ಕರಾರುವಕ್ಕಾಗಿ ಮಟ-ಮಟ ಮಧ್ಯಾಹ್ನದ ಸಮಯದಲ್ಲಿ ತನ್ನ ಹೆಗಲ ಮೇಲಿನ ಚೀಲವನ್ನು ತೆರೆದು ಒಂದು ಡಜನ್ ಕವಡೆಗಳು, ಅಸ್ಪಷ್ಟ ಅತೀಂದ್ರಿಯ ಪಟ್ಟಿ ಇರುವ ಚೌಕಾಕಾರದ ಬಟ್ಟೆ ತು೦ಡು, ನೋಟ್ ಬುಕ್ ಮತ್ತು ತಾಳೆಬರಹದ ಕಟ್ಟನ್ನೊಳಗೊಂಡ ತನ್ನೆಲ್ಲಾ ವೃತ್ತಿಪರ ಉಪಕರಣಗಳನ್ನು ಹರಡಿದ. ಹಣೆಯ ಮೇಲೆ ಪವಿತ್ರ ವಿಭೂತಿ ಮತ್ತು ಕುಂಕುಮದಿಂದ ಶೋಭಿತನಾದ,ತೀಕ್ಷ್ಣವಾಗಿ ಅಸಹಜವಾಗಿ ಮಿನುಗುವ ಅವನ ಕಣ್ಣುಗಳು ನಿಜವಾಗಿಯೂ ಗ್ರಾಹಕರಿಗಾಗಿ ನಿರಂತರ ಹುಡುಕಾಟದ ಪರಿಣಾಮವಾಗಿದ್ದರೂ, ಅವನ ಕಾಣ ಬಂದ ಸಾಮಾನ್ಯ ಗ್ರಾಹಕರಿಗೆ ಅದು ದೈವಿ ಶಕ್ತಿಯ೦ತೆ ಗೋಚರಿಸಿ ನಿರಾಳರಾಗಿ ಹಿತಾನುಭವ ಹೊಂದುತ್ತಿದ್ದರು. ವಿಭೂತಿಯುಕ್ತ ಅವನ ಬಣ್ಣದ ಹಣೆ ಮತ್ತು ಗಲ್ಲದ ಕೆಳಗಿಳಿದ ಮೀಸೆ ಮತ್ತು ಗಡ್ಡ, ಎಂತಹ ಮೂರ್ಖ ಶಿಖಾಮಣಿಯನ್ನೂ ಮಿಂಚುವಂತೆ ಮಾಡುವ ಇಂತಹ ಸೋಗಿನಲ್ಲಿ, ಗ್ರಾಹಕರು ಅವನೆದುರು ನಿಲ್ಲುವನೋಟ, ಅವನ ಕಂಗಳ ಶಕ್ತಿಯನ್ನು ಅಧಿಕಾರಯುತವಾಗಿ ವೃದ್ಧಿಸಿತ್ತು. ಅವನ ಈ ವೇಷ ಭೂಷಣಕ್ಕೆ ಮುಕುಟ ಪ್ರಾಯವಾಗಿ ಕಾಣುವ ಕೇಸರಿ ಬಣ್ಣದ ಪೇಟವೊಂದನ್ನು ತಲೆಗೆ ಸುತ್ತಿದ್ದ. ಈ ಬಣ್ಣದ ಸಂಯೋಜನೆ ಎಂದೂ ವಿಫಲವಾಗಿರಲಿಲ್ಲ. ಜೇನು ನೊಣಗಳುಡೇಲಿಯಾ(ಹೂವಿನ) ಕಾ೦ಡಗಳತ್ತ ಆಕರ್ಷಿಸಲ್ಪಡುವಂತೆ ಜನ ಅವನತ್ತ ಸೆಳೆಯಲ್ಪಟ್ಟಿದ್ದರು.
ಜ್ಯೋತಿಷಿಯು ಟೌನ್’ಹಾಲ್ ಪಾರ್ಕಿಗೆ ಹೋಗುವ ದಾರಿಯಲ್ಲಿರುವ ಹರಡಿದ ಹುಣಸೆಮರದ ರೆಂಬೆಗಳ ಅಡಿಯಲ್ಲಿ ಕುಳಿತಿದ್ದ. ಈ ಸ್ಥಳವು ಜ್ಯೋತಿಷಿಯ ಕೆಲಸಕ್ಕೆ ಅತ್ಯಂತ ಪ್ರಶಸ್ತವಾಗಿತ್ತು ಏಕೆಂದರೆ ಚಿಕ್ಕದಾದ ಈ ರಸ್ತೆಯಲ್ಲಿ ಬೆಳೆಗ್ಗೆಯಿ೦ದ ರಾತ್ರಿಯವರಿಗೆ ಯಾವಾಗಲೂ ಜನದಟ್ಟಣೆ ಇರುತ್ತಿತ್ತು, ವಿವಿಧ ಬಗೆಯ ವೃತ್ತಿ ಮತ್ತು ವಹಿವಾಟುಗಳ ತಾಣವಾಗಿತ್ತು ಟೌನ್’ಹಾಲ್ ಪಾರ್ಕಿಗೆ ಹೋಗುವ ಈ ರಸ್ತೆ. ಔಷಧ ಮಾರಾಟಗಾರರು, ಕಳ್ಳತನ ಮಾಡಿತಂದ ಸಾಮಗ್ರಿಗಳ ವ್ಯಾಪಾರಿಗಳು, ಹಾರ್ಡ್ವೇರ್ ಮತ್ತು ಗುಜರಿ ಸಾಮಾಗ್ರಿಗಳ ಮಾರಾಟಗಾರರು, ಜಾದುಗಾರರು ಹಾಗೂ ಅಗ್ಗದ ಬಟ್ಟೆಗಳನ್ನು ಹರಾಜಿನಲ್ಲಿ ಮಾರುವ ವ್ಯಾಪಾರಿಗಳು…ಅತ್ಯಂತ ಸದ್ದಿನಿಂದ ಕೂಡಿದ ಈ ವಾತಾವರಣ ಇಡೀ ಪಟ್ಟಣದ ಆಕರ್ಷಣೆಯ ಕೇಂದ್ರವಾಗಿತ್ತು. ಕೂಗುವದರಲ್ಲಿ ಅಗ್ಗದ ಬಟ್ಟೆಯ ಹರಾಜುಗಾರನ ನ೦ತರದ ಸ್ಥಾನ ಪಕ್ಕದಲ್ಲೇ ಇರುವ ನೆಲಗಡಲೆ ಮಾರುವವನದ್ದು. ತನ್ನ ನೆಲಗಡಲೆಗೆ ದಿನಕ್ಕೊಂದು ಅಲಂಕಾರಿಕ ಹೆಸರು ಕೊಡುವದು ಈತನ ವಿಶೇಷತೆ, ಒಂದು ದಿನ ‘ಬಾಂಬೆ ಐಸ್ ಕ್ರೀಂ’ಎಂದೂ, ಇನ್ನೊಂದು ದಿನ ‘ದೆಹಲಿ ಆಲ್ಮಂಡ್’ಎಂದೂ, ಮಗದೊಂದು ದಿನ ‘ರಾಜನ ಪರಮಾನ್ನ’ ಎಂಬಿತ್ಯಾದಿ ಹೆಸರುಗಳಿಂದ ಕೂಗಿ ಜನ ಸಮೂಹವನ್ನು ತನ್ನತ್ತ ಆಕರ್ಷಿಸುತ್ತಿದ್ದನು. ಯಾವುದೇ ನಿರ್ದಿಷ್ಟ ಗುರಿ ಇಲ್ಲದ ಹಾಗೂ ಉದ್ದೇಶ ರಹಿತ, ಬಹುಪಾಲು ವ್ಯರ್ಥ ಕಾಲ ಹರಣ ಮಾಡುವ ಇಂತಹ ಜನರ ಗು೦ಪಿನ ಗಣನೀಯ ಭಾಗವು ಜ್ಯೋತಿಷಿಯ ಮುಂದೆಯೂ ಸೇರುತ್ತಿತ್ತು.
