X

ಐನೂರು ರೂಪಾಯಿಗಳಲ್ಲಿ ನಾವು ಒಂದು ಕಿರುಚಿತ್ರವನ್ನು ಮಾಡಿದ್ದು ಹೇಗೆ?

2006. ಆಗ ಐನೂರು ರೂಪಾಯಿ ಎಂದರೆ ಕಡಿಮೆ ದುಡ್ಡೇನಲ್ಲ. ಆಗ ಪೆಟ್ರೋಲ್ ಬೆಲೆ ಐವತ್ತಕ್ಕಿಂತ ಕಡಿಮೆ ಇತ್ತು. ಆಗ ತಾನೆ ಇಂಜಿನಿಯರಿಂಗ್ ಮುಗಿಸಿದ್ದೆ. ಸಿನಿಮಾ ರಂಗದಲ್ಲಿ ಬದುಕನ್ನು ಹೇಗೆ ರೂಪಿಸಿಕೊಳ್ಳಬೇಕು ಎಂದು ಯೋಚಿಸುತ್ತಿದ್ದೆ. ಹೀಗೆಯೇ ಒಂದು ಸಂಜೆ ಗೆಳೆಯರೊಡನೆ ನಮ್ಮ ಟೀ ಅಂಗಡಿಯಲ್ಲಿ ಕೂತು ಟೀ ಕುಡಿಯುತ್ತಿದ್ದಾಗ ನನ್ನ ಗೆಳೆಯ ಕಾರ್ತಿಕ್ ಪ್ರಶಾಂತ್ ಒಂದು ಐಡಿಯಾ ಹೇಳಿದ. ’ಸಿಗರೇಟ್ ಬಗ್ಗೆ ಒಂದು ಕಿರುಚಿತ್ರ ಮಾಡೋಣ’. ಯಾಕೋ ನನಗೆ ಅದರಲ್ಲಿ ಅಂತದ್ದೇನೂ ಸ್ವಾರಸ್ಯವಿಲ್ಲ ಎನಿಸಿತು. ಅವನು ಮುಂದುವರಿಸಿದ. ’ಎಲ್ಲರೂ ಮಾಡುವ ಹಾಗೆ ಮಾಡೋದು ಬೇಡ. ಸ್ವಲ್ಪ ಹಾಸ್ಯ ಸೇರಿಸಿ ಮಾಡೋಣ. ಒಬ್ಬ ಸಿಗರೇಟ್ ಹೊತ್ತಿಸಲು ಹವಣಿಸುತ್ತಿರುತ್ತಾನೆ. ಎಲ್ಲಿಂದಲೋ ಒಬ್ಬ ಆಂಟಿ ಬಂದು ಅವನ ಮೇಲೆ ನೀರು ಸುರಿದುಬಿಡುತ್ತಾರೆ! ಹೇಗಿದೆ ಐಡಿಯಾ?!’ ನಮಗೆಲ್ಲಾ ವಿಪರೀತ ನಗು ಬಂತು. ಮನಸ್ಸಿನಲ್ಲಿ ಕಿರುಚಿತ್ರವೊಂದರ ಸೃಷ್ಟಿ ಆಯಿತು. ನಾವೆಲ್ಲರೂ ಕೂತು ಏನೇನು ಸನ್ನಿವೇಶಗಳು ಕಥೆಯಲ್ಲಿ ಬರಬಹುದು ಎಂದು ಯೋಚಿಸಿ ಬರೆಯತೊಡಗಿದೆವು. ಆಗ ನಮಗೆ ತಿಳಿದಿರಲಿಲ್ಲ. ನಾವು ಬರೆಯುತ್ತಿದ್ದುದು ಚಿತ್ರಕಥೆ ಎಂದು! ಎಲ್ಲ ಚಿತ್ರಗಳಂತೆ ಸಂದೇಶ ಕೊಡುವುದು ಬೇಡ. ಅದರ ಬದಲಾಗಿ ಹಾಸ್ಯಮಯವಾಗಿ ಒಂದು ಕಿರುಚಿತ್ರ ಮಾಡಿ ಕೊನೆಗೆ ಸಂದೇಶ ನೀಡುವುದು ಎಂದು ನಿರ್ಧರಿಸಿದೆವು. ಕೆಲವು ದಿನಗಳು ಸಿಗರೇಟ್ ಸೇದುವವರನ್ನು ಗಮನಿಸುತ್ತಾ ಬಂದೆವು. ಒಂದು ವಾರದ ನಂತರ ಚಿತ್ರ ನಿರ್ಮಾಣಕ್ಕೆ ತಯಾರಾಗಿ ನಿಂತೆವು.

