ಉಳಿದವರು ಕಂಡಂತೆ ಬಂದ ಮೇಲೆ “ಎಂತದಾ ಬೋಳಿಮಕ್ಳಾ.. ನಗ್ತಾ ಇದೀರಾ.. ಶೂಟ್ ಮಾಡ್ಬೇಕಾ?” ಎನ್ನುವ ಡೈಲಾಗನ್ನು ನೀವು ಒಮ್ಮೆಯಾದರೂ ಹೇಳಿರುತ್ತೀರಾ.. ಆ ಡೈಲಾಗ್ ಎಂತಹಾ ಕ್ರೇಜ್ ಹುಟ್ಟಿಸಿತ್ತೆಂದರೆ ಸಣ್ಣ ಮಕ್ಕಳ ಬಾಯಲ್ಲೂ ಅದನ್ನು ಕೇಳುವಂತಾಗಿತ್ತು. ಆವತ್ತು ಹುಟ್ಟಿಕೊಂಡ ಈ ಕ್ರೇಜ್ ರಕ್ಷಿತ್ ಶೆಟ್ಟಿಗೆ ಟ್ರೆಂಡ್ ವಾಲ್ಯೂವನ್ನು ಕೊಟ್ಟಿತು. ಮೂಲತಃ ಇಂಜಿನಿಯರ್ ಆಗಿರುವ ರಕ್ಷಿತ್, ಸಿನೆಮಾ ಕ್ಷೇತ್ರದ ಮೇಲಿದ್ದ ತುಡಿತದಿಂದಾಗಿ ಇಂಡಸ್ಟ್ರಿಗೆ ಬರುವರು. ಇಂಡಸ್ಟ್ರಿಗೆ ಬಂದ ಮೇಲೆ ನೋಡ ನೋಡುತ್ತಲೇ ‘ನಾನು ಬರೋವರೆಗೆ ಮಾತ್ರ ಬೇರೆಯವ್ರ ಹವಾ, ನಾನ್ ಬಂದ್ಮೇಲೆ ನಂದೇ ಹವಾ” ಎನ್ನುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಮೊದ ಮೊದಲು ಕೆಲ ಕಿರುಚಿತ್ರಗಳನ್ನು ಮಾಡಿ ಬಳಿಕ ತುಘಲಕ್ ಎನ್ನುವ ಚಿತ್ರ ಮಾಡಿದ್ದ ರಕ್ಷಿತ್’ಗೆ ಸಿನೆಮಾ ಕ್ಷೇತ್ರವೇನು ಸುಖಾ ಸುಮ್ಮನೆ ಕೈ ಹಿಡಿದಿರಲಿಲ್ಲ. ಮೊದಲ ಚಿತ್ರವೇ ಸಿನೆಮಾ ರಂಗ ಹುಲ್ಲು ಹಾಸಿನಂತಲ್ಲ ಎಂಬ ಪಾಠ ಕಲಿಸಿತ್ತು. ಮೊದಲು ಸೋಲು “ನನ್ ಲೈಫು ಮುಗಿದೇ ಹೋಯ್ತು” ಎನ್ನುವಷ್ಟು ಹತಾಶೆಯನ್ನು ಕೊಟ್ಟಿತ್ತು. ಆದರೆ ಸೋಲೇ ಗೆಲುವಿನ ಸೋಪಾನ ಅಲ್ವಾ? ರಕ್ಷಿತ್ ಕೈಚೆಲ್ಲಲಿಲ್ಲ, ಪ್ರಯತ್ನ ಬಿಡಲಿಲ್ಲ. ಆವತ್ತು ಸೋಲಿನಿಂದಾಗಿ ಕಣ್ಣೀರು ಸುರಿಸಿದ್ದ ರಕ್ಷಿತ್, ಇವತ್ತು ಅದೇ ಸೋಲಿಗೆ “ಬೋಡಾ ಶೀರಾ?” ಎಂದು ಸವಾಲೆಸೆಯುತ್ತಿದ್ದಾರೆ. “ಏಯ್.. ಎಂತದಾ.. ಹಾಕ್ರಾ ಹಾಕ್ರಾ ಇನ್ನೊಂದ್ ಹಾಕ್ರಾ” ಎಂದು ಕುಂದಾಪ್ರ ಭಾಷೆಯಲ್ಲಿ ಹೇಳುತ್ತಲೇ ಮತ್ತೊಂದು ಸಿನೆಮಾ ಮಾಡಿದ್ದಾರೆ.
