X

ಆತ್ಮ ಸಂವೇದನಾ ಅಧ್ಯಾಯ 19

ಆತ್ಮ ಸಂವೇದನಾ ಅಧ್ಯಾಯ 18

ಎಲಿಯನ್ಸ್ ಗಳ ನಾಡಿನ ಚಿತ್ರಣವೇ ಬದಲಾಗಿತ್ತು. ಎರಡನೇ ಸೂರ್ಯನನ್ನು ಸಮಾಪ್ತಿಗೊಳಿಸಲು ಹೋದ ಜೀವಿಗಳು ಅದು ಸಾಧ್ಯವಾಗದೇ ಹಿಂದಿರುಗಿ ಬರುತ್ತಿದ್ದವು. ಅದೇ ಸಮಯದಲ್ಲಿ ಕತ್ತಲ ಲೋಕದಲ್ಲೊಂದು ಸಭೆ ನಡೆಯುತ್ತಿತ್ತು. ಎಲಿಯನ್ ಒಂದು ಈಗಷ್ಟೇ ಮಣ್ಣಿನಿಂದ ಹುಟ್ಟಿದ ಜೀವಿಗಳೆದುರು ಮಾತನಾಡುತ್ತಿತ್ತು.

     “ಯುದ್ಧ ಮಾಡಬೇಕು, ಭೂಮಿಯ ಜನರ ಮೇಲೆ ನಾವು ಸಮರ ಸಾರಬೇಕು. ಅವರು ಹೇಗೆ ನಮ್ಮ ಶಾಂತಿಯನ್ನು ಹಾಳು ಮಾಡಿದರೋ ಹಾಗೆಯೇ ನಾವು ಅವರ ಶಾಂತಿಯನ್ನು ಕೆಡಿಸಬೇಕು. ಭೂಮಿಯ ಮೇಲಿನ ಸರ್ವವೂ ನಾಶವಾಗಬೇಕು.

       ಯಾರೇನು ಮಾಡಿದರು ಆಗುವುದು ಆಗಿಯೇ ಸಿದ್ಧ. ಭೂಮಿ ಸರ್ವನಾಶವಾಗುವುದು ಸತ್ಯ…

       ಯುದ್ಧ ಸಾರಿದರೂ… ಶಾಂತಿ ಸಂಧಾನವಾದರೂ….”

       ಬೆಳಕು ಮಾತನಾಡುತ್ತಿರು ಜೀವಿಯ ಮೇಲೆ ಪ್ರತಿಫಲಿಸಿತು ಅಷ್ಟೆ ಮತ್ತೊಂದು ಜೀವ ಮಣ್ಣೊಳಗೆ ಮಣ್ಣಾಯಿತು.

      ಶಾಂತಿ ಮಂತ್ರ ಜಪಿಸುತ್ತಿದ್ದ ಜೀವಿಗಳ ಜಗತ್ತು ಅದು. ಯುದ್ಧ ಸಾರಲು ಹೇಗೆ ಸಾಧ್ಯ? ಅದಕ್ಕೂ ಕಾರಣವಿತ್ತು, ಅಲ್ಲಿನ ಜೀವಿಗಳು ಮಣ್ಣಿನ ಅಂತರಾಲದಲ್ಲಿ ಉಸಿರು ಪಡೆದು ಬದುಕುವ ನೀತಿಯನ್ನು ಅರಿತು ಉದ್ಬವಿಸುತ್ತಿದ್ದವು. ಈಗ ಅಲ್ಲಿ ಬೆಳಕು ಬಿದ್ದು ಮಣ್ಣೊಳಗಿನ ಉಷ್ಣತೆ ಹೆಚ್ಚಿ ಅವು ಬೆಳೆಯುವ ಮುನ್ನವೇ ಹೊರ ಜಗತ್ತು ಸೇರಿದವು. ಆ ಜೀವಿಗಳಲ್ಲಿ ಈಗ ಸಹನೆ ಭಾವನೆಗಳಾಗಲೀ, ಶಾಂತಿಯಾಗಲೀ ಉಳಿದಿರಲಿಲ್ಲ. ಅದಕ್ಕೆ ಈ ಬದಲಾವಣೆ.

          ಮಾತನಾಡುತ್ತಿರುವ ಜೀವಿಯ ಸುತ್ತಲೂ ನಿಂತಿರುವ ಉಳಿದ ಎಲಿಯನ್ ಗಳು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳತೊಡಗಿದವು. ಬೆಳಕು ಬರುವ ಮುಂಚೆಯೇ ಬದುಕು ಕಂಡ ಬುದ್ಧಿವಂತ ಎಲಿಯನ್ ಗಳು ಇದು ಸರಿಯಲ್ಲ ನಮ್ಮವರು ಅದನ್ನು ಸರಿಪಡಿಸಲು ತೆರಳಿದ್ದಾರೆ ಬರುವವರೆಗೂ ತಾಳ್ಮೆಯಿರಲಿ ಎಂದು ಸಂತೈಸಲು ಪ್ರಯತ್ನಿಸಿದವು. ಮುಂದೆ ನಿಂತು ಮಾತನಾಡಿದ ಎಲಿಯನ್ ಗಳ ಕಣ್ಣು ಕೆಂಪಾದವು.

