X
    Categories: ಕಥೆ

ರಾಜ ಸನ್ಯಾಸಿ ಭಾಗ 2

ರಾಜ ಸನ್ಯಾಸಿ ಭಾಗ ೧

ಹಲವು ವರ್ಷಗಳು ಕಳೆದವು. ಒಮ್ಮೆ ಸಾಧುಗಳ ತಂಡ ನೇಪಾಳದಲ್ಲಿದ್ದಾಗ ‘ರಾಜಕುಮಾರ ಸನ್ಯಾಸಿ’ಗೆ ಇದ್ದಕ್ಕಿದ್ದಂತೆ ತನ್ನ ಮನೆ ಪೂರ್ವ ಬಂಗಾಲದ ಢಾಕಾ ಸಮೀಪವೆಲ್ಲೋ ಇದೆ ಎಂಬ ಸಂಗತಿ ಹೊಳೆಯಿತು. ಇದನ್ನು ಕೇಳುತ್ತಿದ್ದಂತೆ ಬಾಬಾಜಿಯವರು ‘ನಿನ್ನ ಸಮಯ ಬಂದಿದೆ. ನೀನಿನ್ನು ಹೊರಡು. ಏನಾದರೂ ನಿನ್ನ ಸುತ್ತ ಆವರಿಸಿರುವ ‘ಮಾಯಾಪರದೆ’ಯನ್ನು ಸರಿಸಿ ಒಗೆಯಲು ನೀನು ಸಶಕ್ತನಾದರೆ ಬೇಕಾದರೆ ಮರಳಿಬಂದು ನನ್ನನ್ನು ಕೂಡಿಕೊಳ್ಳಬಹುದು.’ ಎಂದು ಹೇಳಿದರು.

ಅಷ್ಟರಲ್ಲಾಗಲೇ ರಾಜಕುಮಾರ ನಾಗಾ ಸಾಧುವಾಗಿ ಬದಲಾಗಿದ್ದ. ಅಡಿಯಿಂದ ಮುಡಿಯವರೆಗೆ ಭಸ್ಮವನ್ನು ಬಳಿದುಕೊಂಡಿದ್ದ. ಲಂಗೋಟಿಯೊಂದನ್ನು ಬಿಟ್ಟರೆ ಮೈಮೇಲೆ ಬೇರೆ ಬಟ್ಟೆಯಿರಲಿಲ್ಲ. ಇಷ್ಟಾದರೂ ಆತನಿಗೆ ‘ತಾನ್ಯಾರು? ತನ್ನವರ್ಯಾರು ? ‘ ಎಂಬ ಪ್ರಶ್ನೆಗಳಿಗೆ ಖಚಿತ ಉತ್ತರ ದೊರಕಲಿಲ್ಲ. ತನ್ನ ಮೂಲಸ್ಥಳ ಢಾಕಾದ ಸಮೀಪವೆಲ್ಲೋ ಇದೆ ಎಂಬ ಸಂಗತಿ ಮಾತ್ರ ಆತನ ತಲೆಯಲ್ಲಿತ್ತು. ಹಲವು ವರ್ಷಗಳ ಕಾಲ ಅಲೆದು ಆತ ಢಾಕಾದ ಹೊರವಲಯಕ್ಕೆ ಬಂದ. ಅಲ್ಲೇ ಮರದ ಕೆಳಗೊಂದು ‘ಧುನಿ’ (ಅಗ್ನಿಕುಂಡ)ಯೊಂದನ್ನು ಹೊತ್ತಿಸಿ ಅದರ ಎದುರಿಗೆ ಪದ್ಮಾಸನದಲ್ಲಿ ಸ್ಥಾಪಿತನಾದ. ನಾಲ್ಕು ತಿಂಗಳುಗಳ ಕಾಲ ಹಗಲು-ರಾತ್ರಿಯೆನ್ನದೇ ಇದೇ ಅವಸ್ಥೆಯಲ್ಲಿ ಆತ ದಿನಗಳನ್ನು ಕಳೆದ. ಅವನ ತೋಳಿನ ಮೇಲೆ ‘ಬಾಬಾ ಧರಮ್’ದಾಸ್’ನ ಚೇಲಾ ನಾಗಾ'(ಶಿಷ್ಯ) ಎಂಬ ಹಚ್ಛೆ ಇತ್ತು. ಆದರೆ ಜನರು ಮಾತ್ರ ಈ ನಾಗಾ ಸಾಧುವಿನಲ್ಲಿ ಇದ್ದ ಮೇಜೋಕುಮಾರನ ‍ಹೋಲಿಕೆಗಳನ್ನು ಪತ್ತೆಹಚ್ಚಲು ಪ್ರಾರಂಭಿಸಿದರು. ಈ ನಾಗಾಸಾಧು ಬೇರಾರೂ ಆಗಿರದೆ ಮೇಜೋಕುಮಾರ, ರಾಮೇಂದ್ರ ನಾರಾಯಣ್ ರಾಯ್ ಚಾಧರಿಯೇ ಎಂದು ಸಾಧುವನ್ನು ನೋಡಿದ ಜನರೆಲ್ಲರೂ ನಂಬಲು ಪ್ರಾರಂಭಿಸಿದರು.

