X

ನೀಡೂ ಶಿವ.. ನೀಡದಿರೂ ಶಿವ..

ಪ್ರಪಂಚ ಸೃಷ್ಟ್ಯೋನ್ಮುಖ ಲಾಸ್ಯಕಾಯೇ, ಸಮಸ್ತ ಸಂಹಾರಕ ತಾಂಡವಾಯ

ಜಗಜ್ಜನನ್ನ್ಯೈ ಜಗದೇಕ ಪಿತ್ರೈ, ನಮಃ ಶಿವಾಯೇಚ ನಮಃ ಶಿವಾಯ”

ಪ್ರಪಂಚದ ಸಕಲ ಚರಾಚರ ಜೀವಿಗಳ ಸೃಷ್ಟಿಗೆ ಕಾರಣನಾದ, ಸಮಸ್ತ ಜೀವಿಗಳ ಸಂಹಾರವನ್ನು ಮಾಡಿ ತಾಂಡವವಾಡಬಲ್ಲ, ಜಗತ್ತಿನ ಜನಕನೂ, ಜಗದ ಏಕೈಕ ತಂದೆಯಾದ ಆ ಶಿವನಿಗೆ ಪ್ರಣಾಮಗಳು..

ಶಿವ, ಈಶ್ವರ, ಪಶುಪತಿ, ನೀಲಕಂಠ, ರುದ್ರ, ಮಹಾದೇವ, ಸದಾಶಿವ, ಶಂಕರ.. ಅಬ್ಬಾ.. ಶಿವನಿಗದೆಷ್ಟು ಹೆಸರುಗಳು.. ಈಶ್ವರನೊಬ್ಬನಿಗೇ ಮಹಾಲಿಂಗೇಶ್ವರ, ಪಂಚಲಿಂಗೇಶ್ವರ, ಸಹಸ್ರಲಿಂಗೇಶ್ವರ,ಕೋಟಿ ಲಿಂಗೇಶ್ವರ, ಅರ್ಧ ನಾರೀಶ್ವರ, ವಿಶ್ವೇಶ್ವರ, ಮಂಜುನಾಥೇಶ್ವರ ಮುಂತಾದ ಹತ್ತು ಹಲವು ನಾಮಧೇಯಗಳು.. ಲಿಂಗರೂಪಿಯಾಗಿದ್ದರೂ ಸಹ  ಶಿವನೆಂದರೆ ನಮ್ಮ ಕಣ್ಣಿಗೆ ಕಾಣುವುದು ಢಮರುಗವನ್ನು ಕೈಯಲ್ಲಿ ಹಿಡಿದಿರುವ, ಭಸ್ಮವನ್ನು ಮೈಯಾಲ್ಲಾ ಬಳಿದುಕೊಂಡಿರುವ, ನಾಗೇಂದ್ರ ಹಾರನಾಗಿರುವ, ಜಟಾಧಾರಿ ಶಿವ ಮಾತ್ರ.  ನಾವು ಅವನನ್ನು ನೋಡುವ ರೂಪಗಳು ಹಲವಿದ್ದರೂ ನಮ್ಮೊಳಗಿರುವ ‘ಶಿವ’ನೆನ್ನುವ ಭಾವವೊಂದೇ. ದೇವನೊಬ್ಬನೇ ನಾಮ ಹಲವು ಎಂದಂತೆ ಶಿವನೊಬ್ಬನೇ ರೂಪ ಹಲವು.

ಶಿವನೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ನಮ್ಮ ಹುಟ್ಟಿಗೂ ಸಾವಿಗೂ ಎರಡಕ್ಕೂ ಕಾರಣನಾಗುವವನು, ಈ ಮಧ್ಯದಲ್ಲಿ ನಮ್ಮ ಇಷ್ಟಕಾಮ್ಯಗಳನ್ನೆಲ್ಲಾ ಪೂರೈಸಿ ನಮ್ಮನ್ನು ಕಾಯುವವನು ಅವನೇ. ಶಿವನನ್ನು ಒಲಿಸಿಕೊಳ್ಳುವುದು ಕಷ್ಟವೇನಲ್ಲ. ನಾವು ಪುರಾಣದಲ್ಲಿ ಓದಿರುತ್ತೇವೆ,  ಎಂತೆಂತಹಾ ಅಸುರರೆಲ್ಲಾ ತಪಸ್ಸನ್ನಾಚರಿಸಿ ಶಿವನನ್ನು ಒಲಿಸಿಕೊಂಡು ತಮಗೆ ಬೇಕು ಬೇಕಾದ ವರಗಳನ್ನೆಲ್ಲಾ ಪಡೆದುಕೊಂಡ ಕಥೆಯನ್ನು. ಶಿವನಿಂದ ವರಗಳನ್ನೆಲ್ಲಾ ಪಡೆದುಕೊಂಡ ಅಸುರರು ದೇವತೆಗಳಿಗೆ ತೊಂದರೆ ಕೊಡಲು ಶುರು ಮಾಡಿದಾಗ, ಶಿವ ಇನ್ನೇನೋ ಉಪಾಯ ಮಾಡಿ ಆ ಅಸುರರ ಸಂಹಾರವನ್ನು ಮಾಡಿದ ಉದಾಹರಣೆಗಳೂ ಇವೆ. ಅದಕ್ಕೇ ಅಂದಿದ್ದು ಹುಟ್ಟಿಗೂ ಸಾವಿಗೂ ಕಾರಣ ಅವನೇ ಅಂತ.

