ಈ ವಿಷಯವನ್ನ ಹೀಗೇ ಶುರು ಮಾಡುತ್ತೇನೆ.. “ರಾಮ್ ಪ್ರಸಾದ್ ಬಿಸ್ಮಿಲ್ಲಾ ಕಾಕೋರಿ ಮೊಕದ್ದಮೆಯಲ್ಲಿ ಗಲ್ಲು ಶಿಕ್ಷೆಗೊಳಪಡುತ್ತಾನೆ. ಗಲ್ಲೀಗ್ ಹೋಗೋದಿಕ್ಕೂ ಮುಂಚೆ ಅವನ ತಾಯಿ ಅವನನ್ನ ನೋಡಬೇಕು ಅಂತ ಜೈಲಿಗೆ ಬರ್ತಾಳೆ. ಅಮ್ಮ ಬರ್ತಿದ್ದಾಳೆ ಅನ್ನೋ ಸುದ್ದಿ ಕೇಳೇ ಅವನ ಕಣ್ಣು ಒದ್ದೆಯಾಗತ್ತೆ.. ತಾಯಿ ಎದುರಿಗೆ ಬಂದು ನಿಂತಾಗ, ಕಂಗಳಿಂದ ನೀರಿನ ಧಾರೆ. ಆಗ ಅವನ ತಾಯಿ ವಿಚಲಿತಳಾಗಿ ಕೇಳ್ತಾಳೆ, ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಸವಾಲ್ ಹಾಕಿ ನಿಂತು ಮೃತ್ಯುದಂಡ ಸ್ವೀಕಾರ ಮಾಡಿದ ನಿನ್ನನ್ನ ನೋಡಿ ಆಶೀರ್ವಾದ ಮಾಡಬೇಕು ಅಂತ ಬಂದ್ನಪ್ಪಾ, ನೀನ್ ಅಳ್ತೀಯಾ? ನನಗಿಂತಲೂ ಎತ್ತರಕ್ಕೆ ಬೆಳೆದ ನೀನೇ ಸಾವಿಗಂಜಿ ಕಣ್ಣೀರ್ ಹಾಕಿದ್ರೆ, ನಿನ್ ತಾಯಿ ನಾನ್ ಏನ್ ಮಾಡ್ಲಿ?.. ಆಗ ರಾಮ್ ಪ್ರಸಾದ್ ಸಾವರಿಸಿಕೊಳ್ತಾನೆ ಮತ್ತು ಹೇಳ್ತಾನೆ.. ಸಾವಿಗ್ ಹೆದರಿ ಅಳ್ತಾ ಇಲ್ಲಮ್ಮಾ, ತನ್ನ ಮಗ ಗಲ್ಲೀಗ್ ಹೋಗೋವಾಗ ನಗು ನಗ್ತಾ ಆಶೀರ್ವಾದ ಮಾಡಿ ಕಳುಹಿಸಿಕೊಡೋ ಶ್ರೇಷ್ಠ ತಾಯಿಯ ಗರ್ಭದಿಂದ ಜನಿಸಿದ್ದಕ್ಕಾಗಿ ಆ ದೇವರಿಗೆ ಕೃತಜ್ಞತೆ ಸಲ್ಲಿಸಿದೆ ಕಣೇ, ಆಗ ಆ ಧನ್ಯತೆಯಿಂದ ಬಂದ ಕಣ್ಣೀರಿದು..” ಹೃದಯದಲ್ಲಿ ಮಾತೃ ಭಾವ ಅಂಕಿತವಾದರೆ ಮಗುವಿನ ಹೃದಯ ಅದೆಂಥ ಉನ್ಮತ್ತತೆಯನ್ನ ಪಡೆದುಕೊಳ್ಳುತ್ತದೆ.. ಇದು ಶ್ರೀ ಬಿ ವಿ ವಿದ್ಯಾನಂದ ಶೆಣೈ ಅವರ ‘ಭಾರತ ದರ್ಶನ’ ಉಪನ್ಯಾಸ ಮಾಲಿಕೆಯಿಂದ ಆಯ್ದ ಒಂದು ಪುಟ್ಟ ಭಾಗ. ರಾಮ್’ಪ್ರಸಾದ್ ಹೆಸರನ್ನೆಲ್ಲ ನಾವು ಕೇಳೇ ಇಲ್ಲ. ಅವ್ರೆಲ್ಲಾ ಯಾರೋ ನಮಗೆ ಗೊತ್ತಿಲ್ಲ. ನಮ್ಮ ಮಕ್ಕಳಿಗೆ ಇದನ್ನೆಲ್ಲಾ ನಾವು ಯಾವತ್ತೂ ಹೇಳೋದಿಲ್ಲ. ಯಾವಾಗ್ ನೋಡಿದ್ರೂ ಗಲಾಟೆ, ಇಷ್ಟೇ ನಮ್ಮ ದೇಶ ಅಂತ ಅಂದ್ಕೊಳ್ತಾರೆ ಅವರು. ಬನ್ನಿ, ಒಂಚೂರು ಬದಲಾಗೋಣ..
