ಅದು ದೆಹಲಿಯ ಪಂಚತಾರಾ ಹೋಟೆಲ್, ಮಾಹಿತಿಯ ಪ್ರಕಾರ ದೇಶದ ರಕ್ಷಣಾ ಸಚಿವರು ಒಂದು ಕಾರ್ಯಕ್ರಮದ ನಿಮಿತ್ತ ಆಗಮಿಸುವ ಮುನ್ಸೂಚನೆಯಂತೆ ಸಿದ್ದತೆಯಲ್ಲಿತ್ತು. ಅದೇ ಸಮಯದಲ್ಲಿ ಬಿಳಿ ಅಂಗಿ ತೊಟ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದ 60ರ ಹರೆಯದ ವ್ಯಕ್ತಿ ಒಳಗಡೆ ಹೊರಡಲು ಸಿದ್ಧನಾಗಿದ್ದ, ಗೇಟ್ ಬಳಿ ನಿಂತಿದ್ದ ಕಾವಲುಗಾರ ಅವನನ್ನು ತಡೆದು, ಒಳಗಡೆ ಸ್ವಲ್ಪ ಸಮಯದಲ್ಲಿ ರಕ್ಷಣಾ ಸಚಿವರ ಕಾರ್ಯಕ್ರಮ ನಡೆಯುವುದು ಯಾರನ್ನು ಒಳಗಡೆ
ಬಿಡಲಾಗುವದಿಲ್ಲವೆಂದ. ಸ್ವಲ್ಪ ನಕ್ಕ ಆ ವ್ಯಕ್ತಿ ಕಾವಲುಗಾರನುದ್ದೇಶಿಸಿ ಹೇಳಿದ “ನಾನೇ ರಕ್ಷಣಾ ಸಚಿವ, ಮನೋಹರ ಪರಿಕ್ಕರ್”
ಈ ಸಣ್ಣ ಘಟನೆಯಿಂದಲೇ ತಿಳಿದು ಹೋಗುತ್ತದೆ ಮನೋಹರ ಪರಿಕ್ಕರ್ ಎಂತಹ ವ್ಯಕ್ತಿ ಎಂದು. ರಕ್ಷಣಾ ಸಚಿವರಿಗೆ ಝೆಡ್+ ಭದ್ರತೆ ಇರುವದು ಎಲ್ಲರಿಗೂ ತಿಳಿದ ವಿಚಾರ. ಆದರೆ ಈ ವ್ಯಕ್ತಿ ಕೆಲವು ಸಲ ಹೇಳದೆ ಕೇಳದೆ ಒಬ್ಬರೇ ಹೊರಟು ಬಿಡುತ್ತಾರೆ, ಮೊನ್ನೆ ಗೋವಾದಲ್ಲಿ ಎಲೆಕ್ಷನ್ ಒಂದರಲ್ಲಿ ವೋಟು ಮಾಡಿ ಪರಿಕ್ಕರ್ ಎಲೆಕ್ಷನ್ ಬೂತ್’ನ ಮುಂದಿದ್ದ ಸಣ್ಣ ಟೀ ಅಂಗಡಿಯಲ್ಲಿ ಟೀ ಕುಡಿಯುತ್ತ, ಟೀ ಮಾರುವವನ ಜೊತೆ ಮಾತನಾಡುತ್ತ 10 ನಿಮಿಷ ಕುಳಿತೇ ಬಿಟ್ಟರು, ಅಲ್ಲಿದ್ದವರಿಗೆಲ್ಲಾ ಅಚ್ಚರಿ! ನೀವು ಮನೋಹರ್’ಜಿ ಅವರನ್ನು ಏಕೆ ಹೀಗೆ ಮಾಡುತ್ತಿರಿ ಎಂದು ಕೇಳಿದರೆ ಅವರು ಕೊಡುವ ಉತ್ತರ “ದೇಶದ ನಿಜವಾದ ಸಮಸ್ಯೆ ತಿಳಿಯುವುದೇ ಇಂಥವರಿಂದ ಅದಕ್ಕೆ ಅವರೊಡನೆ ಸಾಮಾನ್ಯವಾಗಿ ಬೆರೆಯಬೇಕು”. ಎಷ್ಟು ಸತ್ಯವಲ್ಲವೇ, ಗೋವಾದ ಜನೆತೆಗೆ ಈ ವ್ಯಕ್ತಿತ್ವ ಹೊಸದೇನಲ್ಲ ಎಷ್ಟೋ ಸಲ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ತಮ್ಮ ಸ್ಕೂಟರ್’ನಲ್ಲಿ ಓಡಾಡುವುದನ್ನು ಜನತೆ ನೋಡಿದ್ದಾರೆ, ಕೆಲವು ಸಲ ವಾಹನ ದಟ್ಟಣೆಯಲ್ಲಿ ಸಿಲುಕಿದಾಗ ಕಾರಿನಿಂದ ಇಳಿದು ಸ್ನೇಹಿತರ ಬೈಕಿನಲ್ಲಿ ಹೊರಟಿರೋದನ್ನ ಜನ ಕಂಡಿದ್ದಾರೆ, ಬೆಂಗಳೂರಿಗೆ ಬಂದಾಗ ಅಧಿಕಾರಿಗಳು ಇವರನ್ನು ಬರಮಾಡಿಕೊಳ್ಳುವುದಕ್ಕೂ ಮುನ್ನವೇ ವಿಮಾನ ನಿಲ್ದಾಣದಿಂದ ಹೊರಟಾಗ ಅಧಿಕಾರಿಗಳು ಪೇಚಾಡಿದ್ದು ಉಂಟು, ಎಷ್ಟು ಸಲ ಮದುವೇ ಸಮಾರಂಭಗಳಲ್ಲಿ ಎಲ್ಲರಂತೆ ಸಾಲಲ್ಲಿ ನಿಂತಿದ್ದನ್ನು ಕಂಡಿದ್ದಾರೆ. ಒಂದಾ ಎರಡಾ ಈ ವ್ಯಕ್ತಿಯ ಸರಳತನಕ್ಕೆ ಸಾಕ್ಷಿ, ಈ ಮಹಾನ್ ವ್ಯಕ್ತಿಗಳೇ ಹೀಗೆ ಸಣ್ಣ ಕೆಲಸದಲ್ಲೂ ತಮ್ಮ ಪ್ರಭಾವವನ್ನು ಒತ್ತಿ ಬಿಟ್ಟಿರುತ್ತಾರೆ.
ಮನೋಹರ ಗೋಪಾಲಕೃಷ್ಣ ಪರಿಕ್ಕರ್ ಹುಟ್ಟಿದ್ದು 13 ಡಿಸೆಂಬರ್ 1955ರಲ್ಲಿ ಅಂದಿನ ಪೋರ್ಚುಗೀಸ್ ಗೋವಾದ ಮಪುಸಾ ಅವರ ಜನ್ಮಸ್ಥಳ, ತಂದೆ ಉತ್ಪಲ ಪರಿಕ್ಕರ್, ತಾಯಿ ರಾಧಾಭಾಯಿ ಪರಿಕ್ಕರ್, ಹೆಂಡತಿ ಮೇಧಾ ಪರಿಕ್ಕರ್ ಓದಿದ್ದು ಗೋವಾದ ಲೋಯೋಲ ಹೈಸ್ಕೂಲ್’ನಲ್ಲಿ. ಮರಾಠಿ ಮಾಧ್ಯಮದಲ್ಲಿ ತಮ್ಮ ಓದು ಮುಗಿಸಿದ್ದ ಪರಿಕ್ಕರ್ ಪದವಿ ಪಡೆದದ್ದು ಪ್ರಸಿದ್ಧ ಮುಂಬಯಿ IITಯಿಂದ. IIT ಇಂದ ಪದವಿ ಪಡೆದು ಮುಖ್ಯಮಂತ್ರಿಯಾದವರಲ್ಲಿ ಮನೋಹರ ಪರಿಕ್ಕರ್ ಮೊದಲಿಗರು.
