X

ಏನೇನೋ ಆಗಬಹುದಾಗಿದ್ದರೂ ಆ ಹುಚ್ಚಪ್ಪ ದೇಶಭಕ್ತನಾಗಿ ಬಿಟ್ಟನಲ್ಲ!

ಮೇಜರ್ ಜನರಲ್ ಗಗನ್‍ದೀಪ್ ಭಕ್ಷಿ ಅಂದು ಟೈಮ್ಸ್ ನೌ ಟಿವಿ ಚಾನೆಲಿನ ನ್ಯೂಸ್ ಅವರ್ ಕಾರ್ಯಕ್ರಮದಲ್ಲಿ ಕಣ್ಣೀರಾಗಿಬಿಟ್ಟಿದ್ದರು. ದೇಶದ ಕೇಂದ್ರೀಯ ವಿಶ್ವವಿದ್ಯಾಲಯ ಗಳ ಮೇಲೆ ಭಾರತದ ಧ್ವಜ ಹಾರಿಸಬೇಕೇ ಬೇಡವೇ ಎಂಬ ಚರ್ಚೆ ನಡೆಯುತ್ತಿತ್ತು. “ಕೂಡದು! ಇದು ನಮ್ಮ ಸೆಕ್ಯುಲರ್ ತತ್ತ್ವಗಳಿಗೆ ವಿರುದ್ಧವಾದದ್ದು” ಎಂದೊಬ್ಬ ಬುದ್ಧಿವಂತ ವಾದ ಮುಂದಿಟ್ಟಿದ್ದ. “ಹಾರಿಸುವುದೇನೋ ಓಕೆ, ಆದರೆ ಈಗಲೇ ಯಾಕೆ?” ಎಂದು ಇನ್ನೊಬ್ಬಳು ಬುದ್ಧಿವಂತೆ ಕ್ಯಾತೆ ತೆಗೆಯುತ್ತಿದ್ದಳು. ಹವಾ ನಿಯಂತ್ರಿತ ಕೋಣೆಯಲ್ಲಿ ಕೂತು ದೇಶಭಕ್ತಿ ಇರಬೇಕೋ ಬೇಡವೋ ಎಂದು ಚರ್ಚಿಸುತ್ತಿದ್ದ ಈ ಅತಿ ಜಾಣರನ್ನು ಕಂಡು, ತನ್ನ ಜೀವನದ ಮುಕ್ಕಾಲು ಪಾಲನ್ನು ಯುದ್ಧ ರಂಗದಲ್ಲಿ ಕಳೆದಿದ್ದ ಆ ಯೋಧನಿಗೆ ಬೆವರು ಕಿತ್ತು ಬರುತ್ತಿತ್ತು. ತನ್ನ ತಂದೆ-ತಾಯಿ, ಅಣ್ಣ-ತಮ್ಮಂದಿರು, ಗೆಳೆಯರು, ಪರಮಾಪ್ತ ಸೈನಿಕ ಸಹೋದ್ಯೋಗಿಗಳು ಸತ್ತಾಗಲೂ ಒಂದು ಹನಿ ಕಣ್ಣೀರು ನೆಲಕ್ಕೆ ಬೀಳದಂತೆ ಸಂಯಮ ಕಾಪಾಡಿಕೊಂಡಿದ್ದ ಭಕ್ಷಿ, ಅಂದು ಮಾತ್ರ ಗಳಗಳನೆ ಅತ್ತು ಬಿಟ್ಟರು. ಟಿವಿ ಪರದೆಯತ್ತ ಕಣ್ಣು ನೆಟ್ಟಿದ್ದ ಲಕ್ಷಾಂತರ ಜನ ಭಾರತೀಯರ ಹೃದಯಗಳನ್ನು ಆ ಕ್ಷಣದಲ್ಲಿ ಹಿಂಡಿ ತೆಗೆದಂತಾಯಿತು. ಹಲವು ಕಪೋಲಗಳು ಆ ಹೊತ್ತಿಗೆ ಅಶ್ರುಗಳಿಂದ ತೋಯ್ದು ಬಿಟ್ಟಿದ್ದವು.

ಮರು ದಿನ ಭಕ್ಷಿಯವರು ತನ್ನ ಜಾಲತಾಣದ ಖಾತೆಯಲ್ಲಿ ಕೆಲವು ಮಾತುಗಳನ್ನು ಬರೆದುಕೊಂಡರು. “ನನಗೆ ಆ ಒಂದು ಕ್ಷಣದಲ್ಲಿ ಜ್ಞಾನೋದಯವಾದಂತಾಯಿತು. ನಾವು ಸೈನಿಕರಿಗೂ ದೇಶಭಕ್ತಿಯ ಚರ್ಚೆ ಮಾಡುತ್ತಿರುವ ಈ ಉಳಿದವರಿಗೂ ಏನು ವ್ಯತ್ಯಾಸ ಎಂಬುದು ತಟ್ಟನೆ ತಿಳಿದು ಹೋಯಿತು. ನಮಗೆ ಬಾವುಟವೇ ಬದುಕು. ರಾಷ್ಟ್ರವೇ ಧರ್ಮ. ಅದೇ ತಾಯಿ. ದೇಶದ ಗಡಿ ರೇಖೆಗಳನ್ನು ಒಂದಿಂಚಿನಷ್ಟೂ ಬೇರೆಯವರು ಕಸಿಯದಂತೆ ನೋಡಿಕೊಳ್ಳುವುದೇ ನಮ್ಮ ಗುರಿ. ಅಥವಾ ಹಾಗೆಂದು ನಂಬಿಸಿ ನಮ್ಮನ್ನು ತಯಾರು ಮಾಡಲಾಗಿರುತ್ತದೆ. ರಾಷ್ಟ್ರಧ್ವಜಕ್ಕಾಗಿ ಜೀವ ಕೊಡುವುದಕ್ಕೂ ಸಿದ್ಧರಾಗಿರುತ್ತೇವೆ ನಾವು. ಆದರೆ, ಉಳಿದವರಿಗೆ? ಅವರಿಗೆ ಅದೊಂದು ಬಟ್ಟೆಯ ತುಂಡಷ್ಟೇ ಆಗಿರಬಹುದು. ಬಾವುಟವನ್ನು ಕಂಡಾಗ ನಾವು ಪುಳಕಿತರಾದಂತೆ ಅವರೂ ರೋಮಾಂಚನ ಅನುಭವಿಸುತ್ತಾರೆಂದು ಭಾವಿಸುವುದು ಬಹುಶಃ ನನ್ನ ಮುಟ್ಟಾಳತನವಿರಬಹುದು. ಯಾಕೆಂದರೆ ಅವರು ದೇಶ, ದೇಶಭಕ್ತಿ ಇತ್ಯಾದಿ ಭಾವನೆಗಳಿಗೆ ಅತೀತರಾಗಿ ಬದುಕುತ್ತಿರುವವರು. ದೇಶಭಕ್ತಿ ಇಲ್ಲದೇ ಹೋದರೂ ಆರಾಮಾಗಿ ಜೀವನ ಕಳೆಯುವ ಅವಕಾಶ ಮತ್ತು ಸೌಕರ್ಯ ಅವರಿಗಿದೆ. ಆದರೆ ನಾವು ಸೈನಿಕರಿಗೆ ಅಂಥ ಆಯ್ಕೆಯೇ ಇಲ್ಲವಲ್ಲ! ನಮಗಿರುವುದು ಒಂದೇ ಆಯ್ಕೆ. ದೇಶಕ್ಕಾಗಿ ಬದುಕು, ಇಲ್ಲವೇ ಸಾಯಿ!” – ಹಾಗೆಂದು ಬರೆದಿದ್ದರು ಭಕ್ಷಿ. ಬಹುಶಃ ಆಗಲೂ ಅವರು ಒತ್ತೊತ್ತಿ ಬರುವ ಕಣ್ಣೀರನ್ನು ಒರೆಸಿಕೊಂಡೇ ಬರೆಯುತ್ತಿದ್ದರೆಂದು ಕಾಣುತ್ತದೆ. ಅಲ್ಲಿ ದೇಶಪ್ರೇಮದ ಭಾವ, ಭ್ರಮನಿರಸನದ ನಿಟ್ಟುಸಿರು ಎಲ್ಲ ಒಟ್ಟಾಗಿ ಅಕ್ಷರಗಳನ್ನು ತೇವಗೊಳಿಸಿದಂತೆಯೇ ಕಾಣುತ್ತಿತ್ತು ನಮಗೆಲ್ಲ. ದೇಶಕ್ಕಾಗಿ ಹಲವು ಯುದ್ಧಗಳನ್ನು ಗೆದ್ದು ಕೊಟ್ಟ ಮಹಾ ಸೇನಾನಿಯೊಬ್ಬರು ದೇಶದೊಳಗಿನ ಅತಿ ಬುದ್ಧಿವಂತ ರಾಷ್ಟ್ರದ್ರೋಹಿಗಳ ಎದುರು ಸೋತಿದ್ದರು.

ಭಕ್ಷಿಯವರ ಕಣ್ಣೀರನ್ನು ಅರ್ಥ ಮಾಡಿಕೊಳ್ಳಬೇಕಾದರೆ ನಾವು ಸಾವಿರಾರು ಪುಟಗಳ ಉದ್ಗ್ರಂಥಗಳನ್ನು ಅಧ್ಯಯನ ಮಾಡಬೇಕಿಲ್ಲ. ಅನುಜ್ ನಯ್ಯರ್ ಎಂಬಾತನ, ಪೂರ್ಣಾಯುಷ್ಯದ ಕಾಲು ಭಾಗಕ್ಕೂ ಒಂಚೂರು ಕಮ್ಮಿಯೇ ಇದ್ದ ಜೀವನದ ಕತೆಯನ್ನು ಸುಮ್ಮನೆ ಓದಿದರೆ ಸಾಕು. ಈ ಹುಡುಗ ದೆಹಲಿಯಲ್ಲಿ ಹುಟ್ಟಿ ಬೆಳೆದವನು. ಅಪ್ಪ ಎಸ್.ಕೆ. ನಯ್ಯರ್ ಡೆಲ್ಲಿ ಸ್ಕೂಲ್ ಆಫ್ ಎಕಾನಮಿಕ್ಸ್’ನಲ್ಲಿ ಪ್ರೊಫೆಸರ್ ಆಗಿದ್ದವರು. ತಾಯಿ ದೆಹಲಿ ವಿವಿಯಲ್ಲಿ ಲೈಬ್ರೇರಿಯನ್ ಆಗಿ ಕೆಲಸ ಮಾಡುತ್ತಿದ್ದವರು. ಓದಿನಲ್ಲಿ ತೀರಾ ಚುರುಕುತಲೆಯ ಈ ಹುಡುಗ ಮನಸ್ಸು ಮಾಡಿದ್ದರೆ ಯಾವುದಾದರೊಂದು ಪ್ರತಿಷ್ಠಿತ ಕಾಲೇಜಿನಲ್ಲಿ ಅಧ್ಯಾಪಕನಾಗಿ ಸೇರಿ ಲೈಫ್ ಸೆಟ್ಲ್ ಮಾಡಿಕೊಳ್ಳುವುದು ಸುತಾರಾಂ ಕಷ್ಟದ ಮಾತಾಗಿರಲಿಲ್ಲ. ಚಿಕ್ಕಂದಿನಿಂದಲೂ ಅನುಜ್ ಎಂದರೇನೇ ಶಕ್ತಿ ನಿರ್ಘಾತ. ನಿಂತಲ್ಲಿ ನಿಲ್ಲದ ಪಾದರಸದ ಗುಂಡು. ರಸ್ತೆಯಲ್ಲಿ ಕ್ರಿಕೆಟ್ಟಾಡುತ್ತ ಈತ ಗಾಜೊಡೆಯದ ಮನೆಯೇ ಆ ಗಲ್ಲಿಯಲ್ಲಿರಲಿಲ್ಲ. ವಾಲಿಬಾಲ್ ಆಡಿ ಪ್ರತಿದಿನ ಅಂಗಿಯೆಲ್ಲ ಮಣ್ಣು ಮಾಡಿಕೊಂಡು ಬರುತ್ತೀಯೆಂದು ಮನೆಯಲ್ಲಿ ಗದರಿದರೆ, ಈತ ಆಡುವುದನ್ನು ನಿಲ್ಲಿಸಲಿಲ್ಲ; ಅಂಗಿ ಕಳಚಿಟ್ಟು ಆಡಲು ಹೋಗುತ್ತಿದ್ದ! ಒಂದಿಲ್ಲೊಂದು ಭಾನಗಡಿ ಮಾಡಿ ಶಾಲೆಯಲ್ಲಿ ಟೀಚರುಗಳನ್ನು ಗೋಳು ಹುಯ್ದುಕೊಳ್ಳುತ್ತಿದ್ದ ಈ ತುಂಟ ಕೃಷ್ಣನನ್ನು ಹಿಡಿಯಲು ಟೀಚರು “ಅನುಜ್ ವಾಂಟೆಡ್. ಡೆಡ್ ಆರ್ ಅಲೈವ್” ಎಂದು ಬೋರ್ಡಲ್ಲಿ ಬರೆಯುತ್ತಿದ್ದರಂತೆ. ಹನ್ನೆರಡನೇ ಕ್ಲಾಸಿನಲ್ಲಿ ಒಳ್ಳೆಯ ಮಾರ್ಕು ಸಿಕ್ಕ ಮೇಲೆ ಅನುಜ್ ತನ್ನ ಹೆತ್ತವರೆದುರು ಬಂದು “ನಾನು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಸೇರುತ್ತೇನೆ” ಎಂದ. ತನ್ನ ಮಗನ ಇಷ್ಟಾನಿಷ್ಟಗಳಿಗೆ ಒಮ್ಮೆಯೂ ಅಡ್ಡಿ ಬರದಿದ್ದ ಅಪ್ಪ ಮರು ಮಾತಾಡದೆ ಹ್ಞೂ ಅಂದೇ ಬಿಟ್ಟರು. ಅನುಜ್ ಎನ್‍ಡಿಎನಲ್ಲಿ ಓದಿ ಡಿಗ್ರಿ ಪಡೆದು ಹೊರ ಬರುವಷ್ಟರಲ್ಲೇ ಅವನ ಕೈಗೆ ಸೈನಿಕ ಉದ್ಯೋಗ ಬಂದು ಬಿದ್ದಿತ್ತು. 1997ರಲ್ಲಿ ಅವನು ತನ್ನ ಜೀವಮಾನದ ಕನಸಾಗಿದ್ದ ಭಾರತೀಯ ಸೇನೆಗೆ ಯೋಧನಾಗಿ ಸೇರಿದ. ಅವನಿಗಾಗ ಬಿಸಿ ರಕ್ತದ ಇಪ್ಪತ್ತೆರಡಷ್ಟೆ.

ತನ್ನ ಮಗನನ್ನು ಏನೆಲ್ಲ ಮಾಡಬೇಕೆಂದು ಆ ಹೆತ್ತ ಕರುಳು ಯೋಚಿಸಿತ್ತೋ ಯಾರು ಬಲ್ಲರು! ಪ್ರೊಫೆಸರ್ ಆಗಿ, ಕೈತುಂಬ ಸಂಬಳ ತರುವ ಸಾಫ್ಟ್‍ವೇರ್ ಇಂಜಿನಿಯರ್ ಆಗಿ, ವೈದ್ಯನಾಗಿ, ಕರಿ ಕೋಟಿನ ವಕೀಲನಾಗಿ, ಅಥವಾ ಬ್ಯುಸಿನೆಸ್‍ಮನ್ ಆಗಿ ಏನೆಲ್ಲ ಮಾಡಬೇಕೆಂದು ಕನಸು ಕಂಡಿದ್ದರೋ ಯಾರಿಗೆ ಗೊತ್ತು. ಆದರೆ, ಅವೆಲ್ಲವನ್ನು ಬದಿಗಿಟ್ಟು ಮಗ ಸೇನೆಯ ಸಮವಸ್ತ್ರ ಧರಿಸಿ ಕೈಯಲ್ಲಿ ಬಂದೂಕು ಹಿಡಿದಾಗ, ಅದನ್ನು ಬಿಚ್ಚು ಮನಸ್ಸಿನಿಂದ ಸ್ವಾಗತಿಸಿದರು. ದೇಶ ರಕ್ಷಣೆಯ ಕೆಲಸಕ್ಕೆ ಸೇರಿದ್ದೀ ಮಗನೇ, ಒಳ್ಳೆಯ ಕೆಲಸ ಎಂದು ಮನದುಂಬಿ ಹಾರೈಸಿ ಕಳಿಸಿದರು. ಅನುಜ್ ಎರಡೇ ವರ್ಷಗಳಲ್ಲಿ ತನ್ನ ಎಲ್ಲ ಪ್ರಾವೀಣ್ಯವನ್ನೂ ಪೂರ್ಣಪ್ರಮಾಣದಲ್ಲಿ ಪ್ರದರ್ಶಿಸಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದ. ರಜೆಯ ದಿನಗಳಲ್ಲಿ ಮನೆಗೆ ಬರುತ್ತಿದ್ದ. ಹಲವು ದಿನಗಳನ್ನು ತಂದೆ ತಾಯಿಯೊಂದಿಗೆ ಕಳೆಯುತ್ತಿದ್ದ. ಅಪ್ಪನಿಗಾಗಿ ವಿಶೇಷ ಜಪಾನೀ ವಿಸ್ಕಿಯ ಬಾಟಲು ತರಿಸಿ, ಇದನ್ನು ನಿನ್ನ ಇಪ್ಪತ್ತೈದನೆಯ ಮದುವೆಯ ವಾರ್ಷಿಕೋತ್ಸವದ ದಿನ ಒಡೆದು ನಾವಿಬ್ಬರೂ ಕುಡಿಯೋಣ ಅಪ್ಪಾ ಅಂದಿದ್ದ. ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಮೆಚ್ಚಿನ ಹುಡುಗಿಯ ಜೊತೆ ಅನುಜ್‍ನ ಮದುವೆಯೂ ನಿಕ್ಕಿಯಾಯಿತು. 1999ರ ಆಗಸ್ಟ್ನ’ನ್ಲ್ಲಿ ಗಟ್ಟಿಮೇಳ ಊದಿಸಿಯೇ ಬಿಡೋಣ ಎಂಬ ತೀರ್ಮಾನವೂ ಆಯಿತು. ಅಪ್ಪ-ಮಗ ಇಬ್ಬರೂ ಬಜಾರಿಂದ ಮದುವೆಗಾಗಿ ಸ್ಪೆಷಲ್ ಸೂಟುಗಳನ್ನು ಹೊಲಿಸಿಕೊಂಡು ತಂದರು. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎನ್ನುವಂತಿತ್ತು ಎಲ್ಲವೂ.