ಈ ಭಾರಿ ನಿರ್ದೇಶನವನ್ನು ಸ್ನೇಹಿತ ರಿಷಬ್’ಗೆ ವಹಿಸಿಕೊಟ್ಟು ನಟನೆಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ ರಕ್ಷಿತ್. ರಕ್ಷಿತ್, ಹರಿಪ್ರಿಯ, ಪ್ರಮೋದ್ ಶೆಟ್ಟಿ ತಾರಾಗಣದ ರಿಕ್ಕಿ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ಈ ಎಲ್ಲಾ ವಿಷಯಗಳ ಕುರಿತಾಗಿ ರೀಡೂ ಕನ್ನಡದ ಜೊತೆಗೆ ಮುಕ್ತವಾಗಿ ಮಾತನಾಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರ ಸಿಂಪಲ್ ಸಂದರ್ಶನ ಇಲ್ಲಿದೆ.
ನಮಸ್ಕಾರ ರಕ್ಷಿತ್.. ರಿಕ್ಕಿ ಚಿತ್ರದ ಯಶಸ್ಸಿಗಾಗಿ ನಮ್ ಕಡೆಯಿಂದ ನಿಮ್ಗೆ ದೊಡ್ಡ ಸಲಾಂ..
-ನಮಸ್ತೆ.. ಥಾಂಕ್ ಯೂ..
ಹೇಗಿದೆ ರಿಕ್ಕಿ ರೆಸ್ಪಾನ್ಸ್?
-ಸೂಪರ್.. ಎಲ್ಲಾ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಬರ್ತಾ ಇದೆ. ಬಟ್… ನಿಮಿಗ್ಗೊತ್ತಲ್ಲಾ, ಹೊಸಬರ ಕನ್ನಡ ಸಿನೆಮಾಗಳಿಗೆ ಯಾವತ್ತೂ ಕಾಡುವ ಥಿಯೇಟರ್ ಸಮಸ್ಯೆ ನಮಗೂ ಕಾಡ್ತಾ ಇದೆ. ಅಲ್ದೇ ದೊಡ್ಡ ಬ್ಯಾನರಿನ ಚಿತ್ರವೂ ಬರ್ತಾ ಇದೆ. ಆದ್ರೆ ನಾವು ಅಷ್ಟರಲ್ಲೇ ತಿರ್ಗಾ ರಿಲೀಸ್ ಮಾಡ್ತೀವಿ..
ಪ್ರೊಫೆಷನ್’ನಲ್ಲಿ ಇಂಜಿನಿಯರ್ ಆಗಿದ್ದವನಿಗೆ ಫಿಲ್ಮ್ ಮೇಲೆ ಪ್ಯಾಷನ್ ಬಂದಿದ್ ಹೇಗೆ?
-ಸಿನೆಮಾ ಮಾಡ್ಬೇಕು ಎನ್ನುವ ಆಸೆ ಯಾವತ್ತೋ ಇತ್ತು. ಇದು ನನ್ ಕೈಲಿ ಆಗತ್ತಾ ಅನ್ನೋ ಡೌಟ್ ಇತ್ತು. ಆದ್ರೆ ಯಾರ್ ಹತ್ರಾನೂ ಹೇಳ್ಕೊಳ್ತಾ ಇರ್ಲಿಲ್ಲ. ಆದ್ರೆ ಸ್ಲೋ ಆಗಿ ಇಂಡಸ್ಟ್ರಿಗೆ ಬಂದೆ, ಬಂದ್ಮೇಲೆ ಬಿಡಕ್ಕೆ ಮನಸು ಬರ್ಲಿಲ್ಲ.
