ಒಮ್ಮೆ ಒಂದು ಊರಿನಲ್ಲಿ ತೀವ್ರವಾದ ಕ್ಷಾಮ ಬಂತಂತೆ. ಹನಿ ನೀರಿಗೂ ತತ್ವಾರ ಹುಟ್ಟಿತು. ಜನರೆಲ್ಲ ಊರಲ್ಲಿ ಬೀಡು ಬಿಟ್ಟಿದ್ದ ಸಂತರೊಬ್ಬರ ಬಳಿ ಹೋಗಿ ಅಲವತ್ತುಕೊಂಡರು. ಸಂತರು, ಅವರೆಲ್ಲ ಒಟ್ಟಾಗಿ ಏಕನಿಷ್ಠೆಯಿಂದ ದೇವರನ್ನು ಪ್ರಾರ್ಥಿಸಿದ್ದೇ ಆದರೆ ದೇವರು ಒಲಿದು ಮಳೆ ಸುರಿಸಿಯೇ ಸುರಿಸುತ್ತಾನೆಂದು ಹೇಳಿದರು. ಸರಿ, ಅವರ ಮಾತಿನಂತೆ ನಿಗದಿ ಪಡಿಸಿದ ದಿನ ಊರ ಜನರೆಲ್ಲ ಮೈದಾನವೊಂದರಲ್ಲಿ ಸಾರ್ವಜನಿಕ ಪ್ರಾರ್ಥನೆಗೆ ಸೇರಿದರು. ಒಗ್ಗಟ್ಟಾಗಿ ಬೇಡಿದರು. ಆದರೆ ದೇವರು ಮಾತ್ರ ಕಲ್ಲಾಗಿಯೇ ಇದ್ದ. ಕುಪಿತರಾದ ಜನ ಮತ್ತೆ ಸಂತರ ಬಳಿ ಹೋಗಿ ತಮ್ಮ ಕಷ್ಟ ತೋಡಿಕೊಂಡರು. ಆಗ ಸಂತ ಹೇಳಿದರು: ಊರವರೆಲ್ಲ ಸೇರಿದಿರೇನೋ ಸರಿ. ಆದರೆ ಪ್ರಾರ್ಥನೆಯಲ್ಲಿ ನಿಮಗೇ ಪೂರ್ತಿ ನಂಬಿಕೆಯಿರಲಿಲ್ಲ. ದೇವರು ನಿಮ್ಮ ಮೊರೆ ಕೇಳಿ ಸಹಾಯಕ್ಕೆ ಬರುತ್ತಾನೆಂದು ನೀವ್ಯಾರೂ ನಂಬಿರಲೇ ಇಲ್ಲ. ಯಾಕೆ ಗೊತ್ತಾ? ಮಳೆಗಾಗಿ ಪ್ರಾರ್ಥಿಸಲು ಮೈದಾನದ ಕಡೆ ಹೋಗುವಾಗ ನಿಮ್ಮಲ್ಲೆಷ್ಟು ಜನ ಕೊಡೆ ಹಿಡಿದುಕೊಂಡು ಹೋಗಿದ್ದಿರಿ?
ಇದು ಪ್ರಾರ್ಥನೆಯಲ್ಲಿ ತೊಡಗಿದ ಭಕ್ತನಿಗೆ ಇರಬೇಕಾದ ದೃಢನಂಬಿಕೆ, ಭಕ್ತಿಗಳ ಮಹತ್ವ ಹೇಳುವ ಸಣ್ಣ ಕತೆಯಾದರೂ ನಾನಿಲ್ಲಿ ಹೇಳ ಹೊರಟಿರುವುದು ಪ್ರಾರ್ಥನೆಯ ಬಗ್ಗೆ ಅಲ್ಲ, ಕೊಡೆಯ ಬಗ್ಗೆ! ಮಳೆ ಮತ್ತು ಕೊಡೆ ಪರ್ಯಾಯ ಪದಗಳು. ಹಾಗೆಯೇ ಮನುಷ್ಯನನ್ನು ಪ್ರಾಣಿ ವರ್ಗದ ಉಳಿದ ಸದಸ್ಯರಿಂದ ಬೇರೆಯಾಗಿ ನಿಲ್ಲಿಸಿರುವುದು ಕೊಡೆಯೇ ಎಂಬ ಸಿದ್ಧಾಂತ ಕೂಡ ರೂಪಿಸಬಹುದು. ಯಾಕೆಂದರೆ ಮಳೆಯ ಜಿನುಗಾಟಕ್ಕೆ ಒಂದೋ ಬಯಲಲ್ಲಿ ನೆಟ್ಟ ಶಾಸನದಂತೆ ನಿಸೂರಾಗಿ ತಲೆ ಕೊಟ್ಟು ಕೂರುವ ಇಲ್ಲವೇ ಮೈಮೇಲೆ ಆಸಿಡ್ ಬಿತ್ತೇನೋ ಎಂಬಂತೆ ಜೀವ ಬಿಟ್ಟು ಓಡಿ ಆಸರೆ ಹುಡುಕುವ ಪ್ರಾಣಿಗಳ ಮಧ್ಯೆ ಮಳೆಗೆ ಅಂಜದೆ ಜೊತೆಗೆ ತನ್ನನ್ನು ತೇವಗೊಳಿಸಿಕೊಳ್ಳದೆ ಕಾಪಾಡಿಕೊಳ್ಳುವ ಬುದ್ಧಿವಂತಿಕೆ ಮತ್ತು ಧೈರ್ಯ ಮನುಷ್ಯನಿಗಿದೆ. ಹಾಗಾಗಿ ಮಾನವನ ವಿಕಾಸ ಪಥದಲ್ಲಿ ಚಕ್ರದ ಅನ್ವೇಷಣೆಗೆ ಅದೆಷ್ಟು ಮಹತ್ವವಿದೆಯೋ ಅಷ್ಟೇ ಈ ಕೊಡೆಗೂ ಇದೆ ಎನ್ನಬಹುದು. ಮಳೆಗಾಲದ ನಾಲ್ಕು ತಿಂಗಳು ಇದು ನಮ್ಮ ಸಂಗಾತಿ. ಮಾತ್ರವಲ್ಲ; ಬಿಸಿಲಿನ ಝಳ ಹೆಚ್ಚಾದರೆ ಬೇಸಿಗೆಯಲ್ಲೂ ಇದು ನಮಗೆ ತಲೆಯ ಮೇಲಿರಬೇಕು. ಹೀಗೆ ಪರಸ್ಪರ ವಿರುದ್ಧ ಕೆಲಸಗಳಿಗೆ ಬಳಕೆಯಾಗುವ ಒಂದೇ ವಸ್ತು ಬೇರಾವುದಿದೆ ಹೇಳಿ ನೋಡೋಣ!
ಅತ್ತ ಮುಂಗಾರಿನ ಮೊದಲ ಕಾರ್ಮೋಡ ಹುಟ್ಟಿ ಆಕಾಶ ಕಪ್ಪಿಟ್ಟರೆ ಸಾಕು, ಜನರಿಗೆ ಕೊಡೆಯೆಂಬ ಹಳೆಗೆಳೆಯನ ನೆನಪಾಗುತ್ತದೆ. ಕಪ್ಪು ಕೊಡೆ ಅಟ್ಟದ ಮೂಲೆಯಲ್ಲಿ ಎಂಟು ತಿಂಗಳು ತಪಸ್ಸು ಮಾಡಿದ್ದಕ್ಕೆ ಫಲ ಸಿಕ್ಕೆತೆಂಬಂತೆ ಮಳೆಗಾಲ ಶುರುವಾಗುತ್ತಲೇ ಲೋಕ ಸಂಚಾರಕ್ಕೆ ಹೊರಡುತ್ತದೆ. ಅದರ ಬಟ್ಟೆ ಜಿರಳೆಯ ಉದರಾಗ್ನಿಗೆ ಎರವಾಗಿದ್ದರೆ ರಿಪೇರಿ ಮಾಡುವ ರಾಮಣ್ಣ, “ಸಾರ್, ಎಷ್ಟು ವರ್ಷ ಅಂತ ಹಳೇ ಬಟ್ಟೆಗೆ ತ್ಯಾಪೆ ಹಚ್ಚಿಕೊಂಡು ದಿನ ಕಳಿಯುತ್ತೀರಾ? ಈ ವರ್ಷವಾದರೂ ಕೊಡೆಯ ಮೈಗೆ ಹೊಸ ಬಟ್ಟೆ ಹೊದೆಸಿ ನಾವೂ ಒಂದು ದಿನ ಪಾಯಸ ಉಣ್ಣೋ ಹಾಗೆ ಮಾಡಿ” ಎನ್ನುತ್ತಿದ್ದ. ಸಾಲದ್ದಕ್ಕೆ ಕೊಡೆಯನ್ನು ಒಂದಷ್ಟು ಗಿರಾಕಿಗಳೆದುರಲ್ಲೇ ಬಿಚ್ಚಿ,ನೂರಾರು ನಕ್ಷತ್ರಗಳು ಮಿನುಗುವ ಆಕಾಶದಂತೆ ಅದು ತೂತು ಹೊಡೆದಿರುವುದನ್ನು ತೋರಿಸಿ ನಮ್ಮ ಮರ್ಯಾದೆ ಕಳೆಯುತ್ತಿದ್ದ. ಸರಿಯಯ್ಯ, ಹೊಸ ಬಟ್ಟೆ ಹೊದೆಸು ಎಂದರೆ ರಾಮಣ್ಣನ ಚೌಕಾಸಿ ಸುರು. ಸರ್,ಸೆಕೆಂಡ್ ಕ್ವಾಲಿಟಿ ಹೊದೆಸಲೋ ಫಸ್ಟ್ ಕ್ವಾಲಿಟಿನೇ ನೋಡ್ತೀರೋ? ಸೆಕೆಂಡ್ ಕ್ವಾಲಿಟಿ ಒಂದು ವರ್ಷ ಬರುತ್ತೆ, ಫಸ್ಟ್ ಕ್ವಾಲಿಟಿಯಾದರೆ ಕತ್ತರಿಯಾಡಿಸಿದರೂ ಮೂರು ವರ್ಷ ಹರಿಯೋದಿಲ್ಲ ಎಂಬ ಅವನ ಜಾಣಮಾತಿಗೆ ಮರುಳಾಗಿ ಒಂದರವತ್ತು-ಎಪ್ಪತ್ತು ರುಪಾಯಿ ಕಳೆದುಕೊಂಡು, ಹೊಸ ಬಟ್ಟೆ ಹೊದೆಸಿಕೊಂಡು ಕೊಡೆಯನ್ನು ಮದುಮಗಳಂತೆ ಮನೆಗೆ ತರುತ್ತಿದ್ದರು ಹಿರಿಯರು. ಮುರಿದ ಕಡ್ಡಿಗಳನ್ನೂ ಹರಿದ ಬಟ್ಟೆಯನ್ನೂ ನಿವಾರಿಸಿ ಸರ್ವೀಸ್ ಮಾಡಿಸಿ ತಂದರೆ ಆ ಕೊಡೆ ಮುಂದಿನ ಆರು ತಿಂಗಳ ಮಳೆಗಾಲದ ಆರ್ಭಟವನ್ನು ಸೈರಿಸಿಕೊಳ್ಳಲು ತಯಾರಾಯಿತೆಂದು ಲೆಕ್ಕ.
ಕರಾವಳಿ, ಮಲೆನಾಡುಗಳಲ್ಲಿ ಮಳೆಗಾಲ ಬಂತೆಂದರೆ ಕೊಡೆ ಬದುಕಿನ ಅನಿವಾರ್ಯ ಅಂಗ. ಮುಂಗಾರಿನ ಹೊತ್ತಲ್ಲಿ ಕೊಡೆಯಿಲ್ಲದೆ ಹೊಸ್ತಿಲು ದಾಟಿದವನು ಜಡಿಮಳೆಯ ಪಾಶುಪತಾಸ್ತ್ರಕ್ಕೆ ಎದೆಯೊಡ್ಡಿ ಸೆಣಸಲು ಹೊರಟಿದ್ದಾನೆಂದೇ ಅರ್ಥ. ಅಂಥ ಎಂಟೆದೆ ಬಂಟನ ಬೆನ್ನನ್ನು ಬಿರು ಮಳೆ ಮುರಿದು ಹಾಕಿ ನಾಲ್ಕು ದಿನ ಜ್ವರದಲ್ಲಿ ಮಲಗಿಸಿ ಬಿಟ್ಟರೆ ಮತ್ತವನು ಆ ವರ್ಷ ಪೂರ್ತಿ ಕೊಡೆಯನ್ನು ಉಪೇಕ್ಷಿಸುವ ಸಂದರ್ಭ ಬಾರದು! ನಾವು ಚಿಕ್ಕವರಿದ್ದಾಗ ಮಳೆಗಾಲದಲ್ಲಿ ಶಾಲೆಗೆ ಹೋಗುವುದೆಂದರೇನೇ ಅದೊಂದು ಸಾಹಸಯಾತ್ರೆ. ಅತ್ತ ಚೀಲವನ್ನೂ ಬುತ್ತಿಯನ್ನೂ ಮ್ಯಾನೇಜ್ ಮಾಡುತ್ತ ಇತ್ತ ಪ್ರಳಯ ಕಾಲದ ವರುಣ ನರ್ತನದಂಥ ಮಳೆಯನ್ನು ಎದುರಿಸುತ್ತ ಗದ್ದೆ ಬದುವಿನ ಕೆಸರಲ್ಲಿ ಹೂತು ಹೋಗುವ ಕಾಲುಗಳನ್ನು ಎತ್ತೆತ್ತಿ ಹಾಕುತ್ತ ನಮ್ಮನ್ನು ನಾವು ಕೊಡೆ ಹಿಡಿದು ರಕ್ಷಿಸಿಕೊಳ್ಳುತ್ತಿದ್ದ ಸನ್ನಿವೇಶ ಯಾವ ಯುದ್ಧ ಕಾಲಕ್ಕೂ ಕಮ್ಮಿಯದಲ್ಲ! ಈ ಕಾಳಗದಲ್ಲಿ ಕೆಲವೊಮ್ಮೆ ಮಳೆಯ ಗೆಳೆಯನಾದ ಬೀಸು ಗಾಳಿಯದ್ದೇ ಮೇಲುಗೈಯಾಗಿ ಆತ ನಮ್ಮ ಬಡಪಾಯಿ ಕೊಡೆಯ ಬೆನ್ನು ಮೂಳೆಯನ್ನು ಲಟಪಟನೆ ಮುರಿದು ಮೈಯನ್ನು ನೀರಿಂದ ತೊಯ್ಯಿಸಿಬಿಡುತ್ತಿದ್ದ. ಶಾಲೆಯಲ್ಲಿ ಅಂದಿನ ದಿನವೆಲ್ಲ ನಮ್ಮನ್ನು ನಾವು ಬೆಚ್ಚಗಿಡುವ ವಿಫಲ ಯತ್ನದಲ್ಲಿ ಮುಗಿದುಹೋಗುತ್ತಿತ್ತು. ಮಳೆಯಿಂದ ನೆನೆದಾಗ ಒಂದರ್ಧ ಗಂಟೆ ಮಾತ್ರ ನೀರಿಗೆ ಬಿದ್ದ ಬೆಕ್ಕಿನ ಮರಿಗಳಂತೆ ತಣ್ಣಗಿದ್ದು ಆಮೇಲೆ ಚಿಗುರಿಕೊಳ್ಳುವವರೂ ಕೆಲವರಿದ್ದರು. ಅವರು ಮಳೆಯಲ್ಲಿ ಕೊಡೆ ಹಿಡಿದಿರುವಂತೆಯೇ ಅದನ್ನು ಫ್ಯಾನಿನಂತೆ ಗಿರಗಿಟ್ಟಿ ತಿರುಗಿಸಿ ಉಳಿದವರ ಮೇಲೆ ನೀರಿನ ಸಿಂಚನ ಮಾಡುತ್ತಿದ್ದರು. ಅಥವಾ ಮಳೆ ನಿಂತು ಕೊಡೆ ಮಡಚಿದ ಮೇಲೆ ಅದನ್ನೇ ಕತ್ತಿಯಂತೆ ಬೀಸುತ್ತ ಉಳಿದವರ ಜೊತೆ ಕತ್ತಿ ವರಸೆಗೆ ಇಳಿಯುತ್ತಿದ್ದರು. ಇಂಥ ತುಂಟರು ಇದ್ದದ್ದರಿಂದ ಕೊಡೆ ರಿಪೇರಿಯ ರಾಮಣ್ಣ ಮೂವತ್ತು ವರ್ಷ ಬೇರಾವ ಪರ್ಯಾಯ ಉದ್ಯೋಗದ ಚಿಂತೆ ಮಾಡದೆ ನೆಮ್ಮದಿಯಿಂದ ಜೀವನ ಕಳೆಯುವಂತಾಯಿತು.
ತುಂಬ ಅಗತ್ಯವಾದದ್ದನ್ನು ಮರೆಯುವುದು ಮನುಷ್ಯನ ಹುಟ್ಟು ಗುಣ. ಇದಕ್ಕೆ ಕೊಡೆಯೇನೂ ಅಪವಾದವಲ್ಲ. ಒಂದೊಂದು ಮಳೆಗಾಲದಲ್ಲೂ ಜನ ಮರೆತು ಬಿಡುವ ಕೊಡೆಗಳದ್ದೂ ಒಂದು ಸಿನೆಮಾ ತೆಗೆಯಬಹುದಾದರೆ ಅದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನೆಮಾದಂತೆ ಸೂಪರ್ ಹಿಟ್ ಆಗಬಹುದು. ಮರೆಗುಳಿ ಮಗರಾಯ ಮರೆತು ಬಂದ ಕೊಡೆಯನ್ನು ಪಡೆಯಲು ಹೊರಟ ತಂದೆ ಏನೇನು ಪಾಟಲು ಪಡಬೇಕಾಗುತ್ತದೆಂಬ ವಿಷಯದ ಮೇಲೆಯೇ ಹಾಸ್ಯ ಲೇಖಕ ರಾಶಿ ಒಂದು ಲೇಖನ ಬರೆದಿದ್ದರು. ಅದರಲ್ಲಿ, ಮಗನ ಮೇಲಿನ ಕೋಪಕ್ಕೆ ಮಳೆಯಲ್ಲೇ ಮನೆ ಬಿಡುವ ಅಪ್ಪ, ಊರೆಲ್ಲ ಸುತ್ತಿ ಮಗನ ಕೊಡೆಯನ್ನು ಹೇಗೋ ಗಳಿಸಿ ಮನೆಗೆ ಬಂದಾಗ ಹೆಂಡತಿ, “ಅದೇನೋ ಸರಿ, ಆದರೆ ಮನೆಯಿಂದ ಹೊರಡ್ತಾ ನೀವೂ ಒಂದು ಕೊಡೆ ತೆಗೆದುಕೊಂಡು ಹೋಗಿದ್ದಿರಲ್ಲ, ಅದರ ಕತೆಯೇನು?”