X

ಒಂದೂರಲ್ಲೊಂದಿನ

ಪ್ರವಾಸ ಕಥನಗಳನ್ನು ನಮ್ಮ ಕೆಲವು ಬರಹಗಾರರು ಕೇವಲ ಎಲ್ಲಿಗೆ ಹೋದೆ? ಹೇಗೆ ಹೋದೆ? ಏನೇನು ತಿಂದೆ? ಇಷ್ಟಕ್ಕೇ ಸೀಮಿತಗೊಳಿಸಿಬಿಡುತ್ತಾರೆ. ಎಲ್ಲರಿಗೂ ಕಾಣುವ ವಿಷಯಗಳನ್ನು ಬರೆಯುವುದು ಅನಗತ್ಯ ಎಂಬುದು ನನ್ನ ಅನಿಸಿಕೆ. ಯಾವ ವ್ಯಕ್ತಿಗೆ ತಾನಿರುವ ಜಾಗದಲ್ಲೇ ಕುತೂಹಲವಿಲ್ಲವೋ, ಆತ ಪ್ರವಾಸ ಮಾಡುವುದು ಸಂಪನ್ಮೂಲದ ಪೋಲು ಅಷ್ಟೇ. ನಾನು ಬರೆಯುತ್ತಿರುವ ಈ ಪ್ರವಾಸ ಕಥನ ಮೈಸೂರಿನಿಂದ ಶುರುವಾಗುವುದಿಲ್ಲ. ‘ಮೈಸೂರು ಟು ಊಟಿ’ ಎಂದು ಗೂಗಲ್ ಮಾಡಿದರೆ ಅದೇ ನಿಮಗೆ ನಂಜನಗೂಡು, ಗುಂಡ್ಲುಪೇಟೆ ಮಾರ್ಗ  ತೋರಿಸುತ್ತದೆ. ಗುಂಡ್ಲುಪೇಟೆಯವರೆಗೂ ಸುಗಮವಾಗಿ ಸಾಗಿಬಿಡಬಹುದು. ಗುಂಡ್ಲುಪೇಟೆಯಿಂದ ಬಲಕ್ಕೆ ತಿರುಗಿದರೆ ಕೇರಳದ ವಯ್ನಾಡಿನ ಕಡೆಗೆ ಹೋಗುತ್ತದೆ, ನೇರವಾಗಿ ಸಾಗಿದರೆ ತಮಿಳುನಾಡಿನ ನೀಲಗಿರಿ ಜಿಲ್ಲೆ ತಲುಪುತ್ತೇವೆ.

