X

ಮುಖ್ಯವಾಗುವುದು ಕೆಲಸವೇ ಹೊರತು ನಿಮ್ಮ ಹೆಸರಲ್ಲ.!

ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಗಳು ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇವಸ್ಥಾನವೊಂದರ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕಿಸಿಕೊಂಡು ಸ್ಥಳೀಯ ಹಿಂದೂ ಭಕ್ತಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಿಲ್ಲಾಧಿಕಾರಿಗಳು ಅನ್ಯಮತೀಯರಾಗಿರುವುದರಿಂದ ಮತ್ತೊಂದು ಧರ್ಮದ ಉತ್ಸವಾದಿಗಳ ಆಮಂತ್ರಣದಲ್ಲಿ ಅವರ ಹೆಸರು ಹಾಕಬಾರದು, ಅವರು ಆಮಂತ್ರಣಕಾರರಾಗಬಾರದೆಂಬುದು ಇಲ್ಲಿಯ ವಿವಾದ. ಒಂದು ಕಡೆ ಭಕ್ತಾದಿಗಳು, ಮತ್ತೊಂದು ಕಡೆ ಜಿಲ್ಲಾಧಿಕಾರಿಗಳು, ಎರಡೂ ಕಡೆಯವರು ತಮ್ಮ ಪಟ್ಟು ಬಿಡದೇ ಇದ್ದಿದ್ದರಿಂದ, ಸ್ಥಳೀಯ ಶಾಸಕರೂ ಘರ್ಜಿಸಿದ್ದರಿಂದ ವಿವಾದ ತಾರಕಕ್ಕೇರಿತು. ಎಷ್ಟೆಂದರೆ ಪುತ್ತೂರೆಂಬ ಸಣ್ಣ ಊರಿನ ದೇವಸ್ಥಾನದ ಬಗ್ಗೆ “Times Now” ಎನ್ನುವ ರಾಷ್ಟ್ರೀಯ ಸುದ್ದಿ ವಾಹಿನಿಯಲ್ಲಿ ಅರ್ಧ ಗಂಟೆಯ ಚರ್ಚೆಯೇ ನಡೆಯಿತು. ಎಷ್ಟು ಮಾತ್ರಕ್ಕೂ ಜಿಲ್ಲಾಧಿಕಾರಿಗಳು ತಮ್ಮ ಪಟ್ಟು ಬಿಡದೇ ಇದ್ದಿದ್ದರಿಂದ ವಿಷಯ ಹೈಕೋರ್ಟ್ ಮೆಟ್ಟಿಲೇರಿತು. ಬರ ಪರಿಹಾರ, ರೈತರ ಆತ್ಮಹತ್ಯೆ, ಬಜೆಟ್ ಮುಂತಾದ ವಿಷಯಗಳ ಕುರಿತು ಚರ್ಚೆಗಳಾಗಬೇಕಿದ್ದ ವಿಧಾನ ಮಂಡಲದಲ್ಲೂ ಈ ವಿಷಯ ಚರ್ಚೆಗೆ ಬಂತು. ಡಿ.ಸಿ ಸಾಹೇಬ್ರು ಮನಸ್ಸು ಮಾಡಿದ್ದಿದ್ದರೆ, ಬಹುಸಂಖ್ಯಾತರ ಭಾವನೆಗೆ ಬೆಲೆ ಕೊಟ್ಟು, ನನ್ನ ಹೆಸರಿರದಿದ್ದರೆ ಪರವಾಗಿಲ್ಲ, ಜಾತ್ರೆ ಎಂದಿನಂತೆ ನಡೆದರೆ ಆಯ್ತು ಎಂದು ಶುರುವಾತಿನಲ್ಲಿಯೇ ವಿವಾದವನ್ನು ತಣ್ಣಗಾಗಿಸಬಹುದಿತ್ತು. ದುರಾದೃಷ್ಟ.. ಅವರು ಹಾಗೆ ಮಾಡಲಿಲ್ಲ.

