X

ಎಸ್ಎಸ್ಎಲ್’ಸಿ ಓದಿದ ಹುಡುಗ ಕೃಷಿ ಕ್ಷೇತ್ರದಲ್ಲಿ ಅತ್ಯುನ್ನತ ಅನ್ವೇಷಣೆ ಮಾಡಿದ.

ಯಶಸ್ಸಿಗೆ ಜಾತಿಯಲ್ಲ, ಧರ್ಮವಿಲ್ಲ, ಆಸ್ತಿ ಅಂತಸ್ತಿನ ಹಂಗಿಲ್ಲ ಒಂದು ಗುರಿ ಮತ್ತು ಕೈ ಹಿಡಿದು ನಡೆಸುವ ಗುರು ಇವೆರಡೂ ಇದ್ದರೆ ಅದೆಂತಹ ಕಠಿಣ ಸಮಯವನ್ನೂ ಕೂಡ ಮನುಷ್ಯ ಎದುರಿಸಬಲ್ಲ. ಪರಿಶ್ರಮದ ನೊಗವನ್ನು ನಿಯತ್ತಿನಿಂದ ಎಳೆದಾಗ ಯಶಸ್ಸು ಎಂಬ “ಫಲ” ದೊರೆಯುವುದರಲ್ಲಿ ಅನುಮಾನವೇ ಇಲ್ಲ. ನಾವು ಏನಾದರೂ ಒಳ್ಳೆಯದನ್ನು ಮಾಡಲು ಹೊರಟಾಗ ಈ ಜಗತ್ತಿನ ಅದೆಷ್ಟೋ ಜನ ಸಹಾಯಮಾಡುತ್ತಿರುತ್ತಾರೆ. ಹಾಗಾಗಿಯೇ ಯಶಸ್ಸಿನ ಉತ್ತುಂಗವ ತಲುಪಿದ ಒಬ್ಬ ಸಾಧಕನ ಬಳಿ ನಿನ್ನ ಯಶಸ್ಸಿಗೆ ಕಾರಣನಾರೂ  ಎಂಬ ಪ್ರಶ್ನೆ ಕೇಳಿದರೆ ಆತ ಒಬ್ಬರ ಹೆಸರನ್ನು ಹೇಳಲು ಸಾಧ್ಯವೇ ಇಲ್ಲ.”ಗುರು” ಎಂಬ ರೂಪದಲ್ಲಿ ಅದೆಷ್ಟೋ ಜನ ನಮ್ಮ ಯಶಸ್ಸಿನೆಡೆಗಿನ ಯಾನಕ್ಕೆ ಜೊತೆಯಾಗಿರುತ್ತಾರೆ. ಆ ಒಬ್ಬನೇ ಗುರು ಯಾರಾದರೂ ಇದ್ದರೆ ಆತ “ಭಗವಂತ”ನೊಬ್ಬನೇ. ಅಮ್ಮನ ಕಣ್ಣಂಚಿನ ಆನಂದಭಾಷ್ಪ ,ಅಪ್ಪನ ನಿಟ್ಟುಸಿರು ನಮ್ಮ ಗೆಲುವಿನಿಂದ ಮಾತ್ರ ಬರುತ್ತದೆ. ನಮ್ಮ ನಾಳೆಯಲಿ ಹೆತ್ತವರ ಬದುಕು ಅಡಗಿದೆ. ಜವಾಬ್ದಾರಿಯಿಂದ ನುಣುಚಿಕೊಂಡಾವರ್ಯಾರೂ ಮಹಾನ್ ವ್ಯಕ್ತಿಗಳಾಗಲಿಲ್ಲ. ಹಾಂ ! ಈಗೇಕೆ ಈ ವಿಚಾರಗಳು ಎನ್ನಿಸುತ್ತಿದೆಯೇ? ಈಗೊಬ್ಬ ಸಾಧಕನ ಬಗ್ಗೆ ಹೇಳಬೇಕು, ಈತ ಖಂಡಿತವಾಗಿಯೂ ಸೋತು ಕೂತವರಿಗೆ ಚೈತನ್ಯವಾಗಬಲ್ಲ, ಪ್ರೇರಣೆಯಾಗಿ ಆವರಿಸಬಲ್ಲ. ಆ ವ್ಯಕ್ತಿಯೇ “ಗಿರೀಶ್ ಬದ್ರಗೊಂಡ”. ಹಾಗಾದ್ರೆ ಯಾರೀತ ಗಿರೀಶ್ ಬನ್ನಿ ನೋಡೋಣ…

