ನನ್ನೂರು ಶಿವಮೊಗ್ಗ . ಬೆಂಗಳೂರಿನಿಂದ ನನ್ನೂರಿಗೆ ಯಾವಾಗಲೂ ಬಸ್ಸಿನಲ್ಲೇ ನನ್ನ ಪ್ರಯಾಣ. ಅದೂ ರಾತ್ರಿ ಹೊತ್ತು ಮಾತ್ರ. ಯಾವ ಹುಡುಗನಾದರೂ ಬಸ್ಸಿನಲ್ಲಿ ಇಲ್ಲ ರೈಲಿನಲ್ಲಿ ಪ್ರಯಾಣ ಮಾಡೋಬೇಕಾದರೆ ಅದು ಒಬ್ಬನೇ , ದೇವರನ್ನ ಕೇಳಿಕೊಳ್ಳೋದು ಒಂದೇ ವರ. ಪಕ್ಕದಲ್ಲಿ ಒಂದು ಸುಂದರ ಹುಡುಗಿ ಬಂದು ಕುಳಿತುಕೊಳ್ಳಲಿ ಎಂದು. ನಾನೂ ಅದಕ್ಕೇನು ಹೊರತಲ್ಲ ಬಿಡಿ.
ಈ ಟಿನ್ ಫ್ಯಾಕ್ಟರಿ ಹತ್ತಿರದ ಟ್ರಾಫಿಕ್ ಎಂಬ ಮಹಾಸಾಗರ ದಾಟೋದು ಅಂದ್ರೆ ಅದೊಂತರ ಸಪ್ತ ಸಾಗರ ದಾಟಿದ ಹಾಗೇನೆ. ಅಂತು ಇಂತು ೨ ತಾಸುಗಳ ದೀರ್ಘ ಪ್ರಯಾಣದ ನಂತರ ಮೆಜೆಸ್ಟಿಕ್ ಎಂಬ ಮಾಯಾಲೋಕಕ್ಕೆ ಪ್ರವೇಶ ಪಡೆದಿದ್ದೆ. ಹಂಗು ಹಿಂಗು ಹಿಂದೆ ಮುಂದೆ ಅಲೆದು ಶಿವಮೊಗ್ಗ ಬಸ್ ಹುಡುಕಿ ಹತ್ತಿ ಕುತ್ಕೊಬೇಕಾದ್ರೆ ಸಾಕಾಗಿ ಹೋಗಿತ್ತು. ನಿದ್ದೆ ಮಂಪರು ಹತ್ತಿತ್ತು.
” ಹೀಗೆ ಮೊಬೈಲ್ ನಲ್ಲಿ ಚಾಟ್ ಮಾಡ್ತಾ ಕೂತೋನಿಗೆ ಪಕ್ಕದಲ್ಲಿ ಯಾರೋ ಬಂದು ಕೂತ ಹಾಗಾಯಿತು. ಯಾರೋ ಇರಬಹುದು ಅನ್ಕೊಂಡು ಸುಮ್ನೆ ನನ್ ಪಾಡಿಗ್ ನಾನು ಚಾಟ್ ಮಾಡ್ತಾ ಕೂತಿದ್ದೆ. ಪಕ್ಕದಲ್ಲಿ ಕುಳಿತವರು ಯಾರಿಗೋ ಕಾಲ್ ಮಾಡಿ ಮಾತಾಡ ತೊಡಗಿದರು. ಆ ಧ್ವನಿ ಹಾಗೆ ಕಿವಿ ಮೇಲೆ ಬಿದ್ದ ಕೂಡ್ಲೇ ಒಮ್ಮೆಲೇ ಕಿವಿ ನೆಟ್ಟಗಾಯಿತು. ಹೌದು ಯಾವುದೊ ಹುಡುಗಿಯ ಮಧುರವಾದ ಧ್ವನಿ. ಗಕ್ಕನೆ ತಿರುಗಿ ನೋಡಿದೆ. ಹೌದು ನಿಜವಾಗಿಯೂ ಹುಡುಗಿ. ಅವಳ ಮುಂಗುರುಳು ಮೊಗವನ್ನು ಮುಚ್ಚಿತ್ತು. ಹಾಗು ಹೀಗೂ ಓರೆಗಣ್ಣಿನಲ್ಲಿ ಅವಳನ್ನ ನೋಡೋ ಆಟ ನಡೆದೇ ಇತ್ತು. ಅಂತು ಕಾಲ್ ಮುಗಿದ ನಂತರ ತನ್ನ ಮುಂಗುರುಳ ಸರಿಮಾಡಿಕೊಂಡು ನನ್ನೆಡೆಗೆ ತಿರುಗಿ ಒಂದು ಸಣ್ಣ ಕಿರು ನಗೆ ಬೀರಿದಳು. ಒಮ್ಮೆಲೇ ಮೈಯಲ್ಲೆಲ್ಲ ವಿದ್ಯುತ್ ಹರಿದಂಗೆ ಆಯ್ತು. ನನಗೋ ಸ್ವರ್ಗಕ್ಕೇ ಮೂರೇ ಗೇಣು. ಆ ಯಮ ಬಂದು ಏನಾದರೂ ನಿನ್ ಪ್ರಾಣ ತಗೊಂಡು ಹೋಗಲೇನು ಅಂತ ಕೇಳಿದ್ದಿದ್ರೆ ಬಹುಶಃ ಹೂಂ ಅಂತಿದ್ನೇನೋ ಆ ಖುಷೀಲಿ…!!
