X

ವಿವೇಕೋದಯ…

ಹರಿ ಶಿವ ಬ್ರಹ್ಮ ಸೃಷ್ಟಿಸಿದ ಭೂಮಿಯೆಲ್ಲಾ ಕತ್ತಲಮಯವಾದ ದಿನಗಳವು. ಎತ್ತನೋಡಿದರತ್ತ ಅಧರ್ಮ, ಅಸಂಸ್ಕೃತಿ, ಅನ್ಯಾಯ, ಹಾಗೂ ಯುವಕರಲ್ಲಿ ಹೊಸದನ್ನು ಸಾಧಿಸುವ ಛಲವೇ ಬತ್ತಿಹೋದ ಕರಾಳ ದಿನಗಳವು. ಪ್ರತಿ ಮಾನವನು ಭ್ರಷ್ಟತೆ, ಅನಾಚಾರ, ಸ್ವಾರ್ಥ, ಹಾಗೂ ಕಾಮ, ಕ್ರೋಧ, ಮದ, ಲೋಭ, ಮತ್ಸರಗಳೆಂಬ ಭಾವನಾ ವಿಷವನ್ನು ಸ್ವೀಕರಿಸಿದ ಸಂದರ್ಭವದು. ಈ ಕತ್ತಲಮಯ ದಿನಗಳಲ್ಲಿ ಮಾನವೀಯತೆಗೆ ಬೆಲೆಯೇ ಇಲ್ಲದಿರುವಾಗ ಮತ್ತು ಸಹಾಯಮನೋಭಾವವನ್ನು ಮರೆತು, “ಅಹಂ” ಎಂಬ ಸ್ವಾರ್ಥತೆಯನ್ನು ಮನುಜ ತನ್ನಲ್ಲಿ ತಾನು ವಿಲೀನಗೊಳಿಸಿಕೊಂಡಿದ್ದ. “ಮುಕ್ತಿಗೆ” ಮಾರ್ಗವೇ ಕಾಣದೆ ಒದ್ದಾಡುವ ವೃದ್ಧರ ಪರಿತಪಿಸುವ ಪಾಡು, ಮಾನವನು ಅತಿ ಆಸೆಯ ಅಮಲಿನ ಬೆನ್ನಟ್ಟಿ, ತನ್ನ ಮುಖ್ಯ ಮೂರು ಗುಣಗಳಾದ “ನಾಚಿಕೆ, ಮಾನ, ಮರ್ಯಾದೆ” ಎಂಬ ಭದ್ರವಸ್ತುಗಳನ್ನು ಹೊರಚೆಲ್ಲಿ ಜೀವನಸಾಗಿಸುತ್ತಿದ್ದ, ಮಾನವನಿಗೆ “ಧರ್ಮ-ಅಧರ್ಮ”, “ಸಂಸ್ಕೃತಿ-ಅಸಂಸ್ಕೃತಿ”ಯ ಪರಿವೇ ತಿಳಿದಿರಲಿಲ್ಲ. ಈ ಎಲ್ಲ ಕತ್ತಲಮಯ ಸನ್ನಿವೇಶಗಳನ್ನು ಬಡಿದೋಡಿಸುವ ಮಿಂಚೊಂದು ಶ್ರೀರಾಮನ ಕಮಲಕಾಂತಿಯ ಕೈಗಳನ್ನು ಹಿಡಿದು ಮೆಲ್ಲನೆ, ಧರೆಗಿಳಿಯಿತು.

