X

ನೆನಪಿನ ಬುತ್ತಿ..

ಜೀವನ ಅನ್ನೋದು ಅತ್ಯಂತ ಅಮೂಲ್ಯವಾದದ್ದು.  ಹುಟ್ಟಿನಿಂದ ಸಾಯುವವರೆಗೂ  ಅನುಭವಿಸುವ  ಒಂದೊಂದು  ಕ್ಷಣಗಳೂ ಆಗಾಗ ನೆನಪಿಗೆ ಬರುವಂಥವುಗಳು.  ಅವು ನಮ್ಮ ನೆರಳಿನಂತೆ ಹಿಂಬಾಲಿಸುತ್ತಿರುತ್ತವೆ.  ಎಷ್ಟೋ ನೆನಪುಗಳು ಸುಖ ತರಬಹುದು; ಇನ್ನು ಕೆಲವು ದುಃಖ ತರಬಲ್ಲವುಗಳು.  ಆದರೆ ಎಲ್ಲವೂ ನೆನಪುಗಳೇ ತಾನೆ!

ಈ ನೆನಪನ್ನು ಉಳಿಸಿ ಹೋಗುವಂಥ ಮನುಷ್ಯ, ವಸ್ತು, ಘಟನೆ ಅಥವಾ ಪ್ರಾಣಿ ಇತ್ಯಾದಿ.  ಅದ್ಯಾವುದೆ ಇರಬಹುದು. ಆದರೆ ಒಮ್ಮೆ ಕುಳಿತು ಅವಲೋಕಿಸಿದಾಗ ಹೆಚ್ಚಿನ ಕಹಿ ಸಿಹಿ ನೆನಪು ಜೀವನದಲ್ಲಿ ಉಳಿಸಿ ಹೋಗುವುದು ಈ ಮನುಷ್ಯನೆಂಬ ಪ್ರಾಣಿ.  ಅದು   ತಂದೆ ತಾಯಿ, ಒಡಹುಟ್ಟಿದವರು, ಬಂಧು ಬಾಂಧವರು, ಗೆಳೆಯ ಗೆಳತಿ, ಗಂಡ ಹೆಂಡತಿ ಹೀಗೆ ಒಂದು ಮಗು ಕೂಡ ಕಾರಣವಾಗಬಹುದು.

ಜೀವನದಲ್ಲಿ ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಅದು ಎಲ್ಲೋ ಒಂದು ಕಡೆ ಅಲ್ಪದರಲ್ಲಿ ಎಡವಿಬಿಡುವ ಪ್ರಸಂಗವೂ ಎದುರಾಗುವುದಿದೆ.  ಗಮನ ಅಂದರೆ ಚಿತ್ತದ ವಿವೇಚನೆಯ ವ್ಯತ್ಯಾಸ ಇದಕ್ಕೆಲ್ಲ ಕಾರಣ.  ಎಡವುವುದು ಎಚ್ಚರಗೊಳ್ಳುವುದು ಮತ್ತೆ ಗಮನವಿಲ್ಲದೆ ಎಡವುವುದು.  ಇದು ಬದುಕಿನಲ್ಲಿ ಯಾರನ್ನೂ ಬಿಡದ ಬೆಂಬಿಡದ ಭೂತ.  “ಎಚ್ಚರವಿದ್ದಷ್ಟೂ  ಸಾಲದು,ಮೈಯ್ಯೆಲ್ಲ ಕಣ್ಣಾಗಿಸಿಕೊಂಡಿರಬೇಕು ” ಎಂಬ ಹಿರಿಯರ ನಾಣ್ಣುಡಿ ಅಕ್ಷರಸಹ ನಿಜವಲ್ಲವೆ?

ಈ ಸಂಬಂಧ, ಪ್ರೀತಿ, ವಿಶ್ವಾಸ, ಗೆಳೆತನಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಕೊಡದೆ ಜಾರಿಕೊಳ್ಳುವ ಅಮಾಯಕರ ಜೀವನದಲ್ಲಿ ಆಟವಾಡುವ ವಂಚಕರ ಸಹವಾಸ ಅಪ್ಪಿ ತಪ್ಪಿ ಮಾಡಿದರೆ ಮುಗಿದೆ ಹೋಯ್ತು.  ಜಪ್ಪಯ್ಯ ಅಂದರೂ ಆ ನೆನ‌ಪು ಮರೆಯಲು ಸಾದ್ಯವಿಲ್ಲ. ಇಂಥವರು ಚುಯಿಂಗಮ್ ತರ ಜಗಿದು ಜಗಿದು ದೊಡ್ಡ ಬಲೂನು ಮಾಡಿ ಒಂದಿನ ಪಟ್ ಅಂತ ಹೇಳ ಹೆಸರಿಲ್ಲದಂತೆ ಮಾಯವಾಗುವ  ಹೇಡಿಗಳು.  ಇಲ್ಲಿ ವಂಚನೆಗೆ ಅಡಿಯಾಳಾದೆನಲ್ಲ ಅನ್ನುವ ದುಃಖ ಬಾಧಿಸಿದರೆ ಕಾಲ ಕ್ರಮೇಣ ಇದರಿಂದ ಹೊರ ಬಂದ ಮನಸ್ಸು  ನಿರಾಳವಾಗಿ ಸದ್ಯ ತೊಲಗಿತು ಪೀಡೆ ಎಂಬ ನಿಲಿ೯ಪ್ತ ಭಾವನೆ ಮನೆ ಮಾಡಿ ನೆನಪಿಗಷ್ಟೆ ಜಾಗ.