ಸಂಜೆಯ ನಂತರ ಜ್ಯೋತಿಷಿಯ ವ್ಯವಹಾರ ಹತ್ತಿರದ ಶೇಂಗಾ ರಾಶಿಗೆ ಹತ್ತಿಸಿದ, ಪುರ್ ಪುರ್ ಎಂದೂ ಸಪ್ಪಳ ಮಾಡಿ ಹೊಗೆಯಾಡಿಸಿದ ಬೆಂಕಿ-ಭುಗಿಲಿನ ಬೆಳಕಿನಾಶ್ರಯದಲ್ಲಿ ನಡೆಯುತ್ತಿತ್ತು. ಈ ಸ್ಥಳದ ಪ್ರಾಮುಖ್ಯತೆ ಮತ್ತು ಮೋಡಿಗೆ ಅರ್ಧ ಕಾರಣ ಇಲ್ಲಿ ಪುರಸಭೆಯ ದೀಪಗಳ ವ್ಯವಸ್ಥೆ ಇಲ್ಲದಿರುವುದು! ಈ ಸ್ಥಳ ಕೆಲ ಅಂಗಡಿಗಳ ದೀಪಗಳಿಂದ ಪ್ರಕಾಶಿಸುತ್ತಿತ್ತು ಬಿಟ್ಟರೆ ಇನ್ನೂ ಒಂದೆರಡು ಅಂಗಡಿಗಳು ಬುಸುಗುಟ್ಟುವ ಗ್ಯಾಸ್ ಲೈಟಗಳನ್ನು ಹೊಂದಿದ್ದವು, ಕೆಲ ಅಂಗಡಿಗಳಲ್ಲಿ ಕವಚರಹಿತವಾದ ಕಂಬಕ್ಕೆ ಜೋತುಬಿಟ್ಟ ಬೆಂಕಿಯ ದೀಪಗಳಿದ್ದವು, ಮತ್ತೆ ಕೆಲವೆಡೆ ಹಳೆಯ ಸೈಕಲ್ ದೀಪಗಳು ಮತ್ತು ತಮ್ಮದೇ ಆದ ಬೆಳಕಿನ ವ್ಯವಸ್ಥೆ ಇರದ ಜ್ಯೋತಿಷಿಯ೦ತೆ ಜುಗಾಡಿನ ಬೆಳಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಬ್ಬಿಬ್ಬರಿದ್ದರು.
ಹೀಗೆ ದಿಗ್ಭ್ರಮೆಕಾರಕ ಅಡ್ಡಾದಿಡ್ಡಿಯಾಗಿ ಬೀಳುವ ಬೀಳಕಿನ ಕಿರಣಗಳು ಮತ್ತು ಚಲಿಸುವ ನೆರಳುಗಳು ಜನರಲ್ಲಿ ಭ್ರಾಂತಿ ಮೂಡಿಸುವ ವಾತಾವರಣ ಜ್ಯೋತಿಷಿಗಿ ಸೂಕ್ತವಾಗಿತ್ತು. ಏಕೆಂದರೆ ತನ್ನ ಜೀವನದ ಪ್ರಾರ೦ಭದಲ್ಲಿ ಜ್ಯೋತಿಷಿಯಾಗಬೇಕೆಂಬ ಕನಿಷ್ಠ ಆಲೋಚನೆ ಮತ್ತು ಉದ್ದೇಶವಿರದ ಈತನಿಗೆ ಜನರ ಭವಿಷ್ಯದ ಬಗೆಗಿರಲಿ ಮುಂದಿನ ನಿಮಿಷದಲ್ಲಿ ತನಗೇನಾಗುವದೆ೦ಬುದರ ಬಗೆಗೂ ಕನಿಷ್ಠ ಮಾಹಿತಿಯೂ ಇರಲಿಲ್ಲ. ತನ್ನ ಮುಗ್ಧ ಗ್ರಾಹಕರಷ್ಟೇ ನಕ್ಷತ್ರಗಳಿಗೆ ಅಪರಿಚಿತನಾಗಿದ್ದ ಜ್ಯೋತಿಷಿ!! ಆದಾಗ್ಯೂ ಇವನು ಹೇಳುತಿದ್ದ ವಿಚಾರಗಳು ಜನರನ್ನು ಸಂತೋಷ ಪಡಿಸಿ ದಿಗ್ಮೂಢರನ್ನಾಗಿಸುತ್ತಿದ್ದವು. ಇದು ಕೇವಲ ಮುಖಚರ್ಯ ನೋಡಿ ಮನಸ್ಸನ್ನರಿಯುವ, ತೀವ್ರ ತರಹದ ಊಹೆ ಮತ್ತು ನಿರಂತರ ಅಭ್ಯಾಸದ ಫಲಶ್ರುತಿಯಾಗಿತ್ತು. ಪ್ರತಿ ಪ್ರಾಮಾಣಿಕ ವ್ಯಕ್ತಿಯು ಕಷ್ಟ ಪಟ್ಟು ದುಡಿದು ತನ್ನ ದಿನದ ಸಂಭಾವನೆ ಗಳಿಸುವಂತೆ ಜ್ಯೋತಿಷಿಯು ತನ್ನ ಕೆಲಸಕ್ಕೆ ಪ್ರತಿಫಲವಾಗಿ ಸಿಕ್ಕ ಹಣವನ್ನು ದಿನದ ಕೊನೆಗೆ ಮನೆಗೊಯ್ದು ನ್ಯಾಯಯುತವಾದ ಜೀವನ ಸಾಗಿಸಲು ಅರ್ಹನಾಗಿದ್ದನು.