ಚಿಕ್ಕಂದಿನಿಂದಲೇ ರಾಷ್ಟೀಯ ಸ್ವಯಂ ಸೇವಕ ಸಂಘದ ಸಂಪರ್ಕಕ್ಕೆ ಬಂದ ಪರಿಕ್ಕರ್ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು, ರಾಮ ಜನ್ಮ ಭೂಮಿ ಹೋರಾಟವನ್ನು ಗೋವಾದಲ್ಲಿ ಸಂಘಟಿಸುವಲ್ಲಿ ಪರಿಕ್ಕರ್ ಮುಖ್ಯ ಭೂಮಿಕೆಯನ್ನು ನಿಭಾಯಿಸಿದ್ದರು. ಪರಿಕ್ಕರ್ ಸಂಘದಿಂದಲೇ ಜೀವನದಲ್ಲಿ ಶಿಸ್ತು, ಬೆಳವಣಿಗೆ, ಲಿಂಗ ಸಮಾನತೆ, ರಾಷ್ಟ್ರೀಯತೆ ಮತ್ತು ಸಾಮಾಜಿಕ ಕಳಕಳಿಯನ್ನು ಕಲಿತದ್ದು ಎಂದು ಅನೇಕ ಬಾರಿ ಹೇಳಿದ್ದಾರೆ. ಈ ಎಲ್ಲ ಕೆಲಸಗಳನ್ನು ನೋಡಿ ಸಂಘವು ಇವರನ್ನು ಭಾರತೀಯ ಜನತಾ ಪಾರ್ಟಿಯಲ್ಲಿ ತೊಡಗಿಸಿಕೊಳ್ಳಲು ಕಳುಹಿಸಿದ್ದು, ಗೋವಾ ರಾಜ್ಯದಲ್ಲಿ ಭಾಜಾಪಾವನ್ನು ಕಟ್ಟಿದ್ದು ಮನೋಹರ್ ಪರಿಕ್ಕರ್ ಎಂದರೆ ಅತಿಶಯೋಕ್ತಿಯಲ್ಲ, ಮೂರೂ ಬಾರಿ ಮುಖ್ಯಮಂತ್ರಿಯಾಗಿದ್ದ ಪರಿಕ್ಕರ್ ಗೋವಾದ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ. 2012ರಲ್ಲಿ ಪ್ರಥಮ ಬಾರಿಗೆ ಭಾಜಾಪಾವನ್ನು ಸಂಪೂರ್ಣ ಬಹುಮತದೊಂದಿಗೆ ಅದಿಕಾರಕ್ಕೆ ತಂದರು. ನಂತರ 2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಒತ್ತಡಕ್ಕೆ ಮಣಿದು ಕೇಂದ್ರದ ರಕ್ಷಣಾ ಇಲಾಖೆಯ ಜವಾಬ್ದಾರಿಯನ್ನು ಹೊತ್ತುಕೊಂಡರು.
ರಕ್ಷಣಾ ಇಲಾಖೆ ತುಂಬಾ ಸೂಕ್ಷ್ಮವಾದದ್ದು ಮತ್ತು ಅಷ್ಟೇ ಮಹತ್ವವಾದ ಇಲಾಖೆ. ರಕ್ಷಣಾ ಇಲಾಖೆಯನ್ನು ಸಂಭಾಲಿಸಲು ನರೇಂದ್ರ ಮೋದಿ ಚಾಣಾಕ್ಷ ಮತ್ತು ಸ್ವಚ್ಛ ವ್ಯಕ್ತಿತ್ವದ ಹುಡುಕಾಟದಲ್ಲಿದ್ದಾಗ ಅವರ ಕಣ್ಣಿಗೆ ಬಿದ್ದದ್ದು ಮನೋಹರ್ ಪರಿಕ್ಕರ್. ನವೆಂಬರ್ 2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಸೇನೆಯ ಆಧುನೀಕರಣಕ್ಕೆ ಮತ್ತು ಭಾರತದ ರಕ್ಷಣೆಗೋಸ್ಕರ ಮಹತ್ವದ ನಿರ್ಣಯಗಳನ್ನು ಕೈಗೊಂಡರು. ಪರಿಕ್ಕರ್ ಅವರು ಕೆಲವು ಯೋಜನೆಗಳ
ಮಾಹಿತಿ ಈ ಕೆಳಗಿನಂತಿದೆ.