ಎಂದು ಕೇಳುತ್ತಾಳೆ. ನಮ್ಮಲ್ಲಿ ಹೆಚ್ಚಿನವರ ಮನೆಗಳ ಕೊಡೆ ಪುರಾಣ ಕೊನೆಯಾಗುವುದು ಹೀಗೇ ಬಿಡಿ. ಒಮ್ಮೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ನಾನು ಸ್ಟಾಪು ಬಂದಾಗ ಬಸ್ಸಿಂದಿಳಿದು ಇನ್ನೇನು ತಿರುಗಬೇಕೆನ್ನುವಷ್ಟರಲ್ಲಿ ಕೊಡೆಯನ್ನು ಬಸ್ಸಲ್ಲೇ ಮರೆತು ಬಿಟ್ಟಿದ್ದೇನೆಂಬ ಜ್ಞಾನೋದಯವಾಗಿ “ಕೊಡೇ ಕೊಡೇ” ಎಂದು ಕೂಗಿಕೊಂಡೆ. ನನ್ನ ಕೂಗಾಟ ಕೇಳಿ,ಬಸ್ಸಲ್ಲಿ ಇಷ್ಟು ಹೊತ್ತು ನನ್ನ ಪಕ್ಕದಲ್ಲಿ ಕೂತಿದ್ದ ಹಿರಿಯರು ಕೊಡೆಯನ್ನು ಕಿಟಕಿಯಲ್ಲಿ ನನ್ನ ಕೈಗೇ ಬೀಳುವಂತೆ ಹಾಕಿ ಬಿಟ್ಟರು. ಬಸ್ಸು ಮುಂದೆ ಹೋಯಿತು. ಆಮೇಲೆ ನಾನು ಕೈಲಿದ್ದ ಚೀಲ ಬಿಡಿಸಿದರೆ ನನ್ನ ಕೊಡೆ ಅದರೊಳಗೆ ಬೆಚ್ಚನೆ ಕೂತಿತ್ತು! ಪಾಪ ಹಿರಿಯರು, ಗಡಿಬಿಡಿಯಲ್ಲಿ ತನ್ನ ಕೊಡೆಯನ್ನೇ ನನ್ನ ಉಡಿಗೆ ಎತ್ತಿ ಹಾಕಿದರೋ ಏನೋ ಎಂಬ ಪಾಪಪ್ರಜ್ಞೆ ಅದನ್ನು ಬಳಸಿದಷ್ಟೂ ವರ್ಷ ನನ್ನನ್ನು ಕಾಡುತ್ತಿತ್ತು.
ಕೊಡೆಗಳು ಬರುವುದಕ್ಕಿಂತ ಮುಂಚೆ ನಮ್ಮೂರುಗಳಲ್ಲಿ ಗೊರಬುಗಳು ಜನಪ್ರಿಯವಾಗಿದ್ದವು. ಬಹುಶಃ ಈಗಲೂ ಗದ್ದೆಗಳಲ್ಲಿ ಕೊಡೆ ಹಿಡಿದು ನೇಜಿ ನೆಡಲು ಆಗದ್ದರಿಂದ ಗೊರಬುಗಳನ್ನೇ ಬಳಸುತ್ತಾರೆಂದು ನಂಬಿದ್ದೇನೆ. ಕರಾವಳಿಯ ಕಡೆ ಎಲೆಗಳನ್ನು ಒತ್ತೊತ್ತಾಗಿಟ್ಟು ಹೊಲಿದ ಗೊರಬುಗಳಿದ್ದರೆ ಮಲೆನಾಡಲ್ಲಿ ಕಂಬಳಿಯ ಗೊರಬು ಇರುತ್ತಿತ್ತು. ಇದನ್ನು ಸ್ಥಳೀಯರು ಕೆಣುಂಜೆಲು ಎನ್ನುತ್ತಿದ್ದರೆಂದು ನೆನಪು. ಇಂಥವನ್ನೆಲ್ಲ ಹುಡುಗರು ಶಾಲೆಗೂ ಹಾಕಿಕೊಂಡು ಹೋಗುವ ಕಾಲವೊಂದಿತ್ತು. ಪುಟ್ಟ ಮಕ್ಕಳಿಗೆಂದೇ ಪುಟಾಣಿ ಗೊರಬುಗಳಿದ್ದವು. ಆದರೆ ಕೊಡೆಯೆಂಬ ಆಧುನಿಕ ತೆಳು ಚೆಲುವೆ ಬಂದ ಮೇಲೆ ಗೊರಬೆಂಬ ಪಳೆಯುಳಿಕೆ ಮರೆಯಾಗಿ ಇತಿಹಾಸ ಸೇರಿತು. ಕೊಡೆಗಳನ್ನು ಮಳೆಗೆ ಮಾತ್ರವಲ್ಲ ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲೂ ಬಳಸುತ್ತಿದ್ದರೆಂಬುದಕ್ಕೆ ಇತಿಹಾಸದಲ್ಲಿ ದಾಖಲೆ ಇದೆ. ಭರ್ತೃಹರಿ ತನ್ನೊಂದು ಪದ್ಯದಲ್ಲಿ ಶಕ್ಯೋ ವಾರಯಿತುಂ ಜಲೇನ ಹುತಭುಕ್ ಶೂರ್ಪೇಣ ಸೂರ್ಯತಪೋ ಎಂದು ಹೇಳುತ್ತಾನೆ. ಅಗ್ನಿಯಿಂದ ಮನೆ ಸುಡುತ್ತಿದ್ದರೆ ನೀರೆರಚಿ ನಂದಿಸಬಹುದು;ಸೂರ್ಯನೇ ಸುಡುತ್ತಿದ್ದರೆ ಅವನ ಕೆಂಗಣ್ಣಿಂದ ಪಾರಾಗಲು ನಾವು ಮುಖವನ್ನು ಕೊಡೆಯಿಂದ ಮರೆಮಾಚಬಹುದು ಎಂದು ಅರ್ಥ. ಇಲ್ಲಿ ಕೊಡೆಗೆ ಆತ ಶೂರ್ಪ ಎಂಬ ಪದವನ್ನು ಬಳಸಿದ್ದಾನೆ. ಆದರೆ,ಸಂಸ್ಕøತದಲ್ಲಿ ಶೂರ್ಪ ಎಂದರೆ ಮೊರ ಎಂಬ ಅರ್ಥವೇ ಪ್ರಧಾನವಾಗಿದೆ (ಶೂರ್ಪನಖಿ ನೆನಪಿಸಿಕೊಳ್ಳಿ). ಕೊಡೆಗೆ ಸಂಸ್ಕøತದಲ್ಲಿ ಆತಪತ್ರ ಎಂಬ ಪದ ಬಳಕೆಯಲ್ಲಿದೆ. ಪತ್ರ ಎಂದರೆ ಎಲೆ. ಎಲೆಗಳನ್ನು ಸರಿಯಾಗಿ ಜೋಡಿಸಿ ಹೆಣೆದ ಮರೆಯೇ ಆತಪತ್ರ. ಯುಧಿಷ್ಠಿರನ ರಾಜ್ಯದಲ್ಲಿ ಪ್ರಜೆಗಳು ಅದೆಷ್ಟೊಂದು ಸುಸಂಸ್ಕøತ ಭಾಷೆಯನ್ನು ಮಾತಾಡುತ್ತಾರೆಂಬುದನ್ನು ವಿವರಿಸುತ್ತ ಪಂಪ ಹೇಳುವ ಮಾತೊಂದುಂಟು: ಕೊಡೆಯೆಂಬರಾತಪತ್ರವನುದರದೇಶಮಂ – ಎಂದು. ಅಂದರೆ ಯುಧಿಷ್ಠಿರನ ರಾಜ್ಯದಲ್ಲಿ ಯಾವುದನ್ನೂ ಕೇಳಿದರೂ ಪ್ರಜೆಗಳು ಕೊಡೆಯೆಂದು ಹೇಳರಂತೆ. ಹಾಗೇನಾದರೂ ಆ ಶಬ್ದ ಅವರ ಬಾಯಿಂದ ಬಂತೆಂದರೆ ಅದು ಆತಪತ್ರವೇ ಹೊರತು ನಿಷೇಧಾರ್ಥಕ “ಕೊಡೆನು” ಎಂಬರ್ಥದ ಮಾತಲ್ಲ,ಎನ್ನುತ್ತಾನೆ ಪಂಪ. “ಕೊಡೆ” ಹೊಸದಲ್ಲ, ಬಹಳ ಹಳೆಯ ಅಚ್ಚ ಕನ್ನಡದ್ದೇ ಆದ ಶಬ್ದ ಎಂಬುದಕ್ಕೂ ಈ ಪದ್ಯವೇ ಸಾಕ್ಷಿ.
