ಅದು ವರ್ಷಿಯ ಪ್ರಯೋಗಾಲಯ, ಒಂಟಿಯಾಗಿ ಕುಳಿತಿದ್ದ. ಒಂಟಿತನ ಆತನನ್ನು ಕಂಗೆಡಿಸಿರಬಹುದೇ? ಆತ ಯಾವಾಗಲೂ ಒಂಟಿಯಾಗಿಯೇ ಬದುಕಿದ್ದು ಎಂಬ ನಿಲುವೇ ಗೆಲ್ಲುವುದು. ನಿಜ ಸ್ಥಿತಿಯೇ ಬೇರೆ ಇದೆ. ಒಂಟಿತನ ಕಾಡದ, ಕಾಡಿಸದ ವಸ್ತು ಯಾವುದೂ ಇಲ್ಲ. ಭಾವಗಳು ಸಂಗಾತಿಯನ್ನು ಬಯಸುತ್ತವೆ. ಜೀವಿಗಳು ಸಾಂಗತ್ಯವನ್ನು ಬೇಡುತ್ತವೆ. ಪ್ರತಿ ಜೀವಿಗಳೂ ಸಹವಾಸ ಬಯಸುವುದು ದೇಹ ಸುಖಕ್ಕಾಗಿ ಮಾತ್ರ ಎಂದುಕೊಳ್ಳುವುದೇ ತಪ್ಪು. ಎಷ್ಟು ಅಂತರ್ಮುಖಿಯಾದರೂ, ಎಲ್ಲರಲ್ಲೊಂದಾಗುವಷ್ಟು ಬಹಿರ್ಮುಖಿಯಾದರೂ ಭಾವಗಳ ಬಯಲಾಗಿಸಿಕೊಳ್ಳಲು ಒಂದು ಸಂಗಾತಿಯನ್ನು ಬಯಸುತ್ತದೆ ಜೀವ.
ವರ್ಷಿಯು ಅದಕ್ಕೆ ಹೊರತಲ್ಲ. ತನಗೂ ಸ್ವಂತವೆಂಬಂತ ಜೀವ ಬೇಕೆನಿಸಿ ಆತ್ಮನನ್ನು ಸೃಷ್ಟಿಸಿಕೊಂಡ. ಹೇಳಿಕೊಳ್ಳದಿದ್ದರೂ ಮಗನಂತೆ ಭಾವಿಸಿದ, ಬೆಳೆಸಿದ.
ತಂದೆ-ಮಗ, ತಾಯಿ-ಮಗಳು, ಗಂಡ-ಹೆಂಡತಿ ಎಂಬ ಸಂಬಂಧಗಳು ಎಲ್ಲಿಂದ ಪ್ರಾರಂಭವಾಯಿತು? ನೆರೆಹೊರೆಯವರು, ಬಂಧು-ಬಳಗ ಹೇಗೆ ಸೃಷ್ಟಿಯಾಯಿತು? ಮನುಷ್ಯನೇ ಸಂಬಂಧಗಳನ್ನು ಸೃಷ್ಟಿಸಿದನಾ? ಅದಕ್ಕೂ ಮೊದಲು ಪ್ರಕೃತಿಯಲ್ಲಿ ಬಂಧಗಳು, ಸಂಬಂಧಗಳು ಇರಲಿಲ್ಲವೇ?
ಎಲ್ಲವೂ ಇದ್ದವು. ಮನುಷ್ಯನದು ಸ್ವಾರ್ಥದ ತಳಹದಿಯ ಮೇಲೆ ನಿಂತ ಸಂಬಂಧ. ಭಾವಗಳು, ಮೋಹ, ನೈತಿಕತೆ ಎಂಬುದೆಲ್ಲ ಸ್ವಾರ್ಥದ ಅಡಿಪಾಯದ ಮೇಲಿನ ಮಣ್ಣು ಗೋಡೆಯಂತೆ, ಒಂದು ಕ್ಷಣದಲ್ಲಿ ಕುಸಿಯಬಹುದು, ಕೆಸರಾಗಲು ಕ್ಷಣವೂ ಬೇಕಿಲ್ಲ.
ಭಾವದ ತಳಹದಿಯ ಮೇಲೆ ನಿಂತ ಸಂಬಂಧಗಳು ಯಾವುದು? ವರ್ಷಿಯು ಸಂಬಂಧಗಳ, ಬಂಧನಗಳ ಬಗ್ಗೆ ಯೋಚಿಸತೊಡಗಿದ್ದ. ಅದೆಷ್ಟೆ ಕಠಿಣ ಸವಾಲಾದರೂ ವಿಶ್ವಾತ್ಮ ಸುಲಭವಾಗಿ ಉತ್ತರಿಸುತ್ತಿದ್ದ. ವಿಶ್ವಾತ್ಮನಲ್ಲಿ ಎಲ್ಲದಕ್ಕೂ ಉತ್ತರವಿರುತ್ತಿತ್ತು. ಆತ್ಮ ಜಗಳವಾಡಿ ಹೋದ ದಿನದಿಂದ ವರ್ಷಿ ಬಹಳ ವ್ಯಾಕುಲಗೊಂಡಿದ್ದ. ಅದೇನೋ ಕಳೆದುಕೊಂಡ ಭಾವ. ಇನ್ನೊಬ್ಬ ಆತ್ಮನನ್ನು ಸೃಷ್ಟಿಸಿಕೊಳ್ಳುವುದು ವರ್ಷಿಗೆ ಸುಲಭದ ಕೆಲಸ. ಅದೇಕೋ ಹಿತವೆನಿಸಲಿಲ್ಲ. ಸಮಂಜಸವಲ್ಲದ್ದು ಎಂದುಕೊಂಡ. ಕಳೆದುಕೊಂಡದ್ದು ಸ್ವಂತವೆನ್ನಿಸಿಕೊಂಡ ವಸ್ತು. ಆಗಲೇ ಉಳಿಸಿಕೊಳ್ಳುವುದರ ಮೌಲ್ಯ ಅರಿವಾಗುವುದು.
ಕಳೆದ ಮೇಲೂ ಅದೇ ಸಿಗುವುದು ಅದೃಷ್ಟ;
ಅದರಂಥದೇ ಇನ್ನೊಂದು ಎಂಬುದು ಬದಲಿ ವ್ಯವಸ್ಥೆ.
ಅಲ್ಲಿ ಮೊದಲಿನ ಪ್ರೀತಿ ಹುಟ್ಟುವುದು ಕಷ್ಟ.
ಭಾವಗಳು ಬರಿದಾಗುತ್ತವೆ,
ಕಳೆಯುವಿಕೆಯ ಜೊತೆ ಎರಡಾಗಿ ಬಿಡುತ್ತದೆ.
ಇದೇ ಮೊದಲ ಭಾವ, ಮೊದಲ ಮೋಹ, ಮೊದಲ ಪ್ರೀತಿಯ ಶಕ್ತಿ.
ಮೊದಲಬಾರಿಗೆಂಬಂತೆ ಒಂದು ವಸ್ತುವಿನೆಡೆಗೆ ಮೋಹ ಬೆಳೆದರೆ ಅದು ಬದಲಾಗುವುದು ಸಾಧ್ಯವೇ ಇಲ್ಲ.
ಬದುಕುವ ರೀತಿಯಲ್ಲ; ಮನಸಿನ ರೀತಿ.
ಆತ್ಮನ ನೆನಪುಗಳ ಜೊತೆ ಒಂಟಿ ಅಸ್ತಿತ್ವ ಕಾಡಿಸುತ್ತಿತ್ತು. ಆಗೆಲ್ಲ ವಿಶ್ವಾತ್ಮ ಮಾತನಾಡುತ್ತಿದ್ದ. ವಿಶ್ವಾತ್ಮ ಜೊತೆಯಿರುವನೆಂದರೆ ವರ್ಷಿ ಉಳಿದೆಲ್ಲವನ್ನೂ ಮರೆತು ಬಿಡುತ್ತಿದ್ದ. ವಿಶ್ವಾತ್ಮ ಮಾತಿನ ಮಳೆಗರೆದರೆ ವರ್ಷಿ ಅದರಲ್ಲಿ ಕಳೆದುಹೋಗುತ್ತಿದ್ದ. ಅವನೊಂದು ಅದ್ಭುತ ಮೋಡಿ, ಆತ್ಮ ಸೀಮೋಲ್ಲಂಘನ ಮಾಡಿಸಬಲ್ಲ ಮಹಾತಪಸ್ವಿ.