2006 ನೇ ಇಸ್ವಿಯಲ್ಲಿ ಬಿಜಾಪುರದ ಗಿರೀಶ್ ತನ್ನ ಲ್ಯಾಪ್‌ಟಾಪ್ ಮತ್ತು ವೈಯರ್ಲೆಸ್ ರೂಟರ್ ಜೊತೆ ಬೆಂಗಳೂರು ಎಂಬ ಮಹಾನಗರಿಗೆ ಬಂದಿಳಿಯುತ್ತಾನೆ. ನೀವು ನಂಬಲೇ ಬೇಕು ಬೆಂಗಳೂರಿಗೆ ಬರಲು ಎಷ್ಟು ದುಡ್ಡು ಬೇಕೋ ಅಷ್ಟು ಮಾತ್ರ ಗಿರೀಶ್ ಬಳಿ ಇತ್ತು. ವಾಪಸ್ ಹೋಗಲು ನಯ ಪೈಸೆ ಇರಲಿಲ್ಲ. ಆದರೆ ಇಲ್ಲಿ ಅದೇನೋ ಸಾಧಿಸುತ್ತೇನೆ ಎಂಬ ಹಠ,ಭರವಸೆ ಜೊತೆಗೆ ಅಧಮ್ಯ ಉತ್ಸಾಹ ಅವನಲ್ಲಿ ಮನೆ ಮಾಡಿತ್ತು. ಆದರೆ ಅದೇ ಗಿರೀಶ ಆರು ವರ್ಷಗಳ ನಂತರ ಬಂಗಳೂರಿನ ಫಾಸ್ಟ್ ಗ್ರೋವಿಂಗ್ ಸಂಸ್ಥೆಗಳಲ್ಲಿ ಒಂದಾದ ಸಂಟೆಪ್ ಸಿಸ್ಟಮ್ಸ್ ಎಂಬ ಕೃಷಿಗೆ ಅವಶ್ಯವಿರುವ  ತಂತ್ರಜ್ಞಾನ ವಸ್ತುಗಳ ತಯಾರಿಕಾಸಂಸ್ಥೆಯ ಪಾಲುದಾರನಾಗುತ್ತಾನೆ ಅಂದರೆ ಆತನ ಸಾಧನೆಗೆ ನಾವುಗಳು ಒಂದು ಸಲಾಮ್ ಹೊಡೆಯಲೇ ಬೇಕು. ಬೆಂಗಳೂರು ಎಂಬ ಮಹಾನಗರಿಗೆ ಬಂದಿಳಿದ ಗಿರೀಶನ ಬಳಿ ಹಣವಿರಲಿಲ್ಲ ಆಗ ಅವನಿಗೆ ಆಸರೆ ಆದವರು ಅವನ ಸ್ನೇಹಿತರು. ಪ್ರಾರಂಭದಲ್ಲಿ ಅವರ ರೂಮಲ್ಲೇ ವಾಸಿಸಿದ ಗಿರೀಶ ನಂತರ ಬೇರೆ ಒಂದಿಬ್ಬರು ಗೆಳೆಯರ ಜೊತೆ ಸೇರಿ ಒಂದು ರೂಮಿನಲ್ಲಿ ವಾಸಿಸಲು ಶುರು ಮಾಡಿದ. ಗಿರೀಶ ಯಾವುದೋ ಇಂಜಿನಿಯರಿಂಗ್ ಆಥವ ಇನ್ಯಾವುದೋ ಡಿಪ್ಲೋಮಾ ಮಾಡಿ ಬೆಂಗಳೊರಿಗೆ ಬಂದಿರಲಿಲ್ಲ, ಬದಲಾಗಿ ಆತ ಹತ್ತನೇ ತರಗತಿಯನ್ನು ಕಷ್ಟಪಟ್ಟು ಓದಿ ಜಸ್ಟ್ ಪಾಸ್ ಮಾಡಿಕೊಂಡ ಸಾಮಾನ್ಯ ಹುಡುಗ. ಮುಂದೆ ಓದಲು ಹಣವಿಲ್ಲದೆ ಅಲ್ಲಿಗೆ ಓದು ನಿಲ್ಲಿಸಿದ ಗಿರೀಶನಿಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ತುಂಬಾ ಆಸೆಯಿತ್ತು. ಆತ ಪ್ರೌಢ ಶಾಲೆಯಲ್ಲಿರುವಾಗಲೇ ಅದೆಷ್ಟೋ ಪ್ರಾಜೆಕ್ಟ್’ಗಳನ್ನು ಮಾಡಿದ್ದ . ಇಂಜಿನಿಯರಿಂಗ್ ವಿಧ್ಯಾರ್ಥಿಗಳ ಕೈಲಾಗದನ್ನು ಗಿರೀಶ ಮಾಡಿ ಮುಗಿಸುತ್ತಿದ್ದ. ಗಿರೀಶನೆ ಹೇಳುವ ಹಾಗೆ ಆತನಿಗೆ ಯಂತ್ರಗಳ ಜೊತೆ ಆಡುವುದೆಂದರೆ ತುಂಬಾ ಇಷ್ಟವಂತೆ, ತುಂಬಾ ಚಿಕ್ಕವನಿದ್ದಾಗೊಮ್ಮೆ ಗಿರೀಶ ತನ್ನ ಸಂಬಂಧಿಕರೊಬ್ಬರ ಕೈಗಡಿಯಾರವನ್ನು ಸಂಪೂರ್ಣವಾಗಿ ಬೇರ್ಪಡಿಸಿಬಿಟ್ಟಿದ್ದ ಆದರೆ ನಂತರ  ಅವನೇ ಅದನ್ನು ಜೋಡಿಸಿ ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದ.