ಅವಳೇ ಮಾತು ಶುರು ಮಾಡಿದಳು. ಊರು ಕೇರಿ ಹಿಂದೆ ಮುಂದೆ ಎಲ್ಲಾ ಹೇಳಿದಮೇಲೆ ನನ್ನ ಬಗ್ಗೇನೂ ಸ್ವಲ್ಪ ವಿಚಾರಿಸಿದಳು. ಲಡ್ಡು ಬಂದು ಬಾಯಿಗೆ ಬಿತ್ತ ಅನ್ನೋ ಜಾಹಿರಾತಿನಂತೆ ಒಂದಲ್ಲ , ಎರಡಲ್ಲ , ಒಂದೇ ಸಲಕ್ಕೆ ಹತ್ತು ಹನ್ನೆರಡು ಬಾಯೊಳಗೆ ತುರುಕಿದಂತಾಗಿತ್ತು.
ಹಾಗೂ ಹೀಗೂ ಬಸ್ ಹೊರಟು ನೆಲಮಂಗಲ ದಾಟೋವರೆಗೂ ಮಾತುಕತೆ ಸಾಂಗವಾಗೆ ಸಾಗಿತ್ತು. ಕೈ ಗಡಿಯಾರ ರಾತ್ರಿ 12 ತೋರಿಸ್ತಾ ಇತ್ತು. ಅವಳು ನಿದ್ರೆ ಬರ್ತಾ ಇದೆ ಮಲ್ಕೊತೀನಿ ಗುಡ್ ನೈಟ್ ಎಂದು ಮಲಗಿದಳು. ಇಬ್ಬರೇ ಕುಳಿತುಕೊಳ್ಳಬಹುದಾದ ಆಸನವಾದ್ದರಿಂದ ಕೈ ಕೈ ತಾಗುತಿತ್ತು. ಅವಳೋ ನಿದ್ರಾದೇವಿಗೆ ಸಂಪೂರ್ಣ ಅರ್ಪಿಸಿಕೊಂಡಿದ್ದಳು. ನಾನು ನಿದ್ರೆ ಬಾರದೆ ಹೊರಳಾಡಲೂ ಆಗದೆ ಮುಂದಿನ ಜೀವನದ ಬಗ್ಗೆ ರಾತ್ರಿಯಲ್ಲೇ ‘ಹಗಲುಗನಸು’ ಕಾಣುತ್ತಾ ಇದ್ದೆ. 6 ತಾಸಿನ ಪ್ರಯಾಣದಲ್ಲಿ ,ನಾನೊಬ್ಬನೇ ಪ್ರಣಯದ ಬೇಗೆಯಲ್ಲಿ, ೫೦ ವರ್ಷದ ಸಂಸಾರವನ್ನು ಮುಗಿಸಿದ್ದೆ -ಕನಸಿನಲ್ಲೇ.
