ಪರಿಸರದ ನಾಡಿ ಬಾನಾಡಿ

ಸ್ವರ್ಗ ಸೌಂದರ್ಯದ ಬಾಲದಂಡೆ ಹಕ್ಕಿಯ ನಿಮ್ಮೂರಲ್ಲಿ ಕಂಡಿರಾ?

ಭಾರತದಲ್ಲಿ ಅತ್ಯಂತ ಸುಂದರ ಹಕ್ಕಿಗಳನ್ನು ಪಟ್ಟಿ ಮಾಡಲು ಯಾರೇ ಹೊರಟರೂ ಖಂಡಿತವಾಗಿಯೂ ಮೊದಲ ಹತ್ತು ಸ್ಥಾನದೊಳಗೆ ಈ ಹಕ್ಕಿ ಬಂದೇ ಬರುತ್ತದೆ. ಅಷ್ಟು ಸುಂದರ ಈ ಬಾಲದಂಡೆ ಹಕ್ಕಿ. ಪಿಕಳಾರ (bulbul) ಗಾತ್ರದ, ಪಿಕಳಾರವನ್ನೇ ಹೋಲುವ ಈ ಹಕ್ಕಿಗೆ ಒಂದೂವರೆ ಅಡಿ ಉದ್ದದ ಬಾಲ. ಈ ಬಾಲವೇ ಇದರ ಸೌಂದರ್ಯ. ಎಂಥಾ ನಿಪುಣ ಛಾಯಾಗ್ರಾಹಕನಾದರೂ ತನ್ನ ಕ್ಯಾಮೆರಾ ಚೌಕಟ್ಟಿನಲ್ಲಿ (frame) ಇದನ್ನು ಸೆರೆಹಿಡಿಯಲು ಕಷ್ಟಪಡುತ್ತಾನೆ. ಹೇಗೆ ಫೋಟೋ ಕ್ಲಿಕ್ಕಿಸಿದರೂ ಆ ಬಾಲ ಚೂರು ತುಂಡಾಗಿಬಿಡುತ್ತದೆ. ಬಾಲ ತುಂಡಾಗದಂತೆ ಫೋಟೋ ತೆಗೆಯಬೇಕೆಂದು ಕ್ಯಾಮೆರಾದ ಚೌಕಟ್ಟನ್ನು ಸರಿಪಡಿಸಿಕೊಂಡು ಇನ್ನೇನು ಕ್ಲಿಕ್ಕಿಸಬೇಕು ಅನ್ನುವಷ್ಟರಲ್ಲಿ ಅದು ಹಾರಿಬಿಡುತ್ತದೆ . ಒಂದು ಜಾಗದಲ್ಲಿ ಹೆಚ್ಚು ಹೊತ್ತು ಕೂರಲಾಗದ ಚಂಚಲತೆ ಈ ರಾಜಹಕ್ಕಿಗೆ.

01

ಗಂಡು ರಾಜಹಕ್ಕಿಗೆ ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ, ಹೊಳೆಯುವ ಬಿಳಿದೇಹ, ರೆಕ್ಕೆಯಲ್ಲಿ ಅಲ್ಲಲ್ಲಿ ಕಪ್ಪು ಗರಿಗಳು. ಮೊದಲೇ ತಿಳಿಸಿದಂತೆ ಒಂದೂವರೆ ಅಡಿ ಉದ್ದದ ಬಿಳಿ ರಿಬ್ಬನ್ ತರಹದ ಬಾಲ. (ಇದರಲ್ಲಿ ಮತ್ತೊಂದು ಒಳಪ್ರಭೇದವಿದೆ. ಈ ಪ್ರಭೇದದಲ್ಲಿ ಬಿಳಿದೇಹದ ಬದಲು ಕೆಂಗಂದು ದೇಹ ಮತ್ತು ಕೆಂಗಂದು ರಿಬ್ಬನ್ ಬಾಲ ಇರುತ್ತದೆ.) ಮೊದಲು ತಿಳಿಸಿದ ಬಿಳಿ ಪ್ರಭೇದದ ರಾಜಹಕ್ಕಿಯಾದರೂ ತನ್ನ ಬಾಲ್ಯಾವಸ್ಥೆಯಲ್ಲಿ ಕೆಂಗಂದು ಬಣ್ಣದಲ್ಲಿರುತ್ತದೆ. ಹುಟ್ಟುತ್ತಾ ಅಷ್ಟುದ್ದದ ಬಾಲವಿರುವುದಿಲ್ಲ. ವರ್ಷದಿಂದ ವರ್ಷಕ್ಕೆ ಇದರ ಬಾಲ ಬೆಳೆಯುತ್ತಾ ಹೋಗುತ್ತದೆ. ಮೂರು ವರ್ಷದ ಅನಂತರ ಒಂದು ಅಡಿಯನ್ನು ಮೀರುತ್ತದೆ ಹಾಗು ಬಾಲ್ಯದ ಕೆಂಪು ಬಿಳಿಯತ್ತ ಹೊರಳುತ್ತದೆ. ಕೆಂಗಂದು ಮತ್ತು ಬಿಳಿ ಮಿಶ್ರಿತ ರಾಜಹಕ್ಕಿಯನ್ನು ನಾವು ಕೆಲವೊಮ್ಮೆ ಕಂಡರೆ ಅದನ್ನು Transient phase ಎಂದು ತಿಳಿಯಬೇಕು. ಹೀಗೆ ಅಚ್ಚ ಬಿಳಿದೇಹ ಹೊಂದಿದ ರಾಜಹಕ್ಕಿಯನ್ನು ಹಿಂದಿಯಲ್ಲಿ ದೂದ್‍ರಾಜ ಎನ್ನುವರು. ಹೌದು ಇದು ಹಾಲಿನಷ್ಟೇ ಶುಭ್ರ ಬಿಳಿ.
02