ಇಂಡಸ್ಟ್ರಿಗೆ ಒಂದು ವರ್ಷದಲ್ಲಿ ಎಷ್ಟೋ ಜನ ಹೊಸಬರು ಬರ್ತಾರೆ ಆದ್ರೆ ಎಲ್ಲರೂ ಟ್ರೆಂಡ್ ಸೆಟ್ ಮಾಡಲ್ಲ. ನೀವು ಆಥರಾ ಒಂದು ಟ್ರೆಂಡ್ ಸೆಟ್ ಮಾಡಿದೀರಾ ಅನ್ನೋದನ್ನು ಒಪ್ಕೊಳ್ತೀರಾ?
-ಇಲ್ಲಾ ಅಂತ ಹೇಳಲ್ಲ. ಆದ್ರೆ ಕರ್ನಾಟಕದ ಎಲ್ಲಾ ಭಾಗಕ್ಕೂ ರಕ್ಷಿತ್ ಶೆಟ್ಟಿ ರೀಚ್ ಆಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ರಕ್ಷಿತ್ ಶೆಟ್ಟಿ ಯಾರೂಂತನೇ ಗೊತ್ತಿರ್ಲಿಕಿಲ್ಲ. ಸೋ ಸಾಧಿಸಿದ್ದು ಅಷ್ಟೇ. ಸಾಧಿಸಬೇಕಿರುವುದು ಇನ್ನಷ್ಟಿದೆ ಅಂತ ಹೇಳ್ಬಹುದು.
ರಿಕ್ಕಿಯ ಅನುಭವ ಏನು?
-ನಮ್ದೇ ಕಾನ್ಸೆಪ್ಟ್ ಆಗಿರುವ ಕಾರಣ ತುಂಬ ಕಂಫರ್ಟೇಬಲ್ ಆಗಿ ಕೆಲ್ಸ ಮಾಡಿದ ಚಿತ್ರ ರಿಕ್ಕಿ. ಕಾರ್ಕಳದ ಕಾಡೊಳಗಡೆ ಶೂಟಿಂಗ್’ನಲ್ಲಿ ಕಳೆದ ದಿನಗಳು ಅದ್ಭುತವಾಗಿತ್ತು. Overall ಹೇಳೋದಾದ್ರೆ ನಮ್ದೇ ಬಾಷೆ ಆಗಿದ್ದ ಕಾರಣ ರಿಕ್ಕಿ ತುಂಬಾ ಇಷ್ಟ ಪಟ್ಟು ಮಾಡಿದ ಸಿನೆಮಾ.
ನಿಮ್ಮ ಪಾರ್ಟ್ನರ್ ಆಗಿ ಹರಿಪ್ರಿಯಾ ಬಗ್ಗೆ ಒಂದ್ ಸ್ವಲ್ಪ ಹೇಳ್ತೀರಾ?
-ಅವರ ಬಗ್ಗೆ ಹೇಳ್ದೆ ಇದ್ರೆ ಈ ಇಂಟರ್’ವ್ಯೂಗೆ ಅರ್ಥಾನೇ ಇರಲ್ಲ. Excellent, dedicated! ಚಿತ್ರದಲ್ಲಿ ಕಾಡಲ್ಲಿ ಓಡುವ, ಬೀಳುವ ದೃಶ್ಯ ಇರುತ್ತೆ. Usually ಒಮ್ಮೆ ಬಿದ್ರೆ ಮತ್ತೆ ಅದನ್ನೇ ಮಾಡಕ್ಕೆ ಉದಾಸಿನ ಮಾಡ್ತಾರೆ. ಹರಿಪ್ರಿಯಾ ಎಷ್ಟ್ ಸರ್ತಿ ಬಿದ್ರೂ ನೆಕ್ಸ್ಟ್ ಟೇಕನ್ನ ಅದೇ ಇಂಟ್ರೆಸ್ಟ್’ಲ್ಲಿ ಮಾಡ್ತಾ ಇದ್ರು. ಅದು ಅವರ ಡೆಡಿಕೇಶನ್!
