X

ಸತ್ಯ ಒಪ್ಪಿಕೊಳ್ಳಲು ಸೋಗಲಾಡಿತನವೇಕೆ?

“ರಾಘವೇಶ್ವರ ಭಾರತಿ ಸ್ವಾಮೀಜಿ-ಪ್ರೇಮಲತಾ ಪ್ರಕರಣ ಆರಂಭವಾದಾಗಿನಿಂದಲೂ ಶ್ರೀಗಳ ಜೊತೆಗೆ ಇದ್ದವರು ಶ್ರೀ ಚಕ್ರವರ್ತಿ ಸೂಲಿಬೆಲೆಯವರು. ಆ ಹೊತ್ತಿನಲ್ಲಿ ಸುತ್ತಲಿನ ಜನ ನೂರೆಂಟು ಮಾತನಾಡಿದವರೇ. ಅಂತಹಾ ಸಂದರ್ಭದಲ್ಲಿ ಬಲವಾದ ಗೋಡೆಯಂತೆ ನಿಂತ ಅನೇಕರಲ್ಲಿ ಅವರೂ ಒಬ್ಬರು. ಆ ಹೊತ್ತಿನ ತಮ್ಮ ಮನೋಗತವನ್ನು ರೀಡೂ ಕನ್ನಡ ಓದುಗರಿಗಾಗಿ ತೆರೆದಿಟ್ಟಿದ್ದಾರೆ.
-ಸಂ”

ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ನರೇಶ್ ಶೆಣೈ ಜೊತೆಗೆ ಮಾತನಾಡುತ್ತ ಕುಳಿತಿದ್ದೆ. ಅಷ್ಟರಲ್ಲಿಯೇ ರಾಘವೇಶ್ವರ ಭಾರತಿಗಳ ಮೇಲಿನ ಪ್ರೇಮಲತಾ ಆರೋಪ ಹರಿದಾಡಲಾರಂಭಿಸಿತು. ಎಸಿ ಆಫೀಸಿನಲ್ಲಿಯೂ ಬಿಸಿಬಿಸಿ ಚರ್ಚೆ ಶುರುವಾಗಿತ್ತು. ಅದಾಗಲೇ ರಾಮಚಂದ್ರಾಪುರ ಮಠಕ್ಕೆ ಹೋಗಿ ಅನೇಕ ವರ್ಷಗಳಾಗಿ ಬಿಟ್ಟಿತ್ತು. ರಾಮಕಥೆಯನ್ನು ದೂರದಲ್ಲಿ ನಿಂತು ಒಂದೆರೆಡು ಬಾರಿ ಕೇಳಿದ್ದೆಷ್ಟೋ ಅಷ್ಟೇ. ಮಠವೂ, ಹವ್ಯಕರೂ, ಸ್ವಾಮೀಜಿಯೂ ಪುರಸೊತ್ತಿಲ್ಲದ್ದಷ್ಟು ಕಾರ್ಯ ನಿರತರಾಗಿದ್ದರು; ನಾವೂ ‘ನಮೋ ಬ್ರಿಗೇಡ್’ ಅಂತ ನಿರಂತರ ಓಡಾಟಕ್ಕೆ ಬಿದ್ದಿದ್ದೆವು. ಈಗ ಈ ಘಟನೆ ನಮ್ಮೆಲ್ಲರನ್ನೂ ಗಾಬರಿಗೆ ನೂಕಿತ್ತು. ನರೇಶನ ಮುಖ ನೋಡಿ ‘ಒಮ್ಮೆ ಗುರುಗಳನ್ನು ಮಾತನಾಡಿಸಬೇಕೆನ್ನಿಸುತ್ತಿದೆ’ ಎಂದೆ. ಆತ ತಡ ಮಾಡಲಿಲ್ಲ. ತನ್ನ ಡ್ರೈವರಿಗೆ ಹೇಳಿ ಇನ್ನೊವಾ ತೆಗೆಸಿ ಯಾವಾಗ ಬೇಕಿದ್ದರೂ ಹೊರಡಬಹುದು ಎಂದ. ಅಲ್ಲಿಂದ ಹೊರಟು ಒಂದೇ ಉಸಿರಲ್ಲಿ ಕೆಕ್ಕಾರಿನ ಚಾತುರ್ಮಾಸ್ಯದ ಸ್ಥಳ ತಲುಪುವಾಗ ರಾತ್ರಿ 9.30. ಸುಮಾರು ಹತ್ತೂವರೆಗೆ ಸ್ವಾಮೀಜಿಯವರ ಭೇಟಿಗೆ ಹೋದೆ. ಭೇಟಿ ಮುಗಿಸಿ ಬಂದಾಗ ಬೆಳಗಿನ ಜಾವ ನಾಲ್ಕು ಗಂಟೆ. ‘ನಾವಿದ್ದೇವೆ’ ಎಂದು ಹೇಳಲಷ್ಟೇ ನಾನು ಹೋಗಿದ್ದು. ಆದರೆ ಸ್ವಾಮೀಜಿಯವರ ಆತ್ಮವಿಶ್ವಾಸದ ನುಡಿ ಕೇಳಿದ ಮೇಲೆ ಅಖಂಡವಾಗಿ ಅವರೊಂದಿಗೆ ನಿಲ್ಲುವ ಸಂಕಲ್ಪ ಮಾಡಿದೆ. ಮತ್ತೆ ನಾನು-ನರೇಶ್ ಕುಳಿತು ಫೇಸ್ಬುಕ್ನಲ್ಲಿ ಪೇಜ್ ಶುರು ಮಾಡಿದೆವು. ‘We are with Raghaveshwara Bharati Swamiji’.

