ಗ್ರಾಹಕ: ಹಲೋ, ಸರ್ 274005 ನಂಬರ್ ಡೆಡ್ ಆಗಿದೆ.
ಬಿಸ್ಸೆನ್ನೆಲ್ ಅಧಿಕಾರಿ: ಸರಿ, ಸರಿ ನೋಡ್ತೇನೆ.
ಹೀಗೆ ಹೇಳಿ ಆ ಅಧಿಕಾರಿ ಟಪ್ಪ್ ಅಂತ ಫೋನಿಟ್ಟರೆ ಮತ್ತೆ ನಮ್ಮ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗೆ ಮತ್ತೆ ಮತ್ತೆ ಫೋನಾಯಿಸಿ ಕಿರಿಕಿರಿ ಮಾಡಿದರಷ್ಟೇ ನಮ್ಮ ಫೋನು ಮತ್ತೆ ರಿಂಗಣಿಸಲು ಶುರುವಿಡುತ್ತದೆ. ಅದೂ ಸಹ ಗ್ಯಾರಂಟಿಯೇನಲ್ಲ. ಇಲ್ಲದಿದ್ದರೆ ಮತ್ತದೇ ಡೆಡ್ ಫೋನ್!
ನೀವು ಬಿಸ್ಸೆನ್ನೆಲ್ ಲ್ಯಾಂಡ್ ಫೋನಿನ ಗ್ರಾಹಕರಾಗಿದ್ದರೆ ಖಂಡಿತ ಈ ಸಮಸ್ಯೆಯನ್ನು ನಿತ್ಯವೂ ಅನುಭವಿಸುತ್ತಿರುತ್ತೀರಾ. ಈಗ ಗುಜುರಿ ಆಯುವವನ ಕೈಯಲ್ಲೂ ಜಂಗಮವಾಣಿಯಿರುವುದರಿಂದ ಲ್ಯಾಂಡ್ ಫೋನ್ ಬಳಸುವವರು ಬಹಳ ಕಡಿಮೆಯೇ. ಆದರೆ ಬ್ರಾಡ್’ಬ್ಯಾಂಡಿಗಾಗಿ ಹಾಕಿರುವ ಪ್ಯಾಕೇಜಿನಲ್ಲಿ ಇರುವ ಫ್ರೀ ಕಾಲುಗಳನ್ನಾದರೂ ಉಪಯೋಗಿಸೋಣ ಎಂಬ ಉದ್ದೇಶದಿಂದ ಈ ಲ್ಯಾಂಡ್ ಫೋನನ್ನು ಆಗೊಮ್ಮೆ ಈಗೊಮ್ಮೆ ಬಳಸುವುದುಂಟು. ಅದು ಬಿಟ್ಟರೆ ಈ ಬಿಸ್ಸೆನ್ನೆಲ್ ಬಳಕೆಯಾಗುವುದು ಬರೀ ಬ್ರಾಡ್’ಬ್ಯಾಂಡಿಗಾಗಿ ಮಾತ್ರ.
