ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೧೩
______________________________
ಪುರುಷ ಸ್ವತಂತ್ರತೆಯ ಪರಮ ಸಿದ್ದಿಯದೇನು ? |
ಧರಣಿಗನುದಿನದ ರಕ್ತಾಭಿಷೇಚನೆಯೆ? ||
ಕರವಾಲವನು ಪುಷ್ಪಸರವೆಂದು ಸೆಳೆದಾಡೆ |
ಪರಿಮಳವ ಸೂಸುವುದೆ? – ಮಂಕುತಿಮ್ಮ ||
ಸ್ವಾತಂತ್ರ ಮತ್ತು ಸ್ವೇಚ್ಛೆಯ ನಡುವಿನ ತೆಳುಗೆರೆ ಬಹಳ ಸೂಕ್ಷ್ಮವಾದದ್ದು. ಯಾವುದು ಎಲ್ಲಿ ಮುಗಿಯುತ್ತದೆ, ಮತ್ತೆಲ್ಲಿ ಆರಂಭವಾಗುತ್ತದೆ ಎಂದು ಗುರುತಿಸುವುದು ಸುಲಭವಲ್ಲ. ಸ್ವತಂತ್ರವಿರದಾಗ ಅದಕ್ಕೆ ಹಪಹಪಿಸುವ ಮನಕ್ಕೆ, ಅದು ಸಿಕ್ಕಿದಾಗ ರೆಕ್ಕೆ ಬಿಚ್ಚಿದ ಹಕ್ಕಿಯಷ್ಟೆ ಆನಂದಾನುಭೂತಿ ಲಭ್ಯ. ಅದಕ್ಕಾಗಿ ಹೊಡೆದಾಟ ನಡೆಸದೆ ಸುಲಲಿತವಾಗಿ ಕೈ ಸೇರಿದ ಸುಖವನ್ನನುಭವಿಸಿದವರಿಗೆ ಅದರ ಸ್ವಾನುಭವವಿರದಿದ್ದರು, ಅದರ ಮೌಲ್ಯದ ಅರಿವು-ಎಚ್ಚರಿಕೆಯಿರಬೇಕಾದ್ದು, ಸೂಕ್ಷ್ಮ ಗಡಿರೇಖಾ ಮಿತಿಯ ಪರಿಗಣನೆಯಿರಬೇಕಾದ್ದು ಮುಖ್ಯ. ಕವಿಯ ಸಾಮಾಜಿಕ ಪರಿಸರದಲ್ಲಿ ಪುರುಷ ಪ್ರಾಧಾನ್ಯತೆ ಸಾಮಾನ್ಯವಾಗಿದ್ದ ಕಾರಣ, ಅದು ಪುರುಷರಿಗೆ ಹೆಚ್ಚಿನ ಸ್ವಾತಂತ್ರವನ್ನು ಕೊಡಮಾಡುವ ಅಧಿಕಾರಯುತ ಶಕ್ತಿಯಾಗಿ ಬದಲಾಗುವುದು ಅಸಹಜ ಬೆಳವಣಿಗೆಯೇನಲ್ಲ. ಮೂಲತಃ ಪುರುಷಪ್ರಧಾನ ಪರಿಸರದಲ್ಲಿ ಅವರಿಗೆ ಸಿಗುವ ಸ್ವತಂತ್ರತೆಯು ಜವಾಬ್ದಾರಿಯಿಂದ, ಹೊಣೆಗಾರಿಕೆಯಿಂದ ಬಳಸಲ್ಪಡುವ ಅಧಿಕಾರವೊ, ಸಂಯಮ ನಿರ್ಬಂಧಿತ ಸ್ವೇಚ್ಛೆಯೊ ಆಗಬೇಕೆ ಹೊರತು ದುರ್ಬಳಕೆಯ ಪರಿಕರವಾಗಬಾರದು.