ಅಲ್ಲಿಯವರೆಗೂ ಮಠದ ಕೆಲವು ಭಕ್ತರು ಒಳಗೊಳಗೇ ಚರ್ಚಿಸುತ್ತಿದ್ದರಾದರೂ ಹೊರಗೆ ಮಾತನಾಡಿರಲಿಲ್ಲ. ರೇಪ್’ವಾದಿಗಳನ್ನೆದುರಿಸುವ ಧೈರ್ಯ ಯಾರಿಗೂ ಇದ್ದಂತಿರಲಿಲ್ಲ. ‘ಹರೇ ರಾಮ’ ಎನ್ನುತ್ತ ಜೋರಾಗಿ ಮಾತನಾಡದೇ ಒಳಗೊಳಗೇ ಬೇಯುತ್ತಿದ್ದರು. ಆ ವೇಳೆಯಲ್ಲಿ ನಾವು ಸೃಷ್ಟಿಸಿದ್ದ ಪೇಜು ಸಂಚಲನ ಉಂಟುಮಾಡಿತು. ಸಮರ್ಥ ವೇದಿಕೆ ದೊರೆತು ಗುರುಗಳ ಪರವಾಗಿದ್ದೇವೆ ಎನ್ನುವವರ ಗುಂಪು ದೊಡ್ಡದಾಗಲಾರಂಭಿಸಿತು.

