X

ಪ್ರೀತಿಯಷ್ಟೇ ಅಲ್ಲ, ಜವಾಬ್ದಾರಿಯೂ ಇರಲಿ

ಪರಿಚಯದವರೊಬ್ಬರ ಮನೆಗೆ ಹೋಗಿದ್ದೆ, ಒಬ್ಬಳೇ ಮಗಳು, ಮುಖ ಊದಿಸಿಕೊಂಡು ಕುಳಿತಿದ್ದಳು. ಯಾಕೆ ಅಂದ್ರೆ ಬೇಜಾರು. ಅವರ ಮನೆಯಲ್ಲಿ ನಾಲ್ಕು ದೊಡ್ಡ ರಟ್ಟಿನ ಪೆಟ್ಟಿಗೆಗಳು ತುಂಬುವಷ್ಟು ಆಟಿಕೆಗಳಿವೆ. ಆ ಮಗು ಯಾವುದರ ಜೊತೆಯೂ ಆಡುವುದಿಲ್ಲ. ತಂದುಕೊಟ್ಟ ಒಂದು ಅರ್ಧಗಂಟೆಯಷ್ಟೇ  ಅದರ ಜೊತೆ ಆಟ ನಂತರ ಅದು ಬೇಜಾರು ಮೂಲೆಗೆ ಎಸೆತ. ಇನ್ಯಾವುದೋ ಟಿ.ವಿ ಯಲ್ಲೋ ಅಂಗಡಿಯಲ್ಲೋ ಕಂಡ ಹೊಸ ಆಟಿಕೆಯೆಡೆಗೆ ಗಮನ, ಬೇಕೆಂಬ ಕೋರಿಕೆ, ತಂದ ಮೇಲೆ ಅದರ ಪಾಡೂ ಅಷ್ಟೇ.

ತಕ್ಷಣ ನನ್ನ ಬಾಲ್ಯ ನೆನಪಾಯ್ತು. ಇದ್ದ ಕೆಲವೇ ಆಟಿಕೆಗಳ ಜೊತೆಗಿನ ಆಟ, ಅವುಗಳನ್ನು ಜೋಪಾನವಾಗಿಟ್ಟುಕೊಳ್ಳುವ ಪರಿ, ಅದರ ಜೊತೆಗಿನ ನಮ್ಮ ಅನುಬಂಧ ಎಲ್ಲವೂ ನೆನಪಾಯಿತು. ಆಟಿಕೆಗಳೆಂದರೆ ನಮಗೆ ಜಗತ್ತಿನ ಅಮೂಲ್ಯ ವಸ್ತುಗಳು.  ಅವೇ ನಮ್ಮ ಪ್ರಪಂಚ . ಒಂದೊಂದು ಹೊಸ ಆಟಿಕೆಯೋ, ಗೊಂಬೆಯೋ ತಂದುಕೊಟ್ಟರೆ ಒಂದು ರಾಜ್ಯವನ್ನೇ ಗೆದ್ದಂತಹ ಸಂಭ್ರಮ.ಮಕ್ಕಳು ಕೇಳಿದ್ದನ್ನೆಲ್ಲಾ ಕೊಡಿಸಿ, ಬಯಸಿದ್ದೆಲ್ಲಾ ಸಿಗುತ್ತೆ ಅನ್ನೋ ಭಾವನೆ ಅವರಲ್ಲಿ ಬೆಳಸಿ ನಾವು ಅವರಲ್ಲಿನ ಸಂವೇದನೆಗಳನ್ನ ನಾಶ ಪಡಿಸುತ್ತಿದ್ದೆವಾ, ಅವರಲ್ಲಿ ಆಸಕ್ತಿಯ ಬದಲು ಅನಾಸಕ್ತಿ ಮೂಡಲು ನಾವೇ ಕಾರಣರಾಗುತ್ತಿದ್ದೇವಾ? ಇದು ಪ್ರತಿಯೊಬ್ಬ ಪಾಲಕರು ಕೇಳಿಕೊಳ್ಳಬೇಕಾದ ಪ್ರಶ್ನೆ ಎನಿಸುತ್ತದೆ. ಹಾಗೆ ಉತ್ತರ ಕಂಡುಕೊಳ್ಳಲೆಬೇಕಾದ  ಅನಿವಾರ್ಯತೆ ಕೂಡಾ ನಿರ್ಮಾಣವಾಗಿದೆ.

