X

ವಿಕಾಸ’ವಾದ’ – ನಿದ್ದೆ ಬಂದಿಲ್ಲ

” ಥೂ ಏನ್ ತಿಗಣೆ ಮಾರಾಯ . ರಾತ್ರಿ ನಿದ್ದೇನೆ ಬಂದಿಲ್ಲ ನಂಗೆ ” , ಹೊಸದಾಗಿ ನನ್ನ ರೂಮಿಗೆ ಬಂದಿದ್ದ ಜೀವನ್ ತನ್ನ ಅಳಲು ತೋಡಿಕೊಳ್ಳುತ್ತಿದ್ದ .

” ನಿನ್ಕಿಂತ ಮೊದ್ಲೇ ಅವು ನನ್ ರೂಂ ಮೇಟ್ ಕಣಯ್ಯಾ ” ಎಂದು ನಾನು ನಕ್ಕೆ . ಮೊದ-ಮೊದಲು ನನಗೂ ಹೀಗೆ ಆಗಿತ್ತು . ಹಾಸ್ಟೆಲ್ ಸೇರುವ ಮೊದಲು ನಾನು ತಿಗಣೆಗಳನ್ನು ನೋಡಿಯೇ ಇರಲಿಲ್ಲ . ಒಂದು ರಾತ್ರಿ ಏನೋ ಕಚ್ಚಿದಂತೆ ಅನಿಸಿತು , ಎದ್ದು ಲೈಟು ಹಾಕಿ ನೋಡಿದೆ . ಗೋಡೆಯ ಮೇಲೆ , ಹಾಸಿಗೆಯ ಮೇಲೆಲ್ಲಾ ತಿಗಣೆಗಳು ಹರಿದಾಡುತ್ತಿತ್ತು . ಆ ರಾತ್ರಿಯಂತೂ ಯಮ ಯಾತನೆ ಅನುಭವಿಸಿದೆ . ನನ್ನ ಪ್ರೇಯಸಿಯೂ ನನ್ನನ್ನು ಅಷ್ಟು ನಿದ್ದೆಗೆಡಿಸಿರಲಿಲ್ಲ . ನನಗಂತೂ ತಿಗಣೆಗಳ ಬಗ್ಗೆ ಎಳ್ಳಿನಷ್ಟೂ ಗೊತ್ತಿರಲಿಲ್ಲ . ನನ್ನ ಅಜ್ಞಾನ ಎಷ್ಟರ ಮಟ್ಟಿಗೆ ಇತ್ತೆಂದರೆ ಮಂಚ ಆಚೆ ಹಾಕಿ , ಹಾಸಿಗೆಯನ್ನು ಒಂದು ದಿನ ಬಿಸಿಲಿಗೆ ಹಾಕಿ ತಿಗಣೆಗಳನ್ನು ಓಡಿಸಿ ಬಿಟ್ಟೆ ಎಂದು ಹಿರಿ-ಹಿರಿ ಹಿಗ್ಗಿದ್ದೆ . ನನ್ನ ಅಜ್ಞಾನದ ಅರಿವು ನನಗಾಗಿದ್ದು ಮಧ್ಯ ರಾತ್ರಿ ಮತ್ತೆ ತಿಗಣೆಗಳು ನನಗೆ ಮುತ್ತಿಕ್ಕಿದಾಗ . ಕೇವಲ ಎರಡೇ ದಿನಕ್ಕೆ ನಾನು ಹೈರಾಣಾಗಿ ಹೋದೆ . ಈ ಕಾಲೇಜು , ಊರು , ರೂಮು ಎಲ್ಲಾ ಬಿಟ್ಟು ರಾತ್ರೋ ರಾತ್ರಿ ಊರಿಗೆ ಓಡಿ ಬಿಡೋಣ ಅನಿಸುತಿತ್ತು . ಆರಡಿಯ ದೇಹ ಯಕಶ್ಚಿತ್ ಹುಳಕ್ಕೆ ಹೆದರುವುದೇ ? , ಹೆದರಿತ್ತು . ಒಂದೆರಡು ದಿನ ನಿದ್ದೆ ಬಿಟ್ಟು ನೋಡಿ . ರಾತ್ರಿಯಿಡಿ ತಲೆ ಕೆದರಿಕೊಂಡು ತಿಗಣೆಗಳ ಬೇಟೆಯಾಡುತ್ತಿದ್ದೆ ,ಮಾರನೇ ದಿನ ಕ್ಲಾಸಿನಲ್ಲಿ ನಿದ್ದೆ ಹೊಡೆಯುತ್ತಿದ್ದೆ . ಯಾವ ಮಟ್ಟಕ್ಕೆ ನಾನು ಡೆಸ್ಪರೇಟ್ ಆಗಿದ್ದೆನೆಂದರೆ ಹಾಸಿಗೆಯನ್ನೇ ಸಂಪೂರ್ಣ ತ್ಯಜಿಸಿ ಚಾಪೆಯ ಮೇಲೆ ಮಲಗುವ ಜೈನ ಮುನಿಯಾದೆ . ನಂತರದ ದಿನಗಳಲ್ಲಿ ತಿಗಣೆಗಳ ಬಗ್ಗೆ ಓದತೊಡಗಿದೆ ,ಕೇವಲ ಅಂತಿತ್ತಾ ಓದಲ್ಲ . ಬರೋಬ್ಬರಿ ಒಂದು ವರ್ಷದಿಂದ ಓದುತ್ತಿದ್ದೇನೆ . ಈಗ ತಿಗಣೆಗಳು ನನ್ನ ಪ್ರಯೋಗದ ಗಿನ್ನಿ ಪಿಗ್ ಆಗಿವೆ .