ನನಗೆ ಈ ದಾರಿಯಲ್ಲಿ ಸಾಗಿದರೆ ಮೊದಲು ನೆನಪಾಗುವುದೇ ‘ವೀರಪ್ಪನ್’. ನಾನು ಚಿಕ್ಕವನಿದ್ದಾಗ ಅಲ್ಲ ಮೊನ್ನೆ ಮೊನ್ನೆಯ ತನಕ ಒಬ್ಬ ವೀರಪ್ಪನ್’ನ ಹಿಡಿಯೋಕೆ ಆಗಿಲ್ವ ? ಎಂದೇ ಅನಿಸುತಿತ್ತು. ಒಮ್ಮೆ ಆ ಜಾಗಗಳಲ್ಲಿ ಓಡಾಡಿ ಬಂದ ಮೇಲೆ ನನ್ನ ಅಜ್ಞಾನದ ಅರಿವಾಯಿತು. ಗುಂಡ್ಲುಪೇಟೆ ದಾಟಿದ ಮೇಲೆ ಬಂಡೀಪುರ ರಿಸರ್ವ್ ಫಾರೆಸ್ಟ್ ಮೂಲಕ ನಾವು ಸಾಗಬೇಕು. ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಈ ಮೂರೂ ರಾಜ್ಯಗಳು ಇಲ್ಲಿ ಬಂದು ಸಂಧಿಸುತ್ತವೆ. ಪೂರ್ವಘಟ್ಟಗಳು ಮುಗಿದು ಪಶ್ಚಿಮಘಟ್ಟದ ಸುಂದರ ಸಹ್ಯಾದ್ರಿ ಪರ್ವತ ಶ್ರೇಣಿಗಳು ಶುರುವಾಗುವುದು ಇಲ್ಲಿಂದಲೇ. ಪಾಲಾರ್ ನದಿಯೇ ಕರ್ನಾಟಕ ಹಾಗೂ ತಮಿಳುನಾಡಿನ ಗಡಿ. ಇದೇ ನದಿಯಲ್ಲೇ ವೀರಪ್ಪನ್ ತನ್ನ ರಕ್ತ-ಸಿಕ್ತ ಕೈಗಳನ್ನು ತೊಳೆದುಕೊಂಡಿದ್ದ. ಹದಿನೆಂಟು ಸಾವಿರ ಹೆಕ್ಟೇರು ಕಾಡಿಗೆ ರಾಜನಂತೆ ಮೂವತ್ತಾರು ವರ್ಷ ಇಡೀ ಕಾಡನ್ನೇ ನಡುಗಿಸಿದ. ಇಲ್ಲಿನ ವನ್ಯ ಸಂಪತ್ತು ಎಷ್ಟಿದೆ ಎಂದರೆ ಈಗಲೂ ಕಾಡು ಪ್ರಾಣಿಗಳನ್ನು ರಸ್ತೆ ಬದಿಯಲ್ಲೇ ನೋಡಬಹುದು. ವೀರಪ್ಪನ್ ಕಾಲಕ್ಕೆ ಇನ್ನೆಷ್ಟು ಸಂಪತ್ತು ಇದ್ದಿರಬೇಡ? ಆತ ಒಬ್ಬನೇ ಸುಮಾರು ಎರಡು ಸಾವಿರ ಆನೆಗಳನ್ನು ಬೇಟೆ ಆಡಿದ, ಸುಮಾರು ನೂರತೊಂಬತ್ತನಾಲ್ಕು ಜನರನ್ನು ಸಾಯಿಸಿದ. ಆತನನ್ನು ಬಗ್ಗು ಬಡಿಯಲು ನಮ್ಮ ಸರಕಾರಗಳು ಬರೋಬ್ಬರಿ ಏಳುನೂರಾ ಎಂಬತ್ತು ಕೋಟಿ ವ್ಯಯಿಸಿದರು. ಏಷಿಯಾದ ನಂಬರ್ ಒನ್ ನರಹಂತಕ ಹುಟ್ಟಿ ಬೆಳೆದಿದ್ದು ಇಲ್ಲೇ. ಮಹದೇಶ್ವರ ಬೆಟ್ಟ, ಸತ್ಯಮಂಗಲ, ಮಧುಮಲೈ ಕಾಡುಗಳೇ ಅವನ ರಾಜ್ಯ. ಅಷ್ಟಕ್ಕೇ ನನ್ನ ಯೋಚನೆ ನಿಂತಿದ್ದರೆ ಸರಿ ಇತ್ತೇನೋ, ಆದರೆ ಮನದ ಹುಚ್ಚು ಕುದುರೆಗೆ ಲಗಾಮೆಲ್ಲಿ?  ವೀರಪ್ಪನ್’ಗು ಹಿಂದೆ ಮುಮ್ಮಟ್ಟಿವಾಯನ್ ಎಂಬ ವ್ಯಕ್ತಿ ಈ ಕಾಡನ್ನು ಆಳಿದ್ದಾನೆ. ಅವನದೇ ಮೀಸೆಯಿಂದ ವೀರಪ್ಪನ್ ಇನ್ಸ್ಪೈರ್ ಆಗಿದ್ದಿರಬಹುದು.

