X

ಗ್ರಾಮ ವಿಕಾಸದೆಡೆಗೆ ಮೋದಿ ಸರ್ಕಾರ: “RURBAN Mission”ನ ಒಂದು ನೋಟ

ಇಂದಿಗೂ ನಮ್ಮ ದೇಶ “ವ್ಯವಸಾಯ” ಪ್ರಧಾನವಾದ ದೇಶ. ನಮ್ಮ ದೇಶದ ಪ್ರಾಥಮಿಕ ಆರ್ಥಿಕ ವಲಯದಲ್ಲಿ (Primary Sector), ಎಂದರೆ ವ್ಯವಸಾಯ ಮತ್ತು ಅದರ ಪೂರಕ ಸೇವೆಗಳಲ್ಲಿ, ಸುಮಾರು 50 ಶೇಕಡಷ್ಟು ಜನರು ಇದ್ದಾರೆ. ಈ ಮಾಹಿತಿ 2013 ರ ವಿಶ್ವಬ್ಯಾಂಕಿನ (World Bank) ವೆಬ್ಸೈಟ್ ನಲ್ಲಿ ಲಭ್ಯವಿದೆ. ಮೂಲತಃ ನಮ್ಮ ದೇಶವು ಗ್ರಾಮ್ಯ ಪ್ರಧಾನವಾದದ್ದು. ಅದಕ್ಕೆ ಗಾಂಧಿಜಿಯವರು “ಗ್ರಾಮ ವಿಕಾಸ”ಕ್ಕೆ ಮತ್ತು “ಗ್ರಾಮ ಸ್ವರಾಜ್ಯ”ಕ್ಕೆ ಒತ್ತು ನೀಡಿದ್ದು. ಇಷ್ಟೆಲ್ಲಾ ಜನ ಸಂಖ್ಯೆ ಗ್ರಾಮದಲ್ಲಿದ್ದೂ ಸಹ, ನಮ್ಮ ದೇಶದ ಆರ್ಥಿಕ ಕ್ಷೇತ್ರಕ್ಕೆ ಇಲ್ಲಿಯವರೆಗೆ ಹೆಚ್ಚು ಕೊಡುಗೆ ನೀಡಿರುವುದು “ಉತ್ಪಾದನೆ” (Manufacturing Sector) ಮತ್ತು “ಸೇವಾ” (Services Sector) ವಲಯಗಳು. ಇದಕ್ಕೆ ಕಾರಣ ಗ್ರಾಮ್ಯ ಜನರ ಸೋಮಾರಿತನ ಅಲ್ಲ! ಅಥವ ಅವರ ಅಸಮರ್ಥ್ಯತೆ ಖಂಡಿತಾ ಅಲ್ಲ! ಇಲ್ಲಿವರೆಗಿನ ಸರ್ಕಾರಗಳು, ನಗರ ಮತ್ತು ಗ್ರಾಮಗಳ ಮಧ್ಯೆ ಮಾಡಿರುವ ತಾರತಮ್ಯವೇ ಇದಕ್ಕೆ ಮೂಲ ಕಾರಣ. ಉತ್ತಮೋತ್ತಮ ಗುಣಮಟ್ಟದ ಮೂಲಭೂತ ಸೌಕರ್ಯಗಳು ಇಂದಿಗೂ ಸಹ ನಗರಗಳಲ್ಲಿ ಲಭ್ಯವಿದೆ. ಉತ್ತಮವಾದದ್ದು ಬಿಡಿ; ಎಷ್ಟೋ ಹಳ್ಳಿಗಳಲ್ಲಿ ಇಂದಿಗೂ ಸಹ “ವಿದ್ಯುತ್ಛಕ್ತಿ”, “ರಸ್ತೆಗಳು”, “ಶೌಚಾಲಯಗಳು” ಇವೇ ಮೊದಲಾದ ಮೂಲಭೂತ ಸೌಕರ್ಯಗಳೂ ಸಹ ಇಲ್ಲ. ಇಂಥಹ ಪರಿಸ್ಥಿತಿಯಲ್ಲಿ, ಗ್ರಾಮದ ಸೊಗಡಿಗೆ ಸೋಂಕು ಬಾರದಂತೆ, ಗ್ರಾಮಗಳಿಗೂ ಸಹ ನಗರದ ಸೌಕರ್ಯಗಳನ್ನು ನೀಡುವ ಪ್ರಯಾಸವೇ “ಶ್ಯಾಮ ಪ್ರಸಾದ್ ಮುಖರ್ಜಿ ರರ್ಬಾನ್ ಮಿಷಿನ್” [“Shyama Prasad Mukherji Rurban Mission (SPMRM)”].