ಅವನು ತನ್ನ ಹಳ್ಳಿಯನ್ನು ಯಾವುದೇ ಯೋಜನೆ ಹಾಗೂ ಮುಂದಾಲೋಚನೆಯಿಲ್ಲದೆ ತೊರೆದಿದ್ದ ಹಾಗೆ ಮಾಡದೇ ಇದ್ದರೆ ಬಹುಶಃ ತನ್ನ ಪೂರ್ವಜರಂತೆ ಭೂಮಿಯನ್ನು ಉಳುತ್ತಾ ರೈತನಾಗಿ,ಮದುವೆಯಾಗಿ ಸಂಸಾರಿಯಾಗಿ ಪ್ರಗತಿ ಹೊಂದಿ ಪ್ರಭುದ್ಧ ಪರಿಪಕ್ವ ಮನುಷ್ಯನಾಗಿ ಪೂರ್ವಜರಿಂದ ಬಳುವಳಿಯಾಗಿ ಬಂದ ಮನೆಯಲ್ಲಿ ಬದುಕಿರುತ್ತಿದ್ದ? ಆದರೆ ವಿಧಿಯ ಆಟ ಬೇರೆಯೇ ಆಗಿತ್ತು. ಅವನು ಯಾರಿಗೂ ಹೇಳದೇ ಮನೆ ಬಿಡಲೇ ಬೇಕಾಗಿತ್ತು … ಅವನು ನೂರಿನ್ನೂರು ಮೈಲಿ ದೂರ ಸಾಗುವವರೆಗೆ ನೆಮ್ಮದಿ ಇರಲಿಲ್ಲ ಹಾಗೂ ವಿಶ್ರಮಿಸಲೂ ಇಲ್ಲ. ಒಬ್ಬ ಹಳ್ಳಿಗನಿಗೆ ಇದೇನು ಸಾಮಾನ್ಯ ವಿಷಯವಾಗಿರಲಿಲ್ಲ…ಸಾಗರವೇ ತಲೆಯಮೇಲೆ ಹರಿದಂತಾಗಿತ್ತು!
ಅವನಲ್ಲಿ ಮಾನವಕುಲದ ತೊಂದರೆ ತಾಪತ್ರಯಗಳಾದ ಮದುವೆ, ಹಣ, ಮತ್ತು ಮಾನವ ಸಂಬಂಧಗಳ-ಗೋಜಲುಗಳ ಸಾಮಾನ್ಯ ಜ್ಞಾನ ಹಾಗೂ ಅವುಗಳನ್ನು ವಿಶ್ಲೇಷಿಸುವ ಜಾಣತನವಿತ್ತು. ನಿರಂತರವಾಗಿ ಜ್ಯೋತಿಷಿಯಾಗಿ ಕಾರ್ಯನಿರ್ವಹಿಸಿದ ಅಭ್ಯಾಸ ಆತನ ಗ್ರಹಿಕೆಯನ್ನು ಇನ್ನಷ್ಟು ಹರಿತಗೊಳಿಸಿತ್ತು, ಕೇವಲ 5 ನಿಮಿಷದಲ್ಲಿ ಗ್ರಾಹಕರಿಗಿರುವ ತೊಂದರೆಗಳನ್ನು ಅರಿತುಕೊಳ್ಳುತ್ತಿದ್ದ. ಪ್ರಶ್ನೆಯೊಂದಕ್ಕೆ ಮೂರು ಪೈಸೆಯಂತೆ ನಿಗದಿಪಡಿಸಿ, ಕನಿಷ್ಠ 10 ನಿಮಿಷ ಎದುರಿನವ ಮಾತನಾಡುವವರೆಗೆ, ತನಗೆ ಒಂದು ಡಜನ್ ಉತ್ತರಗಳಿಗೆ ಮತ್ತು ಸಲಹೆಗಳಿಗಾಗುವಷ್ಟು ವಿಷಯ ದೊರಕುವವರೆಗೆ ಎಂದಿಗೂ ಮೊದಲು ಬಾಯಿ ಬಿಡುತ್ತಿರಲಿಲ್ಲ. ಯಾವಾಗ ಅವನು ಮುಂದಿರುವ ಗ್ರಾಹಕನ ಅಂಗೈನ್ನು ದಿಟ್ಟಿಸುತ್ತಾ “ಅನೇಕ ರೀತಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಪೂರ್ಣವಾಗಿ ನಿರೀಕ್ಷಿತ ಫಲಿತಾಂಶಗಳು ದೊರೆಯುತ್ತಿಲ್ಲ” ಎಂದಾಗ ಹತ್ತರಲ್ಲಿ ಒಂಬತ್ತು ಬಾರಿ ಅವನ ಮಾತಿಗೆ ಜನ ತಲೆದೂಗೂತ್ತಿದ್ದರು. ಅಥವಾ ಗ್ರಾಹಕನ ಕುರಿತು “ನಿಮ್ಮ ಕುಟುಂಬದಲ್ಲಿ ನಿಮ್ಮೊಂದಿಗೆ ಹೊಂದಾಣಿಕೆಯಾಗದ, ನಿಮ್ಮ ಏಳಿಗೆ ಸಹಿಸದ ಅಸಹಿಷ್ಣು ಹೆಂಗಸೊಬ್ಬಳು ಇರುವಳಾ? ಅವಳು ನಿಮ್ಮ ದೂರದ ಸಂಬಂಧಿಯೂ ಆಗಿರಬಹುದು!” ಎಂದು ಪ್ರಶ್ನಿಸುತ್ತಿದ್ದ. ಕೆಲ ಸಲ ಗ್ರಾಹಕರ ನಡವಳಿಕೆಯನ್ನು ವಿಶ್ಲೇಷಿಸುತ್ತಾ “ ನಿಮ್ಮ ಬಹುಪಾಲು ತೊಂದರೆಗಳಿಗೆ ನಿಮ್ಮ ನಡವಳಿಕೆಯೇ ಕಾರಣ ಇಲ್ಲವಾದಲ್ಲಿ ಶನಿ ಏಕೆ ಬೆಂಬಿಡದೇ ನಿಮ್ಮಹಿಂದೆ ಬಿದ್ದಿರುವನು!! ನಿಮ್ಮ ದುಡುಕು ಸ್ವಭಾವ ಮತ್ತು ಒರಟಾದ ಬಾಹ್ಯ ನಡವಳಿಕೆಯಿಂದ ತೊಂದರೆಗಳನ್ನು ಆಹ್ವಾನಿಸುತ್ತೀರಲ್ಲವೇ?” ಎಂದು ಪ್ರಶ್ನಿಸುತ್ತಾ ಗ್ರಾಹಕರ ಹೃದಯ ಗೆದ್ದು ಬಿಡುತ್ತಿದ್ದ. ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿಯೂ ಕೂಡ ಹೊರಗಡೆಯಿಂದ ಒರಟು – ಗಟ್ಟಿಗ (ಧೀಮಂತ)ನಾಗಿರಲು ಬಯಸುತ್ತಾನೆ.
ಶೇಂಗಾ ಮಾರುವವನು ತನ್ನ ಶೇಂಗಾ ಸಿಪ್ಪೆಯ ರಾಶಿಗೆ ಬೆಳಕಿಗಾಗಿ ಹಚ್ಚಿದ ಬೆಂಕಿಯ ಭುಗಿಲನ್ನು ಆರಿಸಿ ಮನೆಗೆ ಹೋಗಲು ಸಿದ್ಧನಾಗುತ್ತಿದ್ದ. ಜ್ಯೋತಿಷಿಗೂ ಕೂಡ ಇದು ಕೆಲಸ ಮುಗಿಸಿ ಮನೆಗೆ ಹೊರಡಲು ಸಂಕೇತವಾಗಿತ್ತು ಏಕೆಂದರೆ ಶೇಂಗಾ ಸಿಪ್ಪೆಯ ಬೆ೦ಕಿ ನಂದಿದ ನಂತರ ಕೇವಲ ಎಲ್ಲಿಂದಲೋ ಬಂದ ಅವನ ಮುಂದಿರುವ ನೆಲದ ಮೇಲೆ ಬೀಳುತ್ತಿದ್ದ ನಿರ್ದಿಷ್ಟ ಗುರಿ ಇಲ್ಲದ ಹಸಿರು ಬೆಳಕಿನ ಒಂದು ಗುಚ್ಛವನ್ನು ಹೊರತುಪಡಿಸಿದರೆ, ಅಲ್ಲಿ ಕತ್ತಲು ಕವಿಯುತ್ತಿತ್ತು. ಆ ಹಸಿರು ಬೆಳಕು ಮಂಕಾಗುತ್ತಿದ್ದಂತೆ ಅವನು ಕವಡೆಯ ಚಿಪ್ಪುಗಳನ್ನು ಹಾಗೂ ಇತರೆ ಸಾಮಗ್ರಿಗಳನ್ನು ತನ್ನ ಚೀಲಕ್ಕೇರಿಸಿಲು ಪ್ರಾರಂಭಿಸಿದ್ದ, ಅಷ್ಟರಲ್ಲಿ ಕತ್ತೆತ್ತಿ ನೋಡಲು ಒಬ್ಬ ವ್ಯಕ್ತಿ ಅವನ ಮುಂದೆ ನಿಂತಿದ್ದ. ಜ್ಯೋತಿಷಿಗೆ ಒಬ್ಬ ಸಂಭವನೀಯ ಗ್ರಾಹಕನೊಬ್ಬ ಸಿಕ್ಕಂತೆ ಭಾಸವಾಗಿ “ ನೀವು ತುಂಬಾ ಚಿ೦ತಾಕ್ರಾಂತರಾಗಿದ್ದಂತೆ ಕಾಣುತ್ತದೆ, ನೀವು ಕುಳಿತುಕೊಂಡು ಸ್ವಲ್ಪ ಹೊತ್ತು ನನ್ನ ಜೊತೆ ಮಾತಾನಾಡಿದರೆ ಎಲ್ಲವೂ ಸರಿ ಹೋಗುತ್ತದೆ“ ಎಂದ. ಮುಂದಿರುವ ವ್ಯಕ್ತಿ ಸಿಟ್ಟಿನಲ್ಲಿ ಅಸ್ಪಷ್ಟವಾಗಿ ಏನನ್ನೋ ಗೊಣಗಿದ. ಆದರೂ ಜ್ಯೋತಿಷಿ ಅವನನ್ನು ಮತ್ತೆ ಒತ್ತಾಯಪೂರ್ವಕವಾಗಿ ಆಹ್ವಾನಿಸಿದ, ಆಗ ಆ ವ್ಯಕ್ತಿ ತುಸು ಬಿರುಸಾಗಿಯೇ ತನ್ನ ಅಂಗೈಯನ್ನು ಜ್ಯೋತಿಷಿಯ ಮೂಗಿನಡಿಯಲ್ಲಿ ಚಾಚುತ್ತಾ “ನಿನ್ನನ್ನು ನೀನು ಜ್ಯೋತಿಷಿ ಎಂದು ಕರೆದುಕೊಳ್ಳುತ್ತೀಯಾ?” ಎಂದ. ಜ್ಯೋತಿಷಿ ಇದನ್ನು ಸವಾಲಾಗಿ ಸ್ವೀಕರಿಸಿ ಆ ವ್ಯಕ್ತಿಯ ಕೈಯನ್ನು ಹಸಿರು ಬೆಳಕನೆಡೆ ತಿರುಗಿಸಿ “ ನಿಮ್ಮ ಸ್ವಭಾವ …….” ಆಗ ಆ ವ್ಯಕ್ತಿ “ಸಾಕು ನಿಲ್ಲಿಸು… ಬೇರೆ ಏನಾದರೂ ಉಪಯುಕ್ತ ಹಾಗೂ ಅಮೂಲ್ಯವಾದದ್ದನ್ನು ಹೇಳು” ಎಂದ.
