ಜಾತ್ರೆಗಳೆಂದರೆಯೇ ಹಾಗೆ.. ಇನ್ನಿಲ್ಲದ ಸಂಭ್ರಮ, ಇನ್ನಿಲ್ಲದ ಸಡಗರ.. ಈ ಹಬ್ಬ ಹರಿದಿನಗಳೆಂದರೆ ಮಾಮೂಲಿಯಾಗಿ ಪೂಜೆ ಪುನಸ್ಕಾರಗಳಿರುತ್ತವೆ. ಜೊತೆಗೆ ಪಾಯಸದೂಟ. ಅದು ಬಿಟ್ಟರೆ ಹೆಚ್ಚೇನೂ ಸಂಭ್ರಮವಿರುವುದಿಲ್ಲ. ಒಂದೆರಡು ದಿನಕ್ಕೆ ಅದು ಮುಗಿದು ಹೋಗುತ್ತದೆ. ಜಾತ್ರೆಯಷ್ಟು ಅಬ್ಬರ ಹಬ್ಬಗಳಲ್ಲಿರುವುದಿಲ್ಲ. ಜಾತ್ರೆಗಳೆಂದರೆ ಹಬ್ಬ ಹರಿದಿನಗಳಿಗಿಂತ ಒಂದು ತೂಕ ಹೆಚ್ಚೇ. ಕಡಿಮೆಯೆಂದರೂ ಒಂದು ವಾರದ ಸಂಭ್ರಮ, ದೇವಸ್ಥಾನದೊಳಗೆ ಉತ್ಸವ ಬಲಿಗಳು, ರಥೋತ್ಸವ, ತೆಪ್ಪೋತ್ಸವಗಳು, ಗದ್ದೆಯಿಡೀ ಹರಡಿರುವ ಸಂತೆಗಳು, ಆಟದ ಸಾಮಾನುಗಳು, ಜೈಂಟ್ ವೀಲ್-ಕೊಲಂಬಸ್’ಗಳು, ಐಸ್’ಕ್ರೀಮ್ ಚರುಮುರಿಗಳು, ಕಿವಿಗಢಚಿಕ್ಕುವ ಸುಡುಮದ್ದುಗಳು.. ಉಫ್.. ಆ ಸಂಭ್ರಮ-ಸಡಗರ ವರ್ಣಿಸಲಸದಳವು..
ನಾನು ಇಲ್ಲಿ ಹೇಳ ಹೊರಟಿರುವುದು ಪುತ್ತೂರು ಮಹಾಲಿಂಗೇಶ್ವರನ ವರ್ಷಾವಧಿ ಜಾತ್ರೆಯ ಕುರಿತಾಗಿ. ವೈಯಕ್ತಿಕವಾಗಿ ನನಗೆ ಜಾತ್ರೆಯೆಂದರೆ ಪುತ್ತೂರಿನ ಜಾತ್ರೆಯ ಹೊರತಾಗಿ ಮತ್ತಾವ ಜಾತ್ರೆ ನೆನಪಾಗಲು ಸಾಧ್ಯ?. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನವು ಪುತ್ತೂರು ಸೀಮೆಯಲ್ಲಿಯೇ ಅತ್ಯಂತ ದೊಡ್ದ ದೇವಸ್ಥಾನವಾಗಿದ್ದು ಇಲ್ಲಿನ ಜಾತ್ರೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ. ಪ್ರತೀ ವರ್ಷ ಏಪ್ರೀಲು ಬಂತೆಂದರೆ ಸಾಕು ಜಾತ್ರೆಯ ವೈಭವ ಗರಿಗೆದರಲು ಆರಂಭವಾಗುತ್ತದೆ. ಅದೇಕೋ ಗೊತ್ತಿಲ್ಲ, ಪುತ್ತೂರು ಜಾತ್ರೆಯೆಂದರೆ ವಿಪರೀತ ಎಕ್ಸೈಟ್’ಮೆಂಟ್. ಉಕ್ಕಿ ಬರುವ ಭಕ್ತಿ ಭಾವದ ಸೆಂಟಿಮೆಂಟ್. ಈ ಜಾತ್ರೆಯೆಂದರೆ ನಮಗೆ ಒಂಥರಾ ಎಂಟರ್’ಟೈನ್’ಮೆಂಟೂ ಹೌದು, ಎಂದೆಂದಿಗೂ ಬಿಡಲಾಗದ ಭಕ್ತಿ ಭಾವದ ಕಮಿಟ್’ಮೆಂಟೂ ಹೌದು. ಸಾಮಾನ್ಯವಾಗಿ ಮಾರ್ಚ್, ಏಪ್ರೀಲಿನಲ್ಲಿ ಪುತ್ತೂರು ಬಿಸಿಲಿನ ಝಳಕ್ಕೆ ಬೆವರಿ ಬಸವಳಿದಿರುತ್ತದೆ. ಆದರೆ ಜಾತ್ರೆ ಬಂತೆಂದರೆ ಸಾಕು, ಬಿಸಿಲಿನ ಝಳವೆಲ್ಲಾ ಆವಿಯಾಗಿ ಅದೇನೋ ನವೋಲ್ಲಾಸ ನಮ್ಮೊಳಗೆ ಮೂಡುತ್ತದೆ.
ಈ ಜಾತ್ರೆಯು ಪ್ರತೀ ವರ್ಷ ಏಪ್ರೀಲು ಹತ್ತರಂದು ಕೊಡಿಯೇರುವ(ಧ್ವಜಾರೋಹಣದ) ಮೂಲಕ ಆರಂಭವಾಗುತ್ತದೆ. ಅಲ್ಲಿಂದ ಹತ್ತು ದಿನಗಳ ಕಾಲ ವೈಭವದ ಜಾತ್ರೋತ್ಸವ ನಮ್ಮ ಮಹಾಲಿಂಗೇಶ್ವರನಿಗೆ. ಸಂಭ್ರಮ ಊರಿಗೂರಿಗೇ..
ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಅಂಗಣದಲ್ಲಿ ನಡೆಯುವ ಉತ್ಸವ ಬಲಿಗಳು ನಮ್ಮ ಕಣ್ಮನಗಳಿಗೆ ಮಹದಾನಂದವನ್ನು ನೀಡುತ್ತದೆ. ಕೇರಳದ ಚೆಂಡೆ, ಸ್ಯಾಕ್ಸೋ ಫೋನ್ ವಾದನ, ಸರ್ವ ವಾದ್ಯ ಮುಂತಾದವಗಳು ಮಧುರ ಅನುಭವವನ್ನು ನೀಡುತ್ತದೆ.
ನಿತ್ಯದ ಉತ್ಸವ ಬಲಿಗಳು ನಡೆದ ಬಳಿಕ ರಾತ್ರಿಯ ಹೊತ್ತಿನಲ್ಲಿ ನಡೆಯುವ ಪೇಟೆ ಸವಾರಿ ಇಲ್ಲಿಯ ಮತ್ತೊಂದು ವಿಶೇಷ. ಒಂದೊಂದು ದಿನ ಪುತ್ತೂರಿನ ಒಂದೊಂದು ಕಡೆಗೆ ಸಾಗುವ ಪೇಟೆ ಸವಾರಿಯಲ್ಲಿ ಸಾವಿರಾರು ಜನ ಭಾಗವಹಿಸುತ್ತಾರೆ. ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಿ ಭಕ್ತಿ ಭಾವದ ಪೂಜೆಯನ್ನು ತಮ್ಮ ಇಷ್ಟ ದೇವರಿಗೆ ಸಮರ್ಪಿಸುತ್ತಾರೆ. ದಾರಿ ಮಧ್ಯ ಆರತಿ, ಹಣ್ಣು-ಕಾಯಿ ಹೂಗಳನ್ನೂ ಸಹ.