03

ಇನ್ನು ಹಕ್ಕಿಯನ್ನು ವರ್ಣಿಸುವುದಾದರೆ ಇದು ಕೆಂಗಂದು ಪ್ರಭೇದದ ಅಥವಾ ಬಾಲ್ಯಾವಸ್ಥೆಯ ಗಂಡನ್ನು ಹೋಲುತ್ತದೆ . ಆದರೆ ಇದರ ಗಲ್ಲ ಕಡುಗಪ್ಪಿರುವುದಿಲ್ಲ. ತುಸು ಬೂದು ಮಿಶ್ರಿತ ಕಪು . ಆಕಾರದಲ್ಲಿ ಗಂಡು ಹಕ್ಕಿಯ ಲಕ್ಷಣವಾದರೂ ಹೆಣ್ಣು ಹಕ್ಕಿಗೆ ಅಷ್ಟುದ್ದದ ಬಾಲವಿರುವುದಿಲ್ಲ .
ಹಾಗಾಗಿ ಇದು ಪಕ್ಷಿವೀಕ್ಷಣೆಯಲ್ಲಿ ಪರಿಣತಿ ಹೊಂದದವರಿಗೆ ಪಕ್ಕನೆ ಪಿಕಳಾರದಂತೆಯೇ ಕಾಣುವುದು. ವಿಶೇಷವಾಗಿ ಇದು ಕಪ್ಪುತಲೆಯ ಪಿಕಳಾರದಂತೆ (Black headed bulul /ruby throated bulbul) ಕಾಣುವುದು. ಹಾಗಾಗಿ ಇದನ್ನು shah Bulbul ಎಂದೂ ಕರೆಯುವರು.

Indian paradise flycatcher-female

Indian paradise flycatcher-female

Indian paradise flycatcher-male

Indian paradise flycatcher-male

ಗಂಡು ಹಕ್ಕಿಯು ಹಾರುವಾಗ ಯಾರೋ ಕೆಳಗಿನಿಂದ ಗಾಳಿಪಟ ಬಿಡುತ್ತಿದ್ದಾರಾ ಎನ್ನುವಂತೆ ಭಾಸವಾಗುತ್ತದೆ. ಹಾಗಾಗಿ ಇದಕ್ಕೆ ಸೃಜಯಾ ಎಂಬ ಹೆಸರುಂಟು. ಸೃಜಯಾ ಎಂದರೆ ತೇಲುವುದು. ಕಲ್ಪನೆಗಳು ಅರಳಿದ ಹಾಗೆ ಅದು ಇನ್ನೂ ಬೇರೆ ಬೇರೆ ರೀತಿ ಕಾಣಬಹುದು. ಸುಂದರ ತರುಣಿ ಜಡೆಯಾಡಿಸುತ್ತಾ ನರ್ತಿಸುವಂತೆ ಕಂಡವರು ಇದನ್ನು ರಜ್ಜುವಾಲ ಎಂದೂ ಕರೆದಿದ್ದಾರೆ. (ರಜ್ಜು ಎಂದರೆ ಹಗ್ಗ ಅಥವಾ ಜಡೆ)
05

