X

 ಅಂಕಗಳನ್ನು ಸಹಜವಾಗಿ ಸ್ವೀಕರಿಸಲು ನಾವೆಂದು ಕಲಿಯುತ್ತೇವೆ?

   ಮೊತ್ತ ಮೊದಲನೆಯದಾಗಿ ಬಂದ ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಮುಂದಿನ ಕೆಲಸದಲ್ಲಿ ತೊಡಗಿರುವ ಪಿಯುಸಿ, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಹಾಗೂ ಅವರ ತಂದೆತಾಯಂದಿರಿಗೆ ಅಭಿನಂದನೆಗಳನ್ನು ಹೇಳುತ್ತಾ…

  ಅಚ್ಚರಿಯಾಗಿರಬೇಕಲ್ಲ? ಅಲ್ಲವೇ ಮತ್ತೆ. ಎಂಜಲು ಕೈಯಲ್ಲಿ ಕಾಗೆ ಓಡಿಸಿದರೆ ಬೀಳುವ ಅಗುಳಿನಷ್ಟೇ ಅಂಕಗಳನ್ನು ಕಳೆದುಕೊಂಡು ಮಾಧ್ಯಮಗಳಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದಿಸುವುದನ್ನು ಬಿಟ್ಟು ಇವಳದ್ದೇನು ಅಧಿಕಪ್ರಸಂಗ ಎಂದುಕೊಂಡಿರೇನು? ಖಂಡಿತವಾಗಿಯೂ ಅವರ ಬಗ್ಗೆಯಾಗಲೀ ಅವರ ಅಂಕಗಳ ಬಗೆಗಾಗಲೀ ನನ್ನ ತಕರಾರೇನಿಲ್ಲ. ಅವರೆಲ್ಲರೂ ತಮ್ಮ ಸತತ ಪರಿಶ್ರಮಕ್ಕಾಗಿ, ಛಲಕ್ಕಾಗಿ ಅಭಿನಂದನಾರ್ಹರೇ. ನಾನೀಗ ಉಲ್ಲೇಖಿಸುತ್ತಿರುವುದು 100 ಬರಬೇಕಾದಲ್ಲಿ 90 ಬಂದರೂ ಅಥವಾ ಈಗಿನ ಕಾಲಕ್ಕೆ ಕಡಿಮೆಯಾಯಿತು ಎಂದು ಹೇಳಲ್ಪಡುವ ಅಂಕಗಳನ್ನು ಪಡೆದೂ ತಣ್ಣಗಿರುವವರ ಕುರಿತಾಗಿ. ನಿಜ ಹೇಳಲೇ ಈಗಿನ ಕಾಲದಲ್ಲೂ ಹೀಗೆ ತಣ್ಣಗಿರುವುದೆಂದರೆ ಅಭಿನಂದನಾರ್ಹ ವಿಷಯ. ನಿಮಗೆ ನಿಮ್ಮ ಅಂಕದಲ್ಲಿ ಸಂಪೂರ್ಣವಾದ ಸಮಾಧಾನವಿದ್ದರೂ ಜನರಿಗಿರುವುದಿಲ್ಲ ನೋಡಿ! ಏನಿಲ್ಲದಿದ್ದರೂ ಅಂದುಕೊಂಡಷ್ಟು ಬರಲಿಲ್ಲ ಎಂದಾದರೂ ಹೇಳಬೇಕು. ಆಗಲೇ ಅವರ ಜೀವ ತಣ್ಣಗಾಗುವುದು.

