ಮೊನ್ನೆ ಡಿಸೆಂಬರ್ 30ರಂದು ರಾತ್ರಿ ಅರ್ನಬ್ ಗೋಸ್ವಾಮಿಯ ಕಾರ್ಯಕ್ರಮ ನೋಡುತ್ತಿದ್ದೆ. ಜಾಕಿರ್ ನಾಯ್ಕ್ ಮಂಗಳೂರಲ್ಲಿ ಕಾರ್ಯಕ್ರಮ ನಡೆಸುವುದಕ್ಕೆ ಅನುಮತಿ ಕೊಡಬೇಕೋ ಬೇಡವೋ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, “ಆತ ಇಲ್ಲಿಗೆ ಬಂದರೆ ಪರಿಸರದ ಸೌಹಾರ್ದತೆ ಕದಡುತ್ತದೆ ಎಂದು ಹಿಂದೂ ವಿಧ್ವಂಸಕರು ದೂರು ಕೊಟ್ಟಿದ್ದಾರೆ” ಎಂಬ ವಾಕ್ಯ ಪ್ರಸಾರವಾಯಿತು. ಇಲ್ಲಿ ಹಿಂದೂ ವಿಧ್ವಂಸಕ ಎಂಬ ಪದಪುಂಜ ಹಾಲು-ಜೇನು, ಹಾಡು-ಹಸೆ ಎಂಬ ಪದಗಳಷ್ಟೇ ಸಹಜವಾಗಿ ಹೇಳಲ್ಪಟ್ಟಿತು. ಇವತ್ತು ನಮ್ಮಲ್ಲೊಂದು ಪೂರ್ವಾಗ್ರಹ ಬೆಳೆದುಬಿಟ್ಟಿದೆ. ಆರೆಸ್ಸೆಸ್ ಎಂದರೆ ಕೋಮುವಾದಿ, ಮೋದಿ ಅಂದರೆ ನರಹಂತಕ, ಬುದ್ಧಿಜೀವಿ ಅಂದರೆ ದೇಶದ ಜಾತ್ಯತೀತತೆ ಕಾಪಾಡುವವನು – ಹೀಗೆ, ಯಾವ ಸಾಕ್ಷ್ಯಾಧಾರಗಳು ಇಲ್ಲದಿದ್ದಾಗ್ಯೂ ನಾವು ಯಾವ ಶಬ್ದದೊಂದಿಗೆ ಯಾವುದನ್ನು ಹೊಂದಿಸಬೇಕು ಎನ್ನುವುದನ್ನು ಕಲಿತು ಬಿಟ್ಟಿದ್ದೇವೆ. ಹಾಗಾಗಿ ಹಿಂದೂ ಎಂದೊಡನೆ “ಫ್ರಿಂಜ್ ಎಲಿಮೆಂಟ್ಸ್” (“ವಿಧ್ವಂಸಕಾರಿ / ದಮನಕಾರಿ ಶಕ್ತಿಗಳು”) ಎಂಬ ಪದವನ್ನು ಮಾಧ್ಯಮಗಳು ತಟ್ಟನೆ ಹಾಕಿಬಿಡುತ್ತವೆ.
ಇತ್ತೀಚೆಗೆ ನಡೆದ ಕೆಲವು ಘಟನಾವಳಿಗಳನ್ನು ನೋಡಿ. ಡಾ. ಕಲ್ಬುರ್ಗಿ ತೀರಿಕೊಂಡ ದಿನ ನಾನೊಂದು ಸಮಾರಂಭದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ನಾನು ಅಲ್ಲಿದ್ದ ಒಬ್ಬ ಹಿರಿಯರಿಗೆ ಕೊಲೆಯ ವಿಷಯ ತಿಳಿಸಿದೊಡನೆ ಅವರು ನನ್ನತ್ತ ತಿರುಗಿ ಗಾಬರಿಯಿಂದ “ಇದು ಸಂಘ ಪರಿವಾರದ ಕೆಲಸ” ಎಂದುಬಿಟ್ಟರು! ಬೆಳಗ್ಗೆ ಹತ್ತು ಗಂಟೆಗೆ ನಡೆದ ಕೊಲೆಯ ವಿವರ ಟಿವಿಯಲ್ಲಿ ಬರುತ್ತಿದ್ದಾಗ, ಕೇವಲ ಅರ್ಧಗಂಟೆಯಲ್ಲಿ, ಅಂದರೆ ಹತ್ತೂವರೆ ಹೊತ್ತಿಗೆ ಬರಗೂರು ರಾಮಚಂದ್ರಪ್ಪ ಫೋನಿನಲ್ಲಿ ಮಾತಾಡುತ್ತ ಕೊಲೆಯನ್ನು ಯಾರು ಮಾಡಿದವರು, ಯಾಕೆ ಮಾಡಿದರು, ಹೇಗೆ ಮಾಡಿದರು ಎಂಬ ಎಲ್ಲಾ ವಿವರಗಳನ್ನೂ ಟಿವಿ ನಿರೂಪಕರಿಗೆ ಕೊಟ್ಟರು! ಮರುದಿನದ ಕನ್ನಡಪ್ರಭದಲ್ಲಿ ಅತ್ಯಂತ ಹೀನಾಯವಾದ; ಮಾಧ್ಯಮಧರ್ಮಕ್ಕೆ ಕಳಂಕ ಎನ್ನಬಹುದಾದ ತಲೆಬರಹ ಬಂದಿತ್ತು. ಕಲ್ಬುರ್ಗಿ ಕೊಲೆಯನ್ನು ಸಂಘದವರೇ ಮಾಡಿದ್ದಾರೆ ಎಂದು ಎಲ್ಲರೂ ಅದೆಷ್ಟು ಆತ್ಮವಿಶ್ವಾಸದಿಂದ ಹೇಳುತ್ತಿದ್ದರೆಂದರೆ ಈ ಪ್ರಕರಣವನ್ನು ಸುಪ್ರೀಂ ಕೋರ್ಟು ವಿಚಾರಣೆ ನಡೆಸಿ ತೀರ್ಪು ಕೊಟ್ಟಿದೆ ಎಂಬಂತೆ ಇತ್ತು ಸನ್ನಿವೇಶ. ನಾನು ನಿಲುಮೆ ಜಾಲಪುಟದಲ್ಲಿ “ಈ ಕೊಲೆಗೆ ಹಲವು ಆಯಾಮಗಳಿರಬಹುದು” ಎಂದು ಲೇಖನ ಬರೆದೆ. ಸಂಘದವರೇ ಕೊಂದರು ಎಂದು ಚೀರಿಚೀರಿ ಹೇಳುತ್ತಿದ್ದ ಪ್ರತಿಷ್ಠಿತ ಪತ್ರಿಕೆ ನನ್ನ ಲೇಖನ ಪ್ರಕಟಿಸಲು ತಯಾರಿರಲಿಲ್ಲ.
ಅದಾದ ಮೇಲೆ ದಾದ್ರಿ ಕೊಲೆ ನಡೆಯಿತು. ಹಳ್ಳಿಯಲ್ಲಿ ದನಗಳು ಕಾಣೆಯಾದ ಸುದ್ದಿ ಹರಡಿದ್ದಾಗಲೇ ಕಾಕತಾಳೀಯವಾಗಿ ಆ ಊರಿನ ಅಖ್ಲಾಕ್ ಎಂಬವನು ದನದ ಮಾಂಸ ಸಂಗ್ರಹಿಸಿಟ್ಟಿದ್ದಾನೆ ಎಂಬ ಗಾಳಿಸುದ್ದಿ ಎದ್ದು, ಜನ ಉದ್ರಿಕ್ತರಾಗಿ ಅವನ ಮನೆಗೆ ಹೋಗಿ ಹೊಡೆದರು. ಮರುದಿನದ ಸುದ್ದಿ ಬಂದದ್ದು ಹೇಗೆ? ದಾದ್ರಿ ಲಿಂಚಿಂಗ್: ಕೋಮುವಾದಿಗಳಿಂದ ಮುಸ್ಲಿಮ್ ಹತ್ಯೆ! ಗೋಹತ್ಯೆಯನ್ನು ನಿಷೇಧ ಮಾಡಿರುವ ರಾಜ್ಯದಲ್ಲಿ ಗೋಮಾಂಸ ಬಚ್ಚಿಟ್ಟಿದ್ದಾನೆಂಬ ಆರೋಪದ ಮೇಲೆ ಒಬ್ಬನನ್ನು ಊರಿನ ಜನ ಥಳಿಸಿದರು. ಆವೇಶದ ಕ್ಷಣಗಳಲ್ಲಿ ನಡೆದುಹೋದ ತಪ್ಪನ್ನು ವಿವೇಚನೆಯಿಂದ ನೋಡುವ ಬದಲು ಅದಕ್ಕೆ ಗಾಳಿ ಊದಿ ದೊಡ್ಡದು ಮಾಡಿ, ಇಡೀ ರಾಷ್ಟ್ರಕ್ಕೆ ಬೆಂಕಿ ಹರಡುವ ಕೆಲಸ ಮಾಡಲಾಯಿತು. ಎರಡು ವಾರ ನಿರಂತರವಾಗಿ ದಾದ್ರಿ ಪ್ರಕರಣ ತೋರಿಸಲಾಯಿತು.