ಮುಂದೆ ನಮಗೆ ಎದುರಾದ ಸಮಸ್ಯೆ ಎಂದರೆ ಮುಖ್ಯ ಪಾತ್ರವನ್ನು ನಿರ್ವಹಿಸುವ ಪಾತ್ರಧಾರಿ ಯಾರು ಎಂಬುದು. ಹಾಸ್ಯ ನಟನಿಗಿಂತ ಗಂಭೀರವಾಗಿ ಕಂಡು ಹಾಸ್ಯ ನಟನೆ ಮಾಡುವ ನಟ ಹೆಚ್ಚು ಸೂಕ್ತ ಎಂದು ನನ್ನ ಮನಸ್ಸು ಹೇಳುತ್ತಿತ್ತು. ತಕ್ಷಣ ನನಗೆ ನೆನಪಾದದ್ದು ನನ್ನ ಗೆಳೆಯ ಕಾರ್ತಿಕ್ ರಾಮ್. ಕಾರ್ತಿಕ್ ಹಾಗೂ ನಾನು ಬಹಳ ದಿನಗಳ ಸ್ನೇಹಿತರು. ವಿಶೇಷ ಸಂಗತಿಯೆಂದರೆ, ಪಾತ್ರ ಮಾಡಲು ನನಗೊಂದು ಅವಕಾಶ ಕೊಡು ಎಂದು ನಾನೇ ಅವನನ್ನು ಕೇಳಿದ್ದೆ! ಕಾರ್ತಿಕ್ ಕಥಾವಸ್ತುವನ್ನು ಮೆಚ್ಚಿ ಒಪ್ಪಿಕೊಂಡ. ಚಿತ್ರೀಕರಣಕ್ಕೆ ಎಲ್ಲವೂ ಸಿದ್ಧವಾಗಿತ್ತು.

ಮಾರನೆಯ ದಿನ, ನಾನು ಸೊನ್ನೆ ಬಜೆಟ್ ನಲ್ಲಿ, ಒಬ್ಬ ಅನುಭವೀ ನಟನ ಜೊತೆ ಶೂಟಿಂಗ್ ಮಾಡುವ ದಿನ.

ನನ್ನ ಮುಂದಿನ ಅಂಕಣದಲ್ಲಿ: ಬಜೆಟ್ ಇಲ್ಲದೆ ಒಂದು ಕಿರುಚಿತ್ರವನ್ನು ಮಾಡಿದ ನನ್ನ ಅನುಭವ.

CUT TO CLIMAX : ನನ್ನ ಕಿರುಚಿತ್ರದ ಹೆಸರು ’ಟೈಂ ಪಾಸ್’. ಕಿರು ಚಿತ್ರೋತ್ಸವಗಳಲ್ಲಿ ಅದಕ್ಕೆ ಒಳ್ಳೆಯ ಮನ್ನಣೆ ಸಿಕ್ಕಿತು. ಬಹಳಷ್ಟು ಜನ, ಚಿತ್ರವನ್ನು ಮೆಚ್ಚಿ ಇದನ್ನೇಕೆ ನೀವು ಪೂರ್ಣ ಪ್ರಮಾಣದ ಚಿತ್ರವನ್ನಾಗಿ ಮಾಡಬಾರದು ಎಂದು ಸಲಹೆ ಕೊಟ್ಟರು. ಯೋಚನೆ ಮಾಡಬೇಕಾದ ವಿಷಯವೇ…

Facebook ಕಾಮೆಂಟ್ಸ್

Akash Srivatsa: ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಮೂಡಿಸುತ್ತಿರುವ ನಿರ್ದೇಶಕ. ಹಿರಿಯ ನಟ ರಮೇಶ್ ಅರವಿಂದ್ ಅವರ ಗರಡಿಯಲ್ಲಿ ಪಳಗಿರುವ ಆಕಾಶ್ “ಆಕ್ಸಿಡೆಂಟ್” ಚಿತ್ರದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವೃತ್ತಿಯನ್ನಾರಂಭಿಸಿದ್ದರು. ಇವರ “ಸುಳ್ಳೇ ಸತ್ಯ- ದ ರಿಯಲ್ ಲೈ” ಕಿರುಚಿತ್ರವು ಪ್ರತಿಷ್ಟಿತ ‘Cannes film festival’ ನಲ್ಲಿ ಪ್ರದರ್ಷಿತವಾಗುವುದರೊಂದಿಗೆ ಈ ಹಿರಿಮೆಗೆ ಪಾತ್ರವಾದ ಮೊದಲ ಕನ್ನಡ ಕಿರುಚಿತ್ರವಾಗಿದೆ. ಇದೀಗ ಸದ್ಯದಲ್ಲಿ ಬಿಡುಗಡೆಗೊಳ್ಳಲಿರುವ "ಬದ್ಮಾಷ್" ಚಲನಚಿತ್ರದ ನಿರ್ದೇಶಕರಾಗಿದ್ದಾರೆ
Related Post