X

ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹಾಗೂ ಅಸಾಧಾರಣ ಹಾಡುಗಳು

ಕೆಲವೊಮ್ಮೆ ದಟ್ಟ ಮರುಭೂಮಿಯಲ್ಲಿಯೂ ಓಯಸಿಸ್ ಸಿಕ್ಕಿಬಿಡುತ್ತದೆ.ಹಾಗೇ ಆಗಿದೆ ಈಗಿನ ಕನ್ನಡ ಸಿನಿಮಾ ಹಾಡುಗಳ ಅವಸ್ಥೆ  ಕೂಡ. ಮೊದಲೇ ಪೈರಸಿಯಿಂದಾಗಿ ಕಂಗೆಟ್ಟು ಹೋಗಿರುವ ಮ್ಯೂಸಿಕ್ ಇಂಡಸ್ಟ್ರಿ ಒಂದೆಡೆ ಆದರೆ, ಒಂದೇ ತೆರನಾದ ಗೆದ್ದೆತ್ತಿನ ಬಾಲ ಹಿಡಿದು ಬರುತ್ತಿರುವಂತಹ ಕ್ಲೀಷೆ ಭರಿತ ಹಾಡುಗಳು ಇನ್ನೊಂದೆಡೆ. ಸಿನೆಮಾ ಹಾಡುಗಳ ಮಟ್ಟಿಗೆ ಇದು ಯಾವುದೇ ಮರುಭೂಮಿಗೂ ಕಮ್ಮಿ ಇಲ್ಲ. ಕನ್ನಡ ಸಿನೆಮಾಗಳಿಗೂ ಈ ಮಾತು ಅನ್ವಯಿಸುತ್ತದೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವು ಪ್ರಯೋಗಾತ್ಮಕ ಚಿತ್ರಗಳು ಬಿಡುಗಡೆಯಾದರೂ ಆರ್ಥಿಕವಾಗಿ ಯಶಸನ್ನು ಕಾಣುತ್ತಿಲ್ಲ. ಸಿನಿಮಾಗಳೇ ಪ್ರಯೋಗಶೀಲತೆಗೆ  ಒಡ್ಡು ತ್ತಿಲ್ಲವಾದರೆ ಸಿನೆಮಾ ಹಾಡುಗಳಲ್ಲಿ ಮಾತ್ರ ವೈವಿಧ್ಯತೆ ಹುಡುಕುವುದು ತಪ್ಪು. ಅಂತಹ ಹೊತ್ತಿನಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಎಂಬ ಸಿನೆಮಾ ಹಾಡುಗಳು ಬಿಡುಗಡೆಯಾಗಿ ಕನ್ನಡ ಸಿನಿಮಾ ಹಾಡುಗಳ ಅಭಿಮಾನಿಗಳಿಗೆ ಓಯಸಿಸ್ ಆಗಿದೆ ಎಂದರೆ ಅತಿಶಯೋಕ್ತಿ ಅಲ್ಲ. ಇದರ ಮೊದಲನೇ ವೈಶಿಷ್ಟ್ಯತೆ ಶುದ್ದವಾದ ಕನ್ನಡದಲ್ಲಿ ಬರೆಯಲ್ಪಟ್ಟ ಸಾಹಿತ್ಯ. ಇತ್ತೀಚೆಗೆ ಇಂಗ್ಲಿಷ್, ಹಿಂದಿ ಮುಂತಾದ ಭಾಷೆಗಳ ಅತಿಯಾದ ಬಳಕೆಯಿಂದ ಕಲಬೆರಕೆಯಾಗಿದ್ದ ಕನ್ನಡ ಸಿನಿಮಾ ಹಾಡುಗಳಿಂದ ತಾತ್ಕಾಲಿಕ ವಿರಾಮ ದೊರಕಿದೆ. ಇನ್ನು ಸಂಗೀತದ ಬಗ್ಗೆ ಹೇಳುವುದಾದರೆ ಅತಿಯಾದ ಅಬ್ಬರವಾಗಲೀ ಇದುವರೆಗೆ ಕೇಳಿದಂತಹ ಏಕತಾನತೆಯಾಗಲಿ ಇಲ್ಲ. ಕೆಲವೊಂದು ಹಾಡುಗಳಂತೂ ಪ್ರಯೋಗಶೀಲತೆಗೆ ತಮ್ಮನು ತಾವು ಒಡ್ಡಿಕೊಂಡಿದೆ. ಕನ್ನಡದಲ್ಲಿಯೇ ಏಕೆ ಭಾರತದಲ್ಲಿಯೇ ಸಿನೆಮಾ ಸಂಗೀತದಲ್ಲಿ  ಬಹಳ ವಿರಳವಾಗಿ ಉಪಯೋಗಿಸಲ್ಪಡುವ ಜಾಸ್ ಸಂಗೀತದ ಪ್ರಯೋಗವನ್ನೂ ನಾವು ಕಾಣಬಹುದು.  