ಶಿವನನ್ನು ಒಲಿಸಿಕೊಳ್ಳಲು ಸಾವಿರಾರು ರೂಗಳನ್ನು ವ್ಯಯಿಸಿ ಹೋಮ ಹವನಾದಿ ಪೂಜೆಗಳನ್ನು ಮಾಡಬೇಕಿಲ್ಲ. ರುದ್ರಾಭಿಷೇಕಕ್ಕೆ ಬೇಕಾದ ದ್ರವ್ಯಗಳು ನಮ್ಮಲ್ಲಿಲ್ಲ ಎಂದು ಕೊರಗಬೇಕಿಲ್ಲ. ದೇವಸ್ಥಾನಗಳಿಗೆ ಹೋಗಿ ಸೇವಾದಿಗಳನ್ನು ಮಾಡಲೇ ಬೇಕಿಲ್ಲ. ಉಪಕರಣಗಳಿಲ್ಲದಿದ್ದರೂ ಪರವಾಗಿಲ್ಲ, ಅಂತಃಕರಣವಿರಬೇಕು.  ‘ಶಿವ’ನೆನ್ನುವ ಭಾವವೊಂದಿದ್ದರೆ ಸಾಕು. ಪೂಜೆ ಮಾಡಲು ಮನಸ್ಸಿದ್ದರೆ ಸಾಕು. “ಓಂ ನಮಃ ಶಿವಾಯ” ಎನ್ನುವ  ಪಂಚಾಕ್ಷರಗಳೇ ಸಾಕು. ಅಷ್ಟೂ ತಿಳಿಯದಿದ್ದರೆ, ನಮಗೆ ಹೇಗೆ ತಿಳಿದಿದೆಯೋ ಹಾಗೆ, ಮನಸ್ಸಿನಲ್ಲಿಯೇ ಆತನನ್ನು ಸ್ತುತಿಸಿ, ಭಾವದಲ್ಲಿಯೇ ಆತನಿಗೆ ರುದ್ರಾಭಿಷೇಕನ್ನು ನೆರವೇರಿಸಿ, ಬಿಲ್ವಾರ್ಚನೆಯನ್ನು ಮಾಡಿದರೂ ಸಾಕು, ಖಂಡಿತವಾಗಿಯೂ ಆತ ನಮಗೊಲಿಯುವ. ನಮ್ಮ ಭಾವಕ್ಕೇನೂ ಅಭಾವವಿಲ್ಲದಿರೆ ಶಿವನ ಪ್ರೀತಿಗೂ ಅಭಾವವಿರದು.

ರಾಘವೇಶ್ವರ ಶ್ರೀಗಳು ತಮ್ಮ ಭಾವಪೂಜೆಯಲ್ಲಿ ಹೇಳಿದ್ದು ನೆನಪಾಗುತ್ತಿದೆ.

ಹೊತ್ತಿಸೆದೆಯ ಭಾವ ದೀಪ,

 ಕಿತ್ತು ಎಸೆಯಲೆಲ್ಲ ಪಾಪ

ಜಗದ ಜಾಢ್ಯವೆಲ್ಲ ತೊಲಗಿ,

 ಜೀವದೊಳಗೆ ದಿವ್ಯ ಮೊಳಗಿ,

ಪ್ರೀತಿಯೆಂಬ ಜ್ಯೋತಿ ಬೆಳಗಿ ಭೀತಿ ಕಳೆಯಲಿ”

ಭಾವದಲ್ಲಿ ಮಾಡುವ ಪೂಜೆ ಹೇಗಿರಬೇಕು, ನಮ್ಮ ಪ್ರಾರ್ಥನೆಯೇನಿರಬೇಕು ಎಂದು ಮೇಲಿನ ಸಾಲುಗಳು ನಮಗೆ ಹೇಳಿಕೊಡುತ್ತವೆ. ಇದಿಷ್ಟನ್ನೇ ಸರಿಯಾಗಿ ಪಾಲಿಸಿದರೂ ಸಾಕು, ಶಿವನನ್ನು ಪ್ರಸನ್ನಗೊಳಿಸಬಹುದು.