ಇರಲಿ ಬಿಡಿ. ಅದು ನಮಗೆ ಬೇಡದ ಸಂಗತಿ ಸದ್ಯಕ್ಕೆ. ನಾನಿಲ್ಲಿ ಹೇಳ ಹೊರಟಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಂಟಾಗಿರುವ ಕೃತಕ ಮರಳು ಅಭಾವದ ಕುರಿತಾಗಿ..

ದಕ್ಷಿಣ ಕನ್ನಡ… ಮರಳಿನ ವಿಚಾರದಲ್ಲಿ ದಕ್ಷಿಣ ಕನ್ನಡದಷ್ಟು ಸಂಪದ್ಭರಿತ ಜಿಲ್ಲೆ ರಾಜ್ಯದಲ್ಲೇ ಮತ್ತೊಂದು ಇಲ್ಲ. ಇಲ್ಲಿಯಷ್ಟು ಕಡಿಮೆ ಕ್ರಯಕ್ಕೆ ಅತ್ಯುತ್ತಮ ಗುಣಮಟ್ಟದ ಮರಳು ಬೇರೆಲ್ಲೂ ಸಿಗದು. ಇಲ್ಲಿಯ ಮರಳಿಗೆ ಬೆಂಗಳೂರು,ಮೈಸೂರು, ತಿರುವನಂತಪುರ ಮುಂತಾದೆಡೆಯಿಂದ ಇನ್ನಿಲ್ಲದ ಬೇಡಿಕೆಯಿದೆ. ಲೋಡ್’ವೊಂದಕ್ಕೆ ಲಕ್ಷಾಂತರ ರೂಪಾಯಿ ತೆತ್ತಾದರೂ ಇಲ್ಲಿಂದ ಮರಳನ್ನು ಕೊಂಡೊಯ್ಯುವವರಿದ್ದಾರೆ. ಇಲ್ಲಿನವರು ಉಪಯೋಗಿಸಿ ಹೊರಗಿನವರು ಕೊಡೊಯ್ದ ಬಳಿಕವೂ, ಮರಳಿನ ವಿಚಾರದಲ್ಲಿ ಇಲ್ಲಿನ ನದಿಗಳ ಒಡಲು ಎಂದಿಗೂ ಬರಿದಾಗದು. ಅಷ್ಟು ಹೇರಳ ಪ್ರಮಾಣದಲ್ಲಿ ಇಲ್ಲಿ ಮರಳಿದೆ. ಅಷ್ಟೊಂದು ಸಂಪದ್ಭರಿತವಾದ ಜಿಲ್ಲೆಯಲ್ಲಿ ಇವತ್ತು ಹಿಡಿ ಮರಳಿಗೂ ತತ್ವಾರ, ಆರು ಸಾವಿರದಲ್ಲಿ ಸಿಗುತ್ತಿದ್ದ ಮರಳಿಗೆ ಹನ್ನೆರಡು-ಹದಿಮೂರು ಸಾವಿರ ರೂಪಾಯಿ. ತುತ್ತು ಕೈಯಲ್ಲಿದ್ದರೂ ಬಾಯಿಗಿಡಲಾರದಂತಹ ಸ್ಥಿತಿ ಇಲ್ಲಿನ ಜನರದ್ದು.