ಅದೇ ಸಮಯದಲ್ಲಿ ಉತ್ತರಪ್ರದೇಶದ ಇನ್ನೊಂದು ಸ್ಥಳದಲ್ಲಿ ಒಂದು ದಲಿತ ಕುಟುಂಬ ಪೋಲೀಸ್ ಸ್ಟೇಷನಿನಲ್ಲಿ ನಗ್ನವಾದ ಘಟನೆ ನಡೆಯಿತು. ಅದನ್ನು ಪದೇಪದೇ ತೋರಿಸಿದ ಚಾನೆಲ್ ಹಾಕಿದ ಹೆಡ್ಡಿಂಗ್ ಏನು ಗೊತ್ತೆ? “ಮೋದಿಯ ಡಿಜಿಟಲ್ ಇಂಡಿಯಾದಲ್ಲಿ ದಲಿತರ ಮೇಲೆ ಪೋಲೀಸರ ದೌರ್ಜನ್ಯ!”. ಎಲ್ಲಿಯ ಮೋದಿ, ಎಲ್ಲಿಯ ಡಿಜಿಟಲ್ ಇಂಡಿಯಾ ಮತ್ತು ಎಲ್ಲಿಯ ಈ ಘಟನೆ! ಒಂದಕ್ಕೊಂದಕ್ಕೆ ಸಂಬಂಧವೇ ಇರಲಿಲ್ಲ. ಎರಡು ದಿನದ ಬಳಿಕ, ಆ ಕುಟುಂಬ ತಾನಾಗಿ ಬಟ್ಟೆ ಕಳಚಿತ್ತೆಂದೂ ಪೋಲೀಸರು ಕಂಗಾಲಾಗಿ ಅವರಿಗೆ ಬಟ್ಟೆ ಹೊದೆಸುವ ಕೆಲಸ ಮಾಡುತ್ತಿದ್ದರೆಂದೂ ಗೊತ್ತಾಯಿತು. ಈ ಮೂರೂ ಪ್ರಕರಣಗಳಲ್ಲಿ ಕೇಳಿ ಬಂದ ಹೆಸರುಗಳು ಯಾವುದು ಹೇಳಿ? ಮೋದಿ, ಆರೆಸ್ಸೆಸ್, ಸಂಘ ಪರಿವಾರ, ಬಜರಂಗದಳ, ಕೋಮುವಾದ, ಹಿಂದುತ್ವ. ಘಟನೆಗಳಿಗೂ ಈ ಪದಗಳಿಗೂ ಸಾಸಿವೆಯಷ್ಟೂ ಸಂಬಂಧ ಇರಲಿಲ್ಲ. ಆದರೂ ಮಾಧ್ಯಮಗಳು ಮತ್ತೆ ಮತ್ತೆ ಇದನ್ನು ಎತ್ತಿ ತೋರಿಸಿ ಜನಾಭಿಪ್ರಾಯ ರೂಪಿಸಿದವು.
ದುರಂತ ನೋಡಿ. ಆ ಒಂದು ತಿಂಗಳ ಸಮಯದಲ್ಲಿ ನನ್ನ ಈ ದೇಶದಲ್ಲಿ ಮೂವತ್ತಕ್ಕೂ ಹೆಚ್ಚು ಅತ್ಯಾಚಾರಗಳಾದವು. ಆದರೆ ಯಾರಿಗೂ ಅವು ಬೇಕಾಗಿರಲಿಲ್ಲ. ಮೂಡುಬಿದ್ರೆಯಲ್ಲಿ ಪ್ರಶಾಂತ್ ಪೂಜಾರಿಯನ್ನು ಭೀಕರವಾಗಿ ಕೊಂದುಹಾಕಿದರು. ಆಗ ರಾಜ್’ದೀಪ್ ಸರ್ದೇಸಾಯಿ ಎಂಬ ಮಾಧ್ಯಮ ವ್ಯಕ್ತಿ “ದಾದ್ರಿ ಘಟನೆ ಹೇಗೆ ಒಂದು ರಾಷ್ಟ್ರೀಯ ದುರಂತ; ಆದರೆ ಪ್ರಶಾಂತ್ ಪೂಜಾರಿಯ ಕೊಲೆಯನ್ನು ಯಾಕೆ ನಾವು ಗಂಭೀರವಾಗಿ ತೆಗೆದುಕೊಳ್ಳಬಾರದು?” ಎಂಬ ವಿಷಯದಲ್ಲಿ ಲೇಖನ ಬರೆದರು. ಬಹುಶಃ ಒಬ್ಬ ವ್ಯಕ್ತಿ ಇಳಿಯಬಹುದಾದ ಕಟ್ಟಕಡೆಯ ಮಟ್ಟಕ್ಕೆ ಅವರು ಇಳಿದಿದ್ದರು. 250 ಜನರನ್ನು ಕೊಂದ ಯಾಕೂಬ್ ಮೆಮೊನ್ ಎಂಬ ಉಗ್ರಗಾಮಿಗೆ ಶಿಕ್ಷೆ ಕೊಡಬಾರದು ಎಂದು ದೇಶಾದ್ಯಂತ ಹೋರಾಟ ಮಾಡಿದ ಅದೇ ಮಂದಿ, ಪ್ರಶಾಂತ್ ಪೂಜಾರಿ ಎಂಬಾತನ ಕೊಲೆಯನ್ನು ಪರಿಗಣಿಸಬಾರದು ಎಂದು ಬೊಬ್ಬೆ ಹಾಕಿದರು!