ಬೆಂಗಳೂರು ಕಡೆ ಕೊಡೆಗಿಂತ ಛತ್ರಿ ಎಂಬುದೇ ಹೆಚ್ಚು ಬಳಕೆಯಲ್ಲಿದೆ. ಛತ್ರ, ಛತ್ರಿ ಎಂಬುದಕ್ಕೆ ಆಸರೆ ಎಂಬ ಅರ್ಥವಿದೆ. ಮಳೆ ಬಿಸಿಲುಗಳಿಂದ ನಮಗೆ ಆಸರೆ ಕೊಡುವ ವಸ್ತುವಾದ್ದರಿಂದ ಅದು ಛತ್ರಿ. ರಾಜ-ಮಹಾರಾಜರ ಸಿಂಹಾಸನಗಳಿಗೂ ಇಂಥ ಛತ್ರಿಗಳು ಇದ್ದವೆಂಬುದನ್ನು ನಾವು ಗಮನಿಸಬಹುದು. ಜಮೀನ್ದಾರರು, ಪಾಳೇಗಾರರು, ಸಾಮಂತರೆಲ್ಲ ಎಲ್ಲೇ ಹೋಗುವುದಾದರೂ ಬಲಗಡೆಯಲ್ಲೊಬ್ಬ ಛತ್ರಿ ಹಿಡಿದವನು ಇರುವುದು ಘನತೆಯ ಸಂಕೇತವಾಗಿದ್ದ ಕಾಲವಿತ್ತು. ಈ ಛತ್ರಿ ಹಿಡಿದವನು ಪ್ರಧಾನ ವ್ಯಕ್ತಿಗೆ ಸದಾ ಅಂಟಿಕೊಂಡೇ ಇರುತ್ತಿದ್ದುದರಿಂದ ಆಗಾಗ ತನ್ನ ಯಜಮಾನನಿಗೆ ಸಲಹೆ-ಸೂಚನೆ ಕೊಡುವ ಕೆಲಸವನ್ನೂ ಮಾಡಿದ್ದಿರಬಹುದು. ಹಾಗೆಯೇ ತನ್ನ ಬೇಳೆ ಬೇಯಿಸಿಕೊಳ್ಳುವ ಕೆಲಸಗಳನ್ನೂ ಮಾಡಿಸಿಕೊಂಡಿರಬಹುದು. ಅದಕ್ಕೇ ಇರಬೇಕು,ಅಧಿಕಾರಕ್ಕೆ ಹತ್ತಿರದಲ್ಲಿದ್ದು ಬಕೀಟು ಹಿಡಿಯುವ ಕೆಲಸ ಮಾಡುವವರಿಗೆ ಛತ್ರಿ ಎಂಬ ಅನ್ವಯಾರ್ಥ ಬಂದಿರುವುದು. ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬ ಗಾದೆಮಾತು ಕೇಳದವರು ಯಾರು! ಜಮೀನ್ದಾರಿಕೆಯ ದರ್ಪದ ಜೊತೆ ಹೆಣೆದುಕೊಂಡಿರುವ ಕೊಡೆಯ ಅಸ್ತಿತ್ವದ ಬಗ್ಗೆ ಗೊತ್ತಿಲ್ಲದವರಿಗೆ ಈ ಗಾದೆ ಅರ್ಥವಾಗುವುದು ಕಷ್ಟ. ಐಶ್ವರ್ಯವಂತರು ತಮ್ಮ ಹಿಂದೆ ಕೊಡೆ ಹಿಡಿಸಿಕೊಳ್ಳಬೇಕು; ಅದೂ ಬಿಸಿಲಿಗೆ ಹೋದಾಗ ಮಾತ್ರ. ಅಂಥಾದ್ದರಲ್ಲಿ, ಕೊಡೆ ಹಿಡಿಯುವ ಬೆಂಬಲಿಗರು ಇನ್ನೂ ಯಾರೂ ಹುಟ್ಟದ್ದರಿಂದ ಅವಸರ ತಡೆಯಲಾರದೆ ಅಲ್ಪ ತಾನೇ ಕೊಡೆ ಹಿಡಿದಿದ್ದಾನೆ;ಅದೂ ರಾತ್ರಿಯಲ್ಲಿ! ಎಂಥ ಅದ್ಭುತ ವ್ಯಂಗ್ಯ ನೋಡಿ! ಇಸ್ಪೀಟಾಡಲು ಗಾಂಧಿ ಬಜಾರಿನ ಕ್ಲಬ್ಬಿಗೆ ಹೋಗುತ್ತಿದ್ದ ಕನ್ನಡದ ಆಸ್ತಿ ಮಾಸ್ತಿ ಆಟ ಮುಗಿಸಿ ಗವೀಪುರದಲ್ಲಿದ್ದ ಮನೆಗೆ ವಾಪಸು ಹೋಗುವಾಗ ಕೊಡೆ ಅರಳಿಸಿಕೊಳ್ಳುತ್ತಿದ್ದರು. ಅದು ಐಶ್ವರ್ಯ ಬಂದ ಸಂಕೇತವಲ್ಲ; ಒಂದಾನೊಂದು ಕಾಲದಲ್ಲಿ ಆ ಬಜಾರಿನ ಮರಗಳಲ್ಲಿದ್ದ ಸಾವಿರಾರು ಗಿಳಿಗಳ ಪಿಷ್ಟ ಬಿದ್ದೀತೆಂಬ ಎಚ್ಚರಿಕೆಯ ಸಲುವಾಗಿ! ಇಂದು ಬೆಂಗಳೂರಲ್ಲಿ ಹಕ್ಕಿಗಳ ಹಿಕ್ಕೆ ಬಿದ್ದೀತೆಂದು ಯಾರಾದರೂ ಕೊಡೆ ಅರಳಿಸಬೇಕಾದ ಪ್ರಮೇಯ ಬಂದೀತೇ?ಯಥೇಚ್ಛವಾಗಿರಬೇಕಾದ ಕಾಗೆಯಂಥ ಹಕ್ಕಿ ಕಾಣಿಸಿಕೊಂಡರೂ ಟಿವಿ ಚಾನೆಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗುವ ಕಾಲ ಬಂದಿದೆ!