ನಾವು ಓಡಾಡುವ ಸಿಟಿ ಬಸ್ಸಿನಿಂದ ಹಿಡಿದು , ವಿಮಾನದ ಕಾಕ್ಪಿಟ್’ನ ವರೆಗೆ ಇವು ಸರ್ವವ್ಯಾಪಿ . ಇವುಗಳು ನಮಗಿಂತ ಮೊದಲೇ ಭೂಮಿಯಲ್ಲಿ ಅವತರಿಸಿದೆ . ನನಗಿದ್ದ ದೊಡ್ಡ ಪ್ರಶ್ನೆಯೆಂದರೆ ಇವುಗಳು ಮನುಷ್ಯನ ರಕ್ತ ಹೀರಿ ಬದುಕುತ್ತವೆ ಎಂದಾದರೆ ಮನುಷ್ಯ ಅವತರಿಸುವ ಮೊದಲು ಇವುಗಳ ಆಹಾರ ಏನಾಗಿತ್ತು ? . ಸದ್ಯದ ಮಟ್ಟಿಗೆ ಪ್ರಾಣಿಗಳ ರಕ್ತ ಹೀರುತಿತ್ತು ಎಂದುಕೊಳ್ಳೋಣ . ಆದರೆ ಮನುಷ್ಯನನ್ನು ಬಿಟ್ಟರೆ ಬೇರ್ಯಾವ ಪ್ರಾಣಿಯೂ ಅಷ್ಟು ದೀರ್ಘವಾದ ನಿದ್ದೆ ಮಾಡುವುದಿಲ್ಲ . ಹಾಗಾದರೆ ಇವುಗಳು ಜೀವನ ಸಂಗ್ರಾಮದಲ್ಲಿ ಉಳಿದದ್ದು ಹೇಗೆ ? . ಮೊಗೆದಷ್ಟೂ ಕುತೂಹಲ ನನಗೆ ಕಾದಿತ್ತು . ಮೊದಲು ಡಾರ್ವಿನ್ ಬರೆದ ‘ ಆರಿಜಿನ್ ಆಫ್ ಸ್ಪಿಶೀಸ್ ‘ ಪುಸ್ತಕ ಕೊಂಡು ತಂದೆ .

