ದರೆ ಬೇರೇನಾದರೂ ನೆಡೆದು ಹೋಗುತಿತ್ತು ಆ ಮನೆಗಳಲ್ಲಿ!..

ತುಂಬು ಗುಂಗುರು ಕೂದಲಿನ ಕೇರಳ ಅಥವಾ ಕರಾವಳಿ ಭಾಗದ ಹೆಣ್ಣಿನಂತೆ ಕಾಣುವ ಈಕೆ ಉತ್ತರ ಕರ್ನಾಟಕದ ’ಹೊಸಮನಿ’ ಹೇಗಾದಳು? ಎಂಬುದು ಯಾರಿಗೂ ತಿಳಿಯದು..

ಅಂದು ಆಫೀಸಿಗೆ ಬಂದು ಪರಿಚಯವಾದನಂತರ ಆಕೆಯನ್ನು ಕೇಳಿದಮೊದಲ ಪ್ರಶ್ನೆಯೇ ಇದು.

“ಆದರೆ ಆ ವಿಷಯವನ್ನು ಹೇಳಲೇ ನಾನು ಬಂದಿದ್ದು ” ಎಂದು ಮಾತು ತೆಗೆದರು ಮೃದುಲಾ ಎದುರಿಗಿದ್ದ ನನ್ನ ಹಳೇ ಸೋಫಾ ಕುಶನ್ ಮೇಲೆ ಕುಳಿತು ಮುಗುಳ್ನಗುತ್ತಾ..

ಆದರೆ ಆಕೆಯ ಮಿನುಗುವ ಗ್ಲಾಮರಿಗೆ ದೃಷ್ಟಿ ತೆಗೆಯುವಂತಿತ್ತು ನನ್ನ ಆಫೀಸಿನ ಕಳಪೆ ಒಳಭಾಗ.

ಸುಮಾರು ಐದಡಿ ಏಳಿಂಚು ಎತ್ತರ, ಬಿಳಿ ಮೈಕಾಂತಿ ಮತ್ತು ಆಕರ್ಷಕ ಮೈಕಟ್ಟಿನಲ್ಲಿ ಹಸಿರು ಸೀರೆಯಲ್ಲಿ ಮಂದಹಾಸ ಬೀರುತ್ತ ಕುಳಿತ ಆಕೆ ಅದನ್ನು ಗಮನಿಸಿದಂತೆ ಕಾಣಲಿಲ್ಲ.

ಆದರೆ ಪಕ್ಕದಲ್ಲಿ ಕುಳಿತಿದ್ದ ಆಕೆಯ ಶ್ರೀಮಂತ ಲಾಯರ್ ಫರ್ನಾಂಡೆಸ್ ನನ್ನನ್ನೂ, ನನ್ನ ಆಫೀಸನ್ನೂ ಹೇಗೋ ಸಹಿಸಿಕೊಂಡವರಂತೆ ಮುದುಡಿ ಕುಳಿತಿದ್ದರು.

” ನನಗೆ ಈಗ ಮೂವತ್ತೈದು ವರ್ಷ ಆಯ್ತು, ಮಿ.ವಿಜಯ್…ನಿಮಗೆ ತಿಳಿದಂತೆ ನಾನೀಗ ಸ್ಟಾರ್..ನನ್ನ ಸೀರಿಯಲ್ ತುಂಬಾ ಜನಪ್ರಿಯವಾಗಿದೆ. ನನಗೆ ಹೆಸರು, ದುಡ್ಡು, ಬಿಡುವಿಲ್ಲದಷ್ಟು ಕಾಲ್ ಶೀಟ್ ಎಲ್ಲಾ ತಂದು ಕೊಟ್ಟಿದೆ..”ಎಂದರು

” ಹೌದೂ, ನಾನೂ ನಿಮ್ಮ ಪ್ರೊಗ್ರಾಮ್ ನೋಡುತ್ತಲೇ ಇರುತ್ತೇನೆ..ರಾತ್ರಿ ಎಂಟೂವರೆಗೆ ಶುರುವಾಗುತ್ತಲ್ಲಾ, ಊಟದ ಹೊತ್ತಿಗೆ…ಸೋ.. ” ಎಂದು ಉಡಾಫೆ ಬಿಟ್ಟೆ.

