ಮೊನ್ನೆ ಪೀಟ್ ಕ್ಯಾಂಬೆಲ್ ಎಂಬವರು ತಮ್ಮ ವಾಲ್’ನಲ್ಲಿ ತಾವು ಭಾಗವಹಿಸಿದ ಒಂದು ಕಾರ್ಯಕ್ರಮದ ಬಗ್ಗೆ ಹೇಳಿಕೊಂಡಿದ್ದರು. ಅಲ್ಲಿ ಸಾಕಷ್ಟು ಕ್ಯಾನ್ಸರ್ ಸರ್ವೈವರ್’ಗಳು ಭಾಗವಹಿಸಿ ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದರು. ನಿಜಕ್ಕೂ ಅದೊಂದು ಅದ್ಭುತವಾದ ಕಾರ್ಯಕ್ರಮವಾಗಿರಲೇಬೇಕು. ಆದರೆ ನನ್ನನ್ನ ಇನ್ನಷ್ಟು ಸೆಳೆದಿದ್ದು ಆ ಕಾರ್ಯಕ್ರಮದ ಹೆಸರು. ಅದರ ಹೆಸರು ‘ಸೆಲೆಬ್ರೇಟಿಂಗ್ ಸರ್ವೈವರ್’ಶಿಪ್’ ಅಂತ!!
ಸೆಲೆಬ್ರೇಟಿಂಗ್ ಸರ್ವೈವರ್’ಶಿಪ್, ಸರ್ವೈವರ್ ಆಗಿರುವುದನ್ನ ಸಂಭ್ರಮಿಸುವುದು!! ಕ್ಯಾನ್ಸರ್’ನಿಂದ ಗುಣಮುಖರಾದಾಗ ಒಂಥರಾ ಸಂಭ್ರಮವೇನೋ ಇರತ್ತೆ ನಿಜ. ಆದರೆ ಆ ಸಂಭ್ರಮ ಸವಾಲುಗಳೊಂದಿಗೇ ಬಂದಿರುತ್ತದೆ. ಜೊತೆಗೆ ಭಯ! ಕ್ಯಾನ್ಸರ್ ಮುಗಿದ ನಂತರ ಎಲ್ಲ ಸರಿಯಾಗುತ್ತಿದೆ ಎನಿಸಿದರೂ ಕ್ಯಾನ್ಸರ್ ಮತ್ತೆ ಉಂಟಾದರೆ ಎಂಬ ಭಯ ಮಾತ್ರ ನಿರಂತರವಾಗಿ ಕಾಡುತ್ತಲೇ ಇರುತ್ತದೆ. ನಾನು ಒಮ್ಮೊಮ್ಮೆ ಯೋಚಿಸುತ್ತೇನೆ, ಸಾಮಾನ್ಯವಾಗಿ ನಮಗೆ ಭಯ ಉಂಟಾಗುವುದು ಕ್ಯಾನ್ಸರ್ ಬಗ್ಗೆಯಾ ಅಥವಾ ಅದರ ಚಿಕಿತ್ಸೆ ಬಗ್ಗೆಯಾ ಅಂತ. ಆದರೆ ಅದೊಂಥರಾ ವಿಚಿತ್ರ ಪ್ರಶ್ನೆ, ಅದಕ್ಕೆ ಉತ್ತರ ಸಿಗೋದೆ ಇಲ್ಲ. ಬಹುಶಃ ಎರಡರ ಬಗ್ಗೆಯೂ ಭಯ ಇರಬಹುದು.
ಚೆನ್ನೈ ಮೂಲದ ರಮ್ಯ ಎಂಬ ಸರ್ವೈವರ್, ಭಯವನ್ನು ಜಯಿಸುವುದು ಇನ್ನೂ ಬಾಕಿ ಇದೆ ಎಂದಾಗ ಈ ಭಯ ಎಲ್ಲಾ ಸರ್ವೈವರ್’ಗಳಿಗೂ ಸಾಮಾನ್ಯ ಎನಿಸಿತು. ಸಂಶೋಧನೆಗಳ ಪ್ರಕಾರ ಸುಮಾರು ಶೇಕಡಾ ೩೩ರಿಂದ ಶೇಕಡಾ ೯೩ರಷ್ಟು ಜನ ಸರ್ವೈವರ್’ಗಳು ಕ್ಯಾನ್ಸರ್ ಮತ್ತೆ ಉಂಟಾಗುವ ಭಯವನ್ನು ಹೊಂದಿರುತ್ತಾರೆ. ಡಾ. ಶಾನಿ ಅವರು ‘ಈ ಭಯವೇ ಒಂದು ರೀತಿಯಲ್ಲಿ ಕ್ಯಾನ್ಸರ್ ಮತ್ತೆ ಉಂಟಾಗಲು ಕಾರಣ’ ಎನ್ನುತ್ತಾರೆ. ಭಯ ನಮ್ಮ ಶರೀರದಲ್ಲಿ ಸ್ಟ್ರೆಸ್ ರೆಸ್ಪಾನ್ಸ್ ಹೆಚ್ಚಿಸುತ್ತದೆ, ಸ್ಟ್ರೆಸ್’ನಲ್ಲಿ ಇರುವಾಗ ಹಾರ್ಮೋನ್ ಉತ್ಪತ್ತಿ ಹೆಚ್ಚಾಗಿ, ದೇಹವನ್ನು ಹೈಪರ್ ಅಲರ್ಟ್ ಸ್ಥಿತಿಯಲ್ಲಿ ಇಡುತ್ತದೆ. ಸಂಶೋಧನೆಗಳ ಪ್ರಕಾರ ಚಿಂತೆಯ ಸ್ಥಿತಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್’ಗಳು ಕ್ಯಾನ್ಸರ್ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ. ಹಾಗಾಗಿ ಆ ಭಯವನ್ನು ಕಳೆದುಕೊಳ್ಳುವುದು ಅನಿವಾರ್ಯ.