1941ರಲ್ಲಿ ಅಮೆರಿಕಾದಲ್ಲಿ ಸಮಾಜವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡು ರಾಜಕೀಯ ನಿಲುವುಗಳನ್ನು ರೂಪಿಸುತ್ತಿದ್ದವರು ಪತ್ರಿಕಾದೊರೆಗಳು. ಅಂಥ ದುಷ್ಟರಲ್ಲಿ ಒಬ್ಬನಾಗಿದ್ದ ವಿಲಿಯಂ ರಾ೦ಡಾಲ್ಫ್ ಹರ್ಸ್ಟ್ ಎಂಬವನ ಜಾತಕವನ್ನು ಬಿಚ್ಚಿಡುವಂತೆ ಆರ್ಸಾನ್ ವೆಲ್ಲೆಸ್ ಎಂಬ ಇಪ್ಪತ್ತೈದರ ತರುಣ ಒಂದು ಸಿನೆಮಾ ತೆಗೆದ. ಆ ಚಿತ್ರದ ಒಂದೇ ಒಂದು ಪ್ರಸ್ತಾಪ ತನ್ನ ಕೈಯಲ್ಲಿರುವ ಪತ್ರಿಕೆಗಳಲ್ಲಿ ಬರದ ಹಾಗೆ ಹರ್ಸ್ಟ್ ನೋಡಿಕೊಂಡ. ಆದರೂ ಆ ಎಲ್ಲ ನಿಯಂತ್ರಣವನ್ನು ಮೀರಿ ಸಿನೆಮಾ ಪ್ರಚಾರ ಪಡೆಯಿತು; ಪ್ರಸಿದ್ಧವಾಯಿತು; ಮಾಧ್ಯಮದೊರೆಗಳ ನಿಜಮುಖವನ್ನು ಜನರ ಎದುರು ಬಟಾಬಯಲು ಮಾಡಿ ಅವರ ಮೇಲಿದ್ದ ಎಲ್ಲ ಗೌರವವನ್ನು ಮಣ್ಣುಗೂಡಿಸಿತು. “ಸಿಟಿಜನ್ ಕೇನ್” ಎಂಬ ಹೆಸರಿನ ಆ ಚಿತ್ರ ಇಂದಿಗೂ ಜಗತ್ತಿನ ಹತ್ತು ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳ ಪಟ್ಟಿಯಲ್ಲಿ ನಿಂತಿದೆ. ಎರಡನೇ ಮಹಾಯುದ್ಧದ ನಂತರ ಹಲವು ದೇಶಗಳು ಸ್ವಾತಂತ್ರ್ಯ ಪಡೆದ ಮೇಲೆ ಅಲ್ಲೆಲ್ಲ ಆದ ಮೊದಲ ಬದಲಾವಣೆ ಎಂದರೆ ಪತ್ರಿಕೋದ್ಯಮಕ್ಕೆ ಬಲ ಸಿಕ್ಕಿದ್ದು. ಪತ್ರಿಕೆಗಳು ಜನರ ಅಭಿಪ್ರಾಯವನ್ನು ತಿದ್ದುವ, ರೂಪಿಸುವ ಜವಾಬ್ದಾರಿ ತೆಗೆದುಕೊಂಡವು. ಅದೇ ಕಾರಣಕ್ಕೆ ಅದನ್ನು ಆಡಳಿತದ ನಾಲ್ಕನೇ ಕಂಬ ಎಂದರು. ಪತ್ರಿಕೋದ್ಯೋಗ ಪವಿತ್ರವಾದದ್ದು, ಅದರ ಚಾರಿತ್ರ್ಯ ಕಾಪಾಡಬೇಕು ಎಂಬ ಕಾಳಜಿ ಪತ್ರಕರ್ತರಲ್ಲಿತ್ತು. ಹಾಗೆಯೇ ತಮ್ಮ ಚಾರಿತ್ರ್ಯವನ್ನೂ ಉಳಿಸಿಕೊಳ್ಳಬೇಕು; ಯಾವ ವಶೀಲಿಗೂ ಮಾರಿಕೊಳ್ಳಬಾರದು ಎಂಬ ಎಚ್ಚರ ಇತ್ತು. ವಡ್ಡರ್ಸೆ ರಘುರಾಮ ಶೆಟ್ಟರು, ಪದ್ಯಾಣ ಗೋಪಾಲಕೃಷ್ಣ, ಹ.ವೆಂ.ನಾಗರಾಜ ರಾವ್, ವೈಯೆನ್ಕೆ ಮುಂತಾದವರಿಗೆ ಅದು ರಕ್ತವಾಗಿ ಬಂದಿತ್ತು. ರಾಜಕಾರಣಿಯ ಮನೆಯಲ್ಲಿ ಊಟ ಮಾಡಿದರೆ ಮುಂದೆ ಆತನ ಹಂಗಿಗೆ ಬಿದ್ದು ತನ್ನ ಪತ್ರಿಕಾಧರ್ಮದ ಜೊತೆ ರಾಜಿ ಮಾಡಿಕೊಳ್ಳಬೇಕಾಗುತ್ತದೆ ಎಂದು ರಾಜಕಾರಣಿಗಳನ್ನು ದೂರ ಇಟ್ಟವರಿದ್ದರು.
ಆದರೆ ನಿಧಾನಕ್ಕೆ ಪತ್ರಿಕೋದ್ಯಮದೊಂದಿಗೆ ರಾಜಕಾರಣ, ಮುಖ್ಯವಾಗಿ ಪ್ರಭುತ್ವ ಸ್ನೇಹ ಬೆಳೆಸಿತು. ಪತ್ರಕರ್ತರೂ ಮನುಷ್ಯರೇ ತಾನೆ? ಅವರಾದರೂ ಎಷ್ಟು ದಿನ ಪ್ರಲೋಭನೆಗಳಿಂದ ದೂರ ಇದ್ದಾರು? ಪತ್ರಕರ್ತರಿಗೆ ಸರಕಾರದ ಕಡೆಯಿಂದ ಗಿಪ್ಟ್’ಗಳು, ಮನೆ, ಜಮೀನು, ಕುಟುಂಬದ ಸದಸ್ಯರಿಗೆ ಉದ್ಯೋಗ, ವಿದೇಶ ಪ್ರವಾಸಗಳು, ಪ್ರಶಸ್ತಿ-ಪುರಸ್ಕಾರಗಳು – ಎಲ್ಲ ಸಿಗತೊಡಗಿದ ಮೇಲೆ ಪತ್ರಕರ್ತರೂ ರಾಜಕಾರಣಿಗಳೇ ಆಗಿಬಿಟ್ಟರು. ಸುದ್ದಿಯನ್ನು ವರ್ಣರಂಜಿತವಾಗಿ ಬರೆಯುವುದು ಹೇಗೆ; ಜನರಿಗೆ ಅರ್ಧಸತ್ಯ ಹೇಳುವುದು ಹೇಗೆ, ಸರಕಾರವನ್ನು ಓಲೈಸುವುದು ಹೇಗೆ, ಅಥವಾ ಬೆದರಿಕೆ ಹಾಕಿ ಬಗ್ಗಿಸುವುದು ಹೇಗೆ, ಇಡೀ ಸುದ್ದಿಯನ್ನು ತಿರುಚಿ ವಿರುದ್ಧಾರ್ಥ ಬರುವಂತೆ ಮಾಡುವುದು ಹೇಗೆ – ಹೀಗೆ ಎಲ್ಲ ಕಲೆಗಳನ್ನೂ ಪತ್ರಕರ್ತರು ಕಲಿತರು. ರಷ್ಯದಲ್ಲಿ ಒಂದಾನೊಂದು ಕಾಲದಲ್ಲಿ ಪ್ರಾವ್ಡಾ ಎಂಬ ಪತ್ರಿಕೆ ಇತ್ತು. ಅದು ಆಗಿನ ಕಮ್ಯುನಿಸ್ಟ್ ಸರಕಾರದ ಮುಖವಾಣಿಯಾಗಿತ್ತು. ಪ್ರಾವ್ಡಾ ಎಂದರೆ ಸತ್ಯ ಎಂದರ್ಥ. ಆದರೆ, ಆ ಪತ್ರಿಕೆಯಲ್ಲಿ ಅಲ್ಲಿನ ಸರಕಾರಕ್ಕೆ ಪೂರಕವಾದ ವಿಷಯಗಳು ಬಿಟ್ಟರೆ ಯಾವ ಸತ್ಯಸುದ್ದಿಯೂ ಬರುತ್ತಿರಲಿಲ್ಲ! ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡ ದೇಶಗಳಲ್ಲೂ ಪತ್ರಿಕೆಗಳ ಸ್ಥಿತಿ ಭಿನ್ನವಾಗಿ ಇರಲಿಲ್ಲ.
ಭಾರತದಲ್ಲಿ ಸ್ವಾತಂತ್ರ್ಯಾನಂತರ ಪತ್ರಿಕೆಗಳ ಜೊತೆ ಹಗೆ ಕಟ್ಟಿಕೊಳ್ಳುವುದಕ್ಕಿಂತ ಅವನ್ನು ಚೆನ್ನಾಗಿ ನೋಡಿಕೊಂಡು ತಮಗೆ ಬೇಕಾದ ಸುದ್ದಿಗಳನ್ನು ಪ್ರಕಟಿಸುವುದು ಒಳ್ಳೆಯದು ಎನ್ನುವುದು ನಮ್ಮ ಸರಕಾರಗಳಿಗೆ ಗೊತ್ತಾಯಿತು. ಕೆಲವು ರಾಜಕೀಯ ಪಕ್ಷಗಳು ತಾವಾಗಿ ಪತ್ರಿಕೆ ನಡೆಸಲು ಶುರುಮಾಡಿಬಿಟ್ಟವು. ನೆಹರೂ ಕಾಲದಲ್ಲಿ ರಷ್ಯದ ಜೊತೆ ನಮಗೆ ಜಾಸ್ತಿ ಸ್ನೇಹವಿತ್ತಲ್ಲ? ಹಾಗಾಗಿ ನೆಹರೂ ಚಿಂತನೆಗಳಿಗೆ ಹತ್ತಿರವಿದ್ದ ಕಮ್ಯುನಿಸಮ್ ಅನ್ನು ಪತ್ರಿಕೆಗಳು ಕೂಡ ನೆಚ್ಚಿಕೊಂಡವು. ಮುಂದೆ ಇವೇ ಸರಕಾರಗಳು ಸೆಕ್ಯುಲರಿಸಮ್ ಎಂಬ ಹೊಸ ಪರಿಕಲ್ಪನೆಯನ್ನು ಬಿತ್ತಿದವು. ಹಿಂದುಳಿದವರ, ಅಲ್ಪಸಂಖ್ಯಾತರ ಓಟುಗಳತ್ತ ಕಣ್ಣಿಟ್ಟಿದ್ದ ಸರಕಾರಕ್ಕೆ ಸೆಕ್ಯುಲರಿಸಂ ಬಹಳ ಮುಖ್ಯವಾದ ಆಕ್ಸಿಜನ್ ಆಗಿತ್ತು. ಹಾಗಾಗಿ, ಅದಕ್ಕೆ ಪತ್ರಿಕೆಗಳ ಮೂಲಕ ಭರಪೂರ ಪ್ರಚಾರ ಸಿಕ್ಕಿತು. ದೇಶದ ಕೆಲವು ವಿಶ್ವವಿದ್ಯಾಲಯಗಳು ಈ ಚಿಂತನೆಯನ್ನು ಬೆಳೆಸುವ ಕಾರ್ಖಾನೆಗಳಾದವು. ಅಲ್ಲಿಂದ ಹೊರಬಂದವರೇ ಪತ್ರಿಕಾಲಯಗಳಲ್ಲಿ ತುಂಬಿಕೊಂಡರು. ಅಂಥವರಿಗೆ ಸರಕಾರದ ಸವಲತ್ತುಗಳೂ ನೇರವಾಗಿ ಸಿಗುತ್ತಿದ್ದುದರಿಂದ, ತಮ್ಮ ಶೈಲಿಯನ್ನಾಗಲೀ ಸಿದ್ಧಾಂತವನ್ನಾಗಲೀ ಬದಲಿಸುವ ಅಗತ್ಯ ಅವರಿಗಿರಲಿಲ್ಲ. ಕಮ್ಯುನಿಸಂ, ಸೆಕ್ಯುಲರಿಸಂ ಇವೆಲ್ಲ ವಿದೇಶೀ ಪದಗಳು. ಹೊರಗಿನ ಜಗತ್ತಿನ ಈ ಸಿದ್ಧಾಂತಗಳನ್ನು ನಿರಂತರವಾಗಿ ಅಧ್ಯಯನ ಮಾಡಿದ ಪಂಡಿತರು ಅದೇ ದಾರಿಯಲ್ಲಿ ಭಾರತದ ಇತಿಹಾಸವನ್ನು ಕೂಡ ಪಾಶ್ಚಾತ್ಯ ಲೇಖಕರಿಂದಲೇ ತಿಳಿದುಕೊಂಡರು. ಹಾಗಾಗಿ ಇಲ್ಲಿರುವುದೆಲ್ಲ ಕೆಟ್ಟದ್ದು; ಬಿಳಿಯರು ದೇವದೂತರಂತೆ ಬಂದು ನಮ್ಮನ್ನು ಕಾಪಾಡಿದರು; ನಾವು ಜಾತಿವ್ಯವಸ್ಥೆಯ ಕೆಸರಲ್ಲಿ ತೊಳಲಾಡುತಿದ್ದೇವೆ – ಇತ್ಯಾದಿ ಚಿಂತನೆ ಹುಟ್ಟಿತು.
ಈ ಹಿಂದಿನ ವಿಚಾರವಾದಿಗಳು ತಮ್ಮ ಶಿಷ್ಯರನ್ನು ಅದೇ ದಾರಿಯಲ್ಲಿ ಬೆಳೆಸಿದರು. ವಿರುದ್ಧ ಚಿಂತನೆ ಇರುವ ಯಾವ ಬರಹವೂ ಪತ್ರಿಕೆಯಲ್ಲಿ ಪ್ರಕಟವಾಗುವುದಿಲ್ಲ ಎಂದಾಗ ಸಹಜವಾಗಿಯೇ ಜೂನಿಯರ್ ತನ್ನ ಹಿರಿಯರಿಗೆ ಬೇಕಾದಂತೆ ಬರೆಯತೊಡಗುತ್ತಾನೆ. ಈ ಪರಂಪರೆ ಇವತ್ತು ಕೂಡ ಇದೆ. ಸುಮಾರು ಹದಿನೈದು ವರ್ಷಗಳ ಹಿಂದೆ ಕನ್ನಡದಲ್ಲಿ ವಿಜಯ ಕರ್ನಾಟಕ ಶುರುವಾಗುವವರೆಗೆ ಪತ್ರಿಕೆಗಳಲ್ಲಿ ಬಲಪಂಥೀಯ ವಿಚಾರವನ್ನು ಬರೆಯಬಹುದು ಎನ್ನುವುದೇ ಗೊತ್ತಿರಲಿಲ್ಲ. ವಿಪರ್ಯಾಸ ಎಂದರೆ ಈ ದೇಶದಲ್ಲಿ ಹಿಂದುತ್ವವನ್ನು ಭಯೋತ್ಪಾದನೆ ಎಂದೇ ಬಿಂಬಿಸಲಾಗಿತ್ತು. ನಾನು ಹದಿಹರೆಯದಲ್ಲಿ ಹಿಂದು, ಫ್ರಂಟ್ಲೈನ್ ಇತ್ಯಾದಿ ಪತ್ರಿಕೆಗಳನ್ನು ಓದಿ ನಿಜಕ್ಕೂ ಗಾಬರಿಯಾಗುತ್ತಿದ್ದೆ. ಫ್ರಂಟ್ಲೈನ್’ನಲ್ಲಿ ಬರುವ ಯಾವ ಲೇಖನವೂ ನನ್ನ ಸುತ್ತಮುತ್ತಲಿನ ಪರಿಸರವನ್ನು ವಿವರಿಸುತ್ತಿಲ್ಲವಲ್ಲ; ಹಾಗಾದರೆ ನಾನು ತಪ್ಪು ಪರಿಸರದಲ್ಲಿ ಬದುಕುತ್ತಿದ್ದೇನೆಯೇ ಎಂದೇ ಅನ್ನಿಸುತ್ತಿತ್ತು. ಕಾರ್ಮಿಕರನ್ನು ನಿರಂತರವಾಗಿ ಶೋಷಿಸಲಾಗುತ್ತಿದೆ; ಮೇಲ್ಜಾತಿಯವರು ಭಯೋತ್ಪಾದಕರಂತೆ ಮುಗಿಬಿದ್ದು ಕೆಳಜಾತಿಯವರನ್ನು ನಿರ್ನಾಮ ಮಾಡುತ್ತಿದ್ದಾರೆ ಎಂಬ ಘನಘೋರವಾದ ವಿಚಾರಗಳೇ ಅಲ್ಲಿ ಬರುತ್ತಿದ್ದದ್ದು. ಇಂಥದೊಂದು ವಿಚಾರಧಾರೆ ಅದೆಷ್ಟು ಮುಗ್ಧಮನಸ್ಸುಗಳನ್ನು ಬದಲಿಸಿತು; ಅದೆಷ್ಟು ಐಎಎಸ್ ಅಧಿಕಾರಿಗಳು ಇಂತಹ ಪತ್ರಿಕೆಗಳನ್ನು ಓದಿಯೇ ಪಾಸಾದರು; ಎಷ್ಟು ಲೇಖಕರು ಈ ವಿಚಾರಗಳನ್ನೇ ಬರೆದು ಬರೆದು ಪ್ರಶಸ್ತಿ-ಪುರಸ್ಕಾರ ಪಡೆದು ಐಷಾರಾಮಿಯಾಗಿ ಬದುಕಿಹೋದರು ಎಂದೆಲ್ಲ ಯೋಚಿಸಿದರೆ ಆಘಾತವಾಗುತ್ತದೆ. ನೆಹರೂ ಯುಗದಲ್ಲಿ ಶುರುವಾದ ಈ ಅಂಟುಜಾಡ್ಯ ಇವತ್ತೂ ನಮ್ಮನ್ನು ಬಾಧಿಸುತ್ತಿದೆ. 2010ರವರೆಗೂ ಈ ಮಾಧ್ಯಮರಂಗ ಇಂಥದೊಂದು ಕಾಲ್ಪನಿಕ ಸಿದ್ಧಾಂತಗಳ ಸ್ವರ್ಗದಲ್ಲಿ ಆರಾಮವಾಗಿತ್ತು.
