ಮೊನ್ನೆ ಹೈದ್ರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ದಲಿತನಲ್ಲದವನನ್ನು ದಲಿತನೆಂದು ಹುಯಿಲೆಬ್ಬಿಸಲಾಯಿತು. ಸಾವು ಬಿಡಿ, ದಲಿತನದ್ದಾದರೂ ಆಗಿರಲಿ ಇಲ್ಲವೇ ಇನ್ನಾರದ್ದಾದರೂ ಆಗಿರಲಿ ಯಾವುದೇ ಕಾರಣಕ್ಕೂ ಸಾವು ಅಪೇಕ್ಷಣೀಯವಲ್ಲ. ಆದರೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆ, ನಮಗೆ ಒಬ್ಬ ಸಂಶೋಧನಾ ವಿದ್ಯಾರ್ಥಿಯ ಆತ್ಮಹತ್ಯೆಯಾಗಿ ಬಾಧಿಸಲೇ ಇಲ್ಲವಲ್ಲ? ರೋಹಿತ್ ಪರವಾಗಿ ಹೋರಾಡುವವರು ದಲಿತ ಎಂಬ ಟ್ರಂಪ್ ಕಾರ್ಡನ್ನು ಮುಂದೆ ಮಾಡುವುದೇಕೆ? ನಿಜವಾಗಲೂ ಪ್ರತಿಭಾವಂತನಾದ ರೋಹಿತ್, ದಲಿತನೆಂದು ನಕಲಿ ಸರ್ಟಿಫಿಕೆಟ್ ಪಡೆದದ್ದು ಯಾಕಾಗಿ? ಇದರಿಂದ ದಲಿತ ವಿದ್ಯಾರ್ಥಿಗಳಿಗೆ ಸಿಗಬೇಕಾದ ಸೌಲಭ್ಯಗಳು ಅನ್ಯರ ಪಾಲಾಗುತ್ತಿರುವುದನ್ನು ಯಾವೊಬ್ಬ ಪ್ರಜ್ಞಾವಂತನೂ ಪ್ರಶ್ನಿಸುತ್ತಿಲ್ಲವೇಕೆ? ದಲಿತರ ಸೌಲಭ್ಯಗಳನ್ನು ಕಸಿದುಕೊಂಡವನು ದಲಿತರ ಐಕಾನ್ ಆಗುತ್ತಿರುವುದು ಸೋಜಿಗವಾಗಿ ಕಾಣುವುದಿಲ್ಲವೇ?
ರೋಹಿತ್’ನ ಗೆಳೆಯರಿಂದ ಹಲ್ಲೆಗೊಳಗಾದ ಎ.ಬಿ.ವಿ.ಪಿ. ವಿದ್ಯಾರ್ಥಿಯೂ ದಲಿತನೇ. ಹಾಗಿದ್ದಾಗಿಯೂ ಈ ದಲಿತ ಸಂಘಟನೆಗಳೇಕೆ ಅವನ ಮೇಲಾದ ದಾಳಿಯನ್ನು ಖಂಡಿಸುವುದಿಲ್ಲ. ಅವನು ಎ.ಬಿ.ವಿ.ಪಿ.ಯೊಂದಿಗಿದ್ದಾನೆಂದೆ? ಇಲ್ಲಾ ಯಾಕೂಬ್ ಮೆನನ್’ನ ಮರಣದಂಡನೆಯನ್ನು ವಿರೋಧಿಸಲಿಲ್ಲವೆಂದೇ? ರೋಹಿತ್ ಸಾವಿನ ಹೊಣೆ ಯಾರದ್ದು? ಆ ಕುರಿತು ಪಾಪ ಪ್ರಜ್ಞೆ ಅನುಭವಿಸಬೇಕಾದವರು ಯಾರೆಂದು, ರೋಹಿತ್ ತನ್ನ ಡೆತ್ ನೋಟಲ್ಲಿ ಬರೆದು ಒಡೆದು ಹಾಕಿದ ಭಾಗ ಹೇಳುತ್ತದೆ. ಆ ವಿಷಯ ಈಗಾಗಲೇ ಸಾಕಷ್ಟು ಚರ್ಚೆಯಾಗಿರುವುದರಿಂದ ಇಲ್ಲಿ ಅನವಶ್ಯಕ.