ನಿಮ್ಮೂರಲ್ಲಿ ಯಾವುದೇ ಸಮಸ್ಯೆ ಇದ್ರು ನೀವು ನಕ್ಸಲ್ ಆಗೋದೇ ಅದಕ್ಕೆ ಪರಿಹಾರ ಎನ್ನುವ wrong message ರಿಕ್ಕಿ ಕೊಡ್ತಾ ಇದೆ ಅನ್ನೋ ಮಾತು ಕೇಳಿ ಬಂದಿದೆ. ಏನ್ ಹೇಳ್ತೀರಾ?
-ನೋಡಿ, ನಾಯಕಿ ನಕ್ಸಲ್ ತಂಡವನ್ನು ಸೇರಿದಾಗ ನಾಯಕ “ನೀನ್ ಮಾಡಿದ್ದು ಸರಿ, ಅಲ್ಲೇ ಇದ್ದು ಹೋರಾಟ ಮಾಡು ನೀನು” ಅಂತ ಹೇಳಿದಿದ್ದರೆ ನಕ್ಸಲಿಸಂನ್ನು ಬೆಂಬಲಿಸಿದ ಹಾಗೆ ಆಗುತ್ತೆ. ಆದ್ರೆ ರಿಕ್ಕಿನಲ್ಲಿ ಅಥರಾ ಇಲ್ವೇ ಇಲ್ಲ. ಸೋ ಈ ಮಾತನ್ನು ಖಂಡಿತಾ ಒಪ್ಪಲ್ಲ. ಮತ್ತೆ ಅವರವರ ಭಾವಕ್ಕೆ, ಅವರವರ ಭಕುತಿಗೆ ಅಷ್ಟೇ.
ಉಳಿದವರು ಕಂಡಂತೆಗೆ ಒಳ್ಳೆ ಪ್ರತಿಕ್ರಿಯೆ ಸಿಕ್ರೂ ಕೂಡಾ ಯಾಕೆ ಅದು ಬಾಕ್ಸ್ ಆಫೀಸ್’ನಲ್ಲಿ ಸದ್ದು ಮಾಡಲಿಲ್ಲಾ?
-ಉಳಿದವರು ಕಂಡತೆಗೆ ಸ್ಟಾರ್ಟಿಂಗಲ್ಲೇ ಅಷ್ಟೊಂದು ಬೂಸ್ಟ್ ಸಿಗ್ಲಿಲ್ಲ. ಆದ್ರೆ ಒಂದು ವಾರ ಆದ್ಮೇಲೆ ಜನರ ಬಾಯಿಂದ ಬಾಯಿಗೆ ಚಿತ್ರ ಒಳ್ಳೆದಿದೆ ಎನ್ನುವ ಮಾತು ಹರಡಿ ಒಂದು ಹಂತಕ್ಕೆ ಸಿನೆಮಾ ಹಿಟ್ ಆಯ್ತು. ಆದ್ರೆ ಅದು ಸಾಕಾಗ್ಲಿಲ್ಲ.
ಉಳಿದವರು ಕಂಡಂತೆಯಲ್ಲಿ ನೀವ್ ಗಳಿಸಿದ ಇಮೇಜನ್ನು ವಾಸ್ತು ಪ್ರಕಾರ ಹಾಳು ಮಾಡಿ ಬಿಡ್ತು ಅಂತಾರೆ, ನಿಮಗೆ ಏನನ್ಸತ್ತೆ?
