ಗೆಳತಿ ಅದ್ಯಾಕೋ ಏನೋ ನಿನಗೊಂದು ಪತ್ರ ಬರೆಯಬೇಕೆಂಬ ಆಸೆ ನನಗೆ..ಅನುಭವಿಸಿದ ಒಲವಿನ ಹೊಯ್ದಾಟದ ವರ್ಣನೆ ಅಸಾಧ್ಯವೇ ಸರಿ ಆದರೆ ಅದೇಕೋ ಬರೆಯಬೇಕೆಂಬ ಪ್ರಯತ್ನದ ಪ್ರತಿಫಲನ ಅಷ್ಟೇ ಇದು…ಭಾವನೆ ವರ್ಣಿಸಲು ನಿಲುಕದ್ದು ಆದರೂ ಒಂದು ಪ್ರಯತ್ನವಿದು ಅಷ್ಟೇ…ನನ್ನ ಉಸಿರಲಿ ನಿನ್ನ ಹೆಸರಿದೆ, ಬರೆದ ಸಾಲುಗಳಲ್ಲಿ ಭಾವ ತುಂಬಿದೆ ಅರ್ಪಿಸಿಕೊ….
ಗೆಳತಿ…
ಮತ್ತದೇ ಮೌನ ಆದರೆ ಜೊತೆಗೆ ನೀನಿದ್ದೆ..ಬಿಡದೇ ನಿನ್ನ ನೋಡುತ್ತಿದ್ದ ಆ ಕಣ್ಣುಗಳಲ್ಲಿ ಅಡಗಿದ್ದ ಅದೆಷ್ಟೋ ಭಾವಗಳನ್ನು ಕೇವಲ ನಿನ್ನ ಕಣ್ಣುಗಳು ಮಾತ್ರ ಅರ್ಥೈಸಿಕೊಳ್ಳಬಹುದು. ಬಿಡಿಸಿಟ್ಟ ನಿನ್ನ ಕೈಗಳ ಮೇಲೆ ನನ್ನ ಬೆರಳುಗಳು ಆಡುತ್ತಿದ್ದ ಆಟಕ್ಕೆ ಏನೋ ಅರ್ಥ ಇದ್ದಂತಿತ್ತು. ಭಾವ ಉಕ್ಕಿ ಬಂದಾಗ ಕೈ ಸಡಿಲಿಸದೇ ನನ್ನ ಬೆರಳುಗಳು ನಿನ್ನ ಬೆರಳುಗಳ ನಡುವೆ ಬಂಧಿಯಾಗಿ ಬಿಗಿಗೊಂಡಿತ್ತು. ಆದರೆ ನೋಟ ಬದಲಾಗಲಿಲ್ಲ..ಅತ್ಯುನ್ನತ ಖುಷಿಗೆ ಬಂದ ಕಣ್ಣಂಚಿನ ನೀರು ಅದೆಷ್ಟೋ ಅನುರಾಗವನ್ನು ಹೊತ್ತು ತಂದಂತಿತ್ತು. ದೂರದಲ್ಲೆಲ್ಲೋ ಜೋಡಿ ಹಕ್ಕಿಗಳ ಕಲರವ ಮಾತಾಡಿ ಎಂದು ಪ್ರೇರೇಪಿಸಿದಂತಿತ್ತು. ಅದ್ಯಾವುದೋ ಲೋಕದಲಿ ವಿಹರಿಸುತ್ತಿದ್ದಂತೆ ಭಾಸವಾಗುತ್ತಿತ್ತು..ಅದೆಷ್ಟೋ ಸಂಜೆ ಒಂಟಿಯಾಗಿ ಕುಳಿತು ನೆನಪಿನ ದಾಳಿಗೆ ಬೆಂಡಾಗಿ ನನಗೆ ನಾನೇ ಸಮಾಧಾನಿಸಿಕೊಳ್ಳುವ ಆ ಸಮಯವೇಕೋ ಥಟ್ಟನೆ ಸ್ಮೃತಿಯಲ್ಲಿ ಸುಳಿಯಿತು..ಆದರೆ ನೀನಿರುವ ಈ ಕ್ಷಣ ನನ್ನ ಕಲ್ಪನೆಗೂ ಮೀರಿದ್ದು…ಸನಿಹವಿದ್ದರೂ ಅದೇಕೆ ಇಷ್ಟೊಂದು ಕಾಡುವೆ?
