X

ಕಲಾಭಿಮಾನಿಗಳೇ, ಬಂದಿದೆ ಮತ್ತೊಂದು ಕಲೋಪಾಸನೆ!

ಹರಿಕೃಷ್ಣ ಪಾಣಾಜೆ ಅಂತ. ವೃತ್ತಿಯಲ್ಲಿ ಆಯುರ್ವೇದ ಡಾಕ್ಟರ್ ಆಗಿರುವ ಪಾಣಾಜೆಯವರು ಪುತ್ತೂರಿನ ಪರ್ಲಡ್ಕ ಎಂಬಲ್ಲಿ ಶ್ರೀ ದುರ್ಗಾ ಕ್ಲಿನಿಕ್(SDP Remidies and Research Center)ನ್ನು ನಡೆಸುತ್ತಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಪಾಣಾಜೆ ಡಾಕ್ಟರ್ ಅಂತಾನೇ ಫೇಮಸ್ಸ್ ಇವರು. ಈ ಕ್ಲಿನಿಕ್ ಪುತ್ತೂರು ನಗರದ ಹೊರವಲಯದಲ್ಲಿದ್ದರೂ, ಪುತ್ತೂರಿನಲ್ಲಿ ಹತ್ತಾರು ಅಲೋಪತಿ ಕ್ಲಿನಿಕ್’ಗಳಿದ್ದರೂ ಸಹ ತನ್ನದೇ ಆದ ಹೆಸರನ್ನು ಗಳಿಸಿದೆ. ಎಲ್ಲೆಲ್ಲಿಯದೋ ಹಳ್ಳಿ ಮೂಲೆಗಳಿಂದ ಜನ ಎಂತೆಂತದೋ ಖಾಯಿಲೆಗಳನ್ನು ಹಿಡಿದುಕೊಂಡು  ಉಪಶಮನಕ್ಕಾಗಿ ಇಲ್ಲಿಗೆ  ಬರುತ್ತಾರೆ. ತನ್ನದೇ ಆದ ಅಯುರ್ವೆದ ಔಷಧ ತಯಾರಿಕಾ ಘಟಕವನ್ನೂ ಹೊಂದಿರುವ ಸೌಮ್ಯ ಸ್ವಭಾವದ  ಈ ಡಾಕ್ಟರ್ ಬಂದವರನ್ನು ಅಷ್ಟೇ ಪ್ರೀತಿಯಿಂದ ಉಪಚರಿಸುತ್ತಾರೆ.

ಇದಲ್ಲ ಅವರ ವಿಶೇಷತೆ. ಈ ಡಾಕ್ಟರ್ ಒಳಗೊಬ್ಬ ಕಲೋಪಾಸಕ ಇದ್ದಾನೆ. ವೃತ್ತಿಗೆ ತಕ್ಕುದಾದ ಸಂಪಾದನೆ ಹೊಂದಿರುವ ವೈದ್ಯರು ಕಲಾರಾಧನೆಯಲ್ಲಿ ತೃಪ್ತಿಯನ್ನು ಹೊಂದುತ್ತಾರೆ. ಅದರಲ್ಲವರಿಗದೇನು ಇಂಟ್ರೆಸ್ಟೋ ಗೊತ್ತಿಲ್ಲ, ಕಳೆದ ಹನ್ನೆರಡು  ವರ್ಷಗಳಿಂದ ಈ ಕಲಾ ಸೇವೆಯನ್ನು ನಿಸ್ವಾರ್ಥವಾಗಿ ನಡೆಸಿಕೊಂಡು ಬರುತಿದ್ದಾರೆ. ಕಲೋಪಾಸನೆಯ ಹೆಸರಿನಲ್ಲಿ ಸಂಗೀತ-ನಾಟ್ಯ ಪ್ರಿಯರಿಗೆ ವರ್ಷದಲ್ಲಿ  ಮೂರು ದಿನ   ಭರಪೂರ ಮೃಷ್ಟಾನ್ನ ಬಡಿಸುತ್ತಿದ್ದಾರೆ, ತಮ್ಮ ಸ್ವಂತ ಖರ್ಚಿನಲ್ಲಿ! ನೋಡ ನೋಡುತ್ತಲೇ ಈ ಕಾರ್ಯಕ್ರಮವನ್ನು ಕಲಾವಿದರ ಪಾಲಿಗೆ, ಕಲಾಸಕ್ತರ ಪಾಲಿಗೆ  ಒಂದು ಬ್ರಾಂಡ್ ಆಗಿ ರೂಪಿಸಿದ್ದಾರೆ.