ಬೆಂಗಳೂರಿಗೆ ಬಂದ ಪ್ರಾರಂಬದಲ್ಲಿ ತನ್ನ ಬಳಿ ಇದ್ದ ರೂಟರ್ ಮತ್ತು ಒಂದು ಹಳೆ ಡಿಟಿಎಚ್ ಬಳಸಿಕೊಂಡು ತನ್ನ ಬ್ಯಾಂಡ್ವಿಡ್ತ್  ಅನ್ನು ಸುಮಾರು ಹತ್ತು ಕಿಲೋಮೀಟರ್’ವರೆಗೆ ವಿಸ್ತರಿಸಿಕೊಂಡು ಅದನ್ನು ಮಾರಾಟ ಮಾಡಿ ಒಂದಿಷ್ಟು ಹಣ ಗಳಿಸುತ್ತಿದ ಗಿರೀಶ್. ಈಗ ಗಿರೀಶನ ಆಫೀಸ್’ಗೆ ಯಾರಾದರೂ ಒಳಗಡಿ ಇಟ್ಟ ಕೂಡಲೇ ವಿದ್ಯುತ್ ದೀಪ ಉರಿಯುತ್ತದೆ ಮತ್ತು ಹೊರ ಹೋದ ತಕ್ಷಣ ಸ್ವಯಂ ಚಾಲಿತವಾಗಿ ಅದು ಆರಿಹೊಗುತ್ತದೆ ಇದು ಕೂಡ ಗಿರೀಶ ಕಂಡು ಹಿಡಿದ ಒಂದು ತಂತ್ರಜ್ಞಾನ.

