ಆದಿಯೂ.. ಅಂತ್ಯವೂ..
ಸುಖವೂ.. ದುಃಖವೂ..
ಬದುಕೂ.. ಸಾವೂ..
ಆತ್ಮವೂ.. ವಿಶ್ವಾತ್ಮವೂ..
ಕೊನೆಗೆ?? ಕತ್ತಲು.. ಶಾಶ್ವತ ಕತ್ತಲು..
ಆದಿಯೂ.. ಅಂತ್ಯವೂ..
ನಿಧಾನ ಸ್ವರದಲ್ಲಿ, ಮಂದ್ರ ರಾಗದಲ್ಲಿ ಪುಟ್ಟ ಮಗುವಿನ ದನಿಯೊಂದು ಅಲೆ ಅಲೆಯಾಗಿ ಕೇಳಿ ಬರುತ್ತಿತ್ತು. ಬಿದಿರಿನ ವಯೊಲಿನ್ ನಾದ ಹೊರಡಿಸುತ್ತಲೇ ಇತ್ತು, ನಿಧಾನ ಧಾಟಿಗೆ ಸಮನಾದ ಶೃತಿ.
ವಿಶ್ವಾತ್ಮ ತನ್ನೆಲ್ಲ ಶಕ್ತಿಯನ್ನೂ ಕಳೆದುಕೊಂಡಿದ್ದ. ಮಲಗಿದಲ್ಲಿಂದ ಏಳುವಷ್ಟೂ ಚೈತನ್ಯವಿರಲಿಲ್ಲ. ಸ್ಥಿಮಿತದಲ್ಲಿರದ ಬುದ್ಧಿ, ಕಳೆದುಕೊಳ್ಳುವ ಭೀತಿ. ವಿಶ್ವಾತ್ಮನಿಗೂ ನಡೆಯುತ್ತಿರುವುದೆಲ್ಲ ಕಾಣಿಸುತ್ತಿತ್ತು. ಏನು ಮಾಡಲು ಸಾಧ್ಯ??
ಮನುಷ್ಯನನ್ನು ಹತೋಟಿಗೆ ತರುವ ವಿಶ್ವಾತ್ಮನೇ ಅಸ್ಥಿರವಾಗಿದ್ದ. ವರ್ಷಿ ಕರೆದಾಗಲೂ ವಿಶ್ವಾತ್ಮನಿಗೆ ಕೇಳಿಸಿತ್ತು. ಅವನು ಏಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ತನ್ನಲ್ಲಿರುವ ಎಲ್ಲ ಶಕ್ತಿಯನ್ನು ಯಾರೋ ದೋಚಿದಂತೆ ಆಗಿಬಿಟ್ಟಿದ್ದ ವಿಶ್ವಾತ್ಮ.
ಸಂಬಂಧಗಳು ಏಕೆ ಬೇಕು? ಬಂಧನಗಳಲ್ಲಿ ಏಕೆ ಸಿಲುಕಬೇಕು ಎಂಬುದು ತಿಳಿಯುತ್ತಿರಬೇಕು. ವಿಶ್ವಾತ್ಮನ ಮುಗ್ಧ ಮನಸ್ಸೇ ಗೆದ್ದಿತು. ಆಗಸದಲ್ಲಿ ಕಪ್ಪು ಮೋಡ ಕವಿದಿದೆ ಭೋರ್ಗರೆಸುವ ಕರಾಳ ರಾತ್ರಿಯಂತೆ. ವರ್ಷಿ, ಅವನ ಪ್ರಯೋಗಾಲಯ, ಎಲಿಯನ್ಸ್ ಎಲ್ಲವೂ ಕಾಣಿಸುತ್ತಿದೆ. ಮೊದಲಿನಂತಿದ್ದರೆ ವಿಶ್ವಾತ್ಮ ಭೂಮಿಯನ್ನು ಕ್ಷಣ ಮಾತ್ರದಲ್ಲಿ ರಕ್ಷಿಸಿ ಬಿಡುತ್ತಿದ್ದ. ಪರಿಸ್ಥಿತಿ ಹಾಗಿಲ್ಲ.
ಒಂದೇ ಥರ ಇದ್ದದ್ದು ಯಾವಾಗ?
ವರ್ಷಿ ಎರಡನೇ ಸೂರ್ಯನನ್ನು ತೆಗೆಯಲು ಹೊರಟಾಗ ವಿಶ್ವಾತ್ಮ ಬಹಳ ಹಿಗ್ಗಿದ್ದ. ಆತ ಹಾಗೆ ಮಾಡಿದರೆ ಎಲ್ಲವೂ ಮೊದಲಿನಂತಾಗುತ್ತದೆ ಎಂದು ಆನಂದಿಸಿದ್ದ. ಅಷ್ಟರಲ್ಲಾಗಲೇ ದುರಂತ.
ಒಳ್ಳೆಯ ಕೆಲಸ ಪ್ರಾರಂಭಿಸುವುದೇ ಕಷ್ಟ;
ಕೆಟ್ಟದ್ದು ಮುಗಿದ ಮೇಲೆ ತಿಳಿಯುವುದು.
ಹೇಗಾದರೂ ಇದನ್ನು ತಡೆಯಬೇಕು. ಆದರೆ ಹೇಗೆ? ಹೇಗೆ ತಡೆಯಬೇಕು? ಎಂದು ಇರುವಲ್ಲಿಂದ ಏಳಲು ನೋಡಿದ, ಹೆಜ್ಜೆ ಕೀಳಲು ನೋಡಿದ. ಅಸಾಧ್ಯವೆನಿಸಿತು.
“ವರ್ಷಿ ನೀನೆ ಏನಾದರೂ ಮಾಡಬೇಕು. ಇಷ್ಟು ದಿನ ನಾನೆಲ್ಲವನ್ನೂ ಹೇಳಿದ್ದೇನೆ. ಬದುಕುವ ನೀತಿ ಕೇಳಿರುವೆ, ಪ್ರಬಲನಾಗು ವರ್ಷಿ, ನಿನ್ನ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ನೀನು ಮಾತ್ರವಲ್ಲ ಸಂಪೂರ್ಣ ಮನುಕುಲ ನಲುಗುತ್ತಿದೆ, ಪ್ರತಿಭಟಿಸು ವರ್ಷಿ”
“ಎಲ್ಲರೂ ಸೇರಿ ಪ್ರತಿಭಟಿಸಿರಿ, ವಿಶ್ವವು ನಿಮ್ಮ ಮನಸ್ಸಿನ ಮಾತು ಕೇಳಿದರೆ ನಿಮ್ಮ ಜೊತೆ ನಿಲ್ಲುತ್ತದೆ” ಸ್ವಗತಿಸಿದ ವಿಶ್ವಾತ್ಮ.
ಯೋಚಿಸಲು ಶಕ್ತಿ ಬೇಕು, ವಿಶ್ವಾತ್ಮ ಈಗ ಅಶಕ್ತ.
ಸ್ವಚ್ಛ ಶೂನ್ಯವಾಯಿತು ಏನೂ ಇಲ್ಲದಂತೆ..
ಮತ್ತೆ ಆಲಾಪ..
ಆದಿಯೂ.. ಅಂತ್ಯವೂ..
ಸುಖವೂ.. ದುಃಖವೂ..
Facebook ಕಾಮೆಂಟ್ಸ್