ಈ ಸಂಗತಿಯು ಮಿಂಚಿನ ವೇಗದಲ್ಲಿ ಸಂಚರಿಸಿತು. ಹಲವಾರು ವ್ಯಕ್ತಿಗಳು ಬಂದು ಸಾಧುವನ್ನು ನೋಡಿ ಗುರುತು ಹಿಡಿಯಲಾರಂಭಿಸಿದರು. ಹಾಗೆ ನೋಡಲು ಬಂದ ವ್ಯಕ್ತಿಗಳಲ್ಲಿ ಮೇಜೋಕುಮಾರನ ಹಳೆಯ ಸ್ನೇಹಿತನಾದ ಕಾಸಿಮ್’ಪುರದ ರಾಜನೂ ಇದ್ದ. ಸಾಧುವನ್ನು ತನ್ನ ಅರಮನೆಗೆ ಕರೆದುಕೊಂಡು ಹೋದ ಆತ ಅಲ್ಲಿಂದ ಆತನನ್ನು ಆನೆಯ ಮೇಲೆ ಜಯದೇವಪುರಕ್ಕೆ ಕಳುಹಿಸಿಕೊಟ್ಟ. ಆದರೆ ಊರು ಸಮೀಪವಾಗುತ್ತಿದ್ದಂತೆಯೇ ಆನೆಯಿಂದ ಕೆಳಗಿಳಿದ ಆತ ಅಲ್ಲೇ ಇದ್ದ ದೇವಸ್ಥಾನವೊಂದರಲ್ಲಿ ವಾಸ್ತವ್ಯ ಹೂಡಿದ. ಅವನಿಗಿನ್ನೂ ತನ್ನ ಬಗ್ಗೆ ಖಚಿತವಾದ ಅರಿವಿರಲಿಲ್ಲ. ಆದರೆ ಅಲ್ಲಿ ಆತ ಇದ್ದಾಗಲೇ ನೂರಾರು ಜನ ಬಂಧುಗಳು, ಸ್ನೇಹಿತರು, ಸೇವಕರು ಹಾಗೂ ಪ್ರಜೆಗಳು ಬಂದು ಆತನನ್ನು ಗುರುತಿಸಲು ಪ್ರಾರಂಭಿಸಿದರು