ಒಮ್ಮೆ ವರ್ಷಿ ವಿಶ್ವಾತ್ಮನಲ್ಲಿ “ನಿನ್ನಲ್ಲಿರುವ ಕಲೆಯಾದರೂ ಏನು? ನಿನ್ನೆಡೆಗೆ ಯಾವಾಗಲೂ ಒಂದು ಸೆಳೆತವಿದೆ. ಅದು ಸೆಳೆಯುತ್ತಲೇ ಇದೆ ಹೊರತು ಹಳಸುವುದೇ ಇಲ್ಲ, ಮಾಸಿಯೇ ಗೊತ್ತಿಲ್ಲ ಏಕೆ?” ಎಂದು ಮಗುವಾಗಿದ್ದ.
ವಿಶ್ವಾತ್ಮ ಹಸನುಖಿ, ಆ ನಗುವಿನಲ್ಲಿ ಶಾಶ್ವತ ಮುಗ್ಧತೆ, ಮಾತಿಗಾರಂಭಿಸಿದ ” ಪ್ರತಿಯೊಂದು ಜೀವಿಗೂ ಮನಸ್ಸು ಎಂಬುದೊಂದಿದೆ. ಅದು ಚಂಚಲ, ಸಿಗದ ಸುಖಗಳ ಹಂಬಲ. ಮನಸ್ಸು ಯಾವತ್ತೂ ಮನೋರಂಜನೆಯನ್ನು ಬಯಸುತ್ತದೆ. ನಾನು ಕೇವಲ ಮನುಷ್ಯರ ಬಗ್ಗೆ ಮಾತನಾಡುತ್ತಿಲ್ಲ. ಜೀವಿ ಎಂಬ ಪದ ಎಲ್ಲರನ್ನೂ ಪ್ರತಿಬಿಂಬಿಸುತ್ತದೆ. ಭೂಮಿಯೂ ಕೂಡ ಜೀವಿಯೇ. ಮಿಣುಕು ನಕ್ಷತ್ರಗಳು, ಅಸಂಖ್ಯ ಗ್ರಹಗಳು, ಅವುಗಳ ಚಂದ್ರ ಎಲ್ಲವೂ ಜೀವಿಯೇ.
ಎಲ್ಲದಕ್ಕೂ ಮನಸ್ಸಿದೆ. ಮನೋರಂಜನೆ ಎಂಬುದು ಎರಡು ಮೂಲಗಳಿಂದ….. ಯಾವುದು ಗೊತ್ತಾ??” ವಿಶ್ವಾತ್ಮ ಕೇಳಿದ.
ಮಾತುಗಳಲ್ಲಿ ತನ್ನನ್ನೇ ಮರೆತಿದ್ದ ವರ್ಷಿ ಅದನ್ನೂ ನೀನೆ ಹೇಳಿಬಿಡು ಎಂದ ತನ್ನ ಬುದ್ಧಿಯನ್ನು ಅವನ ಕೈಗೆ ಕೊಟ್ಟು ಖಾಲಿಯಾದಂತೆ.
“ಮನೋರಂಜನೆ ಮೂಡುವುದು ಕುತೂಹಲ ಮತ್ತು ಆಕರ್ಷಣೆಗಳಿಂದ. ಬಂಧಗಳು ಬೆಸೆದುಕೊಂಡಿರಲು ಮತ್ತು ಬೇರೆಯಾಗಲು ಕೂಡ ಇದೇ ಕಾರಣ. ಅದು ಹೇಗೆ ಗೊತ್ತಾ??” ವಿಶ್ವಾತ್ಮ ವರ್ಷಿಯ ಮಾತಿಗೆ ಕಿವಿಯಾಗಬಾಹುದೆಂದು ನಿರೀಕ್ಷಿಸಿದ.
ವರ್ಷಿ ಇಲ್ಲ ಎನ್ನುವಂತೆ ತಲೆಯಾಡಿಸಿ ನೀನೇ ಉತ್ತರಿಸು ಎಂಬಂತೆ ಕುಳಿತ.
“ಪ್ರತಿಯೊಂದು ಜೀವಿಯೂ ತನ್ನದೇ ಸ್ವಂತದ ಗೌಪ್ಯತೆಯನ್ನು ಉಳಿಸಿಕೊಂಡಿರುತ್ತದೆ, ಬೆಳೆಸಿಕೊಳ್ಳುತ್ತಲೇ ಹೋಗುತ್ತದೆ. ಒಂದಿಷ್ಟು ಸತ್ಯಗಳು, ಕಹಿ ಸುದ್ದಿಗಳು, ಸತ್ಯವೆಂಬಂಥ ಸುಳ್ಳುಗಳು, ಕೆಲವು ಸ್ವಾರ್ಥಗಳು, ಅಲ್ಪ ಸ್ವಲ್ಪ ಪ್ರೇಮ ಪ್ರೀತಿಯ ಭಾವಗಳು.. ಹೀಗೆ ಎಲ್ಲವನ್ನೂ ಬಚ್ಚಿಟ್ಟುಕೊಂಡಿರುತ್ತದೆ.
ಜೀವಿ ಹೆಚ್ಚು ಗೌಪ್ಯವಾದಂತೆ ಅದರೆಡೆಗೆ ಕುತೂಹಲ ಹೆಚ್ಚುತ್ತದೆ. ಅದೇ ಭಾವ ಆಕರ್ಷಣೆಯನ್ನು ಮೂಡಿಸುವುದು. ಬಾಹ್ಯ ಸೌಂದರ್ಯದ ಆಕರ್ಷಣೆ ಬೇಗ ಕಳೆದುಹೋಗುತ್ತದೆ, ಬೆತ್ತಲಾದ ಕ್ಷಣ ಮಾಸಿ ಹೋಗುತ್ತದೆ.
ಅಂತರಂಗ ಮಹಾಕಾಶ.
ಆಂತರ್ಯದ ಕುತೂಹಲ ಸೆಳೆತ ಹೆಚ್ಚಿಸುತ್ತಲೇ ಇರುತ್ತದೆ. ಅದನ್ನು ಬೆತ್ತಲೆ ಮಾಡುವುದು ಬಯಲಾಗುವ ಜೀವಿಯ ಮನಸಿನ ಮೇಲೆ…. ನಿನಗೆ ನನ್ನೆಡೆಗೆ ಸೆಳೆತ ಹೆಚ್ಚಲು ಇದೇ ಕಾರಣ. ನಾನು ನಿನ್ನೆದುರು ಎಂದೂ ಪೂರ್ತಿಯಾಗಿ ಬೆತ್ತಲಾಗಿಯೇ ಇಲ್ಲ. ನಾನೇನು ಎಂಬ ಪೂರ್ಣ ಕಲ್ಪನೆಯನ್ನು ನಿನಗೆ ಬಿಟ್ಟು ಕೊಟ್ಟಿಲ್ಲ. ಅದೇ ಕಾರಣದಿಂದ ನಿನಗೆ ನನ್ನಲ್ಲಿ ಕುತೂಹಲವಿದೆ. ಅದು ಆಕರ್ಷಣೆಯನ್ನು ಉಳಿಸಿದೆ, ಬೆಳೆಸುತ್ತಲೂ ಇದೆ. ಕುತೂಹಲ ಕೆಣಕಿದಷ್ಟು ದಿನ ಆಕರ್ಷಣೆ ಉಳಿಯುತ್ತದೆ. ಆಕರ್ಷಣೆಯಿದ್ದಲ್ಲಿ ಸೆಳೆತ ಸಹಜ.