ಕಳೆದ ಮೂರು ನಾಲ್ಕು ದಿನಗಳಿಂದ ದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಗಲಭೆಯನ್ನು ನಾವೆಲ್ಲರೂ ಗಮನಿಸುತ್ತಲೇ ಇದ್ದೆವೆ. ಜೆ.ಎನ್.ಯು.ವಿನಲ್ಲಿ ನಡೆದದ್ದಾದರೂ ಸಾಮನ್ಯ ಸಂಗತಿಯೇ? ಈ ದೇಶದ ರಕ್ಷಣೆ, ಸಾರ್ವಭೌಮತೆಗೆ ಸವಾಲಾಗಿ, ದೇಶದ ಸಂಸತ್ ಭವನದ ಮೇಲೆ ದಾಳಿ ಮಾಡಿದ ದೇಶದ್ರೋಹಿಯನ್ನು ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಬಂದ ಹೀರೊ ಎನ್ನುತ್ತಾರಲ್ಲಾ ಈ ವಿದ್ಯಾರ್ಥಿಗಳು? ಇದು ದೇಶದ್ರೋಹವಲ್ಲವಾ? ಸಂಸತ್’ಗೆ ದಾಳಿ ಮಾಡಿ ನೂರಾರು ಜನರ ಹತ್ಯೆಗೈಯ್ಯುವುದೇ ಈ ವಿದ್ಯಾರ್ಥಿಗಳ ಕನಸಾಗಿತ್ತಾ? ಅಂದು ನಮ್ಮ ಏಳು ಜನ ಸೈನಿಕರು ತಮ್ಮ ಜೀವದ ಹಂಗು ತೊರೆದು ಹೋರಾಡದಿದ್ದಲ್ಲಿ, ನಮ್ಮ ಸಂಸತ್ತು ನೆಲಸಮಗೊಳ್ಳುವುದರ ಜೊತೆಗೆ ಎಷ್ಟು ಜನರ ಅಮಾಯಕ ಜೀವಗಳು ಬಲಿಯಾಗಬೇಕಿತ್ತೋ? ಇಂತಹ ಉಗ್ರನೊಬ್ಬ, ಈ ವಿದ್ಯಾರ್ಥಿಗಳಿಗೆ ಹುತಾತ್ಮನಾಗಿ ಕಾಣಿಸುತ್ತಾನೆಂದರೇ, ಅಂದು ತಮ್ಮ ಪ್ರಾಣ ತ್ಯಾಗಮಾಡಿ ಮುಂದಾಗುವ ಭಾರಿ ಅನಾಹುತವನ್ನು ತಪ್ಪಿಸಿ ಮರಣೋತ್ತರ ಪರಮವೀರ ಚಕ್ರಕ್ಕೆ ಭಾಜನರಾದ ನಮ್ಮ ಸೈನಿಕರು ಇವರ ದೃಷ್ಟಿಯಲ್ಲಿ ಏನು?
ಅಫ್ಜಲ್ ಗುರುವನ್ನು ಆದರ್ಶವಾಗಿರಿಸಿಕೊಂಡು, ಅವನ ಪರ ಹೋರಾಟಕ್ಕಿಳಿಯುವ, ಅವನ ಸಾವಿಗೆ ಮಮ್ಮಲ ಮರಗುವ ಬುದ್ಧಿಜೀವಿಗಳ ಮನಸ್ಥಿತಿ ಅಫ್ಜಲ್ ಮನಸ್ಥಿತಿಗಿಂತ ಭಿನ್ನವೇನಲ್ಲ. ಇಲ್ಲವೆಂದರೇ, ತಾಯ್ನಾಡಿನ ವಿರುದ್ಧ ಘೋಷಣೆ ಕೂಗಿ, ಪಾಕಿಸ್ತಾನಕ್ಕೆ ಜಯಘೋಷ ಹಾಕಿದ್ದೇಕೆ? ತಾಯ್ನಾಡನ್ನೇ ಧ್ವಂಸ ಮಾಡದೇ ಬಿಡುವುದಿಲ್ಲವೆನ್ನುವುವರಿಂದ ಏನನ್ನು ತಾನೇ ನಿರೀಕ್ಷಿಸಲು ಸಾಧ್ಯ? ನಾಳೇ ತಮ್ಮ ಹೆತ್ತ ತಾಯಿಯ ಬಗೆಗೂ ಹೀನ ಮಾತುಗಳನ್ನಾಡಲು ಈ ವರ್ಗ ಹಿಂದೇಟು ಹಾಕದು.
ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳ ಹಣೆಬರಹವೇ ಇದು. ಗೊಡ್ಡು ಸಿದ್ಧಾಂತದ ಅಮಲೇರಿಸಿಕೊಂಡಿದ್ದರಿಂದ ಹೀಗೆಲ್ಲಾ ಮಾತನಾಡುತ್ತಾರೆಂದು ಸುಮ್ಮನಿರಬಹುದಿತ್ತೆನೊ? ಆದರೆ ನಮ್ಮನ್ನಾಳುವ ಈ ನಾಯಕರಿಗೇನಾಗಿದೆ? ಯಾಕಾಗಿ ರಾಹುಲ್ ಗಾಂಧಿ, ಕೇಜ್ರಿವಾಲ್, ಸೀತಾರಾಮ ಯೆಚೂರಿ, ಕಪಿಲ ಸಿಬಲ್ ಮೊದಲಾದವರು ಜೆ.ಎನ.ಯು.ವಿನಲ್ಲಿ ನಡೆಯುತ್ತಿರುವ ರಾಷ್ಟ್ರ ವಿರೋಧಿ ಚಟುವಟಿಕೆಗೆ ಬೆಂಬಲವಾಗಿ ನಿಲ್ಲುತ್ತಿದ್ದಾರೆ? ಕೇವಲ ಆಡಳಿತ, ಅಧಿಕಾರಕ್ಕಾಗಿ ಇಷ್ಟು ಹೀನ ಮಟ್ಟಕ್ಕಿಳಿಯುವ ಅಗತ್ಯವಿದೆಯೇ? ತಾಯ್ನಾಡಿನ ಪ್ರೇಮ, ಸುರಕ್ಷೆ ಹಾಗೂ ಮಾನವೀಯ ಸಂವೇದನೆಗಳ ತಂತುಗಳನ್ನು ಕತ್ತರಿಸಿಕೊಂಡವರು ಮಾತ್ರ ಹೀಗೆ ಮಾಡಬಲ್ಲರು. ಈ ನಾಲಾಯಕ್ ನಾಯಕರೆಲ್ಲಾ, ದೇಶದ ವಿರುದ್ಧ ಪ್ರತಿಭಟಿಸಿದವರನ್ನು ಮುಗ್ಧರು, ಅಮಾಯಕರು ಎನ್ನುತ್ತಿದ್ದಾರೆ. ರಾಹುಲ್ ಗಾಂಧಿಗೆ ಈ ಮಾತುಗಳನ್ನು ಹೇಳಿದ್ದರೆ ಒಪ್ಪಬಹುದೇನೋ? ಹೋಗಲಿ ಏನು ತಿಳಿಯದೇ ಮಾತನಾಡಿದ್ದಾನೆನ್ನಬಹುದಿತ್ತು. ಆದರೆ ದೇಶದ ಪ್ರತಿಷ್ಟಿತ ವಿ.ವಿಯೊಂದರ ವಿದ್ಯಾರ್ಥಿಗಳು ದೇಶ ವಿರೋಧಿ ಮಾತನಾಡುತ್ತಾರೆಂದರೆ? ಇಂತಹ ದ್ರೋಹಿಗಳ ಬೆಂಬಲಕ್ಕೆ ವಿ.ವಿ.ಗಳ ಪ್ರೊಫೆಸರ್’ಗಳೂ ನಿಲ್ಲುತ್ತಾರೆಂದರೇ ವ್ಯವಸ್ಥೆ ಎಷ್ಟು ಕುಲಗೆಟ್ಟು ಹೋಗಿದೆ ನೋಡಿ.