ಈ ಸಾಧುವಿನ ಸಂಗತಿಯನ್ನು ತಿಳಿದ ರಾಜಕುಮಾರನ ಹಿರಿಯ ಅಕ್ಕ ಕುತೂಹಲದಿಂದ ಆತನನ್ನು ಅರಮನೆಗೆ ಕರೆತರುವಂತೆ ಸೂಚಿಸಿ ತನ್ನ ಮಗನನ್ನು ಕಳುಹಿಸಿದಳು. ಒಮ್ಮೆ ಅಲ್ಲಿಗೆ ಹೋದೊಡನೆ ಆತ ತನ್ನ ಅಕ್ಕ ಹಾಗೂ ಅಜ್ಜಿಯನ್ನು ‍ಗುರುತಿಸಿಬಿಟ್ಟ. ಅವರಿಗೂ ಇದು ರಾಜಕುಮಾರನೇ ಎಂಬ ಖಾತ್ರಿಯಾಯಿತು. ಆ ಹನ್ನೆರಡು ವರ್ಷಗಳ ಅವಧಿಯಲ್ಲಿ ತನ್ನ ಕಿರಿಯ ಹಾಗೂ ಹಿರಿಯ ಸಹೋದರರಿಬ್ಬರೂ ತೀರಿಕೊಂಡಿದ್ದನ್ನು ತಿಳಿದು ಅತೀವವಾಗಿ ದುಃಖಿಸಿದ. ಆ ಭವ್ಯವಾದ ಅರಮನೆಯಲ್ಲಿ ಕೇವಲ ವಿಧವೆಯರೇ ತುಂಬಿದ್ದರು. ‘ಒಬ್ಬ ಸಾಧುವಾಗಿ ಯಾಕೆ ಲೌಕಿಕ ಸಂಗತಿಗಳಿಗೆ ದುಃಖಿತನಾಗುತ್ತಿದ್ದೀಯ?’ ಎಂದು ಆತನನ್ನು ಪ್ರಶ್ನಿಸಿದರೆ ‘ಎಲ್ಲವೂ ಮಾಯೆ’ ಎಂದು ಉತ್ತರಿಸಿದ. ನೀನೇ ರಾಮೇಂದ್ರ ಚಾಧರಿಯೆ? ಎಂದು ಪ್ರಶ್ನಿಸಿದಾಗ ‘ನಾನು ನಿಮಗೇನೂ ಅಲ್ಲ’ ಎಂಬ ಉತ್ತರವನ್ನಿತ್ತ!. ಬಂಧು-ಬಳಗವನ್ನೆಲ್ಲ ಭೇಟಿ ಮಾಡುತ್ತಿದ್ದಂತೆ ಭವಲ್ ಸನ್ಯಾಸಿಗೆ ವಿವಿಧ ಭಾವಗಳು ಉಕ್ಕಿ ಬಂದವು. ಭೂತ ಮತ್ತು ವರ್ತಮಾನಗಳ ನಡುವಿನ ತಿಕ್ಕಾಟ ತೊಳಲಾಟಗಳಲ್ಲಿ ಸಿಕ್ಕಿಕೊಂಡ ಆತ ಗೊಂದಲಕ್ಕೊಳಗಾದ. ತಾನೊಬ್ಬ ಸನ್ಯಾಸಿ ಬಾಬಾ ಧರಮ್’ದಾಸ್’ರ ಶಿಷ್ಯ ಎಂದು ಅವನ ಒಳ ಮನಸ್ಸಿಗೆ ಸ್ಪಷ್ಟವಾಗಿ ಗೊತ್ತಿತ್ತಾದರೂ ತಾನು ಒಂದು ಸಂಸ್ಥಾನದ ರಾಜ ಕೂಡ ಹೌದೆನ್ನುವುದು ಅವನಿಗೆ ಅರಿವಾಗಿತ್ತು. ಆದರೂ ಮನೋಬಲದಿಂದ ‘ನನಗೇನೂ ಬೇಡ, ನಾನು ನಿಮಗೇನೂ ಅಲ್ಲ’ ಎಂದು ಆತ ಎದ್ದು ಹೊರಟು ಧುನಿಯ ಬಳಿ ತನ್ನ ಮೊದಲಿನ ಸನ್ಯಾಸ ಜೀವನವನ್ನು ಪುನರಾರಂಭಿಸಿದರೂ ಅಕ್ಕನ ಒತ್ತಾಯಕ್ಕೆ ಮಣಿದು ಮತ್ತೆ ಅರಮನೆಗೆ ವಾಪಸ್ಸಾದ. ಕೂಲಂಕುಶವಾಗಿ ಗಮನಿಸಿದಾಗ ಅವನ ದೇಹದ ಮೇಲೆ ಮೇಜೋಕುಮಾರನಿಗಿದ್ದ ಹಲವು ಗುರುತುಗಳು ಕಂಡುಬಂದವು. ಅಲ್ಲಿಗೆ ಅದು ಅವನೇ ಎಂಬುದು ಅವನ ಅಕ್ಕ, ಅಜ್ಜಿಗೆ ಖಚಿತವಾಯ್ತು.