ಹೀಗೆ ಮೊದಲ ಆರು ದಿನ ಉತ್ಸವ ಬಲಿ, ವಿಷು ವಿಶೇಷ ಬಲಿ, ಪೇಟೆ ಸವಾರಿ, ಚಂದ್ರಮಂಡಲ ರಥೋತ್ಸವ ಇತ್ಯಾದಿಗಳು ಯಥಾಪ್ರಕಾರವಾಗಿ ನಡೆಯುತ್ತದೆ.
ಆದರೆ ನಿಜವಾದ ಜಾತ್ರೆಯ ಗೌಜು ಗದ್ದಲ ಆರಂಭವಾಗುವುದೇ ಏಳನೇ ದಿನ ಅಂದರೆ ಏಪ್ರೀಲು ಹದಿನಾರರಂದು. ಭಂಡಾರ ಬರುವ ದಿನ ಅಂತಾನೆ ಪ್ರಸಿದ್ಧಿ ಇಲ್ಲಿ. ಸೀಮಾಧಿಪತಿಯಾಗಿರುವ ಮಹಾಲಿಂಗೇಶ್ವರನನ್ನು ಭೇಟಿ ಮಾಡುವುದಕ್ಕಾಗಿ ಪುತ್ತೂರು ಸಮೀಪದ ಬಲ್ನಾಡಿನಲ್ಲಿ ನೆಲೆಯಾಗಿರುವ ಉಳ್ಳಾಳ್ತಿ ದೈವ, ದಂಡನಾಯಕ ದೈವಗಳು ದೇವಸ್ಥಾನಕ್ಕೆ ಆಗಮಿಸುವ ದಿನ ಅದು. ಉಲ್ಲಾಳ್ತಿ ಬಲು ಕಾರಣೀಕವುಳ್ಳಂತಹ ದೈವವೆಂದು ನಮ್ಮ ಜನರ ನಂಬಿಕೆ. ಹದಿನಾರರಂದು ಇಡೀ ಪುತ್ತೂರು ಪೇಟೆ ಮಲ್ಲಿಗೆಮಯವಾಗುತ್ತದೆ, ಇಷ್ಟ ದೈವಕ್ಕೆ ದೈವಕ್ಕೆ ಬಲುಪ್ರಿಯವಾದ ಮಲ್ಲಿಗೆ ಹೂವನ್ನು ಅರ್ಪಿಸಿ ಜನರು ತಮ್ಮ ಹರಕೆಯನ್ನು ತೀರಿಸಿಕೊಳ್ಳುತ್ತಾರೆ.. ದೈವಗಳ ಭೇಟಿಯ ಬಳಿಕ, ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ನಡೆದು ಬಳಿಕ ನಯನ ಮನೋಹರವಾದಂತಹ ಕೆರೆ ಆಯನ ಸಂಪನ್ನಗೊಳ್ಳುತ್ತದೆ.
