ಮನೆಗೆ ಹೊರಟ ಜನಾರ್ಧನನ ತಲೆಯಲ್ಲಿ ನೂರಾರು ಯೋಚನೆಗಳು ..”ಅವನು ಹೇಳಿದ್ದು ನಾನು ಪ್ರೀತಿಸಿದ್ದ ಜಾನೂವಾಗಿದ್ದರೆ ……! ಅಯ್ಯೋ ಅಂತದ್ದೊಂದು ಸ್ಥಿತಿ ತರಬೇಡ ದೇವರೇ …ಆ ಕೆಟ್ಟ ಹೆಣ್ಣಿನಿಂದ ಹುಚ್ಚನಾಗಿದ್ದವನು ನಾನು. ಅವಳೇ ಸುಶಾಂತ್’ನಿಗೆ ಹೀಗಾಗಲು ಕಾರಣವೆಂದಾದರೆ ಅವಳನ್ನು ಹುಡುಕಿ ಕೊಲೆ ಮಾಡುತ್ತೇನೆ ” …ಎಂದುಕೊಂಡು ಹಲ್ಲು ಮಸೆದ. “ಒಂದು ವೇಳೆ ಹೇಮಾ ಆ ದಿನ ನನ್ನ ಬಾಳಲ್ಲಿ ಬರದಿದ್ದರೆ ನಾನು ಕುಡಿದು ಕುಡಿದು ಸತ್ತು ಹೋಗಿರುತ್ತಿದ್ದೆ.” ಹೀಗೇ ಯೋಚಿಸುತ್ತ ಮನೆ ಬಾಗಿಲಿಗೆ ಬಂದಾಗ ಹೆಂಡತಿ ಹೇಮಾ ಬಾಗಿಲಲ್ಲೇ ನಿಂತಿದ್ದಳು. ಸುತ್ತ ಗಿಡಮರ ಬೆಳೆಸಿದ್ದರಿಂದ ರಸ್ತೆಗೆ ಮನೆ ಬಾಗಿಲು ಕಾಣುತ್ತಿರಲಿಲ್ಲ. ಬಂದವನೇ ಹೆಂಡತಿಯನ್ನು ತಬ್ಬಿಕೊಂಡ. ಅವಳಿಗೆ ಆಶ್ಚರ್ಯವಾಯಿತು. “ರೀ ಬಿಡ್ರೀ ……! ಏನಿದು ಬಾಗಿಲಲ್ಲಿ..ನಿಮ್ಮ ಮಗಳು ಬರುವ ಹೊತ್ತಾಯಿತು…ಅವಳೇನು ಚಿಕ್ಕವಳಲ್ಲ ….ನೆನಪಿರಲಿ…”ಎನ್ನುತ್ತ ಕೊಸರಿ ದೂರ ಸರಿದಳು. ಗಂಡನ ಕಣ್ಣಲ್ಲಿ ನೀರು ಕಂಡು ಸ್ಥಂಬೀಭೂತಳಾದಳು. “ಯಾಕ್ರೀ ಏನಾಯ್ತು? ಮುದುಕಾ ಆಗಿದೀರಾ ಅಳೋವಂತದ್ದೇನಾಯ್ತು?”ಎಂದು ಕೇಳಿದಳು.”ಹೇಮಾ ಆ ದಿನ ನೀನು ನನ್ನ ಬಾಳಲ್ಲಿ ಬರದೇ ಇದ್ದರೆ ಕುಡಿದು ಕುಡಿದು ಸತ್ತೋಗಿರುತ್ತಿದ್ದೆ. ಥ್ಯಾಂಕ್ಸ್ ಕಣೇ…ನನ್ನ ಪಾಲಿನ ದೇವತೆ ನೀನು…..”ಎಂದ ಜನಾರ್ಧನ. “ಅಯ್ಯೋ ಇವತ್ತೇನಾಯ್ತು ನಿಮಗೆ …ಅದು ನಡೆದು ತುಂಬಾ ವರ್ಷಗಳೇ ಆಯ್ತು. ಈಗ ಅದನ್ನು ನೆನಪಿಸಿಕೊಳ್ಳುವಂತಾದ್ದೇನಾಯ್ತು?” ಎಂದು ಪತಿಯನ್ನು ಕೇಳಿದಳು ಹೇಮಾ.”ಅದನ್ನೆಲ್ಲಾ ಹೇಳಿವುದು ಸರಿಯಲ್ಲ ಎನಿಸಿತವನಿಗೆ. “ಏನಿಲ್ಲಾ ಕಣೇ ..ಯಾಕೋ ಹೀಗೇ ನೆನಪಾಯ್ತು..ತುಂಬಾ ತಲೆ ನೋಯ್ತಿದೆ…ಒಂದು ಲೋಟ ಕಾಫೀ ತಗೋಂಬಾ…” ಎಂದು ಅಲ್ಲೇ ಇದ್ದ ಕುರ್ಚಿಯಲ್ಲಿ ಕಣ್ಮುಚ್ಚಿ ಕುಳಿತ.”ಒಳ್ಳೆ ಚಿಕ್ಕಮಕ್ಕಳ ಕತೆ ಆಯ್ತು ನಿಮ್ಮದು ..ಕಾಫೀ ತಗೊಂಡು ಬರ್ತಿನಿರಿ..”ಎನ್ನುತ್ತ ಒಳನಡೆದಳು ಹೇಮಾ. ಅವಳಿಗೂ ಎಂದೋ ನಡೆದ ಘಟನೆಯನ್ನು ಕೆದುಕಲು ಇಷ್ಟವಿರಲಿಲ್ಲ.