ಬಂಡೀಪುರದಿಂದ ಮುಂದೆ ಮಧುಮಲೈಗೆ ನಾವು ಹೋಗಬೇಕು. ಮಧುಮಲೈ ತಮಿಳುನಾಡಿಗೆ ಸೇರಿದೆ, ಇದೊಂದು ಹುಲಿ ಸಂರಕ್ಷಿತ ಪ್ರದೇಶ. ಏಷಿಯಾದ ಆನೆಗಳ ತವರು ಇದು, ವಿಶ್ವಸಂಸ್ಥೆ ಇದನ್ನು ಎನ್ಡೇಂಜರ್ಡ್ ಎಂದು ಘೋಷಿಸಿದೆ. ಕಳೆದ ದಶಕದಿಂದ ಇಲ್ಲಿಯವರಿಗೆ ಸುಮಾರು ಅರ್ಧದಷ್ಟು ಸಂತತಿ ನಶಿಸಿಹೋಗಿದೆ. ಕಾರಣ, ನಮ್ಮ ಎಕಾಲಜಿಯ ಪದ ‘ಹ್ಯಾಬಿಟ್ಯಾಟ್ ಲಾಸ್’ ಹಾಗೂ ಅತಿಯಾದ ಬೇಟೆ.  ಬಂಡೀಪುರದಿಂದ ಮಧುಮಲೈ ದಾಟುವವರೆಗೂ ವಾಹನ ನಿಲ್ಲಿಸುವ ಹಾಗಿಲ್ಲ, ಚೆಕ್ ಪೋಸ್ಟ್ ಒಂದನ್ನು ಬಿಟ್ಟು. ಹಾಗೆಯೇ ರಿಸರ್ವ್ ಫಾರೆಸ್ಟ್ ಒಳಗೆ ಓಡಾಡುವುದು ಅಪರಾಧ. ರಾತ್ರಿ ಒಂಬತ್ತರಿಂದ ಬೆಳಿಗ್ಗೆ ಆರರವರೆಗೆ ವಾಹನ ಸಂಚಾರ ನಿಷಿದ್ಧ. ರಾತ್ರಿ ಕೇವಲ ಎರಡು ಕರ್ನಾಟಕ ಸಾರಿಗೆ ಬಸ್ಸನ್ನು ಮಾತ್ರ ಬಿಡುತ್ತಾರೆ.

ಕೆನೆತ್ ಆಂಡರ್ಸನ್ ಅವರ ಬೇಟೆ ಪುಸ್ತಕ ಓದಿದರೆ ನಿಮಗೆ ಈ ಕಾಡಿನ ಪರಿಚಯ ಚೆನ್ನಾಗೇ ಇರುತ್ತದೆ. ಇದೇ ಕಾಡಿನಲ್ಲಿ ಕೆನೆತ್ ಬಹಳಷ್ಟು ನರಭಕ್ಷಕ ಹುಲಿಗಳನ್ನು ಹೊಡೆದಿದ್ದಾರೆ. ಅಷ್ಟಿದ್ದ ಹುಲಿಗಳ ಸಂಖ್ಯೆ ಈಗ ನಾವೇ ಅವುಗಳನ್ನು ರಕ್ಷಣೆ ಮಾಡುವ ಹಂತ ತಲುಪಿದೆ. ಪ್ಲಾಸ್ಟಿಕ್ ಎಸೆಯುವುದು ನಿಷಿದ್ಧವಾದರೂ ಅಲ್ಲಲ್ಲಿ ಪ್ಲಾಸ್ಟಿಕ್ ಕಾಣಬಹುದು. ಮಧಿಮಲೈ ನಂತರ ಎರಡು ದಾರಿಯಿಂದ ಊಟಿಗೆ ಹೋಗಬಹುದು. ಮಧುಮಲೈ ಇಂದ ಗುಡಲೂರಿಗೆ ತಲುಪಿ ಅಲ್ಲಿಂದ ಊಟಿಗೆ ಹೋಗಬಹುದು. ಭಾರಿ ವಾಹನಗಳು, ಬಸ್ಸು ಎಲ್ಲವೂ ಇದೆ ದಾರಿಯಲ್ಲಿ ಸಾಗುತ್ತವೆ. ಇನ್ನೊಂದು ದಾರಿ ತೆಪ್ಪಕಾಡಿನ ಮೂಲಕ ಊಟಿ ಸೇರುತ್ತದೆ. ಈ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷಿದ್ಧ. ಸಿಂಗಲ್ ರೋಡ್ ಆದ್ದರಿಂದ ವಾಹನ ಚಾಲನೆ ಕಷ್ಟ, ಆದರೆ ಇದೇ ಊಟಿಗೆ ಹತ್ತಿರದ ದಾರಿ. ನೀವೇನಾದರೂ ಕಾರು ಅಥವಾ ಬೈಕಿನಲ್ಲಿ ಹೋದರೆ ಇದೇ ದಾರಿಯಲ್ಲಿ ಹೋಗಿ. ಅತ್ಯಂತ ಸುಂದರ ಹಾಗೂ ಅಪಾಯಕಾರಿ ರಸ್ತೆ. ಮೂವತ್ತಾರು ಹೇರ್ ಪಿನ್ ತಿರುವುಗಳು, ಸುಮಾರು ಎಂಟು ಸಾವಿರ ಅಡಿಯ ಬೆಟ್ಟ ಹತ್ತಬೇಕು. ಭಯ ಬೇಡ ಪ್ರತಿ ತಿರುವುಗಳಲ್ಲೂ ಆಂಬುಲೆನ್ಸ್ ನಂಬರ್, ಫ್ರೀ ಶವದ ವಾಹನದ ಸೌಲಭ್ಯವಿದೆ. ಅಕ್ಷರಶಃ ಸ್ವರ್ಗಕ್ಕೆ ಮೂರೇ ಗೇಣು. ಪ್ರತಿ ವರ್ಷ ಹದಿನೈದಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸುತ್ತದೆ. ಬೆಟ್ಟವನ್ನು ಹತ್ತುತಿದ್ದಂತೆಯೇ ಕುಳಿರ್ಗಾಳಿ ನಿಮ್ಮನ್ನು ಸ್ವಾಗತಿಸುತ್ತದೆ. ಕಲ್ಹತ್ತಿ ಎಂಬ ಸಣ್ಣ ಊರು ಸಿಗುತ್ತದೆ, ಮತ್ತೆ ಸುಮಾರು ಇಪ್ಪತ್ತು ಕಿಲೋಮೀಟರ್ ಮೇfತ್ತಿದರೆ ಊಟಿ ತಲುಪುತ್ತೇವೆ.