ಯಾಕೆ ಇಂತಹ ಸ್ಥಿತಿ ಬಂತು? ಯಾಕೆ ಅಂದರೆ ಸರಕಾರದ ಅಸಮರ್ಪಕ ಮರಳು ನೀತಿ. ಮರಳು ದಂಧೆಕೋರರ ಕಿತಾಪತಿ. ಹೌದು. ಎರಡು ತಿಂಗಳಿನಿಂದ ಜಿಲ್ಲೆಯಾದ್ಯಂತ ಮರಳಿನ ಕೊರತೆಯುಂಟಾಗಿ ಕಾಮಗಾರಿಗಳು ಸ್ಥಗಿತಗೊಂಡು ಕಾರ್ಮಿಕರೆಲ್ಲಾ ಬೀದಿಗಿಳಿಯಲು ಕಾರಣ ಸರಕಾರದ ಅಸಮರ್ಪಕ ಮರಳು ನೀತಿ ಕಾರಣವೇ ಹೊರತು ಮತ್ತೇನಲ್ಲ. ಜಿಲ್ಲೆಯಾದ್ಯಂತ ಮರಳು ಗಣಿಗಾರಿಕೆಯ ಲೈಸೆನ್ಸ್ ನವೀಕರಿಸದೇ ಇದ್ದಿದ್ದರಿಂದ ಜನವರಿ ಹದಿನೈದಕ್ಕೆಯೇ ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆ ಬ್ಯಾನ್ ಆಗಿತ್ತು. ಅದಾಗಿ ತಿಂಗಳು ಎರಡಾಯ್ತು, ಸರಕಾರವಾಗಲೀ ಜಿಲ್ಲಾಡಳಿತವಾಗಲೀ ಸಮಸ್ಯೆ ಪರಿಹಾರಕ್ಕೆ ಇನ್ನೂ ಪ್ರಯತ್ನಿಸಿರುವಂತೆ ಕಾಣುತ್ತಿಲ್ಲ.

ಇದೆಲ್ಲದರ ಪರಿಣಾಮವಾಗಿ ಸಾವಿರಾರು ಕೂಲಿ ಕಾರ್ಮಿಕರು , ಬಿಲ್ಡರ್’ಗಳು ಕೆಲಸ ಕಳೆದುಕೊಂಡಿದ್ದಾರೆ, ಆಲ್ರೆಡಿ ಬಿದ್ದಿದ್ದ ರಿಯಲ್ ಎಸ್ಟೇಟ್ ಉದ್ಯಮ ಮತ್ತೆ ಪಾತಾಳಕ್ಕಿಳಿಯುತ್ತಿದೆ. ಹಾಗೇ ಅಲೋಚನೆ ಮಾಡಿ, ಸಾಮಾನ್ಯವಾಗಿ ಕಟ್ಟಡ ಕಾರ್ಮಿಕರು ಉತ್ತರ ಭಾರತದಿಂದಲೋ ಉತ್ತರ ಕರ್ನಾಟಕದಿಂದಲೋ ಬಂದವರಾಗಿರುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಭಾರಿ ಬರ ಬೇರೆ. ಈ ಕಾರ್ಮಿಕರಲ್ಲಿ ಗುಳೆ ಬಂದವರೇ ಹೆಚ್ಚು. ಒಂದು ದಿನ ಕೆಲಸವಿಲ್ಲ ಎಂದರೆ ಬಾಯಿ ಬಾಯಿ ಬಡಿದುಕೊಳ್ಳುವ ಸ್ಥಿತಿ ಅವರದ್ದು. ಅಂತಹ ಸಾವಿರಾರು ಮಂದಿ ಕೆಲಸವಿಲ್ಲದೆ ಪರಿತಪಿಸುತ್ತಿದ್ದಾರೆ. ಕಾರ್ಮಿಕರು ಮಾತ್ರವಾ? ಮರಳು ಸಪ್ಲೈಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಲಾರಿ ಡ್ರೈವರುಗಳು, ಅವರ ಮನೆಯವರಿಗೂ ಇದೇ ಚಿಂತೆ “ಯಾವಾಗ ಬ್ಯಾನ್ ತೆರವಾಗುತ್ತದೆ” ಎಂದು. ಯಾವುದೇ ಕಾಮಗಾರಿಗಳಲ್ಲಿ ಮರಳಿಲ್ಲದೆ ಬೇರೆ ಯಾವುದಾದರೂ ಇದೆಯಾ? ಕೆಂಪು ಕಲ್ಲು, ಜಲ್ಲಿ ಮತ್ತು ಸಿಮೆಂಟ್, ಕಬ್ಬಿಣದ ಉದ್ಯಮಕ್ಕೂ ಬಹಳ ಹೊಡೆತ ಬಿದ್ದಿದೆ. ಮರಳಿಲ್ಲದೆ ಸ್ಟ್ರಕ್ಚರ್ ಮತ್ತು ಸಾರಣೆಯ ಕೆಲಸಗಳು ಸಾಗದೇ ಇರುವುದರಿಂದ ಟೈಲ್ಸ್, ಗ್ರಾನೈಟ್ ಕೆಲಸಗಳು, ಪೈಂಟಿಂಗ್ ಕೆಲಸಗಳಾವುದೂ ಸಾಗುತ್ತಿಲ್ಲ. ಇದರಿಂದ ಒಬ್ವಿಯಸ್ಲಿ(obviously) ಟೈಲ್ಸ್, ಪೈಂಟಿಂಗ್ ಮಾರಾಟಗಳೂ ಕುಸಿತ ಕಂಡಿವೆ, ಅದರ ಕೆಲಸಗಾರರೂ ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಪ್ಲಂಬರುಗಳು. ಎಲೆಕ್ಟ್ರಿಕಲ್ ಕೆಲಸದವರ ಕಥೆಯೂ ಇದೇ. ಇದೆಲ್ಲದರ ಪರಿಣಾಮ ಕಾಂಟ್ರಾಕ್ಟರುಗಳು , ಬಿಲ್ಡರುಗಳು ತಲೆ ಮೇಲೆ ಕೈ ಇಟ್ಟುಕೊಳ್ಳುವ ಹಾಗಾಗಿದೆ. ಒಟ್ಟಿನಲ್ಲಿ ಮರಳು ಗಣಿಗಾರಿಕೆಯ ಮೇಲಿನ ನಿಷೇಧದಿಂದಾಗಿ ರಾಜ್ಯದ ಆರ್ಥಿಕ ವ್ಯವಸ್ಥೆಯ ಮೇಲೆಯೇ ಹೊಡೆತ ಬಿದ್ದಿದೆ. ಆದರೂ ಹೇಳುವವರು ಕೇಳುವವರು ಯಾರೂ ಇಲ್ಲ,ಇವತ್ತು ಶುರುವಾಗುತ್ತದೆ, ನಾಳೆ ಶುರುವಾಗುತ್ತದೆ ಎಂದು ಕಾಗೆ ಹಾರಿಸುವವರನ್ನು ಬಿಟ್ಟರೆ.