ಜಾಸ್ ಸಂಗೀತವು ಅಷ್ಟು ಸುಲಭವಾಗಿ ತನ್ನ ಜಾಡನ್ನು ಬಿಟ್ಟು ಕೊಡಲಾರದು. ಆದರೂ ಅದನ್ನು ತಬಲ ಹಾಗು ಸಿತಾರಿನ ಶಾಸ್ತ್ರೀಯ ಸಂಗೀತದೊಂದಿಗೆ ಮೇಳೈಸಿ “ನಾ ಈ ಸಂಜೆಗೆ” ಅನ್ನುವ ಹಾಡನ್ನು ಪ್ರಸ್ತುತಪಡಿಸಿದ್ದಾರೆ. ಇದಕ್ಕೆ ಬೆನ್ನೆಲುಬಾಗಿ ನಿಂತದ್ದು ರಕ್ಷಿತ್ ಶೆಟ್ಟಿಯವರ ಸುಂದರವಾದ ಸಾಹಿತ್ಯ. ಸಿದ್ಧಾಂತ್ ಅವರ ಹಾಡುಗಾರಿಕೆ ಈ ಹಾಡನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ.  ಇದರ ಇನ್ನೊಂದು ವರ್ಶನ್ ಶರಣ್ಯ ಗೋಪಿನಾಥ್ ಅವರು ಹಾಡಿದ್ದಾರೆ. ಜಾಬ್ ಕುರಿಯನ್ ಅವರು ಹಾಡಿರುವ “ಕೋಮಲ ಕೋಮಲ ಹೆಣ್ಣೇ” ಎಂಬ ಹಾಡು ಪಾಶ್ಚಾತ್ಯ ಸಂಗೀತದ ಹಿನ್ನಲೆಯಲ್ಲಿ ಇದ್ದರೂ ದೀಪಕ್ ಪರಮಶಿವನ್ ಅವರ ಸಾರಂಗಿಯು ಶಾಸ್ತ್ರೀಯ ಸಂಗೀತದ ಮೆರುಗು ನೀಡಿ ಒಂದು ಉತ್ತಮವಾದ ಫ್ಯೂಶನ್ ಸಂಗೀತ ಹೇಗಿರಬೇಕೆಂದು ತಿಳಿ ಹೇಳಿದೆ. ಅರ್ಥಗರ್ಭಿತವಾದ  ಸಾಹಿತ್ಯದಿಂದ ಗಮನ ಸೆಳೆಯುವ “ರಂಗ ಭೂಮಿಯೇ” ಎಂದು ಶುರುವಾಗುವ ಹಾಡು ಬರೆದವರು ಕಿರಣ್ ಕಾವೇರಪ್ಪ. “ಕಥೆಯೊಂದು ಶುರುವಾಗಿದೆ “ ಡುಯೆಟ್ ಹಾಡು ಅರುಣ್ ಕಾಮತ್  ಹಾಗು ಸ್ಪರ್ಶ ಹಾಡಿದ್ದಾರೆ. ಇದು ಒಂದು ರೀತಿಯಲ್ಲಿ ಪಾಶ್ಚಾತ್ಯ ಹಾಗು ಕರ್ನಾಟಕ ಸಂಗೀತಗಳ ಡುಯೆಟ್ ಎಂದರೂ ತಪ್ಪಾಗಲಾರದು. ಶೆಹನಾಯಿ ಹಾಗು ವಯೊಲಿನ್ ಗಳ ಉತ್ತಮ ಹಿನ್ನಲೆ ಸಂಗೀತ, ಆಲಾಪನೆ ಮತ್ತು ಪಾಶ್ಚಾತ್ಯ ಶೈಲಿಯ ಸಂಯೋಜನೆಯು  ಚರಣ್ರಾಜ್ ಅವರು ಈ ಎರಡು ರೀತಿಯ ಸಂಗೀತದಲ್ಲಿ ಪಳಗಿರುವವರು ಎನ್ನುವುದಕ್ಕೆ ಸಾಕ್ಷಿ. ಧನಂಜಯ್ ರಂಜನ್ ಅವರು ಬರೆದಿರುವ “ಅಯೋಮಯ” ಕೂಡ ಹಾಡಿನ ಸಂಗೀತಕ್ಕಿಂತಲೂ ಉತ್ತಮವಾದ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಸೂರಜ್ ಸಂತೋಷ್ ಅವರು ಹಾಡಿದ “ಅಲೆ ಮೂಡದೇ” ಎಂಬ ಶಾಸ್ತ್ರೀಯ ಶೈಲಿಯ ಹಾಡು ಕೂಡ ಮತ್ತೆ ಮತ್ತೆ ಕೇಳುವಂತಿದೆ.  