ಊಟಿ ಅಥವಾ ಉದಕಮಂಡಲ ಭಾರತದ ಟಾಪ್ ಐದು ಹಿಲ್ ಸ್ಟೇಷನ್ ಗಳಲ್ಲಿ ಒಂದು. ಊಟಿಯ ಇತಿಹಾಸದ ಮೊದಲ ದಾಖಲೆ ಸಿಗುವುದು ಹೊಯ್ಸಳರ ಕಾಲದಿಂದ. ವಿಷ್ಣುವರ್ಧನ ಆಳಿದ ದಾಖಲೆಗಳು ಸಿಗುತ್ತವೆ. ತೋಡ ಮತ್ತು ಬಡಗ ಎಂಬ ಎರಡು ಬುಡಕಟ್ಟು ಜನರು ಇಲ್ಲಿ ವಾಸಿಸುತ್ತಿದರು. ಇಂದಿಗೂ ಇಲ್ಲಿ ಬಡಗ ಭಾಷೆಯನ್ನು ಕೇಳಬಹುದು. ನಂತರ ಟಿಪ್ಪು ಸುಲ್ತಾನ್ ಊಟಿಯನ್ನು ಆಳಿದ. ಬ್ರಿಟಿಷರು ಟಿಪ್ಪುವನ್ನು ಸೋಲಿಸಿ ಊಟಿಯನ್ನು ವಶಪಡಿಸಿಕೊಂಡರು. ‘ ಹಿಲ್ ಸ್ಟೇಷನ್ ‘ ಎಂಬ ಪದ ಬಳಕೆ ಬಂದದ್ದೇ ಬ್ರಿಟೀಷರಿಂದ. ಊಟಿ  ಮದ್ರಾಸ್ ಪ್ರೆಸಿಡೆನ್ಸಿಯ ಬೇಸಿಗೆಯ ರಾಜಧಾನಿ ಆಯಿತು. ಇಲ್ಲಿಗೆ ಬಂದ ಎಷ್ಟೋ ಬ್ರಿಟಿಷ್ ಅಧಿಕಾರಿಗಳು ಊಟಿಯನ್ನು ಸ್ವಿಟ್ಜರ್ಲ್ಯಾಂಡ್’ಗೆ ಹೋಲಿಕೆ ಮಾಡಿ ತಮ್ಮ ಪತ್ರ , ಡೈರಿಯಲ್ಲಿ ಬರೆದುಕೊಂಡಿದ್ದಾರೆ .