ಪಾಪ… ಯಾರೋ ಒಬ್ಬ ಬಡವ, ತನ್ನ ಕನಸಿನ ಮನೆಯನ್ನು ನಿರ್ಮಾಣ ಮಾಡಿ ಆದಷ್ಟು ಬೇಗ ಪ್ರವೇಶವಾಗಬೇಕೆಂದು ನಿಶ್ಚಯಿಸಿಕೊಂಡಿರುತ್ತಾನೆ. ತನಗೆ ಸಾಮರ್ಥ್ಯವಿಲ್ಲದಿದ್ದರೂ, ಒಂದು ತಿಂಗಳಲ್ವಾ ಎಂದು ಲೋಡ್ ಒಂದಕ್ಕೆ ೧೩ ಸಾವಿರ ಕೊಟ್ಟಾದರೂ ಕೆಲಸ ಮುಂದುವರೆಸುತ್ತಾನೆ. ಆದರೆ ತಿಂಗಳು ಒಂದಲ್ಲ ಎರಡಾದರೂ ಬ್ಯಾನ್ ತೆರವಾಗುವ ಲಕ್ಷಣವೇ ಇಲ್ಲದಿದ್ದರೆ ಆತನೇನು ಮಾಡಬೇಕು? ಮತ್ತಿನ್ಯಾರೋ ಮಳೆ ಬರುವ ಮುನ್ನ ಸ್ಲಾಬ್ ಹಾಕಿ ಬಿಡಬೇಕು ಎಂದು ಅದಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿರುತ್ತಾನೆ, ಮರಳಿಲ್ಲದೆ ಆತ ಸ್ಲಾಬ್ ಹಾಕುವುದಾದರೂ ಹೇಗೆ? ಮನೆ ಕಟ್ಟಲು ಸಾಲ ಮಾಡಿ ಬ್ಯಾಂಕಿಗೆ ಬಡ್ಡಿ ಕಟ್ಟುವವನ ಪಾಡೇನಾಗಬೇಕು? ಒಬ್ಬ ಸಾಮಾನ್ಯನ ಕತೆಯೇ ಹೀಗಾದರೆ ಇಂಜಿನಿಯರುಗಳ, ಕಾಂಟ್ರಾಕ್ಟರುಗಳ, ದೊಡ್ಡ ದೊಡ್ಡ ಕಂಪನಿಗಳ ಕತೆಯೇನಾಗಬೇಕು?