     “ಶಾಂತಿ!? ನಮ್ಮ ಬದುಕನ್ನೇ ಬರ್ಬರವಾಗಿಸಿದವರೆದುರು ಶಾಂತಿ!! ಖಂಡಿತ ಸಾಧ್ಯವಿಲ್ಲ. ಜೊತೆಯಾದರೆ ಹಿಗ್ಗು.. ಇಲ್ಲವಾದಲ್ಲಿ ಅದಕ್ಕೂ ಮೀರಿದ ಸಂತೋಷ..ಎದುರು ನಿಲ್ಲಬೇಡಿ” ಕೂಗಿಕೊಂಡಿತು.

      ಬುದ್ಧಿ ಜೀವಿಯೊಂದು ಏನೋ ಹೇಲಲು ಬಾಯ್ತೆರೆಯುತ್ತಿದ್ದಂತೆಯೆ ಮೇಲೆ ನಿಂತ ಜೀವಿಯ ಅಂಗವೊಂದು ಬಿರುಸಾಗಿ ಚಲಿಸಿ ಅದರಿಂದ ಹೊರಟ ಬೆಂಕಿಯ ಕಣ ಆ ಜೀವಿಯ ಉಸಿರನ್ನೇ ನಿಲ್ಲಿಸಿತ್ತು. ಗಹಗಹಿಸಿದ ಎಲಿಯನ್ ಇನ್ಯಾರಾದರೂ ಇರುವಿರಾದರೆ ಎದುರು ನಿಲ್ಲಿ ಎಂದು ಅಬ್ಬರಿಸಿತು. ಎಲ್ಲವೂ ತಲೆತಗ್ಗಿಸಿ ನಿಂತವು.

     ಮತ್ತೆ ಮುಂದುವರೆದು ಯುದ್ಧ.. ಯುದ್ಧ ಮಾತ್ರ.. ಆವೇಶದಿಂದ ಕೂಗಿತು. ಎಲ್ಲ ಜೀವಿಗಳೂ ಕೈ ಮೇಲೆತ್ತಿ ಉದ್ಘರಿಸಿದವು. ಎರಡೇ ಕ್ಷಣಗಳಲ್ಲಿ ಕತ್ತಲ ಪ್ರಪಂಚದಲ್ಲಿ ಯುದ್ಧದ ಮಿಂಚು.

     ದೊಡ್ಡದಾದ ಸೈನ್ಯವೊಂದು ಭೂಮಿಯತ್ತ ಹೊರಟಿತು. ವರ್ಷಿಯ ವಿಶಾತ್ಮ ಹಿಗ್ಗಿದ. ಭೂಮಿಯ ಅಂತ್ಯ. ಜೀವಿಗಳ ಅಂತ್ಯ ಎಂದು ನಕ್ಕ. ಅವರ ಮುಂದಾಳು ಜೀವಿ ಯುದ್ಧ ಮಹಾಸಮರ ಎಂದು ಧ್ವನಿಸಿತು. ಪೂರ್ತಿ ಸೈನ್ಯ ಅದನ್ನೇ ಪ್ರತಿಧ್ವನಿಸಿತು.

    ಅದೇ ಸಮಯದಲ್ಲಿ ಎರಡನೇ ಸೂರ್ಯನನ್ನು ಧ್ವಂಸ ಮಾಡಲು ಹೋದ ಜೀವಿಗಳು ಸೋತು ಹಿಂತಿರುಗಿದ್ದವು. ನಡೆದಿರುವುದೆಲ್ಲ ತಿಳಿದು ಭೂಮಿಯ ಪರಿಸ್ಥಿತಿ ಏನಾಗಬಹುದೆಂದು ಅರಿವಾಗಿ ಗಾಬರಿಗೊಂಡವು. ಎಲಿಯನ್ ಗಳು ಭೂಮಿಯನ್ನು ತಲುಪುವ ಮುನ್ನವೇ ತಡೆಯಬೇಕು, ಭೂಮಿಯನ್ನು ಉಳಿಸಬೇಕು ಎಂದುಕೊಂಡು ಅವುಗಳೂ ಭೂಮಿಯ ಕಡೆ ಪಯಣ ಹೊರಟವು.

    ಭೂಮಿಯ ಮೇಲೆ ಇದಾವುದರ ಅರಿವಿಲ್ಲದ ಮನುಷ್ಯ ಏನೂ ಯೋಚನೆಗಳೇ ಇಲ್ಲದೇ ಜೀವ ರಕ್ಷಿಸಿಕೊಳ್ಳಲು ಓಡುತ್ತಿದ್ದ; ಒದ್ದಾಡುತ್ತಿದ್ದ.

     ಬೇರೆ ಕಡೆಯಿಂದ ಧಾಳಿಯಾದರೆ ಗೆದ್ದು ನಿಲ್ಲುವ ಒಗ್ಗಟ್ಟೇ ಇರಲಿಲ್ಲ.. ಏಕೆಂದರೆ ಎಲ್ಲರೂ ಸ್ವತಂತ್ರರು.. ಎಲ್ಲರೂ ಅನಾಥರು..

    ಮುಂದೇನು ಎಂಬುದರ ಕಲ್ಪನೆ ಯಾರಿಗೂ ಇರಲಿಲ್ಲ, ವಿಶ್ವಾತ್ಮನ ಹೊರತಾಗಿ.

ಮುಂದುವರಿಯುವುದು…

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..