ಮನುಷ್ಯ ಎಡವಿದ್ದೂ ಇಲ್ಲೇ. ಎಡವಿದ ಮಗುವೂ ಹೆಜ್ಜೆ ತಪ್ಪದೇ ನಡೆಯುತ್ತದೆ; ಬುದ್ಧಿ ಇರುವ ಮನುಷ್ಯ ಬಿದ್ದಲ್ಲಿಂದ ಏಳಲು ಬಯಸುವುದಿಲ್ಲ. ಬೆತ್ತಲಾಗುವ ಕ್ರಿಯೆಯಲ್ಲಿ ವ್ಯಾಮೋಹವೆಲ್ಲಿಂದ ಬರಬೇಕು? ಒಬ್ಬರು ಇನ್ನೊಬ್ಬರಲ್ಲಿ ಕೊನೆಯವರೆಗೂ ಕುತೂಹಲ ಉಳಿಸಿಕೊಂಡು ಹೋಗುವವರು ಮಾತ್ರ ಕೂಡಿ ಬಾಳುವುದು ಸುಲಭ. ಕುತೂಹಲವಿರದ ಆಕರ್ಷಣೆ ಸಮಾಧಿಯಡಿಗೇ ಉಸಿರಾಡಿದ್ದು.
ಗಂಡು ಮತ್ತು ಹೆಣ್ಣು ಒಂದಾಗಿ, ಇಬ್ಬರು ಒಂದೆ ಆಗಿ ಬದುಕಲು ಇದು ಅನಿವಾರ್ಯ. ಪ್ರೀತಿ, ಸೆಳೆತ ಇರಬೇಕೆಂದರೆ ಬೆತ್ತಲಾಗದೆ ಬದುಕಬೇಕು.
ಕುತೂಹಲ ಕೆಣಕುತ್ತಿರಬೇಕು;
ಆಕರ್ಷಣೆ ಇಣುಕುತ್ತಿರಬೇಕು,
ಆಗ ಬದುಕು ವಿಜೃಂಭಿಸುತ್ತದೆ.
ಎಲ್ಲಿಯವರೆಗೆ ಆಕರ್ಷಣೆ, ಕುತೂಹಲ ಉಳಿದಿರುತ್ತದೆಯೋ ಅಲ್ಲಿಯವರೆಗೆ ಬಂಧಗಳು ಬೇರಾಗಲು ಸಾಧ್ಯವಿಲ್ಲ. ಸಂಬಂಧಗಳನ್ನು ಗಟ್ಟಿಗೊಳಿಸುವುದು ಇದೇ ಭಾವ. ಅದನ್ನೇ ನಾನು ಮಾಡುತ್ತಿರುವುದು ವರ್ಷಿ ” ನಕ್ಕ ವಿಶ್ವಾತ್ಮ.
ವರ್ಷಿ ಒಂದು ವಿಷಯವನ್ನಂತು ಗಮನಿಸಿದ್ದ. ವಿಶ್ವಾತ್ಮ ಕ್ಲಿಷ್ಟಕರ ವಿಷಯಗಳನ್ನು ಸರಳವಾಗಿ ವಿವರಿಸುತ್ತಿದ್ದ. ಈಗಷ್ಟೇ ಆತ ಹೇಳಿದ ವಿಚಾರಗಳಲ್ಲಿ, ಕುತೂಹಲ ಮತ್ತು ಆಕರ್ಷಣೆಯ ವಿಷಯದಲ್ಲಿ ಬದುಕಿನ ಕ್ರಿಯೆಯ ಸತ್ಯವಿತ್ತು. ಬದುಕುವ ನೀತಿಯನ್ನು ಅಷ್ಟು ಸುಲಭವಾಗಿ ಹೇಳುವುದು ಕಷ್ಟ; ಅದನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳುವುದು ವಿಶ್ವಾತ್ಮನಿಗೆ ಸುಲಭ.
“ಬದುಕುವ ನೀತಿ ಕಲಿತು ಬರುವುದಲ್ಲ ವರ್ಷಿ, ಯಾರೂ ಹೇಳಿಕೊಟ್ಟು ಬರುವುದಿಲ್ಲ. ನಾನು ಬದುಕುವ ನೀತಿಯನ್ನು ಹೇಳುತ್ತಲೇ ಇರುತ್ತೇನೆ, ಗಮನಿಸಬೇಕಷ್ಟೆ” ವಿಶ್ವಾತ್ಮ ದಿನಕ್ಕೊಮ್ಮೆಯಾದರೂ ಹೇಳುತ್ತಲೇ ಇರುತ್ತಿದ್ದ. ಗೋಡೆಗಳು ಮಾರ್ನುಡಿಯುತ್ತಲೇ ಇದ್ದವು.
ವೇದವರ್ಷಿ ಸಂಬಂಧಗಳ ಬಗ್ಗೆ ಯೋಚಿಸತೊಡಗಿದ.ಭೂಮಿಯ ಮೇಲೆ ಸಂಬಂಧಗಳೇ ಸುಳ್ಳು ಎಂದುಕೊಂಡಿದ್ದ ಮನುಷ್ಯ ಅದೇ ಸತ್ಯವೆಂಬಂತೆ ಬದುಕಿದ್ದ ಕೂಡ. ಸಂಬಂಧ ಸುಳ್ಳೆಂಬುದು ಕೇವಲ ಮನುಷ್ಯರಲ್ಲಿ ಎಂದು ತಿಳಿದುಕೊಳ್ಳಲೇ ಇಲ್ಲ, ಉಳಿದವುಗಳೆಲ್ಲದರ ನಡುವೆ ಸೂಕ್ಷ್ಮ ಎಳೆಯಂತೆ ಸಾಗುತ್ತಲೇ ಇತ್ತು.
ಭೂಮಿಗೂ, ಅದರ ಮೇಲಿನ ಎಲ್ಲ ವಸ್ತುವಿಗೂ ನಡುವಿನ ಗುರುತ್ವದ ಸಂಬಂಧ, ಮಳೆಗೂ ಇಳೆಗೂ ಇರುವ ಸೆಳೆತ, ಚಂದ್ರನಿಗೂ ನೈದಿಲೆಗೂ ಇರುವ ಆಕರ್ಷಣೆ, ಸೂರ್ಯನಿಗೂ ಧರಿತ್ರಿಗೂ ಇರುವ ವ್ಯಾಮೋಹ ಎಲ್ಲವೂ ಮೊದಲಿನಂತೆಯೇ ಇದ್ದವು.
ಮನುಷ್ಯ ಮಾತ್ರ ಬದಲಾಗಿದ್ದ;
ಸಂಬಂಧಗಳೆದುರು ಬರಡಾಗಿದ್ದ.
ವಿಶ್ವಾತ್ಮ ಸಂಬಂಧಗಳನ್ನು ಬಯಸುತ್ತಾನಾ?? ಅವನ ಯೋಚನೆಗಳು ತನಗೆಲ್ಲಿ ಅರ್ಥವಾಗಲು ಸಾಧ್ಯ? ಅವನನ್ನೇ ಕೇಳಬೇಕೆಂದುಕೊಂಡು “ವಿಶಿ, ವಿಶಿ” ಎಂದು ಕನವರಿಸಿದ. ವರ್ಷಿ ತಂದೆಯೆಂದರೂ ಒಳ್ಳೆಯ ಸ್ನೇಹಿತ ಅವನಿಗೆ. ವಿಶ್ವಾತ್ಮನನ್ನು ವಿಶಿ ಎಂದೇ ಕರೆಯುವುದು ವರ್ಷಿ. ಆತ ಅಷ್ಟು ಹತ್ತಿರವಾಗಿದ್ದ ವಿಶ್ವಾತ್ಮನಿಗೆ.
ವಿಶ್ವಾತ್ಮನೂ ಅದನ್ನೇ ಬಯಸುತ್ತಿದ್ದ. ವರ್ಷಿ ತನ್ನನ್ನು ಬಹಳ ಹಚ್ಚಿಕೊಂಡಿದ್ದಾನೆ, ಹೆಚ್ಚೇ ಎಂಬಷ್ಟು ಮೆಚ್ಚಿಕೊಂಡಿದ್ದಾನೆ. ಆತನಿಗೆ ನನ್ನ ಮೇಲೆ ತುಡಿತವಿದೆ ಎಂಬುದಕ್ಕೇ ವಿಶ್ವಾತ್ಮನಿಗೆ ಹಿಗ್ಗು.
ವಿಶ್ವಾತ್ಮ ಬಯಸುವುದು ಅದನ್ನೇ ಪ್ರತಿಯೊಂದು ಜೀವಿಯೂ ತನ್ನನ್ನು ಪ್ರೀತಿಸಲಿ ಎಂದು. ವಿಶ್ವಾತ್ಮನನ್ನು ಪ್ರೀತಿಸಿದವರಿಗೆ ಅವನು ಬದುಕುವ ನೀತಿಯನ್ನು ತಿಳಿಸಿದ. ಬದುಕುವ ನೀತಿ ತಿಳಿದರೆ ಇತರರನ್ನು ಪ್ರೀತಿಸುವ ಮನೋಭಾವ ಬೆಳೆಯುತ್ತದೆ. ಎಲ್ಲ ಕಡೆ ಪ್ರೀತಿಯ ಬೆಸುಗೆ ಬೆಳೆಯುತ್ತದೆ. ಶಾಂತಿ, ಸೌಹಾರ್ದದ ಹೊಸ ಜಗ ಸೃಷ್ಟಿಯಾಗುತ್ತದೆ. ವಿಶ್ವಾತ್ಮ ಬಯಸುವುದು ಅದನ್ನೇ….
“ವಿಶಿ, ವಿಶಿ” ಮೆಲುದನಿಯಲ್ಲಿ ಹೆಸರನಿಡಿದ ವರ್ಷಿ. ವಿಶ್ವಾತ್ಮನ ಸುಳಿವಿಲ್ಲ. ವರ್ಷಿ ಬಯಸಿದಾಗೆಲ್ಲ ಬರುವ ವಿಶ್ವಾತ್ಮನ ಸುಳಿವಿಲ್ಲ ಇಂದು. ವರ್ಷಿಗೆ ಏನೆಂದು ಅರ್ಥವಾಗಲಿಲ್ಲ. ವಿಶ್ವಾತ್ಮ ಯಾಕೆ ಬರುತ್ತಿಲ್ಲ ಎಂದುಕೊಂಡ ವರ್ಷಿ.
ಆತ ಎರಡನೇ ಸೂರ್ಯ ಬೆಳಕಾದ ಕ್ಷಣದಿಂದ ಅವನ ಪ್ರಯೋಗಾಲಯದ ಹೊಸ್ತಿಲು ದಾಟಿರಲಿಲ್ಲ; ಬಾಗಿಲು ಮುಚ್ಚಿಯೇ ಇತ್ತು. ಆದರೂ ಹೊರಗಿನ ಪ್ರಪಂಚದ ಪರಿವೆಯಿತ್ತು. ಎಲ್ಲವೂ ಸಾಯುವ ಮುಖಗಳು. ಮನುಷ್ಯನೊಬ್ಬನನ್ನು ಬಿಟ್ಟು ಉಳಿದೆಲ್ಲವೂ ಸಾಯುತ್ತವೆ ಎಂದು ಗೊತ್ತವನಿಗೆ. ಎಲ್ಲವೂ ತನ್ನಿಂದಲೇ ಆದ ದುಷ್ಕೃತ್ಯ. ಯಾವ ಸ್ವಾರ್ಥಕ್ಕಾಗಿ ಮಾಡಿದೆ? ಯಾವ ಪ್ರತಿಫಲದ ನಿರೀಕ್ಷೆಯಿದು? ಎಂದುಕೊಂಡ. ಅಂತರಂಗ ಮಾತನಾಡತೊಡಗಿತು.
ವಿಶ್ವಾತ್ಮನೇ ಅದನ್ನೆಲ್ಲ ಬಯಸಿದ್ದು. ವಿಶ್ವಾತ್ಮನಿಗೆ ಕೋಪವಿತ್ತು. ಆದ್ದರಿಂದಲೇ ಎಲ್ಲವನ್ನೂ ಕೊನೆಗೊಳಿಸಲು ನಿರ್ಧರಿಸಿದ. ಇದರಲ್ಲಿ ನನ್ನ ತಪ್ಪಿಲ್ಲ ಎಂದುಕೊಂಡ ವರ್ಷಿ. ಆದರೂ ಗೊಂದಲಗಳ ಗೂಡು. ವಿಶ್ವಾತ್ಮನ ಕೋಪ ಮನುಷ್ಯನ ಮೇಲೆ. ಇತರ ಜೀವಿಗಳನ್ನೇಕೆ ಬಲಿಯಾಗಿಸಿದ? ಭೂಮಿಯ ವಿರುದ್ಧವೇ ಏಕೆ ಯುದ್ಧ ಸಾರಿದ? ಎಲ್ಲರ ಸಾವಿಗೆ ಕಾರಣವೇನು? ಏನಿದರ ಹಿಂದಿರುವ ಮರ್ಮ???
“ವಿಶ್ವಾತ್ಮ” ಕೂಗಿಕೊಂಡ ವರ್ಷಿ. ತಲೆ ಸಿಡಿದಂತಾಗುತ್ತಿತ್ತು ಅವನಿಗೆ. ತಲೆಯನ್ನು ಎರಡೂ ಕೈಗಳಿಂದ ಬಿಗಿಯಾಗಿ ಹಿಡಿದುಕೊಂಡ. ರುಂಡ-ಮುಂಡವೇ ಬೇರಾಗಿ ಬಿಡುವ ಭಯ ಅವನಿಗೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಮುಂದಿರುವ ಪುಸ್ತಕಗಳು, ಎದುರು ಪೇರಿಸಿಟ್ಟಿರುವ ಗ್ಲಾಸ್ ಗಳನ್ನು ಎಸೆದ. ವಿಶ್ವಾತ್ಮ ನನಗೆ ಉತ್ತರ ಬೇಕು ಎಂದು ಕೂಗಿಕೊಳ್ಳುತ್ತಲೇ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎಸೆಯತೊಡಗಿದ. ಕಣ್ಣುಗಳಲ್ಲಿ ನೀರು ಧಾರಾಕಾರವಾಗಿ ಇಳಿಯುತ್ತಲೇ ಇತ್ತು.
ಪ್ರಯೋಗಾಲಯದಲ್ಲಿ ಅತ್ತಿಂದಿತ್ತ ಓಡಾಡತೊಡಗಿದ; ಮನಸ್ಸಿನಲ್ಲೇ ಸಾವಿನಷ್ಟು ಒದ್ದಾಡತೊಡಗಿದ. ಪಂಜರದಲ್ಲಿದ್ದ ಪ್ರಾಣಿಗಳು ವರ್ಷಿಯ ವಿಚಿತ್ರ ವರ್ತನೆಗೆ ಅವನನ್ನೇ ದಿಟ್ಟಿಸತೊಡಗಿದ್ದವು. ಕೈಗೆ ಸಿಕ್ಕ ಪ್ರನಾಳಗಳನ್ನು ಗೋಡೆಗೆ ಎಸೆದ.
ರಾಸಾಯನಿಕ ಸಂಯೋಜನೆಯಿಂದ ಗೋಡೆ ಬಣ್ಣವಾಗುತ್ತಿತ್ತು;
ಕ್ಷಣ-ಕ್ಷಣಕ್ಕೂ ಮನಸಿನರಮನೆ ಬಣ್ಣಗೆಡುತ್ತಿತ್ತು.