ಕೈಬೆರಳುಗಳು ಬಿಗಿಯಾಗಿ,
ಕೊರಳ ಸೆರೆ ಹಿಗ್ಗುತಿದೆ…
ಕಣ್ಣೀರು ಕನಸಾಗಿ,
ತೀರವದು ನನ್ನಾವರಿಸಿದೆ….
ನಿನ್ನ ಮಡಿಲಲಿ ಬೆಚ್ಚಗೆ ಮಲಗಿ ನಿನ್ನ ಕಣ್ಣಲ್ಲಿ ಬಿಂಬವಾಗುವಾಸೆ…ಹನಿಮಳೆ ಸುರಿವಾಗ ನಿನ್ನುಸಿರಲಿ ಉಸಿರಾಗುವಾಸೆ…ಮಾತೇ ಇರದ ಲೋಕದಲಿ ಅನುರಾಗದ ಪುಷ್ಪ ಅರಳಿಸುವಾಸೆ…ನಿನ್ನ ಅಂಗೈಯ ಮೇಲೆ ನನ್ನ ತೋರು ಬೆರಳಿನಿಂದ ವಿರಹದ ಚಿತ್ರ ಬಿಡಿಸುವಾಸೆ…ಕೈಹಿಡಿದು ಸಾಗುವಾಗ ಕನಸುಗಳ ವರ್ಣಿಸುವಾಸೆ…ನಿನ್ನ ತುಟಿಯಲಿ ಮೂಡಿದ ನಗುವಿಗೆ ಕಾರಣವಾಗುವಾಸೆ…ನಗುವಿನ ಜೊತೆ ನಿನ್ನೊಳಗೆ ಲೀನವಾಗುವಾಸೆ..ನಿನ್ನ ಮೈ ಸೋಕಿದ ಸಿಹಿಗಾಳಿಯ ಜೊತೆ ನನ್ನ ಒಲವನ್ನು ಸೇರಿಸುವಾಸೆ…ನೀ ನಾಚುವಾ ಮುನ್ನ ನಿನ್ನ ವರ್ಣಿಸುವಾಸೆ…ನಾ ಬರೆದ ಕವನವನು ಮನದುಂಬಿ ಹಾಡುತ್ತ ನಿನಗೆ ಕೈತುತ್ತು ನೀಡುವಾಸೆ…ಸಹಿಸಿಕೊಳ್ಳುವೆಯಾ ನನ್ನನ್ನು?
ವರ್ಣಿಸಲಾಗದ ಬಣ್ಣಗಳ ಸೃಷ್ಟಿಸಿ ಭಾವನೆಯ ಉಸಿರಾಗಿ ಸಾಗುತಿರುವ ಸೂರ್ಯನೊಂದುಕಡೆ… ಬಚ್ಚಿಟ್ಟುಕೊಂಡ ಒಲವನ್ನು ತಡೆಹಿಡಿಯಲಾರದೇ ಹೊತ್ತುಕೊಂಡು ಬಂದು ತೀರಕ್ಕೆ ಅಪ್ಪಳಿಸುವ ಅಲೆಯೊಂದುಕಡೆ…ನನ್ನ ಹೆಜ್ಜೆಯ ಗುರುತು ನಾ ತಿರುಗುವ ಮುನ್ನವೇ ಒಲವಿನೊಡನೆ ಲೀನವಾಗುತ್ತಿರುವುದನ್ನು ನೋಡಬೇಕೆನ್ನುವಾಗ ಅದೆಲ್ಲಿಂದಲೋ ಹಾರಿ ಹೋದ ಜೋಡಿಹಕ್ಕಿಗಳು…ಅದೆಲ್ಲಿಂದಲೋ ತೂರಿಬಂದ ಗಾಳಿಯೂ ಯಾರದೋ ಸಮೀಪ ಬಯಸಿದಂತಿತ್ತು…ಹನಿಯೊಂದು ಕಾದು ಕೂತಿರುವ ಧರೆಯನ್ನು ತಣಿಸಲು ತವಕಿಸಿ ಬಂದಂತೆ ನೆನಪಿನ ಲೋಕದಿಂದ ಪ್ರಸ್ತುತಕ್ಕೆ ಬಂದಿರುವ ನೀನು ಕೈ ಸಡಿಲಿಸಬೇಡ ಗೆಳತಿ…