ಆಗಾಗ ಮಠಕ್ಕೆ ಹೋಗಿ ಚರ್ಚೆಗಳಲ್ಲಿ ಭಾಗಿಯಾಗುವುದು, ಹೊಸ ಹೊಸ ಯೋಜನೆಗಳಿಗೆ ರೂಪು ಕೊಡುವುದು ನಡೆದೇ ಇತ್ತು. ಪ್ರತಿ ನಿತ್ಯ ಟೀವಿಯಲ್ಲಿ ಒಂದು ಸುದ್ದಿ. ಚೆಡ್ಡಿ ಸಿಕ್ಕಿತಂತೆ ಅಂತ ಒಂದು ದಿನವಾದರೆ, ಡಿಎನ್ಎ ಹೊಂದಾಣಿಕೆ ಆಯಿತಂತೆ ಅಂತ ಮತ್ತೊಂದು ದಿನ. ಎಲ್ಲವೂ ಬ್ರೇಕಿಂಗ್ ನ್ಯೂಸ್’ಗಳೇ. ನಮ್ಮ ನಂಬಿಕೆಗಳನ್ನು ಪುಡಿಪುಡಿ ಮಾಡಬಲ್ಲ ಸುದ್ದಿಗಳೇ ಅವೆಲ್ಲ. ಹೋದೆಡೆಯಲ್ಲೆಲ್ಲಾ ಇದೇ ಚರ್ಚೆ. ಎಲ್ಲರಿಗೂ ಉತ್ತರಿಸಿ ಸಂಭಾಳಿಸುವ ವೇಳೆಗೆ ಹೈರಾಣು! ಅನೇಕರು ನನ್ನೆದುರು ಗುರುಗಳ ಕುರಿತಂತೆ ಮಾತನಾಡುವುದನ್ನೇ ಬಿಟ್ಟು ಬಿಟ್ಟರು. ‘ಇವರು ಗುರುಗಳ ಪರ ಅಲ್ವ’ ಅಂತ ಬೇರೆಯವರಿಗೆ ಹೇಳಿ ಸುಮ್ಮನಾಗಿಬಿಡುತ್ತಿದ್ದರು. ಸಾಧ್ಯವಾದಾಗಲೆಲ್ಲಾ ಶ್ರದ್ಧಾವಂತ ಹವ್ಯಕರನ್ನು ಸೇರಿಸಿ ನಡೆದದ್ದನ್ನೆಲ್ಲಾ ಹೇಳಿ ‘ನಂಬಿಕೆ ಕಳೆದುಕೊಳ್ಳಬೇಡಿ’ ಎಂದು ಒಪ್ಪಿಸುವ ಕೆಲಸವನ್ನೂ ಮಾಡಿದ್ದು ನೆನಪಿದೆ.

ಆಗಲೇ ಅನಿಸಿದ್ದು. ಈ ಬಗೆಯ ಶ್ರದ್ಧಾವಂತರನ್ನು ಒಟ್ಟಿಗೆ ಸೇರಿಸಲಿಕ್ಕೆ ಸಾರ್ವಜನಿಕ ಸಮಾರಂಭವನ್ನೇಕೆ ಮಾಡಬಾರದು! ಮಠದವರಿಗೆ ಸಲಹೆ ಕೊಟ್ಟೆ. ಯಾಕೋ ಯಾರೂ ಒಪ್ಪಿಕೊಂಡಂತೆ ಕಾಣಲಿಲ್ಲ. ಸುಮ್ಮನಾದೆ. ಬಹುಶಃ ಕೋರ್ಟಿನಲ್ಲಿ ಕದನ ನಡೆಯುತ್ತಿರುವಾಗ ಬೀದಿಗೆ ಬರಬಾರದೆಂದು ಅವರ ಆಲೋಚನೆ ಇರಬೇಕು. ಆದರೆ ಪತ್ರಿಕೆಗಳು ಸಾರುತ್ತಿರುವ ಸುಳ್ಳನ್ನು ಮೀರಿ ನಿಂತು ಸಮಾಜಕ್ಕೆ ಸತ್ಯ ಮುಟ್ಟಿಸುವ ಸಾರ್ವಜನಿಕ ಹೋರಾಟ ಆಗಬೇಕಿತ್ತಲ್ಲ!

ನಾನೂ ಸುಮ್ಮನಾದೆ. ಮೂರ್ನಾಲ್ಕು ತಿಂಗಳು ಕಳೆದ ಮೇಲೆ ಮಠದಿಂದಲೇ ಸುದ್ದಿ ಬಂತು. ಸಾರ್ವಜನಿಕ ಸಮಾರಂಭಕ್ಕೆ ಸಿದ್ಧವಾಗಲೇಬೇಕು. ಆರಂಭದಲ್ಲಿ ಹೇಳುವಾಗ ಇದ್ದ ಉತ್ಸಾಹ ನನ್ನಲ್ಲಿ ಈಗ ಇರಲಿಲ್ಲ. ಹೆದರಿಕೆಯೂ ಹೆಚ್ಚಾಗಿತ್ತು. ಸಾರ್ವಜನಿಕ ಸಮಾರಂಭದಲ್ಲಿ ಮುಕ್ತವಾಗಿ ಮಾತನಾಡಲು ಶುರುಮಾಡಿದರೆ ವಿರೋಧಿ ಬಣದ ಆಕ್ರೋಶ ನನ್ನ ಮೇಲೆ ತಿರುಗುವುದರಲ್ಲಿ ಸಂಶಯವೇ ಇರಲಿಲ್ಲ. ಸ್ತ್ರೀ ವಿರೋಧಿ, ಬ್ರಾಹ್ಮಣರ ಪರ ಈ ಎಲ್ಲಾ ಉಪಾಧಿಗಳನ್ನೂ ಹೊತ್ತುಕೊಳ್ಳಬೇಕಿತ್ತು. ಸಹಜವಾಗಿಯೇ ಆತಂಕವಿತ್ತು.