ಅರಮನೆಯಲ್ಲಾದರೋ, ಆತನಿಗೆ ಮೈತುಂಬಾ ಬೂದಿ ಬಳಿದುಕೊಳ್ಳಲು ಅವಕಾಶವಿರಲಿಲ್ಲ. ಬಾಬಾಜಿಯ ಜೊತೆ ಯಾವುದೇ ಅಡೆತಡೆಯಿಲ್ಲದೆ ದೇಶವನ್ನು ಸಂಚರಿಸಿ ಆಧ್ಯಾತ್ಮಿಕ ಸುಖವುಂಡ ರಾಜಕುಮಾರನಿಗೆ ಈಗಿನ ರಾಜವೈಭೋಗದಲ್ಲಿ ಸತ್ವವೇ ಕಾಣಿಸುತ್ತಿರಲಿಲ್ಲ. ಅಷ್ಟರಲ್ಲಾಗಲೇ ಆತನ ಹಿಂದಿನ ಸ್ಮರಣೆಗಳು ಸಂಪೂರ್ಣವಾಗಿ ಅವನಿಗೆ ಗೋಚರವಾಗಿದ್ದವು. ತನ್ನ ಪತ್ನಿ ಹಾಗೂ ಅವಳ ತಮ್ಮನೇ ತನ್ನನ್ನು ೧೯೦೯ರಲ್ಲಿ ಕೊಲ್ಲಲು ಯತ್ನಿಸಿದ್ದರು ಎಂಬ ಶಂಕೆ ಅವನಲ್ಲಿ ಮೂಡಿತು. ಇದರ ಕುರಿತು ಯೋಚಿಸಿ ನಿರ್ಧಾರಕ್ಕೆ ಬರಲು ಆತನಿಗೆ ಸಾಕಷ್ಟು ಸಮಯ ಬೇಕಾಗಿತ್ತು. ಒಂದೆಡೆ ಅವನೂಳಗಿನ ಸನ್ಯಾಸಿಯು ‘ಇದು ವೈರಾಗ್ಯವನ್ನು ಸಾಧಿಸಲು ದೇವರು ನೀಡಿರುವ ಅವಕಾಶ, ಅವರಿಬ್ಬರನ್ನು ಕ್ಷಮಿಸು’ ಹೇಳುತ್ತಿದ್ದರೆ ಅವನೊಳಗಿನ ರಾಜಕುಮಾರನು ‘ಹೇಡಿಯ ತರಹ ಆಡಬೇಡ,ನಿನ್ನದೇನಿದೆ, ಧೈರ್ಯದಿಂದ ಹೋರಾಡಿ ಗಳಿಸಿಕೋ’ ಎಂದು ಹೇಳುತ್ತಿದ್ದ. ಈ ಸಂಧಿಗ್ಧತೆಯಲ್ಲಿ ಆತ ಮನಶ್ಯಾಂತಿ ಕಳೆದುಕೊಂಡು ಕೊರಗಿದ. ಈ ನಡುವೆ ಬಾಬಾಜಿ ಹೇಳಿದ್ದ ‘ಮಾಯಪರದೆಯನ್ನು ಕಿತ್ತೆಸೆ ‘ ಎನ್ನುವ ಮಾತೂ ನೆನಪಾಗುತ್ತಿತ್ತು. ‘ಹಾಗೆಂದರೆ ಏನು? ಎಲ್ಲದರ ನಡುವೆ ಇದ್ದೂ ಮೇಲೇರಬೇಕೆ? ಆಥವಾ ಯಾವುದೂ ಬೇಡವೆಂದು ಬೆನ್ನು ಹಿಂತಿರುಗಿಸಿ ನಡೆದುಬಿಡಬೇಕೇ?’ ಎಂಬ ಯೋಚನೆ ಅವನನ್ನು ಕಾಡುತ್ತಿತ್ತು. ‘ನ್ಯಾಯವಾಗಿ ನಿನ್ನದೇನಿದೆಯೋ , ಅದನ್ನು ಗಳಿಸಿಕೋ ಆಮೇಲೆ ಹೇಗಿದ್ದರೂ ಬಿಟ್ಟುಬಿಡಬಹುದು ‘ ಎನ್ನುವುದೇ ಅವನ ಮನಸ್ಸಿನ ಬಲವಾದ ನಂಬಿಕೆಯಾಗಿತ್ತು. ಈ ನಡುವೆ ತನ್ನ ಗುರುತನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕಾದ ಒತ್ತಡಕ್ಕೂ ಆತ ಸಿಲುಕಿದ್ದ. ಈಗ ಆತ ಎರಡು ಸಂಗತಿಗಳಲ್ಲಿ ಒಂದನ್ನು ಅಯ್ದಕೊಳ್ಳಬೇಕಿತ್ತು. ಇದೆಲ್ಲದರ ನಡುವೆ ಇದ್ದು ಜೀವಿಸುವುದು, ಅಥವಾ ಎಲ್ಲದಕ್ಕೂ ಬೆನ್ನು ತಿರುಗಿಸಿ ನಡೆದುಬಿಡುವುದು.