ನಗು ಮಾಸುವಾ ಮುನ್ನ ನಯನಗಳು ಸಂಧಿಸಲಿ…ಮಾತು ಹೊರಡುವ ಮುನ್ನ ಭಾವನೆಗಳು ಬಂಧಿಯಾಗಲಿ..ನಿನಗಾಗಿ ನಾ ಕವನ ಬರೆಯಲು ಹೊರಟಾಗ ನನ್ನನ್ನು ನೀನು ಆವರಿಸಲಿ…ನಿನಗಾಗಿ ಬರೆದ ಕವನವನು ನೀ ಓದುವ ಮುನ್ನ ನಿನ್ನನ್ನು ನಾನು ಆವರಿಸಲಿ…ಗೆಳತಿ ಬೇಡೆನ್ನಬೇಡ ತುಸು ದೂರ ಜೊತೆ ನಡೆಯಬೇಕು…ನಿನಗೊಂದು ಚಂದದ ಹೆಸರಿಟ್ಟು ಬಿಡದೆ ಆ ಹೆಸರಿನಿಂದ ನಿನ್ನ ಕೂಗಬೇಕು…ನಿನ್ನ ಕಣ್ಣ ಕಾಡಿಗೆಯನ್ನು ಚೂರು ಸ್ಪರ್ಷಿಸಬೇಕು…ನಿನ್ನ ಮುಖದ ಮೇಲೆ ಆಟವಾಡುತಿರುವ ಆ ಮುಂಗುರುಳನ್ನು ಬದಿಗೆ ನಾ ಸರಿಸಬೇಕು…ಗೆಳತಿ ಬೇಡೆನ್ನಬೇಡ ನಿನ್ನ ಕೈ ಹಿಡಿದು ನಾಳೆಯ ಕನಸ ಕಾಣಬೇಕು…ಒಲವಿನ ಗೀತೆಗೆ ಮನಸ್ಸು ಮಾಗಿದೆ…ಗುನುಗುತಿದೆ ಮನವು ನಿನ್ನನುರಾಗ ಬಯಸುವ ಹಾಡನು ಕೇಳಬಲ್ಲೆಯೇನೂ ನೀನೊಬ್ಬಳೇ?
ಅದೋ ನೋಡು ಎಂದು ಆ ಚಂದಿರನ ನಾ ನಿನಗೆ ತೋರಿಸಬೇಕು…ನನ್ನೆದೆಯ ಮೇಲಿರಿರುವ ನಿನ್ನ ತಲೆಯನ್ನು ನಾ ಸವರಬೇಕು…ಮಾತಾಡುತ್ತ ನಕ್ಷತ್ರವನ್ನು ನಾವಿಬ್ಬರೂ ಸೇರಿ ಎಣಿಸಬೇಕು…ಕ್ಷಣವು ನಮ್ಮಿಬ್ಬರ ಪ್ರೀತಿಯ ನೋಡಿ ಸ್ತಬ್ಧವಾಗಬೇಕು…ಕೊನೆಯಿರದ ಕ್ಷಣದಲಿ ಮಾತಿಲ್ಲದೆಯೂ ಉಸಿರುಗಳು ಒಂದಾಗಬೇಕು…ಗೆಳತಿ ಬೇಡೆನ್ನಬೇಡ ತುಸು ದೂರ ಜೊತೆ ನಡೆಯಬೇಕು…
ಬಿಡದೇ ಸುರಿಯುತಿರುವ ಮಳೆಹನಿಗಳು ನಿನ್ನ ನೆನಪನ್ನು ಹೊತ್ತು ತರುತ್ತಿದ್ದಂತೆ ನನಗನಿಸಿ ಅವುಗಳ ನಡುವೆ ಮಿತಿಯಿಲ್ಲದೇ ನೆನೆಯಬೇಕೆಂಬ ಆಸೆಯನ್ನು ಪೂರೈಸಿಕೊಳ್ಳುವಾಗ ಭಾವದುತ್ತುಂಗದಲಿ ಕಣ್ಣ ಹನಿಗಳೂ ಜೊತೆಯಾದ ಆ ಕ್ಷಣವೇಕೋ ತುಂಬಾ ಕಾಡುತಿದೆ ಗೆಳತಿ…ಕಣ್ಣಸವರಿ ಸಮಾಧಾನ ಹೇಳುತ್ತಿದ್ದ ಆ ಮಳೆಹನಿಯೇಕೋ ತೀರಾ ನನ್ನನ್ನು ಆವರಿಸುತ್ತಿದೆ…ನೀ ಜೊತೆ ಇರುವಾಗ ಬಿಡದೇ ಸುರಿಯುತ್ತಿರುವ ಮಳೆಯಲಿ ನೀ ನೆನೆಯುವಾಗ ನಿನ್ನ ನಗುವ ನೋಡುತ ನಾ ಕಳೆದುಹೋಗಬೇಕು…ಮೈ ನೆನೆಯುವಂತೆ ಮಾಡಿದ ಮಳೆಯು ಭಾವತುಂಬಿದ ಹನಿಗಳೊಡನೆ ಮನಸ್ಸನ್ನೂ ನೆನೆಸಲಿ…
