X

ಕಡುಗೆಂಪ ಬಾನಲ್ಲಿ ನವಿರಾದ ಪ್ರೇಮ

ಚಿತ್ರ : ರಿಕ್ಕಿ
ನಿರ್ದೇಶನ : ರಿಶಬ್ ಶೆಟ್ಟಿ
ತಾರಾಗಣ : ರಕ್ಷಿತ್ ಶೆಟ್ಟಿ, ಹರಿಪ್ರಿಯಾ, ಪ್ರಮೋದ್ ಶೆಟ್ಟಿ, ರಕ್ಷಾ ಹೊಳ್ಳ, ರವಿಕಾಳೆ, ಅಚ್ಯುತ್ ಕುಮಾರ್
ನಿರ್ಮಾಣ : ಎಸ್ ವಿ ಬಾಬು

****

‘ಕೆಂಪು’, ಆ ಬಣ್ಣಕ್ಕೆ ಎಷ್ಟೊಂದು ಅರ್ಥಗಳು. ಅವರವರ ಭಾವನೆಗಳಿಗುಣವಾಗಿ ಅದು ಅರ್ಥವನ್ನು ಕಂಡುಕೊಳ್ಳುತ್ತೆ. ಕೆಲವರಿಗದು ಪ್ರೇಮದ ಸಂಕೇತದ ಬಣ್ಣವಾದರೆ, ಇನ್ನು ಕೆಲವರಿಗದು ಕ್ರಾಂತಿ, ಹಿಂಸೆ, ರಕ್ತಪಾತದ ಪ್ರತೀಕ. ರಿಕ್ಕಿ ಚಿತ್ರದಲ್ಲಿ ಅವೆರಡನ್ನೂ ಹಿತವಾಗಿ ಬೆರೆಸಿ ನವಿರಾದ ಚಿತ್ರ ನೀಡುವ ಮೂಲಕ ನಿರ್ದೇಶಕ ರಿಶಬ್ ಶೆಟ್ಟಿ ತನ್ನ ಬಹುವರ್ಷಗಳ ಕನಸಿಗೆ ಸಾರ್ಥಕತೆ ತಂದಿದ್ದಾರೆ. ಟ್ರೈಲರ್ ನೋಡಿ ಇದು ಸಂಪೂರ್ಣ ನಕ್ಸಲ್ ಕಥೆಯಿರುವ  ಚಿತ್ರ ಅಂದರೆ ಅದು ತಪ್ಪಾಗುತ್ತದೆ. ಇಲ್ಲಿ ನಕ್ಸಲ್ ಅಧ್ಯಾಯದ ಹಿನ್ನಲೆಯಲ್ಲಿ ಒಂದು ನವಿರಾದ ಪ್ರೇಮ ಕತೆಯಿದೆ. ಮನಸ್ಸು ತಟ್ಟುವ ಅಪ್ಪಟ ಪ್ರೀತಿಯ ಕತೆ.

ಬಾಲ್ಯದಿಂದಲೇ ರಾಧೆಯನ್ನು ಕಂಡರೆ ರಾಧಾಕೃಷ್ಣನಿಗೆ (ರಿಕ್ಕಿ) ಅದೇನೋ ಅಚ್ಚುಮೆಚ್ಚು. ನಂತರ ವಿದ್ಯಾಬ್ಯಾಸಕ್ಕಾಗಿ ಬೆಂಗಳೂರಿಗೆ ಹೋಗುವ ರಿಕ್ಕಿ ಪತ್ರ ಮುಖೇನ ರಾಧೆಯ ಜತೆ ಸಂಪರ್ಕದಲ್ಲಿರುತ್ತಾನೆ. ರಾಧೆಗೆ ರಾಧಾಕೃಷ್ಣನೇ ಪ್ರಪಂಚ, ರಾಧಾಕೃಷ್ಣನಿಗೆ ರಾಧೆಯೆಂದರೆ ವಾಸಿಯಾಗದ ಖಾಯಿಲೆ. ಎಷ್ಟೋ ವರ್ಷಗಳ ನಂತರ ಊರಿಗೆ ಬರುವ ರಾಧಾಕೃಷ್ಣನಿಗೆ ರಾಧೆಯ ಜತೆ ನಿಶ್ಚಿತಾರ್ಥ ನೆರವೇರುತ್ತದೆ. ಆದರೆ ರಾಧಾಕೃಷ್ಣ ಅದೇ ಸಮಯಕ್ಕೆ ಕೆಲಸದ ನಿಮಿತ್ತ ಸುಮಾರು ೧ ವರ್ಷಗಳ ಕಾಲ ಜಮ್ಮು ಕಾಶ್ಮೀರದಲ್ಲಿ ಕಳೆಯುವ ಸಂದರ್ಭ ಬರುತ್ತದೆ. ೧ ವರ್ಷದ ನಂತರ ರಾಧೆಯನ್ನು ಕಾಣುವ ಖುಷಿಯಲ್ಲಿ ಓಡೋಡಿ ಬಂದವನಿಗೆ ರಾಧೆ ಕಾಣ ಸಿಗುವುದಿಲ್ಲ. ಆಕೆಯ ಮನೆಯೂ ಅಲ್ಲಿರುವುದಿಲ್ಲ.. ಮುಂದೇನು ?