ಬದಲಾದ ಪರಿಸ್ಥಿತಿಯಲ್ಲಿ ಕೃಷಿಯಲ್ಲಿನ ತಂತ್ರಜ್ಞಾನ ಬಳಕೆ ಕೂಡ ಜಾಸ್ತಿ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ  ಈ ಕಾಲಘಟ್ಟದಲ್ಲಿ ಬಂದಿದೆ. ಹಳೆಯ ಕೃಷಿ ಪದ್ದತಿಗಳು ಅದ್ಭುತವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ಈಗಲೂ ಅದೇ ಪದ್ದತಿಯನ್ನು ಅಳವಡಿಸಿಕೊಂಡು ಹೋಗಲು ಕೆಲವು ಸಂಪನ್ಮೂಲಗಳ ಕೊರತೆ ಇದೆ, ಹಾಗಾಗಿ ಹೊಸತನಕ್ಕೆ ಹೊಸ ತಂತ್ರಜ್ಞಾನಕ್ಕೆ ಕೃಷಿಕ ಒಗ್ಗಿಕೊಳ್ಳಲೇ ಬೇಕಾಗಿದೆ. ಗಿರೀಶ ಕೂಡ ಈ ಸಮಸ್ಯೆಯನ್ನು ಬಹಳ ಹತ್ತಿರದಿಂದ ಬಲ್ಲವನಾಗಿದ್ದರಿಂದ ಆತನ ತಲೆ ಕೃಷಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಕಡೆ ವಾಲಿತು. ಪರಿಣಾಮ ಒಂದಿಷ್ಟು ಅದ್ಭುತವಾದ ಅನ್ವೇಷಣೆಯನ್ನು ಗಿರೀಶ ಕೃಷಿ ಕ್ಷೇತ್ರದಲ್ಲಿ ಮಾಡಿದ.

ಮುಂದೆ ಸಂಟೆಪ್ ಸಿಸ್ಟಮ್ಸ್ ಎಂಬ ಸಂಸ್ಥೆಯ ಸೇರಿದ ಗಿರೀಶ ಹೊಸ ಹೊಸ ಅನ್ವೇಷಣೆಯಲ್ಲಿ ತೊಡಗಿಕೊಂಡ. ಆತನ ಅನ್ವೇಷಿಸಿದ ಕೆಲವು ಉತ್ಪನ್ನಗಳ ಮೇಲೆ ಒಂದು ಕಣ್ಣು ಹಾಯಿಸೋಣ ಬನ್ನಿ…

ಬೋರ್ವೆಲ್ ಸ್ಕ್ಯಾನರ್ :

