ಹುಚ್ಚು ಮಳೆ, ವಾರವಾಯ್ತೇನೋ
ಬಿಟ್ಟು ಬಿಡದೆ ಸುರೀತಾನೆ ಇದೆ
ನಿನ್ನೆ, ಮೊನ್ನೆಯಿರದ ಅವನ ನೆನಪ
ಹಾವಳಿ ಸಹ ಮತ್ತೆ ಶುರುವಾಗಿದೆ
ನನ್ನಲ್ಲೇ ಭಯ ಮೂಡಿಸಿದೆ ಹೊಳೆವ
ಕಂಗಳಲ್ಲಿ ಮತ್ತೆ ಮೂಡಿದ ಕನಸು
ಕಣ್ಣ ಬಿಂಬದಲ್ಲಿ ಮೂಡಿ ನಿಂತ ರೂಪ
ಸುರಿವ ಮಳೆಗೆ ಚಳಿಯಾದರೂ
ಮನದಲ್ಲಿ ಬೆಚ್ಚನೆ ಭಾವ ಮೂಡಿಸಿದವ ಅವನೇ..
ಕನಸುಗಳಿರದ ಕಗ್ಗತ್ತಲ ಬದುಕಲ್ಲಿ
ಬದುಕಬೇಕೆಂಬ ಭರವಸೆ ಮೂಡಿಸಿದವನು
ಆದರೆ, ಅವನೇ ಅಲ್ಲವಾ
ಸಮಾಜಕ್ಕೆ ಹೆದರಿ, ಹಿಡಿದಿದ್ದ ನನ್ನ ಕೈ ಬಿಟ್ಟು
ಹಿಂದೆ ಸರಿದು ಹೋದವನು
ಕತ್ತಲ ಕೋಣೆಯಲ್ಲಿ ನಾ ಕುಳಿತು
ಮುಸಿ ಮುಸಿ ಅಳುವಂತೆ ಮಾಡಿದವನು
ಇದೇ ಸುರಿವ ಮಳೆಯಲ್ಲಿ
ದಾರಿ ಗೊತ್ತಿರದ ಕವಲು ದಾರಿಯಲ್ಲಿ
ನನ್ನ ಒಬ್ಬಂಟಿಯಾಗಿ ಬಿಟ್ಟು ಹೋದವನು
ಎಲ್ಲಾ ಮುಗಿದಿದ್ದರೂ, ಈ ಮಳೆಯಲ್ಲಿ
ಮತ್ಯಾಕೆ ಅವನ ನೆನಪು
ನಿಸ್ತೇಜವಾಗಿದ್ದ ಕಂಗಳಲ್ಲಿ ಅವನ
ಬರುವಿಕೆಯ ಕಾತರದ ಹೊಳಪು
ಅವನು ಮತ್ತೆ ಬರುತ್ತಾನ..?
ಸತ್ತು ಹೋಗಿರುವ ಕನಸುಗಳಿಗೆ
ಮತ್ತೆ ಜೀವ ತುಂಬುತ್ತಾನ..?
ನಾ ಶಬರಿಯಂತೆ ಕಾಯಲೇ..
ಇಲ್ಲ ಹಾಳು ಮಳೆಗೆ ಬೈದು ಸುಮ್ಮನಾಗಲೇ..
ವಿನುತಾ ಪೆರ್ಲ
Facebook ಕಾಮೆಂಟ್ಸ್