ನನಗೆ ಈಗಲೂ ಹೈಸ್ಕೂಲಿನಲ್ಲಿ ಬಯಾಲಜಿ ಪಾಠ ಮಾಡಿದ ಶಿಕ್ಷಕರ ಮೇಲೆ ಕೋಪವಿದೆ . ಅಂತಹ ಅದ್ಭುತ ವಿಷಯವನ್ನೂ ಬಹಳ ಬೋರ್ ಎನಿಸುವಂತೆ ಮಾಡಿ ಬಿಟ್ಟಿದ್ದರು . ನಮ್ಮ ಶಿಕ್ಷಣ ಪದ್ಧತಿಯೇ ಸರಿಯಿಲ್ಲ ಎಂದು ನಂಬುವವನು ನಾನು . ಜಗತ್ತನ್ನೇ ನಮ್ಮ ತರಗತಿ ಮಾಡಿ ನಮಗೆ ಸ್ಪೂರ್ತಿ ತುಂಬುವ ಶಿಕ್ಷಕರು ಇಲ್ಲಿಲ್ಲ . ಪುಸ್ತಕದಲ್ಲಿ ಇರುವುದನ್ನು ಪಾಠ ಮಾಡಿ ,ಸಂಜೆ ಸೈನು ಹಾಕಿ ಮನೆಗೆ ಓಡುತ್ತಾರೆ . ಇಂತಹ ಪದ್ಧತಿಯಿಂದ ಮಕ್ಕಳಿಗೆ ಅಕ್ಷರವೆಂದರೇ ಅಲರ್ಜಿ ಬರುವ ಹಾಗೆ ಮಾಡಿದ್ದಾರೆ . ಈಗಂದು ಏನು ಪ್ರಯೋಜನ ಬಿಡಿ ……

ತಿಗಣೆಗಳಲ್ಲಿ ಇರುವಷ್ಟು ಪ್ರಬೇಧಗಳು ಮತ್ಯಾವ ಪ್ರಾಣಿಗಳಲ್ಲೂ ನಿಮಗೆ ಸಿಗಲಾರದು . ವಿಕಾಸವಾದದ ತಿರುವುಗಳಲ್ಲಿ ತಿಗಣೆಗಳದ್ದು ಬಹಳ ದೊಡ್ಡ ಪಾತ್ರ . ಮನುಷ್ಯ ಇತಿಹಾಸದಲ್ಲಿ ತಿಗಣೆಗಳ ಮೊದಲ ಉಲ್ಲೇಖ ಸಿಗುವುದು ಗ್ರೀಸ್ ನಾಗರೀಕತೆಯಲ್ಲಿ , ಅರಿಸ್ಟಾಟಲ್ ಸಹ ಇದರ ಬಗ್ಗೆ ಮಾತನಾಡುತ್ತಿದ್ದ ಎಂದರೆ ನಿಮಗೆ ಆಶ್ಚರ್ಯವಾಗಬಹುದು . ರೋಮನ್ನರು ಕಿವಿಯ ಸೋಂಕಿಗೆ ತಿಗಣೆಗಳನ್ನು ಔಷಧವಾಗಿ ಕಂಡುಕೊಂಡಿದ್ದರು . ಆದರೂ ತಿಗಣೆಗಳು ಸರ್ವವ್ಯಾಪಿಯಾಗಿರಲಿಲ್ಲ . ಇಂಗ್ಲೆಂಡಿನಲ್ಲಿ ಮೊದಲ ತಿಗಣೆ ವರದಿಯಾಗಿದ್ದು ಸಾವಿರದ ಆರುನೂರರ ಆಸುಪಾಸಿನಲ್ಲಿ , ಹೊರ ದೇಶಗಳಿಂದ ತಂದ ಮರ-ಮುಟ್ಟುಗಳಿಂದ ಇಂಗ್ಲೆಂಡಿಗೆ ಕಾಲಿಟ್ಟಿತು ಎಂದು ನಂಬಲಾಗಿದೆ .