ಆದರೆ ಇತಿಹಾಸವನ್ನು ಆಳವಾಗಿ ಅವಲೋಕಿಸಿದರೆ ಕಾಣುವುದೇನು? ಸಿಕ್ಕ ಸ್ವಾತಂತ್ರವು ನೀಡುವ ಶಕ್ತಿಯನ್ನೆ ಮಿಕ್ಕೆಲ್ಲರನ್ನು ಕಡಿವಾಣ, ಹತೋಟಿ, ನಿಯಂತ್ರಣದಲ್ಲಿರಿಸುವ ಸಿದ್ದಿಯ ಸಮನಾರ್ಥಕವಾಗಿಸಿ, ಸ್ವೇಚ್ಛೆಯಿಂದ ಹಿಂದೆ ಮುಂದೆ ನೋಡದೆ ಸಿಕ್ಕಸಿಕ್ಕವರನ್ನೆಲ್ಲ ತರಿದು ಧರೆಗೊರಗಿಸುತ್ತ ರಕ್ತಾಭೀಷೇಕ ಮಾಡಿಕೊಂಡು ಹೋಗುವುದೇನು ದೊಡ್ಡ ಪುರುಷಾರ್ಥವೆ ? ಎಂದು ಕೇಳುತ್ತದೆ ಕವಿಮನಸು. ಹಾಗೆ ಮುನ್ನಡೆಯುವ ಅವಸರದಲ್ಲಿ ಅಗತ್ಯವಿರಲಿ, ಬಿಡಲಿ ಸಿಕ್ಕೆಡೆಯಲ್ಲೆಲ್ಲ ಕರವಾಳವನ್ನು (ಕತ್ತಿ), ಹೂವಿನ ಸರವೆತ್ತಿದಷ್ಟೆ ಸಲೀಸಾಗಿ ಸೆಳೆಯುತ್ತ ಹೋದರೆ, ಅದರಿಂದುಂಟಾಗುವ ದುಷ್ಕೃತ್ಯದ ಫಲಿತ ರಕ್ತ ಸುರಿಸುವುದಲ್ಲದೆ ಹೂವಿನ ಪರಿಮಳವನ್ನು ಹೊರಚೆಲ್ಲಲು ಸಾಧ್ಯವೆ ಎನ್ನುತ್ತಾನೆ ಮಂಕುತಿಮ್ಮ.
ಇಲ್ಲಿ ಮೇಲ್ನೋಟಕ್ಕೆ ಪುರುಷ ಶಕ್ತಿ, ಕತ್ತಿಯ ಯುದ್ಧ, ರಕ್ತಾಭಿಷೇಚನ ಇತ್ಯಾದಿಗಳ ಬಳಕೆಯಿಂದ ಯುಗಯುಗಗಳಿಂದ ನಡೆದು ಬಂದ ಕದನ, ಯುದ್ಧಗಳ ಕುರಿತಾಗಿ ಹೇಳುತ್ತಿದ್ದರೆ ಎಂದನಿಸಿದರು, ನನಗೆ ಮತ್ತೊಂದು ಅಗೋಚರ ಕೋನವೂ ಇದರೊಳಗಡಗಿರುವಂತೆ ಭಾಸವಾಗುತ್ತದೆ. ಇದು ಅಂತರಾಳದಲ್ಲಿ ಗಂಡು ಹೆಣ್ಣಿನತ್ತ ನೋಡುತ್ತಿದ್ದ ದೃಷ್ಟಿಕೋನದ ಟೀಕೆಯೂ ಆಗಿರಬೇಕೆಂಬುದೆ ಆ ಅನಿಸಿಕೆ. ಪುರುಷ ಸ್ವಾತಂತ್ರ ಬಲದಿಂದ ಸಿಕ್ಕಿದ ಅಧಿಕಾರವನ್ನೆ ಬಳಸಿಕೊಂಡು ಹೆಣ್ಣಿನ ನೇರ ಅಥವಾ ಪರೋಕ್ಷ ಶೋಷಣೆಗೆ ತೊಡಗುವ ಅಹಮಿಕೆಯ ಪ್ರಸ್ತಾಪದಂತೆ ಕಾಣಿಸುತ್ತದೆ. ಉಗುರಲಿ ಹೋಗುವುದನ್ನು ಕೊಡಲಿ ಹಿಡಿದು ತೊಲಗಿಸುವ ಪ್ರವೃತ್ತಿಯನ್ನು ಟೀಕಿಸುತ್ತಲೆ, ಸ್ತ್ರೀಯ ಮಾನಸಿಕ ವಿಭಿನ್ನತೆಯ ವಿವೇಚನೆ ಮತ್ತು ಸೂಕ್ಷ್ಮಜ್ಞತೆಯರಿವಿರದ ಒರಟುತನವನ್ನು ಎತ್ತಾಡುವ, ಹಿಂಸಾಪ್ರವೃತ್ತಿಗಿಳಿದು ದಂಡಿಸುವ ಬುದ್ಧಿಯನ್ನು ಖಂಡಿಸುವ ಕವಿಭಾವವೇನೊ ಅನಿಸುತ್ತದೆ.