ಇವರ ಕೋಟೆಯನ್ನು ಮೊದಲು ಕೆಡವಿ ಹಾಕಿದ್ದು ನರೇಂದ್ರ ಮೋದಿ. 2010ರ ಹೊತ್ತಿಗೆ, ಈ ದೇಶದಲ್ಲಿ ಮುಂದೆ ಕಾಂಗ್ರೆಸ್ ಆಳುವುದಿಲ್ಲ; ಮೋದಿಯ ಹವಾ ಹುಟ್ಟಿಕೊಳ್ಳುತ್ತಿದೆ ಎಂಬುದನ್ನು ಮಾಧ್ಯಮ ಕಂಡುಕೊಂಡಿತು. ಇದು ಕೆಲವರಿಗೆ ನುಂಗಲಾರದ ತುತ್ತಾಗಿತ್ತು. ಸಾಮಾಜಿಕ ಜಾಲತಾಣಗಳು ಪ್ರಭಾವಿಯಾಗಿ ಬೆಳೆಯುತ್ತಿದ್ದ ಆ ಸಂದರ್ಭದಲ್ಲಿ ಮೋದಿ ಪತ್ರಿಕೆಗಳನ್ನು ಉಪೇಕ್ಷೆ ಮಾಡಿ ಜನರನ್ನು ನೇರವಾಗಿ ಜಾಲತಾಣಗಳಲ್ಲಿ ಸಂಪರ್ಕಿಸತೊಡಗಿದರು. ಬಹುಶಃ ಎಪ್ಪತ್ತು ವರ್ಷ ಸುಳ್ಳುಪಳ್ಳು ಓದಿ, ಕಾಂಗ್ರಸ್ಸಿನ ಹೀನಾಯ ಸ್ಥಿತಿಯಿಂದ ರೋಸಿಹೋಗಿ ಜನರೂ ಬುದ್ಧಿ ಕಲಿತಿದ್ದರು ಎಂದು ಕಾಣುತ್ತದೆ. ಹಾಗಾಗಿ ಪತ್ರಿಕೆಗಳ ಎಡಪಂಥೀಯ ವಿಚಾರಗಳನ್ನು ಸಾರಾಸಗಟಾಗಿ ವಿರೋಧಿಸತೊಡಗಿದರು. ಜೊತೆಗೆ, ಬಲಪಂಥೀಯ ಅನಿಸಿಕೆಗಳಿಗೆ ಕೂಡ ದೊಡ್ಡ ವೇದಿಕೆ ಕೊಡುವ ಪತ್ರಿಕೆಗಳು ಹುಟ್ಟಿಕೊಂಡವು. ಹೀಗಾಗಿ ನೆಹರೂ ವಂಶವನ್ನು ನೆಚ್ಚಿಕೊಂಡು ಬಂದಿದ್ದ; ಇದುವರೆಗೆ ಏಕಸ್ವಾಮ್ಯ ಪಡೆದಿದ್ದ ಪತ್ರಿಕೆಗಳಿಗೆ ಮತ್ತು ಟಿವಿ ಮಾಧ್ಯಮಗಳಿಗೆ ನಡುಕ ಹುಟ್ಟಿತು. ಹಾಗಾಗಿ ಮೋದಿಯ ತೆಗಳಿಕೆ ಕಮ್ಮಿ ಮಾಡಿ ಹೊಗಳಿ ಜನಕ್ಕೆ ಹತ್ತಿರವಾಗಲು ನೋಡಿದರು.
2014ರಲ್ಲಿ ನಡೆದ ಚುನಾವಣೆಯ ಫಲಿತಾಂಶ ನಾವು ನೋಡಿದ್ದೇವೆ. ಈ ದೇಶದಲ್ಲಿ ಜನಾಭಿಪ್ರಾಯ ರೂಪಿಸುವುದು ಮಾಧ್ಯಮ ಅಲ್ಲ ಎನ್ನುವುದು ಈಗ ಸಾಬೀತಾಗಿದೆ. ಹೊಸ ಸರಕಾರ ಹಿಂದಿನಂತೆಯೇ ಪತ್ರಕರ್ತರಿಗೆ ಮಣೆ ಹಾಕುತ್ತದೆ, ಸೌಲಭ್ಯ ಒದಗಿಸುತ್ತದೆ ಎಂದೆಲ್ಲ ಮಾಧ್ಯಮದ ಮಂದಿ ಕನಸು ಕಂಡಿದ್ದರು. ಆದರೆ ಈಗಿನ ಹೊಸ ಸರಕಾರ ಮಾಧ್ಯಮವನ್ನು ಹತ್ತಿರ ಸೇರಿಸದೆ ಕೆಲಸ ಮಾಡುತ್ತಿದೆ. ಮೊನ್ನೆ ಮೊನ್ನೆ ಭಾರತದ ಪ್ರಧಾನಿಯ ಪಾಕಿಸ್ತಾನ ಭೇಟಿ ಕೂಡ ಮಾಧ್ಯಮಗಳಿಗೆ ಗೊತ್ತಿರಲಿಲ್ಲ. ಮಾಧ್ಯಮರಂಗದ ದೊರೆಗಳಂತಿದ್ದ ರಾಜ್’ದೀಪ್ ಸರ್ದೇಸಾಯಿ, ಬರ್ಕಾ ದತ್, ಸಾಗರಿಕಾ ಘೋಷ್ ಮುಂತಾದವರು ಈಗ ಜನರೆದುರು ಬೆತ್ತಲಾಗಿದ್ದಾರೆ. ಅಮೆರಿಕಾದಲ್ಲಿ ಮೋದಿಯ ಭಾಷಣದ ವೇಳೆ ಸರ್ದೇಸಾಯಿ ಕಿಚಾಯಿಸುವ ಪ್ರಶ್ನೆಗಳನ್ನು ಕೇಳಿ ಜನರಿಂದಲೇ ಹೊಡೆತ ತಿಂದದ್ದು ದೊಡ್ಡ ಸುದ್ದಿಯಾಯಿತು. ಹೀಗೆ ಸಂಪೂರ್ಣವಾಗಿ ಬುಡ ಕಿತ್ತುಹೋಗಿ ಒರಗಿರುವ ಎಡಪಂಥೀಯ ವಿಚಾರಧಾರೆಯ ಪತ್ರಕರ್ತರಿಗೆ ಈಗ ಹೇಗಾದರೂ ಮೋದಿ ಅಥವಾ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಅನಿವಾರ್ಯತೆ ಎದುರಾಗಿದೆ. ಮೋದಿಯನ್ನು ಹೊಗಳಿ ಬರೆದರೆ ಏನೂ ಸಿಗುವುದಿಲ್ಲ; ಕನಿಷ್ಠಪಕ್ಷ ದೂರಿದರೆ ವಿಪಕ್ಷಗಳ ಕಡೆಯಿಂದ ಲಾಭವಾದೀತು ಎಂಬ ಲೆಕ್ಕಾಚಾರದಲ್ಲಿ ಅವರಿದ್ದಾರೆ.