ಧರೆಗಿಳಿದ ಮಿಂಚಿನ ಪ್ರತಿಬಿಂಬ ನವಗ್ರಹಗಳ ಹಾಗೂ ನಕ್ಷತ್ರಗಳ ಹೊಳಪನ್ನು ಹೆಚ್ಚಿಸಿತ್ತು. ಸೂರ್ಯನ ಬೆಳಕಿನ ಮಧ್ಯೆ, ಈ ಮಿಂಚಿನ ಹೊಳಪು ಕಣ್ಣು ಕುಕ್ಕುವಂತಿತ್ತು ಹಾಗೂ ಚಂದ್ರನ ಚೆಲವು ಕೂಡಾ ಈ ಮಿಂಚಿನ ಮೈಕಟ್ಟಿಗೆ ನಾಚಿ ಮೋಡಗಳ ಮಧ್ಯೆ ಅವಿತು ಕುಳಿತಿದ್ದ. ಧರ್ಮವೆಂಬ ಮಿಂಚಿನ ಆಗಮನಕ್ಕೆ ಅಧರ್ಮವೆಂಬ ಕತ್ತಲು ಕಣ್ಮರೆಯಾಗಿತ್ತು. ಸಂಸ್ಕೃತಿ ಎಂಬ ಮಿಂಚಿನಭಾವಕ್ಕೆ ಅಸಂಸ್ಕೃತಿಯು ನಾಶವಾಗಿತ್ತು. ಇವೆಲ್ಲವಕ್ಕೂ ಮಿಗಿಲಾಗಿ ಮಿಂಚಿನಕಾಂತಿಯು ಭರತಖಂಡದ ಭವ್ಯತೆಯನ್ನು ಉತ್ತುಂಗದ ಶಿಖರಕ್ಕೇರಿಸಿತ್ತು. ಆ ಮಿಂಚಿನ ಗುಣಗಾನ, ಈ ಅಕ್ಷಯಕುಮಾರನ ಕಲ್ಪನೆಗೂ ನಿಲುಕದಂತಹ, ಸೊಗಡನ್ನು ಮೈತುಂಬಿಕೊಂಡಂತಹ ಮಿಂಚದು.

“ಮಿಂಚೆಂದರೆ, ಆಕಾಶದಲ್ಲಿ ಮಿಂಚುವ ಮಿಂಚಲ್ಲ”, ಏಕೆಂದರೆ “ಈ ಮಿಂಚು ಒಮ್ಮೆ ಮಿಂಚಿ ಮರೆಯಾಗುವ ಮಿಂಚಲ್ಲ”. ಕಾರಣ ಈ ಮಿಂಚಿನಕತೃ, ಈ ಜಗದೊಡೆಯನಾದ ಪರಶಿವನ ಮನಸ್ಸನ್ನೆ ಗೆದ್ದು, ಈ ಧರೆಗೆ ಧರ್ಮದ ಸನ್ಮಾರ್ಗ ತೋರಿದ ಶ್ರೀರಾಮನ ನೇತ್ರಕ್ಷಯದಿಂದ ಹೊರಹೊಮ್ಮಿದ, ವಿವೇಕಾನಂದನೆಂಬ ಮಿಂಚು. ಈ ಮಿಂಚು ಧರೆಯನ್ನು ತಲುಪಲಿಕ್ಕೆ ಭಗೀರಥನಂತೆ ಶ್ರೀರಾಮಕೃಷ್ಣಪರಮಹಂಸನೆಂಬ ಗುಡುಗು ತಪಸ್ಸು ಮಾಡುತ್ತ ಕುಳಿತಿತ್ತು. ಯಾವಾಗ “ವಿವೇಕಾನಂದನೆಂಬ ಮಿಂಚು, ಈ ಭೂವಿಯನ್ನುಸ್ಪರ್ಶಿಸಿತೋ”, ಆಗ “ರಾಮಕೃಷ್ಣಪರಮಹಂಸವೆಂಬ ಗುಡುಗು ಗುಡುಗಿತ್ತು”. ಮಿಂಚು ಹಾಗೂ ಗುಡುಗಿನ ಅಬ್ಬರಕ್ಕೆ ಧರೆಯಲ್ಲಿ, ನುಂಗಲು ಬಾರದ ತುತ್ತಾಗಿ ಕುಳಿತಿರುವ ಅಧರ್ಮ, ಅಸಂಸ್ಕೃತಿ, ಅನ್ಯಾಯ, ಅನಾಚಾರ, ಸ್ವಾರ್ಥತೆ, ಅರಿಷಡ್ವರ್ಗಗಳು, ಮಿಗಿಲಾಗಿ “ಅಹಂ” ಎಂಬ ಕತ್ತಲೆಯ ಗುಣಗಳು, ಈ ಧರೆಯನ್ನು ಬಿಟ್ಟು ಏಳು ಕಡಲಾಚೆ ನೆಲೆಯೂರಿ ನಿಂತಂತಹ ಹನುಮನ ಹೃದಯಾರವಿಂದಪಾದಗಳಿಗೆ ಶರಣಾಗಿ, ತಮ್ಮನ್ನೆ ತಾವು ಹತ್ಯೆಗೈದುಕೊಂಡವು.