ಇಲ್ಲಿ ಧರಣಿಯನ್ನು ಹೆಣ್ಣಿನ ಪ್ರತಿಮಾ ರೂಪವಾಗಿ ಪರಿಗಣಿಸುತ್ತ, ರಕ್ತಾಭಿಷೇಚನವನ್ನು ಒರಟು ದೌರ್ಜನ್ಯಕ್ಕೆ ಸಮೀಕರಿಸುತ್ತ ನೋಡಿದಾಗ ಅದರ ಮುಂದಿನ ಸಾಲು ಮತ್ತಷ್ಟು ಅರ್ಥಗಳನ್ನು ಸ್ಪುರಿಸುತ್ತದೆ. ಸ್ತ್ರೀಯ ಒಡನಾಟದಲ್ಲಿ ಸಹಜವಾಗಿ ಬಳಸಬಹುದಾದ ಮಧುರಭಾವಾನುಭೂತಿಯ ಪುಷ್ಪಸರದ ಬದಲು, ಬಲವಂತದ ಕಟ್ಟೋತ್ತಾಯದ ಕರವಾಳದಂತಹ ಕ್ರಮದನುಸರಣೆಗಿಳಿದು, ನಂತರ ಫಲಿತವಾಗಿ ಹೂವಿನ ಪರಿಮಳ ಹೊರಡಲಿಲ್ಲವೆಂದು ದೂರಲಾಗುತ್ತದೆಯೆ ? ಪ್ರಕೃತಿಯನೊಲಿಸುವ ಹುನ್ನಾರದಲ್ಲಿ ತನ್ನಾಯುಧಗಳೊಡನೆ ರಣರಂಗಕ್ಕೆ ಹೊರಟ ಪುರುಷ ಪ್ರವೃತ್ತಿ, ಮೃದುಲ ಪ್ರಕೃತಿಯ ಅಂತರಾಳವನ್ನರಿಯದೆ ತನ್ನ ಶಕ್ತಿ, ಬಲದ ಹಮ್ಮಿನಲ್ಲಿ ಹಣಿಯಲು ಹೊರಟರೆ ಆ ಒರಟು ಚೆಲ್ಲಾಟಕ್ಕೆ ನೆತ್ತರ ಘಾತಕ ಸ್ರಾವವಾಗುವುದೆ ಹೊರತು ಪರಿಮಳಭರಿತ ಪುಷ್ಪಗಳಿಂದ ಸುವಾಸನೆ ಬೀರುವ ಪ್ರಶಾಂತ ಮಾನಸ ಸರೋವರವಾಗದು. ಹೀಗೆ ಪ್ರಕೃತಿಯತ್ತ ಪುರುಷನ ದೃಷ್ಟಿಕೋನದ ಒಂದು ತುಣುಕನ್ನು ಈ ಸಾಲುಗಳು ದರ್ಶನ ಮಾಡಿಸುತ್ತವೆಯೆಂದು ನನ್ನ ಭಾವನೆ.
ಇದೇನು ಕವಿಯ ಮೂಲದಿಂಗಿತ ಭಾವಗಳಲೊಂದಾಗಿತ್ತೊ ಅಥವಾ ಸಾಮಾನ್ಯವಾಗಿ ಕವಿತೆಗಳಲ್ಲಾಗುವಂತೆ ಓದುಗನ ಭಿನ್ನ ಮನಸ್ಥಿತಿಗನುಸಾರವಾಗಿ ಸ್ಪುರಿಸುವ ವೈವಿಧ್ಯ ಭಾವದ ಸರಕೊ ಹೇಳುವುದು ಕಠಿಣ. ಅದರಲ್ಲೂ ಇದನ್ನು ಬರೆದ ಕಾಲಮಾನದಲ್ಲಿದ್ದ ಮಡಿವಂತಿಕೆ, ಸಾಮಾಜಿಕ ಮತ್ತು ಪರಿಸರ ಪ್ರೇರಿತ ನಿರ್ಬಂಧಗಳ ಕಾರಣದಿಂದ ಕವಿ ಅದನ್ನು ಪ್ರಕಟವಾಗಿ ಹೇಳಬೇಕೆಂದುಕೊಂಡರು, ಮುಕ್ತವಾಗಿ ಬಿಚ್ಚಿಡುವುದಕ್ಕಿಂತ ಗೂಢಾರ್ಥದಡಿ ಬಚ್ಚಿಡುವ ಸಾಧ್ಯತೆಯೆ ಹೆಚ್ಚು. ಇದು ಅಂತಹುದೆ ಅರ್ಥವೇ – ಎಂದು ಅಧಿಕಾರಯುತವಾಗಿ ಹೇಳಬಲ್ಲ ಪಾಂಡಿತ್ಯ ನನಗಿರದಿದ್ದರು, ಇದು ನನ್ನಲ್ಲಿ ಹೊರಳಿದ ವಿಭಿನ್ನ ಭಾವವೊಂದೆಂದು ಹೇಳಲು ಅಡ್ಡಿಯಿಲ್ಲವೆನ್ನಬಹುದು.
Facebook ಕಾಮೆಂಟ್ಸ್