ಭಾರತದ ಇತಿಹಾಸ ಅಂದ್ರೆ ಅದು ಸೋಲಿನ ಇತಿಹಾಸ, ಪರಾಭವದ ಇತಿಹಾಸ ಅಂತಾನೇ ಬಿಂಬಿಸಲ್ಪಡುತ್ತದೆ ಎಲ್ಲಾ ಕಡೆಯಲ್ಲೂ, ಆದರೆ ನಿಜವಾದ ಇತಿಹಾಸವನ್ನ ನಾವೆಷ್ಟು ತಿಳಿದುಕೊಂಡಿದ್ದೇವೆ? ನಮ್ಮ ಇತಿಹಾಸ ಅದು ಶೌರ್ಯದ ಇತಿಹಾಸ, ಅದು ಗೆಲುವಿನ ಇತಿಹಾಸ. ಅದೆಷ್ಟೋ ವರ್ಷಗಳಿಂದ ನಮ್ಮ ಮೇಲೆ ನಿರಂತರವಾಗಿ ದಾಳಿಗಳು ಆಗ್ತಾನೇ ಇವೆ. ಆದರೂ ಇಂದಿನ ಅಭಿವೃದ್ಧ ರಾಷ್ಟ್ರಗಳೆದುರು ತಲೆ ಎತ್ತಿ ನಿಂತಂತಹ ದೇಶ ನಮ್ಮದು. ನಮ್ಮೆಲ್ಲ ಹಿರಿಯರ ನಂಬಿಕೆಗಳಿಗೆ ವಿಜ್ಞಾನದ ತಳಹದಿ ಇದೆ. ಮಣ್ಣು ಕಲ್ಲುಗಳಿಗೆ ಪೂಜೆ ಮಾಡ್ತೀವಿ ಅಂತಂದ್ರೆ ಅದು ಮೂಢನಂಬಿಕೆಯಿಂದಲ್ಲಾ, ಬದಲಾಗಿ ಕೃತಜ್ಞತಾ ಭಾವದಿಂದ ; ಪ್ರಕೃತಿಯ ಪ್ರತೀ ಅಂಶಗಳಲ್ಲಿ ದೈವೀರೂಪವನ್ನ ಕಂಡವರು ನಾವು.. ಜಗತ್ತಿನ ಯಾವುದೋ ಒಂದು ದೇಶ ತನ್ನ ನೆಲವನ್ನ ತಾಯಿಯಂತೆ ಕಾಣುತ್ತದೆ ಅಂತಾದ್ರೆ ಅದು ಖಂಡಿತಾ ಭಾರತದ ಪ್ರಭಾವವೇ ಹೊರತು ಮತ್ತೇನಲ್ಲ.. ಇಲ್ಲಿ ಹೆಣ್ಣನ್ನ ಆದಿಶಕ್ತಿ ಅಂತ ನಮಸ್ಕರಿಸುತ್ತೇವೆ. ನಮ್ಮ ಬದುಕಿನಲ್ಲಿ ಹೆಣ್ಣಿನ ಪಾತ್ರವನ್ನ ಮನಗಂಡು ಅವಳನ್ನ ಅತ್ಯಂತ ಎತ್ತರದ ಸ್ಥಾನದಲ್ಲಿರಿಸಿ, ಜಗನ್ಮಾತೆ, ಜೀವನ್ಮೂಲ ಅಂತ ಆರಾಧಿಸುತ್ತೇವೆ. ಹೆಣ್ಣು ಗಂಡುಗಳನ್ನ ಕೇವಲ ಭೌತಿಕ ವಸ್ತುವಂತೆ ನೋಡುವ ಪಾಶ್ಚಾತ್ಯರೆದುರು ನಾವು ಅದೆಷ್ಟು ಎತ್ತರದಲ್ಲಿ ನಿಲ್ಲುತ್ತೇವೆ ಅಲ್ವಾ? ಹೇಳಬಹುದು ರಾಸಾಯನಿಕಗಳಿಂದಾನೇ ಈ ದೇಹ ಆಗಿರೋದು, ಆದರೂ ಅದರೊಳಗೊಂದು ಚೈತನ್ಯ ಇದೆಯಲ್ಲಾ? ಅದಕ್ಕೂ ಒಂದು ಅಸ್ತಿತ್ವ ಇದೆಯಲ್ಲಾ.. ಆ ‘ನನ್ನೊಳಗಿನ ನನ್ನ’ ಅಸ್ತಿತ್ವವನ್ನ ಇಡೀ ವಿಶ್ವಕ್ಕೆ ತೋರಿದ್ದು ನಮ್ಮ ಭಾರತ. ದಿಕ್ಕೆಟ್ಟು ಕುಳಿತಿದ್ದ ಎಷ್ಟೊ ರಾಷ್ಟ್ರಗಳಿಗೆ ಜ್ಞಾನದ ಪಂಜು ಹಿಡಿದು ದಾರಿ ತೋರಿದವರು ನಾವು. ನಮ್ಮ ಈ ಸಾಹಸಗಾಥೆಯನ್ನ ನಾವು ಹೇಳಿಕೊಳ್ಳೋದಿಕ್ಕೆ ಯಾಕೆ ಹಿಂಜರಿಯುತ್ತಿದ್ದೇವೆ? ಕಲ್ಪಿತ ವಾಸ್ತವದೊಳಗೆ ಮತ್ತೆ ಮತ್ತೆ ಭ್ರಮಿಸಿಕೊಳ್ಳುತ್ತಾ ಯಾಕೆ ನಮ್ಮತನವನ್ನ ಕಳೆದುಕೊಳ್ಳುತ್ತಿದ್ದೇವೆ?..