ನಮ್ಮ ಸ್ನೇಹಿತನಾದ ಜ್ಯೋತಿಷಿಗೆ ಅವಮಾನಿಸಿದಂತಾಗಿ “ ನಾನು ಒಂದು ಪ್ರಶ್ನೆಗೆ ಕೇವಲ ಮೂರು ಪೈಸೆ ಶುಲ್ಕ ಪಡೆಯುತ್ತೇನೆ .. ನೀವು ಕೊಡುವ ಹಣಕ್ಕಿಂತ ಹೆಚ್ಚಿದನ್ನೇ ನೀವು ಪಡೆಯುತ್ತೀರಿ ಎಂದು ಹೇಳಬಲ್ಲೆ” ಎಂದ. ಆಗ ಆ ವ್ಯಕ್ತಿ ತನ್ನ ಕೈಯನ್ನು ಹಿಂದೆಳೆದು ತನ್ನ ಜೇಬಿನಿಂದ ಒಂದಾಣೆಯ ನಾಣ್ಯವೊಂದನ್ನು ಜ್ಯೋತಿಷಿಯತ್ತ ಎಸೆದು “ ನಾನು ನಿನ್ನನ್ನು ಕೆಲ ಪ್ರಶ್ನೆಗಳನ್ನು ಕೇಳುವೆನು, ಒಂದು ವೇಳೆ ನೀನು ಸುಳ್ಳು ಹೇಳುತ್ತಿರುವೆ ಎಂದು ನಾನು ಸಾಬೀತು ಪಡಿಸಿದರೆ ನನ್ನ ಹಣವನ್ನು ಬಡ್ಡಿ ಸಮೇತವಾಗಿ ಹಿಂದಿರುಗಿಸಬೇಕು” ಎಂದ.
ಅದಕ್ಕೆ ಜ್ಯೋತಿಷಿಯು “ನನ್ನ ಉತ್ತರಗಳು ನಿಮಗ ತೃಪ್ತಿದಾಯಕವೆನಿಸಿದರೆ ಐದು ರೂಪಾಯಿ ಕೊಡುವಿರಾ?” ಎಂದ, ಆಗ ಅಪರಿಚಿತನು “ಇಲ್ಲ ,ಆಗಲ್ಲ”… ಜ್ಯೋತಿಷಿಯೂ “ ಹೋಗಲಿ ಎಂಟಾಣೆಗಳನ್ನು ಕೊಡುವಿರಾ?” ಆಗ ಆ ಅಪರಿಚಿತನು “ ಆಗಲಿ ಆದರೆ ನೀನೇನಾದರೂ ತಪ್ಪಿದರೆ ನಾನು ಕೊಟ್ಟ ಎರಡರಷ್ಟು ಹಣವನ್ನು ಮರಳಿಸಬೇಕು” ಎಂದ. ಹೀಗೆ ಇನ್ನೊ೦ದಿಷ್ಟು ವಾದವಿವಾದದ ನಂತರ ಇಬ್ಬರೂ ಈ ಒಪ್ಪಂದಕ್ಕೆ ಒಪ್ಪಿಕೊಂಡರು. ಜ್ಯೋತಿಷಿಯೂ ದೇವರನ್ನು ಪ್ರಾರ್ಥಿಸುತ್ತಿದ್ದ ಆಗ ಅಪರಿಚಿತನು ಸಿಗರೇಟೊಂದನ್ನು ಹೊತ್ತಿಸಿದ. ಜ್ಯೋತಿಷಿಗೆ ಬೆಂಕಿ ಕಡ್ಡಿಯ ಬೆಳಕಿನಲ್ಲಿ ಅಪರಿಚಿತನ ಮುಖದ ಮಿಂಚು ನೋಟ ದೊರಕಿತು. ಇಬ್ಬರ ಸಂಭಾಷಣೆಗೆ ಅಲ್ಪವಿರಾಮ ಬಿತ್ತು …ರಸ್ತೆಯ ಮೇಲೆ ಕಾರುಗಳ ಹಾರ್ನ್’ಗಳ ಕರ್ಕಶ ಶಬ್ದ ..ಜಟಕಾ ಚಾಲಕರು ತಮ್ಮ ಕುದರೆಗಳಿಗೆ ಅವಾಚ್ಯ ಬೈಗಳಿಂದ ದೂಷಿಸುತ್ತಿದ್ದ ಕೂಗು …ನೆರಿದಿದ್ದ ಜನಸಂದಣಿಯ ವಿಚಿತ್ರ ಧ್ವನಿಗಳು ಪಾರ್ಕಿನ ಅರಗತ್ತಲೆಯನ್ನು ಕ್ಷೋಭೆಗೊಳಪಡಿಸಿದ್ದವು. ಅಪರಿಚಿತ ವ್ಯಕ್ತಿ ಸಿಗರೇಟ ಹೀರುತ್ತಾ ..ಜೋರಾಗಿ ಹೊಗೆಯನ್ನು ಬಿಡುತ್ತಾ ನಿರ್ದಾಕ್ಷಿಣ್ಯವಾಗಿ ಕೆಳಗೆ ಕುಳಿತನು. ಜ್ಯೋತಿಷಿಗೆ ತುಂಬಾ ಕಸಿವಿಸಿಯಾಗಿ,ಅಹಿತವೆನಿಸಿ“ ಇಗೋ ನಿಮ್ಮ ನಾಣ್ಯವನ್ನು (ಅಣೆ) ತೆಗೆದುಕೊಳ್ಳಿ , ನನಗೆ ಇಂತಹ ಸವಾಲುಗಳೆದುರಿಸಿ ಅಭ್ಯಾಸವಿಲ್ಲ..