ಸಂತಾನೋತ್ಪತ್ತಿ ಸಮಯದಲ್ಲಿ ಗಂಡು ಹಕ್ಕಿ ಕೆಳಗಿನಿಂದ ಮೇಲಕ್ಕೆ ಬಾಲವನ್ನು ಆಡಿಸುತ್ತಾ ಹಾರುತ್ತದೆ. ಮೇಲಿನ ಕೊಂಬೆಯಲ್ಲಿ ಕುಳಿತು ತನ್ನ ಬಾಲವನ್ನು ತಿರುಗಿಸುತ್ತದೆ. ಈ ದೃಶ್ಯ ನೋಡಲು ಮನಮೋಹಕವಾಗಿರುತ್ತದೆ. (ಚೈನಾದ ರಿಬ್ಬನ್ ಡ್ಯಾನ್ಸ್‍ಗೆ ಈ ಹಕ್ಕಿಯೇ ಪ್ರೇರಣೆ ಇರಬಹುದು !) ಯಾವ ಗಂಡು ಹೆಚ್ಚು ಚೆನ್ನಾಗಿ ನರ್ತಿಸುವುದೋ ಆ ಗಂಡಿಗೆ ಹೆಣ್ಣು ಆಕರ್ಷಿತಳಾಗುತ್ತಾಳೆ.
06

ಅನಂತರದ್ದು ಸಂತಾನೋತ್ಪತ್ತಿ. ಮರದ ಸಣ್ಣ ಕವಲಿನಲ್ಲಿ ಕಪ್ ಆಕಾರದ ಗೂಡು. ಮೂರರಿಂದ ನಾಲ್ಕು ಮೊಟ್ಟೆ . 15 – 20 ದಿನದ ಕಾವಿನ ಅನಂತರ ಮರಿಗಳ ಜನನ. ಗಂಡು ಮತ್ತು ಹೆಣ್ಣು ಎರಡೂ ಸಮಾನವಾಗಿ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ .

ಈ ಸ್ವರ್ಗ ಸದೃಶ ಹಕ್ಕಿಯನ್ನು ನಾವೆಲ್ಲಿ ಕಾಣಬಹುದು?
ಈ ಪಕ್ಷಿ ಸ್ಥಳೀಯ ವಲಸೆ (Local migration) ಗೆ ಒಳಪಡುತ್ತವೆ . ಬೇಸಿಗೆಯಲ್ಲಿ ಮೇಲುಕೋಟೆ , ಮುತ್ತತ್ತಿಯಂಥಾ ಒಣಕಾಡಿನಲ್ಲಿ ಅಥವಾ ಉತ್ತರದ ಹಿಮಾಲಯದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಚಳಿಗಾಲದಲ್ಲಿ ದಕ್ಷಿಣಭಾರತದ ಅನೇಕ ಜಾಗಗಳಲ್ಲಿ ಚದುರಿ ಹೋಗುತ್ತವೆ. ಮರಗಳು ದಟ್ಟವಿರುವ, ವಿವಿಧ ಬೆಳೆಗಳಿಂದ ಕೂಡಿದ ತೋಟ, ಬಿದುರು ಕಾಡುಗಳೆಂದರೆ ಇವಕ್ಕೆ ಬಲು ಪ್ರಿಯ. ಒಟ್ಟಿನಲ್ಲಿ ತಂಪಾದ ಸ್ವರ್ಗ ಸದೃಶವಾದ ವಾತಾವರಣ ಇರುವ ಕಡೆ ಈ ಸ್ವರ್ಗದ ಹಕ್ಕಿ ಪ್ರತ್ಯಕ್ಷ .
08