ಡಾರ್ವಿನ್ ಹೇಳುವ ಪ್ರಕಾರ ತಿಗಣೆಗಳು ಸೊಳ್ಳೆಯಿಂದ ವಿಕಾಸವಾಗಿವೆ . ನೀವು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ , ತಿಗಣೆಗಳ ಕೆಲವು ಪ್ರಬೇಧಗಳಲ್ಲಿ ಇನ್ನೂ ರೆಕ್ಕೆಗಳನ್ನು ಕಾಣಬಹುದು. ಆದರೆ ರೆಕ್ಕೆಗಳು ದುರ್ಬಲ , ತಿಗಣೆಗಳು ಹಾರಲಾರವು . ತಿಗಣೆಗಳು ಆರು ಹಂತಗಳಲ್ಲಿ ಬೆಳೆಯುತ್ತವೆ , ಪ್ರತಿ ಹಂತದಲ್ಲೂ ತನ್ನ ದೇಹದ ಹೊರ ಪದರವನ್ನು ಕಳಚಿ ಹೊಸ ಪದರ ಬೆಳೆಸಿಕೊಳ್ಳುತ್ತದೆ .ಇವುಗಳು ಹೆಚ್ಚಾಗಿ ರಾತ್ರಿಯ ಹೊತ್ತೇ ಕಾಣಿಸಿಕೊಂಡರೂ ಇವು ನಿಶಾಚರಿಗಳಲ್ಲ .,ಕೆಲವೊಮ್ಮೆ ಹಗಲು ಹೊತ್ತಿನಲ್ಲಿಯೂ ಕಾಣಿಸಿಕೊಳ್ಳುತ್ತವೆ .
ಒಮ್ಮೆ ಇವು ಬಂದು ಸೇರಿಕೊಂಡರೆ ನಿರ್ಮೂಲನೆ ಮಾಡುವುದು ಅಸಾಧ್ಯ . ಯಾವುದಾದರೂ ಸಂಧಿಯಲ್ಲಿ ಅಡಗಿ ಕುಳಿತಿರುತ್ತದೆ . ಇದರ ಚಪ್ಪಟೆ ದೇಹ ಅಡಗಲು ಸಹಾಯಕಾರಿ , ಹಾಗೂ ಮೈ ಮೇಲೆ ಹರಿದಾಡಿದರೆ ಗೊತ್ತೇ ಆಗುವುದಿಲ್ಲ .ನಾನಂತೂ ಒಮ್ಮೆ ಸ್ವಿಚ್ ಬೋರ್ಡೆಲ್ಲಾ ಬಿಚ್ಚಿ ಮರಿಗಳನ್ನು ಸುಟ್ಟು ಹಾಕಿದ್ದೇನೆ . ನಾನು ಅಂಟಿಸಿದ್ದ ಪೇಂಟಿಂಗ್ ಹಿಂದೆ ಎಲ್ಲಾ ಮೊಟ್ಟೆಗಳು ಸಿಕ್ಕಿದ್ದವು . ಅಷ್ಟರ ಮಟ್ಟಿಗೆ ಇವು ಸರ್ವವ್ಯಾಪಿ . ಇವು ರಕ್ತ ಹೀರುವುದು ಐದಾರು ದಿನಗಳಿಗೊಮ್ಮೆ . ಒಮ್ಮೆ ಹೊರ ಬಂದು ರಕ್ತ ಹೀರಿ ಮತ್ತೆ ಅಡಗಿ ಬಿಡುತ್ತದೆ . ಮರಿಗಳ ದೇಹ ಪಾರದರ್ಶಕವಾಗಿರುತ್ತದೆ , ರಕ್ತ ಹೀರಿದಾಗ ದೇಹ ಕೆಂಪಗೆ ಕಾಣುತ್ತದೆ ಹಾಗೂ ಅದನ್ನು ಜೀರ್ಣಿಸಿಕೊಂಡ ಮೇಲೆ ಕಪ್ಪು ಬಣ್ಣಕ್ಕೆ ತಿರುಗುತ್ತದೆ .