* “ಒನ್ ರಾಂಕ್ ಒನ್ ಪೆನ್ಷನ್ (OROP)” ಸೈನಿಕರ ಕ್ಷೇಮಾಭಿವೃದ್ಧಿಗಾಗಿ OROP ಜಾರಿಗೊಳಿಸಲು ಎಷ್ಟೋ ಸರ್ಕಾರಗಳು ಆಶ್ವಾಸನೇ ನೀಡಿದ್ದರು OROP ಜಾರಿಗೊಳಿಸಿದ್ದು ನರೇಂದ್ರ ಮೋದಿ ನೇತೃತ್ವದಲ್ಲಿ ಮನೋಹರ್ ಪರಿಕ್ಕರ್. ಇದಕ್ಕಾಗಿ ಕೇಂದ್ರ ಸರ್ಕಾರ ವಾರ್ಷಿಕ ಸುಮಾರು 10900 ಕೋಟಿ ರೂಪಾಯಿಗಳನ್ನು ವ್ಯಯಿಸುತ್ತದೆ.
* ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ 5 ಹಂತದ ಲೇಸರ್ ತಡೆಗೋಡೆಯನ್ನು ನಿರ್ಮಿಸಲು ಹೊರಟಿದ್ದಾರೆ, ಇದು ಪಾಕಿಸ್ತಾನದಿಂದ ಭಾರತಕ್ಕೆ ನುಸುಳುವ ಉಗ್ರಗಾಮಿಗಳನ್ನು ಸಂಪೂರ್ಣವಾಗಿ ತಡೆಯುವುದು ಮತ್ತು ಭಾರತ ಪಾಕಿಸ್ತಾನಗಳ ನಡುವೆ ಭದ್ರ ಗಡಿಯನ್ನು ನಿರ್ಮಿಸುವ ಉದ್ದೇಶದಿಂದ ಕೈಗೊಂಡಿರುವ ಯೋಜನೆಯಾಗಿದೆ. ಉಗ್ರಗಾಮಿಗಳಿಗೆ ಇದು ಸಿಂಹಸ್ವಪ್ನದಂತೆ ಕಾಡಲಿದೆ.
* 10 ವರ್ಷಗಳ ನಂತರ ಮೊದಲ ಬಾರಿಗೆ ಸೈನಿಕರಿಗೆ ಬುಲೆಟ್ ಪ್ರೂಫ್ ಜಾಕೆಟ್’ಗಳನ್ನು ವಿತರಿಸಲಾಗುತ್ತಿದೆ, ಉಗ್ರರ ದಾಳಿಯಾದಾಗ ಸೈನಿಕರ ಸಾವಿನ ಪ್ರಮಾಣ 1:1 ರಿಂದ 1:4 ಇಳಿದಿದೆ [ಮೊದಲು ಒಬ್ಬ ಉಗ್ರಗಾಮಿ ಹತನಾದರೆ ಒಬ್ಬ ಸೈನಿಕನನ್ನು ಕಳೆದುಕೊಳ್ಳುತ್ತಿದ್ದೆವು, ಈಗ ನಾಲ್ಕು ಉಗ್ರರಿಗೆ ಒಬ್ಬ ಸೈನಿಕ ಹುತಾತ್ಮನಾಗುತಿದ್ದಾನೆ.
* ಈಶಾನ್ಯ ರಾಜ್ಯಗಲ್ಲಿ ನಡೆದ ಉಗ್ರರ ಹೇಯಕೃತ್ಯಗಳ ಪ್ರತೀಕಾರವಾಗಿ, ಪಕ್ಕದ ಮಯನ್ಮಾರ್ ದೇಶದಲ್ಲಿ ಅಡಗಿದ್ದ ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಭಾರತ ಬೇರೆ ದೇಶದಲ್ಲಿ ಸೈನಿಕ ಕಾರ್ಯಾಚರಣೆ ನಡೆಸಿದ್ದು ಇದೆ ಮೊದಲು. ಈ ಗಂಡೆದೆಯ ನಿರ್ಣಯ ಕೈಗೊಂಡಿದ್ದು ಮನೋಹರ್ ಪರಿಕ್ಕರ್ ನೇತೃತ್ವದಲ್ಲಿ.