ಇದು ಗಿರೀಶನ ಅನ್ವೇಷಣೆಯಲ್ಲಿ ಮೊದಲನೆಯದು ಮತ್ತು ತುಂಬಾ ಪರಿಣಾಮಕಾರಿಯಾದದ್ದು. ಭೂತಳದಲ್ಲಿರುವ ನೀರಿನ ಗುಣ ಲಕ್ಷಣಗಳನ್ನು ಅಳೆಯುವುದು ಸುಲಭದ ಮಾತಲ್ಲ ಆದರೆ ಗಿರೀಶ  ಈ ಯಂತ್ರದ ಅನ್ವೇಷಣೆಯ ಮೂಲಕ ಇದನ್ನು ಸಾಧ್ಯವಾಗಿಸಿಬಿಟ್ಟ. ಈ ಯಂತ್ರದಲ್ಲಿ ಒಂದು ಕ್ಯಾಮೆರಾವನ್ನೂ, ಜೊತೆಗೆ ಆ ಕ್ಯಾಮರಾಕ್ಕೆ ಫ್ಲಾಶ್ ಸೌಲಭ್ಯವನ್ನೂ ಅಳವಡಿಸಲಾಗಿದೆ ಜೊತೆಗೆ ಈ ಸ್ಕ್ಯಾನರ್ ಭೂಮಿಯ ಸಮತಲದಲ್ಲಿ 180 ಡಿಗ್ರೀ ರೊಟೆಶನ್ ಆಗುವ ಸಾಮರ್ಥ್ಯವನ್ನೂ ಹೊಂದಿದೆ. ಈ ಯಂತ್ರ ನೀರಿನ ಮಟ್ಟದ ಚಿತ್ರವನ್ನು ತೆಗೆದು ರವಾನಿಸುತ್ತದೆ ಮತ್ತು ನೀರಿನ ಒಳ ಮತ್ತು ಹೊರ ಹರಿವಿನ ಪ್ರಮಾಣವನ್ನೂ ತಿಳಿಸುತ್ತದೆ. ರೈತ ಅದೆಷ್ಟೋ ಹಣವನ್ನು ಖರ್ಚು ಮಾಡಿ ಬೋರ್ವೆಲ್ ತೆಗೆಸುತ್ತಾನೆ ಆದರೆ ಅದರೊಳಗಿನ ನೀರಿನ ಗುಣಲಕ್ಷಣಗಳನ್ನ ತಿಳಿದುಕೊಳ್ಳಲು ಸಾಧ್ಯವಾಗುವಂತಹ ಯಾವುದೇ ತಂತ್ರಜ್ಞಾನವು ಬಂದಿರಲೇ ಇಲ್ಲ, ಇದನ್ನು ಗಿರೀಶ ಸಾಧ್ಯವಾಗಿಸಿಬಿಟ್ಟ.

ಅಡ್ವಾನ್ಸ್ಡ್ ಮೋಡ್ ಮೈಕ್ರೋ ಇರ್ರಿಗೆಶನ್ ಕನ್ಟ್ರೋಲ್ಲರ್ ಸಿಸ್ಟಮ್  ( ಮುಂದುವರಿದ ಸುಧಾರಿತ ಸಣ್ಣ ನೀರಾವರಿ ಪದ್ಧತಿ);

ಮಾನವನ ಸಹಾಯವಿಲ್ಲದೆ ಪಂಪ್’ಸೆಟ್’ಗಳನ್ನು ಮತ್ತು ಗಿಡಗಳಿಗೆ ನೀರುಣಿಸಲು ಸಾಧ್ಯವೇ? ಇದನ್ನು ಸಾಧ್ಯವಾಗಿಸಿದ್ದೆ ಈ ಯಂತ್ರ. ಗಿಡಗಳಿಗೆ ನೀರುಣಿಸುವ ಪದ್ದತಿಗಳಲ್ಲಿ ಹನಿನೀರಾವರಿ ಪದ್ಧತಿ ಅತ್ಯಂತ ಪ್ರಮುಖವಾದದ್ದು ಆದರೆ ಹನಿ ನೀರಾವರಿ ಪದ್ದತಿಯಿಂದಲೂ ತುಂಬಾ ನೀರು ಪೋಲಾಗುತ್ತದೆ. ಒಂದು ಗಿಡಕ್ಕೆ ಎಷ್ಟು ನೀರಿನ ಅವಶ್ಯಕತೆಯಿದೆಯೋ ಅಷ್ಟನ್ನು ಮಾತ್ರ ಒದಗಿಸುವ ವಿಧಾನವನ್ನು ಈ ಯಂತ್ರ ಸಾಕರಗೊಳಿಸಿತು. ಸೋಲಾರ್ ಸೆನ್ಸರ್’ಗಳನ್ನು ಜಮೀನಿನ ಹಲವು ಕಡೆಗಿನ ಮಣ್ಣಿಗೆ ಸೇರಿಸಲಾಗುತ್ತದೆ, ಈ ಸೆನ್ಸರ್’ಗಳು ಪಂಪ್ ಸೆಟ್’ಗೆ ನೀರಿನ ಅವಶ್ಯಕತೆಯಿರುವಾಗ ಸಂದೇಶವನ್ನು ಕಳುಹಿಸುತ್ತದೆ ಮತ್ತು ಪಂಪ್ ಸೆಟ್ ಸ್ವಯಂ ಚಾಲಿತವಾಗಿ ಶುರುವಾಗುತ್ತದೆ. ಒಂದು ವೇಳೆ ನೀರು ಗಿಡದ ಅವಶ್ಯಕತೆಯನ್ನು ಪೂರೈಸಿದಾಗ ಸ್ವಯಂ ಚಾಲಿತವಾಗಿ ಪಂಪ್ ಸೆಟ್ ತನ್ನ ಕೆಲಸವನ್ನು ಸ್ಥಗಿತಗೊಳಿಸುತ್ತದೆ. ಈ ವ್ಯವಸ್ಥೆಯನ್ನು ಸುಮಾರು ಹತ್ತು ಎಕರೆಯಷ್ಟು ಜಮೀನಿಗೆ ಅಳವಡಿಸಬಹುದು ಮತ್ತು ಇದರ ವೆಚ್ಚ ಅಂದಾಜು ಒಂದುವರೆ ಲಕ್ಷದಷ್ಟಾಗುತ್ತದೆ. ಸಣ್ಣ ಸಣ್ಣ ಜಮೀನುಗಳಿಗೆ ಅಂದರೆ ಸುಮಾರು ಎರಡರಿಂದ ಮೂರು ಎಕರೆ ಜಮೀನಿಗೆ ಈ ಯಂತ್ರವನ್ನು ಅಳವಡಿಸಲು ತಗುಲುವ ವೆಚ್ಚ ಸುಮಾರು ಇಪ್ಪತ್ತರಿಂದ ಇಪ್ಪತ್ತೈದು ಸಾವಿರ ರೂಪಾಯಿಗಳು. ಒಂದರ್ಥದಲ್ಲಿ ಇದು ರೈತನ ಬಹುಮುಖ್ಯವಾದ ಅವಶ್ಯಕತೆಯನ್ನು ಪೂರೈಸುತ್ತದೆ.

ಬರ್ಡ್ ರಿಪೆಲ್ಲರ್( ಪಕ್ಷಿಗಳನ್ನು ಹಿಮ್ಮೆಟ್ಟಿಸುವ ಸಾಧನ):

ಈ ಯಂತ್ರಕ್ಕೆ ಸುಮಾರು ಎಂಟು ಸ್ಪೀಕರ್’ಗಳನ್ನು ಅಳವಡಿಸಲಾಗಿದೆ ಇದು ರೈತ ಬೆಳೆದ ಬೆಳೆಗಳನ್ನು ತಿನ್ನಲು ಬರುವ ಪಕ್ಷಿಗಳನ್ನು ಹಿಮ್ಮೆಟ್ಟಿಸುವ ಕೆಲಸವನ್ನು ಮಾಡುತ್ತದೆ. ಮನೆಯಿಂದ ದೂರ ಜಮೀನು ಹೊಂದಿರುವ ರೈತನಿಗೆ ಈ ಸಾಧನ ಬಹು ಉಪಕಾರಿಯಾಗಿದೆ.