ಈ ಕಾರ್ಯಕ್ರಮ ಶುರುವಾದುದರ ಹಿಂದೆ ಒಂದು ಸಣ್ಣ ಕಥೆ ಇದೆ.  ಈ ಪಾಣಾಜೆಯವರು ಡಾಕ್ಟರ್ ಆಗುವ ಮೊದಲೇ ಮೃದಂಗ ವಾದಕರು. ಯಕ್ಷಗಾನ ಕಲಾವಿದರೂ ಹೌದು. ಮೃದಂಗ ಬಾರಿಸುತ್ತಾ, ಯಕ್ಷಗಾನದಲ್ಲಿ ವಿವಿಧ ಪಾತ್ರಗಳನ್ನು ಮಾಡುತ್ತಾ ಕಲೆಯನ್ನು ಆಸ್ವಾಧಿಸುತ್ತಿದ್ದ ಇವರಿಗೆ ಅದೇ ಉಸಿರಿನಂತಾಗಿತ್ತು. ಒಮ್ಮೆ ಇವರದೇ ಮನೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ, ಇರಲಿ ಅಂತ ಸಂಗೀತ ಕಛೇರಿಯನ್ನೇರ್ಪಡಿಸಿದರು. ಟಿ.ವಿ. ರಾಮಪ್ರಸಾದ್ ಎನ್ನುವ ಖ್ಯಾತ ಕಲಾವಿದರ  ಆ ಸಂಗೀತ  ಕಛೇರಿ ಗೃಹಪ್ರವೇಶಕ್ಕೆ ಬಂದಿದ್ದವರ ಮನಸೂರೆಗೊಳಿಸಿತು. ಇದರಿಂದ ಉತ್ಸಾಹಿತರಾದ ಡಾಕ್ಟರ್ “ಯಾಕೆ ಇದನ್ನು ಪ್ರತೀ ವರ್ಷವೂ ಮಾಡಬಾರದು? ” ಎನ್ನುವ ಪ್ರಶ್ನೆಯನ್ನು ತಮಗೆ ತಾವೇ ಹಾಕಿಕೊಂಡರು. ಆವಾಗ ಜನ್ಮ ತಾಳಿದ್ದೇ ಈ ಕಲೋಪಾಸನೆ!