ಮುದ್ದಾದ ಮಗು ತನ್ನ ಬೊಚ್ಚು ಬಾಯಲ್ಲಿ  ಜಗವನ್ನೇ ತನ್ನ ಅಂಗೈಯಲ್ಲಿ ಹಿಡಿದು ಹಾಕಬಲ್ಲ ಕುಳಿತಲ್ಲೆ ಜಗವನಾಡಿಸುವ ಮುದ್ದು ಬೊಂಬೆ. ಕಂಡರೆ ಯಾರಿಗೆ ಇಷ್ವವಾಗಲಿಕ್ಕಿಲ್ಲ.  ಮುದ್ದುಗರೆಯುವ ಗಳಿಗೆಯಲ್ಲಿ ಸಂಬಂಧಪಟ್ಟವರೆಲ್ಲರೂ ಅವರದೇ ಆದ ಲೋಕದಲ್ಲಿ ತಲ್ಲೀನರಾಗಿರುತ್ತಾರೆ.  ಇಂಥಹ  ವೇಳೆಯಲ್ಲಿ ಅವಗಡ ನಡೆದರೆ ಸಹಿಸಲಾರದ ಜೀವ ನೋವು ಸಂಕಟ ಒದ್ದಾಟ.  ಜೀವ ಹೈರಾಣಾಗಿ ಮರೆಯಲಾರದ ನೆನಪು ಕೊನೆವರೆಗು ಉಳಿಯುವುದು. ಆದರೂ ಇದು ಸುಃಖ ತರುವ ನೆನಪು.  ಕಾರಣ ಇಲ್ಲಿ ಬರಿ ಪ್ರೀತಿ.  ವಂಚನೆ ಇಲ್ಲ..  ಇಲ್ಲ ಅನ್ನುವ ದುಃಖ.

ಹಡೆದ ತಾಯಿ ತಂದೆ ಹುಟ್ಟಿನಿಂದ ಅವರಿಲ್ಲದ ದಿನಗಳ ನೋಡೆ ಇಲ್ಲ, ಕಲ್ಪನೆ ಕೂಡ ಯಾರೂ ಮಾಡಿರೋದಿಲ್ಲ.  ಅದರಲ್ಲಿಯೂ ಇವರ ಪ್ರೀತಿ ಹುಟ್ಟಿನಿಂದ ಪಡೆದ ವ್ಯಕ್ತಿಗೆ ಕಳೆದುಕೊಂಡ ಕ್ಷಣ ಕಲ್ಪನಾತೀತ.  ಅವರು ದೂರಾದಾಗ ಆಕಾಶವೆ ಕಳಚಿಬಿದ್ದಂತೆ ಭಾಸವಾಗುತ್ತದೆ.  ಇನ್ನು ಹೇಗೆ ಇವರಿಲ್ಲದ ಜೀವನ?  ಹೇಗೆ ವ್ಯವಹಾರ ತೂಗಿಸಲಿ?  ಜವಾಬ್ದಾರಿಯ  ಅರಿವು ಆಗ ಎದುರಾಗಿ ಹೃದಯದಲ್ಲಿ ಹೆದರಿಕೆ, ಗಾಬರಿ, ದುಃಖ, ಸಂಕಟ ಇತ್ಯಾದಿ ಒಂದೇ ಸಾರಿ ಮುತ್ತಿಕೊಳ್ಳುವ ಸನ್ನಿವೇಶ.  ಇಲ್ಲೂ ಕೂಡ ಕಾಲವೇ ಎಲ್ಲವನ್ನೂ ಮರೆಸಿ ತನ್ನಷ್ಟಕ್ಕೆ ಬದುಕು ಏಳು ಬೀಳುಗಳ ಸಮ್ಮಿಳನದಲ್ಲಿ ಸಾಗುತ್ತದೆ.  ಆದರೆ ನೆನಪು ಕೊನೆವರೆಗೂ ಉಳಿಯುತ್ತದೆ.