ಇನ್ನೊಂದು ಮುಖ್ಯ ಅನ್ವೇಷಣೆ ಅಂದರೆ ಸ್ವಯಂಚಾಲಿತ ನೀರುಣಿಸುವ ಯಂತ್ರ. ಒಂದು ವೇಳೆ ನೀವು ಬಹಳ ದಿನಗಳ ಕಾಲ ಎಲ್ಲೋ ದೂರದೂರಿಗೆ ಪ್ರವಾಸ ಮಾಡುವ ಯೋಚನೆ ಮಾಡಿರುತ್ತೀರಿ ಆದರೆ ನೀವು ಕಷ್ಟ ಪಟ್ಟು ಬೆಳೆಸಿದ ನಿಮ್ಮ ಕೈತೋಟಕ್ಕೆ ನೀರುಣಿಸುವವರಾರೂ ಇರುವುದಿಲ್ಲ ಆಗ ನಿಮ್ಮ ಸಹಾಯಕ್ಕೆ ಗಿರೀಶ ಮಾಡಿದ ಯಂತ್ರವೊಂದು ನಿಮ್ಮ ಸಹಾಯಕ್ಕೆ ಬರುತ್ತದೆ,ಅದು ಸರಿಯಾದ ಸಮಯಕ್ಕೆ ನಿಮ್ಮ ಗಿಡಗಳಿಗೆ ನೀರುಣಿಸುವ ಕೆಲಸವನ್ನು ಮಾಡುತ್ತದೆ. ಸ್ವಯಂಚಾಲಿತ ಯಂತ್ರವಾದ ಇದಕ್ಕೆ ನೀವು ಒಂದು ಸಮಯವನ್ನು ನಿಗದಿಪಡಿಸಿದರೆ ಅದು ಅದೇ ಸಮಯಕ್ಕೆ ಗಿಡಗಳಿಗೆ ನೀರುಣಿಸುತ್ತದೆ‌. ಇದಕ್ಕೆ ತಗುಲುವ ವೆಚ್ಚ ಕೇವಲ ಐದುಸಾವಿರ ರೂಪಾಯಿಗಳು.

ನೋಡಿ ಒಬ್ಬ ಎಸ್ಎಸ್ಎಲ್ಸಿ ಓದಿದ ಹುಡುಗನೊಬ್ಬ ರೈತನಿಗೆ ಅವಶ್ಯಕವಾದ ಅದೆಷ್ಟೋ ಯಂತ್ರಗಳನ್ನು ಅಭಿವೃದ್ಧಿ ಪಡಿಸಿದ ಮತ್ತು ಒಬ್ಬ ಯಶಸ್ವೀ ವ್ಯಕ್ತಿಯಾಗಿ ನೆಲೆನಿಂತ ಎಂದು. ಪರೀಕ್ಷೆ, ಮಾರ್ಕ್ಸ್ ಎಂದು ತಮ್ಮ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿರುವ ಅದೆಷ್ಟೋ ಯುವಕರುಗಳಿಗೆ ಈತ ಮಾದರಿಯಾಗಬಲ್ಲ. ಜೀವನ ಕೇವಲ ಪರೀಕ್ಷೆಯಲ್ಲಿ ಗಳಿಸಿದ ಅಂಕದ ಮೇಲೆ ನಿಂತಿಲ್ಲ ಬದಲಾಗಿ ಪ್ರತಿಕ್ಷಣವನ್ನೂ ಎದುರಿಸುವ ವಿಧಾನದ ಮೇಲೆ ನಿಂತಿದೆ ಎಂಬುದೂ ಅಷ್ಟೇ ಸತ್ಯ.

ನಮ್ಮ ಸರ್ಕಾರಗಳು ಯಾರ್ಯಾರಿಗೋ ಏನೇನೋ “ಭಾಗ್ಯ” ಕೊಡುವುದರಲ್ಲೇ ಬ್ಯುಸಿಯಾಗಿಬಿಟ್ಟಿದೆ, ಅದನ್ನೆಲ್ಲ ಬಿಟ್ಟು ರೈತರಿಗೆ ಈ ತರಹದ ಯಂತ್ರಗಳನ್ನು ತಲುಪಿಸುವ ಕೆಲಸ ಮಾಡಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದೆನಿಸುತ್ತಿದೆ. ರೈತನಿದ್ದರೆ ಮಾತ್ರ ನೀವು ದುಡಿದ ಅದೆಷ್ಟೋ ಕೋಟಿ ಹಣಕ್ಕೆ ಬೆಲೆ ಬರುವುದು ಇಲ್ಲದಿದ್ದರೆ ಅದೆಷ್ಟು ಹಣಗಳಿಸಿದರೂ ಪ್ರಯೋಜನವಿಲ್ಲ.

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post