ಇನ್ನೊಂದು ಸಂಗತಿ ಏನೆಂದರೆ, ಮೋದಿಯನ್ನು ಹೊಗಳುವವರ ಜೊತೆ ಸೇರಿಕೊಂಡರೆ ನೀವು ಹತ್ತರಲ್ಲಿ ಹನ್ನೊಂದನೆಯವರಾಗುತ್ತೀರಿ. ಆದರೆ ಹೆಚ್ಚು ಪ್ರಸಿದ್ಧಿ, ಅದು ಕು-ಪ್ರಸಿದ್ಧಿಯಾದರೂ ಸಿಗುವುದು ನೀವು ಇಂಥ ಭಕ್ತರಿಂದ ಅಂತರ ಕಾಯ್ದುಕೊಂಡಾಗಲಷ್ಟೇ. ಮೋದಿಯನ್ನು ಬಯ್ಯಿರಿ; ಕೂಡಲೇ ಮೋದಿ ಅಭಿಮಾನಿಗಳು ನಿಮಗೆ ಪ್ರತಿಕ್ರಿಯೆ ಕೊಡುತ್ತಾರೆ; ಟ್ರೋಲ್ ಮಾಡುತ್ತಾರೆ. ಯೇನಕೇನ ಪ್ರಕಾರೇಣ ಪ್ರಸಿದ್ಧ ಪುರುಷೋಭವ ಎನ್ನುವವರಿಗೆ ಇನ್ನೇನು ಬೇಕು!
ಇವರಿಗೆ ಮೋದಿ ಪ್ರಧಾನಿಯಾಗುವುದನ್ನು ತಪ್ಪಿಸಲಂತೂ ಆಗಲಿಲ್ಲ. ಪ್ರಧಾನಿಯಾದ ಮೇಲೆ ಈ ದೇಶದಲ್ಲಿ ರಕ್ತಪಾತ ಆಗುತ್ತದೆ ಎಂದು ಭಾವಿಸಿದ್ದರು. ಕೋಮುಘರ್ಷಣೆಗಳು ಜಾಸ್ತಿಯಾಗುತ್ತವೆ; ಎಲ್ಲೆಡೆ ಜಾತಿವೈಷಮ್ಯ ಹೆಡೆಯಾಡುತ್ತದೆ ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಹೊಸ ಸರಕಾರ ಬಂದು ಒಂದೂವರೆ ವರ್ಷ ಕಳೆದರೂ ಏನೊಂದೂ ಗಲಭೆ ನಡೆಯದಿದ್ದಾಗ ಸಹಜವಾಗಿಯೇ ಇವರು ಅಧೀರರಾದರು. ನೈತಿಕ ಮಾಧ್ಯಮ ಇಂದು ಇಲ್ಲ. ಈಗೇನಿದ್ದರೂ ಸೆನ್ಸೇಶನಲ್ ಸುದ್ದಿಗೆ ಮಾತ್ರ ಆದ್ಯತೆ. ಸಿಡಿಲು ಬಡಿದು ಮಹಿಳೆ ಸಾವು ಎಂದು ಬರೆದರೆ ಯಾರೂ ಓದುವುದಿಲ್ಲ. ಅಗ್ರಹಾರಕ್ಕೆ ಬರುತ್ತಿದ್ದ ದಲಿತ ಮಹಿಳೆಗೆ ಸಿಡಿಲು ಬಡಿದು ಸಾವು ಎಂದರೆ ಎಲ್ಲರೂ ಕಣ್ಣರಳಿಸಿ ಓದುತ್ತಾರೆ. ಹಾಗಾಗಿ ಇಂಥ ಪ್ರಚೋದನಾತ್ಮಕ ಸುದ್ದಿಗಳು ಸಿಗದೇ ಹೋಗಿ ಮಾಧ್ಯಮ ರಂಗ ವ್ಯಗ್ರವಾಗಿತ್ತು. ಹಲವು ಶಕ್ತಿಗಳು ಒಟ್ಟಾಗಿ ಕೊನೆಗೆ ದಾದ್ರಿ ಪ್ರಕರಣವನ್ನು ಬಳಸಿಕೊಂಡವು. ಅಕ್ಟೋಬರಿನಲ್ಲಿ ಅಸಹಿಷ್ಣುತೆ ಎಂಬ ಪದವನ್ನು ಸೃಷ್ಟಿಸಿದವರೇ ಬುದ್ಧಿಜೀವಿಗಳು. ಯಾಕೆಂದರೆ ದೆಹಲಿ, ಮುಂಬಯಿಯಂಥ ನಗರಗಳಲ್ಲಿ ನೂರಲ್ಲ; ಸಾವಿರಾರು ಸಂಖ್ಯೆಯಲ್ಲಿ ಸರಕಾರೀ ಬಂಗಲೆಗಳನ್ನು ಪುಗಸಟ್ಟೆ ಪಡೆದು ಜೀವನ ಕಳೆಯುತ್ತಿದ್ದವರನ್ನು ಮನೆ ಬಿಟ್ಟು ಹೊರಡಿ ಎಂದು ಹೇಳಲಾಯಿತು. ಉದಾಹರಣೆಗೆ ಚಿತ್ರ ಕಲಾವಿದ ಜತಿನ್ ದಾಸ್ ದೆಹಲಿಯಲ್ಲಿ ಒಂದು ಸರಕಾರೀ ಬಂಗಲೆಯಲ್ಲಿ ಹಲವು ವರ್ಷಗಳಿಂದ ನಯಾಪೈಸೆ ಕೊಡದೆ ವಾಸವಾಗಿದ್ದರು. “ಇದು ಸರಕಾರದ ಸ್ವತ್ತು, ನೀವಿದನ್ನು ಖಾಲಿ ಮಾಡಬೇಕು” ಎಂದು ನೋಟೀಸ್ ಸಿಕ್ಕಿದ ಮರುದಿನ ಜತಿನ್ ದಾಸ್ ಮಗಳು ನಂದಿತಾ ದಾಸ್ ಪತ್ರಿಕಾಗೋಷ್ಟಿ ಕರೆದು “ದೇಶದಲ್ಲಿ ಅಸಹಿಷ್ಣುತೆ ಕಾಳ್ಗಿಚ್ಚಿನಂತೆ ಹರಡುತ್ತಿದೆ” ಎಂದರು. ಅವರು ಮಾಡಿದ ಎರಡೇ ಎರಡು ಕೆಲಸಗಳೆಂದರೆ, ಪತ್ರಕರ್ತರೆದುರು ಅಳುತ್ತ ಕೂದಲು ಕಿತ್ತುಕೊಳ್ಳಲಿಲ್ಲ ಮತ್ತು ತನ್ನ ತಂದೆಗೆ ನೋಟೀಸ್ ಬಂದ ವಿಚಾರ ಹೇಳಲಿಲ್ಲ, ಅಷ್ಟೆ!