ಕಣ್ಮುಚ್ಚಿ ಕೂತ ಜನಾರ್ಧನನಿಗೆ ಹತ್ತೊಂಭತ್ತು ವರ್ಷಗಳ ಹಿಂದೆ ನಡೆದ ಘಟನೆಗಳು ಎಳೆ ಎಳೆಯಾಗಿ ಕಣ್ಮುಂದೆ ನಿಂತಂತಾಯಿತು. ತಾನು ಮತ್ತು ಸುಶಾಂತ್ ಒಂದೇ ರೂಮಿನಲ್ಲಿದ್ದುಕೊಂಡು ಓದಿದ್ದು…ಬಡವನಾದ ತನಗೆ ಸುಶಾಂತ್ ಆಸರೆಯಾಗಿ ಓದಿ ಇಂಜಿನಿಯರ್ ಆಗಲು ಹಣ ಸಹಾಯ ಮಾಡಿದ್ದು…ತಾನು ಅದೆ ಬೀದಿಯಲ್ಲಿದ್ದ ರಾಮಣ್ಣನವರ ಮಗಳು ಜಾಹ್ನವಿಯ (ಜಾನೂ)ಪ್ರೀತಿಯ ಬಲೆಗೆ ಬಿದ್ದಿದ್ದು ….ಅವಳು ನಗುತ್ತ “ಹಾಯ್” ಹೇಳಿದರೆ ಅವಳ ಮುಖ ನೋಡುತ್ತಲೇ ತಾನು ಮೈಮರೆಯುತ್ತಿದ್ದುದು..
ತನಗೆ ಕೆಲಸ ಸಿಕ್ಕ ಮೇಲೆ ತನ್ನ ಪ್ರೀತಿ ಹೇಳಿದರಾಯಿತೆಂದುಕೊಂಡದ್ದು…ಅವಳನ್ನು ಪಡೆಯಲು ತಾನು ಕಷ್ಟಪಟ್ಟು ಇಂಜಿನಿಯರಿಂಗ್’ಲ್ಲಿ ಫಸ್ಟ್ ರ್ಯಾಂಕ್ ತಗೊಂಡಿದ್ದು..ಆಮೇಲೆ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದು…ಇನ್ನೇನು ಅವಳಿಗೆ ತನ್ನ ಪ್ರೀತಿ ತಿಳಿಸಬೇಕೆನ್ನುವಷ್ಟರಲ್ಲಿ ಅವಳು ಮದುವೆಗೆ ಮುನ್ನವೇ ಗರ್ಭಿಣಿ ಎಂದು ತಿಳಿದು ಹಾರ್ಟ್ ಅಟ್ಯಾಕ್ ಆಗಿ ಅಪ್ಪ ತೀರಿಕೊಂಡಿದ್ದು. ಅವಳಮ್ಮ ನೇಣು ಹಾಕಿಕೊಂಡಿದ್ದು……..ಅಬ್ಬಾ….! ಅದೇ ಕೊನೆ ಅವಳ ಮುಖ ನೋಡಿದ್ದು. ಅನಾಥೆಯಾಗಿ ನಿಂತಿದ್ದ ಅವಳನ್ನು ಅವಳ ಸಂಬಂಧಿಯೊಬ್ಬ ದೊಡ್ಡ ಮನಸ್ಸು ಮಾಡಿ ಮದುವೆಯಾದನೆಂದು ಆ ಕಾಲೋನಿಯ ಜನ ಮಾತನಾಡಿಕೊಂಡದ್ದು..