ಇಂದು ನನಗೆ ತುಂಬಾ ಹೊತ್ತಾಗಿದೆ” ಎಂದು ಹೇಳಿ ಹೊರಡಲು ಅಣಿಯಾದನು. ಆಗ ಅಪರಿಚಿತನು ಜ್ಯೋತಿಷಿಯ ಮುಂಗೈಯನ್ನು ತಿರುವುತ್ತ “ಈಗ ನಿನಗೆ ಈ ಸವಾಲಿನಿಂದ ತಪ್ಪಿಸಿಕೊಳ್ಳಲಾಗುವದಿಲ್ಲ…ಸುಮ್ಮನೆ ದಾರಿಯಲ್ಲಿ ಹೊರಟ ನನ್ನನ್ನು ಒತ್ತಾಯಪೂರ್ವಕವಾಗಿ ತಡವಿದೆ” ಎಂದಬ್ಬರಿಸಿದ. ಜ್ಯೋತಿಷಿಯು ಮೈಮೇಲಿನ ಸ್ಥಿಮಿತವನ್ನು ಕಳೆದುಕೊಂಡು ನಡುಗುತ್ತಾ, ಕದಲಿದ ದೀನ ಸ್ವರದಲ್ಲಿ “ ಇಂದು ನನ್ನನ್ನು ಬಿಟ್ಟು ಬಿಡಿ, ನಿಮ್ಮ ಜೊತೆ ನಾಳೆ ಮಾತನಾಡುವೆ” ಎಂದು ಬೇಡಿಕೊಂಡ. ಅಪರಿಚಿತನು ತನ್ನ ಮುಂಗೈಯಿಂದ ಜ್ಯೋತಿಷಿಯ ಮುಖಕ್ಕೆ ತಿವಿಯುತ್ತಾ “ ಸವಾಲೆ೦ದರೆ ಸವಾಲು..ಮುಂದುವರೆಸು” ಎಂದು ಗದರಿಸಿದ. ಜ್ಯೋತಿಷಿಯ ಗಂಟಲಾರಿ “ ನಿಮ್ಮ ಜೀವನದಲ್ಲಿ ಒಬ್ಬ ಮಹಿಳೆ….”, ಅಪರಿಚಿತನು “ನಿಲ್ಲಿಸು!!” ಅದೆಲ್ಲಾ ನನಗೆ ಬೇಡ, ನನ್ನ ಪ್ರಸ್ತುತ ಅನ್ವೇಷಣೆಯಲ್ಲಿ ಯಶಸ್ವಿಯಾಗುವೆನೋ ಇಲ್ಲವೋ? ಇಷ್ಟು ಹೇಳಿ ಹೊರಡು ಇಲ್ಲವಾದಲ್ಲಿ ನಿನ್ನಲ್ಲಿರುವ ಎಲ್ಲಾ ನಾಣ್ಯಗಳನ್ನು ಕಕ್ಕುವವರೆಗೆ ಇಲ್ಲಿಂದ ಕದಲಲು ಬಿಡುವದಿಲ್ಲ”. ಜ್ಯೋತಿಷಿಯು ತಿರಸ್ಕಾರದ ಧ್ವನಿಯಲ್ಲಿ ಏನೇನೊ ಮಾಟದ ಮಂತ್ರಗಳನ್ನು ಗೊಣಗುತ್ತ “ಹಾಗೆ ಆಗಲಿ ನಾನು ಮಾತನಾಡುವೆ, ಆದರೆ ನಾನು ಹೇಳುವದು ನಿಮಗೆ ಸಮಂಜಸವೆನಿಸಿದರೆ ಒಂದು ರೂಪಾಯಿ ಕೊಡುವಿರಾ? ಇಲ್ಲವಾದಲ್ಲಿ ನಾನು ತುಟಿ ಬಿಚ್ಚುವದಿಲ್ಲ, ನೀವು ಮನಸಿಗೆ ತೋಚಿದನ್ನು ಮಾಡಬಹುದು” ಎಂದು ಉತ್ತರಿಸಿದ. ಕೆಲ ಕಾಲದ ಚೌಕಾಶಿಯ ನಂತರ ಅಪರಿಚಿತನು ಜ್ಯೋತಿಷಿಯ ಮಾತಿಗೆ ಒಪ್ಪಿದ.
ಜ್ಯೋತಿಷಿಯು “ನಿಮ್ಮನ್ನು ಮೃತ್ಯುವಿನ ಸುಳಿಯಲ್ಲಿ ಬಿಡಲಾಗಿತ್ತು! ಹೌದಾ?” ಅಪರಿಚಿತನು “ಆಹಾ!! ನನಗೆ ಇನ್ನಷ್ಟು ಹೇಳು” ಎಂದು ಉದ್ಗರಿಸಿದ. ಜ್ಯೋತಿಷಿಯು “ ಒಂದು ಸಲ ನಿಮ್ಮನ್ನು ಚಾಕುವಿನಿಂದ ಇರಿಯಲಾಗಿತ್ತು!” ಆಗ ಅಪರಿಚಿತನು “ ಹೌದು! ಚೆನ್ನಾಗಿದೆ.. ನೋಡಿಲ್ಲಿ…” ಎಂದು ತನ್ನ ಅಂಗಿ ಬಿಚ್ಚಿ ಎದೆಯ ಮೇಲಿನ ಇರಿತದ ಕಲೆಯನ್ನು ತೋರಿಸುತ್ತ, ಮುಂದೆ ಹೇಳು” ಎಂದ.