ಅವನು ರಾಜಕುಮಾರನು ತಾನೇ ಎಂದು ಜನರ ಮುಂದೆ ಹೇಳಿಕೊಳ್ಳುತ್ತಾನೆಂದು ಕಾದು ಕಾದು ಬೇಸತ್ತ ಅವನ ಅಕ್ಕ ಒಂದು ದಿನ ಅವನನ್ನು ಒತ್ತಾಯಿಸಿ , ಸಾರ್ವಜನಿಕ ಸಭೆಯ ಮುಂದೆ ಆತ ನಿಜವನ್ನು ಹೇಳದಿದ್ದರೆ ತಾನು ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಮಾಡುವುದಾಗಿ ಬೆದರಿಸಿದಳು. ಅವಳ ಒತ್ತಾಯಕ್ಕೆ ಮಣಿದ ಭವಲ್ ಸನ್ಯಾಸಿ ಕೊನೆಗೂ ಜನರ ಮುಂದೆ ಬರಲು ಒಪ್ಪಿದ. ೧೯೨೧ರ ಮೇ ೪ ರಂದು ಸಂಸ್ಥಾನದ ಜನರು ಭವಲ್ ಸನ್ಯಾಸಿಯೆಂದೇ ಬೆಳಕಿಗೆ ಬಂದಿದ್ದ ವ್ಯಕ್ತಿಯನ್ನು ಮೇಜೋಕುಮಾರನೆಂದು ಹರ್ಷೋದ್ಗಾರಗಳೊಂದಿಗೆ ಸ್ವೀಕರಿಸಿದರು. ಅಂದು ಜನರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಭವಲ್ ಸನ್ಯಾಸಿ ಸರಿಯಾದ ಉತ್ತರವನ್ನೇ ನೀಡಿದ್ದ.

ಮೇಜೋಕುಮಾರನು ಮರಳಿ ಬಂದಿದ್ದಕ್ಕಾಗಿ ಆನಂದಿತರಾದ ಜನರು ಆತನಿಗೆ ಕೊಡುಗೆಗಳನ್ನು ತರಲು ಪ್ರಾರಂಭಿಸಿದರಲ್ಲದೆ ತೆರಿಗೆಯನ್ನೂ ತೆರಲು ಪ್ರಾರಂಭಿಸಿದರು. ಈ ಸಂಗತಿಯನ್ನು ತಿಳಿದ ಅವನ ಪತ್ನಿ ಹಾಗೂ ಅವಳ ತಮ್ಮ ಮಾತ್ರ ಇದರಿಂದ ಕೆಂಡಾಮಂಡಲವಾದರು. ‘ಆತ ತನ್ನ ಪತಿಯಲ್ಲ, ಅವನ ವೇಷ ಹಾಕಿಕೊಂಡ ನಯವಂಚಕ’ ಎಂದೇ ಆಕೆ ಪ್ರತಿಪಾದಿಸಿದರು. ನಾಗಾ ಸಾಧುವೊಬ್ಬ ತಮ್ಮ ಸಾಮ್ರಾಜ್ಯವನ್ನು ಕಬಳಿಸುತ್ತಿದ್ದಾನೆನ್ನುವದು ಅವರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿತ್ತು. ಆಕೆ ಆತನು ಮರಳಿ ಬಂದಾಗಿನಿಂದ ಒಮ್ಮೆಯೂ ಆತನನ್ನು ನೋಡಲು ಒಪ್ಪಿರಲಿಲ್ಲ. ಕೂಡಲೇ ಸತ್ಯೇಂದ್ರನಾಥನು ಕಂದಾಯ ಇಲಾಖೆಯ ಕಾರ್ಯದರ್ಶಿಗಳಾಗಿದ್ದ ಲೆಥ್ ಬ್ರಿಡ್ಜ್’ರನ್ನು ಸಂಪರ್ಕಿಸಿ ರಾಮೇಂದ್ರ ಚೌಧರಿಯ ಮರಣ ಪತ್ರವನ್ನು ತೋರಿಸಿದ. ಅದು ಅಧಿಕೃತ ಪತ್ರವಾಗಿತ್ತು. ಕಂದಾಯ ಇಲಾಖೆಯು ಅರಮನೆಯ ಆಡಳಿತ ಮಂಡಳಿಯನ್ನು ನೇರವಾಗಿ ನಿಯಂತ್ರಿಸುತ್ತಿತ್ತು. ಜನರು ‘ಆತನಿಗೆ’ ತೆರಿಗೆ ಕಟ್ಟಬಾರದು ಎನ್ನುವುದು ಅವರ ಉದ್ದೇಶವಾಗಿತ್ತು. ರಾಜಕುಮಾರ ಸತ್ತಾಗ ತಾನು ತನ್ನ ಸಹೋದರಿಯ ಪರವಾಗಿ ‘ ಸ್ಕಾಟಿಶ್ ಯೂನಿಯನ್ ಇನ್ಸೂರೆನ್ಸ ಕಂಪನಿ’ಯಿಂದ ಧನಸಹಾಯವನ್ನು ಪಡೆದಿದ್ದಾಗಿ ಸತ್ಯೇಂದ್ರನಾಥ ಸ್ಪಷ್ಟಪಡಿಸಿದ ನಂತರ ಕಂದಾಯ ಇಲಾಖೆಯ ಮುಖ್ಯಸ್ಥರ ಸಲಹೆಯ ಮೇರೆಗೆ ಪೂರ್ವಬಂಗಾಳದಲ್ಲಿ ಪ್ರಸರಣವಾಗುತ್ತಿದ್ದ, ಬ್ರಿಟಿಷರ ಒಡೆತನದಲ್ಲಿದ್ದ ‘ ದ ಇಂಗ್ಲಿಷ್ ಮ್ಯಾನ್ ‘ ಪತ್ರಿಕೆಯಲ್ಲಿ ರಾಮೇಂದ್ರ ಚೌಧರಿ ಅಂದರೆ ಮೇಜೋಕುಮಾರನು ಮರಣ ಹೊಂದಿದ್ದರ ಬಗೆಗೆ ವಿಸ್ತಾರವಾದ ವರದಿಯನ್ನು ಪ್ರಕಟಿಸಿದ.