ಜನತೆಯ ತೆರಿಗೆ ಹಣದಿಂದ ಪ್ರತಿಷ್ಟಿತ ವಿ.ವಿ.ಯಲ್ಲಿ ಎಲ್ಲ ರೀತಿಯ ಸವಲತ್ತುಗಳನ್ನು ಅನುಭವಿಸುತ್ತಾ ಮಹಾ ಸಂಶೋಧನೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಫೆಲೋಷಿಪ್ ಪಡೆಯುತ್ತಾ ದೇಶವನ್ನು ಬಾಯಿಗೆ ಬಂದಂತೆ ಜರಿದರೆ ಅವರನ್ನು ಅಮಾಯಕರೆನ್ನಲಾಗುತ್ತದೆಯಾ? ಇನ್ನು, ಫೇಸ್’ಬುಕ್ ಪೋಸ್ಟ್ನಲ್ಲಿ ತಮ್ಮನ್ನು ಒಬ್ಬರು ಅವಮಾನಿಸಿದರೆಂದು (ತಿಳಿದಿರಲಿ, ಅವರು ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾಗಿಯೂ) ಪೋಲಿಸ್ ಠಾಣೆ ಮೆಟ್ಟಿಲೇರಿ ಆರೋಗ್ಯ ಸುಧಾರಣೆಗೆ ಮುಂದಾಗಿ ಹಗೆತನ ಸಾಧಿಸಿದ ಮಹಾನುಭಾವರೊಬ್ಬರು, ಇಂದು ದೆಹಲಿ ವಿ.ವಿ.ಯಲ್ಲಿ ದೇಶದ್ರೋಹಿ ಚಟುವಟಿಕೆ ನಡೆಸಿ ಬಂಧಿತನಾದ ಕನ್ಹಯ್ಯ ಕುಮಾರ್’ನನ್ನು ಪ್ರೀತಿಸಬೇಕು ಎಂದು ಕರೆಕೊಡುತ್ತಾರೆ. ಏನ್ ಸ್ವಾಮಿ ನಮ್ಮ ದುರ್ದೈವ? ದೇಶದ ಸುರಕ್ಷತೆಗಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಒಬ್ಬ ಯೋಧನ ತಂದೆ, ತಾಯಿ, ಹೆಂಡತಿ, ಪುಟ್ಟ ಕಂದಮ್ಮನ ಸ್ಥಾನದಲ್ಲಿ ನಿಂತು ಒಮ್ಮೆ ಯೋಚಿಸಿ. ಸಂವೇದನೆ ನಿಮ್ಮದಾಗಿದ್ದರೇ ನಿಮ್ಮ ಬಗೆಗೆ ನಿಮ್ಮಲ್ಲಿ ಹೇಸಿಗೆ ಹುಟ್ಟುವುದಿಲ್ಲವಾ? ಈ ಎಲ್ಲಾ ನಾಲಾಯಕರಿಗೆ ಮೋದಿ ಕುರಿತಾಗಿ ಸಮಸ್ಯೆಯಿದ್ದಲ್ಲಿ ಅದನ್ನು ರಾಜಕೀಯವಾಗಿ ಎದುರಿಸಲಿ. ಇಲ್ಲವಾ ಮೋದಿ ಮನೆ ಮುಂದೆ ಕೂತು ಹಗಲೆಲ್ಲಾ ಬಾಯಿ ಬಡಿದುಕೊಳ್ಳಲಿ. ಆದರೆ, ನಮ್ಮ ದೇಶವನ್ನು ಜರಿಯುವ, ಅಪಮಾನಿಸುವ, ದೇಶದ ಸಾರ್ವಭೌಮತ್ವಕ್ಕೆ ಸವಾಲೊಡ್ಡುವ ಅಧಿಕಾರವನ್ನು ಈ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡಿದವರಾರು?