ಆದರೆ ಅಷ್ಟನ್ನಾದರೂ ಸಮರ್ಪಕವಾಗಿ ಪೂರೈಸುತ್ತಿದ್ದಾರಾ? ಎನ್ನುವುದೇ ದೊಡ್ಡ ಪ್ರಶ್ನೆ. ತಿಂಗಳಿನಲ್ಲಿ ಒಂದಲ್ಲ, ಎರಡಲ್ಲ, ಮೂರ್ನಾಲ್ಕು ಭಾರಿ ನಮ್ಮ ಫೋನ್ ಡೆಡ್ ಆಗುತ್ತದೆ. ಈ ಕುರಿತು ಎಕ್ಸ್’ಚೇಂಜ್’ಗೆ ದೂರು ನೀಡಿದರೆ “ಸರಿ ನೋಡೋಣ” ಎನ್ನುವ “ಆಟೋ ಜೆನೆರೇಟೆಡ್” ಉತ್ತರ ಬರುತ್ತದೆ. ಮತ್ತೆರಡು ದಿನ ಸುದ್ದಿಯಿರುವುದಿಲ್ಲ. ಮೂರನೇ ದಿನ ಮತ್ತೆ ಕರೆ ಮಾಡಿದರೆ ” ಕಾರ್ಡ್ ಹಾಳಾಗಿದೆ, ಅದು ಮಂಗಳೂರಿನಿಂದ ಬಂದ ತಕ್ಷಣ ಫೋನ್ ಸರಿಯಾಗುತ್ತದೆ” ಎನ್ನುತ್ತಾರೆ. ಒಂದೂವರೆ ಘಂಟೆ ದಾರಿಯ ಮಂಗಳೂರಿನಿಂದ ಅದೆಂತದೋ ಕಾರ್ಡನ್ನು ತರಲು ಕಮ್ಮಿಯೆಂದರೂ ನಲುವತ್ತೆಂಟು ಘಂಟೆ ತೆಗೆದುಕೊಳ್ಳುತ್ತಾರೆ. ಅಲ್ಲಿಗೆ ಫೋನು ಹಾಳಾಗಿ ನಾಲಕ್ಕು ದಿನವಾಗುತ್ತದೆ. ಬಳಿಕ ಹೊಸ ಕಾರ್ಡು ಬಂದರೂ ಫೋನು ಸರಿಯಾಗಿರುವುದಿಲ್ಲ, ಕಾರಣ, ಸರಿ ಮಾಡುವ ಟೆಕ್ನಿಷಿಯನ್ ಎರಡು ದಿನಗಳ ರಜೆ ಮೇಲೆ ತೆರಳಿರುತ್ತಾನೆ. ಆರು ದಿನ ಹೋಯ್ತು ಅಲ್ಲಿಗೆ. ಅಷ್ಟೊತ್ತಿಗೆ ಸೆಕೆಂಡ್ ಸಾಟರ್ಡೇಯೋ, ಸಂಡೇಯೋ, ಸಂಕ್ರಾಂತಿಯೋ ಇಲ್ಲಾ ಲಾಂಗ್ ವೀಕೆಂಡೋ ಬಂತೆಂದರೆ ಮುಗಿದೇ ಹೋಯ್ತು. ಬ್ರಾಡ್’ಬ್ಯಾಂಡ್ ಇಲ್ಲದ ನಮ್ಮ ಸಪ್ತಾಹ ಯಶಸ್ವಿಯಾಗಿ ಮುಗಿಯುತ್ತದೆ.
ಇದು ಯಾವತ್ತೋ ಒಮ್ಮೊಮ್ಮೆ ಆಗುವ ಸಮಸ್ಯೆ ಅಂತಂದುಕೊಳ್ಳಬೇಡಿ. ಲಕ್ಷಾಂತರ ಬಿಸ್ಸೆನ್ನೆಲ್ ಗ್ರಾಹಕರ ನಿತ್ಯದ ಗೋಳು ಇದು. ಈ ಕುರಿತು ಸ್ಥಳೀಯ ಜೆ.ಇಯವರನ್ನು “ಯಾಕೆ ಮೇಡಂ ಪ್ರತೀ ತಿಂಗಳು ಈ ಥರ ಆಗ್ತಾ ಇದೆ?” ಅಂತೇನಾದ್ರು ಕೇಳಿದ್ರಿ ಅಂತಿಟ್ಟುಕೊಳ್ಳಿ. “ಕೇಬಲ್ ಫಾಲ್ಟ್ ಇದ್ರೆ ನಾವೇನ್ ಮಾಡ್ಲಿ?” ಅಂತ ನಮ್ಗೇ ತಿರುಗು ಬಾಣ ಬಿಡ್ತಾರೆ. ಇದನ್ನೆಲ್ಲಾ ಕೇಳಿ “ಬಿಸ್ಸೆನ್ನೆಲ್ ಹಾಕಿಸ್ಕೊಂಡು ನಾವೇನ್ ಮಾಡೋದು?” ಅಂತ ತಲೆ ಚಚ್ಚಿಕೊಳ್ಳಬೇಕು ನಾವು ಅಷ್ಟೇ.