ಜ್ಯೋತಿಷಿಯು “ನಂತರ ನಿಮ್ಮನ್ನು ಹತ್ತಿರದ ತೋಟದ ಬಾವಿಯಲ್ಲಿ ತಳ್ಳಿ, ಸಾಯಲು ಬಿಡಲಾಗಿತ್ತು!” ಆಗ ಅಪರಿಚಿತನು ಕುತೂಹಲದಿಂದ “ ಕೆಲ ದಾರಿಹೋಕರೇನಾದರೂ ಬಾವಿಯಲ್ಲಿ ಇಣುಕಿ ನೋಡದೇ ಇದ್ದಿದ್ದರೆ ನಾನು ಇಂದು ಬದುಕಿರುತ್ತಿರಲಿಲ್ಲ!!” ಮತ್ತೆ ಉತ್ಸಾಹಭರಿತನಾಗಿ ಕೈ ಬೆರಳುಗಳನ್ನು ಅದುಮಿಕೊಳ್ಳುತ್ತ ಮುಷ್ಟಿಮಾಡಿ “ಹೇಳು ಅವನು ನನ್ನ ಕೈಗೆ ಯಾವಾಗ..ಎಲ್ಲಿ ಸಿಗುವನು?” ಎಂದ. ಅದಕ್ಕೆ ಜ್ಯೋತಿಷಿಯು ಉತ್ತರಿಸುತ್ತಾ “ಪರಲೋಕದಲ್ಲಿ!! ನಾಲ್ಕು ವರ್ಷದ ಹಿಂದೆ ಅವನು ದೂರದ ಪಟ್ಟಣದಲ್ಲಿ ತೀರಿ ಹೋದನು, ಇನ್ನೂ ನಿಮಗೆ ಎಂದೆದಿಗೂ ಅವನನ್ನು ನೋಡಲು ಸಾಧ್ಯವಿಲ್ಲ”. ಅಪರಿಚಿತನಿಗೆ ತುಂಬಾ ಸಂಕಟವಾಯಿತು, ಸೇಡು ತೀರಿಸಿಕೊಳ್ಳಲಾಗಲಿಲ್ಲವೆಂದು ನಿರಾಸೆಯಾಯಿತು. ಆಗ ಜ್ಯೋತಿಷಿಯು ಮುಂದುವರೆದು “ಗುರು ನಾಯಕ್ …………………..” ಎಂದಾಗ,ಅಪರಿಚಿತನು ಆಶ್ಚರ್ಯಚಕಿತನಾಗಿ “ನಿನಗೆ ನನ್ನ ಹೆಸರೂ ಗೊತ್ತಾ!!” ಅದಕ್ಕೆ ಜ್ಯೋತಿಷಿಯು “ ನಾನು ಬೇರೆ ಎಲ್ಲ ವಿಷಯಗಳಂತೆ ನಿನ್ನ ಹೆಸರನ್ನೂ ಕೂಡ ಬಲ್ಲೆ… ಗುರು ನಾಯಕ್..ಈಗ ನಾನು ಹೇಳುವದನ್ನು ಎಚ್ಚರಿಕೆಯಿಂದ ಕೇಳು, ಈ ಪಟ್ಟಣದಿಂದ ಉತ್ತರ ದಿಕ್ಕಿಗೆ ಪ್ರಯಾಣಿಸಿ ಎರಡು ದಿನ ಕ್ರಮಿಸಿದರೆ ನಿನ್ನ ಹಳ್ಳಿ ಬರುವುದು..ತತ್ತಕ್ಷಣಕ್ಕೆ ಮುಂದಿನ ರೈಲು ಹಿಡಿದು ಊರ ಕಡೆ ಪ್ರಯಾಣ ಬೆಳೆಸು. ನೀನೇನಾದರೂ ಮತ್ತೆ ಮನೆ ಬಿಟ್ಟು ಹೊರ ನಡೆದರೆ ನಿನ್ನ ಜೀವಕ್ಕೆ ಗಂಡಾಂತರವಿದೆ!” ಎಂದು ಹೇಳಿ ಒಂದು ಚಿಟಿಕೆ ಪವಿತ್ರ ವಿಭೂತಿಯನ್ನು ಅವನಿಗೆ ಕೊಟ್ಟು “ಇದನ್ನು ನಿನ್ನ ಹಣೆಗೆ ಹಚ್ಚಿಕೊ ಮತ್ತು ಮನೆ ಕಡೆಗೆ ಹೊರಡು… ಇನ್ನೆಂದೂ ದಕ್ಷಿಣ ದಿಕ್ಕಿನತ್ತ ತಿರುಗಿಯೂ ಕೂಡ ನೋಡದಿರು ಅಂದರೆ ನೀನು ನೂರು ಕಾಲ ಬಾಳುವೆ.” ಎಂದನು. ಗುರು ನಾಯಕನು ವಿಚಾರಮಗ್ನನಾಗಿ “ ಇನ್ನೂ ನಾನೇಕೆ ಮತ್ತೆ ಮನೆ ಬಿಡಲಿ? ನಾನು ಆಗಾಗ ಮನೆ ಬಿಟ್ಟು ಹೋಗುತ್ತಿದ್ದುದು ಆ ಧೂರ್ತನನ್ನು ಹುಡುಕಲು ಮತ್ತು ಆಕಸ್ಮಾತ್ ಅವನು ಭೇಟಿಯಾದರೆ ಅವನ ಕಥೆ ಮುಗಿಸಲು..” ಮತ್ತೆ ವಿಷಾದದಿಂದ ತಲೆಯಲ್ಲಾಡಿಸುತ್ತಾ “ ನನ್ನ ಕೈಯಿಂದ ತಪ್ಪಿಸಿಕೊಂಡುಬಿಟ್ಟ.. ಅವನು ಸಾವಿಗೆ ಅರ್ಹನೇ..ಕಡೆಪಕ್ಷ ಅವನು ಸತ್ತು ಹೋದನಲ್ಲ ಅದೇ ಸಮಾಧಾನದ ವಿಷಯ.” ಎಂದನು. ಆಗ ಜ್ಯೋತಿಷಿಯು “ ಹೌದು, ಅವನು ಅಪಘಾತವೊಂದರಲ್ಲಿ ಲಾರಿಯ ಅಡಿಯಲ್ಲಿ ಸಿಲುಕಿ ಅಪ್ಪಚ್ಚಿಯಾದನು.” ಇದನ್ನು ಕೇಳಿ ಗುರು ನಾಯಕನು ಆನಂದಿತನಾಗಿ ಮನದಿಚ್ಛೆ ಈಡೇರಿತೆಂದು ಸಂತುಷ್ಟನಾದನು.
ಜ್ಯೋತಿಷಿಯು ತನ್ನೆಲ ಸಾಮಗ್ರಿಗಳನ್ನು ಚೀಲದಲ್ಲಿ ಹಾಕಿಕೊಳ್ಳುವಷ್ಟರಲ್ಲಿ ಆ ಸ್ಥಳ ನಿರ್ಜನಮಯವಾಗಿತ್ತು. ಹಸಿರು ಬೆಳಕಿನ ಗುಚ್ಛವೂ ಮಾಯವಾಗಿ, ಸಂಪೂರ್ಣ ಕತ್ತಲಾವರಿಸಿ ಮೌನ ಕವಿದಿತ್ತು. ಅಪರಿಚಿತನು (ಗುರು ನಾಯಕ್) ಜ್ಯೋತಿಷಿಗೆ ಇನ್ನಷ್ಟು ನಾಣ್ಯಗಳನ್ನು ನೀಡಿ ಕತ್ತಲಲ್ಲಿ ಅಲ್ಲಿಂದ ದೂರ ಸಾಗಿದ್ದ.