2011ನೆಯ ಜನಗಣತಿಯ ಪ್ರಕಾರ ಶೇಕಡ 69 ರಷ್ಟು ಜನ ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿದ್ದು, ಶೇಕಡ 31 ರಷ್ಟು ಜನ ನಗರಗಳಲ್ಲಿ ವಾಸವಾಗಿದ್ದಾರೆ. ಗ್ರಾಮಗಳ ಏಳಿಗೆಯಾಗದೆ ಭಾರತ ದೇಶದ ಏಳಿಗೆಯಾಗಲು ಸಾಧ್ಯವಿಲ್ಲ. ಅಂತೆಯೇ, ಈ ಯೋಜನೆಯ ಅಡಿಯಲ್ಲಿ, ಒಟ್ಟು 300

“ಸ್ಮಾರ್ಟ್ ಹಳ್ಳಿ”ಗಳ ನಿರ್ಮಾಣವಾಗಲಿದ್ದು, 2016ರ ಕೊನೆಯಲ್ಲಿ ಸುಮಾರು 100 ಸ್ಮಾರ್ಟ್ ಹಳ್ಳಿಗಳ ನಿರ್ಮಾಣವಾಗಲಿದೆ. ಈ ಯೋಜಯ ಬಗ್ಗೆ ಒಂದು ಪಕ್ಷಿನೋಟ ಈ ಕೆಳಕಂಡಂತಿದೆ:-

· ಕೇಂದ್ರ ಸರ್ಕಾರದ ಮಂತ್ರಿಮಂಡಲವು, ಈ ಯೋಜನೆಯಡಿಯಲ್ಲಿ, ಸುಮಾರು ರೂ 5,142.08 ಕೋಟಿಯನ್ನು ಹೂಡಿಕೆ ಮಾಡಿದೆ.

· ಒಟ್ಟು 300 ಸ್ಮಾರ್ಟ್ ಹಳ್ಳಿಗಳ ಸಮೂಹ ನಿರ್ಮಾಣದ ಸಂಕಲ್ಪವಾಗಿದೆ.

· ಉತ್ತಮ್ಮ ಶಿಕ್ಷಣ, ಆರೋಗ್ಯ ವ್ಯವಸ್ಥೆ – ಆಸ್ಪತ್ರೆಗಳ ನಿರ್ಮಾಣ, ವಿದ್ಯುತ್, ಅಂತರ್ಜಾಲ ವ್ಯವಸ್ಥೆ, ಮತ್ತು ಮನರಂಜನಾ ಸಂಕೀರ್ಣಗಳ ನಿರ್ಮಾಣ ಇವೇ ಮೊದಲಾದ ಸಂಸ್ಥೆಗಳ ಮತ್ತು ವ್ಯವಸ್ಥೆಗಳ ನಿರ್ಮಾಣ ಮಾಡಲಾಗುವುದು.

· “ನಗರ-ವಲಸೆ” (Urban Migration) ಸಮಸ್ಯೆಯ ನಿವಾರಣೆ ಕೂಡ ಇದರಿಂದಾಗುವುದು.

· ಪ್ರಾದೇಶಿಕ ಬೆಳವಣಿಗೆಗೆ ಒತ್ತು ನೀಡುವ ಯೋಜನೆ ಇದಾಗಿದೆ.

· ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ (Balanced Regional Development) ಮತ್ತು ಸಮಗ್ರ ರಾಷ್ಟ್ರೀಯ ಬೆಳವಣಿಗೆ (Overall National Growth), ಈ ಯೋಜನೆಯಿಂದ, ನೆರವೇರುತ್ತದೆ.

· ಗ್ರಾಮ್ಯ ಪ್ರದೇಶಗಳಲ್ಲಿ ಶೇಕಡ 55 ರಷ್ಟು ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ವ್ಯವಸ್ಠೆ ಲಭ್ಯವಿದೆ. ಅದರಲ್ಲೂ 24*7 ವಿದ್ಯುತ್ ಇಲ್ಲ. ಈ ಸಮಸ್ಯೆಯ ನಿವಾರಣೆಯಾಗಬೇಕಾಗಿದೆ. ಅದಕ್ಕಾಗಿಯೆ ಈ “ರರ್ಬಾನ್ ಮಿಷಿನ್”.

· ಶೇಕಡ 35 ರಷ್ಟು ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ “ಪೈಪ್ ನೀರಿನ” ವ್ಯವಸ್ಥೆಯಿದೆ. ಅದನ್ನು ಕೂಡ ಹೆಚ್ಚಿಸಲಾಗುವುದು.