ಈಗಲೇ ಹೇಳಿದಂತೆ ಕಲೋಪಾಸನೆ ಈಗ ಪುತ್ತೂರಿನಲ್ಲೊಂದು ಬ್ರಾಂಡ್ ಆಗಿ ಹೋಗಿದೆ. ಕಲೋಪಾಸನೆಗೆ ಐದಾರು ತಿಂಗಳುಗಳಿರುವಾಗಲೇ ಜನ, ಈ ಭಾರಿ ಏನೆಲ್ಲಾ ಕಾರ್ಯಕ್ರಮ ಇದೆ?   ಯಾವೆಲ್ಲ ಕಲಾವಿದರು ಬರುತ್ತಾರೆ? ಅಂತ ಕೇಳಲು ಸಶುರು ಮಾಡುತ್ತಾರೆ. ಅದಕ್ಕೆ ಕಾರಣ ಪಾಣಾಜೆಯವರ ಆಸಕ್ತಿ, ಹೆಗಲಿಗೆ ಹೆಗಲು ಕೊಡುವ ಪತ್ನಿ ಮತ್ತು ಸಹೋದರರು, ವರ್ಷದಿಂದ ವರ್ಷಕ್ಕೆ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಿಂದ ಅಚ್ಚುಕಟ್ಟಾಗಿ ಮೂಡಿ ಬರುತ್ತಿರುವ ಕಾರ್ಯಕ್ರಮಗಳು. ಕಲೋಪಾಸನೆಯನ್ನು ಮಾಡುವುದು ಹೌದು, ಆದರೆ ಯಾವ್ಯಾವ ಕಾರ್ಯಕ್ರಮಗಳಿರಬೇಕು?, ಕಲಾವಿದರು ಯಾರೆಲ್ಲ ಇರಬೇಕು? ಎಂಬುದನ್ನು ಸ್ವತಃ ಪಾಣಾಜೆಯವರೇ ಸ್ನೇಹಿತರ ಜೊತೆ ಚರ್ಚಿಸಿ ಅಳೆದು ತೂಗಿ ಆರಿಸುತ್ತಾರೆ. ಈ ಹಿಂದೆ ನಡೆದ, ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಬಾಲ ಮುರಳಿಕೃಷ್ಣ, ಉನ್ನಿಕೃಷ್ಣ, ಬಾಂಬೆ ಜಯಶ್ರಿ ಮುಂತಾದವರ ಸಂಗೀತ ಕಛೇರಿಗಳು,   ಕನ್ನಡದ ಹೆಸರಾಂತ ನಟ ಶ್ರೀಧರ್ ಮತ್ತು ದಂಪತಿಗಳ ಕಾರ್ಯಕ್ರಮ, ಲಕ್ಷ್ಮಿ ಗೋಪಾಲಸ್ವಾಮಿಯವರ ಭರತನಾಟ್ಯ, ಮನಸೂರೆಗೊಳ್ಳುವ ಬಡಗು ತಿಟ್ಟಿನ ಯಕ್ಷಗಾನಗಳೇ ಕಲೋಪಾಸನೆಗೆ ಬ್ರಾಂಡ್ ಎಂಬ ಬಣ್ಣವನ್ನು ಬಳಿದಿದ್ದು.

ಆಧುನಿಕ ಜಗತ್ತಿನ ಹೊಸ ಹೊಸ ಆವಿಷ್ಕಾರಗಳಿಗೆ, ಪಾಶ್ಚಿಮಾತ್ಯ ಸಂಸ್ಕೃತಿಯ ಅಬ್ಬರಕ್ಕೆ ಸಿಲುಕಿ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸಂಗೀತ, ಭರತನಾಟ್ಯ, ಯಕ್ಷಗಾನಗಳು ನೆಲೆ ಕಳೆದುಕೊಳ್ಳುತ್ತಿವೆ ಎಂಬ ಆತಂಕದ ನಡುವೆಯೂ ಪಾಣಾಜೆಯಂತವರು ನಮಗೆ ಭರವಸೆಯಂತೆ ಕಾಣುತ್ತಾರೆ. ಯಾವುದೇ ಕಲೆ ಬೆಳೆಯಬೇಕಾದರೆ, ಮುಂದಿನ ಪೀಳಿಗೆಗೆ ತಲುಪಬೆಕಾದರೆ ಕಲಾವಿದರ ಜೊತೆಗೆ ಕಲೋಪಾಸಕರೂ, ಕಲಾ ಪೋಷಕರೂ ಬೇಕು. ಇವು ಮೂರು ಇದ್ದರೆ ಮಾತ್ರ ಅಲ್ಲಿ ಕಲೋಪಾಸನೆ ನಡೆಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ತನ್ನ ತನು ಮನ ಧನವನ್ನು ಕಲಾ ಪೋಷಣೆಗಾಗಿ ಸಮರ್ಪಿಸುತ್ತಾ ಕಲೋಪಾಸನೆಯನ್ನು ನಡೆಸುತ್ತಿರುವ ಪಾಣಾಜೆಯ ಈ ಡಾಕ್ಟರ್ ಎಲ್ಲರಿಗೂ ಮಾದರಿ.