ಸದ್ಯಾ, ಆ ಸೆಕ್ರೆಟರಿ ಎದುರಿಗಿಲ್ಲವಲ್ಲ ಎಂದು.

” ಎಂಟೂವರೆ ಅಲ್ಲಾ, ಒಂಬತ್ತೂವರೆಗೆ!” ಎಂದು ನಕ್ಕ ಆಕೆ, ನನ್ನ ಮುಖ ಕೆಂಪಾದ್ದು ನೋಡಿ “..ಹೋಗಲಿಬಿಡಿ , ನೀವು ಅದನ್ನು ನೋಡದಿರುವುದು ಒಳ್ಳೆಯದೇ ಆಯ್ತು, ನಿಷ್ಪಕ್ಷಪಾತವಾಗಿರಬಹುದು, ನಿಮ್ಮ ಅನ್ವೇಷಣೆಯಲ್ಲಿ..!”  ಎಂದು ಮುಂದುವರೆಸಿದರು

” ನನ್ನ ನೆನಪಿಗೆ ತಿಳಿದಂತೆ ನಾನು ಚಿಕ್ಕವಳಿದ್ದಾಗಲೇ ನನ್ನನ್ನು ಬೆಳೆಸಿದವರು ದತ್ತು ಪಡೆದು ಸಾಕಿದರು,, ಆ ವಿಷಯವನ್ನೆಂದೂ ಅವರು ನನ್ನಿಂದ ಬಚ್ಚಿಡಲಿಲ್ಲಾ, ಆದರೆ ಬಿಚ್ಚಿಡಲೂ ಇಲ್ಲಾ ” ಎಂದು ನಿಟ್ಟುಸಿರಿಟ್ಟರವರು.

” ಅಂದರೆ ಹೊಸಮನಿ ನಿಮ್ಮ ಸ್ವಂತ ತಂದೆತಾಯಿಗಳಲ್ಲವೇನೂ?” ಎಂದೆ . ಬಹಳ ಜಾಣ ಡಿಟೆಕ್ಟಿವ್ ಅಲ್ಲವೆ ನಾನು?

“ಅದೇ ತಾನೆ ಆಕೆ ಹೇಳ್ತಿರೋದು!!” ಎಂದು ಬೇಸರದ ದನಿಯಲ್ಲಿ ಟೀಕಿಸಿದರು, ಫರ್ನಾಂಡೆಸ್..ನಾನವರನ್ನು ಗಮನಿಸಲಿಲ್ಲ.

ಮೃದುಲಾ, “ಫರ್ನಾಂಡೆಸ್, ನಾನು ಹೇಳುತ್ತೇನೆ, ಬಿಡಿ..” ಎಂದು ತಡೆದು, ಮುಂದೆ ಹೇಳಿದ್ದು ಇಷ್ಟು:

“ನಾನು ಹುಟ್ಟಿದ್ದು ತಮಿಳ್ನಾಡು-ಕೇರಳ ಭಾಗದ ಗಡಿಯ ಒಂದು ಊರಿನಲ್ಲಂತೆ… ನಾನಾಗಮೂರು ತಿಂಗಳ ಹೆಣ್ಣು ಮಗು…. ಇಲ್ಲಿ ಶ್ರೀಮತಿ ಹೊಸಮನಿಗೆ ಗಂಡು ಮಗುವಾಗಿ ಸತ್ತು ಹೋಗಿ ಮತ್ತೆ ತಾಯಾಗುವ ಸ್ಥಿತಿ ಇರಲಿಲ್ಲವಂತೆ..ಅವರ ಮನಸ್ಥಿತಿ ಸುಧಾರಣೆಗೆ ಅಂತಾ ಕೇರಳದ ಆಯುರ್ವೇದಿಕ್ ಚಿಕಿತ್ಸೆಗೆ ಹೋಗಿ ಹಿಂತಿರುಗುವಾಗ, ನಮ್ಮೂರಿನಲ್ಲಿ ಉಳಿದು ಕೊಂಡರಂತೆ., ಅಲ್ಲೆ ನನ್ನ ಹೆತ್ತ ತಂದೆತಾಯಿಗಳ ಭೇಟಿಯಾಯಿತಂತೆ…ಪುಟ್ಟ ಕಂದನಾದ ನನ್ನನ್ನು ಕಂಡು ದತ್ತು ಪಡೆದರಂತೆ…ಅದರ ಪ್ರಕಾರ ದತ್ತು ಪಡೆದುದಕ್ಕೆ ಕಾನೂನಿನ ಪತ್ರಗಳೂ ಇದ್ದವಂತೆ.. ನನ್ನ ಸಾಕು ತಂದೆ ತಾಯಿಯವರಿದ್ದ ಮನೆ ಇತ್ತೀಚೆಗೆ ಆದ ಭೂಕಂಪದಲ್ಲಿ ಬಿದ್ದು ಹೋದಾಗ, ಅಪ್ಪ ಅಮ್ಮ ಇಬ್ಬರೂ ಹೋಗಿ ಬಿಟ್ಟರು..’ಜತೆಗೆ ನನ್ನ ದತ್ತು ಪಡೆದ ಎಲ್ಲಾ ಒರಿಜಿನಲ್ ಪತ್ರಗಳು ಹಾಳಾಗಿ ಹೋದವು’ ಎಂದು ಸರ್ಕಾರಿ ವಕೀಲರು ಮನೆಯ ರೆಕಾರ್ಡ್ಸ್ ನೋಡಿ ವಕೀಲ ಫರ್ನಾಂಡೆಸ್’ಗೆ ತಿಳಿಸಿದ್ದಾರೆ..ಹೀಗೆ ಅತ್ತ ಹೆತ್ತ ಅಪ್ಪ-ಅಮ್ಮನನ್ನೂ ತಿಳಿಯದೇ  ಸಾಕು ಅಪ್ಪ- ಅಮ್ಮರನ್ನೂ ಕಳೆದುಕೊಂಡು ನನ್ನ ಪೂರ್ವದ ಒಂದು ಸುಳಿವೂ ಇಲ್ಲದಂತಾಯಿತು..”  ಎಂದವರ ಮುಖದಲ್ಲಿ ನೋವಿನ ಎಳೆಯಿತ್ತು.

” ಪರವಾಗಿಲ್ಲ ಬಿಡಿ…ಕೆಲವರಿಗೆ ಒಂದು ಜತೆ ತಂದೆ ತಾಯಿಯರೂ ಇರುವುದಿಲ್ಲಾ, , ನಿಮಗೋ ಎರಡು ಜೊತೆ ಅಪ್ಪ-ಅಮ್ಮ ಇದ್ದರೆಂದು ತಿಳಿಯಿತಲ್ಲಾ..ಈಗ ನಿಮ್ಮ ತೊಂದರೆಯೇನು?”ಎಂದು ಸಂತೈಸ ಹೊರಟೆ.