ಕೇಂದ್ರದಲ್ಲಿ ಹಿಂದಿನ ಸರ್ಕಾರವಿದ್ದಾಗ ಬಿಸ್ಸೆನ್ನೆಲ್ ಸಂಪೂರ್ಣ ನಷ್ಟದಲ್ಲಿತ್ತು. ಈಗಷ್ಟೇ ಲಾಭದ ಹಾದಿ ಹಿಡಿದಿರುವ ಬಿಸ್ಸೆನ್ನೆಲ್ ಹಿಂದೆ ಯಾಕೆ ನಷ್ಟದಲ್ಲಿತ್ತು ಅಂತ ಒಮ್ಮೆ ಅವಲೋಕಿಸಿಕೊಳ್ಳಬೇಕು. ದರ ಮತ್ತು ಆಫರ್’ನ ವಿಚಾರದಲ್ಲಿ ಏರ್’ಟೆಲ್, ಐಡಿಯಾ, ರಿಲಯನ್ಸ್ ಮತ್ತು ನಂತರದ ದಿನಗಳಲ್ಲಿ ನಾಯಿಕೊಡೆಗಳಂತೆ ಹುಟ್ಟಿಕೊಂಡ ಕೆಲವಾರು ಕಂಪೆನಿಗಳು ಸ್ಪರ್ಧೆಗಿಳಿದಾಗ ಬಿಸ್ಸೆನ್ನೆಲ್ ಗೌಣವಾಗಿತ್ತು. ಅವುಗಳೆಲ್ಲಾ ಕಡಿಮೆ ದರದಲ್ಲಿ ಹೈ ಸ್ಪೀಡ್ ಇಂಟರ್’ನೆಟ್ ಸೇವೆ ಒದಗಿಸಲು ಶುರುವಿಟ್ಟರೆ, ಜನರನ್ನು ಆಕರ್ಷಿಸುವಂತಹ ಯಾವ ಆಫರ್ ಕೂಡ ಬಿಸ್ಸೆನ್ನೆಲ್ ಬ್ರಾಡ್’ಬ್ಯಾಂಡ್ ಕಡೆಯಿಂದ ಬರಲಿಲ್ಲ. ಬಿಸ್ಸೆನ್ನೆಲ್ಲಿನ ಸೇವೆಯ ಗುಣಮಟ್ಟವೂ ಉಳಿದ ಕಂಪೆನಿಗಳಂತೆ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟು ಕಂಪ್ಲೇಂಟ್ ನೀಡಿದರೂ ಸಮಯಕ್ಕೆ ಸರಿಯಾಗಿ ಸ್ಪಂದಿಸದ ಆಮೆಗತಿಯ ಅಧಿಕಾರಿಗಳಿಂದಾಗಿ ಎಷ್ಟೋ ಜನರು ಮನೆಯಲ್ಲಿ ತಿಂಗಳುಗಟ್ಟಲೆ ಬ್ರಾಡ್’ಬ್ಯಾಂಡ್ ಇಲ್ಲದೆ ಒದ್ದಾಡುವಂತಾಯ್ತು. ಸಹಜವಾಗಿಯೇ ಜನರು ಬೇಸರಗೊಂಡರು. ಅದೇ ಸಮಯಕ್ಕೆ ಇತರ ಕಂಪೆನಿಗಳು ರೀಸನೇಬಲ್ ದರಕ್ಕೆ 3ಜಿ ಸೇವೆ ಒದಗಿಸಲು ಶುರು ಮಾಡಿದಾಗ ಜನ, ಇದ್ದೂ ಸತ್ತಂತಿದ್ದ ಬಿ.ಎಸ್.ಎಲ್ ಅನ್ನು ತ್ಯಜಿಸಿ ಇತರ ನೆಟ್ವರ್ಕ್’ಗಳತ್ತ ಆಕರ್ಷಿತರಾದರು. ಅದೆಷ್ಟು ಜನ ಬಿಸ್ಸೆನ್ನೆಲ್ ಲ್ಯಾಂಡ್ ಫೋನಿಗೆ ಗುಡ್ ಬೈ ಹೇಳಿದರೋ ದೇವರಿಗೇ ಗೊತ್ತು. ಈ ಎಲ್ಲಾ ಆಗುಹೋಗುಗಳಿಗೆ, ಬಿಸ್ಸೆನ್ನೆಲ್ಲಿನ ಆವತ್ತಿನ ನಷ್ಟಕ್ಕೆ ಈ ಡೋಂಟ್ ಕೇರ್ ಮನಸ್ಥಿತಿಯ ಅಧಿಕಾರಿಗಳೇ ಕಾರಣ ಹೊರತು ಮತ್ತೇನಲ್ಲ.
ಆದರೆ ನನಗೆ ಇದೆಲ್ಲಕ್ಕಿಂತ ಜಾಸ್ತಿ ಆಶ್ಚರ್ಯ ಹುಟ್ಟಿಸಿದ್ದು ದೂರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಅವರ ನಿಷ್ಕ್ರೀಯತೆ! ಇವತ್ತು ನೀವು ಭಾರತದ ಹೊರ ಹೋಗಿ, ಅಲ್ಲೇನಾದ್ರೂ ಸಮಸ್ಯೆಯಲ್ಲಿ ಸಿಲುಕಿದ್ದೀರಿ ಅಂತಿಟ್ಟುಕೊಳ್ಳಿ. ಹೆದರಬೇಕಾದ ಅವಶ್ಯಕತೆಯಿಲ್ಲ. ಥಟ್ಟನೆ ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜರಿಗೆ ಒಂದು ಟ್ವೀಟ್ ಹಾಕಿ. ದೇಶ ಯಾವುದೇ ಇರಲಿ, ಸಮಸ್ಯೆ ಏನೇ ಇರಲಿ, ಇಪ್ಪತ್ತ ನಾಲ್ಕು ಘಂಟೆಯೊಳಗೆ ಅದು ಪರಿಹಾರವಾಗಿರುತ್ತದೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ಯುವತಿಯನ್ನು ಯಾರಾದರೂ ಚುಡಾಯಿಸಿದಾಗ ರೈಲ್ವೇ ಮಂತ್ರಿ ಶ್ರೀ ಸುರೇಶ್ ಪ್ರಭು ಅವರನ್ನು ಟ್ಯಾಗ್ ಮಾಡಿ ಒಂದು ಟ್ವೀಟ್ ಮಾಡಿ. ತಕ್ಷಣವೇ ರೈಲ್ವೇ ಪೋಲೀಸರು ನಿಮ್ಮ ರಕ್ಷಣೆಗೆ ಧಾವಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸುತ್ತಿರುವ ನಿಮಗೆ ಆಹಾರದ ಕೊರತೆಯಾದರೂ ಇದೇ ರೀತಿಯಾದ ತ್ವರಿತ ಉಪಶಮನ ದೊರೆಯುತ್ತದೆ. ರಕ್ಷಣಾ ಸಚಿವರು, ವಿದೇಶ ವ್ಯವಹಾರಗಳ ರಾಜ್ಯ ಸಚಿವರೂ ಸಹ ಇಂತಹ ಹೊಸತನಗಳಿಗೆ ಶೀಘ್ರ ಸ್ಪಂದನೆ ನೀಡುತ್ತಾರೆ. ಆದರೆ ರವಿಶಂಕರ್ ಪ್ರಸಾದರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿ ತಿಂಗಳು ಒಂದು ಕಳೆದರೂ ನಿಮಗ್ಯಾವುದೇ ಉತ್ತರ ಬರುವುದಿಲ್ಲ. ಅದೆಷ್ಟು ಅತ್ತು ಕರೆದು ಗೋಗರೆದರೂ ಈ ಮನುಷ್ಯ ತನ್ನ ಟ್ವಿಟ್ಟರ್ ಪುಟ ತೆರೆಯುದಿಲ್ಲ. ಅಥವಾ ತೆರೆದರೂ ಉತ್ತರಿಸುವ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಅಲ್ಲಾ, ವಿದೇಶಾಂಗ ಸಚಿವರು, ರೈಲ್ವೇ ಸಚಿವರೇ ಜನ ಸಾಮಾನ್ಯರ ಜೊತೆಗೆ ಅತ್ಯುತ್ತಮ ಬಾಂಧವ್ಯ ಹೊಂದುತ್ತಿರಬೇಕಾದರೆ, ತಮ್ಮ ತಮ್ಮ ಇಲಾಖೆಯನ್ನು ಜನ ಸ್ನೇಹಿಯಾಗಿ ರೂಪಿಸಿರಬೇಕಾದರೆ, ಫೇಸ್ಬುಕ್, ಟ್ವಿಟ್ಟರಿನಂತಹ ಜಾಲತಾಣಗಳ ಮೂಲಕ ಜನರ ಜೊತೆಗೆ ನಿಕಟ ಸಂಪರ್ಕ ಹೊಂದಿರಬೇಕಿದ್ದ, ಆ ಮೂಲಕ ಸರಕಾರ ಮತ್ತು ಜನರ ನಡುವೆ ಉತ್ತಮ ಕಮ್ಮುನಿಕೇಷನ್ ಸಾಧಿಸಬೇಕಿದ್ದ ದೂರ ಸಂಪರ್ಕ ಸಚಿವರಿಗೇಕೆ ಇದು ಸಾಧ್ಯವಾಗುತ್ತಿಲ್ಲ? ಉದಾಸಿನವೇ? ಅಲ್ಲಾ, ಹಿಂದಿನ ಸರ್ಕಾರಗಳ ಕಾಲದಿಂದಲೂ ನಮ್ಮ ಇಲಾಖೆ ಇರುವುದೇ ಹೀಗೆ, ಯಾರು ಬದಲಾದರೂ ನಾವು ಬದಲೋಗಲ್ಲ ಎನ್ನುವ ತಾತ್ಸಾರದ ಧೋರಣೆಯೇ? ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ದೂರ ಸಂಪರ್ಕ ಇಲಾಖೆ ಸಾಮಾನ್ಯ ಜನರ ಸಂಪರ್ಕದಿಂದ ದೂರವಾಗುತ್ತಿರುವುದು ಮಾತ್ರ ಸುಳ್ಳಲ್ಲ.
ಅದೂ ಅಲ್ಲದೆ ಸಚಿವರು ಜಾರಿಗೆ ತಂದಿರುವ ಗಿಮಿಕ್ಕೊಂದನ್ನು ನೋಡಿ. ಇನ್ಮುಂದೆ ಮಿನಿಮಮ್ ಸ್ಪೀಡ್ 2 ಎಂ.ಬಿ.ಪಿ.ಎಸ್ ಎಂದಾಗ ನಾವೆಲ್ಲಾ ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಕಡೆಗೆ ಅದು 1 ಜಿ.ಬಿಯವರೆಗೆ ಮಾತ್ರ ಎಂದಾಗ ನಮ್ಮೆಲ್ಲಾ ಸಂಭ್ರಮಕ್ಕೆ ತೆರೆ ಬಿತ್ತು. ಯಾವುದೇ ಪ್ಯಾಕೇಜಿನಲ್ಲಿದ್ದರೂ 2 ಎಂ.ಬಿ.ಪಿ.ಎಸ್ ಸ್ಪೀಡ್’ನ ಇಂಟರ್’ನೆಟ್ ಕೊಟ್ಟಿದ್ದನ್ನೇ ಮಹತ್ಸಾಧನೆ ಎಂದು ಭಾವಿಸಿರುವ ಶ್ರೀಯುತರು, ಅದು ಒಂದು ಜಿ.ಬಿ.ಯವರೆಗೆ ಮಾತ್ರ, ಮತ್ತೆ ಸ್ಪೀಡ್ ನಲುವತ್ತೋ ಐವತ್ತೋ ಕೆ.