ಒಂದು ರೀತಿಯಲ್ಲಿ ಇದು ಸರಕಾರವೇ ಅಕ್ರಮಗಳಿಗೆ ಅನುವು ಮಾಡಿ ಕೊಟ್ಟಂತಲ್ಲವೇ? ಮರಳಿಗೆ ಇನ್ನಿಲ್ಲದ ಬೇಡಿಕೆಯಿರುವಾಗ, ಒಂದಕ್ಕೆ ಎರಡು ರೇಟು ಸಿಗುತ್ತದೆ ಎನ್ನುವುದು ಕನ್’ಫರ್ಮ್ ಆದಾಗ ಮರಳು ಸಾಗಾಟವನ್ನೇ ದಂಧೆಯಾಗಿ ಮಾಡಿಕೊಂಡವರು ರಾತ್ರೋ ರಾತ್ರಿ ಮರಳು ಸಾಗಿಸದೆ ಬಿಟ್ಟಾರೇ? ಅದನ್ನು ತಡೆಯುವ ನಿಟ್ಟಿನಲ್ಲಿ ಎಲ್ಲೋ ಕೆಲವೆಡೆ ಐದಾರು ಲಾರಿಗಳನ್ನು ಹಿಡಿದಿದ್ದು ಬಿಟ್ಟರೆ ಬೇರೇನು ಮಾಡಿದೆ ಜಿಲ್ಲಾಡಳಿತ? ಅಷ್ಟೆಲ್ಲಾ ಉಪದ್ರಗಳಿಗಿಂತ ಶೀಘ್ರ ಸಮಸ್ಯೆ ಪರಿಹಾರಕ್ಕೆ ಮುಂದಾಗಬಹುದಿತ್ತಲ್ಲಾ? ಎಲ್ಲವೂ ಸಕ್ರಮವಾಗಿರುವಾಗಲೂ ಅಕ್ರಮ ಮಾಡದವರು ಇರುವುದಿಲ್ಲ ಎಂದು ನಾನು ಹೇಳುತ್ತಿಲ್ಲ. ಆದರೆ ಯಾರೋ ಮಾಡುವ ತಪ್ಪುಗಳಿಗೆ ಏಕೆ ಎಲ್ಲರಿಗೂ ಶಿಕ್ಷೆ? ಅಷ್ಟಕ್ಕೂ ಇದು ಈ ವರ್ಷ ಹುಟ್ಟಿಕೊಂಡ ಸಮಸ್ಯೆಯೇನಲ್ಲಾ. ಕಳೆದ ವರ್ಷವೇ ಮರಳಿನ ಕೃತಕ ಅಭಾವವುಂಟಾಗಿ ಒಂದು ಲೋಡ್’ನ ದರ ಹದಿನೈದು ಸಾವಿರವಾಗಿತ್ತು. ಅದರ ನಂತರವೂ ಎಚ್ಚೆತ್ತುಕೊಳ್ಳದೆ ಈಗ ನೆಗಡಿಯಾಯ್ತೆಂದು ಮೂಗನ್ನೇ ಕೊಯ್ಯುತ್ತಿರುವುದೇಕೆ?