* ಜಮ್ಮು ಮತ್ತು ಕಾಶ್ಮೀರದಲ್ಲಿ ದಾಳಿಗಳನ್ನು ಸಮರ್ಥವಾಗಿ ಪರಿಕ್ಕರ್ ನೇತೃತ್ವದಲ್ಲಿ ಭಾರತೀಯ ಸೇನೆ ತಡೆದದ್ದರಿಂದ ಪಂಜಾಬಿನಿಂದ ಉಗ್ರರು ದಾಳಿಮಾಡಲು ಸಂಚು ರೂಪಿಸುತ್ತಾರೆ, ಅದರ ಪ್ರತಿಫಲವೇ ಪಠಾನಕೋಟ್’ನ ದಾಳಿ! ಪಠಾನಕೋಟ್’ನ ಸಮರ್ಥವಾಗಿ ನಿಭಾಯಿಸಿದ ಪರಿಕ್ಕರ್, ಸೇನಾನೆಲೆಗೆ ಹಾಗೂ ನಿವಾಸಿಗಳಿಗೆ ಯಾವುದೇ ಹಾನಿಯಾಗದಂತೆ ಉಗ್ರರಿಗೆ ಪ್ರತ್ಯುತ್ತರ ನೀಡುವಲ್ಲಿ ಸಫಲರಾಗಿದ್ದಾರೆ.
* ರಕ್ಷಣಾ ಕ್ಷೇತ್ರದಲ್ಲಿ ಮೋದಿರವರ “ಮೇಕ್ ಇನ್ ಇಂಡಿಯಾ ” ಯೋಜನೆಯಡಿ, ಹೊಸ ರಕ್ಷಣಾ ಉಪಕರಣಗಳ ನಿರ್ಮಾಣಕ್ಕಾಗಿ HALನ ಹೊಸ ಘಟಕವನ್ನು ಸ್ತಾಪಿಸಲಾಗುತ್ತಿದೆ, DRDOಗೇ ಹೆಚ್ಚಿನ ನೆರವನ್ನು ನೀಡಲಾಗಿದ್ದು ಉತ್ತಮ ಅನ್ವೇಷಣೆಗೆ ಸಾಕ್ಷಿಯಾಗಲಿದೆ. ರಕ್ಷಣಾ ಕ್ಷೇತ್ರದಲ್ಲಿ ಪಾಲ್ಗೊಳ್ಳಲು ಖಾಸಗಿ ಕಂಪನಿಗಳಿಗೆ ಮುಂದಾಗಿದ್ದು, ಸರ್ಕಾರ ಸಹಕಾರನೀಡುತ್ತಿದೆ.
* ಚೀನಾದ ” ಚಿಪ್ಆಕಾ” ಯೋಜನೆ ಭಾರತದ ಭದ್ರತೆಗೆ ಕಂಟಕವಾಗಿದ್ದು ಇದರ ಪ್ರತಿಕಾರವಾಗಿ ಇರಾನ್’ನಲ್ಲಿ ಬಂದರೊಂದನ್ನು ನಿರ್ಮಿಸಲಾಗುತ್ತಿದ್ದು ಆಫ್ಘಾನಿಸ್ತಾನದಿಂದ ಬಂದರಿಗೆ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಹಾಗೆಯೆ ಜಪಾನ್, ದಕ್ಷಿಣ ಕೊರಿಯ, ವಿಯೆಟ್ನಾಂಗಳೊಂದಿಗೆ ಬಾಂಧವ್ಯ ಹೆಚ್ಚಿಸಿ ಚೀನಾ ಸಮುದ್ರದಲ್ಲಿ ಚೀನಾದ ಹಿಡಿತವನ್ನು
ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
* ಫ್ರಾನ್ಸ್ ಜೊತೆಗಿನ ರಾಫೆಲ್ ಡೀಲ್’ನಲ್ಲಿ ಸಾವಿರಾರು ಕೋಟಿ ಹಣವನ್ನು ಉಳಿಸಿ, ರಕ್ಷಣಾ ಖರೀದಿಗಳಲ್ಲಿ ದಲಾಲಿಗಳನ್ನು ಸಂಪೂರ್ಣವಾಗಿ ತಗೆದುಹಾಕಿದ್ದಾರೆ.