ನಾವಂತೂ ಕಷ್ಟಪಟ್ಟು , ನಮ್ಮ ಮಕ್ಕಳಾದರೂ ಆರಾಮಾಗಿ ಇರಲಿ ಅನ್ನೋದು ಬಹಳಷ್ಟು ಜನರ ಪ್ರತಿಕ್ರಿಯೆ. ನಿಜ ಆದರೆ ನಿರಾಸೆ, ಕಷ್ಟ ಏನು ಅನ್ನುವುದು ಅವರಿಗೆ ಅರ್ಥಮಾಡಿಸದೆ ಬೆಳಸಿದರೆ ನಾಳೆ ಅವರು ಬದುಕನ್ನು ಸಮರ್ಥವಾಗಿ ಎದುರಿಸಬಲ್ಲರೆ?? ತಾನು ಕೇಳಿದ ವಸ್ತು ಕೊಡಿಸಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ಮಕ್ಕಳ ಮಾನಸಿಕತೆ ಗಮನಿಸಿದಾಗ ಅದರ ನೇರ ಹೊಣೆ ನಾವೇ ಎಂದು ಅನ್ನಿಸುವುದಿಲ್ಲವೇ.. ಒಂದು ಸಣ್ಣ ನಿರಾಸೆಯನ್ನೂ ಸಹಿಸದಷ್ಟೂ ಮಕ್ಕಳನ್ನು ಸೂಕ್ಷ್ಮ ರನ್ನಾಗಿಸುತ್ತಿದ್ದೆವಾ ?

ಹೀಗೊಂದು ಜಗಳಕ್ಕೆ ಸಾಕ್ಷಿಯಾಗಿದ್ದೆ. ಆಗತಾನೆ ಕಾಲೇಜ್’ಗೆ ಅಡಿಯಿಟ್ಟಿದ್ದ ಮಗ ದುಬಾರಿ ಬೈಕ್ ಒಂದಕ್ಕೆ ಬೇಡಿಕೆಯಿಟ್ಟಿದ್ದ. ಸದ್ಯಕ್ಕೆ ಇರೋ ಗಾಡಿ ಓಡಿಸು ಮತ್ತೆ ನೋಡೋಣ ಎಂದು ಅವರಮ್ಮ ಸಮಾಧಾನಿಸುತ್ತಿದ್ದರು. ತಕ್ಷಣ ಅವನು ಹೇಳಿದ್ದು ಒಂದೇ ಮಾತು, ಕೇಳಿದ್ದು ಕೊಡಿಸಲು ಸಾಧ್ಯವಿಲ್ಲವೆಂದ ಮೇಲೆ ನಿಮಗೆ ಮಕ್ಕಳ್ಯಾಕೆ ಬೇಕಿತ್ತು ? ಪ್ರಶ್ನಿಸಿ ಅವನು ಹೊರಗೆ ಹೋದ, ಕೇಳಿದ ಆ ತಾಯಿಯ ಎದೆಯಲ್ಲಿನ ಕಂಪನವನ್ನು ಅಳೆಯುವ ರಿಕ್ಟರ್ ಮಾಪಕವೆಲ್ಲಿದೆ? ಅವನು ಚೆನ್ನಾಗಿರಲಿ ನಾವು ಪಟ್ಟ ಕಷ್ಟ ಅವನು ಪಡೋದು ಬೇಡಾ ಅಂತ ನಾವು ಶಕ್ತಿಮೀರಿ ಬೆಳಸಿದರೆ ಹೇಗೆ ಮಾತಾಡ್ತಾನೆ ನೋಡಿ ಅಂತ ಅವರು ಕಣ್ಣೀರಾಗುತ್ತಿದ್ದರೆ ಏನೂ ಹೇಳಲೂ ತೋಚದೆ ನಾನು ಮೌನದ ಮೊರೆಹೋಗಿದ್ದೆ.

ಪ್ರೀತಿಯಿಂದ ಮಗುವನ್ನು ಸಾಕಿ ಸಲಹುವುದೆಂದರೆ ಅದು ಕೇಳಿದ್ದನ್ನೆಲ್ಲಾ ಕೊಡಿಸುವುದಲ್ಲ. ಬಹುಶಃ ಹೆಚ್ಚಿನ ಪಾಲಕರು ಎಡವುವುದೇ ಇಲ್ಲಿ. ಪ್ರೀತಿ ಅವರನ್ನು ಕುರುಡರನ್ನಾಗಿಸುತ್ತದೆ. ಕುರುಡ ಹೇಗೆ ತಾನೇ ಇನ್ನೊಬ್ಬರಿಗೆ ದಾರಿ ತೋರಬಲ್ಲ. ಚಿಕ್ಕಂದಿನಿಂದಲೇ ಮಕ್ಕಳಿಗೆ ವಾಸ್ತವಿಕತೆಯನ್ನು ಪರಿಚಯಿಸಬೇಕು. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಹಾಗು ಅದಕ್ಕೆ ಒಗ್ಗಿಕೊಂಡು ಬದುಕಲು ಕಲಿಸಬೇಕು. ನಿರಾಸೆ ಸೋಲು ಗೊತ್ತಾದಾಗಲೇ ಅದನ್ನು ಎದುರಿಸಲು ಮೀರಿ ಬೆಳೆಯಲು ಕಲಿಯೋದು. ಯಾವುದೂ ಸುಲಭವಾಗಿ ಸಿಗಲಾರದು ಅನ್ನೋ ಸತ್ಯ ಅರ್ಥವಾದಾಗಲೇ ಯಾವುದು ಆವಶ್ಯಕ ಅನ್ನೋದು ಅರಿವಾಗೋದು. ಕೇಳಿದ್ದನ್ನೆಲ್ಲಾ ಕೊಡಿಸುವುದರ ಮೂಲಕ ನಾವು ನಮ್ಮ ಮಕ್ಕಳಿಗೆ ಚಿಕ್ಕಂದಿನಿಂದಲೇ ಕೊಳ್ಳುಬಾಕತನವನ್ನು ಕಲಿಸುತ್ತಿದ್ದೇವೆ. ಯಾವುದು ಆವಶ್ಯಕ, ಯಾವುದು ಅನಾವಶ್ಯಕ ಎಂದು ಯೋಚಿಸುವ ಗೋಜಿಗೆ ಹೋಗದೆ ಕಂಡಿದ್ದೆಲ್ಲಾ ಖರೀದಿಸುವ ಗುಣ ನಮಗೆ ಅರಿವಿಲ್ಲದಂತೆ ಬೆಳಸುತ್ತಿದ್ದೇವೆ. ಅವೆರಡರ ನಡುವಿನ ಅಂತರವನ್ನು ನಿಧಾನವಾಗಿ ಮಾಯವಾಗಿಸುತ್ತಿದ್ದೇವೆ.

ಪಕ್ಕದ ಮನೆಯ ಪುಟ್ಟ ಪಾಪು ನರ್ಸರಿಗೆ ಹೋಗ್ತಾಳೆ, ಪ್ರತಿದಿನ ಬರುವಾಗ ಪೆನ್ಸಿಲ್ ಕಳೆದುಕೊಂಡು ಬರ್ತಾಳೆ ಅನ್ನೋದು ಅವರಮ್ಮನ ಕಂಪ್ಲೇಂಟ್. ಹೌದೇನೆ ಹೀಗೆ ಕಳೆದುಕೊಂಡು ಬಂದರೆ ಇನ್ನೊಂದು ತರಲು ದುಡ್ಡು ಬೇಕು ಅಲ್ವಾ ಎಲ್ಲಿಂದ ಬರುತ್ತೆ ದುಡ್ಡು ಅಂತ ಕೇಳಿದ್ರೆ ಅಯ್ಯೋ ಅತ್ತೆ ಎ.ಟಿ.ಎಂ ನಲ್ಲಿ ಕಾರ್ಡ್ ಹಾಕಿದ್ರೆ ದುಡ್ಡು ಬರುತ್ತೆ ಗೊತ್ತಿಲ್ವಾ ಯಾಕೆ ಟೆನ್ಶನ್ ಮಾಡ್ಕೊತಿಯಾ ಅಂತ ತಲೆ ಚಚ್ಕೊಂಡು ನಗ್ತಾ ಹೋದ್ಲು. ಅರೆಕ್ಷಣ ದಂಗಾಗಿ ಕುಳಿತೆ ನಾನು ಎ.ಟಿ.ಎಂ ನಲ್ಲಿ ದುಡ್ಡು ಬರುತ್ತೆ ಅನ್ನೋದನ್ನು ಕಲಿಸಿದ ನಾವು ಅಲ್ಲಿಗೆ ದುಡ್ಡು ಹೇಗೆ ಬರುತ್ತೆ ಅಂತ ತಿಳಿಸಲು ಉದಾಸೀನ ಮಾಡ್ತಿವಿ.

