X

ಹೋಮ ಹವನ  ಸನಾತನ ಧರ್ಮದ ಪ್ರತೀಕ, ಅದರ ತೇಜೋವಧೆ ಡಂಭಾಚಾರಕ

 

ಕೆಲ ದಿನಗಳ ಹಿಂದೆ ಬಂಡಾಯ ಸಾಹಿತಿಗಳಾದ ಮಾನ್ಯ ವೇಣುರವರು ಕನ್ನಡದ ದಿನಪತ್ರಿಕೆ “ವಿಶ್ವವಾಣಿ”ಯಲ್ಲಿ ಮತ್ತೂರಿನಲ್ಲಿ ನಡೆದ ಸೋಮಯಾಗದ ಬಗ್ಗೆ ತಮ್ಮ ಕಪೋಲಕಲ್ಪಿತ ನಿಲುವನ್ನು ವ್ಯಕ್ತಪಡಿಸಿದ್ದಾರೆ. ವೇಣುರವರು ವೈಭವದ ಮಾತು ಮತ್ತು ತಮ್ಮ ಬರಹಗಳಿಂದ ವಾಚಕವೃಂದವನ್ನು ಆಕರ್ಷಿಸಬಹುದು ಎಂದು ತಿಳಿದಿದ್ದರೆ, ಅದು ಅವರ ಭ್ರಮಾಲೋಕದ ಪರಮಾವಧಿಯಾಗಿದೆ ಎಂದಾಗ ತಪ್ಪಾಗಲಾರದು. ಬುದ್ದು ಜೀವಿಗಳ ಮುಖದ ರಾಡಿಯನ್ನು ಇವರು ಒರೆಸಲು ಹರಸಾಹಸ ಪಡುತ್ತಿದ್ದಾರೆ ಹಾಗೂ ಅವರುಗಳ ಗೊಡ್ಡುತನದ ಧೋರಣೆಗಳನ್ನು ಎತ್ತಿ ಹಿಡಿಯಲು ನೋಡುತ್ತಿದ್ದಾರೆ ಎಂಬುದು ಸ್ಪಷ್ಟ, ಆದರೆ ವಾಚಕವೃಂದದವರನ್ನು ಬೆಪ್ಪು ಮಾಡಲಿಕ್ಕೆ ಸಾಧ್ಯವಿಲ್ಲವೆಂಬುದು ಅವರಿಗೆ ತಿಳಿದಂತಿಲ್ಲ. ಮತ್ತೂರಿನಲ್ಲಿ ಸಂಸ್ಕೃತ ಭಾಷೆ ಮಾತನಾಡಿದರೆ ಇವರ ಗಂಟು ಏನು ಹೋಗುವುದೋ ಗೊತ್ತಿಲ್ಲ. ಇಲ್ಲಿನವರು ಮಾತನಾಡುವ ಭಾಷೆಗೂ, ಅಲ್ಲಿ ನಡೆದ ಯಾಗಕ್ಕೂ ಯಾವ ಬಾದರಾಯಣ ಸಂಬಂಧ..? ಸಂಸ್ಕೃತ ಮೃತ ಭಾಷೆ ಎಂದು ತಿಳಿದಿರುವ ಇವರು ಆ ಭಾಷೆಯಿಂದಲೆ ಮಿಕ್ಕೆಲ್ಲ ಭಾಷೆಗಳು ಉದ್ಭವಿಸಿದವು ಎಂಬುದನ್ನು ಇವರು ಮನಗಂಡಂತ್ತಿಲ್ಲ. ಸುಮಾರು ಅರವತ್ತು ಲಕ್ಷಕ್ಕೂ ಹೆಚ್ಚು ಜನ ಉಪಯೋಗಿಸುವ ಈ ಭಾಷೆಯು, ಇವರ ಪ್ರಕಾರ ಹೇಗೆ ಮೃತವಾಯಿತು ಎಂಬುದನ್ನು ಇವರ ಅಧ್ಯಯನ ಹಾಗು ಚಿಂತನೆಯಿಂದ ತಿಳಿದುಕೊಳ್ಳಬೇಕಾಗಿದೆ.

ಲೋಕಕಲ್ಯಾಣಕ್ಕಾಗಿ ಮಾಡುವ ಯಾಗಕ್ಕೆ, ಬ್ರಾಹ್ಮಣರ ನಂಬಿಕೆಗೆ ಅನುಸಾರವಾಗಿ ಕೈಗೊಂಡ ಕಾರ್ಯಕ್ರಮವು ಇವರಿಗೆ ಯಾವ ರೀತಿಯಲ್ಲಾದರು ಉಪದ್ರವಾಯಿತೆ? ಇಲ್ಲವಲ್ಲ. ಸಮಾಜದ ಸರ್ವತೋಮುಖ ಏಳ್ಗೆಗಾಗಿ ಬಯಸುವ ಬ್ರಾಹ್ಮಣ, ಹೋಮ ಹವನಗಳನ್ನು ಕದ್ದುಮುಚ್ಚಿ ಮಾಡುವ ಪ್ರಸಂಗ ಎಲ್ಲಿಂದ ಉದ್ಭವಿಸುತ್ತದೆ ಎಂಬುದನ್ನು ಇವರು ಮನಗಾಣಬೇಕು. ತುಲನಾತ್ಮಕವಾದ ಅಧ್ಯಯನವಿಲ್ಲದೆ ಸಕಲ ಕೆಲಸಗಳಲ್ಲಿ ಅಜ್ಞಾನವೇ ಮೆಟ್ಟಿನಿಲ್ಲುತ್ತದೆ ಎಂಬುದನ್ನು ನಾನು ಸಣ್ಣವನಿದ್ದಾಗಲೇ ಅರಿತೆ. ವಾಚಕರ ಆಶಯವು ಕೂಡ ಇದೇ ಆಗಿದೆ.