· ಒಂದು ನಾಚಿಕೆಯ ಸಂಗತಿ ಏನಪ್ಪಾ ಅಂದ್ರೆ, ಇಂದಿಗೂ ಎಷ್ಟೋ ಹಳ್ಳಿಗಳಲ್ಲಿ ಶೌಚಾಲಯಗಳ ವ್ಯವಸ್ಥೆಯಿಲ್ಲ. ಶೇಕಡ 69 ರಷ್ಟು ಪ್ರದೇಶಗಳಲ್ಲಿ ಶೌಚಾಲಯಗಳ ವ್ಯವಸ್ಥೆಯಿಲ್ಲ. ಈ ಸಮಸ್ಯೆಯನ್ನೂ ಸಹ ಪರಿಹರಿಸಲಾಗುವುದು.

· “ಲೇಔಟ್ ಪ್ಲಾನ್” ರೀತಿಯಲ್ಲಿ ಸ್ಮಾರ್ಟ್ ಹಳ್ಳಿಗಳ ನಿರ್ಮಾಣ ಮಾಡಲಾಗುವುದು.

· ವ್ಯವಸಾಯ ಮಾಡುವವರಿಗೆ “ಬೆಳೆಯ ವಿಮೆ” ಅಂದರೆ “ಪ್ರಧಾನ ಮಂತ್ರಿ ಫ಼ಸಲ್ ಬಿಮಾ ಯೋಜನ” (PMFBY) ನೀಡಲಾಗುವುದು.

ಇನ್ನು ಕೌಶಲ್ಯಾಭಿವೃದ್ಧಿ (Skill Development), ಕೃಷಿ ಸಂಸ್ಕರಣೆ (Agro-Processing), ವ್ಯವಸಾಯ ಉತ್ಪನ್ನಗಳ ಸಂಗ್ರಹ ಮತ್ತು ದಾಸ್ತಾನು (Storage & Warehousing), ಡಿಜಿಟಲ್ ಸಾಕ್ಷರತೆ (Digital Literacy), ನೈರ್ಮಲ್ಯ (Sanitation), ಪೈಪ್ ನೀರಿನ ವ್ಯವಸ್ಥೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (solid and liquid waste management), ಗಟಾರ ಮತ್ತು ರಸ್ತೆಗಳ ನಿರ್ಮಾಣ, ಬೀದಿದೀಪಗಳು, ಪರಿಪೂರ್ಣವಾದ ಮೊಬೈಲ್ ಆರೋಗ್ಯ ಘಟಕಗಳು, ಶಾಲೆಯ ಮೂಲಸೌಕರ್ಯಗಳ ಸುಧಾರಣೆ, ಗ್ರಾಮ ರಸ್ತೆ ಸಂಪರ್ಕ (Village Road Connectivity), ನಾಗರಿಕ ಕೇಂದ್ರಿತ ಸೇವೆಗಳ ಎಲೆಕ್ಟ್ರಾನಿಕ್ ಡೆಲಿವರಿ, ಸಾರ್ವಜನಿಕ ಸಾರಿಗೆಗಳ ಹೆಚ್ಚಳ, ಮತ್ತು ಎಲ್ಪಿಜಿ ಅನಿಲ ಸಂಪರ್ಕಗಳ ಅನುದಾನ/ಹೆಚ್ಚಳ, ಇವೇ ಈ ಯೋಜನೆಯ ಪೂರ್ಣ ಸ್ವರೂಪ.

ಇವೆಲ್ಲಾ ನಿಜರೂಪದಲ್ಲಿ ನೆರವೇರುವುದೋ ಇಲ್ಲವೋ, ಆದರೆ ಇಷ್ಟರ ಮಟ್ಟಿಗಿನ ಸಮಗ್ರ ಚಿಂತನೆ ಇಲ್ಲಿಯವರೆಗಿನ ಯಾವ ಸರ್ಕಾರಕ್ಕೂ ಇರಲಿಲ್ಲ. ಅದೇನೆ ಇರಲಿ ಈ “ರರ್ಬಾನ್ ಮಿಷನ್” ಇಂದ ನಮ್ಮ ದೇಶದ ಗ್ರಾಮಗಳಿಗೆ ಒಳ್ಳೆಯ ಸೌಕರ್ಯಗಳು ಲಭಿಸಲಿ ಎಂದು ಆಶಿಸೋಣ. ಭಾರತ ದೇಶವು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಚಲಿಸಲಿ ಎಂದು ಬಯಸೋಣ. ಭಾರತ “ವಿಶ್ವ-ಗುರು”ವಾಗುವ ಕನಸು ನನಸಾಗಲೆಂದು ಅಭಿಲಾಷಿಸೋಣ.

Facebook ಕಾಮೆಂಟ್ಸ್

Anoop Vittal: ಪ್ರವೃತ್ತ ವಿದ್ಯಮಾನಗಳ ಚಿಂತಕ, ಲೇಖಕ. ಯೋಗ ತಜ್ಞ.
Related Post