ಅಂತೂ ಶಿವಮೊಗ್ಗ ಬಂದೇ ಬಿಟ್ಟಿತ್ತು. ಒಲ್ಲದ ಮನಸ್ಸಿಂದ ಬಸ್ಸಿಂದ ಇಳಿದವನೇ ಆಕೆಯ ಹೆಸರು ಹಾಗು ಫೋನ್ ನಂಬರ್ ಇಸ್ಕೊಬೇಕು ಅಂತ ಯೋಚಿಸುತ್ತ ರಾತ್ರಿ ಕಂಡ ಹಗಲುಗನಸನ್ನು ನನಸು ಮಾಡುವ ಹುನ್ನಾರಕ್ಕೆ ಅಡಿಪಾಯ ಹಾಕುತ್ತಿದ್ದೆ.
ತನ್ನ ಚೀಲದೊಳಕ್ಕೆ ಕೈ ಹಾಕಿ ಮೊಬೈಲ್ ತೆಗೆದವಳು ಕೈಯಲ್ಲಿ ಏನೋ ಕಾಗದ ಹಿಡಿದು ಹತ್ತಿರ ಬಂದಳು. ನನಗೀಗ ಇಮ್ಮಡಿ ಧೈರ್ಯ ಬಂದಿತ್ತು .ಬಹುಶಃ ಅವಳೂ ನನ್ನ ನಂಬರ್ ಕೇಳಬಹುದೇನೋ ಅಂತ. ಹತ್ತಿರ ಬಂದವಳೇ ಕೈಯಲ್ಲಿ ಕಾಗದವನ್ನಿಟ್ಟು ಹೇಳಿದಳು. ನಿಮ್ಮ ಪರಿಚಯ ಆಗಿದ್ದು ಒಳ್ಳೇದಾಯ್ತು . ಇನ್ನು 15 ದಿನಕ್ಕೆ ನನ್ನ ಮದುವೆ ನೀವು ಖಂಡಿತ ಬರಬೇಕು ಅಂತ ಹೇಳಿ ಮುಂಗುರುಳನ್ನೊಮ್ಮೆ ಸರಿಮಾಡಿಕೊಂಡು ನಗುತ್ತಾ ನಡೆದೇ ಬಿಟ್ಟಳು. ಎದೆಗೆ ಯಾರೋ ಈಟಿಯಿಂದ ಇರಿದ ಅನುಭವ”.
ಹೋಗಬೇಡ ನಿಲ್ಲು ಏನೋ ಹೇಳಬೇಕು ಅಂತ ಒಂದೇ ಸಲ ಎಗರಿದವನಿಗೆ ತಾಕಿದ್ದು ಬಸ್ಸಿನ ಮೇಲ್ಭಾಗ. ಏನಾಗುತ್ತಿದೆ ಅಂತ ಅರ್ಥ ಮಾಡಿಕೊಳ್ಳೋವಷ್ಟರಲ್ಲಿ ಬಸ್ಸಿನ ಕ್ಲೀನರ್ ಬಂದು ಶಿವಮೊಗ್ಗ ಬಂದು ಆಗಲೇ 15 ನಿಮಿಷ ಆಗಿದೆ .ಬೇಗ ಇಳಿರಿ ಕ್ಲೀನ್ ಮಾಡಬೇಕು ಅಂತ ನನ್ನನ್ನೇ ಗುರಾಯಿಸುತ್ತಾ ನಿಂತಿದ್ದ..
ಸತ್ಯ..,
ಇದು ಕೇವಲ ಕಲ್ಪನೆ..
ಬಸ್ಸಿನಲ್ಲಿ ಹೋಗೋವಾಗ ಒಂದ್ಸಲನಾದ್ರೂ ಒಂದು ಹುಡುಗಿ ಬಂದು ಪಕ್ಕದಲ್ಲಿ ಕುತ್ಕೊಬಾರ್ದ ಅಂತ ಅನ್ನಿಸುತ್ತೆ.ಆದ್ರೆ ಇದುವರೆಗೂ ಆ ಭಾಗ್ಯ ಬಂದಿಲ್ಲ. ಬರಬಹುದೇನೋ ಅನ್ನೋ ನಿರೀಕ್ಷೆಯಲ್ಲಿ ಈ ಬರಹ……….
Sathyanarayana Y C, sathyanarayanayc@gmail.com
Facebook ಕಾಮೆಂಟ್ಸ್