ಸುತ್ತಮುತ್ತ ಎಲ್ಲರೂ ಚುಚ್ಚಿ
“ಹುಚ್ಚಿ” “ಹುಚ್ಚಿ” ಎಂದು ಜರಿಯುತಿಹರು
ಕಲ್ಲು ತೂರುತ್ತಿಹರು ಮಕ್ಕಳೊಂದಿಗೆ ಯುವಕರೂ
ಥಳಿಸಿ ಅವಾಚ್ಯವಾಗಿ ನಿಂದಿಸುತಿಹರು
ನನ್ನ ಮನದ ಅಳಲನ್ನು ಅರಿವರೆ ಇವರು?
ಬದುಕಿನ ನೋವುಗಳ ನೆನೆಯುತ್ತ
ಸೋತು ಅಳುತಿಹೆನು ದಿನ ರಾತ್ರಿ
ಮುದುಡಿ ಹಳೆಯ ಗೊಣಿ ಚೀಲದಡಿಯಲ್ಲಿ
ಕ್ರೂರ ನೆನಪುಗಳು ಕೆಣಕುತಿಹವು
ಹರಿದು ಬತ್ತಿದ ಕಣ್ಣೀರಿನ ಸೆಲೆಯಲ್ಲಿ
ಚಿಂತೆಯ ಅಗ್ನಿಯಲ್ಲಿ ಬೇಯುತಿಹವು
ನೋವುಗಳು ಸುರುಳಿಯಾಗಿ ಬಿಚ್ಚುತಿಹವು
ಒಬ್ಬಳೇ ಮಗಳು ನಾನು ಅಂದು ಚಿಕ್ಕವಳು
ಅಫಘಾತದಲ್ಲಿ ಅಪ್ಪ ಅಮ್ಮ ತೀರಿಕೊಂಡರು
ಅನಾಥ ಮಗುವೆಂದು ಅತ್ತೆ ಮಾವ ಸಾಕಿದರು
ಆಳಿಗಿಂತಲೂ ಕಡೆಯಾಗಿ ಬೆಳೆಸಿದರು
ಬಿದಿಗೆ ಚಂದ್ರನಂತೆ ಬೆಳೆಯುತಿರಲು
ವಾತ್ಸಲ್ಯದಿಂದ ಎತ್ತಿ ಮುದ್ದಾಡಿದರು ಹಲವರು
ಮುಗ್ಧ ಮನಸು ಆಗ ತಿಳಿಯದೆ ಹೇಸಿತು
ಅಪ್ಪಿ ವಿಚಿತ್ರವಾಗಿ ಮುದ್ದಾಡಿದಾಗ ಕೆಲವರು
ಹರೆಯದಲಿ ಸುಂದರತೆ ಮುಳುವಾಯಿತು
ವಯಸ್ಸಿನಂತರವಿಲ್ಲದೇ ಜನಜಂಗುಳಿಯಲ್ಲಿ
ಮೈಮುಟ್ಟಿ ಚಪಲ ತೀರಿಸಿಕೊಳ್ಳುತ್ತಿದ್ದರು
ಬಿಡದೇ ಚುಡಾಯಿಸುವ ಬೀದಿ ಕಾಮಣ್ಣರು
ತಿಳಿವರೆ?ನನ್ನೀ ಜೀವನದ ಕರಾಳ ದಿನವನು
ಬಲವಂತವಾಗಿ ಎತ್ತಿ ಹಾಕಿಕೊಂಡು ಅಂದು
ದುರುಳ ಕಾಮುಕ ಅತ್ಯಾಚಾರಿಗಳು
ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದರು
ಹಸಿದ ರಣಹದ್ದಿನಂತೆ ಹರಿಹರಿದು ತಿಂದರು
ಅಮಾನುಷ ಅತ್ಯಾಚಾರಿ ಕಾಮಾಂಧರು
ಸಾಲದೆಂಬಂತೆ ತಲೆಯ ಮೇಲಣ ಕಲ್ಲೆಸೆದರು
ಮಾನಸೀಕ ಆಘಾತ “ಹುಚ್ಚಿ” ಪಟ್ಟ ಕಟ್ಟಿತು
ಸಾಯದೇ ಬದುಕಿರುವ “ಹುಚ್ಚಿ” ನಾನು
ತೆರೆದ ಬಾನದಡಿಯಲ್ಲಿ ಮತ್ತೆ ಮತ್ತೆ
ಕಾಮುಕರ ವಿಕೃತಿಗೆ ಬಲಿಯಾಗಿ
ಬದುಕುತ್ತಿರುವೆ ಅತ್ಯಾಚಾರಿಗಳ ದೌರ್ಜನ್ಯದಡಿ
ಎಲ್ಲಿದೆ ರಕ್ಷಣೆ?ಎಲ್ಲಿದೇ ಹೆಣ್ಣಿನ ಮಾನಕ್ಕೆ ಬೆಲೆ?
ಅಟ್ಟಹಾಸದಿ ನಗುತಿಹರು ಕಾಮಾಂಧರು
ದುರುಳರ ವಿಕೃತ ಕೃತ್ಯಕ್ಕೆ
ತಲೆತಗ್ಗಿಸುತಿಹರು ಸಜ್ಜನರು
ಬನ್ನಿ ಮಹಿಳೆಯರೇ ಕಟ್ಟೋಣ
ಸಂಘಟಿತರಾಗಿ ನಾರಿ ಶಕ್ತಿ
ವಿಕೃತ ಕಾಮುಕರ ಸದೆಬಡೆಯಲು
ಅಮಾನವೀಯ ಪೈಶಾಚಿಕ ಕೃತ್ಯಕ್ಕೆ ಅಂತ್ಯ ಹಾಡಲು
ಪ್ರಕಾಶ ತದಡಿಕರ
prakasht512@gmail.com
Facebook ಕಾಮೆಂಟ್ಸ್