   ಇತ್ತೀಚಿನ ವರ್ಷಗಳಲ್ಲಿ ನನಗೆ ಬಂದಿರುವ ಅನುಮಾನವೆಂದರೆ ಅಂಕಗಳು ಏನನ್ನು ಸೂಚಿಸುತ್ತವೆ? ನಿಮ್ಮ ಬುದ್ಧಿಮತ್ತೆಯನ್ನೋ, ಪರಿಶ್ರಮವನ್ನೋ ಅಥವಾ ಪ್ರತಿಷ್ಠೆಯನ್ನೋ. ಹಲವು ಅಪ್ಪ ಅಮ್ಮಂದಿರಂತೂ ತಮ್ಮ ಕುಟುಂಬದ ಪ್ರತಿಷ್ಠೆಯೇ ಈ ಅಂಕಗಳಲ್ಲಿದೆಯೇನೋ ಎಂಬಂತಾಡುವುದನ್ನು ನೋಡಿದ್ದೇನೆ. ವಿಷಯ ಜ್ಞಾನಕ್ಕಾಗಿ ಒದ್ದಾಡುವವರೇ ಇಲ್ಲ; ಅಂಕಕ್ಕಾಗಿಯೇ ಎಲ್ಲ ಎಂಬಂತಾಗಿದೆ. ಹಾಗೆಂದು ತಾವು ಚಿಕ್ಕವರಿರುವಾಗ ತಾವೇನೂ ಭಾರೀ ಅಂಕಗಳನ್ನು ಪಡೆದಿರುವುದಿಲ್ಲ. ಪಾಸಾಗಿದ್ದರೆ ಹೆಚ್ಚು. ಅದೇ ತಮ್ಮ ಮಕ್ಕಳು ಮಾತ್ರ ಅತ್ಯಧಿಕ ಅಂಕಗಳನ್ನು ಪಡೆಯಬೇಕೆಂಬ ಇಚ್ಛೆ. ತಮಾಷೆಯ ವಿಷಯವೆಂದರೆ ತಮ್ಮ ಮಕ್ಕಳಿಗೆ ಒಳ್ಳೆಯ ಅಂಕಗಳಷ್ಟೇ ದೊರಕಿದರೆ ಸಾಲದು. ಇನ್ನೊಂದಿಷ್ಟು ಪರಿಚಯದವರ ಮಕ್ಕಳಿಗೂ ಇವರದಕ್ಕಿಂತ ಕಡಿಮೆಯಿರಬೇಕು. ಆಗ ಹಾಲು ಕುಡಿದಷ್ಟು ತೃಪ್ತಿ. ಪ್ರತಿಷ್ಠೆಗಾಗಿ ಸುಳ್ಳು ಅಂಕಗಳನ್ನು ಹೇಳಿಕೊಳ್ಳುವವರಿಗೇನೂ ಕಡಿಮೆಯಿಲ್ಲ. ಅವರವರ ಸಾಮರ್ಥ್ಯಕ್ಕನುಗುಣವಾಗಿ ಸಿಗುವ ಅಂಕಗಳ ಮೇಲೇಕೆ ಈ ತರಹದ ವ್ಯಾಮೋಹ? ಒಂದೊಮ್ಮೆ ಅಂದುಕೊಂಡದ್ದಕ್ಕಿಂತ ಕಡಿಮೆ ಬಂದಿದ್ದರೂ ಅದಕ್ಕಾಗಿ ಮರು ಮೌಲ್ಯಮಾಪನಗಳಿವೆ ಅಥವಾ ನಮಗೆ ನಮ್ಮ ಸಾಮರ್ಥ್ಯ ಗೊತ್ತಿರುತ್ತದೆ. ಅದಿಲ್ಲದಿದ್ದರೆ ನಿಮಗೆ ಜೀವಿಸುವ ಹಕ್ಕೇ ಇಲ್ಲವೆಂದು ಯಾವುದಾದರೂ ಸರಕಾರ ಘೋಷಿಸಿದೆಯೇನು? ಪಕ್ಕದ ಮನೆಯವರ ಮಗನಿಗೋ ಮಗಳಿಗೋ ತಮ್ಮ ಮಕ್ಕಳಿಗಿಂತ ಹೆಚ್ಚು ಅಂಕಗಳಿದ್ದರೆ ಕೊರಗುವುದು, ಅಥವಾ ತಮ್ಮ ಮಕ್ಕಳಿಗೇ ಹೆಚ್ಚು ಅಂಕಗಳಿದ್ದರೆ ಅವರೆದುರು ಆ ಪ್ರತಾಪಗಳನ್ನು ಕೊಚ್ಚುವುದು, ಅಯ್ಯೋ ಪಾಪ ನಿಮ್ಮ ಮಗನ/ ಮಗಳ ಭವಿಷ್ಯವೇ ಹೋಯಿತೆಂಬಂತೆಯೂ ಅದಕ್ಕಾಗಿ ತನ್ನದೊಂದು ಪೂರ್ವಭಾವಿಯಾಗಿ ಅನುಕಂಪವನ್ನೆಸೆದು ಬರುವುದು- ಇಂಥದ್ದೆಲ್ಲಾ ಕೇವಲ ಧಾರಾವಾಹಿಗಳಲ್ಲಲ್ಲ ನಿಜ ಜೀವನದಲ್ಲಿಯೂ ನಡೆಯುತ್ತಿವೆ.