ಇನ್ನು, ಕೇಂದ್ರ ಸರ್ಕಾರ ಸಂಶೋಧನಾ ವಿದ್ಯಾರ್ಥಿಗಳ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ವಿಶ್ವ ವಿದ್ಯಾಲಯದ ಮುಕ್ತ ವಾತಾವರಣವನ್ನು ಹಾಳುಗೆಡುತ್ತಿದೆ, ಎಂದೆಲ್ಲಾ ಬೊಬ್ಬರಿದು ಅಬ್ಬರಿಸುವವರಿಗೆಲ್ಲಾ ಸುಮ್ಮನೇ ಗೊತ್ತಿರಲಿ ಎಂಬ ಕಾರಣಕ್ಕೆ ಒಂದು ವಿಷಯವನ್ನು ಗಮನಕ್ಕೆ ತರುತ್ತೇನೆ. ಸಂಶೋಧನೆ ಹಾಗೂ ಸಂಶೋಧನಾ ವಿದ್ಯಾರ್ಥಿಗಳಿಗೆ ಅಚ್ಛೇ ದಿನಗಳು ಆರಂಭವಾಗಿದ್ದೇ ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ನಂತರ. ನನ್ನ ಮಾತಿನಲ್ಲಿ ನಿಮಗೆ ನಂಬಿಕೆ ಬರುತ್ತಿಲ್ಲವೆಂದರೇ, ದೇಶದ ಯಾವುದೇ ವಿ.ವಿ.ಯ ಸಂಶೋಧನಾ ವಿದ್ಯಾರ್ಥಿಯನ್ನೊಮ್ಮೆ ಈ ಬಗೆಗೆ ಕೇಳಿ ನೋಡಿ. ದೇಶದ ಉನ್ನತಿ, ವಿಜ್ಞಾನ-ತಂತ್ರಜ್ಞಾನವನ್ನಾದರಿಸಿದೆ ಎಂಬುದನ್ನು ಅರಿತಿರುವ ಮೋದಿ ಸಂಶೋಧನೆಗೆ ಇನ್ನಿಲ್ಲದಂತೆ ಒತ್ತನ್ನು ನೀಡುತ್ತಿದ್ದಾರೆ. ಕೇವಲ ವಿಜ್ಞಾನಕ್ಕೆ ಮಾತ್ರ ಅಂದುಕೊಳ್ಳಬೇಡಿ, ಮಾನವೀಕಗಳಲ್ಲಿ ಅಭ್ಯಾಸ ಮಾಡುವವರಿಗೂ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿದೆ. ಒಂದು ಚಿಕ್ಕ ಉದಾ: ಕೊಡುವುದಾದರೆ, ಈ ಹಿಂದೆ ಪಿಎಚ್.ಡಿ. ಮಾಡುವ ವಿದ್ಯಾರ್ಥಿಗಳಿಗೆ ಕಿರಿಯ ಸಂಶೋಧನಾ ವೇತನ (JRF) ಮಾಸಿಕವಾಗಿ 16,000 ರೂಗಳನ್ನು ನೀಡುತ್ತಿತ್ತು. ಅದನ್ನು ಮೋದಿ ಸರ್ಕಾರ ಅಚ್ಛರಿಯೆಂಬಂತೆ 25,000 ರೂಗಳಿಗೆ ಏರಿಸಿದೆ. ಅಂದರೇ ಬರೊಬ್ಬರಿ ಶೇ.50 ಕ್ಕಿಂತಲೂ ಹೆಚ್ಚು! ಈಗ ಹಿರಿಯ ಸಂಶೋಧನಾ ವಿದ್ಯಾರ್ಥಿಗಳು (SRF) ಮಾಸಿಕವಾಗಿ ಸರಿಸುಮಾರು 30,000 ರೂಗಳನ್ನು ಪಡೆಯುತ್ತಿದ್ದಾರೆಂದರೆ ನೀವು ನಂಬಲೇ ಬೇಕು! (ಇದಕ್ಕೆ ಇನ್ನೂ ಎಚ್.ಆರ್.ಎ. ಕಾಂಟಿಜೆನ್ಸಿ ಮೊದಲಾದವುಗಳನ್ನು ಸೇರಿಸಿಲ್ಲ.) ಇನ್ನೂ ಪ್ರೋಜೆಕ್ಟ್ ಫೇಲೊಗಳು ಹೆಚ್ಚು ಕಡಿಮೆ ಅಸಿಸ್ಟಂಟ್ ಪ್ರೊಫೆಸರ್’ಗೆ ಸರಿಸಮವಾಗಿ ಫೇಲೋಷಿಪ್ ಪಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕೇವಲ ಎಸ್ಸಿ, ಎಸ್ಟಿ. ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ರಾಜೀವ ಗಾಂಧಿ ನ್ಯಾಷನಲ್ ಫೇಲೋಷಿಪ್ (RJNF) ರೀತಿಯಲ್ಲೇ ಒ.ಬಿ.ಸಿ. ವಿದ್ಯಾರ್ಥಿಗಳಿಗೂ ಫೇಲೋಷಿಪ್ ಅವಕಾಶವನ್ನು ಒದಗಿಸಲಾಗಿದೆ. ಇಷ್ಟೆಲ್ಲಾ ಒಳ್ಳೆಯ ಕೆಲಸವನ್ನು ಮಾನ್ಯ ಮಾನವ ಸಂಪನ್ಮೂಲ ಸಚಿವಾಲಯ ಮಾಡುತ್ತಿದ್ದರೂ ಈ ಕುರಿತು ಒಂದೇ ಒಂದು ಜಾಹೀರಾತುವನ್ನು ಪತ್ರಿಕೆ, ಟಿ.ವಿ.ಗಳಿಗೆ ನೀಡಿಲ್ಲವೆಂದರೆ ಅಚ್ಛರಿಯೆನಿಸಿದರೂ ಸತ್ಯ!