ಕೊರಳ ಸೆರೆ ಉಬ್ಬುತಿದೆ ಭಾವದುತ್ತುಂಗಲಿ,
ಸಿಹಿಯಾಗಿ ಕಾಡುತಿರು ಸವಿ ನೆನಪಿನುಸಿರಾಗಿ….
ಕೈಹಿಡಿದು ನಡೆವಾಗ ಮನವು ಬೀಗುತಿದೆ,
ಕನಸು ತುಂಬಿಹ ನಯನವದು ಬಿಡದೆ ಸಂಧಿಸಲಿ….
ಮತ್ತೆದೇ ಸಾಲು ಬರೆಯುವೆ…”ಗೆಳತಿ ಬೆಡೆನ್ನಬೇಡ ತುಸು ದೂರ ಜೊತೆ ನಡೆಯಬೇಕು…..” ಮಗುವಿನಂತೆ ನಿನ್ನ ಮಡಿಲಲಿ ಮಲಗಿ ಪ್ರಸ್ತುತವ ಮರೆಯಬೇಕು…ಸೋತು ನಿಂತ ಧರಣಿಗೆ ಮಳೆಹನಿಯೊಂದೇ ಆಸರೆ…ಭರ್ರನೆ ಕುಸಿದ ಗೆಲುವಿನ ಸೌಧವ ಮತ್ತೆ ಕಟ್ಟಲು ಭರವಸೆ, ಧೈರ್ಯದ ಜೊತೆ ಅಪ್ರತಿಮ ಪ್ರೀತಿ ತುಂಬಿದ ಒಲವಿನೊಂದಿಗೆ ನನ್ನ ಕೈಯನ್ನು ಬಿಗಿಹಿಡಿದ ನಿನ್ನ ಕೈಗಳೇ ಅಡಿಗಲ್ಲು…
ಕಾರಣವೇ ಇಲ್ಲದೇ ನಿನ್ನ ನೋಡುತ್ತ ಮನತುಂಬಿ ನಗಬಲ್ಲೆ….ಜಗತ್ತೇ ತಿರಸ್ಕರಿಸಿದರೂ ನಿನ್ನೊಡಲ ಅನುರಾಗವ ಉಸಿರಾಗಿಸಿಕೊಂಡು ಬದುಕಬಲ್ಲೆ…ನಿನ್ನ ಪ್ರೀತಿಯ ಉತ್ತುಂಗದಲಿ ನಿನ್ನೆ ಇಂದು ನಾಳೆಗಳ ಯೋಚನೆಗಳಿಲ್ಲದೇ ಧ್ಯಾನಿಯಾಗಬಲ್ಲೆ…ನಿನ್ನ ಎದೆಯ ಬಡಿತದ ವೇಗದಲ್ಲಾಗುವ ಬದಲಾವಣೆಯನ್ನು ನಾನು ಅರಿಯಬಲ್ಲೆ…ಎಲ್ಲಕ್ಕಿಂತ ಮುಖ್ಯವಾಗಿ ನಿನ್ನನ್ನು ನಾ ನನ್ನ ಪ್ರೀತಿಸುವುದಕ್ಕಿಂತಲೂ ಜಾಸ್ತಿ ಪ್ರೀತಿಸಬಲ್ಲೆ…ನಾವಿಬ್ಬರೇ ನಡೆವಾಗ ಯಾರಿಗೂ ತಿಳಿಯದೇ ಪ್ರಕೃತಿಯೇ ನಾಚುವಂತೆ ಸಿಹಿಮುತ್ತೊಂದನ್ನು ನಿನಗೆ ನೀಡಬಲ್ಲೆ…”ಗೆಳತಿ ಬೇಡೆನ್ನಬೇಡ ಸಿಹಿಯಾಗಿ ನಿನ್ನ ಕಾಡುವಾಸೆ….”