ಬಿಗಳಿಗಿಳಿಯುತ್ತದೆ ಎಂಬುದರ ಬಗ್ಗೆ ಪ್ರಶ್ನಿಸಿದರೆ ಮಗುಮ್ಮಾಗುತ್ತಾರೆ. ಇದಕ್ಕಿಂತಲೂ ದೊಡ್ಡ ಬಾಧೆ ಮತ್ತೊಂದಿದೆ, ಪ್ರತೀ ತಿಂಗಳ ಮೊದಲ 1 ಜಿ.ಬಿ ಮುಗಿದ ನಂತರ ಕೆಲವು ಸೈಟುಗಳೆಲ್ಲ ಲೋಡ್ ಆಗದೆ ಕಿರಿಕಿರಿ ಕೊಡಲು ಶುರುವಿಡುತ್ತದೆ. ಹೈಯರ್ ಪ್ಲಾನ್’ಗೆ ಹೋಗಿ ಎನ್ನುವ ಜಾಹೀರಾತೂ ಕೂಡಾ ಕಾಣಿಸುತ್ತದೆ. ಅದನ್ನು Decline ಮಾಡಿ ಮಾಡೆಮ್ ರಿಸ್ಟಾರ್ಟ್ ಮಾಡಿದರಷ್ಟೇ ಸಮಸ್ಯೆ ಬಗೆಹರಿಯುತ್ತದೆ. ಪಾತಾಳದಲ್ಲಿರುವ ಬಿ.ಎಸ್.ಎನ್.ಎಲ್ ಅನ್ನು ಮೇಲೆತ್ತುವುದಕ್ಕಾಗಿ ಇಲಾಖೆ ಇಂತಹಾ ಸ್ಮಾರ್ಟ್ ಐಡಿಯಾ ಮಾಡಿದರೆ ಏನಿದು ಅವಗಾವಗ ಕಿರಿಕಿರಿ ಎಂದು ತಲೆ ಚಚ್ಚಿಕೊಳ್ಳುವ ಸ್ಥಿತಿ ಗಾಹಕರದ್ದು.
ಒಂದು ಕಡೆ ಮೋದಿ ಡಿಜಿಟಲ್ ಇಂಡಿಯಾ ಎಂದು ಹೇಳುತ್ತಾ ವಿದೇಶಗಳನ್ನು ಸುತ್ತುತ್ತಾ ಘಟಾನುಗಟಿ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತಾ ರೂಪುರೇಷೆಯನ್ನು ಸಿದ್ಧಪಡಿಸುತ್ತಿದ್ದಾರೆ. ಆದರೆ ಬಿಸ್ಸೆನ್ನೆಲ್ಲಿನ ದುರವಸ್ಥೆಯನ್ನು ನೋಡುವಾಗ ಈ ಡಿಜಿಟಲ್ ಇಂಡಿಯಾ ಯಶಸ್ವಿಯಾಗುವ ಬಗ್ಗೇನೇ ಅನುಮಾನಗಳೇಳುತ್ತಿವೆ. ನೀವೇ ಹೇಳಿ, ” ಕೇಬಲ್ ಫಾಲ್ಟ್ ಬಂದ್ರೆ ನಾವೇನು ಮಾಡಕ್ಕಾಗುತ್ತೆ” ಎನ್ನುವ ಜೆ.ಇ’ಗಳನ್ನಿಟ್ಟುಕೊಂಡು ಇಂಡಿಯಾವನ್ನು ಡಿಜಿಟಲೈಸ್ ಮಾಡಲು ಸಾಧ್ಯವಿದೆಯೇ? ಅವಗಾವಗ ಡಿಸ್’ಕನೆಕ್ಟ್ ಆಗುವ ಬಿಸ್ಸೆನ್ನೆಲ್ ಬ್ರಾಡ್’ಬ್ಯಾಂಡನ್ನು ಇಟ್ಟುಕೊಂಡು ನಾವೇನು ಕಡಿದು ಕಟ್ಟೆ ಹಾಕೋಣ ಹೇಳಿ? ಡಿಜಿಟಲ್ ಇಂಡಿಯಾದ ಹೆಸರಲ್ಲಿ ಲಕ್ಷಾಂತರ ಕಿಲೋಮೀಟರುಗಳ ಹೊಸ ಕೇಬಲ್’ಗಳನ್ನು ಹಾಕುವ ಮೊದಲು ಇರುವ ಸೇವೆಯನ್ನು ಉತ್ತಮಗೊಳಿಸುದೂ ಕೂಡಾ ಸದ್ಯದ ಅಗತ್ಯವಾಗಿದೆ ಎಂದನಿಸುವುದಿಲ್ಲವೇ? ಇವತ್ತು ಮೋದಿಜಿಯ ಪ್ರೋತ್ಸಾಹದಿಂದ ನೂರಾರು ಸ್ಟಾರ್ಟ್ ಅಪ್’ಗಳು ತಲೆಯೆತ್ತುತ್ತಿವೆ. ಅವಕ್ಕೆಲ್ಲಾ ಬ್ರಾಡ್ ಬ್ಯಾಂಡ್ ಬೇಕೇ ಬೇಕು. ಆನ್ಲೈನ್ ಶಾಪಿಂಗ್’ನಿಂದ ಹಿಡಿದು ಟಿಕೆಟ್ ಬುಕ್ಕಿಂಗ್, ಪ್ರಿಂಟಿಂಗ್’ನಂತಹ ಸಣ್ಣ ಪುಟ್ಟ ಕೆಲಸಗಳೂ ಸಹ ಬ್ರಾಡ್’ಬ್ಯಾಂಡನ್ನು ನೆಚ್ಚಿಕೊಂಡು ಹೊಟ್ಟೆ ಹೊರೆಯುತ್ತವೆ. ಬಿಎಸ್ಸೆನ್ನೆಲ್ಲಿನ ಈ ದುರವಸ್ಥೆಯಿಂದ ಅಂತಹ ಸಣ್ಣ ಸಣ್ಣ ಸ್ಟಾರ್ಟ್ ಅಪ್’ಗಳಿಗೆ ಅದೆಷ್ಟು ನಷ್ಟವಾಗಲಿಕ್ಕಿಲ್ಲ ಹೇಳಿ? ಈ ಎಲ್ಲಾ ಸಮಸ್ಯೆಗಳನ್ನು ನೋಡುವಾಗ ನನಗನಿಸುತ್ತದೆ, ಮೋದಿಯ ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾಕ್ಕೆ ಹೊಡೆತ ಬೀಳುವುದಂತೂ ಖಂಡಿತ.
ಒಂದು ಮಾತಂತೂ ಸತ್ಯ. ಬದಲಾವಣೆ ಒಮ್ಮಿಂದೊಮ್ಮೆಲೇ ಬರಲು ಸಾಧ್ಯವಿಲ್ಲ. ಡಿಜಿಟಲ್ ಇಂಡಿಯಾ ಯಶಸ್ವಿಯಾಗುವುದೇ ಇಲ್ಲ ಎಂದು ಬೊಬ್ಬಿರಿಯುತ್ತಿಲ್ಲ ನಾನು. ಆದರೆ ಬದಲಾವಣೆಗೆ ಒಗ್ಗಿಕೊಳ್ಳುವ, ಗ್ರಾಹಕರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಕಂಪೆನಿ ಬೆಸ್ಸೆನ್ನೆಲ್ ಆಗಬೇಕು. . ಆ ಮೂಲಕ ಬಿಎಸ್ಸೆನ್ನೆಲ್ ಗ್ರಾಹಕ ಸ್ನೇಹಿಯೂ ಆಗಬೇಕು. ಈ ನಿಟ್ಟಿನಲ್ಲಿ ಸರಳ ಸಜ್ಜನಿಕೆಯ ರಾಜಕಾರಣಿಯಾಗಿರುವ ದೂರ ಸಂಪರ್ಕ ಇಲಾಖೆ ಸಚಿವರಾಗಿರುವ ರವಿ ಶಂಕರ್ ಪ್ರಸಾದ್ ಅವರು ತಮ್ಮ ದೂರದೃಷ್ಟಿಯನ್ನು ಸರಿಯಾಗಿಯೇ ಉಪಯೋಗಿಸಿಕೊಳ್ಳಬೇಕು.
Facebook ಕಾಮೆಂಟ್ಸ್