X

ಖಗೋಳ: ನಾವು ತಿಳಿದದ್ದೆಷ್ಟು? ಅವುಗಳಲ್ಲಿ ತಪ್ಪೆಷ್ಟು!

ವಿಷಯ ಯಾವುದೇ ಇರಲಿ; ಅದರಲ್ಲಿ ಪರಿಣಿತರಲ್ಲವಾದರೆ ನಮಗದರಲ್ಲಿ ಕೆಲವೊಂದು ತಪ್ಪು ಕಲ್ಪನೆಗಳಿರುತ್ತವೆ. ಉದಾಹರಣೆಗೆ ಗಣಿತದ ಬಗ್ಗೆ ಕೆಲವರು ಹೇಳುವುದನ್ನು ಕೇಳಿದ್ದೇನೆ. ಚೆನ್ನಾಗಿ ಗಣಿತ ಕಲಿಯಬೇಕು ಅಂದರೆ ಮಗ್ಗಿ ನಾಲಗೆಯ ತುದಿಯಲ್ಲಿ ಕುಣಿಯಬೇಕು. ಲೆಕ್ಕಗಳನ್ನು – ಅದರಲ್ಲೂ ಗುಣಿಸು ಭಾಗಾಕಾರಗಳನ್ನು ತುಂಬಾ ವೇಗವಾಗಿ ಮಾಡುವ ಕೌಶಲ ಇರಬೇಕು. ಮತ್ತು ಯಾವುದೇ ಲೆಕ್ಕ ಕೊಟ್ಟರೂ ಅದನ್ನು ತಪ್ಪಿಲ್ಲದಂತೆ ಮಾಡುವುದಕ್ಕೆ ಬರಬೇಕು – ಅಂತ. ತಮಾಷೆಯೆಂದರೆ ಪ್ರಪಂಚದ ಅತ್ಯಂತ ಪ್ರಾಜ್ಞರಾದ ಗಣಿತಜ್ಞರು ಗುಣಾಕಾರ, ಭಾಗಾಕಾರದಂಥ ಪರಿಕರ್ಮಗಳಿಗೆ ಅಷ್ಟೇನೂ ಹೆಚ್ಚಿನ ಮಹತ್ವ ಕೊಡುವುದಿಲ್ಲ. ಯಾಕೆಂದರೆ ಉನ್ನತ ಗಣಿತದಲ್ಲಿ ಸಂಖ್ಯೆಗಳು ಬಳಸಲ್ಪಡುವುದು ಅತ್ಯಂತ ಕಡಿಮೆ ಪ್ರಮಾಣದಲ್ಲಿ! ಇನ್ನು ವೇಗವಾಗಿ ಲೆಕ್ಕ ಮಾಡಬೇಕು; ತಪ್ಪಿಲ್ಲದಂತೆ ಮಾಡಬೇಕು; ಎಷ್ಟು ಸಾಧ್ಯವೋ ಅಷ್ಟು ಸೂತ್ರಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು – ಇತ್ಯಾದಿಯೆಲ್ಲ ಉನ್ನತ ಗಣಿತಜ್ಞರಿಗೆ ಬಾಲಿಶವಾಗಿ ಕಾಣುತ್ತವೆ. ಹಾಗಾಗಿ ಅವರು ಇಂಥ ಸಂಗತಿಗಳನ್ನು ತಪ್ಪು ಕಲ್ಪನೆಗಳ ಪಟ್ಟಿಗೆ ಸೇರಿಸಿಬಿಡುತ್ತಾರೆ.