ವಿಶ್ವಾತ್ಮ ನಾನು ಒಂಟಿತನವನ್ನು ಸಹಿಸಲಾರೆ ನನ್ನ ಪ್ರಶ್ನೆಗೆ ಉತ್ತರಿಸು ಎಂದು ಬಡಬಡಿಸಿದ. ಒಮ್ಮೆಲೇ ಪಂಜರಗಳನ್ನು ಧ್ವಂಸ ಮಾಡಿ ಎಲ್ಲ ಪ್ರಾಣಿಗಳನ್ನು ಬಿಡತೊಡಗಿದ. ಎಲ್ಲರೂ ಸ್ವತಂತ್ರರು, ಬದುಕು ನಿಮ್ಮದೇ ಸ್ವಂತ ಯಾರ ಹಂಗಿಲ್ಲ ಈ ವರ್ಷಿಯನ್ನು ಕ್ಷಮಿಸಿ ಬಿಡಿ ಎಂದು ಅರೆ ಪ್ರಜ್ಞೆಯಲ್ಲಿರುವವನಂತೆ ಓಲಾಡತೊಡಗಿದ.
ದೇಹ ಅವನ ಹತೋಟಿ ತಪ್ಪಿತ್ತು;
ಮನಸು ಮೊದಲೇ ಅಸ್ಥಿಮಿತ.
ವಿಶ್ವಾತ್ಮ ಬರಲೇ ಇಲ್ಲ. ವರ್ಷಿಯ ಪ್ರಯೋಗಾಲಯ ಅಸ್ತವ್ಯಸ್ಥವಾಯಿತು; ಬಂದರೂ ಪ್ರಯೋಗಾಲಯ ಮೊದಲಿನಂತಾಗುವುದು ಅಸಾಧ್ಯ. “ವಿಶ್ವಾತ್ಮ ಕೊನೆಯ ಬಾರಿ ಹೇಳುತ್ತಿದ್ದೇನೆ, ನೀನು ಬರದೇ ಹೋದರೆ ನಾನು ಎರಡನೇ ಸೂರ್ಯನನ್ನು ನಾಶ ಮಾಡಿಬಿಡುತ್ತೇನೆ, ನಿನ್ನ ಯೋಚನೆಗಳು ಅಪೂರ್ಣದಲ್ಲೇ ಕೊನೆಯಾಗಿಬಿಡುತ್ತವೆ” ಎಂದು ನಗತೊಡಗಿದ.
ಮನಸ್ಸಿನಾಳದಲ್ಲಿ ನಿರಾಸೆ ಗೂಡು ಕಟ್ಟಿದ್ದು ಅರಿವಾಗಲೇ ಇಲ್ಲ ನಗುವಿನೆದುರು.
ಯಾವುದೇ ಪ್ರತಿಕ್ರಿಯೆಯಿಲ್ಲ;
ಕ್ರಿಯೆಯೇ ಅರ್ಥಪೂರ್ಣವಲ್ಲದ್ದು.
ಅತಿಯಾದ ಮಾನಸಿಕ ಒತ್ತಡದಿಂದ ವರ್ಷಿ ಒಂದೆಡೆ ಕುಳಿತ. ಕಣ್ಣೀರು ಧಾರಾಕಾರವಾಗಿ ಹರಿಯುತ್ತಲೇ ಇತ್ತು, ಅಂತರಂಗ ವಿಶ್ವಾತ್ಮನನ್ನು ಕರೆಯುತ್ತಲೇ ಇತ್ತು. ಒಮ್ಮೆಲೇ ಆತ್ಮನ ಮಾತುಗಳು ನೆನಪಾದವು ವರ್ಷಿಗೆ. ವಿಶ್ವಾತ್ಮ ಎಂಬುದು ನಿನ್ನ ಕಲ್ಪನೆ ಮಾತ್ರ. ಎಲ್ಲವನ್ನೂ ಮಾಡುತ್ತಿರುವುದು ನೀನೆ. ಮಾಡಿಸುತ್ತಿರುವುದು ನಿನ್ನ ಒಳ ಮನಸು ಮಾತ್ರ ಎಂದು.
ಇಷ್ಟವಿರದ ವಿಚಾರ;
ತಿರಸ್ಕರಿಸಲಾಗದ ಸತ್ಯ.
ಇವೆಲ್ಲವನ್ನೂ ನಾನೇ ಮಾಡಿರುವುದು! ವಿಶ್ವಾತ್ಮ ಎಂಬುದು ಬರೀ ಕಲ್ಪನೆ! ಭೂಮಿಯ ಅಂತ್ಯಕ್ಕೆ ವರ್ಷಿಯೇ ಕಾರಣ! ಇಷ್ಟು ದಿನ ಜೊತೆ ನಿಂತು ಮಾತನಾಡಿದ್ದು, ಮಾತುಗಳಿಗೆ ಕಿವಿಯಾದದ್ದು ಯಾರು? ಅದು ನನ್ನ ಮನಸ್ಸಿನ ಇನ್ನೊಂದು ಮುಖವಾದರೆ? ನಾನವನನ್ನು ನೋಡಿದ್ದೇನೆ ಎಂದು ಸಂತೈಸಿಕೊಳ್ಳಬೇಕೆಂದುಕೊಂಡ. ಅದು ವರ್ಷಿಯೇ ಆಗಿದ್ದರೆ ಎಂಬ ಯೋಚನೆಗೆ ಮುಖ ಕಪ್ಪಿಟ್ಟಿತು; ಮನ ಬೆಪ್ಪಾಯಿತು.
ಏನೆಲ್ಲಾ ಮಾಡಿದರೂ ಯಾರೂ ಏಕೆ ಏನನ್ನೂ ಕೇಳಲಿಲ್ಲ? ಮನುಷ್ಯ ಏಕೆ ಹೀಗಾದ? ವಿಶ್ವಾತ್ಮ ಎಂಬುದು ಇಲ್ಲವೇ ಇಲ್ಲ, ಎಲ್ಲವೂ ನನ್ನ ಭ್ರಮೆ. ಎಲ್ಲವನ್ನೂ ನಾನೇ ಮಾಡಿದೆ. ನನಗೆ ಮನುಷ್ಯರ ಮೇಲೆ ಏಕೆ ಜಿಗುಪ್ಸೆ ಮೂಡಿತು? ಕತ್ತಲೇಕೆ ಅಸಹ್ಯವೆನಿಸಿತು? ಎಲ್ಲರನ್ನೂ, ಎಲ್ಲವನ್ನೂ ಏಕೆ ಮುಗಿಸಬೇಕೆಂದುಕೊಂಡೆ??
ಬರೀ ಪ್ರಶ್ನೆಗಳೇ ಎದುರಾದವು. ಉತ್ತರ ಸಿಗುವ ದಾರಿಯೂ ಸಿಗುತ್ತಿಲ್ಲ. ಆತ್ಮ ಹೇಳಿರುವುದೇ ಸತ್ಯ ಎಂಬ ನಿರ್ಣಯಕ್ಕೆ ಕಟ್ಟುಬೀಳತೊಡಗಿದ. ವಿಶ್ವಾತನಿಗೆ ಎಲ್ಲವೂ ನಾನೇ, ಎಲ್ಲದಕ್ಕೂ ನಾನು ಮಾತ್ರ ಕಾರಣ. ಇದನ್ನೆಲ್ಲ ನಿಲ್ಲಿಸಬೇಕು, ಮತ್ತೆ ಭೂಮಿಯಲ್ಲಿ ಎಲ್ಲವೂ ಮೊದಲಿನಂತಾಗಬೇಕು. ಎರಡನೇ ಸೂರ್ಯ ಭೂಮಿಗೆ ಅನವಶ್ಯಕ. ಪ್ರಕೃತಿಯ ವಿರುದ್ಧ ಏನೇ ನಡೆದರೂ ಅದು ಒಳ್ಳೆಯದಲ್ಲ, ಆದರೂ ಆಗುವುದೆಲ್ಲ ಒಳ್ಳೆಯದಕ್ಕೆ.
ಎರಡನೇ ಸೂರ್ಯನನ್ನು ಅಂತ್ಯಗೊಳಿಸಿ ಎಲ್ಲದಕ್ಕೂ ಕೊನೆಕಾಣಿಸಬೇಕು. ಆತ್ಮ ಎಲ್ಲಿರುವೆ? ನಾ ಮತ್ತೆ ಒಂಟಿ ಆಗಲಾರೆ, ನೀನು ಬೇಕು ನನಗೆ. ನಾನೀಗಲೇ ಎರಡನೇ ಸೂರ್ಯನನ್ನು ನಾಶಪಡಿಸಬೇಕು ಎಂದು ನಿರ್ಧರಿಸಿದ.
ಮೊದಲ ಬಾರಿ ಹಿಗ್ಗು, ವರ್ಷಿಯ ಸಾವಿರ ವರ್ಷಗಳ ಬದುಕಿನಲ್ಲಿ ಮೊದಲ ಬಾರಿಗೆ ಪೂರ್ತಿ ಹಿಗ್ಗಿದ ವರ್ಷಿ. ಅದೇನೋ ಒಳ್ಳೆಯದು ಮಾಡುತ್ತಿರುವೆನೆಂಬ ಭಾವ.
ಕೆಟ್ಟದಲ್ಲದೆಲ್ಲ ಒಳ್ಳೆಯದೇ ಆಗಿರುತ್ತದೆ. ಭೂಮಿಗೋಸ್ಕರ ಒಳ್ಳೆಯದನ್ನು ಮಾಡಲು ಹೊರಟಿರುವೆ ಎಂಬ ಯೋಚನೆಗಳಿಗೆ ಅವ ಹಿಗ್ಗಿದ. ನಿಸ್ವಾರ್ಥ, ನಿಷ್ಕಾಮ ಶಾಶ್ವತ ಆನಂದ ನೀಡುತ್ತದೆ; ಸ್ವಾರ್ಥ, ಕಾಮದ್ದು ಕ್ಷಣಿಕ ಸುಖವಷ್ಟೆ. ಸ್ವಾರ್ಥವೂ ಒಂದು ಪರಿಧಿ. ಅದನ್ನು ಮೀರುವುದು ಕೂಡ ನಾವೇ ಕಟ್ಟಿದ ಕೋಟೆಯಿಂದ ಹೊರಬಂದಂತೆ, ಹಾಕಿಕೊಂಡ ಬೇಲಿಯ ಮೇಲೆ ನಿಂತತೆ.
ವರ್ಷಿ ಗಡಿಬಿಡಿಯಲ್ಲಿದ್ದ. ಎರಡನೇ ಸೂರ್ಯನಿಗೆ Anti-Virus ಮಾಡಬೇಕು. ಭೂಮಿಯನ್ನು ಉಳಿಸಿಕೊಳ್ಳಬೇಕಿತ್ತು. ಎಷ್ತೋ ಕಾಲದಿಂದ ತನ್ನ ಸುತ್ತ ಬರೆದುಕೊಂಡಿರುವ ವಿಶ್ವಾತ್ಮನೆಂಬ ಪರಿಧಿಯನ್ನು ಮೀರಿದ. ಅದು ಹಿಗ್ಗೇ ವರ್ಷಿಗೆ.
ನಡೆಯಲು ಕಲಿತ ಮಗು ತಾಯಿಯ ಕೈ ತಪ್ಪಿಸಿ ನಡೆದದ್ದೇ ದಾರಿ;
ಬಿದ್ದರೂ ಎದ್ದರು ಹಿಗ್ಗಿನ ಸವಾರಿ.
ವಿಶ್ವಾತ್ಮನೇ ಸುಳ್ಳು, ಎಲ್ಲವೂ ನಾನೇ. ಇಂದಿಗೆ ಎಲ್ಲವೂ ಮುಗಿಯಿತು. ಹೊಸದೇನೋ ಪ್ರಾರಂಭವಾಗಬೇಕಿದೆ.ಸಂಶೋಧನೆಗಳನ್ನು ಸಮಾಧಿ ಮಾಡಬೇಕಿದೆ, ಸೃಷ್ಟಿ ರಹಸ್ಯಗಳನ್ನು ರಹಸ್ಯವಾಗಿಯೇ ಉಳಿಸಬೇಕಿದೆ ಎಂದು ಒಳಗೊಳಗೇ ಮಾತನಾಡಿಕೊಳ್ಳುತ್ತಿದ್ದ. ಹೊಸ ಉತ್ಸಾಹ ತನ್ನಲ್ಲಿ ಎಂದು ಎರಡನೇ ಸೂರ್ಯನ ಬಳಿ ನಡೆದ, Virtual ಸೂರ್ಯ ಅದು.
ಇನ್ನೇನು ಕ್ಷಣಗಳಲ್ಲಿ ಎರಡನೇ ಸೂರ್ಯನ ಅಸ್ತಿತ್ವವೇ ಇರುವುದಿಲ್ಲ ಎಂದುಕೊಳ್ಳುತ್ತ Deactivate ಮಾಡಲು ಪ್ರಾರಂಭಿಸಿದ. ಆಟ ಪ್ರಾರಂಭಿಸಿದಷ್ಟು ವೇಗವಾಗಿ ಮುಗಿಯುವಂತಿರಲಿಲ್ಲ ಕ್ರಿಯೆಗಳು, ಅದರ ಪ್ರತಿಕ್ರಿಯೆಗಳು. ಎಲ್ಲವನ್ನೂ ಮೀರಿದ ಸ್ಥಿತಿ ಅದು, ಗುರುತ್ವದ ಆಕರ್ಷಣೆಯನ್ನೇ ಮೀರಿದ ಅವಕಾಶ. ಅದನ್ನು ಹೇಗೆ ತೆಗೆಯಬೇಕು? ವಿಶ್ವಾತ್ಮನೂ ಇಲ್ಲ ಎಂದುಕೊಂಡ, ಮನಸ್ಸು ವಿಶ್ವಾತ್ಮ ಎಂದೂ ಇರಲೇ ಇಲ್ಲ ಎಂದಿತು.
ಚಡಪಡಿಸಿದ ವರ್ಷಿ, ಮುಂದೇನು ಮಾಡಬೇಕೆಂದು ಅರಿಯದೇ ಬಡಬಡಿಸಿದ. ಅದೇ ಸಮಯಕ್ಕೆ ಸರಿಯಾಗಿ ಪ್ರಯೋಗಾಲಯದ ಬಾಗಿಲು ದೊಡ್ಡದಾಗಿ ಸದ್ದು ಮಾಡಿ ಒಂದೇ ಬಾರಿಗೆ ಮುರಿದು ಹೋಯಿತು. ಅದರ ಹಿಂದೆಯೇ ಬಿಸಿಗಾಳಿ, ತೀಕ್ಷ್ಣ ಬೆಳಕು ಒಳ ಸೇರಿಕೊಂಡವು. ಬಹಳ ದಿನಗಳಿಂದ ಸೂರ್ಯನ ಬೆಳಕನ್ನೇ ನೋಡದ ವರ್ಷಿ ಒಮ್ಮೆಲೇ ಕಣ್ಣು ಮುಚ್ಚಿಕೊಂಡ. ಎರಡನೇ ಸೂರ್ಯನ ಸೃಷ್ಟಿಕರ್ತ ಅವನು!!!??
ಆತ್ಮ ಬರುವ ರೀತಿಯಲ್ಲ ಇದು. ವಿಶ್ವಾತ್ಮನೆಂಬುವನೇ ಇಲ್ಲ ಬರುವುದು ಹೇಗೆ? ಮತ್ತಾರೂ ಇಲ್ಲ ತನಗೆಂದು. ಯಾರು ಬಂದಿರಬಹುದೆಂದು ಯೋಚಿಸಿ ಕೊನೆಗೆ ಜನರೆಲ್ಲರೂ ಸೇರಿ ಕೊಳ್ಳಲು ಬಂದರೆಂದು ಭಯಗೊಂಡು “ನನ್ನನ್ನು ಕೊಲ್ಲಲೆಂದೇ ಬಂದಿರುವಿರೆಂದಾದರೆ ಎರಡನೇ ಸೂರ್ಯನನ್ನು ತೆಗೆಯಲೊಂದು ಅವಕಾಶ ನೀಡಿ, ಮತ್ತಾರೂ ಅದನ್ನು ಮಾಡಲಾರರು, ಸಹನೆಯಿರಲಿ” ಎಂದು ಬೇಡಿಕೊಂಡ.