ಒಂದು ಸರಳವಾದ ಪ್ರೇಮ ಕತೆಯನ್ನು ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವೀಯಾಗಿದ್ದಾರೆ. ಮೊದಲಾರ್ಧದಲ್ಲಿ ಬರುವ ರಾಧಾಕೃಷ್ಣ ಹಾಗು ರಾಧೆಯ ನಡುವಿನ ಆ ಪ್ರೇಮ ಸಲ್ಲಾಪಗಳ ದೃಶ್ಯಗಳಂತೂ ಮನಸ್ಸಿಗೆ ನಾಟುವಂತಿವೆ. ಚಿತ್ರ ನೋಡುತ್ತಿರುವವರಿಗೆ ಆ ಪ್ರೇಮಿಗಳು ನಾವೇನೋ ಎಂಬಂತೆ ಭಾಸವಾಗುತ್ತವೆ. ಅದಕ್ಕೆ ಪೂರಕವಾದ ಹಿನ್ನಲೆ ಸಂಗೀತ, ಸಂಭಾಷಣೆ, ಸಂಕಲನ, ಛಾಯಾಗ್ರಹಣ, ರೀರೆಕಾರ್ಡಿಂಗ್ ಚಿತ್ರದ ಪ್ಲಸ್.

ಚಿತ್ರ ದ್ವಿತೀಯಾರ್ಧ ಬಡ ಜನರ ಮೇಲೆ sez ಹಾಗು ಸರ್ಕಾರಗಳು ತೋರುವ ದೌರ್ಜನ್ಯ, ಫಲವತ್ತಾದ ಕೃಷಿ ಭೂಮಿಗಳನ್ನು ಕೈಗಾರಿಕೆಗಳಿಗಾಗಿ ಒತ್ತುವರಿ ಮಾಡಿಕೊಳ್ಳುವುದು, ಅನ್ಯಾಯಕ್ಕೊಳಗಾದವರಿಂದ ನಕ್ಸಲ್ ಕ್ರಾಂತಿ ಸೇರಿದಂತೆ ಹಲವು ಸಾಮಾಜಿಕ ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಸಾಗುತ್ತದೆ. ಇಲ್ಲಿ ಚಿತ್ರದ ದ್ವಿತೀಯಾರ್ಧವನ್ನು ಹೋರಾಟದ ಅಧ್ಯಾಯ ಎಂದರೂ ತಪ್ಪಿಲ್ಲ. ತನ್ನ ಮೇಲೆ ಪ್ರಾಣವನ್ನೇ ಇಟ್ಟಿರುವ ರಾಧಾಕೃಷ್ಣನ ಪ್ರೀತಿಯನ್ನು ಬದಿಗೆ ಸರಿಸಿ ತನಗಾಗಿರುವ ಅನ್ಯಾಯಕ್ಕಾಗಿ ಬಂದೂಕು ಹಿಡಿದು ಹೋರಾಡುವ ರಾಧೆ ಹಾಗು ಆಕೆಯ ನಕ್ಸಲ್ ಸಂಗಡಿಗರ ಹೋರಾಟ ಒಂದುಕಡೆಯಾದರೆ, ತನಗೆ ಬುದ್ದಿ ಬಂದಾಗಿನಿಂದ ಇಷ್ಟ ಪಟ್ಟಿರುವ ತನ್ನ ಭಾವೀ ಪತ್ನಿಯನ್ನು ಆಕೆಯ ಹಿಂಸಾ ಹಾದಿಯಿಂದ ಮುಕ್ತಗೊಳಿಸಿ ತನ್ನವಳಾಗಿಸುವ ರಾಧಾಕೃಷ್ಣನ ಮನಕಲುಕುವ ಹೋರಾಟ ಮತ್ತೊಂದೆಡೆ .  ಚಿತ್ರದ ದ್ವೀತೀಯಾರ್ಧದಲ್ಲಿ ಹೆಚ್ಚು ಕಡಿಮೆ ಭಾವನೆಗಳೇ ಮೇಳೈಸಿ ಹೃದಯ ಹಿಂಡುವಂತೆ ಮಾಡುತ್ತವೆ. ಚಿತ್ರದ ಮೊದಲಾರ್ಧದಲ್ಲಿ ರಕ್ಷಿತ್ ಶೆಟ್ಟಿ ತನ್ನದೇ ಆದ ಸಿಂಪಲ್ ಮ್ಯಾನರಿಸಂನಿಂದ ಗಮನ ಸೆಳೆದರೆ ದ್ವೀತೀಯಾರ್ಧದಲ್ಲಿ ಗಮನ ಸೆಳೆಯುವುದು ನಾಯಕಿ ಹರಿಪ್ರಿಯಾ. ಸೆಂಟಿಮೆಂಟ್ ದೃಶ್ಯಗಳಲ್ಲಂತೂ ಹರಿಪ್ರಿಯಾಗೆ ಹರಿಪ್ರಿಯನೇ ಸಾಟಿ. ಆದರೆ ಅದೇ ಸೆಂಟಿಮೆಂಟ್ ದೃಶ್ಯಗಳಲ್ಲಿ ನಾಯಕ ರಕ್ಷಿತ್ ಶೆಟ್ಟಿ ಇನ್ನಷ್ಟು ಪಳಗಬೇಕು ಅನಿಸುತ್ತದೆ.