ತಪ್ಪು ಕಲ್ಪನೆಗಳ ಬಾಹುಳ್ಯವಿರುವ ಇನ್ನೊಂದು ಕ್ಷೇತ್ರ ಎಂದರೆ ಆಸ್ಟ್ರೋನಮಿ; ಅರ್ಥಾತ್ ಖಗೋಳ ವಿಜ್ಞಾನ. ನಮ್ಮ ಬರಿಗಣ್ಣಿಗೆ ಕಾಣುವ ಖಗೋಳದ ಭಾಗ ಅತ್ಯಂತ ಚಿಕ್ಕದು. ಇಡೀ ವಿಶ್ವದ ಗಾತ್ರಕ್ಕೆ ಹೋಲಿಸಿದರೆ ಇದು ಸೂಜಿಯ ಮೊನೆಯಷ್ಟೂ ಇಲ್ಲ. ಖಗೋಳದ ಹೆಚ್ಚಿನ ಭಾಗವೆಲ್ಲ ನಮ್ಮ ದೃಗ್ಗೋಚರ ದಿಗಂತಕ್ಕೆ ಅತೀತವಾದದ್ದು. ಬಾನಿನಾಚೆಗಿನ ಸತ್ಯಗಳನ್ನು ನಾವು ಪತ್ರಿಕೆಗಳನ್ನು ಓದಿಯೋ ಕತೆಗಳನ್ನು ಕೇಳಿಯೋ ಸುದ್ದಿ ಚಿತ್ರಿಕೆಗಳನ್ನು ನೋಡಿಯೋ ಬಲ್ಲೆವೇ ಹೊರತು ಅದರ ನೇರವಾದ ಅನುಭವ ನಮಗಿಲ್ಲ. ಹಾಗಾಗಿ ತಪ್ಪುಕಲ್ಪನೆಗಳು ಹುಟ್ಟುವುದು ಅತ್ಯಂತ ಸಹಜ. ಅಂಥ ಕೆಲವೊಂದು ಕಲ್ಪನೆಗಳನ್ನು, ಮತ್ತು ಅವು ಯಾಕೆ ತಪ್ಪು ಎಂಬುದನ್ನು ನೋಡೋಣ.

(1) ಸೂರ್ಯ ಒಂದು ಬೆಂಕಿಯ ಚೆಂಡು ಎನ್ನುವುದು ನಮಗೆಲ್ಲ ಗೊತ್ತಿರುವ ಸಂಗತಿ ತಾನೇ? ಅದೊಂದು ನಿರಂತರ ಬೆಂಕಿಯುಗುಳುವ ಗೋಳ ಎಂದು ನಾವು ವಿಜ್ಞಾನದ ಪಠ್ಯಪುಸ್ತಕಗಳಲ್ಲೇ ಓದುತ್ತೇವೆ. ಬರೆದದ್ದಕ್ಕೆ ಒಂದಷ್ಟು ಮಸಾಲೆ ಹಾಕಲು ನಾನೂ ಆಗಾಗ ಸೂರ್ಯನನ್ನು ಅಗ್ನಿಭಾಂಡ ಎಂದೆಲ್ಲ ಕರೆಯುವುದುಂಟು. ಆದರೆ ಸೂರ್ಯನಲ್ಲಿ ನಿಜವಾಗಿಯೂ ಬೆಂಕಿ ಹೇಗೆ ಉತ್ಪತ್ತಿಯಾಗುತ್ತದೆ ಎಂಬುದು ನಿಮಗೆ ಗೊತ್ತೆ? ಅಡುಗೆ ಮನೆಯಲ್ಲಿ ಚಹ ಮಾಡಲು ಒಲೆ ಹಚ್ಚಿದಂತೆ; ಅಥವಾ ಕಾಡಿನಲ್ಲಿ ಮರಕ್ಕೆ ಮರ ಉಜ್ಜಿ ಹುಟ್ಟಿದ ಬೆಂಕಿಯಂತೆ ಸೂರ್ಯನಲ್ಲಿ ಅಗ್ನಿ ಹುಟ್ಟುವುದಿಲ್ಲ. ನಮ್ಮ ಭೂಮಿಯಲ್ಲಿ ನಾವು ಯಾವ ಬಗೆಯಲ್ಲಿ ಬೆಂಕಿ ಹುಟ್ಟಿಸಬೇಕಾದರೂ ಅದಕ್ಕೆ ಎರಡು ಅಂಶಗಳು ಬೇಕು. ಒಂದು – ಉರುವಲು. ಇದು ಸೌದೆ, ಪೆಟ್ರೋಲು, ಮಿಥೇನ್ ಅನಿಲ, ಮೇಣ, ಕಾಗದ – ಯಾವುದೂ ಆಗಿರಬಹುದು. ಎರಡನೆಯದು – ದಹನಾನುಕೂಲಿಯಾದ ಆಮ್ಲಜನಕ. ಆಮ್ಲಜನಕದ ಸಾಂಗತ್ಯ ಇಲ್ಲವಾದರೆ ಬೆಂಕಿ ಹತ್ತುವುದೇ ಇಲ್ಲ. ಹಾಗಿರುವಾಗ ಆ ಅನಿಲದ ನಯಾ ಅಂಶವೂ ಇಲ್ಲದ ಸೂರ್ಯನಲ್ಲಿ ಬೆಂಕಿ ಹತ್ತಿಕೊಳ್ಳುವುದು ಹೇಗೆ? ಈ ಪ್ರಕ್ರಿಯೆಗೆ ನಾವು ಬೈಜಿಕ ಸಂಲಯನ ಎಂದು ಹೇಳುತ್ತೇವೆ. ಹಗುರವಾದ ಹೈಡ್ರೋಜನ್ ಪರಮಾಣುಗಳು ಅತ್ಯಧಿಕ ಉಷ್ಣತೆಯಲ್ಲಿ ಪರಸ್ಪರ ಅಂಟಿಕೊಂಡು ಭಾರವಾದ ಹೀಲಿಯಂ ಪರಮಾಣುಗಳಾಗಿ ಬದಲಾಗುವ ಪ್ರಕ್ರಿಯೆ ಇದು. ಹೀಗಾದಾಗ ಅಗಾಧ ಪ್ರಮಾಣದ ವಿಕಿರಣಗಳು ಹೊರಹೊಮ್ಮುತ್ತವೆ. ಈ ವಿಕಿರಣದ ಮಳೆಯೇ ನಮಗೆ ಬೆಳಕು ಮತ್ತು ಶಕ್ತಿಯನ್ನು ತಂದುಕೊಡುವ ಮೂಲ.

ಬೈಜಿಕ ಸಂಲಯನಕ್ಕೆ ಅತ್ಯಧಿಕ ಪ್ರಮಾಣದ ಉಷ್ಣತೆ ಬೇಕು. ಈ ಉಷ್ಣತೆ ಸೂರ್ಯನಲ್ಲಿ ಪ್ರಾರಂಭದಲ್ಲಿ ಹೇಗೆ ಹುಟ್ಟಿಕೊಂಡಿತು ಎಂಬುದರ ಬಗ್ಗೆ ನಮಗಿನ್ನೂ ಸರಿಯಾದ ತಿಳಿವಳಿಕೆ ಇಲ್ಲ. ಆದರೆ ಕಳೆದ ನಾಲ್ಕು ನೂರು ಕೋಟಿ ವರ್ಷಗಳಿಂದ ಸೂರ್ಯ ನಿರಂತರವಾಗಿ ಸುಡುಸುಡುತ್ತ ಬೆಳಗುತ್ತಿದ್ದಾನೆ. ಪ್ರತಿ ಸೆಕೆಂಡಿನಲ್ಲೂ ಅವನ ಮೈಯಲ್ಲಿ 700,000,000 ಟನ್ ಹೈಡ್ರೋಜನ್, ಸಂಲಯನ ಪ್ರಕ್ರಿಯೆಯಲ್ಲಿ ಸಂಯೋಗಗೊಂಡು ಹೀಲಿಯಂ ಆಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆ ಇನ್ನೂ ನಾಲ್ಕೈದು ನೂರು ಕೋಟಿ ವರ್ಷಗಳವರೆಗೆ ಅಬಾಧಿತವಾಗಿ ಮುಂದುವರಿಯಲಿದೆ. ಸೂರ್ಯನ ಗರ್ಭದಲ್ಲಿರುವ ಉಷ್ಣತೆ ಎಷ್ಟು ಗೊತ್ತೆ? ಒಂದೂವರೆ ಕೋಟಿ ಡಿಗ್ರಿ ಸೆಲ್ಸಿಯಸ್‍ನಷ್ಟು! ಇದು ಅದೆಷ್ಟು ದೊಡ್ಡ ಸಂಖ್ಯೆ ಎಂಬ ಮಸುಕಾದ ಅಂದಾಜಾದರೂ ನಮಗೆ ಸಿಗಬೇಕಾದರೆ ಭೂಮಿಯ ಮೇಲಿನ ಅತ್ಯುಗ್ರ ಅಗ್ನಿಯ ಉಷ್ಣತೆಯನ್ನು ನಾವು ಅಳೆಯಬೇಕು. ಅದು ಹೆಚ್ಚೆಂದರೆ ಕೇವಲ 3500 ಡಿಗ್ರಿ ಸೆಲ್ಸಿಯಸ್‍ನಷ್ಟು ಮಾತ್ರ! ಇನ್ನು ಭೂಮಿಯ ಅತ್ಯಂತ ಒಳಗಿನ ಅಗ್ನಿಗರ್ಭಕ್ಕೆ ಹೋದರೂ ಅದರ ಉಷ್ಣತೆ 6000 ಡಿಗ್ರಿ ಕೆಲ್ವಿನ್‍ಗಳನ್ನು ಮೀರುವುದಿಲ್ಲ.