ವೇದಗಳ ಹಾಗು ಅದರ ಶಾಸ್ತ್ರಗಳ ಆಳವಾದ ಅಧ್ಯಯನ ಮಾಡಲು ಮಾನವನ ಒಂದು ಜನ್ಮವು ಸಾಕಾಗುವುದಿಲ್ಲ. ಇವರು ಹೇಳುವಂತೆ ವೈದಿಕರು ಮಾಂಸಾಹಾರ ತ್ಯಜಿಸಿ ಸಸ್ಯಾಹಾರಿಗಳಾದರು ಎಂಬುದು ಯಾವ ಶಾಸ್ತ್ರದಲ್ಲಿ ಉಲ್ಲೇಖವಾಗಿದೆಯೋ ಅದನ್ನು ತಿಳಿಸಿದರೆ ಬಹಳ ಸೂಕ್ತ. ಹಿಂಸೆಯನ್ನು ಮಾಡುವುದೇ ಕಡುಪಾಪ ಎಂದನ್ನರಿತ ಬ್ರಾಹ್ಮಣ ಇನ್ನು ಪ್ರಾಣಿವಧೆಯನ್ನು ಮಾಡಿ ಅದರ ಮಾಂಸ ಭಕ್ಷಣೆ ಮಾಡುವಷ್ಟು ಕ್ರೂರತೆ ಎಲ್ಲಿಂದ ಉದ್ಭವಿಸಿತೋ ತಿಳಿಯುತ್ತಿಲ್ಲ. ಮತ್ತೂರಿನಲ್ಲಿ ಪ್ರಾಣಿವಧೆಯೇ ಆಗದಿದ್ದ ಮೇಲೆ ಅಲ್ಲಿದ್ದ ಬ್ರಾಹ್ಮಣರೆಲ್ಲರು ಸಾತ್ವಿಕರೇ. ಇನ್ನು ಮಾಂಸ ಭಕ್ಷಣೆ ಹೇಗೆ ಸಾಧ್ಯ? ಡಂಭಾಚಾರ ಹಾಗು ಅಸತ್ಯವನ್ನೇ ಬಿಂಬಿಸುತ್ತ ಮತ್ತಷ್ಟು ಮೂರ್ಖತನದ ಗೋಜಲಿಗೆ ಸಿಕ್ಕಿಕೊಳ್ಳುತ್ತೇನೆ ಎಂಬುದನ್ನು ಬುದ್ಧುಜೀವಿಗಳು ಮೊದಲೇ ಅರಿತಿದ್ದರೆ ತಾವೇ ನಿರ್ಮಿಸಿದ ಕೆಸರ ತೋಡಿಗೆ ಕಲ್ಲೆಸೆಯುವ ಪ್ರಸಂಗ ಬರುತ್ತಿರಲಿಲ್ಲ.

ಸೋಮರಸವು ಔಷಧೀಯ ಗುಣವುಳ್ಳ ತೀರ್ಥ. ಅಲ್ಲಿ ನೆರೆದಿದ್ದ ಬ್ರಾಹ್ಮಣ ಮಿತ್ರರು ಸೇವಿಸಿದರೆ ಅದು ಅವರ ಆರೋಗ್ಯಕ್ಕೆ ಶ್ರೀರಕ್ಷೆ. ಬ್ರಾಹ್ಮಣ ವಿರೋಧಿಗಳು ಈ ಔಷಧೀಯ ಗುಣವುಳ್ಳ ತೀರ್ಥವು ಬಾರ್’ನಲ್ಲಿ ದೊರೆಯುವ ಮದ್ಯಕ್ಕೆ ಹೋಲಿಸಿದರೆ ಬ್ರಾಹ್ಮಣನ ತಾಳ್ಮೆ ತಳಹಿಡಿಯುವುದಿಲ್ಲ ಮತ್ತಷ್ಟು ಹೆಚ್ಚುತ್ತದೆ. ಅಜ್ಞಾನವನ್ನೇ ಮನೆಮಾಡಿಕೊಂಡು ಅದರಲ್ಲಿ ನೆಲೆಯೂರಿರುವಂತಹ ಬ್ರಾಹ್ಮಣ ವಿರೋಧಿಗಳ ಮೇಲೆ ನಮಗೆ ಅಪಾರವಾದ ಕನಿಕರವಿದೆ ಹಾಗೂ ಸಹಾನುಭೂತಿ ಕೂಡ.