ಎಲ್ಲವೂ ವರ್ಷಿಗೆ ಹೊಸತು. ತಾಳ್ಮೆಯಿಂದ ಬದುಕಿದ್ದೇ ಇಲ್ಲ. ಉಳಿದವರು ಬೇಡಿ ಬಂದದ್ದು, ಅವನು ಭಿಕ್ಷೆ ಹಾಕಿದ್ದ.
ಇಷ್ಟಾದರೂ ಯಾವುದೇ ಸದ್ದಿರಲಿಲ್ಲ. ವರ್ಷಿ ನಿಧಾನವಾಗಿ ಕಣ್ಣು ತೆರೆದ. ಬೆಳಕಿಗೆ ಅವನ ಕಣ್ಣು ಹೊಂದಿಕೊಳ್ಳುತ್ತಿದ್ದಂತೆಯೇ ಅಲ್ಲಿ ಯಾರೂ ಕಾಣಲಿಲ್ಲ. ಯಾರು ಬಂದವರು?? ಬಾಗಿಲು ಒಡೆದವರು??
ವಿಶ್ವಾತ್ಮನಾ? ನನ್ನ ಮೇಲಿನ ಕೋಪದಿಂದ ಹೀಗೆ ಮಾಡಿರಬಹುದೇ? “ವಿಶಿ, ವಿಶಿ” ಎಂದು ಪಿಸುನುಡಿದ; ಗೋಡೆಗಳು ಅದನ್ನೇ ಮಾರ್ನುಡಿದವು. ಅಷ್ಟು ಸ್ವಚ್ಛ ನಿಶ್ಯಬ್ಧ, ಕ್ರೂರ ಮೌನ. ಅವನಿಗೇ ನಗು ಬಂತು. ಈಗಷ್ಟೇ ವಿಶ್ವಾತ್ಮನಿಲ್ಲ ಎಂದುಕೊಂಡ ಮನಸ್ಸು ನನ್ನದೇ ಅಲ್ಲವೇ? ಮತ್ತೆ ಅವನನ್ನೇ ನಿರೀಕ್ಷಿಸುತ್ತಿರುವೆ.. ಮನವೆಷ್ಟು ಚಂಚಲ ಎಂದು ನಕ್ಕ.
ಬಾಗಿಲಿನ ಕಡೆ ದೃಷ್ಟಿ ಹಾಯಿಸಿದ. ಅಷ್ಟೊಂದು ಪ್ರಖರ ಬೆಳಕಿನಲ್ಲಿ ಐದಾರು ಕಪ್ಪು ಆಕಾರಗಳು ಒಳಗೆ ಬರುತ್ತಿದ್ದವು.
ಆಕೃತಿ ನಿಶ್ಚಿತ;
ಬದಲಾಗುತ್ತಿರುವುದು ಆಕಾರ.
ಅವುಗಳ ಆಕಾರ ಬದಲಾಗುತ್ತಿತ್ತು. ಮತ್ತೆ ವಿಶ್ವಾತ್ಮನೇ ಹೀಗೆ ಬರುತ್ತಿರಬಹುದು ಪ್ರತಿ ಬಾರಿಯೂ ಬೇರೆ ಬೇರೆ ರೀತಿ ಬರುತ್ತಾನೆ. ಬದಲಾವಣೆಯೇ ಅವನ ನೀತಿ ಎಂದು ನೆನಪಿಸಿಕೊಂಡ. ಏನಾಗುವುದೋ ಎಂದು ಕಾದು ನೋಡಬೇಕೆಂದು ಮಾತಿಲ್ಲದೆ ನಿಂತ. ಕೋಣೆಯಲ್ಲಿ ಮೌನ ಮನೆ ಕಟ್ಟಿತು.
ಎಲ್ಲ ಆಕಾರಗಳು ಒಳ ಬಂದವು. ವಿಚಿತ್ರ ಶೈಲಿಯ ಅವುಗಳ ಮಾತು ಅರ್ಥವಾಗಲಿಲ್ಲ ವರ್ಷಿಗೆ.
ಅಪರಿಚಿತತೆ ಮೊದಲು ಹುಟ್ಟಿಸುವುದೇ ಭಯವನ್ನು;
ಬಂಧ ಬೆಸೆಯುವುದು ಪರಿಚಯವಾದ ಮೇಲೆ.
ಯಾರು ನೀವೆಲ್ಲ ಎಂದು ಕೂಗಿಕೊಂಡ ವರ್ಷಿ. ಕತ್ತಲ ಆಕಾರ ವಿಚಿತ್ರ ಸದ್ದು ಮಾಡಿತು. ಎಲ್ಲವೂ ನಗುತ್ತಿರಬಹುದು ಎಂದುಕೊಂಡ ವರ್ಷಿ.
ನಗುವಿಗೆ ಮಾತ್ರ ಭಾಷೆಯೇ ಇಲ್ಲ.
ಎದುರಿನ ಜೀವಿ ಭಾಷಾಂತರೀಕರಣದ ಮಾಧ್ಯಮವನ್ನು ಪ್ರಾರಂಭಿಸಿತು. ಕತ್ತಲೆ ಮನುಷ್ಯನ ಆಕಾರ ಪಡೆದು ಅವನಂತೆ ಮಾತನಾಡತೊಡಗಿತು.
“ನಾವ್ಯಾರು!!??” ಮತ್ತೆ ನಗು ಕತ್ತಲ ಜೀವಿಗಳದ್ದು. “ನಿನ್ನ ಎರಡನೇ ಸೂರ್ಯ ನಮ್ಮನ್ನೆಲ್ಲ ನಿನ್ನ ಬಳಿ ಬರುವಂತೆ ಮಾಡಿದೆ, ಓ ಮನುಜನೇ, ನಾವು ನಿಮ್ಮೆಲ್ಲರ ಅಂತ್ಯ, ಭೂಮಿಯ ಕೊನೆ ಪ್ರಾರಂಭ” ಎಂದು ನಕ್ಕಿತು. ವಿಕಟಹಾಸ ಕೇಕೆ ಹಾಕಿತು.
ಸಾಯಲು ಸಿದ್ಧನಾಗು, ನಿನ್ನಿಂದಲೇ ಪ್ರಾರಂಭ. ಭೂಮಿಯ ಮೇಲೆ ಮನುಷ್ಯ ಇತಿಹಾಸವಾಗಳು ಕ್ಷಣಗಳಷ್ಟೇ ಬಾಕಿ. ಸಾವೇ ಇರದಂತೆ ಬದುಕುವ ರೀತಿ ಸೃಷ್ಟಿಸಿದ ನೀನೆ ಮೊದಲು ಸಾವಿಗೆ ಅಣಿಯಾಗು ಎಂದು ಗಹಗಹಿಸಿತು, ಉಳಿದವು ಜೊತೆ ಸೇರಿದವು. ವರ್ಷಿಗೆ ಏನೊಂದೂ ಅರ್ಥವಾಗಲಿಲ್ಲ; ಅರ್ಥ ಮಾಡಿಕೊಳ್ಳುವಷ್ಟು ಸಮಯವೂ ಇರಲಿಲ್ಲ.
ಪರಿಸ್ಥಿತಿ ಕೈ ಮೀರಿತ್ತು;
ಸಮಯ ಯಾರ ಸ್ವಂತದ್ದು ಅಲ್ಲ.