ರಜೆ ಮುಗಿಸಿಕೊಂಡು ಮರಳಿ ಹೋಗಿದ್ದ ಅನುಜ್‍ನಿಂದ ಒಂದು ಪತ್ರ ಬಂತು. ಸಾಧ್ಯವಾದರೆ ಒಂದೆರಡು ವಾರದ ದೊಡ್ಡ ರಜೆಯನ್ನೇ ಮದುವೆಯ ಸಂದರ್ಭದಲ್ಲಿ ಪಡೆಯುತ್ತೇನೆಂದು ಹೇಳಿದ್ದನಲ್ಲ; ಬಹುಶಃ ಅದೇ ವಿಷಯ ಇರಬೇಕು, ರಜೆ ಮಂಜೂರಾಗಿರಬಹುದು ಎಂದು ಯೋಚಿಸುತ್ತ ಪತ್ರ ಒಡೆದ ತಂದೆಗೆ ಎದುರಾದ ಸುದ್ದಿ ಯುದ್ಧದ್ದು. ಕಾಶ್ಮೀರದ ತುತ್ತ ತುದಿಯಲ್ಲಿ ಕಾರ್ಗಿಲ್ ಎಂಬಲ್ಲಿ ಪಾಕಿಸ್ತಾನಿ ಸೈನ್ಯ ಬಂದು ಬೀಡು ಬಿಟ್ಟಿದೆ. ಅವರನ್ನು ಹಿಮ್ಮೆಟ್ಟಿಸಲಿಕ್ಕಾಗಿ ನಾವು ಬಹಳಷ್ಟು ಜನ ಅಲ್ಲಿಗೆ ಹೊರಟಿದ್ದೇವೆ. ಎಷ್ಟು ದಿನವಾಗುತ್ತವೋ ತಿಳಿಯದು. ದೇಶಕ್ಕಾಗಿ ಹೋರಾಡಲು ನಾನೂ ಹೊರಟು ನಿಂತಿದ್ದೇನೆ – ಎಂದಿತ್ತು ಒಕ್ಕಣೆ. ಪ್ರತಿವರ್ಷ ಚಳಿಗಾಲದ ಹೊತ್ತಲ್ಲಿ ಕಾರ್ಗಿಲ್ ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ಕಡೆಯಿಂದ ಸೈನಿಕರನ್ನು ಆದಷ್ಟು ಹಿಂದಕ್ಕೆ ಕರೆಸಿಕೊಳ್ಳುವುದು ವಾಡಿಕೆ. ಮೊದಲೇ ಸಮುದ್ರದಿಂದ 16,000 ಅಡಿ ಎತ್ತರದ ಹಿಮ ಮರುಭೂಮಿ ಅದು. ಗಾಳಿಯ ಸಾಂಧ್ರತೆ ಇಲ್ಲವೇ ಇಲ್ಲವೆನ್ನುವಷ್ಟು ವಿರಳ. ಚಳಿ ಸೊನ್ನೆಯ ಕೆಳಗೆ ಎಪ್ಪತ್ತು ಮುಟ್ಟುತ್ತದೆ. ಮನುಷ್ಯರಿಗೆ ಬದುಕುಳಿಯುವುದೇ ಅಸಾಧ್ಯವೆಂಬ ಸನ್ನಿವೇಶ. ಅಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ಮದ್ದು ಗುಂಡುಗಳನ್ನು ಹಿಡಿದು ಯುದ್ಧ ಮಾಡುವುದಾದರೂ ಹೇಗೆ? ಹಾಗಾಗಿ ಎರಡೂ ದೇಶಗಳು ತಂತಮ್ಮ ಸೈನಿಕರ ಹಿತದೃಷ್ಟಿಯಿಂದ ಅಲಿಖಿತ ಯುದ್ಧವಿರಾಮ ಘೋಷಿಸಿಕೊಳ್ಳುತ್ತಿದ್ದವು. ಆದರೆ, ಇದೇ ಸಂದರ್ಭವನ್ನು ಬಳಸಿ ಈ ಬಾರಿ ಮಾತ್ರ ಪಾಕಿಸ್ತಾನ ತನ್ನ ಸೈನಿಕರನ್ನು ಭಾರತದ ನೆಲಕ್ಕೆ ನುಗ್ಗಿಸಿತ್ತು. ಅವರೆಲ್ಲ ಆಗಲೇ ಟೈಗರ್ ಹಿಲ್’ನ ಸುತ್ತಮುತ್ತಲಿನ ಪ್ರದೇಶಗಳನ್ನು ಆಕ್ರಮಿಸಿ ಅಲ್ಲಿ ಬಂಕರ್’ಗಳನ್ನು ನಿರ್ಮಿಸಿಕೊಂಡಾಗಿತ್ತು. ಭಾರತಕ್ಕೆ ವಿಷಯ ತಿಳಿವ ಹೊತ್ತಿಗೆ ತಡವಾಗಿ ಹೋಗಿತ್ತು. ಕಾಶ್ಮೀರ ತಲುಪಿದ 17 ಜಾಟ್ ರೆಜಿಮೆಂಟಿನ ಅನುಜ್ ನಯ್ಯರ್’ಗೆ “ಪಾಯಿಂಟ್ 4875” ಎಂಬ ಭೂಪ್ರದೇಶದ ಜವಾಬ್ದಾರಿ ಹೊರಿಸಲಾಯಿತು. ಹಿಮಾಲಯ ಪರ್ವತ ಶ್ರೇಣಿಯ ಒಂದೊಂದು ಶಿಖರವನ್ನೂ ಒಂದು ನಿರ್ಧಿಷ್ಟ ಸಂಖ್ಯೆಯಿಂದ ಗುರುತಿಸುವುದು ವಾಡಿಕೆ. ಟೈಗರ್ ಹಿಲ್‍ನಲ್ಲಿ ಒಂದೆಡೆ ಮೂರು ಶಿಖರಗಳು ಒಂದರ ಪಕ್ಕ ಒಂದು ನಿಂತಿದ್ದವು. ಮುಖದಲ್ಲಿ ಮೂಡಿದ ಮೂರು ಮೊಡವೆಗಳಂತೆ ಕಾಣುತ್ತವೆ ಎಂಬ ಕಾರಣಕ್ಕೇನೋ, ಇವನ್ನು ಪಿಂಪಲ್ ಎಂದು ಕರೆಯಲಾಗುತ್ತಿತ್ತು. ಇವುಗಳಲ್ಲಿ ನಡುವಿನ ಶಿಖರವೇ ಪಾಯಿಂಟ್ 4875 ಅಥವಾ ಪಿಂಪಲ್ ||. ಶತ್ರು ಪಡೆಯನ್ನು ಹಿಮ್ಮೆಟ್ಟಿಸಬೇಕಾದರೆ ಈ ಪ್ರದೇಶದಿಂದ ಅವರನ್ನು ಓಡಿಸುವುದು ಅತ್ಯಂತ ಅಗತ್ಯವಾಗಿತ್ತು. ಅಲ್ಲಿಂದ ಮುಂದಕ್ಕೆ ಬಂದು ಬಿಟ್ಟರೆ ಅವರನ್ನು ತಡೆ ಹಿಡಿಯುವುದು ಬಹಳ ಕಷ್ಟದ ಕೆಲಸ ಎನ್ನುವುದು ಸೇನಾಧಿಕರಿಗೆ ಸ್ಪಷ್ಟವಾಗಿ ಗೊತ್ತಿದ್ದ ಸಂಗತಿ.

ಬಯಲು ಪ್ರದೇಶದ ಯುದ್ಧಕ್ಕೂ ಈ ಕಲ್ಲು ಕೊರಕಲಿನ ಪರ್ವತ ಯುದ್ಧಕ್ಕೂ ಬಹಳ ವ್ಯತ್ಯಾಸವಿದೆ. ಹಿಮಾಲಯದ ಪರ್ವತಾಗ್ರಗಳಲ್ಲಿ ಯುದ್ಧ ಮಾಡಬೇಕಾದರೆ ಮೊದಲು ಅಲ್ಲಿನ ತೆಳುಗಾಳಿಗೆ ಹೊಂದಿಕೊಳ್ಳುವ ದೇಹ ದೃಢತೆ ಬೇಕಾಗುತ್ತದೆ. ಆಮ್ಲಜನಕದ ಸಿಲಿಂಡರ್ ಕಟ್ಟಿಕೊಂಡು ಯುದ್ಧ ಮಾಡುವುದು ಸಾಧ್ಯವಿಲ್ಲವಲ್ಲ! ಜೊತೆಗೆ, ಹಿಮದ ಮೇಲೆ ನಡೆಯುವುದು, ಅದೂ ಬೆನ್ನು-ಸೊಂಟಗಳಲ್ಲಿ ಮಣಗಟ್ಟಲೆ ಮದ್ದು ಗುಂಡುಗಳನ್ನೂ ಬಂದೂಕುಗಳನ್ನೂ ಹೇರಿಕೊಂಡು ನಡೆಯುವುದು ಪ್ರಯಾಸಕರ. ಸಾಲದ್ದಕ್ಕೆ ಅಲ್ಲಲ್ಲಿ ತೀರಾ ಲಂಬವಾಗಿರುವ ಬೆಟ್ಟಗಳನ್ನು ಹತ್ತಿಕೊಂಡು ಹೋಗಬೇಕು. ಒಂದು ಸಣ್ಣ ಜೋಲಿ, ಒಂದು ತಪ್ಪು ನಡೆ ನಮ್ಮನ್ನು ಆ ತುದಿಯಿಂದ ತಳ ಕಾಣದ ಪಾತಾಳಕ್ಕೆ ತಳ್ಳಿ ಬಿಡಬಹುದು. ಪಾಯಿಂಟ್ 4875ರಲ್ಲಿ ನಮ್ಮ ಗೆಲುವು ಸಾಧ್ಯವಾಗಬೇಕಾದರೆ ಹೆಲಿಕಾಪ್ಟರುಗಳ ಸಹಾಯ ಬೇಕೇ ಬೇಕಾಗಿತ್ತು. ಆದರೆ ಅವೇನಾದರೂ ಕಾಣಿಸಿಕೊಂಡರೆ ಪಾಕಿಸ್ತಾನದ ಗ್ರೇನೇಡುಗಳು ಅವಕ್ಕೆ ಕ್ಷಣಾರ್ಧದಲ್ಲಿ ಬಂದು ಅಪ್ಪಳಿಸುವುದು ನೂರಕ್ಕೆ ನೂರು ಖಚಿತ. ಹೆಲಿಕಾಪ್ಟರ್’ನ ಸಹಾಯವಿಲ್ಲದೆ ಬೆಟ್ಟ ಹತ್ತುವುದೆಂದರೆ ಸಾಗರಕ್ಕೆ ಕಲ್ಲು ಕಟ್ಟಿ ಸೇತುವೆ ಎಬ್ಬಿಸಿದಷ್ಟೇ ದುರ್ಗಮ ಕೆಲಸ. 1999ರ ಜುಲೈ ಆರನೇ ತಾರೀಕು, ಅನುಜ್ ತಂಡ ಪರ್ವತವನ್ನು ನಡಿಗೆಯಲ್ಲೇ ಹತ್ತುವುದೆಂದು ತೀರ್ಮಾನ ಮಾಡಿ ಬಿಟ್ಟಿತು. ಅಂದು ಮುಂಜಾನೆ ಅನುಜ್ ತಂದೆಗೆ ಫೋನ್ ಮಾಡಿದ. “ಅಪ್ಪಾ, ಹಿಮಾಲಯದ ತುದಿ ಹತ್ತುತ್ತಿದ್ದೇನೆ. ನಾಳೆಯಿಂದ ನಾನು ಫೋನ್‍ನಲ್ಲಿ ಸಿಗುವುದು ಅನುಮಾನ. ಅಲ್ಲಿ ನೆಟ್‍ವರ್ಕ್ ಸಿಗದು. ಅಲ್ಲದೆ ಸುತ್ತಮುತ್ತ ಶತ್ರುಗಳಿರುವುದರಿಂದ ಫೋನ್ ಬಳಸುವುದು ಅಪಾಯ ಕೂಡ. ಹಾಗಾಗಿ ಇದು ನಿನಗೆ ನನ್ನ ಕೊನೆಯ ಕರೆ. ಮಿಕ್ಕಿದ್ದನ್ನೆಲ್ಲ ವಾಪಸು ಬಂದಮೇಲೆ ಮಾತಾಡೋಣ” ಎಂದ. “ಹಾರ್ ಕೆ ಘರ್ ಮತ್ ಆನಾ, ವರ್ನಾ ಗೋಲಿ ಮಾರ್‍ದೂಂಗಾ” (ಯುದ್ಧದಲ್ಲಿ ಸೋತು ಮನೆಗೆ ಬಂದರೆ ಶೂಟ್ ಮಾಡ್ತೇನೆ) ಎಂದು ಹೇಳಿ ನಕ್ಕರು ತಂದೆ. “ಪಾಪಾ, ಆಪ್ಕಾ ಬೇಟಾ ಹ್ಞೂ. ಹಾರ್ ಕೆ ಆನೇ ಕೀ ಬಾತ್ ಸೋಚ್ ಭೀ ನಹೀ ಸಕ್ತಾ” (ಅಪ್ಪಾ, ನಿಮ್ಮ ಮಗ ನಾನು. ಸೋತು ಬರುವ ಬಗ್ಗೆ ಯೋಚಿಸಲೂ ಆರೆ) ಎಂದು ಸಿಡಿಗುಂಡಿನಂತೆಯೇ ಉತ್ತರ ಕೊಟ್ಟಿದ್ದ ಮಗ. ಅದೇ ದಿನ ಅವರ ತುಕಡಿ, ಟೈಗರ್ ಹಿಲ್‍ನ ದುರ್ಗಮ ದಾರಿಗಳನ್ನು ಬಳಸುತ್ತ ಶತ್ರುಗಳ ಬಂಕರ್’ಗಳನ್ನು ಅರಸುತ್ತ ಪಿಂಪಲ್‍ ಅನ್ನು ವಶಪಡಿಸಿಕೊಳ್ಳಲು ಮುನ್ನುಗ್ಗಿತು. ತಂಡಕ್ಕೆ ಚಾರ್ಲಿ ಕಂಪೆನಿ ಎಂದು ಹೆಸರಿಟ್ಟುಕೊಳ್ಳಲಾಗಿತ್ತು.

ಟೈಗರ್ ಹಿಲ್‍ನ ಪಶ್ಚಿಮ ಭಾಗದಲ್ಲಿದ್ದ ಮೂರು ಬೆಟ್ಟಗಳತ್ತ ನುಗ್ಗಿದ ಚಾರ್ಲಿ ತಂಡಕ್ಕೆ ಮೊದಲ ಆಘಾತ ಎದುರಾದದ್ದು ಪಾಕಿಸ್ತಾನದ ಸೈನಿಕರು ಏಕಾ ಏಕಿ ಗುಂಡಿನ ದಾಳಿ ಶುರು ಮಾಡಿದಾಗ. ಅದರ ಮೊದಲ ಏಟು ಕಮಾಂಡರ್’ಗೇ ಬಿತ್ತು. ಹೀಗೆ ಒಟ್ಟಾಗಿ ಮುಂದುವರಿದರೆ ತಮಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ತಂಡ ಎರಡಾಗಿ ಇಬ್ಭಾಗವಾಯಿತು. ಇತ್ತಂಡಗಳೂ ಬೇರೆ ಬೇರೆ ದಿಕ್ಕಿನಿಂದ ಬಂದು ಪಾಕಿಗಳ ಮೇಲೆ ಮುಗಿ ಬೀಳುವುದೆಂದು ಯೋಜನೆ ಹಾಕಲಾಯಿತು. ಅದರಂತೆ ಒಂದು ತಂಡವನ್ನು ಕ್ಯಾಪ್ಟನ್ ಅನುಜ್ ನಡೆಸಿದರೆ ಇನ್ನೊಂದು ತಂಡವನ್ನು ಕ್ಯಾಪ್ಟನ್ ವಿಕ್ರಮ್ ಭಾತ್ರಾ ನಿರ್ದೇಶಿಸಿದರು. ಎರಡೂ ಎರಡಾಗಿ ಒಡೆದು ಭಿನ್ನ ದಿಕ್ಕುಗಳಲ್ಲಿ ಮುಂದುವರಿದವು. ಅನುಜ್ ತಂಡ ಮುಂದುವರಿದುಕೊಂಡು ಹೋಗುತ್ತಲೇ ಪಾಕಿಸ್ತಾನಿಗಳ ನಾಲ್ಕು ಬಂಕರ್’ಗಳನ್ನು ಪತ್ತೆ ಹಚ್ಚಿತು. ಅನುಜ್ ಮತ್ತವನ ತಂಡ ತೀರ ಹತ್ತಿರಕ್ಕೆ ಬರುವವರೆಗೂ ಅವರ ಸುಳಿವು ಸಿಗದಿದ್ದ ಪಾಕ್ ಸೈನಿಕರು, ಕೊನೆಗೆ ವೈರಿಗಳ ಬಣದ ವಾಸನೆ ಹತ್ತಿ ಮತ್ತೆ ಗುಂಡಿನ ದಾಳಿ ಶುರು ಹಚ್ಚಿಕೊಂಡರು. ಕೆಲವೆಡೆ ಬಂದೂಕುಗಳ ಸಮರವಾದರೆ ಇನ್ನು ಕೆಲವೆಡೆ ಅಕ್ಷರಶಃ ಹೊಯ್‍ ಕೈ ಮಟ್ಟದ ಹೊಡೆದಾಟಗಳೇ ಆದವು. ಅನುಜ್ ತಂಡ ಮೂರು ಬಂಕರ್’ಗಳನ್ನು ಪೂರ್ತಿಯಾಗಿ ಧ್ವಂಸ ಮಾಡಿ ಇನ್ನೇನು ನಾಲ್ಕನೆಯದರತ್ತ ಗುರಿ ಇಡಬೇಕು ಅನ್ನುವಷ್ಟರಲ್ಲಿ ಅತ್ತ ಕಡೆಯಿಂದ ಒಂದು ಗ್ರೆನೇಡ್, ಕ್ಷಿಪಣಿಯಲ್ಲಿ ಬಂದು ನೇರವಾಗಿ ಅನುಜ್ ಮೇಲೆ ಬಿತ್ತು. ಅನುಜ್‍ನನ್ನೇ ಗುರಿಯಾಗಿಸಿ ಹೊಡೆದ ಗ್ರೆನೇಡ್ ಆಗಿತ್ತದು. ತೀವ್ರವಾದ ಗಾಯಗಳಿಂದ ನೆಲಕ್ಕೆ ಬಿದ್ದರೂ ಆತ ತನ್ನ ದಾಳಿಯನ್ನು ನಿಲ್ಲಿಸಲಿಲ್ಲ. ಜುಲೈ 7ರಂದು ಆ ಕೊನೆಯ ಬಂಕರನ್ನೂ ಕೂಡ ಪೂರ್ತಿಯಾಗಿ ಸುಟ್ಟು ಬೂದಿ ಮಾಡಿದ ಮೇಲೆಯೇ ಆತ ತನ್ನ ಕೊನೆಯುಸಿರೆಳೆದದ್ದು. ಸಿಡಿ ಗುಂಡು, ಬಂದೂಕುಗಳ ದಾಳಿಯಲ್ಲಿ ಅನುಜ್ ಜೊತೆ ಹೆಗಲೆಣೆಯಾಗಿ ಹೋರಾಡಿದ್ದ ಆರು ಜನರೂ ತೀರಿಕೊಂಡರು. ತನ್ನ ತಂಡವನ್ನು ಅತ್ಯಂತ ಚಾಣಾಕ್ಷತೆಯಿಂದ ನಡೆಸಿ ಶತ್ರು ಪಾಳಯದ ಎಲ್ಲ ಬಂಕರುಗಳನ್ನೂ ನೆಲಸಮ ಮಾಡಿದ್ದ ಅನುಜ್, ಕಾಳಗದಲ್ಲಿ ಒಟ್ಟು ಒಂಬತ್ತು ಪಾಕಿಗಳನ್ನು ಹೊಡೆದುರುಳಿಸಿದ್ದ. ಅಂಥ ಒಬ್ಬ ದೇಶಭಕ್ತನ ಬಲಿದಾನ ಪಡೆದು ನಾವು ಟೈಗರ್ ಹಿಲ್‍ ಅನ್ನು ಗೆದ್ದುಕೊಂಡೆವು.