ಸಾಮಾನ್ಯವಾಗಿ ಪದ್ಯಗಳನ್ನೆಲ್ಲಾ ಒಂದಷ್ಟು ಬಾರಿ ಮಾತ್ರ ಕೇಳಬಹುದು. ಆಮೇಲಾಮೇಲೆ ಅವು ಕಳೆಗುಂದಿದಂತನಿಸುತ್ತವೆ. ಆದರೆ, ನಮ್ಮ ರಾಷ್ಟ್ರಗೀತೆಯನ್ನ ಕೇಳಿದ ಪ್ರತಿ ಸಲವೂ ಮೈ ರೋಮಗಳು ಎದ್ದು ನಿಲ್ಲುತ್ತವಲ್ಲಾ!. ಯಾಕಂದ್ರೆ ಅದು ಕೇವಲ ಶಬ್ದಗಳ ಗುಚ್ಛ ಅಲ್ಲ, ಅದು ಕೋಟಿ ಕೋಟಿ ಭಾರತೀಯರ ಹೃದಯ ತಂತಿಯ ಕಂಪನದ ನೀಳ ಮಿಡಿತ.. ಮೂರು ಬಣ್ಣಗಳ ಆ ಧ್ವಜ, ಜೊತೆಗೆ ಈ ಗೀತೆಯ ಝೇಂಕಾರ ನಮ್ಮ ಮನಸ್ಸಿನಲ್ಲಿ ಅದೆಂಥ ಶಕ್ತಿಯನ್ನ ತುಂಬುತ್ತದೆಂಬುದಕ್ಕೆ ಎಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿವೆ. ಬದಲಾಗೋ ಋತುಮಾನಗಳಿಗೆ ಕಂಗೆಟ್ಟು ಕುಳಿತಿರುವುದಿಲ್ಲ ನಮ್ಮ ಸೈನಿಕ; ತನ್ನವರ ನೆನಪುಗಳನ್ನೆಲ್ಲಾ ಎದೆಗೂಡಿನಲ್ಲಿ ಮಡುಗಟ್ಟಿಕೊಂಡು, ತನ್ನ ನೆಲದ ಜನರ ನೆಮ್ಮದಿಗಾಗಿ ಅವುಡುಗಚ್ಚಿ ಹೋರಾಡುತ್ತಾನೆ ಆತ. ಗಡಿಗಳಿಂದ ದುಷ್ಟಶಕ್ತಿ ನುಸುಳದಂತೆ ತಡೆಯುತ್ತಾನೆ ಆತ. ಆದರೆ, ನಮಗೀಗ ಎದುರಾಗಿರುವುದು ನಮ್ಮೊಳಗಿನ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮಾತ್ಸರ್ಯಗಳೆಂಬ ಶತ್ರುಗಳು. ಇಂದಿನ ಸಮಾಜದಲ್ಲಿ ವಿವಿಧ ಭಂಗಿಗಳಲ್ಲಿ ಇವು ಕುಣಿಯುತ್ತಿವೆ. ಒಂದಷ್ಟು ಹೊತ್ತು ನಮ್ಮೆಲ್ಲರ ಮುಖವಾಡಗಳನ್ನ ಕಳಚಿಟ್ಟು ನಮ್ಮ ಮಕ್ಕಳಿಗೆ ನಮ್ಮ ದೇಶದ ನಿಜ ಸತ್ವವನ್ನ, ಅಮರತ್ವವನ್ನ ತೋರಿಸೋಣ. ಮೈಮರೆವಿನಿಂದ ಹೊರಬರೋಣ..ಅಳೋಣ, ನಗೋಣ, ಯಾಂತ್ರಿಕತೆಯ ಗುಂಗಿಂದ ಆಚೆ ನಿಲ್ಲೋಣ.. ಮತ್ತೆ ಮತ್ತೆ ನಮ್ಮ ನಾಡಿನ ಧೀಮಂತತೆಯನ್ನ ಎದೆ ತುಂಬ ಹರಡಿಕೊಳ್ಳೋಣ. ಅನ್ನ ಇಕ್ಕಿದ ನೆಲದ ಋಣ ತೀರಿಸುವ ಬದಲು ಆ ನೆಲವನ್ನೇ ಹೀಗಳೆಯುವ ಮನಸ್ಥಿತಿಗೆ ಇವತ್ತು ಗೋರಿ ಕಟ್ಟೋಣ.. ಒಂದಷ್ಟು ಅರ್ಥವಿಲ್ಲದ ಪದಗಳನ್ನ ಹಿಡಿದುಕೊಂಡು ಕಾಲಹರಣ ಮಾಡುತ್ತಿದ್ದ ಪ್ರದರ್ಶನಗಳಿಗೆಲ್ಲಾ ಇಂದು ತೆರೆ ಬೀಳಲಿ.. ಈಗ ಸಮಯ ಬಂದಿದೆ.. ಬದಲಾಗೋಣ..ಒಂದಿಷ್ಟು..
Facebook ಕಾಮೆಂಟ್ಸ್