ಹೌದು ಕೆಲವು ಅಂಕಗಳು ಜೀವನದ ಕೆಲವು ಉದ್ದೇಶಗಳಿಗೆ ನಿರ್ಣಾಯಕವಾಗಿರುತ್ತವೆ. ಕೆಲವು ಅಂಕಗಳಿಂದಾಗಿ ಅಮೂಲ್ಯವಾದ ಅವಕಾಶಗಳೇ ತಪ್ಪಿ ಹೋಗುವುದುಂಟು. ಆಗ ಆಗುವ ನಿರಾಶೆ ಅಷ್ಟಿಷ್ಟಲ್ಲ. ಹಾಗಾಗಿ ಅಂಕಗಳು ಮುಖ್ಯವೇ, ಇಲ್ಲವೆಂದಲ್ಲ. ಅಷ್ಟೇ ಅಲ್ಲ ಒಳ್ಳೆಯ ಅಂಕಗಳಿಗಾಗಿ ಮಾಡುವ ಪ್ರಯತ್ನ ನಮ್ಮಲ್ಲೊಂದು ಛಲವನ್ನೂ, ಪ್ರಯತ್ನಶೀಲತೆಯನ್ನೂ ಬೆಳೆಸುತ್ತದೆ. ಆದರೆ ಪೋಷಕರೇ, ಅತಿಯಾದ ಹಪಾಹಪಿಗಳು ನಿಮ್ಮ ಮಕ್ಕಳಲ್ಲಿ ಜೀವನದಲ್ಲಿ ಬಂದದ್ದನ್ನು ಬಂದಂತೆ ಸ್ವೀಕರಿಸುವ ಮನೋಭಾವವನ್ನೇ ಇಲ್ಲವಾಗಿಸುತ್ತದೆ ಎಂಬುದನ್ನು ಮರೆಯದಿರಿ. ಇಂತಹ ಸಂದರ್ಭಗಳಲ್ಲಿ ಪೋಷಕರೇ ಪ್ರಳಯವಾದಂತೆ ಕಣ್ಣೀರು ಹಾಕುತ್ತಾ ಕುಳಿತರೆ ಮಕ್ಕಳು ನಿಮ್ಮಿಂದ ಇನ್ನೇನು ಕಲಿತಾರು? ನಿಜ ಒಳ್ಳೆಯ ಅಂಕಗಳು ಹಲವು ಅವಕಾಶಗಳನ್ನು ತೆರೆದಿಡುತ್ತವೆ.ಆದರೆ ಅಂಕಗಳೇ ಅಂತಿಮವಲ್ಲ, ಅದರಾಚೆಗಿನ ಜೀವನವೊಂದಿದೆ ಎಂಬುದನ್ನು ಹೇಳಬೇಕಾದವರೇ ಯಾರೋ ಸತ್ತುಹೋದಂತೆ ಹ್ಯಾಪು ಮೋರೆ ಹಾಕಿಕೊಂಡು ಕುಳಿತದ್ದು ನೋಡಿದರೆ ಮರುಕವೆನಿಸುತ್ತದೆ. ಇಷ್ಟೆಯಾ ನಮಗೆ ಜೀವನ ಅರ್ಥವಾದದ್ದು? ಅಂಕಗಳ ಹೊರತಾದ ಜೀವನದಲ್ಲಿ ಯಶಸ್ವಿಯಾದ ಎಷ್ಟೆಷ್ಟೋ ಸಾಧಕರ ಉದಾಹರಣೆಗಳು ಕಣ್ಮುಂದೆ ಇರುವಾಗ ಪುನಃ ಪುನಃ ಏಕೆ ಜಿಗುಟರಂತಾಡುತ್ತೇವೆ? ಪ್ರತಿಯೊಬ್ಬರ ಮೂಲಸ್ವಭಾವದಲ್ಲೂ ಅವರು ಸಾಧಿಸಬಹುದಾದ ಕ್ಷೇತ್ರಗಳಿದ್ದೇ ಇರುತ್ತದೆ. ಅದನ್ನು ಗುರುತಿಸಿ ಆ ಹಾದಿಯಲ್ಲಿ ಮುಂದುವರಿಯಬೇಕಾದದ್ದು ಮುಖ್ಯವೇ ಹೊರತು ಒಣ ಪ್ರತಿಷ್ಠೆಯು ಅಂತಿಮವಾಗಿ ನಮಗೆ ಬೇಕಾದ ಶಾಂತಿ, ಸಮಾಧಾನ ಕೊಡಬಲ್ಲುದೇ? ಈ ಸಲವಂತೂ ಮಕ್ಕಳ ಅಂಕಗಳಿಗಾಗಿ ಪೋಷಕರೇ ಅಡ್ಡದಾರಿಗಿಳಿದ ಹೀನ ಕೆಲಸ ಅಸಹ್ಯಪಡುವಂಥದ್ದು.