“ಗಾನಯೋಗಿ ಪಂಚಾಕ್ಷರೀ ಗವಾಯಿ” ಚಲನ ಚಿತ್ರದಲ್ಲೊಂದು ಹಾಡಿದೆ. “ನೀಡು ಶಿವ, ನೀಡದಿರೂ ಶಿವ, ಬಾಗುವುದು ನನ್ನ ಕಾಯ..” ನಮ್ಮ ಪ್ರಾರ್ಥನೆಯನ್ನು ಮನ್ನಿಸಿ ಶಿವನೇನಾದರೂ ಕೊಟ್ಟರೂ ಸರಿ, ಇಲ್ಲ, ಕೊಡದಿದ್ದರೂ ಸರಿ, ನನ್ನ ದೇಹವಂತೂ ಎಂದೆಂದಿಗೂ ನಿನಗೆ ತಲೆ ಬಾಗುವುದು,. ವಾಹ್..! ಎಂತಹಾ ಅದ್ಭುತ ಭಾವ..! ಬಿಂದುವು ಸಿಂಧುವಿನೊಂದಿಗೆ ಒಂದಾಗುವ ಭಾವ.. “ನಾನೇಕೆ ಅಂಜಲಿ? ನೀ ನನ್ನ ಅಂಬಲಿ, ನೀಡೂ ಶಿವ ನೀಡದಿರೂ ಶಿವ” ಎಂದು ಮುಂದುವರಿಯುವ ಹಾಡು ಶಿವನ ಕುರಿತಾಗಿ ಹೊಸ ಪರಿಕಲ್ಪನೆಯನ್ನು ನೀಡುತ್ತದೆ.

ಬೆಳಗಿನ ಜಾವದಲ್ಲಿ ಯಾವುದೇ ಶಿವ ದೇವಾಲಯಗಳಿಗೆ ಹೋದರೂ ರುದ್ರಾಧ್ಯಾಯ ಪಠಣವನ್ನು ಕೇಳಬಹುದು. ಪರಮೇಶ್ವರನನ್ನು ಅತ್ಯಂತ ಭಕ್ತಿಯಿಂದ ಸ್ತುತಿಸುವ, ಆತನ ಗುಣ ಸೌಂಧರ್ಯವನ್ನು ವರ್ಣಿಸುವ ಅತ್ಯದ್ಭುತ ಮಂತ್ರ ಅದು. ಸ್ವರಬದ್ಧವಾಗಿ ಮೂಡಿಬರುವ ರುದ್ರವನ್ನು ಕೇಳುವುದೆಂದರೆ ಮನಸ್ಸಿಗೇನೋ ಆನಂದ. ರುದ್ರ ಪಠಣವನ್ನು ಮಾಡುತ್ತಾ ಶಿವಲಿಂಗಗಳಿಗೆ ಅಭಿಷೇಕ ಮಾಡುವುದೆಂದರೆ ಅದು  ಬರೀ ಆನಂದವಲ್ಲ, ಪರಮಾನಂದ.

ನಮಃ ಶಿವಾಯ ಸಾಂಬಾಯ ಸಗಣಾಯ ಸಸೂನವೇ

ಸನಂದಿನೇ ಸಗಂಗಾಯ ಸವೃಷಾಯ ನಮೋ ನಮಃ”

ಅಂಬಾ ಸಹಿತನಾಗಿರುವ, ಒಳ್ಳೆಯ ಗಣಗಳನ್ನು ಹೊಂದಿರುವ, ಗಣಪತಿ, ಷಣ್ಮುಖಾದಿ ಪುತ್ರ ಸಹಿತನಾದ, ನಂದಿವಾಹನ, ಗಂಗಾ, ವೃಷಭ ಸಹಿತನಾಗಿರುವ ಶಿವನಿಗೆ ನಮಿಸುವ ಮೂಲಖ ನನ್ನ ಬರಹವನ್ನು “ಶಿವಾರ್ಪಣ” ಮಾಡುತ್ತಿದ್ದೇನೆ. ಶಿವರಾತ್ರಿಯ ಈ ಮಹಾಪರ್ವದಲ್ಲಿ ಆ ಪರಮೇಶ್ವರನು ಎಲ್ಲರಿಗೂ ಪರಮ ಮಂಗಳವನ್ನುಂಟು ಮಾಡಲಿ. ಜಾಗೃತಿಯ ಜಾಗರಣೆ ನಿತ್ಯ ನಿರಂತರವಾಗಲಿ,ನಶ್ವರವಾಗಿರುವ ನಮ್ಮ ದೇಹಕ್ಕೆ ಈಶ್ವರನೇ ಉಸಿರಾಗಲಿ.

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post