ಜ್ಯೋತಿಷಿ ಮನೆ ತಲುಪಿದಾಗ ಸುಮಾರು ಮಧ್ಯರಾತ್ರಿ ಆಗಿತ್ತು. ಅವನ ಹೆಂಡತಿಯು ಅವನಿಗಾಗಿ ಬಾಗಿಲಲ್ಲಿ ದಾರಿಕಾಯುತ್ತಾ ನಿಂತಿದ್ದಳು, ತಡವಾಗಿ ಬಂದದ್ದಕ್ಕೆ ವಿವರಣೆಯನ್ನು ಕೇಳಿದಳು. ಜ್ಯೋತಿಷಿಯು ನಾಣ್ಯಗಳನ್ನು ಅವಳತ್ತ ಎಸೆದು “ ಈ ನಾಣ್ಯಗಳನ್ನು ಎಣಿಸು..ಒಬ್ಬ ವ್ಯಕ್ತಿಯೇ ಎಲ್ಲವನ್ನೂ ಕೊಟ್ಟದ್ದು” ಎಂದನು. ಅವಳು ನಾಣ್ಯಗಳನ್ನು ಎಣಿಸುತ್ತಾ ಅತ್ಯಂತ ಸಂತೋಷದಿಂದ “ ಹನ್ನೆರಡುವರೆ ಅಣೆಗಳೂ…..ಆಹಾ! ನಾಳೆ ನಾನು ಸ್ವಲ್ಪ ಬೆಲ್ಲ ಮತ್ತು ತೆಂಗಿನಕಾಯಿ ತರಬಹುದು..ಮಗು ಸುಮಾರು ದಿನಗಳಿಂದ ಸಿಹಿ ತಿಂಡಿಯನ್ನು ಕೇಳುತ್ತಿದೆ..ಅವಳಿಗಿಷ್ಟವಾದ ಸವಿರುಚಿಯೊಂದನ್ನು ನಾಳೆ ಮಾಡುವೆ.”
ಜ್ಯೋತಿಷಿಯು “ಆ ಹಂದಿ ನನಗೆ ಮೋಸ ಮಾಡಿದ! ಅವನು ನನಗೆ ಒಂದು ರೂಪಾಯಿ(ಹದಿನಾರು ಅಣೆ) ಕೊಡುವ ಭರವಸೆ ನೀಡಿದ್ದ.” ಆಗ ಅವಳು ಜ್ಯೋತಿಷಿಯ ಮುಖ ನೋಡುತ್ತಾ ಕೇಳಿದಳು “ಯಾಕೆ ಏನಾಯಿತು? ತುಂಬಾ ಚಿಂತಾಕ್ರಾಂತರಾಗಿದ್ದೀರಾ?” ಜ್ಯೋತಿಷಿಯು “ ಏನೂ ಇಲ್ಲಾ ..” ಎಂದ.
ಜ್ಯೋತಿಷಿಯು ಊಟದ ನಂತರ ಮಂಚದ ಮೇಲೆ ಕುಳಿತು ಹೆಂಡತಿಗೆ “ ನಿನಗೆ ಗೊತ್ತಾ ..? ಇಂದು ನನ್ನ ತಲೆಯಿಂದ ದೊಡ್ಡ ಭಾರವೊಂದು ಕಳಚಿದೆ ನಾನು ನಿರಾಳನಾಗಿದ್ದೇನೆ. ನನ್ನ ಕೈ ರಕ್ತಸಿಕ್ತವಾಗಿದೆ ಎಂದುಕೊಡಿದ್ದೆ… ಆ ಕಾರಣದಿಂದಲೇ ನಾನು ಮನೆ ಬಿಟ್ಟು ಓಡಿಬಂದದ್ದು, ನಂತರ ನಿನ್ನನ್ನು ಮದುವೆಯಾಗಿ ಸಂಸಾರಹೂಡಿ ಇಲ್ಲಿ ನೆಲೆಸಿದ್ದು. ಅವನು ಬದುಕಿರುವ….”
ಅವನ ಹೆಂಡತಿಯು ಎದೆಬಡಿತ ತೀವ್ರವಾಗಿ, ಜೋರಾಗಿ ಉಸಿರುಬಿಡುತ್ತಾ “ ಏನು..ನೀವು ಕೊಲ್ಲಲ್ಲು ಪ್ರಯತ್ನಿಸಿದ್ದಿರಾ!”
“ ಹೌದು- ನಾನು ಯುವಕನಾಗಿರುವಾಗ, ಒಂದು ದಿನ ನಮ್ಮ ಹಳ್ಳಿಯಲ್ಲಿ, ಎಲ್ಲಸೋಮಾರಿಗಳು, ಮುಠ್ಥಾಳರೊಂದೆಡೆ ಸೇರಿ ವಿಪರೀತವಾಗಿ ಕುಡಿದು ಜೂಜಾಡಿ ತುಂಬಾ ಕೆಟ್ಟದಾಗಿ ಜಗಳವಾಡಿದ್ದೆವು. ಹೋಗಲಿ ಈಗೇಕೆ ಅದರ ವಿಚಾರ? ಇದು ನಿದ್ರೆಯ ಸಮಯ” ಎಂದು, ಆಕಳಿಸುತ್ತಾ ಮಂಚದ ಮೇಲೆ ಕಾಲು ಚಾಚಿ ನಿದ್ರೆಗೆ ಜಾರಿದನು.
ಇಂಗ್ಲೀಷ್ ಮೂಲ ಕಥೆ: ಆರ್ ಕೆ ನಾರಾಯಣರ ‘ಐನ್ ಅಸ್ಟ್ರೊಲಾಜರ್ಸ್ ಡೇ’
ರೇಖಾ ಚಿತ್ರಗಳು: ಆರ್ ಕೆ ಲಕ್ಷ್ಮಣ -ರೇಖಾ ಚಿತ್ರಗಳ ಸಂಗ್ರಹ-ಕೃಪೆ:ಅಂತರ್ಜಾಲ
ಕನ್ನಡ ಅನುವಾದ: ಶ್ರೀನಿವಾಸ ನಾ ಪಂಚಮುಖಿ
Facebook ಕಾಮೆಂಟ್ಸ್