ಇದ್ದವರಿಗೆ ಒಡಹುಟ್ಟಿದವರ ಮಹತ್ವಕ್ಕಿಂತ ಇಲ್ಲದವರಿಗೆ ಅದರ ಅಗತ್ಯ ಜಾಸ್ತಿ.  ಅದು ಹಾಗೆ ತಾನೆ; ಇಲ್ಲದ್ದು ಯಾವಾಗಲೂ ಮನಸ್ಸು ಬೇಕೂ ಅನ್ನುತ್ತದೆ.  ಇದ್ದವರಿಗೆ ಒಳಗೊಳಗೆ ಅಸೂಯೆ, ಕಿತ್ತಾಟ, ಪ್ರೀತಿ, ಇತ್ಯಾದಿ.  ಇಲ್ಲದವರಿಗೆ ಜೊತೆಗಿರುವ ಸ್ನೇಹಿತರೊ ಇಲ್ಲ ಬಳಗದವರೊ ಈ ಸ್ಥಾನ ತುಂಬುತ್ತಾರೆ.  ಇಲ್ಲಿ ರಕ್ತ ಸಂಬಂದ ಒಂದೆಡೆಯಾದರೆ ಋಣಾನುಬಂಧ ಇಬ್ಬರ ಅನ್ಯೋನ್ಯತೆಗೆ ಕಾರಣವಾಗುತ್ತದೆ.  ಪಾಲಕರ ಗೈರು ಹಾಜರಿಯಲ್ಲಿ ಕಷ್ಟ ಸುಖಕ್ಕೆ ಒಬ್ಬರಿಗೊಬ್ಬರು ಕೈಜೋಡಿಸುವ ಸಂಬಂಧ.  ಆದರೆ ಒಡಹುಟ್ಟಿದ ರಕ್ತ ಸಂಬಂಧದಲ್ಲಿ ಸಾಮಾನ್ಯವಾಗಿ ಅಸೂಯೆ ಮನೆಮಾಡಿರುತ್ತದೆ   ಅದೂ ಆಸ್ತಿ, ದುಡ್ಡು ಕಾಸಿನ ವಿಷಯ ಬಂದಾಗ ಇದು ಜಾಸ್ತಿ.  ಆದರೆ ಅಗಲಿಕೆಯ ನೋವಿನಲ್ಲಿ ಎಷ್ಟೇ ವೈಮನಸ್ಸಿದ್ದರೂ ಕರುಳು ಚುರ್ ಅನ್ನುತ್ತದೆ.  ಕ್ಷಣ ಮಾತ್ರದಲ್ಲಿ ಎಲ್ಲವನ್ನೂ ಮರೆತು ಸಾಮಾನ್ಯವಾಗಿ ಒಂದಾಗುತ್ತಾರೆ.  ಅಗಲಿದ ನಂತರವೂ ನೆನಪಿಸಿಕೊಳ್ಳುವ, ಒಂಟಿತನ ಕಾಡುವ ನೆನಪಿನ ಬುತ್ತಿ..

ಬದುಕಿನ ಜಂಜಡದ ಮಧ್ಯೆ ತನ್ನದೆಲ್ಲವನ್ನೂ ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುವ ನಿಜವಾದ ಗೆಳೆತನ.  ಆದರೆ ಇದು ಕೆಲವರಿಗೆ ಕೊನೆಗೊಂದು ದಿನ ನೋವು ತಂದರೆ?  ಹೌದು..ನಿಜವಾದ ಗೆಳೆತನ ಕಂಡು ಹಿಡಿಯುವುದು ಬಲು ಕಷ್ಟ.  ಕೆಲವರು ದುಡ್ಡಿದ್ದಾಗ-  ಇನ್ನು ಕೆಲವರು ಸುಃಖವಾಗಿ ಇರುವಾಗ.  ಮತ್ತೆ ಹಲವರು ತಮಗೆ ಬೇಕಾದಾಗ(ಸ್ವಾಥಿ೯ಗಳು).  ಕೊನೆಯವರಗೂ ನಿನಗೆ ನಾನು ನನಗೆ ನೀನು ಅನ್ನುವ ಗೆಳೆತನ ಎಷ್ಟು ಜನರಿಗೆ ಸಿಗಲು ಸಾಧ್ಯ? ಎಲ್ಲೋ ಅಪರೂಪ.  ಆದರೆ ಇಬ್ಬರಲ್ಲಿ. ಒಬ್ಬನು ನಿಜವಾದ ಸ್ನೇಹ ಬಯಸುವವನಾದರೆ ಆ ಇನ್ನೊಬ್ಬನ ಮಸಲತ್ತು ದುಃಖ ತರಿಸುತ್ತದೆ.  ಅಗಲಿದ ಬರೀ ಸ್ನೇಹಿತರಿಗಿಂತ ಇಂಥವರಿಗೆ ನೋವು ಸದಾ ನೆನಪಿಸಿ ಮನಸ್ಸು ಆಗಾಗ ಘಾಸಿಗೊಳಿಸುತ್ತದೆ.