ಆದರೆ ಯುದ್ಧದ ನಿಯಮವಿದೆ. ಶತ್ರುಗಳ ದೃಷ್ಟಿಯನ್ನು ರಾಜನಿಂದ ತಪ್ಪಿಸಿ ತನ್ನೆಡೆಗೆ ಸೆಳೆದುಕೊಂಡರೆ ರಾಜ ಸುರಕ್ಷಿತ ಅಂತ. ಹೀಗೆ ಮಾಡುವಲ್ಲಿ ತಾನು ನಾಶವಾಗಬಹುದು. ಆದರೆ ರಾಜ, ರಾಜ್ಯ ಎರಡೂ ಶಾಶ್ವತ. ಇದು ಗೊತ್ತಿದ್ದುದರಿಂದಲೇ ಅಖಾಡಕ್ಕಿಳಿದೆ. ಎಲ್ಲೆಲ್ಲಿ ಗುರುಗಳ ಪರವಾದ ದನಿ ಇದೆಯೋ ಅಲ್ಲೆಲ್ಲಾ ನಿಶ್ಚಿತ ಬರುವೆನೆಂದು ಮಾತು ಕೊಟ್ಟೆ. ಸಾಗರ, ಕುಮಟಾಗಳಲ್ಲಿ ಹವ್ಯಕರ ನಡುವೆ ಜೋರಾದ ಕಾರ್ಯಕ್ರಮವಾಯ್ತು. ಸಾವಿರ ಸಾವಿರ ಸಂಖ್ಯೆಯ ಜನರು ಸೇರಿದ್ದರು. ಅವರಲ್ಲಿ ಅನೇಕರು ಬೇಲಿಯ ಮೇಲೆ ಕುಳಿತಿದ್ದವರೇ. ಈ ಕಾರ್ಯಕ್ರಮ ಮುಗಿವ ವೇಳೆಗೆ ಅವರು ಸ್ಪಷ್ಟವಾಗಿ ಮಠದ ಜೊತೆಗೆ ನಿಂತಿದ್ದರು! ಸಮರ್ಥರ ವ್ಯಾಪ್ತಿ ವಿಸ್ತಾರವಾಗುತ್ತ ಸಾಗಿತು. (ಹಾಗಂತ ಈ ಯುದ್ಧದಲ್ಲಿ ನಾನೊಬ್ಬನೇ ಜೊತೆ ನಿಂತವನೆಂದಲ್ಲ. ಹವ್ಯಕರನ್ನು ಬಿಟ್ಟು ಅನೇಕ ನಿಮ್ನ ವರ್ಗದ ಜನಾಂಗಗಳೆಂದು ಕರೆಸಿಕೊಳ್ಳಲ್ಪಡುವವರಿದ್ದರು. ಸಂತರದೊಂದು ದೊಡ್ಡ ತಂಡವಿತ್ತು. ಫೇಸ್ಬುಕ್’ನಲ್ಲಿ ಬರೆಯುವ ಅನೇಕರಿದ್ದರು. ಎಲ್ಲರೂ ಯಾವುದೇ ಸ್ವಾರ್ಥವಿಲ್ಲದೇ ಅಕ್ಷರಶಃ ಧರ್ಮದೊಂದಿಗೆ ಇದ್ದರು. ಅದೇ ವೇಳೆಗೆ ಶಿಷ್ಯ ವರ್ಗದ ಅನೇಕರೇ ಆಗಾಗ ಕರೆ ಮಾಡಿ ಅನುಮಾನ ತೋರ್ಪಡಿಸಿದ್ದೂ ಉಂಟು!!)