(2) ಸೌರವ್ಯೂಹದ ಅತ್ಯಂತ ಹೆಚ್ಚು ಉಷ್ಣತೆಯ ಗ್ರಹ ಯಾವುದು ಎಂದು ಕೇಳಿದರೆ ಹೆಚ್ಚಿನವರಿಂದ ಬರುವ ಉತ್ತರ ಬುಧ ಎಂದು. ಯಾಕೆ? ಯಾಕೆಂದರೆ ಅದು ಸೂರ್ಯನಿಗೆ ತೀರಾ ಹತ್ತಿರದಲ್ಲಿರುವ ಗ್ರಹ ಎಂಬುದು ಒಂದು ಉತ್ತರ. ಆದರೆ ನಿಜ ಸಂಗತಿ ಏನು ಗೊತ್ತೆ? ಸೌರವ್ಯೂಹದಲ್ಲಿ ಗ್ರಹಗಳು ಸೂರ್ಯನಿಂದ ಎಷ್ಟು ದೂರದಲ್ಲಿವೆ ಎನ್ನುವುದಕ್ಕೂ ಅವುಗಳ ಮೇಲಿನ ಉಷ್ಣತೆಗೂ ಹೆಚ್ಚಿನ ಸಂಬಂಧವೇನೂ ಇಲ್ಲ! ಬುಧ ಸೂರ್ಯನ ಸಮೀಪತಮ ಗ್ರಹ ಎನ್ನುವುದೇನೋ ನಿಜವೇ. ಅವನ ಹೊರಮೈಯಿಂದ ಕೇವಲ 5.7 ಕೋಟಿ ಕಿಲೋಮೀಟರ್’ಗಳಷ್ಟುದ್ದದ ಕೈ ಬಂದರೆ ಅದು ಬುಧನನ್ನು ಅಪ್ಪಿ ಹಿಡಿದೀತು! ಬುಧನಲ್ಲಿ ದಿನದ ಹೊತ್ತಲ್ಲಿ ಉಷ್ಣಾಂಶ 427 ಡಿಗ್ರಿ ಸೆಲ್ಸಿಯಸ್‍ನ್ನು ಮುಟ್ಟುತ್ತದೆ! ಅಂದರೆ ಅವನ ಮೈಯೇ ಕೊತಕೊತ ಕುದಿಯುವ ಎಣ್ಣೆಯ ಬಾಣಲೆ! ಆದರೆ ಬುಧ ತನ್ನ ಅಕ್ಷದ ಮೇಲೆ ಅತ್ಯಂತ ನಿಧಾನವಾಗಿ ತಿರುಗುವುದರಿಂದಾಗಿ 58 ದಿನಗಳ ಹಗಲು ಕಳೆದ ಮೇಲೆ ಅಷ್ಟೇ ದಿನಗಳ ರಾತ್ರಿಯೂ ಆವರಿಸುತ್ತದೆ. ಮತ್ತು, ಈ ರಾತ್ರಿಯಲ್ಲಿ ಅವನ ಮೈಯ ಉಷ್ಣಾಂಶ ಎಷ್ಟು ಎನ್ನುತ್ತೀರಿ? ಮೈನಸ್ 173 ಡಿಗ್ರಿ ಸೆಲ್ಸಿಯಸ್ಸು! ಅಂದರೆ ಒಂದೇ ಗ್ರಹದಲ್ಲಿ ಅತ್ತ ಮೈಯ ಚಮಡ ಸುಲಿದು ನೇತು ಹಾಕುವಷ್ಟು ಬಿಸಿಯ ಚಾವಟಿ ಬಾರಿಸುತ್ತಿದ್ದರೆ ಇತ್ತ ಮೈಮೂಳೆ ಲಟಪಟ ಮುರಿದುಹೋಗುವಷ್ಟು ತೀವ್ರವಾದ ಚಳಿ ಆವರಿಸುತ್ತದೆ.

ಸೂರ್ಯನಿಂದ ಬುಧನೆಷ್ಟು ದೂರದಲ್ಲಿದ್ದಾನೋ ಅಷ್ಟೇ ಅಂತರವನ್ನು ಬುಧನಿಂದ ಕಾಯ್ದುಕೊಂಡಿರುವ ಶುಕ್ರ ಗ್ರಹದ ಕತೆ ಬೇರೆ ಬಗೆಯದು. ಬುಧನಿಗೆ ಮಾನ ಮುಚ್ಚಿಕೊಳ್ಳಲು ವಾತಾವರಣದ ಆವರಣ ಇಲ್ಲವಾದರೆ ಶುಕ್ರನಿಗೆ ಕಾರ್ಬನ್ ಡೈ ಆಕ್ಸೈಡ್ ಮತ್ತು ನೈಟ್ರೋಜನ್‍ಗಳ ಅತಿದಪ್ಪದ ಚಾದರವಿದೆ. ಕಾರ್ಬನ್ ಡೈ ಆಕ್ಸೈಡ್ ಒಂದು ಹಸಿರುಮನೆ ಅನಿಲವಾದ್ದರಿಂದ ಅದು ತನ್ನೊಳಗೆ ಬಂದ ಶಾಖವನ್ನು ಹೊರ ಹೋಗಲು ಬಿಡದು. ಹಾಗಾಗಿ ಸೂರ್ಯನ ಅದೆಷ್ಟು ಶಾಖ ಶುಕ್ರನ ನೆಲವನ್ನು ತಟ್ಟುತ್ತದೋ ಅದಷ್ಟೂ ಅಲ್ಲೇ ಬಲೆಗೆ ಬಿದ್ದ ಮೀನಿನಂತೆ ಸಿಕ್ಕಿಕೊಳ್ಳುತ್ತದೆ. ಹೆಚ್ಚಾಗಿ ಉಳಿದ ಒಂದಷ್ಟು ಶಾಖವನ್ನಷ್ಟೇ ಈ ಕಬಂಧಬಾಹು ತನ್ನ ಹಿಡಿತ ತಪ್ಪಿ ಹೊರಹೋಗಲು ಬಿಡುತ್ತದೆ. ಹಾಗಾಗಿ ಶುಕ್ರನಲ್ಲಿ ಹಗಲಿರಲಿ ಇರುಳಿರಲಿ ಶಾಖಕ್ಕೇನೂ ಕೊರತೆಯೇ ಇಲ್ಲ! ಸರಾಸರಿ 462 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಶುಕ್ರ ಗ್ರಹದಲ್ಲಿ ಸದಾ ಬಂಧಿ! ಹಾಗಾಗಿ ಸೌರಮಂಡಲದ ಅತ್ಯುಗ್ರ ಉಷ್ಣತೆಯ ಗ್ರಹ ಬುಧನಲ್ಲ; ಶುಕ್ರಾಚಾರ್ಯ!