ಪ್ರಕಾಶ್ ಹೆಗ್ಡೆಯವರ ಕೊಳಲಿನ ಚಮತ್ಕಾರ ಹಾಗು ಸುನಿಲ್ ಅವರ ಗಿಟಾರ್ ಈ ಹಾಡಿನ ಹೈ ಲೈಟ್. ಸ್ವತಃ ಚರಣರಾಜ್ ಮತ್ತು ಅನನ್ಯ ಸುರೇಶ್  ಹಾಡಿದ “ಗಾಸಿ ಗುಮ್ಮ” ಹಳೇ ಕಾಲದ ಹಾಡುಗಳನ್ನು ನೆನಪಿಸುತ್ತದೆ. ಈ ಹಾಡು ಕೂಡ ಪ್ರಯೋಗಶೀಲತೆಗೆ ಇನ್ನೊಂದು ಉದಾಹರಣೆ. ಹಿಪ್ ಹಾಪ್ ಶೈಲಿಯ ಹಾಡುಗಳು ಸಾಕಷ್ಟು ಜನಪ್ರಿಯವಾಗುತ್ತಿರುವ ಈ ಹೊತ್ತಿನಲ್ಲಿ “ಮೌನ” ಹಾಡು ಯುವಕರ ಗಮನ ಸೆಳೆಯಬಹುದು. ಹಿಪ್ ಹಾಪ್ ಕೂಡ ಸಂಪೂರ್ಣವಾಗಿ ಕನ್ನಡದಲ್ಲೇ ಇರುವುದು ಕೂಡ ವಿಶೇಷ. ಹೀಗೆ ಒಟ್ಟು ಒಂಬತ್ತು ಹಾಡುಗಳನ್ನು ಹೊತ್ತು ಒಂದು ಸಂಪೂರ್ಣ ಕನ್ನಡಮಯ ಸಿನಿಮಾ ಆಲ್ಬಮ್ “ಗೋಧಿ ಬಣ್ಣ ಸಾಧಾರಣ ಮೈಕಟ್ಟು” . ಒಂದು ಸಿನಿಮಾದಲ್ಲಿ ಐದು ಹಾಡುಗಳೇ ಹೆಚ್ಚು ಹಾಗು ಅದರಲ್ಲಿ ಒಂದೋ ಎರಡೋ ಒಳ್ಳೆ ಹಾಡುಗಳನ್ನು ಹುಡುಕಿತೆಗೆಯುವ ಪರಿಸ್ಥಿತಿ ಇರುವ ಕಾಲದಲ್ಲಿ ಪೂರ್ತಿ ಒಂಬತ್ತು ಹಾಡುಗಳನ್ನು ಹೊರ ತರುವ ಸಾಹಸವನ್ನು ಮಾಡಿದ್ದಾರೆ  ಹಾಗೂ ಹೆಚ್ಚು ಕಮ್ಮಿ ಎಲ್ಲಾ ಹಾಡುಗಳು ಒಂದೊಕ್ಕೊಂದು ಚೆನ್ನಾಗಿವೆ, ಮತ್ತೆ ಮತ್ತೆ ಕೇಳುವಂತಿವೆ.  “ಕೋಮಲ ಹೆಣ್ಣೇ” ಎಂಬ ಹಾಡಿನಲ್ಲಿ ಮಾತ್ರ ಸಂಗೀತಕ್ಕೆ ಪದಗಳನ್ನು ಹೊಂದಿಸಲು ಅಗತ್ಯವಿಲ್ಲದಲ್ಲಿ ದೀರ್ಘವನ್ನು ಎಳೆದು ಹಾಡಿದುದು ಕೇಳುಗರ ರಸಭಂಗ ಮಾಡುತ್ತದೆ. ಇದೊಂದು ಕೊರತೆ ಬಿಟ್ಟರೆ ಉತ್ತಮವಾದ ಸಾಹಿತ್ಯ, ಪ್ರಯೋಗಾತ್ಮಕ ಸಂಗೀತ, ಹಾಡುಗಳಿಗೆ ಹೊಂದುವಂತಹ ಗಾಯಕರ ಆಯ್ಕೆ, ಉತ್ತಮವಾದ ವಾದ್ಯ ನುಡಿಸುವವರ ಬಳಕೆ ಮತ್ತು ತಾಂತ್ರಿಕವಾಗಿ ಶ್ರೀಮಂತವಾದ ಶಬ್ದ ಗ್ರಹಣವು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಂಗ್ರಹಯೋಗ್ಯ ದ್ವನಿ ಸುರುಳಿಯನ್ನಾಗಿ ಮಾಡಿದೆ.

ಹರಿಕಿರಣ್. ಹೆಚ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post