“ಋಣಾನುಬಂಧ ರೂಪೇಣ ಪಶು, ಪತ್ನಿ, ಸುತ ,ಆಲಯ” ಎಂಬ  ವಾಖ್ಯದಂತೆ ಎಲ್ಲೊ ಹುಟ್ಟಿ ಪರಿಚಯವೇ ಇಲ್ಲದ ಹೆಣ್ಣು ಗಂಡಿನ ಮಧ್ಯೆ ಏಪ೯ಡುವ ಈ ಸಂಬಂಧ ಎಷ್ಟು ವಿಚಿತ್ರ.  ನಿಜವಾದ ಪ್ರೀತಿ ಅನ್ನುವ ಮೊಳಕೆ ಒಡೆಯಲು ಇಬ್ಬರ ಇಷ್ಟ ಕಷ್ಟ ಒಂದಾಗಿದ್ದಲ್ಲಿ ಮಾತ್ರ ಸಾಧ್ಯ.  ಅದೃಷ್ಟ ಅಂತ ಹೇಳಬೇಕು ಇಂತಹ ಸಂಬಂಧ ದೊರೆಯಲು.  ಏನೆ ಇದ್ದರೂ ಮದುವೆಯ ಸಂಕೋಲೆ ಗಂಡ ಹೆಂಡತಿ ಸಂಬಂಧ ಅಂತ ಕರೆಸಿಕೊಳ್ಳುತ್ತದೆ.  ಅನ್ಯೋನ್ಯತೆಯ ಬಾಳಲ್ಲಿ ಇಬ್ಬರಲ್ಲಿ ಒಬ್ಬರು ದೂರಾದರೂ ದುಃಖ, ನೋವು.  ಹೇಗೆ ಮುಂದಿನ ದಾರಿ?  ಜೀವನ ಹೇಗೆ ಸಾಗಿಸಲಿ? ಮಕ್ಕಳ ಜವಾಬ್ದಾರಿ.  ಇಲ್ಲಿ ಕೂಡ ಒಂಟಿತನದ ನೋವು ನೆನಪುಗಳೆ ಜಾಸ್ತಿ.  ದಿನಗಳು ಕಳೆದಂತೆಲ್ಲ ಸಂಸಾರದ ನೊಗ ಹೊತ್ತ ಮನಸ್ಸು, ಶರೀರ ನೆನಪಿನ ಬುತ್ತಿ ಹೊತ್ತು ಸಾಗುತ್ತದೆ

ಆದುದರಿಂದ ಬದುಕು ಅನ್ನುವುದು ನೆನಪಿನ ಬುತ್ತಿ.  “ಬಡವ ಒಮ್ಮೆ ಹಿಂದೆ ತಿರುಗಿ ನೋಡು;ಮುಂದಡಿ ಇಡುವಾಗ ಎಚ್ಚರವಿರಲಿ, ಹಿರಿಯರ ಹಾದಿ ನೆನಪಿಸಿಕೊ, ಒಡಹುಟ್ಟದವರ ಮರೆಯಬೇಡ, ಹೆತ್ತವರ ನೆನಪಿರಲಿ, ಗೆಳೆಯ, ಸಂಗಾತಿ, ಕೆಲವು ದಿನಗಳಾದರೂ ಮನಸ್ಸಿಗೆ ಮುದ ನೀಡಿದ ಮಗುವಿನ ನೆನಪಿರಲಿ ಹೀಗೆ ಸಾಕಿದ ಪ್ರಾಣಿಗಳ ನೆನಪಿಸಿಕೊ ಎಂದು ಆ ಪರಮಾತ್ಮ ಈ ನೆನಪೆಂಬ ಬುತ್ತಿ ಕೊಟ್ಟಿರಬಹುದೆ?

ಜಗನ್ನಿಯಾಮಕನ ಅಂಕೆಯಲ್ಲಿ ಅವನ ಅಣತಿಯಂತೆ ನಡೆಯುವ ಸೇವಕ ಈ ಮನಸ್ಸೆಂಬ ಮಾಯೆ. ಸ್ವಲ್ಪ ದಿನ ನೋವು ಸಂಕಟ ಅಳು ದುಃಖ.  ಇದನ್ನೆಲ್ಲ ಮರೆತು ಬರೀ ನೆನಪಿಸಿಕೊಂಡು ಕಾಲ ಕಳೆದಂತೆ ಜೀವನಕ್ಕೆ ಹೊಂದಿಕೊಂಡು ಬದುಕಲು ಆ ದೇವರು ಕೊಟ್ಟ ವರ!

ಸಂಗೀತಾ ಕಲ್ಮನೆ಼

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post