ಅಕ್ಟೋಬರ್’ನಲ್ಲಿ ದೇಶಕ್ಕೆ ದೇಶವೇ ಈ ಅಸಹಿಷ್ಣುತೆಯ ಚರ್ಚೆಯಲ್ಲಿ ಮಿಂದೇಳುತ್ತಿದ್ದಾಗ, ದೇಶದ ಜನರಿಗೆ ಈ ಚರ್ಚೆ ಸಾಕಪ್ಪಾ ಸಾಕು ಅನ್ನಿಸಿದ್ದಾಗ, ಹಿಂದು ಪತ್ರಿಕೆಯ ಛೇರ್ಮನ್ ಎನ್. ರಾಮ್ ಏನು ಹೇಳಿದರು ಗೊತ್ತೆ? ಪತ್ರಕರ್ತರು ಈ ಅಸಹಿಷ್ಣುತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಅದು ಎಷ್ಟೊಂದು ದೊಡ್ಡ ಸಮಸ್ಯೆ ಎನ್ನುವುದನ್ನು ಇನ್ನೂ ತಿಳಿಯದೆ, ಏನೋ ಸಣ್ಣ ಮಾತು ಅಂದುಕೊಂಡುಬಿಟ್ಟಿದ್ದಾರೆ. ಅವರು ಇನ್ನೂ ಹೆಚ್ಚಾಗಿ ಈ ವಿಷಯದಲ್ಲಿ ಬರೆಯಬೇಕು – ಎಂದರು! ಮುಂದುವರಿದು ಅವರು ಹೇಳಿದ ಮಾತು – ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಆಗಿರುವ ಎಲ್ಲಾ ಸಣ್ಣ ಮತ್ತು ದೊಡ್ಡ ಗಲಭೆಗಳಲ್ಲಿ ಸಂಘ ಪರಿವಾರದ ಕೈ ಇದೆ. ನೋಡಿ, ಒಂದು ರಾಷ್ಟ್ರೀಯ ಪತ್ರಿಕೆಯ ಮುಖ್ಯಸ್ಥ; ಹಲವು ದಶಕಗಳ ಕಾಲ ಸಂಪಾದಕನಂಥ ಜವಾಬ್ದಾರಿ ಸ್ಥಾನದಲ್ಲಿದ್ದವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಂತೆ ಹೇಗೆ ಒಂದೇ ಒಂದು ವಾಕ್ಯದಲ್ಲಿ ತೀರ್ಪು ಕೊಟ್ಟುಬಿಟ್ಟರು! ಈ ಮನಸ್ಥಿತಿಯೇ ಅಸಹಿಷ್ಣುತೆಯ ಹಿಂದೆ ಕೆಲಸ ಮಾಡಿದ್ದು. ಬಿಹಾರ ಚುನಾವಣೆ ಆದ ಮೇಲೆ ಇವರಿಗೆ ಎಲ್ಲೂ ಅಸಹಿಷ್ಣುತೆ ಕಾಣಿಸುತ್ತಿಲ್ಲ! ಎಲ್ಲವೂ ಒಂದೇ ಸಲಕ್ಕೆ ಶಾಂತವಾಗಿ ಹೋಗಿದೆ! ಇದು ನಾವು ಕೇಳಿದ ತೋಳ ಬಂತು ತೋಳ ಎನ್ನುವ ಕತೆಯಲ್ಲದೆ ಬೇರೇನೂ ಅಲ್ಲ. ನಮ್ಮ ಇಡೀ ದೇಶದ ಮಾಧ್ಯಮ ವ್ಯವಸ್ಥೆ ಇನ್ನೂ ಒಂದು ನಿರ್ದಿಷ್ಟ ವಿಚಾರದವರ ಕೈಯಲ್ಲೇ ಇದೆ ಎನ್ನುವುದು ದುರದೃಷ್ಟದ ಸಂಗತಿ.
ನಮ್ಮ ಕರ್ನಾಟಕದ ಸಂಗತಿ ತೆಗೆದುಕೊಳ್ಳಿ. ವಚನ ಸಾಹಿತ್ಯದ ಮೇಲೆ ನಡೆಯುತ್ತಿದ್ದ ಒಂದು ಚರ್ಚೆಯಲ್ಲಿ ಒಂದು ಪ್ರತಿಷ್ಠಿತ ಪತ್ರಿಕೆ ಒಂದು ಬಣದ ಲೇಖನಗಳನ್ನು ಪ್ರಕಟಿಸದೆ, ಏಕಪಕ್ಷೀಯವಾದ ಚರ್ಚೆ ನಡೆಸುತ್ತಾ ಹೋಯಿತು. ಇದೇ ಪತ್ರಿಕೆಯಲ್ಲಿ, ಮೂಡಬಿದ್ರೆಯ ನುಡಿಸಿರಿಗೆ ಬಂದಿದ್ದ ಪತ್ರಕರ್ತನಿಗೆ “ಯಾವ ವಿಷಯವನ್ನೂ ಹೆಚ್ಚು ಬೆಳೆಸಬೇಡಿ. ಕುಂವೀಯವರು ಅಸಹಿಷ್ಣುತೆ ಬಗ್ಗೆ ಮಾತಾಡಿದ್ರಲ್ಲ, ಅದನ್ನು ಮಾತ್ರ ಹೈಲೈಟ್ ಮಾಡಿ” ಎಂಬ ಸಂದೇಶ ಸಂಪಾದಕರಿಂದ ಹೋಯಿತು! ಫೇಸ್ಬುಕ್ಕಿನಲ್ಲಿ ಒಂದು ಸುಳ್ಳುಖಾತೆಯಿಂದ ಇನ್ನೊಂದು ಸುಳ್ಳುಖಾತೆಗೆ ಸಂದೇಶ ಹೋದದ್ದನ್ನೇ ಮುಂದಿಟ್ಟುಕೊಂಡು ಕೆಲವರು ರಾಷ್ಟ್ರೀಯಮಟ್ಟದ ಪ್ರಚಾರ ಪಡೆದರು. ಆದರೆ ಒಬ್ಬ ವಿಶ್ವವಿದ್ಯಾಲಯದ ಸಂಶೋಧಕ ಒಬ್ಬ ಗೃಹಿಣಿಗೆ ಅಸಭ್ಯ ಭಾಷೆಯಲ್ಲಿ ಕೀಟಲೆ ಮಾಡಿದ್ದು ಯಾವ ಪತ್ರಿಕೆಯಲ್ಲೂ ದೊಡ್ಡ ಸುದ್ದಿಯಾಗಲಿಲ್ಲ. ಇವತ್ತಿಗೂ ಒಬ್ಬ ಪ್ರಭಾವಿ ಪತ್ರಕರ್ತ ರಾಜಕಾರಣಿ, ಕನ್ನಡದ ಕೆಲವು ಪತ್ರಿಕೆಗಳ ಆಫೀಸುಗಳಿಗೆ ದಿನಾ ಹೋಗಿ ಹಲವು ಗಂಟೆಗಳನ್ನು ಸಂಪಾದಕರ ಜೊತೆ ಕಳೆಯುತ್ತಾರೆ. ಇವರೆಲ್ಲ ಯಾವುದೋ ರೋಗಿಷ್ಠ ಮನಸ್ಥಿತಿಯಿಂದ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಮತ್ತೆಮತ್ತೆ ಉದಾಹರಣೆಗಳು ಸಿಗುತ್ತಿವೆ. ಪತ್ರಿಕಾರಂಗದಲ್ಲಿ ಕ್ಯಾನ್ಸರ್ ಗೆಡ್ಡೆಗಳಂತೆ ಇವರು ಪ್ರಭುತ್ವದ ಬಲದಲ್ಲಿ ಬೆಳೆಯುತ್ತಿದ್ದಾರೆ. ಇವತ್ತಿನ ಪರಿಸ್ಥಿತಿ ಎಷ್ಟು ಕೆಟ್ಟು ಹೋಗಿದೆಯೆಂದರೆ ಸತ್ಯ ಹೇಳುತ್ತೇನೆಂಬ ಒಂದೇ ಕಾರಣಕ್ಕೆ ನಾನು ದಿನಕ್ಕೆ ಐದಾರು ಕಡೆಗಳಿಂದ ಬೆದರಿಕೆಗಳನ್ನು ಎದುರಿಸಬೇಕಾಗಿದೆ. ಕೆಲವು ಪತ್ರಿಕೆಗಳು ನನ್ನ ಮಕ್ಕಳಕತೆಯನ್ನು ಕೂಡ ಪ್ರಕಟಿಸುವುದಿಲ್ಲ! ಅಸಹಿಷ್ಣುತೆ ಎನ್ನುವುದು ನಿಜವಾಗಿಯೂ ಇದ್ದರೆ ಅದು ಈ ಪತ್ರಿಕೆಗಳಲ್ಲೇ ಎಂದು ನನ್ನ ಅನಿಸಿಕೆ. ಮಾಧ್ಯಮರಂಗ ಒಬ್ಬ ಮನುಷ್ಯನನ್ನು ಅದೆಷ್ಟು ನೀಚ ಮಟ್ಟಕ್ಕೆ ಎಳೆದುಕೊಂಡು ಹೋಗಬಹುದು; ಪತ್ರಿಕಾರಂಗದಲ್ಲಿ ದುಷ್ಟತನವನ್ನೇ ಮೈಗೂಡಿಸಿಕೊಂಡು ಬೆಳೆದವರ ಅಂತಿಮ ಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ನಾವೀಗ ಕರ್ನಾಟಕದಲ್ಲಿ ನೋಡುತ್ತಿದ್ದೇವೆ. ಇದು ಬಹುಶಃ ಕ್ಯಾನ್ಸರಿನ ಅಂತಿಮ ಹಂತ ಇರಬಹುದು.