ಅವಳನ್ನು ಅವನು ಯಾರಿಗೂ ಹೇಳದೇ ಯಾವ ಅಡ್ರೆಸ್’ನ ಸುಳಿವು ಕೊಡದೇ ಕರೆದುಕೊಂಡು ಹೋದದ್ದು …ಅವಳೆಲ್ಲಿ ಹೋದಳೋ ತನ್ನ ಗಂಡನೊಂದಿಗೆ…ಯಾರಿಗೂ ತಿಳಿಯಲಿಲ್ಲ .. ಅಷ್ಟೊತ್ತಿಗೆ ಈ ಆಘಾತದ ಜೊತೆಗೆ ತನ್ನ ಪ್ರೀತಿಯ ಗೆಳೆಯ ಸುಶಾಂತ್’ಗೆ ಅಪಘಾತವಾಗಿ ಸಾವು ಬದುಕಿನ ಮಧ್ಯ ಹೋರಾಡಿ ಕೊಮಾ ಸ್ಥಿತಿಯಲ್ಲಿರುವಾಗ ಸುಶಾಂತ್ ನ ತಂದೆ “ಮಗ ಇನ್ನು ಕೋಮಾ ಸ್ಥಿತಿಯಿಂದ ಹೊರಗೆ ಬಂದು ಮತ್ತೆ ಅವನು ಮೊದಲಿನಂತಾಗುವುದಿಲ್ಲವೇನೋ ಎಂದು ಯೋಚಿಸುತ್ತ ನಿದ್ರೆಗೆ ಜಾರಿದವರು ಮೂರನೇ ಬಾರಿ ಹಾರ್ಟ್ ಅಟ್ಯಾಕ್ ಆಗಿ ಚಿರನಿದ್ರೆಯತ್ತ ಪ್ರಯಾಣ ಬೆಳೆಸಿದ್ದರು”.ತಾನು ಅದ್ಯಾರೋ …ನನಗೇ ಗೊತ್ತಿಲ್ಲದೇ ಅವನು ಪ್ರೀತಿಸಿದ್ದ ಹುಡುಗಿಯನ್ನು ಹುಡುಕಿಕೊಂಡು ಹೋಗಿ ಅವಳ ಮದುವೆಯಾಯಿತೆಂದು ತಿಳಿದು ಸುಶಾಂತ್ ಮೌನಿಯಾಗಿದ್ದು..ಆ ನಂತರ ಅರೆಹುಚ್ಚನಾಗಿದ್ದು..ಆ ಹುಡುಗಿಯ ಹೆಸರನ್ನು ಎಷ್ಟು ಕೇಳಿದರೂ ಅವನು ಬಾಯಿಬಿಡಲೇ ಇಲ್ಲ..ನಾನು ಈ ಘಟನೆಗಳನ್ನು ಅವಲೋಕಿಸಿ ಅವಳು ಜಾನೂ ಆಗಿರಬಹುದಾದ ಎಂದು ಯೋಚಿಸಿ ಅನುಮಾನ ಬಂದದ್ದು..ಅಮೇಲೆ ಕುಡಿತದ ದಾಸನಾಗಿದ್ದ ತನ್ನನ್ನು ಅತ್ತೆಯ ಮಗಳು ಹೇಮಾ ಪ್ರೀತಿಸಿ ಮದುವೆಯಾಗಿ ತನ್ನನ್ನು ಬದಲಾಗುವಂತೆ ಮಾಡಿದ್ದು ..ಮುದ್ದಾದ ಮಗಳು ತನು ಹುಟ್ಟಿದ ಮೇಲೆ ಜಾನೂವನ್ನು ಸಂಪೂರ್ಣ ಮರೆತುಹೋಗಿದ್ದು …”ಅಬ್ಬಾ ……! ಹತ್ತೊಂಬತ್ತು ವರ್ಷಗಳು ಕಳೆದು ಹೋದವು…….ಈಗ ಇವನು ಜಾನೂ ಎಂದು ಹೇಳಿ ಮೂರ್ಛೆ ಹೋಗಿದ್ದಾನೆಂದರೆ ಅದು ಅವಳೇ ಇರಬೇಕು…..ಆದರೆ ನನಗೊಂಚೂರು ಸುಳಿವು ಕೊಡದೇ ಪ್ರೀತಿಸಿದ್ದನಾ? ಅವಳು ಗರ್ಭಿಣಿಯಾಗಲು ಸುಶಾಂತ್ ಕಾರಣನಾ? ಅಥವಾ ಇನ್ಯಾರೋ ಅವಳು ಗರ್ಭಿಣಿಯಾಗಲು ಕಾರಣವಾ? ಅವನಿಗೆ ಅವಳು ಗರ್ಭಿಣಿ ಎಂದು ತಿಳಿದೇ ಇರಲಿಲ್ಲವಾ? ..