(3) ಭೂಮಿಯು ಗುಂಡಗಿದೆ ಎಂಬ ಮುದ್ದಾದ ವಾಕ್ಯವನ್ನು ನಾವು ನಮ್ಮ ಶಾಲಾ ಪಠ್ಯದಲ್ಲಿ ಓದಿಯೇ ಇರುತ್ತೇವೆ. ಅದಕ್ಕೆ ತಕ್ಕಂತೆ ವಸುಂಧರೆಯ ಚಿತ್ರಗಳೆಲ್ಲ ಹೆಚ್ಚುಕಡಿಮೆ ಆಕೆಯ ದುಂಡು-ಗುಂಡಗಿನ ದೇಹವನ್ನೇ ತೋರಿಸುತ್ತವೆ. ಪ್ರೈಮರಿ ಸ್ಕೂಲು ದಾಟಿ ಹೈಸ್ಕೂಲಿಗೆ ಬಂದ ಮೇಲಷ್ಟೇ “ಭೂಮಿ ಗುಂಡಗಿಲ್ಲ; ನಡುಭಾಗದಲ್ಲಿ ಉಬ್ಬಿದ್ದು ಧ್ರುವ ಪ್ರದೇಶಗಳಲ್ಲಿ ಚಪ್ಪಟೆಯಾಗಿದೆ. ಇದರದ್ದು ಕಿತ್ತಲೆಯ ಆಕಾರ” ಎಂಬ ಮಾತುಗಳನ್ನು ಓದುತ್ತೇವೆ. ನಿಜವಾಗಿ ಹೇಳಬೇಕೆಂದರೆ ಭೂಮಿಯದ್ದು ಪರಿಪೂರ್ಣವಾಗಿ ಕಿತ್ತಲೆಯಾಕಾರವೂ ಅಲ್ಲ! ಆದರೆ ಅದು ತನ್ನ ಅಕ್ಷದ ಮೇಲೆ ಅತಿವೇಗದಲ್ಲಿ ಸುತ್ತುವುದರಿಂದ ಅಂಥದೊಂದು ಭಾವನೆ ಬರುತ್ತದಷ್ಟೆ. ಕಥಕ್ ನೃತ್ಯಗಾತಿ ರಭಸದಿಂದ ಸುತ್ತುವಾಗ ಆಕೆಯ ಬಟ್ಟೆ ಅರಳಿದ ಕೊಡೆಯಂತೆ ಉಬ್ಬಿಕೊಳ್ಳುವುದನ್ನು ನಾವು ನೋಡಿದ್ದೇವಲ್ಲ! ಇದೂ ಅಂಥಾದ್ದೇ ಒಂದು ವಿದ್ಯಮಾನ.

ಭೂಮಿಯ ಸಮಭಾಜಕ ವೃತ್ತದ ಮೇಲೆ ಟೇಪಿಟ್ಟು ಅಳೆಯಿರಿ. ನಂತರ ಧ್ರುವ ಪ್ರದೇಶಗಳ ಮೇಲೆ ಟೇಪು ಹಾದುಹೋಗುವಂತೆ ಇಟ್ಟು ಇನ್ನೊಮ್ಮೆ ಸುತ್ತಳತೆ ಅಳೆಯಿರಿ. ಈ ಎರಡೂ ಅಳತೆಗಳ ನಡುವೆ 43 ಕಿಲೋಮೀಟರ್‍ಗಳಷ್ಟು ವ್ಯತ್ಯಾಸ ಇರುತ್ತದೆ! ಅಂದರೆ ಸಮಭಾಜಕ ವೃತ್ತದ ಮೂಲಕ ಹಾದುಹೋಗುವ ಸುತ್ತಳತೆ; ಧ್ರುವಗಳ ಮೇಲಿನ ಸುತ್ತಳತೆಗಿಂತ 43 ಕಿಲೋಮೀಟರ್ ಹೆಚ್ಚು. ಹಾಗಾಗಿ ಲೆಕ್ಕದ ಪ್ರಕಾರ ಮೌಂಟ್ ಎವರೆಸ್ಟ್ ನಮ್ಮ ಭೂಮಂಡಲದ ಅತ್ಯುನ್ನತ ಬೆಟ್ಟವೇ ಆದರೂ, ಭೂಮಿಯ ನಟ್ಟನಡುವಿಂದ (ಅಂದರೆ ಗರ್ಭದಿಂದ) ಅಳತೆ ಮಾಡುತ್ತ ಬಂದರೆ ಮೌಂಟ್ ಎವರೆಸ್ಟ್ನ್ನು ಅದಕ್ಕಿಂತ 2500 ಮೀಟರ್ ಕಿರಿದಾಗಿರುವ ಮೌಂಟ್ ಚಿಂಬೊರಾಝೊ ಮೀರಿಸಿಬಿಡುತ್ತದೆ! ಯಾಕೆಂದರೆ ಈ ಚಿಂಬೊರಾಝೊ ಬೆಟ್ಟ ಇರುವುದು ಸಮಭಾಜಕ ವೃತ್ತದ ಮೇಲಿರುವ ಈಕ್ವೆಡಾರ್ ದೇಶದಲ್ಲಿ. ಭೂಮಿ ತನ್ನ ಸೊಂಟದ ಸುತ್ತ ಉಬ್ಬಿರುವುದರಿಂದ, ಚಿಂಬೊರಾಝೊ ಪರ್ವತದ ತುತ್ತತುದಿಯೇ ಭೂಮಿಯ ಗರ್ಭದಿಂದ ಅತ್ಯಂತ ದೂರದಲ್ಲಿರುವ ಪರ್ವತಾಗ್ರ.

(4) ಸೌರವ್ಯೂಹದಲ್ಲಿ ಎಷ್ಟು ಕಾಯಗಳಿವೆ ಎಂದರೆ ಪ್ರಾಥಮಿಕವಾಗಿ ಓದಿಕೊಂಡವರು ಎಂಟು ಮತ್ತೊಂದು ಗ್ರಹಗಳ ಪಟ್ಟಿ ಕೊಟ್ಟಾರು. ಆದರೆ ಖಗೋಳ ವಿಜ್ಞಾನವನ್ನು ಇನ್ನೊಂದಿಷ್ಟು ಆಸ್ಥೆಯಿಂದ ಓದಿಕೊಂಡವರು, “ಮಂಗಳ ಮತ್ತು ಗುರುಗ್ರಹಗಳ ನಡುವೆ ಕ್ಷುದ್ರಕಾಯಗಳ ಪಟ್ಟಿ ಇದೆ” ಎಂದೂ ಹೇಳಿಯಾರು. ಹೌದು, ಕುಜ ಮತ್ತು ಗುರು – ಈ ಎರಡು ಗ್ರಹಗಳ ನಡುವೆ ಹರಡಿರುವ ಸುವಿಶಾಲ ಜಾಗದಲ್ಲಿ ನೂರಲ್ಲ, ಸಾವಿರವಲ್ಲ, ಕೋಟ್ಯಂತರ ಕ್ಷುದ್ರಕಾಯಗಳು ಗೊತ್ತುಗುರಿಯಿಲ್ಲದೆ ಸುತ್ತುತ್ತಿವೆ. ಇವುಗಳ ಬಾಹುಳ್ಯದಿಂದಾಗಿ, ಬಹುಶಃ ಈ ಪ್ರದೇಶ ನಮ್ಮ ಬೆಂಗಳೂರು ಟ್ರಾಫಿಕ್ಕಿನಂತೆ ಗಿಜಿಗುಡುವ ದಟ್ಟಣೆಯ ಪ್ರದೇಶವಾಗಿರಬಹುದು ಎಂಬುದು ಹೆಚ್ಚಿನವರ ಅಭಿಪ್ರಾಯ. ಅದಕ್ಕೆ ಸರಿಯಾಗಿ ಸೌರವ್ಯೂಹದ ಚಿತ್ರ ಬರೆಯುವವರು ಕೂಡ ಈ ಜಾಗದಲ್ಲಿ ಹಲವು ನೂರು ಚುಕ್ಕಿಗಳನ್ನಿಟ್ಟು ಇದು ನಿಬಿಡ ಪ್ರದೇಶ ಎಂದು ತೋರಿಸುತ್ತಾರೆ. ಆದರೆ ವಾಸ್ತವದಲ್ಲಿ ಅಂಥ ಗೌಜು-ಗದ್ದಲಗಳೇನೂ ಈ ಕ್ಷುದ್ರಕಾಯಗಳ ಪಟ್ಟಿಯಲ್ಲಿ ಇಲ್ಲ!

