ದಿಗಂತವಾ ತಾ ಕಾಣ ಹೊರಟಿದೆ
ಮನ ಮರುಳೋ, ಜೀವಕೆ ಉರುಳೋ;
ಕೊರಳು ಬರಿದಾಗಿ, ನೆರಳೂ ಮರೆಯಾಗಿ
ಬಾಳು ಪಾಳಾಗಿ, ಭಾವ ನರಳಿದೆ…
ಆತ್ಮ ಶೋಣಿತ ಕುದ್ದು ನಿರುತ
ಆವಿಯಾಗಿದೆ, ತನು ಶೂನ್ಯವಾಗಿದೆ;
ಚಿತ್ತದಾ ಗೇಹ ಬೆಂದು ಸತತ
ಶವದಾ ಕಂಪು, ತಾ ಸುಖವಾಗಿದೆ…
ಅಂದು ಹಸಿರ ಹೊನ್ನು ನನ್ನಾ ಮನ
ಇಂದಿಲ್ಲಿ ನನದೇನು? ಬರಿ ಹಿಡಿ ಬೂದಿ;
ಅಗಿನಿಯ ಕುರುಹಿಲ್ಲ, ಗಾಳಿಯ ಸುಳುಹಿಲ್ಲ
ನೂರು ಚಿತೆ, ಮತ್ತಿದು ಮಂಜಿನ ಹಾದಿ…
ಚಿತ್ತದಾ ಬೂದಿ ಎಲ್ಲೆಲ್ಲೋ ಚದುರಿ
ಎಂದೋ ಸತ್ತ ಜೀವ ಬೆದರಿ
ಮರುಳಾಗಿ ಹೊರಟಿಹೆ ಮಂಜಿನ ಪಥದಲಿ
ಅರಸುತಾ ನನ್ನಾ, ಶೂನ್ಯದ ಒಡಲಲಿ…
ಅಲ್ಲೆಲ್ಲೋ ದೊರೆಯಿತೊಂದು ಬೂದಿಯಾ ಕಣ
ಸತ್ತ ನನ್ನಾ ಜೀವದ ನೆನಪು;
ಭಸ್ಮ ಕಣದಲಿ ಶವದಾ ಕಂಪು
ಅಂಜಲಿಯೊಳು ಕುಳಿತು ನೀಡಿತು ತಂಪು…
ಸತ್ತ ಮನಸು, ಹುಚ್ಚು ಹುಮ್ಮಸ್ಸು
ಬೂದಿಯ ಪ್ರತಿ ಕಣ ಬೆಂಬತ್ತೋ ಹುರುಪು;
ದಿಗಂತದಾಚೆಯಲೂ ಅರಸಲು ಹೊರಟಿದೆ
ಭಸ್ಮ ಕಣದಲಿ ನನ್ನಾ ಶವದ ಕಂಪು…
Facebook ಕಾಮೆಂಟ್ಸ್