ಮಾರ್ಚ್ ಹದಿನೈದರ ಒಳಗೆ ಮರಳು ಬ್ಯಾನ್ ತೆರವುಗೊಳಿಸಲಾಗುವುದು ಎಂದು ಮಾನ್ಯ ಜಿಲ್ಲಾಧಿಕಾರಿಗಳು ಹೇಳಿದ್ದರು. ಎರಡು ವಾರಗಳಲ್ಲಿ ಮತ್ತೆ ಮರಳು ದೊರೆಯುತ್ತದೆ ಎಂದು ಉಸ್ತುವಾರಿ ಸಚಿವರು ಇತ್ತೀಚೆಗಷ್ಟೇ ಹೇಳಿದ್ದರು. ಈಗ ಹದಿನೈದಲ್ಲ, ಇಪ್ಪತ್ತು ತಾರೀಖು ಕಳೆಯಿತು, ಇನ್ನೂ ಮರಳಿನ ಸುದ್ದಿಯೇ ಇಲ್ಲ. ರೋಸಿ ಹೋಗಿರುವ ಜನ ಬೀದಿಗಿಳಿದಿದ್ದಾರೆ. ಮತ್ತೆ ಮರಳು ದೊರೆಯುವಂತೆ ಮಾಡುವುದು ಡಿ.ಸಿಯೊಬ್ಬರದೇ ಜವಾಬ್ದಾರಿಯಲ್ಲ. ಲೈಸೆನ್ಸ್ ನವೀಕರಿಸಿ ಕೊಡುವುದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕೆಲಸ. ಆದರೆ ಜಿಲ್ಲಾಡಳಿತದ ಮುಖ್ಯಸ್ಥರಾಗಿರುವ ಜಿಲ್ಲಾಧಿಕಾರಿಗಳ ಪಾತ್ರ ಇಲ್ಲಿ ಮಹತ್ವದ್ದಾಗುತ್ತದೆ. ಅರ್ನಾಬ್ ಗೋಸ್ವಾಮಿ ಮೊನ್ನೆ ಡಿ.ಸಿಗೆ “You have all the right to be the host for the annual festival at Mahalingeshwar Temple” ಅಂತ ಅಭಯ ಕೊಟ್ರು. May be or may not be. But You have all the power to solve this(Sand) problem! ಸ್ವಪ್ರತಿಷ್ಟೆ ಕಾಪಾಡುವಲ್ಲಿ ಹಠ ಸಾಧಿಸುವ ಡಿ.ಸಿ ಸಾಹೇಬರು ಈ ಸಮಸ್ಯೆ ಪರಿಹರಿಸುವಲ್ಲಿಯೂ ಹಠ ಸಾಧಿಸಲಿ. ಇಲ್ಲಿ ಅವರ ಹೆಸರು ಮುಖ್ಯವಾಗಬೇಕೇ ಹೊರತು ಯಾವುದೇ ಆಮಂತ್ರಣ ಪತ್ರಿಕೆಯಲ್ಲಲ್ಲ. ಎಲ್ಲಕ್ಕಿಂತ ಕಡೆಗೆ ಮುಖ್ಯವಾಗುವುದು ನಾವು ಮಾಡುವ ಕೆಲಸವೇ ಹೊರತು ಹೆಸರಲ್ಲ.

ಡಿ.ಸಿ ಸಾಹೇಬ್ರೇ.. ಜಿಲ್ಲೆಯ ಸಾವಿರಾರು ಕಾರ್ಮಿಕರು, ಇಂಜಿನಿಯರುಗಳು, ಕಾಂಟ್ರಾಕ್ಟರುಗಳು ಮತ್ತು ಬಿಲ್ಡರುಗಳ ಪರವಾಗಿ ನನ್ನದೊಂದು ಕಳಕಳಿಯ ವಿನಂತಿ. ಅತೀ ಶೀಘ್ರವಾಗಿ ಮರಳಿನ ಮೇಲಿನ ಬ್ಯಾನ್ ಅನ್ನು ತೆರವು ಮಾಡಿ. ಅಕ್ರಮಗಳನ್ನು ತಡೆಯಲು ಸೂಕ್ತ ವ್ಯವಸ್ಥೆಯನ್ನು ಮಾಡಿ, ಮೊದಲಿನ ದರದಲ್ಲೇ ಮರಳು ದೊರೆಯುವಂತೆ ಮಾಡಿ. ಅಷ್ಟು ಮಾಡಿದರೆ ನಿಮ್ಮ ಹೆಸರು ಹೇಳಿಕೊಂಡೇ ಎರಡು ಹೊತ್ತು ಊಟ ಮಾಡುತ್ತೇವೆ..

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post