ಆದರೆ ನಾನು ಅಂದುಕೊಂಡಂತೆ ಆಗಿತ್ತು. ಮುಟ್ಟಲೂ ಅಸಹ್ಯವಾಗುವ ಒಂದಷ್ಟು ಪತ್ರಿಕೆಗಳು ನನ್ನ ಬಗ್ಗೆ ಕೆಟ್ಟದಾಗಿ ಬರೆದವು; ಬಾಡಿಗೆ ಭಾಷಣಕಾರ ಎಂದವು. ಹಣ ಕೊಟ್ಟರೆ ಯಾವುದರ ಪರವಾಗಿ ಬೇಕಾದರೂ ಮಾತನಾಡಬಲ್ಲನೆಂದರು ಕೆಲವರು. ಪ್ರೇಮಲತಾಳ ಸಹೋದರನೇ ಪತ್ರಿಕೆಯೊಂದಕ್ಕೆ ಸಾಗರದ ಕಾರ್ಯಕ್ರಮದ ನಂತರ ವರದಿ ಬರೆದುಕೊಟ್ಟಿದ್ದ ಎನ್ನೋದು ಆಮೇಲೆ ಗೊತ್ತಾಯ್ತು. ಮನಸ್ಸಿಗೆ ನಿಜವಾಗಲೂ ಗಾಸಿಯಾಗಿತ್ತು. ಏನೆಲ್ಲಾ ಬರೆದು ಬಿಡುತ್ತಾರಲ್ಲ ಅಂತ ಅನ್ನಿಸಿತ್ತು. ನನ್ನನ್ನು ಸಂತೈಸಿ ಧೈರ್ಯ ತುಂಬಿದ್ದು ರಾಮಕೃಷ್ಣಾಶ್ರಮದ ಸ್ವಾಮೀಜಿ. ಹಿಂದೂ ಧರ್ಮದ ರಕ್ಷಣೆಗಾಗಿ ಬರುವ ಕೆಡುಕನ್ನು ಖುಷಿಯಿಂದಲೇ ಸ್ವೀಕರಿಸು ಎಂದ ಮೇಲೆ ಮತ್ತೆ ತಯಾರಾಗಿಬಿಟ್ಟೆ. ಮಿತ್ರ ಪ್ರಸನ್ನ ಮಾವಿನಕುಳಿ ಬರೆದ ಫೇಸ್ಬುಕ್ ಪ್ರತಿಕ್ರಿಯೆ ಮರೆಯಲಾಗದಂಥದ್ದು. ಸಾಗರದಲ್ಲಿ ದುಡ್ಡು ತೊಗೊಳ್ಳೋದಿರಲಿ, ಹಾಕಲು ಬಂದಿದ್ದ ಶಾಲನ್ನು ಪಕ್ಕಕ್ಕಿಟ್ಟು ವಿಜಯೋತ್ಸವದ ದಿನದವರೆಗೂ ಎತ್ತಿಡಿ, ಆಮೇಲೆ ಬರುತ್ತೇನೆ ಎಂದಿದ್ದನ್ನು ಅವರು ನೆನಪಿಸಿಕೊಂಡಿದ್ದರು. ಸುಮ್ಮನೆ ಮಾಹಿತಿಗಿರಲಿ ಅಂತ. ಬೇರೆಡೆಗೆ ಕಾರ್ಯಕ್ರಮಕ್ಕೆ ಹೋದಾಗ ಓಡಾಟದ ಖರ್ಚನ್ನಾದರೂ ಪಡೆದಿದ್ದೇನೆ. ರಾಮಚಂದ್ರಾಪುರ ಮಠದಿಂದ ಅದೂ ಕೂಡ ಇಲ್ಲ! ಬೀದರಿನಿಂದ ತುರ್ತಾಗಿ ರಾಮಚಂದ್ರಾಪುರ ಮಠಕ್ಕೆ ಸ್ಕಾರ್ಪಿಯೋ ಮಾಡಿಕೊಂಡು ಬಂದ ಖರ್ಚು ತೊಗೊಳ್ಳಿರೆಂದು ಮಠದಿಂದ ಅನೇಕ ಕರೆಗಳು ಬಂದವು. ನಾನು ಮುಟ್ಟಿಲ್ಲ. ಇದು ಹೆಗ್ಗಳಿಕೆ ಎಂದಲ್ಲ ಆದರೆ ಆಡಿಕೊಳ್ಳುವವರ ನಾಲಗೆಯ ಚಪಲ ಹೇಗೆ ಹೇಗಿರುತ್ತದೆಂಬುದಕ್ಕೆ ಉದಾಹರಣೆ ಅಷ್ಟೇ!

ಕಾಲಕ್ರಮದಲ್ಲಿ ಎದುರಾಳಿಗಳ ಷಡ್ಯಂತ್ರ ಬಯಲಿಗೆ ಬರುತ್ತಲೇ ಸಾಗಿತು. ಗುರುಗಳ ಪರವಾದ ವಾದ ಗಟ್ಟಿಯಾಗುತ್ತಲೇ ನಡೆಯಿತು. ಪ್ರೇಮಲತಾಗೆ ಬೆಂಬಲ ನೀಡಿದ್ದವರು ಒಬ್ಬೊಬ್ಬರಾಗಿ ಸಂಕಟಗಳನ್ನು ಅನುಭವಿಸಲಾರಂಭಿಸಿದರು. ಹಾಗೆ ಬಿಸಿಯ ಅನುಭವವಾದವರು ಈ ಪಾಳಯದಿಂದ ದೂರ ಸರಿದು ನಿಂತರು. ಆಕೆಯ ಪರವಾಗಿ ನಿಂತವರಾರೂ ಸಾಮಾನ್ಯರೆಂದುಕೊಳ್ಳಬೇಡಿ. ದೊಡ್ಡ-ದೊಡ್ಡ ಜನರು(ಅಧಿಕಾರದ ದೃಷ್ಟಿಯಿಂದ, ದೊಡ್ಡತನದಿಂದಲ್ಲ) ದೊಡ್ಡ ದೊಡ್ಡ ಸಂಘಟನೆಗಳು (ಸಂಖ್ಯೆಯ ದೃಷ್ಟಿಯಿಂದ, ದೂರ ದೃಷ್ಟಿಯಿಂದಲ್ಲ) ದೊಡ್ಡ, ದೊಡ್ಡ ಮಠಗಳು ಎಲ್ಲರೂ ಇದ್ದರು. ಶ್ರೀಗಳನ್ನು ಸಂತ ಸಮಾವೇಶಕ್ಕೆ ಕರೆಯಲು ಹಿಂಜರಿದ ಕೆಲವರು ತಮ್ಮ ಮನೆಯ ಕಾರ್ಯಕ್ರಮಕ್ಕೆ ಪ್ರೇಮಲತಾ ಪರಿವಾರವನ್ನು ಕರೆದು ಮಾಡಿದ ಸಂಭ್ರಮ ಇಂದಿಗೂ ಅಸಹ್ಯ ಹುಟ್ಟಿಸುವಂಥದ್ದು. ಸಾಗರದ ಕಾರ್ಯಕ್ರಮಕ್ಕೆ ಹೊರಟಾಗ ಆತ್ಮೀಯರೊಬ್ಬರು ಇಂತಿಂಥವರ ಹೆಸರು ಬರಬಾರದೆಂದು ನನಗೆ ಬೋಧನೆ ಮಾಡಿದರು. ಮಾತಿಗೆ ಮುನ್ನ ಯಾವ ಯಾವ ವಿಚಾರಗಳು ಬಂದರೆ ಚೆನ್ನ ಎಂದು ಸೂಕ್ಷ್ಮ ಹೇಳುವವರನ್ನು ಕೇಳಿದ್ದೆ. ಈ ಬಾರಿ ಉಲ್ಟಾ!