ಚಿತ್ರದ ಪೋಷಕ ಪಾತ್ರಗಳಲ್ಲಿ ಬರುವ ಅಚ್ಯುತ್ , ರಘು ಪಾಂಡೇಶ್ವರ್, ರವಿಕಾಳೆ , ಪ್ರಮೋದ್ ಶೆಟ್ಟಿ ಪಾತ್ರಗಳು ಚಿತ್ರಕ್ಕೆ ಶಕ್ತಿ ತುಂಬಿವೆ. ರಕ್ಷಿತ್ ಶೆಟ್ಟಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿರುತೆರೆ ನಟಿ ರಕ್ಷಾ ಹೊಳ್ಳ ತನ್ನ ಮುಗ್ಧತೆ ಹಾಗು ನಟನೆಯ ಕಾರಣದಿಂದ ಇಷ್ಟವಾಗುತ್ತಾರೆ. ಈಗಾಗಲೇ ಕನ್ನಡ ಹಾಗು ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿರುವ ರಕ್ಷಾ ಹೊಳ್ಳ ಬೆಳ್ಳಿತೆರೆಗೆ ಹೊಸ ಶೋಧ ಎಂದರೂ ಅಡ್ಡಿ ಇಲ್ಲ.

ಒಟ್ಟಿನಲ್ಲಿ ರಿಕ್ಕಿ ಒಂದು ಸಾಮಾಜಿಕ ಸಮಸ್ಯೆಯನ್ನು ಹಿನ್ನಲೆಯಾಗಿ ಇಟ್ಟುಕೊಂಡು ನವಿರಾದ ಪ್ರೇಮವನ್ನು ಉಣಬಡಿಸುತ್ತದೆ. ನಕ್ಸಲ್ ಹೋರಾಟ, ಹಿಂಸಾತ್ಮಕ ಚಟುವಟಿಕೆಗಳು ಕಾನೂನು ಕಣ್ಣಲ್ಲಿ ತಪ್ಪು ಎಂದೆನಿಸಿದರೂ ಉಳ್ಳವರು, ಸರ್ಕಾರ ಹಾಗು ಕೈಗಾರೀಕರಣ ಯಾವ ಮಟ್ಟಿಗೆ ಸಮಾಜವನ್ನು, ಸಂಸ್ಕೃತಿಯನ್ನು ಹಾಳುಗೆಡವಿದೆ ಎನ್ನುವುದನ್ನೂ  ಸೂಕ್ಷ್ಮವಾಗಿ ತೋರಿಸುವ ಮೂಲಕ ನಕ್ಸಲ್ ಪರ-ವಿರೋಧಗಳನ್ನು ಒಂದೇ ಮಟ್ಟಕ್ಕೆ ತೂಗುವಂತೆ ಮಾಡಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ಬೇರೆ ರೀತಿ ಇರಬೇಕಿತ್ತು ಅನ್ನುವ ಮಾತೊಂದನ್ನು ಬಿಟ್ಟರೆ ರಿಕ್ಕಿ ಮನಸ್ಸಿಗೆ ಹತ್ತಿರವಾಗುತ್ತದೆ.

ಇತ್ತೀಚಿಗೆ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಒಂದು ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ, ‘ರಿಕ್ಕಿಯ ಕತೆ ಕೇಳುವಾಗ ಇದು ಗೆಲ್ಲುವ ಹಾಗು ತುಂಬಾ ವರ್ಷ ಚಿತ್ರರಂಗದಲ್ಲಿ ಸುದ್ದಿಯಾಗುವ ಚಿತ್ರವಾಗುತ್ತೆ ಅನ್ನುವ ಭಾವನೆ ಬಂದಿತ್ತು’ ಅಂದಿದ್ದರು. ಚಿತ್ರ ಬಿಡುಗಡೆಯಾದ ಮೇಲೆ ಅದೆಷ್ಟು ನಿಜವಾಗಿದೆ ಅನ್ನುವುದಕ್ಕಿಂತಲೂ ‘ರಿಕ್ಕಿ’ ಒಂದಷ್ಟು ಮಟ್ಟಿಗೆ ಆ ಹೇಳಿಕೆಯನ್ನು ಸುಳ್ಳಾಗಿಸುವುದಿಲ್ಲ.

Facebook ಕಾಮೆಂಟ್ಸ್

Ashwin Amin Bantwal: Self Employed & Journalist
Related Post