ಈ ಪಟ್ಟಿಯ ಒಟ್ಟು ಗಾತ್ರ 50 ಟ್ರಿಲಿಯನ್ ಟ್ರಿಲಿಯನ್ ಘನ ಕಿಲೋಮೀಟರ್ಗಳು ಎಂದು ವಿಜ್ಞಾನಿಗಳ ಅಂದಾಜು. ಈ ಗಾತ್ರವನ್ನು ಪಟ್ಟಿಯಲ್ಲಿರುವ ಎಲ್ಲ ಸಣ್ಣ-ದೊಡ್ಡ ಕಾಯಗಳಿಗೂ ಹಂಚಿ ಹಾಕಿದರೆ ಪ್ರತಿಯೊಂದರ ಅಕ್ಕಪಕ್ಕದಲ್ಲೂ ಒಂದು ಬಿಲಿಯ (ಅಂದರೆ ನೂರು ಕೋಟಿ) ಘನ ಕಿಲೋಮೀಟರ್’ಗಳಷ್ಟು ಜಾಗ ಸಿಗುತ್ತದೆ! ಅರ್ಥಾತ್, ಈ ಪಟ್ಟಿಯ ಪ್ರತಿಯೊಂದು ಕಾಯವೂ ಬಹುತೇಕ ಒಬ್ಬಂಟಿ! ಹತ್ತಿರದಲ್ಲಿ ಅತ್ತಿತ್ತ ಕತ್ತು ತಿರುಗಿಸಿ ಸುಖ-ಕಷ್ಟ ಮಾತಾಡೋಣವೆಂದರೂ ಯಾರೂ ಇಲ್ಲ! ನಾಸಾ ಇದುವರೆಗೆ ಈ ಪಟ್ಟಿಯನ್ನು ಹಾದುಹೋಗುವಂತೆ 11 ಗಗನನೌಕೆಗಳನ್ನು ಕಳಿಸಿದೆ. ಇವಾವುವೂ ಕ್ಷುದ್ರಕಾಯಗಳಿಗೆ ಢೀ ಹೊಡೆದು ಕೈಕಾಲು ಮುರಿದುಕೊಂಡಿಲ್ಲ ಎನ್ನುವುದೊಂದು ಸಮಾಧಾನ. ಸೌರವ್ಯೂಹದಲ್ಲಿ ಇದೇ ಬಗೆಯ ಕ್ಷುದ್ರಕಾಯಗಳ ಇನ್ನೊಂದು ಪಟ್ಟಿ ಪ್ಲೂಟೋ ಗ್ರಹದಾಚೆಯೂ ಇದೆ. ಇದರ ಹೊರ ಅಂಚು ಅದೆಲ್ಲಿಯವರೆಗೆ ಚಾಚಿದೆಯೆಂಬುದೇ ಯಾರಿಗೂ ಗೊತ್ತಿಲ್ಲ! ಇಂಥದೊಂದು ಗೊಂಡಾರಣ್ಯಕ್ಕೂ ನಾವು “ನ್ಯೂ ಹೊರೈಜಾನ್ಸ್” ಎಂಬ ನೌಕೆಯನ್ನು ಹಾರಿಬಿಟ್ಟಿದ್ದೇವೆ. ಆ ನೌಕೆ ಅಡೆತಡೆಗಳನ್ನೆಲ್ಲ ಉಪಾಯವಾಗಿ ಪರಿಹರಿಸಿಕೊಂಡು; ಕೈಕಾಲಿಗೆ ಗಾಯ ಮಾಡಿಕೊಳ್ಳದೆ ಇನ್ನೂ ಓಡುತ್ತಲೇ ಇದೆ ಎನ್ನುವುದೇ ಒಂದು ವಿಸ್ಮಯ!

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post