ನಾವು ಪಿಯುಸಿ ಯಲ್ಲಿದ್ದಾಗ ಗೆಳೆಯನೊಬ್ಬನಿಗೆ ಹೆಚ್ಚಿನ ಅಂಕಗಳನ್ನು ನಾವೇ ನಿರೀಕ್ಷೆ ಮಾಡಿದ್ದೆವು. ಆದರೆ ಬಂದಿರಲಿಲ್ಲ. ನಿಜ ಹೇಳಬೇಕೆಂದರೆ ನಮಗೇ ನಿರಾಸೆಯಾಗಿತ್ತು. ಅವನೋ ‘ಈ ಅಂಕಗಳನ್ನು ಹೆಚ್ಚೆಂದರೆ ಜನ ಹತ್ತು ದಿನ ಕೇಳುತ್ತಾರೆ, ಆಡಿಕೊಳ್ಳುತ್ತಾರೆ. ಆಮೇಲೆಯೂ ಚಿಂತೆ ಮಾಡಲು ಅವರಿಗೆ ಅವರ ಜೀವನವಿಲ್ಲವೇ’ ಅಂತ ಆರಾಮವಾಗಿದ್ದ. ತುಂಬ ಬುದ್ಧಿವಂತ ಹುಡುಗನೇ ಅವನು. ಆದರೆ ಬಂದ ಪರಿಸ್ಥಿತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದ. ಮೊನ್ನೆ ತಾನೇ ಒಂದು ಹುಡುಗಿಯನ್ನು ನೋಡಿದೆ. 621 ಅಂಕಗಳಂತೆ 625 ರಲ್ಲಿ. ಅಳುತ್ತಿದ್ದಳು! ಏನು ಹೇಳಬೇಕೋ ತಿಳಿಯದೆ ಪಕ್ಕದಲ್ಲಿದ್ದ ಅವಳ ಅಮ್ಮನ ಕಡೆಗೆ ನೋಡಿದರೆ ಆ ಮಹಾತಾಯಿ ಆಗಷ್ಟೆ ಕಣ್ಣೀರೊರೆಸಿಕೊಳ್ಳುತ್ತಿದ್ದರು. ಅವರನ್ನು ನೋಡಿದಾಗ ಇಂದಿನವರೆಗೂ ನನಗಾಗಲೀ ಅಕ್ಕನಿಗಾಗಲೀ  ಅಂಕಗಳಿಗಾಗಿ ಒಂದೇ ಒಂದು ನಕಾರಾತ್ಮಕ ಮಾತನ್ನಾಡದ ಅಪ್ಪ ಅಮ್ಮನ ಸ್ವಭಾವದ ನೆನಪಾಗಿ ಒದ್ದೆಯಾದ ಕಣ್ಣಂಚಿನೊಂದಿಗೆ ಈ ಲೇಖನ ಹುಟ್ಟಿಕೊಂಡಿತು.

-ಮಧು ಕೆ ಭಟ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post