-ಹಾಗೇನಿಲ್ಲ. ಬಟ್ ಫ್ರಾಂಕ್ ಆಗಿ ಹೇಳೋದಾದ್ರೆ, ನಾನು ಯಾವತ್ತೂ ಎಲ್ಲಾ ಸಿದ್ಧತೆಗಳನ್ನು ಮಾಡ್ಕೊಂಡೇ ಹೋಗುವವನು. ಯೋಗರಾಜ್ ಭಟ್ರು ಸ್ಪಾಟಲ್ಲೇ ಸ್ಕ್ರಿಪ್ಟ್ ಕೊಡ್ತಾ ಇದ್ರು. ಅದು ನಂಗೆ ಕಂಫರ್ಟ್ ಆಗ್ಲಿಲ್ಲ ಅಷ್ಟೇ.
ನಿರ್ದೇಶನ, ನಟನೆ.. ನಿಮ್ಮ ಆಯ್ಕೆ ಯಾವುದು?
-ನಿರ್ದೇಶನ ತಾಯಿ ಇದ್ದ ಹಾಗೆ, ನಟನೆ ಮಗು ಇದ್ದ ಹಾಗೆ, ಯಾವುದನ್ನು ಇಷ್ಟ, ಯಾವುದು ಇಷ್ಟ ಇಲ್ಲ ಅಂತ ಹೇಳೋದು ಹೇಗೆ ಹೇಳಿ.. ನಿರ್ದೇಶನ ಅಂದ್ರೆ ನಮ್ಮ ಕನಸನ್ನು ಬೆನ್ನು ಹತ್ತೋದು. ಅದೊಂದು ಚಾಲೆಂಜಿಂಗ್ ಕೆಲ್ಸ. ನಂಗೆ ಚಾಲೆಂಜಿಂಗ್ ಕೆಲ್ಸ ಮಾಡೋದು ಅಂದ್ರೆ ತುಂಬಾ ಇಷ್ಟ. ನಟನೆ ಅಂದ್ರೆ ಏನ್ ಹೇಳ್ತಾರೆ ಹಾಗೆ ಮಾಡೋದು ಅಷ್ಟೆ..
ರಿಷಬ್ ಮತ್ತೆ ನಿಮ್ಮ ಗೆಳೆತನ ಹೇಗೆ?
-ಹಮ್ಮ್ಮ್.. ರಿಷಬ್.. ಏನ್ ಹೇಳ್ಳಿ.. ಹೊಟ್ಟೆಗೇನೂ ಇಲ್ದೇ ಉಪವಾಸ ಇದ್ದಾಗ ಮೂರು ಹೊತ್ತೂ ಊಟ ಹಾಕ್ದೋನು ರಿಷಬ್..ಅವನೂ ಅಷ್ಟೆ, ಹಾರ್ಡ್ ವರ್ಕರ್, ಕನಸನ್ನು ಬೆನ್ನು ಹತ್ತಿ ಹೊರಟವನು..
ಫ್ಯೂಚರ್ ಪ್ಲಾನ್ ಏನು?
-ಗೋಧಿ ಬಣ್ಣ ಸಾಧಾರಣ ಮೈಕಟ್ಟು ಇನ್ನೆರಡು ತಿಂಗಳಲ್ಲಿ ಬರ್ತಾ ಇದೆ. ಮತ್ತೆ ನಮ್ದೇ Production House ಮಾಡ್ತಾ ಇದೇವೆ.. ಮತ್ತೊಂದು, ರಿಷಬ್ ನಿರ್ದೇಶನದಲ್ಲಿ ನಮ್ದೇ ಬ್ಯಾನರಿನ “ಕಿರಿಕ್ ಪಾರ್ಟಿ” ಅನ್ನೋ ಚಿತ್ರನೂ ಮಾಡ್ತಾ ಇದೇವೆ.
ರಕ್ಷಿತ್ ಶೆಟ್ರೆ, ನಿಮ್ಮ ಮುಂದಿನ ಎಲ್ಲಾ ಪ್ರಾಜೆಕ್ಟ್’ಗಳಿಗೂ ರೀಡೂ ಕನ್ನಡ ಕಡೆಯಿಂದ ಆಲ್ ದ್ ಬೆಸ್ಟ್…
ಶಿವಪ್ರಸಾದ್ ಭಟ್ ಟಿ
Facebook ಕಾಮೆಂಟ್ಸ್