ಈ ಮಿಂಚಿನ ಉದಯ ಅನಂತತೆಯವರೆಗೂ ಭುವಿಯಲ್ಲಿ ನೆಲೆಯೂರಿ, ಚಿರನಿದ್ರೆಯಲ್ಲಿ ಜಾರಿದ ಯುವಜನ ಶಕ್ತಿಯನ್ನು ಬಡಿದೆಬ್ಬಿಸಿ, “ಕಾಯಕವೆಂಬ ಬೀಜವ ಬಿತ್ತಿ, ಸಂಸ್ಕೃತಿ ಎಂಬ ನೀರಹಣಿಸಿ, ಧರ್ಮವೆಂಬ ಪೋಷಕಾಂಶವನ್ನೊದಗಿಸಿ, ಸಾಹಿತ್ಯ ಚಿಲುಮೆ ಎಂಬ ಬೆಳಕುಹರಿಸಿ, ಧರೆಯ ರಕ್ಷಕರೆಂಬ ಯುವಕರು, ಭುವಿಯ ಮೇಲೆ ಆಲದಮರದ ದಿಟ್ಟನಿಲುವಿನ ದೃಢತೆಯನ್ನು ಮನಸ್ಸಿನ ಮೇಲಿಟ್ಟುಕೊಂಡು, ಭವ್ಯ ಭರತ ಖಂಡದಲ್ಲಿ ರಾಮರಾಜ್ಯ ನಿರ್ಮಾಣಕ್ಕೆ ಅಡಿಗಲ್ಲಾಗುವ ಬೆಳೆಯನ್ನು ಸ್ವಾಮಿವಿವೇಕಾನಂದರು ಬೆಳೆದರು”. ಬೆಳೆದ ಬೆಳೆಯನ್ನು ಧರೆಯಲ್ಲಿ ಬಿಟ್ಟು ಪಂಚಭೂತಗಳಲ್ಲಿ, “ನಿರಾಕಾರವಾಗಿ, ನಿರಾಮಯವಾಗಿ, ಯಾರ ಕಣ್ಣಿಗೂ ಕಾಣದೆ, ಯಾರ ಸ್ಪರ್ಶಕ್ಕೂ ಸಿಲುಕದೆ”, ಸದಾ ಯುವಕರಲ್ಲಿ ಆತ್ಮವಿಶ್ವಾಸ ತುಂಬುವ ಶಕ್ತಿಯಾಗಿ, ಸಂಚರಿಸುತ್ತಿರುವನು. ಆ ನನ್ನ ಹೃದಯಾಂಕಿತ ಆರಾಧ್ಯ ಗುರು “ವಿಶ್ವ ಸಂಸ್ಕೃತಿಯ ಹರಿಕಾರ ಶ್ರೀಸ್ವಾಮಿವಿವೇಕಾನಂದ”.

ಯುವಜನ ಶಕ್ತಿಯೇ ನಿಮಗೊಂದು ನನ್ನ ಕಿವಿಮಾತು, “ಈ ವಿವೇಕೋದಯದ ಮುಂದೆ ಸೂರ್ಯೋದಯ ನನಗೇನು ಹೊಸದಲ್ಲ”. –

Akshay Badiger
akshaybadiger12@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post