ನಾನು ನಿನಗಿಟ್ಟ ಹೆಸರದು ನಿನ್ನನುರಾಗದ ಪ್ರತಿಫಲನ…ನಿನಗಾಗಿ ನಾ ಬರೆದ ಕವನ ನನ್ನೊಲವಿನ ಪ್ರೇಮದುತ್ತುಂಗದಲಿ ಬರೆದಿದ್ದು…ನಗುತಿರು ಗೆಳತಿ ನಿರಂತರವಾಗಿ…ಅಂದು ಮೊದಲ ಬಾರಿ ನಿನ್ನ ಮಾತಾಡಿಸುವಾಗ ನೀ ತೊಟ್ಟಿದ್ದು ಭರತನಾಟ್ಯದ ಉಡುಗೆ…ಮಾತಮಾತಿಲ್ಲದೇ ನೀ ಹೊರಟಾದ ಮಗುವಾಗಿ ಅತ್ತಿದ್ದೆ…ಮರಳಿ ನೀ ಸಿಕ್ಕಾಗ ಖುಷಿಯಾಗಿ ಅತ್ತಿದ್ದೆ…”ಗೆಳತಿ ಬೇಡೆನ್ನಬೇಡ ನನಗಾಗಿ ಮತ್ತೊಮ್ಮೆ ನರ್ತಿಸು…..”
ಅಸೆಯ ಕನಸುಗಳ ಅರಸಿ ಹೊರಡೋಣ, ಜೊತೆ ನೀನಿರು ಸಾಕು…ಕೊನೆಯಿರದ ತೀರದಲಿ ಜೊತೆ ನಡೆಯೋಣ, ನನ್ನ ಕೈ ಹಿಡಿದು ಹೆಜ್ಜೆ ಹಾಕು ಸಾಕು…ನಮ್ಮಿಬ್ಬರದೇ ಲೋಕ ಸೃಷ್ಟಿಸಿಕೊಂಡು ಭಾವದರಮನೆಯಲಿ ರಾಜಾ ರಾಣಿಯಂತೆ ಜೀವಿಸೋಣ, ನನ್ನೊಲವಿನ ಪತ್ರಕ್ಕೆ ಸಹಿ ಹಾಕು ಸಾಕು…ನಿನ್ನ ನಗುವದು ನನ್ನ ಉಸಿರು ನನಗಾಗಿಯಾದರೂ ಸದಾ ನಗುತಿರು…ಬರದ ನಾಳೆಯ ಬಗ್ಗೆ ಯೋಚಿಸುವ ಮೊದಲು ಪ್ರಸ್ತುತದ ಬದುಕನ್ನು ಚಂದವಾಗಿ ಕಟ್ಟಿಕೊಳ್ಳೋಣ…”ಗೆಳತಿ ಬೇಡೆನ್ನಬೇಡ ಜೊತೆಯಾಗಿ ಬಾಳ ತೇರ ಎಳೆಯೋಣ…..”
ಇಂತಿ ನಿನ್ನ ಒಲವು…..
Facebook ಕಾಮೆಂಟ್ಸ್