ಕೆರೆ ಆಯನ ಮುಗಿಯುವಷ್ಟರಲ್ಲೇ ಬೆಳಕು ಹರಿಯಲು ಶುರುವಾಗಿರುತ್ತದೆ. ಹದಿನೇಳಕ್ಕೆ ಜಾತ್ರೆಯ ಪ್ರಮುಖ ಆಕರ್ಷಣೆಯಾದ ದರ್ಶನ ಬಲಿ ಮತ್ತು ರಥೋತ್ಸವ. ಇಲ್ಲಿನ ದರ್ಶನ ಬಲಿಯೆಂದರೆ ಎಂಥವನ ಎದೆಯೂ ಒಂದು ಕ್ಷಣ ಝಲ್ಲೆನಿಸದೇ ಇರದು, ಒಂದು ಕ್ಷಣವಾದರೂ ಮನಸ್ಸು ರೋಮಾಂಚನಗೊಳ್ಳದೇ ಇರದು. ಅಂತಹಾ ದರ್ಶನ ಬಲಿ ಪುತ್ತೂರು ಮಹಾಲಿಂಗೇಶ್ವರನದ್ದು. ಕರ್ಣಗಳಿಗೆ ಇಂಪಾದ ಅನುಭವವನ್ನು ಕೊಡುವ ಕೇರಳ ಚೆಂಡೆಯ ಸ್ವರ, ಸುಮಧುರ ಸಂಗೀತವನ್ನು ಹೊರಚೆಲ್ಲುವ ಸ್ಯಾಕ್ಸೋಫೋನ್, ಶಂಖ ಸರ್ವವಾದ್ಯಗಳ ನಾದ ಮತ್ತು ಕುಂಬಳೆ ಅಡಿಗರ ತಲೆಯಲ್ಲಿ ಆಸೀನನಾಗಿರುವ ಭವ್ಯವಾದ ಮಹಾಲಿಂಗೇಶ್ವರನ ಉತ್ಸವ ಮೂರ್ತಿ. ಬಹುಷಃ ಪುತ್ತೂರಿಗರಿಗೆ ಅದರಷ್ಟು ಮಹದಾನಂದದ ಸನ್ನಿವೇಶ ಮತ್ತೊಂದು ಇರಲಿಕ್ಕಿಲ್ಲ. ದರ್ಶನ ಬಲಿಯ ಬಳಿಕ ಯಥಾಪ್ರಕಾರವಾಗಿ ಬಟ್ಟಲು ಕಾಣಿಕೆ ಇನ್ನಿತರ ಕಟ್ಟು ಕಟ್ಟಲೆಗಳು ನಡೆದು ಸಂಜೆಯಾಗುತ್ತಲೇ ಅತ್ಯಾಕರ್ಷಕ ರಥೋತ್ಸವ ಸಂಪನ್ನಗೊಳ್ಳುತ್ತದೆ.
ಅತ್ಯಪೂರ್ವ ವಾಸ್ತು ಶಿಲ್ಪವನ್ನು ಹೊಂದಿರುವ ಬ್ರಹ್ಮರಥವನ್ನು ದೇವರು ಏರುವಾಗ ರಥಬೀದಿಯ ಇಕ್ಕೆಲಗಳಲ್ಲಿ ಲಕ್ಷಕ್ಕೂ ಮಿಕ್ಕಿ ಜನ ಸೇರಿರುತ್ತಾರೆ. ಜನಜಂಗುಳಿಯ ಮಧ್ಯದಲ್ಲಿ, ಜಗಮಗಿಸುವ ವಿದ್ಯುದೀಪಾಲಂಕೃತವಾದ, ಪುಷ್ಪಾಲಂಕೃತದಿಂದ ಶೋಭಿಸುತ್ತಿರುವ ಬ್ರಹ್ಮರಥದಲ್ಲಿ ಆಸೀನನಾಗಿರುವ ಮಹಾಲಿಂಗೇಶ್ವರನನ್ನು ನೋಡುವುದೇ ನಮ್ಮ ಪೂರ್ವ ಜನ್ಮದ ಪುಣ್ಯ. ಅಂತಹ ವೈಭವೋಪೇತ ಬ್ರಹ್ಮ ರಥೋತ್ಸವ ಆಸ್ತಿಕರ ಮನಸ್ಸಿಗೆ ಹಿತವಾದ ಅನುಭವವನ್ನು ನೀಡುವುದು ಸುಳ್ಳಲ್ಲ.
ಜೊತೆ ಜೊತೆಗೇನೆ, ಜಾತ್ರೆ ಗದ್ದೆಯಲ್ಲಿ ಶಾಪಿಂಗು, ಗೋಬಿ, ಚರುಮುರಿ ಈಟಿಂಗು, ಜೈಂಟ್ ವೀಲ್, ಕೊಂಬಸ್’ನಲ್ಲಿ ಎನಂಜಾಯಿಂಗು ಎಲ್ಲವೂ ನಡೆಯುತ್ತದೆ. ಅಬ್ಬಬ್ಬಾ… ಈ ಎಲ್ಲಾ ಸಂಭ್ರಮಗಳು ಅದರಲ್ಲಿ ಪಾಲ್ಗೊಂಡವನಿಗಷ್ಟೇ ಗೊತ್ತು.
ರಥೋತ್ಸವ ಸಂಪನ್ನಗೊಂಡ ಬಳಿಕ ಉಳ್ಳಾಳ್ತಿ ದಂಡನಾಯಕ ದೈವಗಳ ಬೀಳ್ಕೊಡುಗೆ, ಶಯೋನೋತ್ಸವ ಜರಗುತ್ತದೆ. ಮರುದಿನ ಬೆಳಗ್ಗೆ ಕವಾಟೋಧ್ಘಾಟನೆಯಾದ ವರ್ಷಕ್ಕೊಮ್ಮೆ ನಡೆಯುವ ತುಲಾಭಾರ ಸಮರ್ಪಣೆಯಾಗುತ್ತದೆ. ಸಂಜೆ ಅಭೂತಪೂರ್ವ ಅವಭೃತ ಸ್ನಾನಕ್ಕಾಗಿ ವೀರಮಂಗಲ ಎಂಬಲ್ಲಿಗೆ ಹನ್ನೊಂದು ಕಿಲೋಮೀಟರುಗಳ ಸವಾರಿ ಸಾಗುತ್ತದೆ. ಕುಮಾರಧಾರೆಯ ತಟದಲ್ಲಿ ಜಳಕವಾದ ಬಳಿಕ ಮರಳಿ ದೇವಸ್ಥಾನಕ್ಕೆ ಬಂದು ಕೊಡಿಯಿಳಿಯುವುದರೊಂದಿಗೆ (ಧ್ವಜಾವರೋಹಣ) ಜಾತ್ರೋತ್ಸವ ಸಂಪನ್ನಗೊಳ್ಳುತ್ತದೆ.
ಮೊದಲೇ ಹೇಳಿದಂತೆ ಜಾತ್ರೆಯೆಂಬುದು ಜನರ ಭಕ್ತಿಭಾವದ ಉತ್ಸವ. ಬರೀ ಕಮಿಟ್’ಮೆಂಟ್ ಕೂಡಾ ಇದಲ್ಲ. ತನ್ನ ಊರಿನ ಬಗೆಗೆ, ಊರಿನ ಜೊತೆಗೆ ಬೆಸೆದುಕೊಂಡಿರುವ ಸಂಸ್ಕೃತಿಯ ಕುರಿತಾಗಿ ನಮ್ಮ ಮನಸ್ಸೊಳಗೆ ಇರುವ ಸೆಂಟಿಮೆಂಟ್ ಕೂಡಾ ಹೌದು. ಅಂದ ಹಾಗೆ ಹತ್ತೂರಿನ ಜನ ಒಟ್ಟಾಗಿ ಮಾಡುವ ಪುತ್ತೂರ ಜಾತ್ರೆಯು ಈಗಾಗಲೇ ಆರಂಭವಾಗಿದೆ. . ಊರ ಪರವೂರ ಭಕ್ತಾದಿಗಳ ಸ್ವಾಗತಕ್ಕೆ ಪುತ್ತೂರು ಸಜ್ಜಾಗಿದೆ. ವಯಸ್ಸು ಮತ್ತು ಸ್ಥಾನಮಾನಗಳನ್ನು ಮೀರಿ ಮನಸ್ಸು ಎಕ್ಸೈಟ್’ಮೆಂಟಿನಿಂದ ಕುಣಿದಾಡುತ್ತಿದೆ. ಆರಾಧ್ಯ ದೇವರಾದ ಮಹಾಲಿಂಗೇಶ್ವರನ ಭಕ್ತಿ ಭಾವದಲ್ಲಿ ಮಿಂದೇಳುತ್ತಿದೆ.
ಚಿತ್ರ ಕೃಪೆ: Yen Kay, Akshay Nayak
Facebook ಕಾಮೆಂಟ್ಸ್