* ಅಮೇರಿಕಾದಲ್ಲಿ ಕೊಳೆಯುತ್ತಿದ್ದ ಸಾವಿರಾರು ಕೋಟಿ ಭಾರತದ ಹಣವನ್ನು ಹಿಂದಿನ ಸರ್ಕಾರ ಮರೆತೇ ಹೋಗಿತ್ತು. ಮನೋಹರ್ ಪರಿಕ್ಕರ್ ಅದರ ಸದ್ಬಳಕೆ ಮಾಡುತ್ತಿದ್ದು ಇದರ ಪ್ರತಿಫಲವಾಗಿ ಮುಂದಿನ ನಾಲ್ಕಾರು ವರ್ಷ ಅಮೆರಿಕೆಗೆ ಭಾರತ ರಕ್ಷಣಾ ಖರೀದಿಯಿಂದ ಯಾವುದೇ ಡಾಲರ್ ರೂಪದಲ್ಲಿ ಹಣವನ್ನು ನೀಡುವುದಿಲ್ಲ.
* ಇಸ್ರೇಲ್, ರಷ್ಯ, ಅಮೇರಿಕ, ಜಪಾನ್. ವಿಯೆಟ್ನಾಂ, ಫ್ರಾನ್ಸ್, ಆಸ್ಟ್ರೇಲಿಯ ಮತ್ತು ಇನ್ನು ಹಲವಾರು ರಾಷ್ಟ್ರಗಳೊಂದಿಗೆ ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆ & ಸಹಕಾರದ ಒಡಂಬಡಿಕೆಗಳನ್ನು ಮಾಡಲಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಖರೀದಿ ಒಪ್ಪಂದಗಳು ತುಂಬಾ ಸೂಕ್ಷ್ಮವಾದವುಗಳಾಗಿದ್ದು ಸಂಪೂರ್ಣ ಎಚ್ಚರಿಕೆಯಿಂದ ಪರಿಕ್ಕರ್ ಹೆಜ್ಜೆ ಇಡುತ್ತಿದ್ದಾರೆ. ಭಾರತೀಯ ಸೇನೆಯ ಆಧುನೀಕರಣಕ್ಕೆ ಇವರ ಈ ಎಲ್ಲ ಕೊಡುಗೆಗಳು ತುಂಬಾ ಉಪಯೋಗಕಾರಿ. ಯಜ್ಞದಲ್ಲಿ ಬಲಿಯಾಗುವದು ಕೇವಲ ಕುರಿ, ಸಿಂಹವಲ್ಲವೆಂದು ಉಚ್ಚರಿಸುವ ಪರಿಕ್ಕರ್ ಸೇನೆಯನ್ನು ಸಿಂಹದಂತೆ ನಿರ್ಮಿಸಲಾಗುವುದು ಮತ್ತು ಸೇನೆ ಕೇವಲ ಭಾರತದ ರಕ್ಷಣೆಗೋಸ್ಕರ ಯಾರಮೇಲೆಯೂ ದಾಳಿಮಾಡುವ ಉದ್ದೇಶದಿಂದಲ್ಲವೆಂದು ಸ್ಪಷ್ಟವಾಗಿ ನುಡಿದಿದ್ದಾರೆ, ಮನೋಹರ್ ಪರಿಕ್ಕರಂತಹ ವ್ಯಕ್ತಿತ್ವ ಭಾರತ ಅಭಿವೃದ್ಧಿಯಲ್ಲಿ ಒಳ್ಳೆಯ ಕೊಡುಗೆಗಳನ್ನು ನೀಡುತ್ತದೆ. ಭಾರತದ ರಕ್ಷಣೆ ಪರಿಕ್ಕರಂತಹ ವ್ಯಕ್ತಿಯ ಕೈಯಲ್ಲಿ ಸುರಕ್ಷಿತವಾಗಿದ್ದು, ಜನತೆಯನ್ನು ಬಾಹ್ಯ ಶಕ್ತಿಗಳಿಂದ ರಕ್ಷಿಸುತ್ತಿದೆ. ನಾವಿಂದು ಶಾಂತಿಯಿಂದಿರಲು ನಮ್ಮ ಸೈನಿಕರು ಕಾರಣ ನಮ್ಮ ಸೈನಿಕರು ಉದ್ಧಾರಕ್ಕೆ ಮನೋಹರ್ ಪರಿಕ್ಕರಂತಹ ನಾಯಕರು ಕಾರಣ. ಹೀಗಾಗಿಯೇ ನಾವು ಹೇಳುತ್ತಿರುವದು “ಅಚ್ಚೆ ದಿನ್” ಬಂದಾಗಿದೆ.
ಜೈ ಹಿಂದ್
– Sachin Hanchinal
Facebook ಕಾಮೆಂಟ್ಸ್