ಬಹಳ ಕುತೂಹಲಕಾರಿ ಅಂಶವೆಂದರೆ ಒಮ್ಮೆ ತಿಗಣೆಗಳು ಸಂಪೂರ್ಣ ಅವಸಾನದ ಅಂಚಿಗೆ ಹೋಗಿತ್ತು . ಡಿಡಿಟಿಯ ಅತಿಯಾದ ಬಳಕೆ ಇದರ ಮೇಲೆ ದುಷ್ಪರಿಣಾಮ ಬೀರಿತ್ತು . ಸಾವಿರದ ಒಂಬೈನೂರ ನಲವತ್ತರ ಈಚೆಗೆ ಮತ್ತೆ ತಿಗಣೆಗಳು ಕಾಣಿಸಿಕೊಂಡವು . ಈಗ ಕಾಣಸಿಗುವ ತಿಗಣೆಗಳು ಡಿಡಿಟಿಗೆ ಪ್ರತಿರೋಧಕ ಶಕ್ತಿ ಹೊಂದಿದೆ . ಡಿಡಿಟಿ ಸ್ಪ್ರೇ ಮಾಡುವುದರಿಂದ ತಿಗಣೆಗಳು ಸಾಯಲಾರವು.

ತಿಗಣೆ ಕಚ್ಚುವುದರಿಂದ ಚರ್ಮದ ಅಲರ್ಜಿಯ ಜೊತೆಗೆ ಮನೋರೋಗಗಳು ಕಾಣಿಸಿಕೊಳ್ಳಬಹುದು . ವಿಶೇಷವೆಂದರೆ ಶೇಖಡಾ ಇಪ್ಪತ್ತರಷ್ಟು ಜನಗಳಿಗೆ ಏನೂ ಆಗುವುದಿಲ್ಲ . ಕಚ್ಚುವ ಸಮಯದಲ್ಲಿ ಹೆಪಾರಿನ್ ಎನ್ನುವ ಕೆಮಿಕಲ್ ಉತ್ಪತ್ತಿ ಮಾಡುವುದರಿಂದ ನಮಗೆ ಗೊತ್ತೂ ಆಗುವುದಿಲ್ಲ ಹಾಗೂ ಆ ಭಾಗದಲ್ಲಿ ರಕ್ತದ ಚಲನೆ ಹೆಚ್ಚಿಸಿ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ . ನನಗಂತೂ ಇವುಗಳು ಮೈ ಮೇಲೆ ಹರಿದಾಡಿದರೂ ಸಾಕು ಚರ್ಮ ಕೆಂಪಗಾಗಿ ಬಿಡುತ್ತದೆ. ಮನೋರೋಗ ಇನ್ನೂ ಕಾಣಿಸಿಕೊಂಡಿಲ್ಲ ಬಿಡಿ .