ಆಗಿನಿಂದ ಬರೇ ಕಪ್ಪುಕೊಡೆಗಳದ್ದೇ ಮಾತಾಯಿತು ಎನ್ನಬೇಡಿ. ನಮ್ಮ ಮಲೆನಾಡು ಕಡೆ ಮಳೆಗಾಲಕ್ಕೆ ಅರಳುವ ಬಿಳಿಕೊಡೆಗಳೂ ಇವೆ! ಇವನ್ನು ನಾಯಿಕೊಡೆಗಳೆಂದು ಕರೆಯುತ್ತೇವೆ. ಮಳೆಯ ಮೊದಲ ನಾಲ್ಕು ಹನಿ ಬಿದ್ದರೆ ಸಾಕು ಸುತ್ತಮುತ್ತಲಿನ ಕಳೆಕೊಳೆಗಳನ್ನೆಲ್ಲ ನುಂಗಿ ಪರಿಪುಷ್ಟವಾಗಿ ಬೆಳೆದುನಿಲ್ಲುವ ಅಣಬೆಯೇ ಕೊಡೆಯ ಕಲ್ಪನೆ ಮೊಳೆಯಲು ಹೇತುವಾಗಿರಬಹುದು. ಅಣಬೆಯಡಿ ನಿಂತು ಮಳೆಹನಿಗಳಿಂದ ರಕ್ಷಿಸಿಕೊಳ್ಳುವ ಕಪ್ಪೆ,ಚೇರಟೆ, ಮಿಡತೆಗಳನ್ನು ನೋಡಿದ ಮನುಷ್ಯನಿಗೆ ಕೊಡೆಯ ಕಲ್ಪನೆ ಮೊದಲ ಬಾರಿಗೆ ಮೊಳೆತಿರಬಹುದು. ಸ್ಫೂರ್ತಿ ಏನೇ ಇರಲಿ; ಮಾಲುವ ವೃದ್ಧರಿಗೆ ಊರುಗೋಲಾಗಿ, ಬಸ್ಸುಗಳು ಹಾರಿಸುವ ಕೆಸರು ಮತ್ತು ಸಾಲ ಕೊಟ್ಟವರ ನೋಟವನ್ನು ತಪ್ಪಿಸುವ ಗುರಾಣಿಯಾಗಿ, ಮಕ್ಕಳಾಡುವ ರಾಮ-ರಾವಣರ ಯುದ್ಧಕ್ಕೆ ಒದಗಿಬರುವ ಈಟಿ-ಭರ್ಜಿಗಳಾಗಿ, ಹಳ್ಳಿಗಳ ತೊರೆಗಳಲ್ಲಿ ಮೀನು ಹಿಡಿವವರ ಕೈಚೀಲಗಳಾಗಿ, ಪ್ರೇಮಿಗಳನ್ನಂಟಿಸುವ ಬೆಸುಗೆಯಾಗಿ, ಫ್ಯಾಷನ್ ಜಗತ್ತಿನ ಹೆಂಗಳೆಯರ ಹಸ್ತಾಲಂಕಾರ ಸಾಧನಗಳಾಗಿ ಬಳಕೆಯಾಗುವ ಕೊಡೆಯ ಕೊಡುಗೆಯನ್ನು ಕಡೆಗಣಿಸುವಂತಿಲ್ಲ!
Facebook ಕಾಮೆಂಟ್ಸ್