ಊಟಿ ಸಮುದ್ರ ಮಟ್ಟದಿಂದ  ಸುಮಾರು ಎರಡುಸಾವಿರದ ಐನೂರು ಮೀಟರ್ ಎತ್ತರದಲ್ಲಿ ಇದೆ. ಚಳಿಗಾಲದಲ್ಲಿ ತಾಪಮಾನ ಸೊನ್ನೆ ಡಿಗ್ರಿ ತಲುಪುತ್ತದೆ, ಆದರೆ ವಿಶೇಷವೆಂದರೆ ಇಲ್ಲಿ ಹಿಮಪಾತ ಆಗುವುದಿಲ್ಲ. ಊಟಿಯ ಆರ್ಥಿಕತೆ ಸಂಪೂರ್ಣವಾಗಿ ಕೃಷಿ ಹಾಗೂ ಪ್ರವಾಸೋದ್ಯಮದ ಮೇಲೆ ನಿಂತಿದೆ. ಊಟಿಯ ಬೋರ್ಡಿಂಗ್ ಸ್ಕೂಲ್ ಬಹಳ ಪ್ರಸಿದ್ಧಿ. ಶಾಲೆಗಳೂ ಸಹ ಅರ್ಥ ವ್ಯವಸ್ಥೆಗೆ ಸ್ವಲ್ಪ ಮಟ್ಟಿನ ಕೊಡುಗೆ ನೀಡುತ್ತದೆ.

ನಾವು ಮೊದಲು ತಲುಪಿದ್ದು ಗವರ್ನಮೆಂಟ್ ಬೊಟೋನಿಕಲ್ ಗಾರ್ಡನ್’ಗೆ, ಬ್ರಿಟಿಷರು ಕಟ್ಟಿದ ಹಿಲ್ ಸ್ಟೇಷನ್ ಎಂದರೆ ಬೊಟೋನಿಕಲ್ ಗಾರ್ಡನ್ ಇರಲೇಬೇಕು. ಇದು ಸುಮಾರು ಇಪ್ಪತ್ತೆರಡು ಎಕರೆ ವಿಸ್ತೀರ್ಣ ಹೊಂದಿದೆ. ಸಾವಿರಕ್ಕೂ ಹೆಚ್ಚು ಪ್ರಬೇಧದ ಗಿಡ-ಮರಗಳನ್ನು ಇಲ್ಲಿ ಕಾಣಬಹುದು. ಪ್ರತಿ ವರ್ಷ ಮೇ ತಿಂಗಳಲ್ಲಿ  ಪ್ರದರ್ಶನ ಸಹ ಇರುತ್ತದೆ. ಇಪ್ಪತ್ತು ಮಿಲಿಯನ್ ವರ್ಷ ಹಳೆಯ ಮರದ ಪಳಿಯುಳಿಕೆ ಇಲ್ಲಿನ ಸೆಂಟರ್ ಆಫ್ ಅಟ್ರಾಕ್ಷನ್.

ನಂತರ ನಾವು ಹೋಗಿದ್ದು ‘ದೊಡ್ಡ ಬೆಟ್ಟ ಪೀಕ್’ಗೆ . ಈ ಹೆಸರು ಕನ್ನಡದಿಂದಲೇ ಬಂದಿದೆ. ದೊಡ್ಡಬೆಟ್ಟ ಸಮುದ್ರ ಮಟ್ಟದಿಂದ ಎಂಟು ಸಾವಿರದ ಆರುನೂರಾ ಐವತ್ತು ಅಡಿ ಎತ್ತರದಲ್ಲಿದೆ. ಇದರ ಸುತ್ತ ಕೂಡ ರಿಸರ್ವ್ ಫಾರೆಸ್ಟ್ ಇದೆ, ಸಂಜೆ ಐದು ಗಂಟೆಯ ನಂತರ ಪ್ರವೇಶ ನಿಷಿದ್ಧ. ದಕ್ಷಿಣ ಭಾರತದ ನಾಲ್ಕನೇ ಹಾಗೂ ನೀಲಗಿರಿ ಜಿಲ್ಲೆಯ ಮೊದಲನೇ ಪೀಕ್ ಪಾಯಿಂಟ್. ಇದು ಎಷ್ಟು ಎತ್ತರದಲ್ಲಿ ಇದೆ ಎಂದರೆ, ಇದರ ಮೇಲೆ ಕಟ್ಟಿರುವ ಟೆಲಿಸ್ಕೋಪ್ ಟವರ್ ಹತ್ತಿದರೆ ನಮಗೆ ಮೈಸೂರಿನ ಚಾಮುಂಡಿ ಬೆಟ್ಟ ಕಾಣಿಸುತ್ತದೆ. ಸಂಜೆಯ ಹೊತ್ತಿಗೆ ಜಾಕೆಟ್ ಇಲ್ಲದೆ ಮೇಲೆ ಹೋದರೆ, ಮೇಲೇ ಹೋಗುವುದು ಖಂಡಿತ.