ಮಗು ಚೆನ್ನಾಗಿರಲೆಂದು ಕೇಳಿದ್ದೆಲ್ಲಾ ಕೊಡಿಸುವುದು,  ವಾಸ್ತವಿಕತೆ ಮುಚ್ಚಿಟ್ಟು ಪರಿಸ್ಥಿತಿಗೂ ಮೀರಿ ಬೆಳೆಸುವುದು ಪ್ರೀತಿಯಲ್ಲ, ಮೂರ್ಖತನ. ಅದರ ಬದಲು ವಾಸ್ತವಿಕ ಸ್ಥಿತಿಯನ್ನು ತಿಳಿಸಿ, ಯಾವುದೇ ಸನ್ನಿವೇಶಗಳನ್ನು ಧೈರ್ಯವಾಗಿ ಎದುರಿಸಲು ಹಾಗೂ ಯಾವುದೇ ಸಂದರ್ಭದಲ್ಲಾದರೂ ಸಂತೋಷದಿಂದ ಬದುಕಲು ಕಲಿಸಬೇಕು. ಗೆಲುವಿನಷ್ಟೇ ಸೋಲನ್ನೂ  ಕೂಡಾ ಸ್ವೀಕರಿಸಲು ಕಲಿಸಬೇಕು. ಪೋಶಷಕರಾಗಿ ಮಕ್ಕಳ ಮೇಲೆ ಪ್ರೀತಿಯಷ್ಟೇ  ಅಲ್ಲ, ಅವರನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿಯೂ ನಮ್ಮದಾಗಬೇಕು.

ಎಲ್ಲಕ್ಕಿಂತ ಮುಖ್ಯವಾಗಿ ಮಗುವನ್ನು ಬೆಳೆಸಬೇಕಾದರೆ ಮೊದಲು ನಾವು ಬೆಳೆಯಬೇಕು. ಆ ಬೆಳೆಯುವಿಕೆಗೆ ಮಾನಸಿಕವಾಗಿ ನಮ್ಮನ್ನು ನಾವು ಸಿದ್ದಗೊಳಿಸಿಕೊಳ್ಳಬೇಕು. ಮಗುವಿನೊಂದಿಗೆ ಪಾಲಕರು ಹುಟ್ಟುತ್ತಾರೆ. ಇದು ಇಬ್ಬರೂ ಕಲಿಯುವ ಸಮಯ ಕಲಿಸುವುದಲ್ಲ ಅನ್ನುವ ಸತ್ಯ ಅರ್ಥವಾಗಬೇಕು. ಮಗು ಕೂಡಾ ಒಂದು ಪ್ರಾಜೆಕ್ಟ್ ವರ್ಕ್ ಇದ್ದ ಹಾಗೇ.. ಒಪ್ಪಿಕೊಳ್ಳುವ ತನಕ ನಮ್ಮ ಆಯ್ಕೆ, ಒಪ್ಪಿಕೊಂಡ ಮರುಕ್ಷಣದಿಂದ ಅದನ್ನು ಯಶಸ್ವಿಗೊಳಿಸುವುತ್ತ ಪರಿಶ್ರಮ, ಶ್ರದ್ದೆ  ಅತ್ಯಗತ್ಯ. ಒಂದು ರೀತಿಯ ತಪಸ್ಸು ಇದು. ನಮ್ಮ ಬೇಜವಾಬ್ದಾರಿತನಕ್ಕೆ, ನಿರ್ಲಕ್ಷಕ್ಕೆ, ಮೋಹಕ್ಕೆ, ಅತ್ಯಾಸೆಗೆ ಮಕ್ಕಳ ಬದುಕನ್ನು ಬಲಿ ಕೊಡುವ ಹಕ್ಕು ಖಂಡಿತಾ ಇಲ್ಲ.. ಅವರಿಗೂ ಸ್ವತಂತ್ರ ಬದುಕಿದೆ. ಅವರಿಗೆ ನಮ್ಮ ಪ್ರೀತಿ ಕೊಡಬಹುದು ಅಷ್ಟೇ..

ಮಕ್ಕಳನ್ನು ದೇವರು ಅಂತಾರೆ, ದೇವರೆಡೆಗಿನ ನಮ್ಮ ಭಾವನೆಯೇ ಮಕ್ಕಳ ಬಗೆಗೂ ಇರಬೇಕು ಅನ್ನೋದು ಎಷ್ಟು ಸೂಚ್ಯವಾಗಿ ನಮ್ಮ ಹಿರಿಯರು ಹೇಳಿದ್ದಾರೆ ನೋಡಿ. ಆ ಶ್ರದ್ದೆ, ಪ್ರಾಮಾಣಿಕತೆ, ಶುದ್ದ ಮನಸ್ಸು ನಮ್ಮಲಿದ್ದಾಗ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾದ್ಯ. ಯಾಕೆಂದರೆ ಮಗು ಕೇಳಿ ಕಲಿಯುವುದಕ್ಕಿಂತ  ನೋಡಿ ಕಲಿಯುವುದೇ ಜಾಸ್ತಿ

Facebook ಕಾಮೆಂಟ್ಸ್

Shobha Rao: Writer
Related Post