ಈ ಭಯ ಮೊದ-ಮೊದಲು ಸ್ವಲ್ಪ ಹೆಚ್ಚೇ ಎನಿಸಿದರೂ, ನಿಧಾನವಾಗಿ ಹೊಸ ಜೀವನಕ್ಕೆ ಒಗ್ಗಿಕೊಳ್ಳುತ್ತಾ ಹೋದಂತೆಲ್ಲಾ ಸ್ವಲ್ಪ ಸ್ವಲ್ಪವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಆನಂತರ ಆ ಭಯದ ಬಗ್ಗೆ ಮರೆತೇ ಹೋಗುವುದು. ಮಧ್ಯೆ ಮಧ್ಯೆ ಕೆಲವೊಮ್ಮೆ ನೆನಪಾಗುತ್ತದೆ, ನಮ್ಮ ದೇಹಸ್ಥಿತಿಯಲ್ಲಿ ಏನದರೂ ವ್ಯತ್ಯಾಸ ಕಂಡಾಗ ಮೊದಲು ನೆನಪಾಗುವುದು ಕ್ಯಾನ್ಸರ್!!
ಇತ್ತೀಚೆಗೆ ಶಾನ್’ನ ಮಾತನಾಡಿಸುವಾಗ ಆತ ಹೇಳಿದ, “ಇತ್ತೀಚೆಗೆ ತುಂಬಾ ಆಯಾಸಗೊಂಡಿದ್ದೇನೆ, ಟ್ರಾವೆಲ್ ಮಾಡಿದ್ದರಿಂದಲೋ ಅಥವಾ ಬೇರೆ ಇನ್ನೇನೋ..!! ನಾಡಿದ್ದು ನನ್ನ ವಾರ್ಷಿಕ ಚೆಕ್’ಅಪ್’ಗೆ ಹೋಗುತ್ತಿದ್ದೇನೆ. ಆಗಲೇ ಏನು ಅಂತ ಗೊತ್ತಾಗುವುದು’ ಎಂದಿದ್ದ. ಅದೃಷ್ಟವಶಾತ್ ಟೆಸ್ಟ್’ನ ನಂತರ ಎಲ್ಲವೂ ನಾರ್ಮಲ್ ಎಂದಿತ್ತು. ಇಂತವುಗಳ ಬಗ್ಗೆ ತುಂಬಾ ಗಮನ ಇಟ್ಟಿರುತ್ತೇವೆ. ಆರೋಗ್ಯ ಅಂದ ಮೇಲೆ ಇಡಬೇಕು ಕೂಡ.