ಯುದ್ಧ ಮುಗಿಯಿತೆ? ಇಲ್ಲ, ಕಾರ್ಗಿಲ್‍ನ ಧವಳ ಹಿಮರಾಶಿಗೆ ಇನ್ನಷ್ಟು ರಕ್ತದ ಬಾಯಾರಿಕೆಯಾಗಿತ್ತೆಂದು ಕಾಣುತ್ತದೆ. ಅನುಜ್ ಮತ್ತು ಸಂಗಡಿಗರು ಅಲ್ಲಿದ್ದ ಎಲ್ಲ ಪಾಕಿಗಳನ್ನು ಕೊಂದು ಭಾರತದ ವಿಜಯ ಪತಾಕೆ ಹಾರಿಸಿದ ಮೇಲೂ ಆ ಜಾಗಕ್ಕೆ ಮತ್ತಷ್ಟು ಪಾಕಿಗಳು ಬಂದರು. ಭಿನ್ನ ದಾರಿಯಲ್ಲಿ ಹೊರಟಿದ್ದ, ವಿಕ್ರಮ್ ನೇತೃತ್ವದ ಎರಡನೇ ತಂಡ ಅಲ್ಲಿಗೆ ಬಂದು ಮತ್ತೆ ಪಾಕಿಗಳ ಜೊತೆ ಹೋರಾಡಬೇಕಾಯಿತು. ಈ ಘನಘೋರ ಯುದ್ಧದಲ್ಲಿ ವಿಕ್ರಮ್ ಹತರಾಗಿ ನೆಲಕ್ಕುರುಳಿದರು. ಯುದ್ಧಕ್ಕೆ ಹೊರಟಾಗ “ಯೇ ದಿಲ್ ಮಾಂಗೇ ಮೋರ್” ಎಂದು ಸಿನಿಮೀಯವಾದರೂ ಉಕ್ಕಿ ಬರುವ ರಾಷ್ಟ್ರಭಕ್ತಿಯಿಂದ ಘರ್ಜಿಸಿ ಹೋಗಿದ್ದ ವಿಕ್ರಮ್, ಟೈಗರ್ ಹಿಲ್‍ನ ಮಡಿಲಲ್ಲಿ ಹುಲಿಯಂತೆಯೇ ವೀರ ಮರಣ ಪಡೆದರು. ಭಾರತ ತನ್ನ ಇಬ್ಬರು ಅಪ್ರತಿಮ ಸೈನಿಕರನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಕಳೆದುಕೊಂಡು ಬಡವಾಯಿತು. ಒಂದೋ ಯುದ್ಧ ಗೆದ್ದು ನನ್ನ ದೇಶದ ಧ್ವಜವನ್ನು ಆ ಮಣ್ಣಿನಲ್ಲಿ ನೆಟ್ಟು ಬರುತ್ತೇನೆ. ಇಲ್ಲವೇ ಅದೇ ಧ್ವಜವನ್ನು ಮೈಗೆ ಸುತ್ತಿಕೊಂಡು (ಶವವಾಗಿ) ಬರುತ್ತೇನೆ – ಎಂದು ಹೇಳಿದ್ದರು ವಿಕ್ರಮ್. “ನೀವೆಲ್ಲ ಮಕ್ಕಳು-ಮರಿ ಇರೋರು. ಬದಿಗೆ ನಿಲ್ಲಿ. ಶತ್ರುವಿಗೆ ನಾನು ಎದೆ ಕೊಡುತ್ತೇನೆ” ಎಂದು ತನ್ನ ಸಹಚಾರಿಗಳನ್ನು ರಕ್ಷಿಸಿಕೊಂಡು ಮುಂದೆ ಹೋಗಿ ಶತ್ರು ಪಾಳಯದ ಮೇಲೆ ಬಿಡುವಿಲ್ಲದೆ ಗ್ರೇನೇಡ್‍ಗಳನ್ನು ಎಸೆದು ಅವರನ್ನು ಕಂಗೆಡಿಸಿದ್ದವರು ಅವರು. ಎಂಬತ್ತು ಡಿಗ್ರಿಯಷ್ಟು ವಾಲಿರುವ, ಬಹುತೇಕ ಲಂಬವೇ ಆಗಿರುವ ನೆಲದಲ್ಲಿ ಬ್ಯಾಲೆನ್ಸ್ ಮಾಡುತ್ತ ನಿಂತು ತೆವಳಿ ಮಾಡಬೇಕಿದ್ದ ಕಾಳಗ ಅದು. ಟೈಗರ್ ಹಿಲ್‍ನ ಮೂರು ಮೊಡವೆಗಳ (ಪಿಂಪಲ್ ಹೆಸರಿನ ಬೆಟ್ಟಗಳ) ಸುತ್ತ ನಡೆದ ಭಾರತ – ಪಾಕ್ ಯುದ್ಧದಲ್ಲಿ ಹತರಾದವರು ಒಟ್ಟು 58 ಮಂದಿ. 47 ಜನ ಪಾಕಿಗಳಾದರೆ 11 ಜನ ಭಾರತೀಯ ಯೋಧರು. ದೇಶಕ್ಕಾಗಿ ತೋರಿದ ಧೈರ್ಯ, ಸಾಹಸಗಳನ್ನು ಮೆಚ್ಚಿ ವಿಕ್ರಮ್‍ರಿಗೆ ಪರಮವೀರ ಚಕ್ರ ಮತ್ತು ಅನುಜ್‍ಗೆ ಮಹಾವೀರ ಚಕ್ರಗಳನ್ನು ಮರಣೋತ್ತರವಾಗಿ ಕೇಂದ್ರ ಸರಕಾರ ಪ್ರದಾನ ಮಾಡಿತು.

ಅಪ್ಪನ ಮದುವೆಯ ಬೆಳ್ಳಿ ಹಬ್ಬಕ್ಕೆಂದು ಮಗ ತೆಗೆದಿರಿಸಿದ್ದ ಜಪಾನಿ ವಿಸ್ಕಿ ಹಾಗೆಯೇ ಇದೆ. ಮಗನ ಮದುವೆಗಾಗಿ ಅಪ್ಪ ಆರಿಸಿಟ್ಟಿದ್ದ ಸೂಟ್ ಕೂಡ ಸುಕ್ಕುಗಟ್ಟದೆ ಹಾಗೆಯೇ ತೂಗುತ್ತಿದೆ. “ಜುಲೈ 7, 1999 – ನನ್ನ ಕಾಲ ಅಲ್ಲಿಗೆ ನಿಂತುಹೋಗಿದೆ. ಅಲ್ಲಿಂದಾಚೆಗೆ ಈ ಜಗತ್ತಿನಲ್ಲಿ ಏನೆಲ್ಲ ಆಯಿತೋ ಅವಕ್ಕೆಲ್ಲ ಕಿವುಡನೂ ಮೂಕನೂ ಆಗಿದ್ದೇನೆ” ಎಂದಿದ್ದರು ಎಸ್.ಕೆ. ನಯ್ಯರ್. ಆ ತಂದೆಯ ತಳಮಳ ಅರ್ಥವಾದವರಿಗಷ್ಟೇ ಭಕ್ಷಿಯವರ ಕಣ್ಣೀರು ಅರ್ಥವಾದೀತು.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post