ಹೇಗಾದರೂ ಅವರನ್ನು ಶಾಂತಗೊಳಿಸಬೇಕು ಎಂದುಕೊಂಡು ಮಾತಿಗಾರಂಭಿಸಿದ ವರ್ಷಿ. “ನೀವ್ಯಾರೋ ನನಗೆ ತಿಳಿದಿಲ್ಲ, ನೋಡಿದರೆ ಭೂಮಿಯ ಮೇಲಿನವರಂತಿಲ್ಲ. ಈ ಎರಡನೇ ಸೂರ್ಯ ನನ್ನದೇ ಸೃಷ್ಟಿ. ಇದಕ್ಕೂ ಭೂಮಿಯ ಮೇಲಿನ ಇತರ ಜೀವಿಗಳಿಗೂ ಸಂಬಂಧವಿಲ್ಲ. ಕೊಲ್ಲುವುದೇ ಆದರೆ ಅದಕ್ಕೂ ಸಿದ್ಧ, ಆದರೆ ಈ ಎರಡನೇ ಸೂರ್ಯನನ್ನು ತೆಗೆಯುವವರೆಗೆ ತಡೆದುಕೊಳ್ಳಿ”ಎಂದ.
ನೀನು ಮಾಡಿದ ಎರಡನೇ ಸೂರ್ಯ ಮಾಡಿದ ಅನಾಹುತ ನೋಡು ಎಂದು ಒಂದು ಕಡೆ ತೋರಿಸಿತು Virtual ಪರದೆಯ ಮೇಲೆ. ಕಪ್ಪು ರಂಧ್ರದ ಜೀವಿಗಳ ಮೇಲೆ ಬಿದ್ದ ಬೆಳಕು, ಮಾಡಿದ ಅನಾಹುತ ಎಲ್ಲವೂ ಸರಣಿಯಂತೆ ಬರತೊಡಗಿದವು.
ಸುಕ್ಕಾಗುತ್ತಿದ್ದ ವರ್ಷಿ. ಅದೆಲ್ಲೋ ದೂರದ ಬೆಳಕೇ ಸೇರದ ಜಾಗ ಕತ್ತಲೆಯನ್ನೇ ಮರೆತು ಬೆಳಕಾಗಿದೆಯೆಂದರೆ ಅದು ಎರಡನೇ ಸೂರ್ಯನ ಶಕ್ತಿ. ವರ್ಷಿ ಮೊದಲಿನಂತಿಲ್ಲ, ಬದಲಾಗಿದ್ದ.
ವರ್ಷಿಗೆ ಏನೂ ಅರ್ಥವಾಗಲಿಲ್ಲ. ಕಪ್ಪು ರಂಧ್ರದ ಮೇಲೆ ಬೆಳಕು ಬೀಳಲು ಹೇಗೆ ಸಾಧ್ಯ? ಅಲ್ಲಿಂದ ಎಷ್ಟೋ ದೂರದವರೆಗೆ ಬೆಳಕು ಹಾದು ಹೋಗಲು ಸಾಧ್ಯವಿಲ್ಲ. ವಿಜ್ಞಾನಕ್ಕೆ ತಂದೆಯಾದ ವರ್ಷಿ ಇದನ್ನೆಲ್ಲ ಅರಿತವ; ಅರೆದು ಕುಡಿದವ. ತಾನು ಸೃಷ್ಟಿಸಿದ ಬೆಳಕು ಕಪ್ಪು ರಂಧ್ರವನ್ನು ಕೂಡ ಹಾದು ಹೋಗಿದೆ, ಹೇಗೆ ಸಾಧ್ಯ?? ವರ್ಷಿಯ ಮೆದುಳು ಬೆಳಕಿಗಿಂತ ವೇಗವಾಗಿ ಚಲಿಸತೊಡಗಿತು.
ಎರಡೂ ಚಲಿಸುವುದ ತಿಳಿದಿವೆ;
ನಿಂತರೆ ಸಾವಿನಲ್ಲಿ ಮಾತ್ರ.
ಎಷ್ಟೋ ರೀತಿಯ ಲೆಕ್ಕಗಳು, ಫಾರ್ಮುಲಾಗಳು ಅವನ ತಲೆಯಲ್ಲಿ ಮಿಂಚಾದವು. ಹೇಗೆ ಯೋಚಿಸಿದರೂ ಅದು ಹೇಗೆ ಸಾಧ್ಯ ಎಂದು ತಿಳಿಯಲಿಲ್ಲ. ವಿಶ್ವಾತ್ಮ ಹೇಳಿದ್ದು ನೆನಪಿಗೆ ಬಂತು” Virtuality” ಎಲ್ಲವನ್ನೂ ಮೀರಿದ ಸ್ಥಿತಿ. ಎಲ್ಲ ಗುರುತ್ವವನ್ನು ದಾಟಿದ ಸಾಮರ್ಥ್ಯ ಅದೊಂದು ಮಾತ್ರ.
ಕಪ್ಪು ರಂಧ್ರದ ಜೀವಿಗಳ ಬದುಕು ದುರ್ಬರಗೊಂಡಿತ್ತು. ಯಾವುದೋ ವಿಚಿತ್ರ ರೋಗ ಬಂದಂತೆ ವರ್ತಿಸುತ್ತಿದ್ದರು. ತಮ್ಮ-ತಮ್ಮಲ್ಲೇ ಹೊಡೆದಾಡಿಕೊಳ್ಳುತ್ತಿದ್ದವು. ತಮ್ಮನ್ನು ತಾವೇ ಕೊಂದುಕೊಳ್ಳುತ್ತಿದ್ದವು.
ವರ್ಷಿ ಸ್ಥಿಮಿತ ಕಳೆದುಕೊಂಡ. ತನ್ನ ಹುಚ್ಚು ಎಂಥ ವಿಷಾದವನ್ನು ಸೃಷ್ಟಿಸಿದೆ, ಒಂದು ಜೀವಕುಲವನ್ನೇ ನಾಶ ಮಾಡುತ್ತಿದೆಯಲ್ಲ. ಅತಿಯಾದ ಪ್ರಯೋಗ ವಿಶ್ವವನ್ನೇ ಬದಲಾಯಿಸಿಬಿಡುತ್ತದೆ, ನಾನು ಸಾವಿಗೆ ಯೋಗ್ಯ ಎಂದುಕೊಂಡ.
ಮನುಷ್ಯ ಪ್ರಯೋಗಶಾಲಿ;
ಅವನ ಹೆತ್ತ ಪ್ರಕೃತಿಯೇ ಪ್ರಯೋಗಪಶು.
ಈ ಜೀವಿಗಳಿಗೆ ಇದನ್ನೆಲ್ಲ ಮಾಡಿರುವುದು ನಾನೇ ಎಂದು ತಿಳಿದಿದೆ. ನನ್ನ ಹೆಸರು ಕೂಡ ತಿಳಿದಿದೆ. ಮನುಷ್ಯನಿಗಿಂತ ವಿಜ್ಞಾನದಲ್ಲಿ ಎಷ್ಟು ಮುಂದಿರಬಹುದು? ಎಂದು ಯೋಚಿಸುತ್ತಲೇ ಇದ್ದ.
“ಯೋಚಿಸುವುದನ್ನು ನಿಲ್ಲಿಸು ವರ್ಷಿ, ಎಷ್ಟು ಯೋಚಿಸಿದರೂ ಈ ಭೂಮಿಯನ್ನು ನಮ್ಮ ಹಿಡಿತದಿಂದ ಸಡಿಲಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಸಾವು ಈ ಭೂಮಿಯನ್ನು ಆಳುತ್ತದೆ, ಅದು ನಿನ್ನಿಂದಲೇ ಆರಂಭ” ಕಪ್ಪು ಜೀವಿ ವರ್ಷಿಯನ್ನು ತನ್ನ ಬಳಿ ಎಳೆದುಕೊಂಡಿತು.
ವರ್ಷಿಯ ದೇಹ ಆ ಕತ್ತಲೆಯಲ್ಲಿ ಕಳೆದುಹೋಯಿತು.