ಹೀಗೆ ಗಮನ ಇಡುವ ವಿಷಯಕ್ಕೇ ನಾನು ಅಮ್ಮನ ಬಳಿ ಹೆಚ್ಚಾಗಿ ಬೈಸಿಕೊಳ್ಳುತ್ತೇನೆ. ನಾನು ಯಾವಾಗಲೂ ಕಪಿ ತರ ಆಡುತ್ತಾ ಕೈ ಕಾಲುಗಳಿಗೆ ಏನೇನೋ ತಾಗಿಸಿಕೊಂಡು ಗಾಯ ಮಾಡಿಕೊಂಡಿರುತ್ತೇನೆ ಅಥವಾ ಊದಿಸಿಕೊಂಡಿರುತ್ತೇನೆ. ಮೊನ್ನೆ ಹೀಗೆ ಇದ್ದಕ್ಕಿದ್ದಂತೆ ಕಾಲಿನ ಈ ಭಾಗದಲ್ಲಿ ಏನೋ ಊದಿಕೊಂಡಿದೆಯಲ್ಲ ಅಂತ ನೋಡುತ್ತಿದ್ದೆ. ಅಷ್ಟರಲ್ಲಿ ಅಮ್ಮ ಬಂದು ‘ಏನು?’ ಎಂದರು. ‘ಏನೋ ಗೊತ್ತಿಲ್ಲ, ಊದಿಕೊಂಡಿದೆ’ ಎಂದೆ. ನಮ್ಮಮ್ಮ ಮೂಗಿನ ಮೇಲೆ ಕನ್ನಡಕ ಏರಿಸಿಕೊಂಡು ಕೂಲಂಕುಷವಾಗಿ ಪರೀಕ್ಷಿಸಿದರು. ತಾಯಿಯೇ ಮೊದಲ ಗುರು ಇದ್ದ ಹಾಗೆ, ತಾಯಿಯೇ ಮೊದಲ ಡಾಕ್ಟರ್ ಕೂಡ ಹೌದು!! ಆಮೇಲೆ ಒಂದಿಷ್ಟು ಪ್ರಶ್ನೆಗಳು. ಇದು ಆ ತರಹದ್ದಲ್ಲ, ನನಗೆ ಅಂತಹ ಸಿಂಪ್ಟಮ್’ಗಳಿಲ್ಲ, ಚನ್ನಾಗಿ ಹಸಿವಾಗ್ತಿದೆ, ಆಕ್ಯುಪ್ರೆಶರ್’ನ್ನು ತಪ್ಪದೇ ಮಾಡ್ತಿದೀನಿ, ಎಲ್ಲಕ್ಕಿಂತ ಹೆಚ್ಚಾಗಿ ಊದಿಕೊಂಡಿರುವ ಜಾಗದಲ್ಲಿ ನೋವಿದೆ. ಏನೋ ತಾಗಿಸಿಕೊಂಡಿದ್ದೀನಿ ಇರಬೇಕು, ಅಂತೆಲ್ಲಾ ಹೇಳಿ ಸಮಜಾಯಿಷಿ ಕೊಟ್ಟ ಮೇಲೆ ಆಕೆಗೆ ಸಮಾಧಾನವಾಗಿದ್ದು. ಆದರೆ ಬೈಗುಳ ತಪ್ಪಲಿಲ್ಲ. ಅದು ಸಹಜವಾದದ್ದೇ, ಜೊತೆಗೆ ನನಗೆ ಆಗಬೇಕಾಗಿದ್ದೆ!!!
ಹಾಗಂತ ಆ ಭಯ ಹೆಚ್ಚು ಹೊತ್ತು ಉಳಿಯುವುದಿಲ್ಲ. ಕೆಲ ಹೊತ್ತು ಕಾಡಿಸಿ ಹೊರಟು ಹೋಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ಇದ್ದರೆ ಇಂತಹ ಭಯ ಹೆಚ್ಚು ಕಾಡಿಸುವುದಿಲ್ಲ. “ಇಟ್ಸ್ ಆಲ್ ಇನ್ ದ ಮೈಂಡ್” ಅಂತ ಯಾರೋ ಮಹಾನ್ ಮೇಧಾವಿ ಹೇಳಿದ್ದಾರಲ್ಲ. ಎಲ್ಲದಕ್ಕೂ ಮನಸ್ಸು ಮುಖ್ಯ!!
ಎಷ್ಟೇ ಸವಾಲುಗಳಿದ್ದರೂ ಜೀವನವನ್ನ, ಸರ್ವೈವರ್’ಶಿಪ್’ನ್ನು ಸಂಭ್ರಮಿಸುವುದನ್ನ ಕಲಿತೇ ಕಲಿಯುತ್ತೇವೆ!. ಮೊದಲು ಹೇಳಿದ ಪೀಟ್ ಕ್ಯಾಂಬೆಲ್ ಎಂಬುವವನು ಎರಡು ಬಾರಿ ಕ್ಯಾನ್ಸರ್ ಗೆದ್ದವನು. ಒಂದು ಬಾರಿ ಕ್ಯಾನ್ಸರ್’ನಿಂದ ಗುಣಮುಖರಾಗಿ ಬದುಕನ್ನ ಹೊಸ ರೀತಿಯಲ್ಲಿ ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಕ್ಯಾನ್ಸರ್’ಗೆ ಈಡಾಗಿದ್ದ. ಅವರು ಆಸ್ಪತ್ರೆಯಲ್ಲಿ ಬದುಕಿಗಾಗಿ ಸೆಣಸುತ್ತಿರುವಾಗಲೇ ಶಾನ್’ನಿಂದ ಅವನಿಗೊಂದು ಮೆಸೇಜ್ ಬಂದಿತ್ತು. “ನನಗೆ ಗೊತ್ತು, ಇದು ಬಹಳ ಕಷ್ಟದ ಸಮಯ ಅಂತ. ಆದರೆ ನೀನಿದನ್ನ ಎದುರಿಸಬಲ್ಲೆ. ನೀನು ಗುಣಮುಖವಾದ ನಂತರ ಸೌಥ್ ಆಫ್ರಿಕಾದ ಕಿಲಿಮಂಜಾರೋ ಪರ್ವತಕ್ಕೆ ಕರೆದುಕೊಂಡು ಹೋಗುತೇನೆ” ಎಂದಿದ್ದ. ಅದರಿಂದಲೇ ಸ್ಪೂರ್ತಿಗೊಂಡ ಪೀಟ್ ಕ್ಯಾನ್ಸರ್ ಅನ್ನು ಕೂಡ ಒಂದು ಪರ್ವತದಂತೆ ನೋಡಲಾರಂಭಿಸಿದ್ದ. ಕ್ಯಾನ್ಸರ್ ಎಂಬ ಪರ್ವತವನ್ನು ಮೀರಿಸಿದ್ದ ಕೂಡ. ಹೋದ ವರ್ಷ ಶಾನ್ ತಾನು ಹೇಳಿದಂತೆ ಪೀಟ್’ನನ್ನು ಮೌಂಟ್ ಕಿಲಿಮಂಜಾರೋಗೆ ಕರೆದುಕೊಂಡು ಹೋಗಿದ್ದ. ಆ ಪರ್ವತದ ತುತ್ತ ತುದಿಗೆ ನಿಂತು ತನ್ನ ಪತ್ನಿಗೆ ಕರೆ ಮಾಡಿ ‘ಐ ಮೇಡ್ ಇಟ್’ ಎಂದು ಸಂಭ್ರಮಿಸಿದ್ದ. ಸರ್ವೈವರ್’ಶಿಪ್’ನ್ನು ಇದಕ್ಕಿಂತ ಸುಂದರವಾಗಿ ಸಂಭ್ರಮಿಸಲು ಸಾಧ್ಯವಾ?! ಇಂದು ಆತನ ಬದುಕು ಪ್ರತಿದಿನವೂ ಸಂಭ್ರಮವೇ!
ಪೀಟ್ ಸೆಲೆಬ್ರೇಟಿಂಗ್ ಸರ್ವೈವರ್’ಶಿಪ್ ಕಾರ್ಯಕ್ರಮದಲ್ಲಿ ಭೇಟಿಯಾದ ಒಬ್ಬ ಮಹಿಳೆ ಬಗ್ಗೆ ಹೇಳಿದ್ದ. ಆಕೆ ಇವನೊಂದಿಗೆ ಮಾತನಾಡುತ್ತಾ, “ನಾವು ಬಹಳ ದೃಢವಾಗಿರಬೇಕು. ಬದುಕಿನಲ್ಲಿ ಗೆಲುವು ಸಿಗುವುದು ದೃಢವಾಗಿದ್ದಾಗಲೇ. ನಾನು ೬ ಬಾರಿ ಕ್ಯಾನ್ಸರಿಗೊಳಗಾಗಿ ಬದುಕಿದ್ದು ಕೂಡ ಆ ದೃಢತೆಯಿಂದಲೇ” ಎಂದಿದ್ದಳಂತೆ. ಅದನ್ನ ಓದಿದಾಗ “ಅಬ್ಬಾ..!!” ಎನಿಸದೇ ಇರಲಿಲ್ಲ.
ಕ್ಯಾನ್ಸರ್’ನ ನಂತರ ಬದುಕು ಕೇವಲ ಸಂತೋಷದಿಂದ ತುಂಬಿ ಹೋಗುತ್ತದೆ ಎಂದಲ್ಲ. ಕ್ಯಾನ್ಸರ್’ನ ನಂತರ ನಮ್ಮ ಸಂತೋಷದ ವ್ಯಾಖ್ಯಾನ ಬದಲಾಗಿ ಹೋಗುತ್ತದೆ. ಚಿಕ್ಕ ಚಿಕ್ಕ ವಿಷಯಗಳ ಮೌಲ್ಯವನ್ನೂ ಅರಿಯುತ್ತೇವೆ. ಸವಾಲುಗಳಿದ್ದರೂ, ನಗು ನಗುತ್ತಾ ಬದುಕುವುದನ್ನು ಕಲಿತಿರುತ್ತೇವೆ. ಎಲ್ಲ ಅಡೆತಡೆಗಳ ನಡುವೆಯೂ ಕನಸು ಕಾಣುತ್ತೇವೆ. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಸಂಭ್ರಮಿಸುವುದಕ್ಕೆ!!! ಸೋ ಸೆಲೆಬ್ರೇಟ್ ದ ಸರ್ವೈವರ್’ಶಿಪ್..
Facebook ಕಾಮೆಂಟ್ಸ್