ಇಷ್ಟೆಲ್ಲ ಸಮಸ್ಯೆಗಳನ್ನು ವಿವರಿಸಿ ಪರಿಹಾರದ ಮಾತುಗಳನ್ನು ಹೇಳದಿದ್ದರೆ ನನ್ನ ಮಾತು ಅಪೂರ್ಣವಾಗುತ್ತದೆ. ಅಸಹಿಷ್ಣುತೆ ಇದೆ ಎಂದವರು ಕೇವಲ ಅಷ್ಟು ಮಾತ್ರ ಹೇಳಿ ಸುಮ್ಮನಾಗಿದ್ದರೆ ತೊಂದರೆ ಇರಲಿಲ್ಲವೇನೋ. ಆದರೆ ಇವರು ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ. ಕೇವಲ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಹೀಗೆ ತನ್ನ ಮಾತೃಭೂಮಿಯನ್ನೇ ಆಡಿಕೊಂಡು ನಗುವ ವ್ಯಕ್ತಿಗಳು ನಿಜವಾದ ಅರ್ಥದಲ್ಲಿ ದೇಶದ್ರೋಹಿಗಳು. ಇವರನ್ನು ಮಟ್ಟಹಾಕಲು ಸಹಿಷ್ಣುಗಳೇ ಎದ್ದು ನಿಲ್ಲಬೇಕಾಗಿದೆ. ಸ್ಥಾಪಿತ ಸಿದ್ಧಾಂತಗಳಿಗೆ ಅಂಟಿಕೂತ ಮಾಧ್ಯಮವನ್ನು ನಿರ್ಲಕ್ಷಿಸಿ ಜನ ತಮ್ಮ ಭಾವನೆಗಳ ಅಭಿವ್ಯಕ್ತಿಗೆ ಹೊಸ ಮಾಧ್ಯಮವನ್ನು ಹುಟ್ಟಿಸಿಕೊಳ್ಳಬೇಕಾಗಿದೆ. ಕಳೆದ ಒಂದು ವರ್ಷದಲ್ಲಿ ನಮ್ಮ ಎಲ್ಲಾ ಚಿಂತನೆಗಳಿಗೂ ಬಲ ಕೊಟ್ಟದ್ದು ಆನ್ಲೈನ್ ವೇದಿಕೆಗಳು. ರೀಡೂ ಅಥವಾ ನಿಲುಮೆಯಂಥ ವೇದಿಕೆಗಳು ಇಲ್ಲದಿದ್ದರೆ ನಾನು ಅದೆಷ್ಟೋ ಸಂಗತಿಗಳನ್ನು ಹಂಚಿಕೊಳ್ಳಲು ಸಾಧ್ಯವೇ ಇರಲಿಲ್ಲ. ಚಂಪಾ, ಕುಂವೀ ಮೊದಲಾದವರು ಅಸಹಿಷ್ಣುತೆಯ ಬಗ್ಗೆ ಅಪಸ್ವರ ಎತ್ತಿದಾಗ; ಭಗವಾನ್ ಎಂಬ ಅಪಾತ್ರರಿಗೆ ಸರಕಾರ ಪ್ರಶಸ್ತಿ ದಾನ ಮಾಡಿದಾಗ; ಪ್ರಶಸ್ತಿ ವಾಪಸಿ ಪ್ರಹಸನ ತನ್ನ ಉತ್ತುಂಗದಲ್ಲಿದ್ದಾಗ – ಈ ಎಲ್ಲ ಅಪಸವ್ಯಗಳನ್ನು ಬಗ್ಗುಬಡಿದು ಜನಾಭಿಪ್ರಾಯವನ್ನು ರೂಪಿಸಿದ್ದು, ಕೆಲವೇ ಕೆಲವು ನಿಷ್ಪಕ್ಷಪಾತಿ ಪತ್ರಿಕೆಗಳು ಮತ್ತು ಆನ್ಲೈನ್ ವೇದಿಕೆಗಳು. ದಾದ್ರಿಯಾಗಲಿ, ಬಟ್ಟೆ ಬಿಚ್ಚಿದ ಪ್ರಕರಣವಾಗಲಿ ಮೊದಲು ಅವುಗಳ ಸತ್ಯ ಅನಾವರಣಗೊಂಡದ್ದು ಆನ್ಲೈನಿನ ಜಾಲತಾಣಗಳಲ್ಲಿ. ಹಾಗಾಗಿ ನಾವಿಂದು ಸತ್ಯ ಏನು ಎಂದು ಹೇಳುವುದಕ್ಕೆ ಈ ಮಾಧ್ಯಮಗಳನ್ನು ದೊಡ್ಡ ಮಟ್ಟದಲ್ಲಿ ಉಪಯೋಗಿಸಿಕೊಳ್ಳಬೇಕಾಗಿದೆ. ಇದೊಂದು ರೀತಿಯಲ್ಲಿ, ಪರ್ಯಾಯ ಮಾಧ್ಯಮವಾಗಿ ಬೆಳೆದು ನಿಲ್ಲುವ ಕೆಲಸ. ಎರಡು ವರ್ಷದ ಹಿಂದೆ, ಸರಕಾರದ ಪ್ರಮುಖ ವ್ಯಕ್ತಿಗಳೊಬ್ಬರು ಇಂಥವನ್ನೆಲ್ಲ ಮುಚ್ಚಿಸ್ರೀ ಎಂದದ್ದನ್ನು ನೋಡಿದರೆ, ಇವರಿಗೆ ಜನರ ಅಭಿಪ್ರಾಯಗಳ ಬಗ್ಗೆ ಎಷ್ಟೊಂದು ಹೇವರಿಕೆ ಇದೆ ಎನ್ನುವುದು ಗೊತ್ತಾಗುತ್ತದೆ. ಇಷ್ಟು ವರ್ಷ ತಮಗೆ ಸರಿ ಕಂಡದ್ದನ್ನು ತಮ್ಮ ಮೂಗಿನ ನೇರಕ್ಕೆ ಬರೆದು ಜನರನ್ನು ದಿಕ್ಕು ತಪ್ಪಿಸಿ ಅಥವಾ ಕತ್ತಲೆಯಲ್ಲಿಟ್ಟು ಅಧಿಕಾರ ಹಿಡಿದಿದ್ದವರ ಕಂತೆಬೊಂತೆಗಳು ಜಗಜ್ಜಾಹೀರಾಗುತ್ತಿರುವುದೇ ಅಸಹಿಷ್ಣುತೆಯ ಮೂಲ. ಅವರ ಈ ಅಸಹಿಷ್ಣುತೆ ಇನ್ನಷ್ಟು ಮತ್ತಷ್ಟು ಹೆಚ್ಚಾಗಿ ಸತ್ಯಗಳೆಲ್ಲ ಹೊರಗೆ ಬರುವಂತೆ ಅತ್ಯಂತ ಸಹಿಷ್ಣುಗಳಾಗಿ ನಾವು ನಮ್ಮ ದಾರಿಯಲ್ಲಿ ನಡೆಯಬೇಕಾಗಿದೆ. ದೇಶದ ಘನತೆಗೆ ಕಲ್ಲೆಸೆದು, ಜನರನ್ನು ಅಪಹಾಸ್ಯ ಮಾಡಿಕೊಂಡು ತಮಗೆ ಬೇಕಾದಂತೆ ಬರೆದುಕೊಳ್ಳುತ್ತ ದಿನ ತಳ್ಳುವ ಕಾಲ ಹೋಯಿತು ಎಂಬುದು ತಿಳಿದರಷ್ಟೇ ಅವರ ಅಸಹಿಷ್ಣುತೆ, ಆಟಾಟೋಪ ಎಲ್ಲ ತಹಬಂದಿಗೆ ಬಂದೀತು. ಅಲ್ಲಿಯವರೆಗೆ ಸಹಿಷ್ಣುಗಳಾಗಿ ಕಾಯೋಣ!
(ಇದು, ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ “ಸಹಿಷ್ಣುತಾ ಸಂವಾದ”ದಲ್ಲಿ ರೋಹಿತ್ ಚಕ್ರತೀರ್ಥ ಅವರು ಮಾಡಿದ ಭಾಷಣದ ಅಕ್ಷರ ರೂಪ)
Facebook ಕಾಮೆಂಟ್ಸ್