ಬ್ಯಾಟ್ ಬಗ್ ಎಂಬ ಇನ್ನೊಂದು ಪ್ರಬೇಧ ಇದೆ . ಅವುಗಳು ಗುಹೆಯಲ್ಲಿರುವ ಬಾವಲಿಗಳ ರಕ್ತ ಹೀರುತ್ತವೆ . ಮುಖ್ಯ ವ್ಯತ್ಯಾಸವೆಂದರೆ ಬ್ಯಾಟ್ ಬಗ್ ರಾತ್ರಿ ಕಾಣಿಸಿಕೊಳ್ಳುವುದಿಲ್ಲ ಕಾರಣ ಬಾವಲಿಗಳು ಹಗಲು ಹೊತ್ತು ಮಲಗುತ್ತವೆ . ಬ್ಯಾಟ್ ಬಗ್’ಗೂ ಹಾಗೂ ತಿಗಣೆಗೂ ಯಾವ ರೀತಿಯ ಸಂಬಂಧ ಎಂದು ಸಂಶೋಧನೆಗಳು ನಡೆಯುತ್ತಿವೆ . ಇವೆರಡರ ಗ್ಯಾಮೆಟ್ಗಳು ಸೇರುವುದಿಲ್ಲ . ಸಾವಿರಾರು ವರ್ಷಗಳ ಕಾಲ ಇವೆರಡೂ ಬೇರ್ಪಟ್ಟಿತ್ತು ಎಂಬುದನ್ನು ಇದು ಸೂಚಿಸುತ್ತದೆ .
ಐವತ್ತು ಡಿಗ್ರಿಗಿಂತ ಹೆಚ್ಚು ತಾಪಮಾನದಲ್ಲಿ ತಿಗಣೆಗಳು ಕೇವಲ ಎರಡು ದಿನ ಬದುಕಬಲ್ಲವು . ಮೈನಸ್ ಮೂವತ್ತೆರಡು ಡಿಗ್ರಿಯಲ್ಲಿ ಕೇವಲ ಎರಡು ನಿಮಿಷ ಬದುಕಬಲ್ಲವು . ಸದ್ಯದ ಮಟ್ಟಿಗೆ ಯಾವ ಕೆಮಿಕಲ್ ಗಳೂ ತಿಗಣೆಯನ್ನು ನಿರ್ಮೂಲನೆ ಮಾಡಲಾರವು . ಕೆಲವು ಫ಼ಂಗೈ ಇವುಗಳನ್ನು ನಾಶಪಡಿಸುತ್ತದಾದರೂ ಇನ್ನೂ ಸಂಶೋಧನೆಗಳು ನಡೆಯಬೇಕಾಗಿದೆ .

ನಾವು ಒಂದು ಚೌಕಟ್ಟು ಹಾಕಿಕೊಂಡು ಅದರೊಳಗೇ ಇದ್ದು ಬಿಡುತ್ತೇವೆ . ನಮ್ಮ ಸುತ್ತಲೂ ಕಾಣುವ ವಿಷಯಗಳನ್ನು ವೈಜ್ಞಾನಿಕವಾಗಿ ನೋಡುವ ಗೋಜಿಗೇ ನಾವು ಹೋಗುವುದಿಲ್ಲ . ಇಡೀ ಭೂಮಿಯೇ ಒಂದು ಪ್ರಯೋಗಶಾಲೆ , ಭೂಮಿ ಸದಾ ಪ್ರಯೋಗ ಮಾಡುತ್ತಲೇ ಇರುತ್ತದೆ . ಇಲ್ಲಿ ಬದುಕುಳಿಯುವುದು ಬಲಿಷ್ಟಶಾಲಿಗಳಲ್ಲ , ಪ್ರಕೃತಿಗೆ ಹೊಂದಿಕೊಳ್ಳುವವರು ಮಾತ್ರ . ನೆನಪಿಡಿ ಭೂಮಿಯ ಪ್ರಯೋಗಶಾಲೆಯ ಒಳಗೆ ನಾವೆಲ್ಲಾ ಗಿನ್ನಿ ಪಿಗ್ ಗಳು .

Facebook ಕಾಮೆಂಟ್ಸ್

Gurukiran: ನಿರುಪದ್ರವಿ ಸಾಧು ಪ್ರಾಣಿ. ಹುಟ್ಟಿದ್ದು ಹವ್ಯಕ ಬ್ರಾಹ್ಮಣ ಕುಟುಂಬದಲ್ಲಿ. ಐದಡಿಯ ಮೇಲೆ ಆರಿಂಚು ಇದ್ದೇನೆ. ದೇಹದ ತೂಕಕ್ಕಿಂತ ಮಾತಿನ ತೂಕ ಹೆಚ್ಚು . ಗೋಧಿ ಬಣ್ಣ ಸಾಧಾರಣ ಮೈಕಟ್ಟು . ಸದ್ಯಕ್ಕೆ ಬರವಣಿಗೆ ಹವ್ಯಾಸ , ಮುಂದೆ ಗೊತ್ತಿಲ್ಲ.
Related Post