ಭವಲ್ ಸನ್ಯಾಸಿಯ ಕತೆ ಇಷ್ಟರಲ್ಲಾಗಲೇ ಮನೆ ಮಾತಾಗಿತ್ತು. ಸನ್ಯಾಸಿಯ ಪರ ಹಾಗೂ ವಿರುಧ್ಧವಾಗಿ ಜನರು ಮಾತನಾಡುತ್ತಿದ್ದರು. ೧೯೨೧ ರ ಜೂನ್ ೩ರಂದು ಕಂದಾಯ ಇಲಾಖೆಯ ಭವಲ್ ಸನ್ಯಾಸಿಯೊಬ್ಬ ಸೋಗಿಗ ಎಂದು ತೀರ್ಪು ಹೊರಡಿಸಿ ನೋಟಿಸ್ ಜಾರಿ ಮಾಡಿತು. ಮೇಜೋಕುಮಾರನ ದೇಹವನ್ನು ಸಂಪೂರ್ಣವಾಗಿ ೧೨ ವರ್ಷಗಳ ಹಿಂದೆ ಡಾರ್ಜಿಲಿಂಗ್’ನಲ್ಲಿ ದಹಿಸಲಾಗಿದ್ದು ಆದ್ದರಿಂದ ಆತ ವಾಪಸ್ ಬದುಕಿ ಬರುವ ಸಾಧ್ಯತೆಗಳು ಇರುವುದಿಲ್ಲ. ಆದ್ದರಿಂದ ರಾಜನ ಹೆಸರಿನಲ್ಲಿ ಆಡಳಿತ ನಡೆಸುತ್ತಿರುವ ಸಾಧುವು ಸೋಗಿಗನಾಗಿದ್ದು ಜನರು ಯಾರೂ ಅವನಿಗೆ ತೆರಿಗೆ ಕಟ್ಟಬಾರದು. ಯಾರು ಕಟ್ಟುತ್ತಾರೋ, ಅವರು ಸ್ವಂತ ಮರ್ಜಿಯ ಮೇಲೆ ಕಟ್ಟಬೇಕಷ್ಟೆ!! ” ಈ ನೋಟಿಸ್’ನ್ನು ಒಂದು ಸ್ಥಳೀಯ ಮಾರುಕಟ್ಟೆಯಲ್ಲಿ ತಮಟೆ ಬಡಿದು ಓದಿ ಹೇಳಿದಾಗ ದೊಡ್ಡ ಗಲಭೆಯೇ ಶುರುವಾಗಿಬಿಟ್ಟಿತು. ಗಲಭೆಯನ್ನು ನಿಯಂತ್ರಿಸಲು ಪೋಲಿಸರು ಶುರುಮಾಡಿದ ಗೋಲಿಬಾರ್’ನಲ್ಲಿ ಒಬ್ಬ ಮೃತಪಟ್ಟು ಇನ್ನೂ ಹಲವರು ಗಾಯಗೊಂಡರು. ಸನ್ಯಾಸಿಯನ್ನು ಬೆಂಬಲಿಸುತ್ತಿದ್ದವರ ವಿರುದ್ಧ ಕೇಸ್ ದಾಖಲು ಮಾಡಿದರು. ಆದರೆ ಕೋರ್ಟ್ ಕಟಕಟೆಗೆ ಈ ಪ್ರಕರಣ ಬಂದಾಗ ಅವರೆಲ್ಲರನ್ನು ಖುಲಾಸೆಗೊಳಿಸಲಾಯ್ತು. ಆಗಸ್ಟ್ ೧೯೨೧ ರಲ್ಲಿ ಪಕ್ಕದ ರಾಜ್ಯವಾದ ಬುರ್ದ್ವಾನ್’ನ ರಾಜನ ಮನವಿಯ ಮೇರೆಗೆ ಬಾಬಾಜಿಯವರು ಢಾಕಾಗೆ ಬಂದು ಮೇಜೋಕುಮಾರನ ಬಗ್ಗೆ ವಿವರವಾದ ಹೇಳಿಕೆಯನ್ನು ನೀಡಿದರು. ಆತ ತಮಗೆ ಸಿಕ್ಕಿದ್ದು ಹೇಗೆ, ಆತನನ್ನು ತಾನು ಬದುಕಿಸಿದ್ದು ಹೇಗೆ ಹಾಗೂ ಆತನನ್ನು ವಾಪಸ್ಸು ಕಳಿಸಿದ ಸಂದರ್ಭಗಳನ್ನು ಕೂಲಂಕುಷವಾಗಿ ವಿವರಿಸಿದರು.