ವಿರೋಧಿಗಳು ಬ್ರಾಹ್ಮಣನನ್ನು ಲೇವಡಿ ಮಾಡಿಕೊಂಡು ಸಣ್ಣತನದಿಂದ ಅಧಃಪತನಕ್ಕೆ ಬೀಳುತ್ತ ಏಳಲಾಗದ ಪರಿಸ್ಠಿತಿಗೆ ಹವಣಿಸುತ್ತಾರೆಂದರೆ, ಅವರನ್ನು ತಡೆಯುವುದು ಅತ್ಯಂತ ಅವಶ್ಯ. ಏಕೆಂದರೆ, ವಿರೋಧಿಗಳ ಏಳ್ಗೆ ಹಾಗೂ ತಾಳ್ಮೆಯನ್ನು ಹಲವಾರು ಶತಮಾನಗಳಿಂದ ಸಹಿಸುತ್ತ ಬಂದಿರುವುದು ಅದೇ ಬ್ರಾಹ್ಮಣ. ಸುದ್ದಿಜೀವಿಗಳಿಂದ ಸತ್ಯದ ಶೋಧನೆ ನಡೆಯುತ್ತಾದರೂ, ಬುದ್ಧಿಜೀವಿಗಳಿಂದ ಅಸತ್ಯವನ್ನೇ ಬಿಂಬಿಸಲಾಗುತ್ತಿದೆ ಹಾಗೂ ಅನ್ಯಧರ್ಮೀಯ ಅಧರ್ಮ ಕೈಂಕರ್ಯಗಳು ಎತ್ತಿ ಹಿಡಿಯುವುದರಲ್ಲಿ ನಿರತವಾಗಿವೆ.

ಕಸಾಯಿಖಾನೆಗಳಲ್ಲಿ ದಿನವೂ ಮಾರಣಹೋಮ ನಡೆಯುವಾಗ ಬ್ರಾಹ್ಮಣ ವಿರೋಧಿಗಳು ಯಾಕೆ ಕಟುಕನಿಗೆ ಮೃದು ಧೋರಣೆ ತೋರುತ್ತ ಗುಂಜಾಯಿಸಿಕೊಂಡು ತಮ್ಮ ನಿತ್ಯ ಅಸತ್ಯ ಕಾರ್ಯಗಳಲ್ಲಿ ಮಗ್ನರಾಗಿರುತ್ತಾರೆ..? ಇವರ ಈ ನಿಲುವಿಗೆ ಡಂಭಾಚಾರವೆನ್ನಬಹುದೋ ಅಥವಾ ಸರ್ವ ಅಧರ್ಮ ಕೈಂಕರ್ಯವೋ. ಅನ್ಯಧರ್ಮೀಯರು ಕಡಿದರೆ ಪ್ರಕೃತಿನಿಯಮ, ಬ್ರಾಹ್ಮಣ ಹವನ ಮಾಡಿದರೆ ಆಷಾಢಭೂತಿತನ ಅದು ಸೃಕ್-ಸೃವ ಹಿಡಿದು ತುಪ್ಪವನ್ನು ಅಗ್ನಿಗೆ ಅರ್ಪಿಸುವಾಗ. ಸತ್ಯಾಸತ್ಯತೆ ಕಾಣುತ್ತಿರುವಾಗ ವಿರೋಧಿಗಳ ಅಡ್ಡಗಾಲು ಸಹಜ, ಇದಕ್ಕಾಗಿ ಅಂಜದೆ ನಮ್ಮ ಸನಾತನ ಧರ್ಮವನ್ನು ಉಳಿಸುವುದರಲ್ಲಿ ಬ್ರಾಹ್ಮಣಿಕೆಯ ಪಾಲು ಬಹು ಮಹತ್ವದ್ದು.

ಬ್ರಾಹ್ಮಣನ ತೇಜೋವಧೆ ಹಾಗೂ ಅವನ ಸನಾತನ ಧರ್ಮಕಾರ್ಯಗಳ ವಿರೋಧ, ಎಲ್ಲವೂ ನಡೆದುಕೊಂಡು ಬರುತ್ತಿದೆ. ಬ್ರಾಹ್ಮಣ ಅಲ್ಪಸಂಖ್ಯಾತನಲ್ಲ, ವಿರೋಧಿಗಳ ಉಪಟಳದಿಂದ ಸಮುದಾಯವನ್ನು ಒಡೆಯಲೆತ್ನಿಸುತ್ತಿದ್ದಾರೆ. ಮೀಸಲಾತಿ ಎಂಬ ನೆಪದಿಂದ ಬ್ರಾಹ್ಮಣನನ್ನು ತುಳಿಯಲಾಗುತ್ತಿದೆ. ಇದನ್ನರಿತಾದರೂ ಬ್ರಾಹ್ಮಣರು ಮತ್ತಷ್ಟು ಒಂದಾಗಬೇಕಿದೆ.  

ಸಂದೀಪ್ ಶರ್ಮಾ .ಎಂ.  

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post