ರಿಯಲ್ ಎಸ್ಟೇಟ್ ಹಾವಳಿಯಿಂದಾಗಿ ಮರಗಳನ್ನು ಕಡಿದು ಬರಿದು ಮಾಡಿದ ಲೇಔಟ್‍ಗಳಲ್ಲಿ ಖಂಡಿತವಾಗಿ ನೀವಿದನ್ನು ನೋಡಲಾರಿರಿ. ನಾವಿರುವಲ್ಲೇ ಸ್ವರ್ಗದ ವಾತಾವರಣ ಮಾಡಿದರೆ, ಕಾಡನ್ನೇ ಸ್ವರ್ಗ ಎಂದು ನಾವು ತಿಳಿದರೆ, ಅಲ್ಲಿ ಜೀವವೈವಿಧ್ಯ ಹೆಚ್ಚಿದರೆ, ಪರಿಣಾಮವಾಗಿ ನೊಣ , ನುಸಿಗಳು ಹುಟ್ಟಿಕೊಂಡರೆ, ಆಗ ಅಲ್ಲಿ ಸಮತೋಲನವನ್ನು ಕಾಪಾಡಲು ಈ ನೊಣಹಿಡುಕ ಅಲ್ಲಿಗೆ ಬರುತ್ತದೆ. ಹಗಲಲ್ಲಿ ಕೀಟಗಳ ಬೇಟೆಯಲ್ಲಿ ನಿರತವಾಗಿರುವ ಈ ರಾಜಹಕ್ಕಿ ರಾತ್ರಿ ಮಲಗುವ ಮುಂಚೆ, ಅಂದರೆ ಮುಸ್ಸಂಜೆಯಲ್ಲಿ ಸ್ನಾನ ಮಾಡುತ್ತದೆ. ಸರ್ರನೆ ಹಾರಿ ತನ್ನ ಬಾಲವನ್ನು ನೀರಿಗೆ ಚಾಚಿ ಹಾಗೆ ಮೇಲೇರಿ ಒಂದು ಕಡ್ಡಿಯಲ್ಲಿ ಕುಳಿತು ಮೈ ನಡುಗಿಸಿ ನೀರನ್ನು ಎರಚುವ ದೃಶ್ಯ ನೀವು ನೋಡಿಯೇ ಅನುಭವಿಸಬೇಕು.
09

ರಾಜಹಕ್ಕಿಗೆ ಹೊಳೆಮತ್ತಿ/ಅರ್ಜುನ (Terminalia Arjuna) ಮರ ಬಲುಪ್ರಿಯವಂತೆ. ಅರ್ಜುನ ಮರವಿದ್ದರೆ ಅಲ್ಲೇ ಆಶ್ರಯಿಸುವುದಂತೆ. ಹಾಗಾಗಿ ಇದನ್ನು ಸಂಸ್ಕೃತದಲ್ಲಿ “ ಅರ್ಜುನಕ” ಎಂದು ಕರೆದಿರುವರು. ನಾನಿದನ್ನು ನಮ್ಮ ತೋಟದಲ್ಲಿ ನೋಡಿ ಖಾತ್ರಿ ಮಾಡಿರುವೆ. ಹಿಂದಿನವರ ಈ ಸೂಕ್ಷ್ಮನೋಟ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ .

ಇತ್ತೀಚಿನವರೆಗೂ Asian paradise flycatcher ಎಂಬ ಹೆಸರಿನಿಂದ ಕರೆಯಲ್ಪಟ್ಟಿದ್ದ ಈ ಹಕ್ಕಿಗೆ ಈಗ Indian paradise flycatcher (Terpsiphone paradise ) ಎಂದು ಮರುನಾಮಕರಣ ಮಾಡಲಾಗಿದೆ . Asian paradise flycatcher ಅನ್ನು Indian paradise flycatcher (Terpsiphone paradise) , Oriental paradise flycatcher ( Terpsiphone affinis) , Amur paradise flycatcher ( Terpsiphone incei) ಎಂದು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ .

ಇಂತಿಪ್ಪ ಸ್ವರ್ಗ ಸೌಂದರ್ಯ ಸದೃಶ ಹಕ್ಕಿಯ ನಿಮ್ಮೂರಿನಲ್ಲಿ, ನಿಮ್ಮ ತೋಟದಲ್ಲಿ ಕಂಡಿರಾ? ಕಂಡಿದ್ದರೆ ಸಂತೋಷ, ನೀವು ಒಳ್ಳೆಯ ವಾತಾವರಣದಲ್ಲಿ ಜೀವಿಸುತ್ತಿದ್ದೀರಿ ಎಂದು ಖುಷಿ ಪಡಿ. ಕಾಣಬೇಕೆಂಬ ಬಯಕೆ ಇದೆಯೇ? ಇನ್ನೇಕೆ ತಡ, ನಿಮ್ಮನೆ ಸುತ್ತಮುತ್ತ ಸ್ವರ್ಗವ ನಿರ್ಮಿಸಿ. ಸ್ವರ್ಗದ ಹಕ್ಕಿ ಚಳಿಗಾಲದಲ್ಲಿ ತಾನಾಗಿ ಭೇಟಿ ಕೊಡುತ್ತದೆ…..
ಚಿತ್ರಗಳು : ಅಭಿಜಿತ್ ಎ.ಪಿ.ಸಿ, ಅರವಿಂದ ಕುಡ್ಲ, ಅರ್ನಾಲ್ಡ್ ಗೋವಿಸ್ .

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!