ಈ ವೇಳೆಗೆ ಭವಲ್ ಸನ್ಯಾಸಿಯ ಹೋರಾಟದಲ್ಲಿ ಅವನ ಅಕ್ಕ ಹಾಗು ಅಜ್ಜಿ ಕೂಡ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. 1922 ರ ಜುಲೈನಲ್ಲಿ ರಾಜನ ಅಜ್ಜಿಯು ರಾಜನ ಪತ್ನಿಯಾಗಿದ್ದ ಬಿಭಾಬತಿಗೆ ಪತ್ರವೊಂದನ್ನು ಬರೆದು “ನೀನೇ ಬಂದು ನಿನ್ನ ಕಣ್ಣಾರೆ ಸಂಗತಿಗಳನ್ನು ಕಂಡು ಸತ್ಯವು ಯಾವುದೆಂದು ನಿರ್ಧರಿಸು. ನನ್ನ ಪತಿಯು ಕಟ್ಟಿ ಬೆಳೆಸಿದ ಈ ಸಾಮ್ರಾಜ್ಯದ ಘನತೆ ಗೌರವಗಳನ್ನು ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಹಾಗೂ ರಾಜನ ಪತ್ನಿಯಾಗಿ ಹಾಗೆ ನಡೆದುಕೊಳ್ಳುವುದು ನಿನ್ನ ಧರ್ಮವೂ ಕೂಡ ಆಗಿದೆ” ಎಂದು ಅರಮನೆಗೆ ಬರಲು ಆಹ್ವಾನವಿತ್ತರು. ಆದರೆ ಬಿಭಾಬತಿಯು ಮಾತ್ರ ಈ ಪತ್ರವನ್ನು ಸ್ವಿಕರಿಸಲು ನಿರಾಕರಿಸಿದಳು. ಈ ಘಟನೆಯಿಂದ ರಾಜನ ಪತ್ನಿಯೇ ತನ್ನ ಸಹೋದರನ ಜೊತೆ ಸೇರಿ ಅವನನ್ನು ಕೊಲ್ಲಲು ಸಂಚು ಹೂಡಿದ್ದಳೆಂದು ರಾಜಕುಮಾರನ ಅಜ್ಜಿಗೆ ಖಾತ್ರಿಯಾಯಿತು. ಇದೇ ಕಾರಣಕ್ಕಾಗಿ ಅವಳು ಢಾಕಾದ ಕಲೆಕ್ಟರ್’ರಾಗಿದ್ದ ಜೆ ಜಿ ದ್ರಮ್ಮೊಂಡ್’ರನ್ನು ಭೇಟಿಯಾದರು. ಕಲೆಕ್ಟರ್ ಹುದ್ದೆ ಢಾಕಾದ ಇಡೀ ಪ್ರಾಂತ್ಯಕ್ಕೆ ಅತ್ಯುನ್ನತ ಸರಕಾರಿ ಹುದ್ದೆಯಾಗಿತ್ತು. ಅವರ ಬಳಿ ಈ ಪ್ರಕರಣವನ್ನು ಅತ್ಯಂತ ಸಮರ್ಥ ನ್ಯಾಯಾಧೀಶರ ಮೂಲಕ ವಿಚಾರಣೆ ಮಾಡಿಸಬೇಕೆಂದೂ, ಸಾಧ್ಯವಾದಲ್ಲಿ ದೇಶದ ಆರು ಉಚ್ಚ ನ್ಯಾಯಾಲಯಗಳ ನ್ಯಾಯಮೂರ್ತಿಗಳ ನಿಯೋಗವೊಂದನ್ನು ರಚಿಸಿ ಅದರ ಮುಂದೆ ಈ ಪ್ರಕರಣವನ್ನು ನಿರ್ಣಯಿಸಬೇಕೆಂದು, ಅದಕ್ಕೆ ತಗಲಬಹುದಾದ ವೆಚ್ಚವನ್ನು ತನ್ನ ಸ್ವಂತ ಖರ್ಚಿನಲ್ಲಿ ಭರಿಸುತ್ತೇನೆಂದೂ ರಾಜನ ಅಜ್ಜಿಯು ಮನವಿ ಮಾಡಿಕೊಂಡಳು.