ಬಿಡಿ. ಈ ಮೂರು ವರ್ಷಗಳ ಅವಧಿ ನನ್ನ ಪಾಲಿಗೆ ಆತ್ಮ ನಿರೀಕ್ಷಣೆಯ ಸಂದರ್ಭ. ನಿಮ್ಮ ಸಂಕಟಕ್ಕೆ ಜೊತೆಗೆ ನಿಲ್ಲುವವ ಭಗವಂತ ಮಾತ್ರ. ಉಳಿದವರೆಲ್ಲರೂ ತಂತಮ್ಮ ಕೋಟೆ ಭದ್ರಪಡಿಸಿಕೊಳ್ಳುವುದರಲ್ಲಿಯೇ ನಿರತರು! ಆಪ್ತರಿಲ್ಲದ, ಸಜ್ಜನರುಳಿಯದ ಆ ಕೋಟೆ ದೀರ್ಘಕಾಲ ಉಳಿಯಲಾರದೆಂಬುದು ಅವರಿಗೆ ಅರಿವಿಗೆ ಬರುವುದರೊಳಗೆ ತುಂಬಾ ಸಮಯ ಕಳೆದು ಹೋಗಿರುತ್ತದೆ! ಹೇಳಬೇಕಾದ್ದು ಬಹಳ ಇದೆ. ಆದರೆ ಕೆಲವು ನಮ್ಮೊಂದಿಗೆ ಸಮಾಧಿಯಾಗಬೇಕಂತೆ. ನ್ಯಾಯಾಲಯದ ಆದೇಶದ ನಂತರ ‘ನಮಗೆ ಮೊದಲೇ ಗೊತ್ತಿತ್ತು’ ಅನ್ನೋ ಸಾಹಿತಿಗಳು-ರಾಜಕಾರಣಿಗಳು ದಂಡಿಯಾಗಿ ಸಿಗುತ್ತಿದ್ದಾರೆ. ಆದರೆ ಅನೇಕ ತಿಂಗಳುಗಳ ಕಾಲ ಶ್ರೀಗಳ ಹೆಸರೆತ್ತುವಾಗ ಅಕ್ಕಪಕ್ಕ ನೋಡಿ ಯಾರೂ ಇಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದವರೂ ಇವರೇ! ಕಾಲ ಎಲ್ಲರಿಗೂ ಸರಿಯಾದ ಪಾಠ ಹೇಳುತ್ತದೆ. ಅಷ್ಟು ಮಾತ್ರ ಈಗ ಹೇಳಬಲ್ಲೆ.

ಕಳೆದ ವಾರ ರಾಘವೇಶ್ವರ ಶ್ರೀಗಳ ಕುರಿತಂತೆ ಬೆಳಗ್ಗೆ ಕೋರ್ಟಿನ ನಿರ್ಣಯ ಬಂದಾಗ ನನ್ನ ಕಾಲುಗಳು ನೆಲದ ಮೇಲಿರಲಿಲ್ಲ. ಮಿಥಿಕ್ ಸೊಸೈಟಿಯಲ್ಲಿ ಕುಳಿತು ನನ್ನ ಓದನ್ನೆಲ್ಲಾ ಬದಿಗಿಟ್ಟು ಫೇಸ್ಬುಕ್, ಟ್ವಿಟರ್ಗಳಲ್ಲಿ ಆನಂದವನ್ನು ಹಂಚಿಕೊಂಡೆ. ನೆಮ್ಮದಿಯ ನಿದ್ದೆ ಮಾಡಬಹುದು ಅಂತ ಬಂದರೆ ನರೇಶ್ ಶೆಣೈ ಸುದ್ದಿ ಕಾಯುತ್ತಿತ್ತು. ಆರ್.ಟಿ.ಐ ಕಾರ್ಯಕರ್ತನ ಹತ್ಯೆಯ ನೆಪದಲ್ಲಿ ಕಾಂಗ್ರೆಸ್ಸು ಅವನ ಹಿಂದೆ ಬಿದ್ದಿತ್ತು. ಹೇಗೆ ಹವ್ಯಕರದ್ದೇ ಒಂದು ಗುಂಪು ರಾಘವೇಶ್ವರ ಶ್ರೀಗಳ ವಿರುದ್ಧ ನಿಂತಿತ್ತೋ ಹಾಗೆಯೇ ಅವನದ್ದೇ ಜಾತಿ ಬಾಂಧವರ ಗುಂಪೊಂದು ಅವನ ವಿರುದ್ಧ ನಿಂತಿದೆ. ಯಾರಿಗೆ ತೊಂದರೆಯಾದಾಗಲೂ ತೊಡೆ ತಟ್ಟಿ ನಿಲ್ಲುತ್ತಿದ್ದ, ಯಾರ ಕಷ್ಟದಲ್ಲೂ ಆಸರೆಯಾಗಿ ನಿಲ್ಲುತ್ತಿದ್ದ ನರೇಶ್ ಶೆಣೈ ಏಕಾಂಗಿಯಾಗಿ ಬಿಟ್ಟರಾ? ಅನ್ನಿಸಿತ್ತು. ಅವರ ಮನೆಗೆ ಹೋಗಿ ಬಂದೆ. ಅವರ ತಾಯಿಯನ್ನು ಮಾತನಾಡಿಸಿದೆ. ಗೆಳೆಯರನ್ನೆಲ್ಲಾ ಮಾತನಾಡಿಸಿದೆ. ನರೇಶ್ ನಿರಪರಾಧಿ ಎನಿಸಿತು. ನೇರವಾಗಿ ಪೊಲೀಸ್ ಕಮೀಷನರ್ ಕಚೇರಿಗೆ ಹೋದೆ. ಮಾಹಿತಿ ಸಿಗಬಹುದಾ ಅಂತ! ಏನೂ ಸಿಗಲಿಲ್ಲ. ಸೀದಾ ರೂಮಿಗೆ ಬಂದು ಯಾರಿದ್ದಾರೋ ಬಿಡ್ತಾರೋ ‘ನಿನ್ನೊಂದಿಗೆ ನಾನಿದ್ದೇನೆ’ ಅಂತ ಮುಕ್ತ ವೇದಿಕೆಗಳಲ್ಲಿ ಆತನ ಪರವಾಗಿ ನಿಂತೆ. ಅದಾದ ಮೇಲೆಯೇ ನನಗೆ ಸಮಾಧಾನ ಅನಿಸಿದ್ದು.