ಊಟಿಯ ಪ್ರಮುಖ ಆಕರ್ಷಣೆ ನೀಲಗಿರಿ ರೈಲ್ವೇಸ್. ಊಟಿ ಹಾಗೂ ಮೇಟುಪಾಳಿಯಂ ಮಧ್ಯೆ ನ್ಯಾರೋ ಗೆಜಿನ ರೈಲು ಓಡುತ್ತದೆ. ಇದನ್ನು ಯುನೆಸ್ಕೋ ‘ವರ್ಲ್ಡ್ ಹೆರಿಟೇಜ್ ಸೈಟ್ ‘ ಎಂದು ಗುರುತಿಸಿದೆ. ಭಾರತದ ಅತಿ ಪ್ರಾಚೀನ ಮೌಂಟನ್ ರೈಲ್ವೆ ಇದು. ಸಾವಿರದ ಎಂಟುನೂರಾ ಎಂಬೆತ್ತರಡರಲ್ಲಿ ಆರ್ಥರ್ ಎಂಬ ಸ್ವಿಸ್ ಇಂಜಿನಿಯರ್ ಈ ರೈಲಿನ ನೀಲ ನಕ್ಷೆ ಸಿದ್ಧಪಡಿಸಿದ. ಕುನ್ನೂರು ಹಾಗೂ ಮೇಟುಪಾಳಿಯಂ  ಮಧ್ಯೆ ಸಾವಿರದ ಎಂಟುನೂರಾ ತೊಂಬತ್ತಒಂಬತ್ತರಲ್ಲಿ ರೈಲು ಓಡಾಡಲು ಶುರುವಾಯಿತು. ಸಾವಿರದ ಒಂಬೈನೂರ ಮೂರರಲ್ಲಿ ಭಾರತ ಸರ್ಕಾರ ಇದನ್ನು ಖರೀದಿಸಿ ಊಟಿಯವರೆಗೂ ಮುಂದುವರೆಸಲಾಯಿತು. ಇದಕ್ಕೆ ‘ಟಾಯ್ ಟ್ರೈನ್’ ಎಂಬ ಅಡ್ಡ ಹೆಸರಿದೆ . ಕೇವಲ ನಾಲ್ಕು ಭೋಗಿ ಇರುವ ಈ ರೈಲು ಮಕ್ಕಳ ಆಟಿಕೆಯಂತೆ ಕಾಣುತ್ತದೆ. ಊಟಿ ಹಾಗೂ ಕುನ್ನೂರಿನ ಮಧ್ಯೆ ಐದು ನಿಲ್ದಾಣಗಳಿಗೆ, ಎಲ್ಲಾ ನಿಲ್ದಾಣಗಳೂ ಸ್ವಚ್ಛ ಹಾಗೂ ನೀಲಿ ಬಣ್ಣದಿಂದ ಕಂಗೊಳಿಸುತ್ತದೆ. ಕೇವಲ ಹದಿನಾರು ಮೇಲಿನ ಈ ಪ್ರಯಾಣದಲ್ಲಿ ಹದಿನಾರು ಟನಲ್’ಗಳು , ಇನ್ನೂರ ಐವತ್ತು ಸೇತುವೆಗಳಿವೆ. ಸುಮಾರು ತೊಂಬತ್ತು ನಿಮಿಷಗಳಷ್ಟು ಪ್ರಯಾಣ ಇದು.  ಇದಕ್ಕೆ ನೀವು ಖರ್ಚು ಮಾಡಬೇಕಾಗಿರುವುದು ಕೇವಲ ಹತ್ತು ರೂಪಾಯಿ. ಪ್ರಯಾಣ ಮಾತ್ರ ಚಿರ ನೆನಪು. ‘ಸ್ಪರ್ಶ’ ಸಿನಿಮಾದಲ್ಲಿ ತೋರಿಸುವುದು ಇದೇ ರೈಲು.