ಅವನು ಅದೇನೋ ಮುಖ್ಯವಾದ ವಿಷಯದ ಬಗ್ಗೆ ತನ್ನ ತಂದೆಯೊಂದಿಗೆ ಮಾತನಾಡಲು ಹೋಗುತ್ತಿದ್ದೇನೆ ಎಂದು ತನಗೆ ಹೇಳಿ ಊರಿಗೆ ಹೋದಾಗ ಈ ಎಲ್ಲ ಘಟನೆಗಳು ನಡೆದದ್ದು …ಅವನು ವಾಪಸ್ ಬರುವಾಗ ಭೀಕರ ಅಪಘಾತಕ್ಕೆ ಒಳಗಾಗಿದ್ದು..ಕೋಮಾಗೆ ಹೋಗಿ ನಂತರ ಎರಡು ತಿಂಗಳಲ್ಲಿ ಗುಣವಾಗಿ ಆ ತಾನು ಪ್ರೀತಿಸಿದ್ದ ಹುಡುಗಿಯನ್ನು ಕರೆದುಕೊಂಡು ಬರುತ್ತೇನೆಂದು ಹೇಳಿ ಹೋದವನು ಸಂಪೂರ್ಣ ಮೌನಿಯಾಗಿ ವಾಪಸ್ ಬಂದು ಅರೆಹುಚ್ಚನಾಗಿದ್ದ…ಆ ನಂತರ ಅವನನ್ನು ಆಸ್ಪತ್ರೆಗೆ ಸೇರಿಸಿದ್ದು….”ಹೀಗೇ ಯೋಚಿಸುತ್ತ ನಿಟ್ಟುಸಿರು ಬಿಟ್ಟ ..ಅವಳು ಆ ಜಾನೂವಾಗದಿರಲಿ ಎಂದುಕೊಂಡ. ಅಷ್ಟರಲ್ಲಿ ಹೇಮಾ ಕಾಫಿಯೊಂದಿಗೆ ಅಲ್ಲಿಗೆ ಬಂದಳು. ಗಂಡ ಏನೋ ಚಿಂತೆಯಲ್ಲಿದ್ದಾನೆನಿಸಿತಾದರೂ ಹಳೆಯ ವಿಷಯವನ್ನು ಅವಳು ಕೆದುಕಬಾರದೆಂದು ಸುಮ್ಮನಾದಳು..
ಇತ್ತ ಸುಶಾಂತ್ ಕಣ್ತೆರಾಗಲೂ “ಜಾನೂ … ಜಾನೂ …”ಎಂದು ಕನವರಿಸುತ್ತಲೇ ಇದ್ದ. ಇನ್ನೇನು ತಮ್ಮ ಚಿಕ್ಕಪ್ಪ ಹುಷಾರಾಗಿ ಮನೆಗೆ ಬರುತ್ತಾನೆನ್ನುವ ಖುಷಿಯಲ್ಲಿದ್ದರು ವಿಭಾ ಶುಭಾ. ಆ ದಿನ ಸೂರ್ಯನನ್ನು ಆಸ್ಪತ್ರಯಿಂದ ಡಿಸ್ಚಾರ್ಜ್ ಮಾಡುವುದಾಗಿ ಡಾಕ್ಟರ್ ರವಿಗೆ ತಿಳಿಸಿದ್ದರು. ವಿಭಾ ಶುಭಾ ಅಪ್ಪನೊಡನೇ ತಮ್ಮ ಚಿಕ್ಕಪ್ಪನನ್ನು ಕರೆತರಲು ಆಸ್ಪತ್ರೆಗೆ ಹೊರಟರು. ಅವರು ತಮ್ಮ ಚಿಕ್ಕಪ್ಪನ ಬೆಡ್ ಹತ್ತಿರ ಬಂದಾಗ ಪಕ್ಕದ ಬೆಡ್’ನ ಪೇಷೇಂಟ್ ಸುಶಾಂತ್ “ಜಾನೂ ಜಾನೂ “ಎಂದು ಕ್ಷೀಣ ಧ್ವನಿಯಲ್ಲಿ ಕನವರಿಸುತ್ತಿರುವುದು ಕೇಳಿಸುತ್ತಿತ್ತು. ವಿಭಾ ಚಿಕ್ಕಪ್ಪನತ್ತ ನೋಡುವುದನ್ನು ಬಿಟ್ಟು ಸುಶಾಂತ್’ನತ್ತ ನೋಡುತ್ತಿದ್ದಳು. ಎಂದೂ ಮಾತನಾಡದ ವ್ಯಕ್ತಿ ಇಂದು ಮಾತನಾಡುತ್ತಿರುವುದು ಆಶ್ಚರ್ಯವೆನಿಸಿತ್ತು ಅವಳಿಗೆ. ರವಿ ಆಸ್ಪತ್ರೆಯ ಬಿಲ್ ಸಂದಾಯ ಮಾಡಲು ಬಿಲ್ ಕೌಂಟರ್’ಗೆ ಹೋಗಿದ್ದ. ಚಿಕ್ಕಪ್ಪನೊಡನೆ ವಿಭಾ ಶುಭಾ ನಗುತ್ತ ಮಾತನಾಡುತ್ತಿದ್ದರು. ಅಷ್ಟೊತ್ತಿಗೆ ಸುಶಾಂತ್ ಪೂರ್ತಿಯಾಗಿ ಎಚ್ಚರಗೊಂಡಿದ್ದ. ಆ ದಿನ ರವಿ ಭಾರತಿ ವಿಭಾ ಶುಭಾ ಒಟ್ಟಿಗೆ ಕಾರಿನಲ್ಲಿ ಹೋಗಿದ್ದನ್ನು ಕಂಡು ರವಿ ತನ್ನ ಜಾನೂವಿನ ಗಂಡ….ವಿಭಾ ಶುಭಾ ಅವರ ಮಕ್ಕಳು ಎನ್ನುವುದು ಅರ್ಥವಾಗಿತ್ತು. ವಿಭಾ ಶುಭಾರನ್ನು ನೋಡಿದ ತಕ್ಷಣ “ಜಾನೂ …ಬಂದಿಲ್ಲವಾ…?ಎಲ್ಲಿ ನನ್ನ ಜಾನೂ …..?”ಎನ್ನತ್ತ ತನ್ನ ದಿಂಬಿನ ಕೆಳಗೆ ಅಷ್ಟು ದಿನ ಯಾರಿಗೂ ನೋಡಲು ಕೊಡದೇ ಬಚ್ಚಿಟ್ಟುಕೊಂಡಿದ್ದ ಎಲ್ಲ ಚಿತ್ರಗಳನ್ನು ಅವರಿಬ್ಬರ ಮೈಮೇಲೆ ತೂರಿದ. ..ಎಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಷ್ಟರಲ್ಲಿ ಸುಶಾಂತ್’ನ ಗಲಾಟೆ ಕೇಳಿ ಬಂದ ದಾದಿಯರು ಡಾಕ್ಟರ್’ಗೆ ಕರೆ ಮಾಡಿದರು. ಡಾಕ್ಟರ್ ಬಂದು ಅವನಿಗೆ ಮತ್ತಿನ ಇಂಜೆಕ್ಷನ್ ನೀಡಿದಾಗ ನಿಧಾನವಾಗಿ ಕಣ್ಮುಚ್ಚಿ ಮಲಗಿದ…ವಿಭಾ ಶುಭಾ ಪಿಳಿ ಪಿಳಿ ಕಣ್ಣು ಬಿಡುತ್ತಾ ನೋಡುತ್ತಿದ್ದರು. ಅವನನ್ನು ಕಂಡು ಅಯ್ಯೋ ಎನಿಸಿತು ವಿಭಾಗೆ ..”ಯಾರೋ ಜಾನೂ ಎನ್ನುವ ಅವರ ಮಗಳು ನೋಡಲು ನಮ್ಮಂತೆಯೇ ಇದ್ದಳೇನೋ …? ಪಾಪ..ಅವಳಿಗೇನಾಗಿತ್ತೋ ಏನೋ ….!ಅದಕ್ಕೆ ನಮ್ಮನ್ನು ನೋಡಿದರೆ ಈ ವ್ಯಕ್ತಿ ಹೀಗಾಡುತ್ತಾನೆ…” ಎಂದುಕೊಂಡಳು ವಿಭಾ…
ಮುಂದುವರಿಯುವುದು …
Facebook ಕಾಮೆಂಟ್ಸ್