ಈ ಕಲೋಪಾಸನೆಯನ್ನು ಮಾಡುವುದರಿಂದ ನಿಮಗೇನು ಸಿಗುತ್ತದೆ ಅಂತ ಕೇಳಿದ್ದಕ್ಕೆ  ಕೆಲವರು ಇವನಿಗೆ ಹುಚ್ಚು ಅಂತಾರೆ, ಆದ್ರೆ ಕಲೆಯನ್ನು ಆಸ್ವಾಧಿಸುವುದು ಹೇಗೆ ಅಂತ ನನಗೆ ಗೊತ್ತಿದೆ ಮತ್ತು ಅದರಿಂದ ಸಿಗುವ ತೃಪ್ತಿ ಏನೂಂತ ಅದನ್ನು ಮಾಡುವ ನನಗೆ ಮಾತ್ರ ಗೊತ್ತಿದೆ ಅಂತ ಹೇಳಿ ಮುಗುಳ್ನಗುತ್ತಾರೆ.   ಈ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ  ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಐಡಿಯಾ ಇದೆಯಾ ಅಂತ ಕೇಳಿದರೆ ನೋಡಿ, ವೈದ್ಯರಾಗಿದ್ದ ನನ್ನ ತಂದೆಯವರ ಕಾಲದಿಂ ಹಳೇ ಕಾಲದ ಬಾಣಲೆಯಲ್ಲಿ ಔಷಧಿಯನ್ನು ತಯಾರಿಸುತ್ತಲೇ  ಹಂತ ಹಂತವಾಗಿ ಮೇಲೆ ಬಂದವರು ನಾವು, ಹಾಗೆಯೇ, ಹಂತ ಹಂತವಾಗಿಯೇ  ಈ ಕಾರ್ಯಕ್ರಮವನ್ನೂ ಮುಂದುವರಿಸುತ್ತೇವೆ ಎಂದು ಆತ್ಮ ವಿಶ್ವಾಸದಿಂದ ಹೇಳುತ್ತಾರೆ.’’

ಅಂದ ಹಾಗೆ ಈ ಭಾರಿಯ ಕಲೋಪಾಸನೆಗೆ ಇನ್ನು ನಾಲ್ಕೇ ನಾಲ್ಕು ದಿನ ಉಳಿದಿದೆ. 23 ರಿಂದ 25ರವರೆಗೆ ಪುತ್ತೂರಿನ ಕಲಾಭಿಮಾನಿಗಳಿಗೆ ಹಬ್ಬದ ಸಂಭ್ರಮವಿದೆ. ಪ್ರತೀ ಭಾರಿಯಂತೆ ಈ ಭಾರಿಯೂ ಸಂಗೀತ, ಭರತ ನಾಟ್ಯ ಮತ್ತು ಯಕ್ಷಗಾನದ ಸಮಾಗಮವಿದೆ. ಪರ್ಲಡ್ಕದ  ಪ್ರಕೃತಿಗೆ ತೆರೆದುಕೊಂಡಿರುವ  ಪ್ರಶಾಂತ ವಾತಾವರಣದಲ್ಲಿ ಸುಮಧುರ, ಸುಂದರ ಕಲಾ ಸಮಾರಾಧನೆ ನಡೆಯಲಿದೆ.

ಕಲಾಭಿಮಾನಿಗಳೇ, ನಾನಂತೂ ಈ ಸವಿಯನ್ನು ಮಿಸ್ಸ್ ಮಾಡಿಕೊಳ್ಳಲಾರೆ, ನೀವೂ ಕೂಡಾ ಮಿಸ್ಸ್ ಮಾಡಿಕೊಳ್ಳಲಾರಿರಿ ಎನ್ನುವ ಭರವಸೆಯೊಂದಿಗೆ…

Facebook ಕಾಮೆಂಟ್ಸ್

Sumana Mullunja: Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.
Related Post