ಮೃದುಲಾ ಜೋರಾಗಿ ತಲೆಯಾಡಿಸುತ್ತಾ, ನನಗೆ ಇನೂ ಅರ್ಥವಾಗಿಲ್ಲವೆಂಬಂತೆ,

” ತೊಂದರೆಯಿದೆ, ನಿಜವಾಗಲೂ ತೊಂದರೆಯಾಗುತ್ತಿದೆ…ಅದೂ ಎರಡು ತರಹ..ಒಂದು ಈಗ ನನ್ನ ಟೀವಿ ಧಾರಾವಾಹಿಯ ಪಾತ್ರದಲ್ಲಿ ನಾನು ಬಂಜೆ, ದತ್ತು ಮಗುವನ್ನು ಪಡೆಯುವ ವಿಷಯ ಪ್ರಸ್ತಾಪವಾಗುತ್ತದೆ. ಅದು ನನಗೆ ಮನದಲ್ಲಿ ಕೊರೆಯಹತ್ತಿದೆ..ನನ್ನ ಜನ್ಮದ ಸತ್ಯವನ್ನೇ ತಿಳಿಯದ ’ನಾನು ಇಂತಾ ಸನ್ನಿವೇಶದಲ್ಲಿ ಸಹಜವಾಗಿ ಅಭಿನಯ ಮಾಡುವುದಾದರೂ ಹೇಗೆ’ ಎಂದು..ಮೊದಮೊದಲು ನನ್ನ ನಿರ್ದೇಶಕರು ಒಪ್ಪಲಿಲ್ಲ,’ಮಾಡು ಪರವಾಗಿಲ್ಲಾ’ ಅನ್ನುತ್ತಿದ್ದರು..’ಮೂವತ್ತೈದು ವರ್ಷಗಳ ಹಿಂದಿನ ನಿನ್ನ ಪುರಾಣ ಈಗೇಕೆ ನನಗೆ ಬೇಕು, ಏನು ಪ್ರಯೋಜನ “ಎಂದು..ನಾನು ಒಪ್ಪಲಿಲ್ಲ..ಇದರ ನಿರ್ಮಾಪಕರಾದ ವಿಶಾಲ್ ಕಪೂರ್ ಒಳ್ಳೆಯವರು..ಅವರು ಹಾಗೂ “ಹೌದು ನೋಡೊಣಾ, ಮಾಡೊಣಾ ” ಅನ್ನುತ್ತಿದ್ದರು..ಅದು ಎರಡು ತಿಂಗಳ ಹಿಂದೆ..ಆದರೆ ಅಷ್ಟರಲ್ಲಿ ಎರಡನೆ ಬೆಳವಣಿಗೆ ನನ್ನನ್ನು ಕಂಗಾಲಾಗಿಸಿತು” ಎಂದು ನಿಲ್ಲಿಸಿ ಆಕೆ ತಣ್ಣಗಾದ ಕಾಫಿಯನ್ನೆ ಗುಟುಕರಿಸಿದರು .

“ಕಂಗಾಲುಗುವುದು ಏನು?..ಯಾರಾದರೂ ಬ್ಲಾಕ್’ಮೇಲ್ ಮಾಡಿದರೆ?” ಎಂದೆ ನಾನೂ ಯೋಚಿಸುತ್ತಾ, ಇನ್ನೊಂದು ಗಮ್ ಬಾಯಿಗೆ ಹಾಕಿಕೊಳ್ಳುತ್ತಾ..

ನನ್ನ ಮಾತಿಗೆ ಆಕೆಯ ಕಂಗಳು ಅಗಲವಾಗಿ ಮಿನುಗಿತು.ಆ ರೂಮನ್ನೇ ತುಂಬಿತು ಅದರ ಹೊಳಪು.

” ಹೌದೌದು!..ಕರೆಕ್ಟಾಗಿ ಊಹಿಸಿದಿರಿ!…ಇವತ್ತಿಗೆ ಎರಡು ತಿಂಗಳ ಹಿಂದೆ ಮೊದಲ ಪತ್ರ ಪೋಸ್ಟ್’ನಲ್ಲಿ ಮನೆಗೆ ಬಂತು..ಹಿಂದೆ ಅಡ್ರೆಸ್ ಹೆಸರು ಇರಲಿಲ್ಲ..ಕೈಬರಹದಲ್ಲಿ ಒಂದೇ ಶೀಟ್ ಬರೆದಿದ್ದರು…..

” ಕರ್ಪೂರಿ ನದಿ= ಕಪ್ಪು ನದಿ, ನಿನ್ನ ಪಾಲಿಗೆ..”

” ಅಷ್ಟೇನೆ?…”  ಎಂದು ನಾನು ಆಕೆ ಸುಳ್ಳು ಹೇಳಿಯಾರು ಎಂದು ಗಮನಿಸುವಂತೆ ದಿಟ್ಟಿಸಿ ನೋಡುತ್ತಿದ್ದೆ.