ರಾಘವೇಶ್ವರ ಶ್ರೀಗಳ ಪರವಾಗಿ ನಾನು ನಿಂತಾಗ ಬಾಯಿ ಬಡಕೊಂಡವರೆಲ್ಲ ಇಂದು ಬೆತ್ತಲಾಗಿ ನಿಂತಿದ್ದಾರೆ. ತಮ್ಮ ಮಾನ ಉಳಿಸಿಕೊಳ್ಳಲು ನ್ಯಾಯಾಲಯದ ತೀರ್ಪನ್ನೂ ತಿರುಚಿಟ್ಟು, ಜನರಿಗೆ ಬಡಿಸುತ್ತಿದ್ದಾರೆ. ಪತ್ರಿಕಾ ಧರ್ಮವೆಲ್ಲ ಚರಂಡಿಯಲ್ಲಿ ಹೋಮ! ಇಂದು ಅದೇ ಜನ ಮತ್ತೆ ಕೂಗಾಡುತ್ತಿದ್ದಾರೆ, ನರೇಶ್ ಪರವಾಗಿ ನಿಂತಿದ್ದಕ್ಕೆ. ನೀವು ಎಷ್ಟು ಬೇಕಾದರೂ ಅರಚಾಡಿ, ಬೇಸರವಿಲ್ಲ. ಸತ್ಯದ ಪರವಾಗಿ ನಿಲ್ಲೋದು ನಮಗಂತೂ ರೂಢಿಯಾಗಿದೆ. ನಿಲ್ಲುತ್ತೇವೆ, ಗೆಲ್ಲುತ್ತೇವೆ. ಸೋತರೆ ಒಪ್ಪಿಕೊಳ್ಳುತ್ತೇವೆ. ನಿಮ್ಮಂತೆ ಸೋಗಲಾಡಿಗಳಾಗುವುದಿಲ್ಲ!!

ಚಿತ್ರಕೃಪೆ: Yenkay

Facebook ಕಾಮೆಂಟ್ಸ್

Chakravarthy Sulibele: ನಾಡಿನ ಖ್ಯಾತ ಚಿಂತಕರೂ, ವಾಗ್ಮಿಗಳೂ, ಬರಹಗಾರರೂ ಆಗಿರುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರು, ನಿತ್ಯ ನಿರಂತರವಾಗಿ ದೇಶದ ಜನರಲ್ಲಿ ರಾಷ್ಟ್ರ ಭಕ್ತಿಯನ್ನು ಉಕ್ಕಿಸುತ್ತಾ ದೇಶಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Related Post