ಭವಲ್ ಸನ್ಯಾಸಿ ಕೂಡ ಈಗ ಹೋರಾಟದ ಮಾರ್ಗವನ್ನು ತುಳಿದಿದ್ದ. ನ್ಯಾಯವು ಸಿಕ್ಕ ಮೇಲೆಯೇ ವೈರಾಗ್ಯದ ಮಾರ್ಗವನ್ನು ತುಳಿಯುವುದೆಂದು ಆತ ನಿರ್ಧರಿಸಿಯಾಗಿತ್ತು. ಆತ 1924 ರಿಂದ 1929 ರವರೆಗೆ ಡಾಕಾದಲ್ಲೇ ನೆಲೆಸಿದ. ಈ ಅವಧಿಯಲ್ಲಿ ಆತ ಅಪಾರವಾದ ಜನಪ್ರಚಾರವನ್ನು ಪಡೆದುಕೊಂಡ. ಇಡೀ ಬಂಗಾಳದಲ್ಲೇ ಖ್ಯಾತ ವ್ಯಕ್ತಿಯಾದರೂ ಆತ ರಾಜಕೀಯದತ್ತ ಮುಖ ಮಾಡಲಿಲ್ಲ. ಆದರೆ ಅವನನ್ನು ಹಿಂಬಾಲಿಸುವ ಜನ ವರ್ಗ ಬಹಳವೇ ಇತ್ತು.ಅದು ಸ್ವಾತಂತ್ರ್ಯ ಸಂಗ್ರಾಮ ದೇಶದಲ್ಲೆಡೆ ಸದ್ದು ಮಾಡುತ್ತಿದ್ದ ಕಾಲ. ಆದರೂ ಹಲವು ವರ್ಷಗಳ ಕಾಲ ಭವಲ್ ಸನ್ಯಾಸಿಯ ಪ್ರಕರಣವು ಮೊದಲಿನಂತೆಯೇ ತನ್ನ ನಿಗೂಢತೆ ಹಾಗೂ ಜನಪ್ರಿಯತೆಯನ್ನು ಕಾಯ್ದುಕೊಂಡಿತ್ತು.

Sandeep Hegde, Sirsi

Source:

1)Wikipedia
2) At the eleventh hour,an autobiography of swami Rama

 

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post