ಈ ಹಿಂದೆ ಸಂಶೋಧನಾ ವಿದ್ಯಾರ್ಥಿಗಳು ಜೆ.ಆರ್.ಫ್, ಆರ್.ಜಿ.ಎನ್.ಎಫ್’ಗಳಿಗೆ ಆಯ್ಕೆಯಾಗುವುದಕ್ಕಿಂತಲೂ ನಾಲ್ಕು ಪಟ್ಟು ಶ್ರಮ ಫೇಲೋಷಿಪ್ ಕೈಗೆ ಬರಲು ಪಡಬೇಕಿತ್ತು. ವಿ.ವಿ. ಕಚೇರಿಗಳಿಗೆ ಅಲೆದು, ಅಲೆದು ಚಪ್ಪಲಿ ಸವೆಸಿಕೊಳ್ಳಬೇಕಿತ್ತು. ಅಧಿಕಾರಿಗಳಿಗೆ ಸಲಾಂ ಹೊಡೆದುಕೊಂಡೆ ತಿರುಗಬೇಕಿತ್ತು. ಇಷ್ಟೆಲ್ಲಾ ಮಾಡಿಯೂ ಏನಿಲ್ಲವೆಂದರೂ ವರ್ಷವೊ, ಎರಡು ವರ್ಷವೊ ಕಾಯಲೇಬೇಕಿತ್ತು. ಇಷ್ಟೆಲ್ಲಾ ಆಗಿಯೂ ವಿದ್ಯಾರ್ಥಿಯ ಗ್ರಹಚಾರ ಸರಿಯಿಲ್ಲವೆನ್ನಿ, ವಿದ್ಯಾರ್ಥಿಯೇ ತನ್ನೆಲ್ಲಾ ಫೈಲುಗಳನ್ನು ಹೊತ್ತು ದೆಹಲಿಯ ಯು.ಜಿ.ಸಿ. ಕೇಂದ್ರ ಕಚೇರಿಗೆ ಹೋಗಬೇಕು. ಅಲ್ಲಿಗೆ ಹೋದವರ ಅವಸ್ಥೆಯೋ ದೇವರಿಗೆ ಪ್ರೀತಿ! ಇದೆಲ್ಲದರ ಮಧ್ಯೆ ಆ ಸಂಶೋದನಾ ವಿದ್ಯಾರ್ಥಿಗೆ ಈ ಫೆಲೋಷಿಪ್ ಯಾಕಾದ್ರೂ ದೊರೆಕಿತೊ? ಎಂದು ಅನ್ನಿಸದೇ ಇರದು.