ರೋಸ್ ಗಾರ್ಡನ್ ಹಾಗೂ ಪೈಕಾರ ಲೇಕ್’ಗಳಿಗೆ ಸಮಯದ ಅಭಾವದಿಂದ ಭೇಟಿ ನೀಡಲಾಗಲಿಲ್ಲ. ನೀವು ಹೋಗಬೇಕೆಂದರೆ ಬೇಸಿಗೆ ಹೇಳಿ ಮಾಡಿಸಿದ ಕಾಲ, ಚಳಿಗಾಲದಲ್ಲಿ ಹೋಗಬೇಕೆಂದರೆ ದಪ್ಪಗಿನ ವೂಲೆನ್ ಸ್ವೆಟರ್ ಬೇಕೇ ಬೇಕು. ವೀಕ್ ಎಂಡ್’ಗಳಲ್ಲಿ ಹೋದರೆ ರೂಮು ಸಿಗುವುದು ಕಷ್ಟ. ಬೇಸಿಗೆಯ ವೀಕೆಂಡ್’ಗಳಲ್ಲಿ ಹತ್ತು ಸಾವಿರ ಕೊಟ್ಟರೂ ಒಂದೂ ರೂಂ ಸಿಗುವುದಿಲ್ಲ. ಹನಿಮೂನ್’ಗೆ ಆರ್ಡರ್ ಕೊಟ್ಟು ಮಾಡಿಸಿದ ಜಾಗ. ಮದುವೆ ಆಗಿರದಿದ್ದರೆ ಹನಿ ಜೊತೆ ಹೋಗಬಹುದು.

ಹೋಂ ಮೇಡ್ ಚಾಕಲೇಟ್ ಕಡಿಮೆ ಬೆಲೆಗೆ ಸಿಗುತ್ತದೆ. ಜಾಕೆಟ್, ಸ್ವೆಟರ್’ಗಳು ಚೀಪ್ ಅಂಡ್ ಬೆಸ್ಟ್. ನೀಲಗಿರಿ ಟೀ ಜಗತ್ ಪ್ರಸಿದ್ಧ. ದೊಡ್ಡಬೆಟ್ಟಕ್ಕೆ ಹೋಗುವ ದಾರಿಯಲ್ಲಿ ಟೀ ಫ್ಯಾಕ್ಟರಿಗೆ ಭೇಟಿ ನೀಡಿ ಬಿಟ್ಟಿ ಚಹಾ ಕುಡಿದುಬರಬಹುದು. ಗ್ರೀನ್ ಟೀ , ಏಲಕ್ಕಿ ಟೀ, ಬ್ಲಾಕ್ ಟೀ ಯಾವುದನ್ನು ಬೇಕಿದ್ದರೂ ತೆಗೆದುಕೊಂಡು ಬರಬಹುದು.

ಕಾರಿನಲ್ಲಿ ಅಥವಾ ಬಸ್ಸಿನಲ್ಲಿ ಹೋಗುವುದು ಉತ್ತಮ. ಬೈಕು ಅಷ್ಟು ಸೂಕ್ತವಲ್ಲ. ಹೋಗುವ ಮೊದಲು ವಾಹನವನ್ನು ಸರ್ವಿಸ್ ಮಾಡಿಸಿಕೊಳ್ಳಿ, ಇಲ್ಲದಿದ್ದರೆ ತೆಪ್ಪಕಾಡಿನ ಪ್ರಪಾತಕ್ಕೆ ನಿಮ್ಮ ಗಾಡಿಯನ್ನು ತಳ್ಳುವ ಪ್ರಮೇಯ ಬರಬಹುದು. ಸುಮಾರು ಐವತ್ತು ಅರವತ್ತು ಕಿಲೋಮೀಟರಷ್ಟು ದೂರ ಗ್ಯಾರೇಜು ಇರಲಿ ಮನೆ ಸಿಗುವುದೇ ಕಷ್ಟ. ಒಬ್ಬರೇ ಹೋದರೆ ಚಳಿ ಅಸಹನೀಯ, ಜೋಡಿ ಹಕ್ಕಿಗಳಾಗಿ ಹೋಗಿ. ಮುಂದೆ ನಿಮಗೆ ಬಿಟ್ಟಿದ್ದು.

-ಗುರು ಕಿರಣ್

Facebook ಕಾಮೆಂಟ್ಸ್

Gurukiran: ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.
Related Post