“ಹೌದು..ಹಿಂಭಾಗದಲ್ಲಿ “ಮುಂದಿದೆ ಮುದುಕಿ ಹಬ್ಬ” ಅಂತಲೂ ಬರೆದಿದ್ದರು.

“ಈ ಕರ್ಪೂರಿ ನದಿ ಇರುವುದು ತಮಿಳುನಾಡು- ಕೇರಳ ಗಡಿ ಭಾಗದಲ್ಲಿ ಅಲ್ಲವೆ?” ಎಂದು ಪ್ರಶ್ನಿಸಿದೆ.

ಮೃದುಲಾ ಹೂಗುಟ್ಟುತ್ತಾ, ” ಅಲ್ಲೇ.. ಅಲ್ಲೇ.ನಾನು ಹುಟ್ಟಿದ್ದಂತೆ. ಅಮ್ಮ ಅಂದರೆ ನನ್ನ ಸಾಕಮ್ಮ ಹೇಳಿದ್ರು..ಮೂವತ್ತೈದು ವರ್ಷದ ನಂತರ ಈಗೇನು ರಹಸ್ಯ ಇರಲು ಸಾಧ್ಯ ನನ್ನ ಬಗ್ಗೆ?… ‘ಮುದುಕಿ ಹಬ್ಬ’ ಅಂದರೆ ತಕ್ಕ ಶಾಸ್ತಿ ಮಾಡ್ತೀನಿ ಮುಂದೆ ಎಂದಲ್ಲವೆ?” ಎಂದು ಮುಗಿದ ಪೇಪರ್ ಕಾಫಿ ಕಪ್ಪನ್ನು ಕೈಯಲ್ಲಿ ಕಿವುಚತೊಡಗಿದ್ದರು ಆ ಚಿಂತೆಯಲ್ಲಿ ಬೆದರಿದವರಂತೆ.

” ಹೆದರಬೇಡಿ..ಅದರರ್ಥ ಹಾಗೇ ಬರತ್ತೆ..ಆದರೆ ಒಮ್ಮೆ ಬೆದರಿಸಿದವರ ಹುಡುಗಾಟವನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವಂತಿಲ್ಲಾ..” ಎಂದು ಆಕೆಯ ಕೈ ತಟ್ಟಿದೆ. ರೇಶಿಮೆಯಂತಿತ್ತು.

“ಆದರೆ ಇನ್ನೊಂದು ಪತ್ರ ಮೊನ್ನೆ ಮತ್ತೆ ಬಂತು..ಅದರಲ್ಲಿ..”ಕಪ್ಪು ನದಿಯ ತಪ್ಪಲ್ಲ…ನಿನ್ನ ರಹಸ್ಯ ಉಳಿಯಲ್ಲ” ಅಂತಾ ಅದೇ ಕೈ ಬರಹದಲ್ಲಿ ಬರೆದಿದ್ದಾನೆ…ಹಿಂಭಾಗದಲ್ಲಿ “ಸಮಯ ಹತ್ತಿರ ಬಂತು..ನನ್ನ ಬೆಲೆ ಹೇಳುತ್ತೇನೆ” ಅಂತಾ ಬೇರೆ ಬರೆದಿದ್ದಾನೆ…” ಎಂದು ನುಡಿದು ಸ್ವಲ್ಪ ಸುಮ್ಮನಾದಳು

ನಾನು ಎದ್ದು ಅವರಿಗೆ ಮತ್ತೆ ಇನ್ನೆರಡು ಕಪ್ ಕಾಫಿ ಬಸಿದು ಕೊಟ್ಟೆ. ನನ್ನ ಯೋಚನಾ ಲಹರಿ ಜೋರಾಗಿತ್ತು.

(ಮುಂದುವರಿಯುವುದು….)

ನಾಗೇಶ್ ಕುಮಾರ್ ಸಿ.ಎಸ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post