ಈಗ ಅಕ್ಷರಶಃ ಕಾಲ ಬದಲಾಗಿದೆ. ಸಂಶೋಧನಾ ವಿದ್ಯಾರ್ಥಿಗಳು ತಮ್ಮ ತೆವಲು, ಪೊಳ್ಳು ಸಿದ್ಧಾಂತಕ್ಕಾಗಿ ಮೋದಿ ಸರ್ಕಾರವನ್ನು ವಿರೋಧಿಸುತ್ತಾರಷ್ಟೇ. ಇಂದು ಸಂಶೋಧನಾ ವಿದ್ಯಾರ್ಥಿ ತನ್ನ ಫೆಲೋಷಿಪ್’ಗಾಗಿ ವರ್ಷವಿಡಿ ಕಾದುಕುಳಿತುಕೊಳ್ಳುವ ಅಗತ್ಯವಿಲ್ಲ. ಮೂರು ಇಲ್ಲವೇ ಆರು ತಿಂಗಳಿಗೊಮ್ಮೆ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಅಕೌಂಟ್’ಗೆ ಬಂದು ಬೀಳುತ್ತಿದೆ. ಆಫೀಸುಗಳಿಗೆ ಅಲೆದು ಚಪ್ಪಲಿ ಸವೆಸಿಕೊಳ್ಳುವ ದರ್ದಿಲ್ಲ. ಅಧಿಕಾರಿಗಳ ದರ್ಪವಿಲ್ಲ. ಮೋದಿಯನ್ನು ವಿರೋಧಿಸುವ ವಿದ್ಯಾರ್ಥಿಗಳೇ, ಈಗ ನಾವು ಪಿಎಚ್.ಡಿ. ಸೇರಬೇಕಿತ್ತು. ನಮಗೆಲ್ಲಾ ಇಷ್ಟೊಂದು ಫೆಸಿಲಿಟೀಸ್ ಎಲ್ಲಾ ಇರಲಿಲ್ಲಾ ಎಂದು ಗೋಳು ತೋಡಿಕೊಳ್ಳುತ್ತಾರೆ. ಸಂಶೋಧನಾ ವಿದ್ಯಾರ್ಥಿಯೊಬ್ಬ ಸ್ವಾಭಿಮಾನ ಹಾಗೂ ನಿರ್ಭಯದಿಂದ ಕೆಲಸ ಮಾಡಲು ಇದಕ್ಕಿಂತಲೂ ಮತ್ತೇನು ಬೇಕು? ಇಷ್ಟೆಲ್ಲಾ ಸೌಲಭ್ಯ ನೀಡಿದ್ದಾಗಿಯೂ ಸಂಶೋಧನಾ ಗುಣಮಟ್ಟ ಏರಿದೇಯಾ ಅಂಥಾ ಮಾತ್ರ ಕೇಳಬೇಡಿ. ಕ್ಯಾಂಪಸ್ಸಿನಲ್ಲಿದ್ದುಕೊಂಡು ಒಣ ರಾಜಕೀಯ ಮಾಡುವುದಕ್ಕೇನೆ ಸಮಯ ಸಿಗುತ್ತಿಲ್ಲ. ಇನ್ನು ಸಂಶೋಧನೆ ಎಲ್ಲಿಯದು? ಇಷ್ಟೆಲ್ಲಾ ಅನುಕೂಲ ಮಾಡಿಕೊಟ್ಟರೂ ಕೇಂದ್ರ ಸರ್ಕಾರ ವಿಶ್ವ ವಿದ್ಯಾಲಯದ ಮುಕ್ತತೆಯನ್ನು ಹಾಳು ಮಾಡುತ್ತಿದೆ. ಸಂಶೋಧನಾ ವಿದ್ಯಾರ್ಥಿಗಳನ್ನು ಹತ್ತಿಕ್ಕುತ್ತಿದೆಯೆಂದರೆ ಅದು ತೆವಲಲ್ಲದೇ ಮತ್ತೇನು?
ಕಾಂಗ್ರೆಸ್ ಪಕ್ಷದ ಸ್ಥಿತಿಯನ್ನು ನೋಡಿದರೆ ತೀರಾ ಖೇದವೆನಿಸುತ್ತದೆ. ದೇಶದ ಸ್ವಾತಂತ್ರ್ಯ, ಸಾರ್ವಭೌಮತೆಗಾಗಿ ಹೋರಾಡಿದ ಪಕ್ಷ ಇಂದು ದೇಶದ್ರೋಹಿಗಳ ಬೆಂಬಲಕ್ಕೆ ನಿಂತಿರುವುದೂ, ದೇಶವನ್ನು ಧ್ವಂಸ ಮಾಡುವವರೆಗೂ ವಿರಮಿಸುವುದಿಲ್ಲವೆನ್ನುವ ಪುಂಡರ ಪಕ್ಷ ವಹಿಸಿರುವುದು ಈ ನಾಡಿನ ದೌರ್ಭಾಗ್ಯವಷ್ಟೇ.
ಪಾಪ, ಗಾಂಧೀ ಆತ್ಮ ಇಂದು ಅದೆಷ್ಟು ನೊಂದುಕೊಂಡಿತೋ? ಛೇ..!
-ಕಿರಣ್ ಜೋಶಿ
ಆಂಧ್ರ ಪ್ರದೇಶ
kiran.kijo916@gmail.com
Facebook ಕಾಮೆಂಟ್ಸ್